ಅನಿ ಹನಿ

ಎಂತಾ ಸೆಖೆ ಮಾರ್ರೆ..: ಅನಿತಾ ನರೇಶ್ ಮಂಚಿ

ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ವರ್ಷಕ್ಕೆ ಮೂರು ಕಾಲಗಳಿರುತ್ತವೆ, ಮಳೆಗಾಲ ಚಳಿಗಾಲ ಬೇಸಿಗೆಗಾಲ  ಎಂದು ಟೀಚರುಗಳು ಹೇಳಿ ಕೊಟ್ಟದ್ದು ನಿಮಗೆ ನೆನಪಿರಬಹುದು.  ನಾನಂತೂ ಅದನ್ನೇ ಪರಮ ಸತ್ಯವೆಂದು ತಿಳಿದು  ಉರು ಹೊಡೆದಿದ್ದೆ ಮಾತ್ರವಲ್ಲ ಅದನ್ನೇ ಪರೀಕ್ಷೆಗಳಿಗೆ ಬರೆದು ಮಾರ್ಕೂ ಗಿಟ್ಟಿಸಿದ್ದೆ. ಆದರೆ  ದಕ್ಷಿಣ ಕನ್ನಡಕ್ಕೆ ಕಾಲಿಟ್ಟ ಮೇಲೆ ತಿಳಿದಿದ್ದು ಸತ್ಯ ಕೂಡಾ ಊರಿಂದೂರಿಗೆ ಬದಲಾಗುತ್ತದೆ ಎಂದು..!! 

'ನೋಡಿ ಹಾಗೆ ಹೇಳ್ಬೇಕು ಅಂದ್ರೆ ನಮ್ಮೂರಲ್ಲಿ ಬೇಸಿಗೆ ಕಾಲ ಅಂತಲೇ ಇಲ್ಲ..' 'ಅರ್ರೇ.. ವಾವ್ ಎಷ್ಟು ಚಂದ' ಅಂತ ಟಿಕೆಟ್ ಬುಕ್ ಮಾಡಲಿಕ್ಕೆ ಹೊರಟೇ ಬಿಟ್ರಾ.. ಸ್ವಲ್ಪ ತಡೀರಿ. ನಾನು ಹೇಳೋದನ್ನು ಪೂರ್ತಿಯಾಗಿ ಕೇಳಿಸ್ಕೊಳ್ಳಿ. ನಾನು ಹೇಳಿದ್ದು ನಮ್ಮಲ್ಲಿ ಬೇಸಿಗೆ ಕಾಲ ಅಂತ ಪ್ರತ್ಯೇಕ ಇಲ್ಲ, ಮಳೆಗಾಲದಲ್ಲೂ ಮಳೆ ನಿಂತ ಕೂಡಲೇ ಸೆಖೆ ಶುರು. ಇನ್ನು ಚಳಿಗಾಲ ಅನ್ನುವ ಪದದ ಅರ್ಥ ನಮಗೆ ಸರಿಯಾಗಿ ಗೊತ್ತೇ ಇಲ್ಲ ಅನ್ನಬಹುದು. ಬಿರು ಬಿಸಿಲ ಬಳ್ಳಾರಿ ಅಲ್ಲದಿದ್ದರೂ ಸದಾ ಬಿಸಿಯಾಗಿಯೇ ಇರುವ ಕರಾವಳಿ ನಮ್ಮದು. 

ಬೆವರಿಳಿಯುವ ಬೇಸಿಗೆಯಲ್ಲಿ ಹೋಟೆಲ್ಲಿಗೆ ನುಗ್ಗಿ 'ಎಂತ ಸೆಖೆ ಮಾರ್ರೇ.. ಮಂಡೆ ಬಿಸಿ ಆಗಿದೆ. ಎಲ್ಲಿ ಒಂದು ಲೋಟ ಬಿಸಿ ಬಿಸಿ ಪೋಡಿ ಮತ್ತೊಂದು ಬಿಸಿ ಚಾಯ ಕೊಡಿ' ಎಂದು ಆರ್ಡರ್ ಮಾಡಿ ಮುಖ ಒರೆಸಿಕೊಳ್ಳುತ್ತಾ ಕೂರುವವರು ನಾವು. ಯಾರೊಡನೆ ಮಾತು ಪ್ರಾರಂಭವಾಗಬೇಕಾದರೂ 'ಈ ಸರ್ತಿ ಭಾರೀ ಸೆಖೆ ನೋಡಿ. ಕಳ್ದ ಸಲ ಹೀಗೆ ಇರ್ಲಿಲ್ಲ..' ಎಂದು ಕಳೆದ ವರ್ಷ ಏರ್ ಕಂಡೀಷನ್ ವೆದರ್ ನಲ್ಲಿ ಬದುಕಿದ್ದವರಂತೆ ಫೋಸ್ ಕೊಡುವುದು ನಮ್ಮ ಜಾಯಮಾನ.  ಯಾರದ್ದಾದರೂ ಫೋನ್ ಬಂದರೆ ಸಾಕು ಸೆಖೆಯ ರೂಪ ರೂಪಗಳನ್ನು ದಾಟಿ ನಾಮ ಕೋಟಿಗಳನ್ನು ದಾಟಿ ಗಂಟೆಗಟ್ಟಲೆ ಕೊರೆದು ಫೋನಿಗೂ ಬೆವರುಕ್ಕಿಸುತ್ತಿದ್ದೆವು.

ಇದೇ ಸಮಯದಲ್ಲಿ ಮಕ್ಕಳ 'ಸ್ಕೂಲ್ ಡೆ' ಯ ರಂಗಿನ ದಿನಗಳೆಲ್ಲ ಮುಗಿದು ಪರೀಕ್ಷೆಯು ಬರುವುದು. ಟೀಚರುಗಳು 'ಸರಿಯಾದ ರಿಸಲ್ಟ್ ಬಾರದಿದ್ದರೆ ನಮಗಿದೆ  ಹಬ್ಬ' ಎಂದು ಬೆವರೊರೆಸಿಕೊಳ್ಳುವುದನ್ನು ಮರೆತು ಪಾಠ ಮಾಡಿದರೆ, ಮಕ್ಕಳು 'ಇನ್ನೀ ಕರ್ಮದ ಪರೀಕ್ಷೆಯಲ್ಲಿ ಎಂತ ಪ್ರಶ್ನೆ ಕೇಳ್ತಾರೇನೋ' ಎಂದು ಒಳಗೂ ಹೊರಗೂ  ಬೆವರುತ್ತಿರುತ್ತಾರೆ.ಮನೆಯಲ್ಲಿ ಅಮ್ಮಂದಿರು ಮಕ್ಕಳ ಪರೀಕ್ಷೆಯ ತಯಾರಿ ಎಂದು ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಕೊಂಡು ತಂದು 'ಸೀರಿಯಸ್ಸಾಗಿ ಕೂತ್ಕೊಂಡು ಓದಿ' ಎಂದು ಮಕ್ಕಳನ್ನು ಗದರುತ್ತಾ ತಾವು ತಲೆ ಬಿಸಿ ಮಾಡುತ್ತಾ ಬೆವರುಕ್ಕಿಸಿಕೊಳ್ಳುತ್ತಾರೆ.

ಕಾಲ ಯಾವುದೇ ಇರಲಿ ಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕುವುದು ನಡೆದೇ ತೀರಬೇಕಲ್ಲ. ಬಿಸಿ ಬಿಸಿ  ಅಡುಗೆಯ ಒಲೆಗೆ ತಣ್ಣಗಿನ ಫ್ಯಾನಿನ ಗಾಳಿ ಹಾಕಲು ಸಾಧ್ಯವಿಲ್ಲ ತಾನೇ.. 

'ಮದ್ಯಾಹ್ನ ಅಡುಗೆ ಎಂತ ಸಾವಿತ್ರಕ್ಕ'  ಅಂತ ನೆರೆಮನೆಯಾಕೆ ಪ್ರಶ್ನೆ ಮಾಡಿದರೆ, 'ಅಡುಗೆ ಎಂತ ಮಾಡುವುದು ಈ ಸೆಖೆಗೆ .. ಏನೂ ಮೆಚ್ಚುವುದಿಲ್ಲ ಬಾಯಿಗೆ, ತಂಪು ಅಂತ ಒಂದು ಎಳ್ಳಿನ ತಂಬುಳಿ ಮಾಡಿದ್ದೇನೆ. ಬಸಳೆ ಸೊಪ್ಪಿನ ಗೊಜ್ಜು ಉಂಟು, ಪುನರ್ಪುಳಿ ಸಾರು. ಕುಡೀಲಿಕ್ಕು ಆಗ್ತದೆ ಅಲ್ವಾ.. ಏನು ಕೆಲ್ಸ ಮಾಡಲೂ ಮನಸ್ಸೇ ಇಲ್ಲ ಈ ಸೆಖೆಗೆ' ಎಂದು  ಮತ್ತೊಮ್ಮೆ ಹೇಳಿ ಕೈಯಲ್ಲಿ ಹಿಡಿದ ಅಡಿಕೆಯ ಹಾಳೆಯ ಬೀಸಾಳೆಯಲ್ಲಿ  ಮತ್ತೆ ಗಾಳಿ ಹಾಕಿಕೊಳ್ಳುವರು.

 ಹಾಗೆಂದು ಭೂಮಂಡಲದ ಶಾಖ ಈಗಷ್ಟೇ ಏರಿ ನಾವೆಲ್ಲ ಸೆಖೆಯ ಕೋಟಲೆಗೆ ಒಳಗಾಗಿದ್ದು ಎಂದು ತಪ್ಪು ತಿಳಿದುಕೊಳ್ಳಬೇಕಾಗಿಲ್ಲ ಬಿಡಿ. ಏಕೆಂದರೆ ನಮ್ಮ ಪುರಾಣ ಕಾಲದಲ್ಲೂ ಈ ಸೆಖೆಯನ್ನು ತಡೆಯಲು ವಿವಿಧ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ಹಾಗಾಗಿಯೇ ನೋಡಿ  ನಮ್ಮ ದೇವಾನುದೇವತೆಗಳೆಲ್ಲ ಚಂದನಗಂಧಿತ ಲೇಪಿತರಾಗಿರುವುದು. ಈಗಲೂ ಅಜ್ಜಿಯಂದಿರು ಅದೇ ನೆನಪಿನಲ್ಲಿ  ಮೈಗೆ ಲೋಳೆಸರ, ತಲೆಗೆ ಹರಳೆಣ್ಣೆ ಅಂತೆಲ್ಲ ಉಪಯೋಗಿಸಿ ತಂಪಾಗುವ ಪ್ರಯತ್ನ ಮಾಡುತ್ತಾರೆ. 

 ಆದರೆ ಇದೆಲ್ಲ ಮಾಡುವುದು 'ಔಟ್ ಆಫ್ ಪ್ಯಾಷನ್' ಎಂದುಕೊಳ್ಳುವ ಮಾಡರ್ನ್ ಯುಗದವರಾದ ನಾವು  ಈ ಕಾಲದಲ್ಲಿ ನಮ್ಮ  ಬಗ್ಗೆ ವಿಪರೀತ ಕಾಳಜಿ ವಹಿಸಿ ವಿವಿಧ ಬಗೆಯ ಸನ್ಸ್ಕ್ರೀಮುಗಳ ಜೊತೆಗೆ ಬೆವರು ಸಾಲೆಗೆಂದು 'ಥಂಡಾ ಥಂಡಾ ಕೂಲ್ ಕೂಲ್' ಎಂದು ಕುಣಿಯುವ ಹುಡುಗಿಯರ ಚಿತ್ರವಿರುವ ಬಗೆ ಬಗೆಯ ಪೌಡರ್ ಡಬ್ಬಿಗಳನ್ನು ಕಲೆ ಹಾಕುತ್ತೇವೆ.ಟಿ ವಿ  ಯಲ್ಲಿ ಬರುವ ಎಲ್ಲಾ ಜಾಹೀರಾತುಗಳನ್ನು ನೋಡಿ ಅದರಲ್ಲಿ ತೋರಿಸುವ ಪೌಡರುಗಳನ್ನು ದಿನಕ್ಕೊಂದರಂತೆ ಮೈ ಮೇಲೆ ಸಿಂಪಡಿಸಿಕೊಂಡು ಭಸ್ಮಧಾರಿ ಶಂಕರನಿಂದಲೂ ಮಿಗಿಲೆನಿಸಿಕೊಳ್ಳುತ್ತೇವೆ. 

ಹರೆಯದ ಮಕ್ಕಳಂತೂ ಮಾತೆತ್ತಿದರೆ ಜ್ಯೂಸ್ ಎಂದು ರಾಗ ತೆಗೆದು ಮನೆಯನ್ನು ಜ್ಯೂಸ್ ಸೆಂಟರ್ ಮಾಡ್ತಾರೆ. ಅದು ಕೂಡಾ ಮನೆಯಲ್ಲಿ ಮಾಡುವ ನಿಂಬೂ ಶರಬತ್ತೋ, ಪುನರ್ಪುಳಿ ಶರಬತ್ತೋ,ದಾಸವಾಳದ ತಂಪು ಪಾನಕವೋ ಇದೆಲ್ಲ ಇವರ ನಾಲಗೆಗೆ ರುಚಿಸುವುದೇ ಇಲ್ಲ. ಅಂಗಡಿಯಲ್ಲಿ ಸಿಗುವ ಬಣ್ಣ ಬಣ್ಣದ ಬಾಟಲಿಗಳ ಮೇಲೇ ಮನಸ್ಸು. ಅದರ ಹೊರಗೆ ಬರೆದಿರುವ 'ಫ್ರೆಶ್ ಎಂಡ್ ಜ್ಯೂಸೀ' ಯನ್ನು ಓದಿಕೊಂಡು ಒಳಗಿರುವ ಹಳಸಲು ಜ್ಯೂಸನ್ನು 'ವಾವ್ ಯಮ್ಮೀ  ಎಂದು ಹೀರಿ ಮರುದಿನ  ಅವರ ಮಮ್ಮಿಗಳನ್ನು ಡಾಕ್ಟರುಗಳ ಕ್ಲಿನಿಕ್ಕಿನಲ್ಲಿ ಅಪಾಂಟ್ ಮೆಂಟಿಗಾಗಿ  ಬೆವರೊರೆಸಿಕೊಳ್ಳುತ್ತಾ ಕಾದು ನಿಲ್ಲುವಂತೆ ಮಾಡುತ್ತಾರೆ. 

ಈ ಸಮಯದಲ್ಲಿ ಅತೀ ಅಗತ್ಯವಾಗಿರುವುದೂ ಮತ್ತು ಅದು ಸದಾ ಬೇಕೆಂದಾಗ ಇರದಿರುವುದೂ ಎಂದರೆ ಸರ್ಕಾರಿ ಕೃಪಾ ಪೋಷಿತ ಕರೆಂಟು. ಬಿಸಿಲ ಬೇಗೆಯಲ್ಲಿ ಬಳಲಿ ಬಸವಳಿದು ಮನೆಗೆ ಬಂದು ಒಂದಿಷ್ಟು ತಂಪು ಮಾಡಿಕೊಳ್ಳೋಣ ಎಂದು ಫ್ಯಾನ್ ಆನ್ ಮಾಡಿದರೆ ಅದು ಅಲ್ಲಾಡದೆ ತಣ್ಣಗೆ ಕುಳಿತಿರುತ್ತದೆ. ಹೋಗಲಿ ಸ್ವಲ್ಪ ತಣ್ಣೀರಿಗೆ ತಲೆ ಕೊಟ್ಟು ಸ್ನಾನ ಮಾಡಿ ಬರೋಣ ಎಂದುಕೊಂಡರೆ ಪೈಪಿನಲ್ಲಿ ಬರುವ ನೀರು ಬಿಸಿಯಾಗಿ ಕುದಿಯುತ್ತಿರುತ್ತದೆ. ಈಗ ನಮ್ಮ ತಲೆಯೂ ಬಿಸಿಯೇರಿ ಇದನ್ನು ತಣಿಸಲು, ಗಂಡನಾದರೆ ಹೆಂಡತಿಗೆ ಬಯ್ದು, ಹೆಂಡತಿಯಾದರೆ ಗಂಡನಿಗೆ ಬಯ್ದು ತಾವಾಗಿಯೇ ಸಮಾಧಾನ ಪಟ್ಟುಕೊಳ್ಳುತ್ತಾರೆ.ಎಲ್ಲರೂ ಹೀಗೆ ಇಷ್ಟು ಸುಲಭವಾಗಿ ತಣ್ಣಗಾಗುತ್ತಾರೆ ಅಂದುಕೊಳ್ಳಬೇಡಿ. ಮಾತೆತ್ತಿದರೆ 'ನಿಂಗೇನು ಗೊತ್ತು ನಂಗೆ ಸಾವಿರ ತಲೆ ಬಿಸಿ ಇದೆ' ಎನ್ನುವ ಮಹನೀಯರು ಎಲ್ಲಾ ಕಾಲಗಳಲ್ಲೂ ಇದೇ ಬೀಜಮಂತ್ರವನ್ನು ಪುನಃರುಚ್ಚರಿಸುತ್ತ ಕಾಲಾತೀತರೆನಿಸಿಕೊಳ್ಳುತ್ತಾರೆ.

ಇಂಗ್ಲೆಂಡಿನ ರಾಜ ಕುವರರ ಡಿ ಎನ್ ಎ ಯಲ್ಲಿ ಭಾರತೀಯತೆಯ ಅಂಶ ಕಂಡು ಬಂದಂತೆ ನಮ್ಮೂರಿನವರನ್ನು ಪ್ರಯೋಗಕ್ಕೊಳಪಡಿಸಿದರೆ ಅವರಲ್ಲಿ ಮಹಾಭಾರತದ ಕೌರವನ ಅಂಶ ಕಂಡು ಬಂದೀತು. ವೈಶಂಪಾಯನ ಸರೋವರದಲ್ಲಿ ಮುಳುಗಿದ್ದ ಅವನನ್ನು 'ನೀರೊಳಗಿರ್ದುಮ್ ಬೆಮರ್ತನುರಗಪತಾಕಂ' ಎಂದು ಬಣ್ಣಿಸಿರುವುದನ್ನು ಕೇಳಿದ್ದೀರಲ್ಲ. ನಾವೂ ಕರಾವಳಿಯವರು ಕೂಡಾ ಹಾಗೇ ಸ್ವಾಮೀ . ಇಲ್ಲಿನ ಸೆಖೆಗೆ ನೀರಲ್ಲಿ ಮುಳುಗಿದರೂ ಬೆವರುತ್ತಿರುತ್ತೇವೆ. ಹಾಗೆ ಮುಳುಗಲು ನಮಗೆ ಸರೋವರದ ಬದಲು ಅರಬ್ಬಿ ಸಮುದ್ರವೇ ಇದೆ. ಹಾಗೇ ಒಂದು ಗುಟ್ಟಿನ ವಿಷಯವೂ ಇದೆ. ಇದನ್ನು ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.ಅದೇನೆಂದರೆ ನಾವು ಸೆಖೆ ತಣಿಸಲೆಂದು ಸಮುದ್ರದಲ್ಲಿ ಮುಳುಗುವ ಕಾರಣದಿಂದಲೇ ಮಾರ್ರೇ ಸಮುದ್ರದ ನೀರು ಉಪ್ಪಾಗಿದ್ದು.. ಈ ಮಾತು ಕೇಳಿ ಇನ್ನು ನೀವು ಉಪ್ಪು ತಿನ್ನುವುದಿಲ್ಲವೋ.. ಒಳ್ಳೇದಾಯ್ತು ಬಿಡಿ. 

ಬಿ ಪಿ ಹೆಚ್ಚಾಗಿ ಬೆವರುವುದಾದರು ಕಡಿಮೆಯಾಗುತ್ತದೆ. 

ಕಾಲ ಯಾವುದೇ ಇದ್ದರೂ ಅದಕ್ಕೆ ತಕ್ಕಂತೆ ಕೋಲ ಕಟ್ಟಲೇ ಬೇಕಲ್ವಾ.. ಕೋಲ ಅನ್ನುವಾಗ ನೆನಪಾಯ್ತು ನೋಡಿ ನಮ್ಮೂರಲ್ಲಿ ಈ ಸಮಯವೇ ಭೂತಗಳು ಮೇಲೆದ್ದು 'ನಂಬಿನಕುಲೆಗ್ ಇಂಬು ಕೊರ್ಪೆ' ಎಂದು ಆರ್ಭಟೆ ಹೊಡೆಯುತ್ತಾ ದೊಂದಿ ಝಳಪಿಸುವುದು. ಸುಮ್ಮನೆ ನಿಂತಲ್ಲಿ ನಿಂತರೇ ಸೆಖೆ ಸೆಖೆ ಎಂದು ಹಾಡುವ ನಮ್ಮಗಳ ಎದುರಲ್ಲಿ ಅವುಗಳು ಪಾಪ ಕೆಂಡದ ಮೇಲೆ ಬಿದ್ದು ಹೊರಳಾಡಿ ನೋಡುವವರ ಮೈಯಲ್ಲಿಯೂ ಬೆವರೂಡಿಸುತ್ತವೆ.   

ಹಾಗೆಂದು ಬೇಸಿಗೆಕಾಲವೇನು ಮನುಷ್ಯರಿಗೆ ನನ್ನನ್ನು ಕಂಡರೇ ಆಗುವುದಿಲ್ಲ ಎಂದು ಮೂತಿ ಊದಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ ಕೇಳಲಿಲ್ಲವೇ ಕವಿವಾಣಿ

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು 

ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂಬರು 

ಮಳೆ ಬಿತ್ತೊ ಬಿಡದಲ್ಲ ಶನಿ ಎಂಬ ಟೀಕೆ 

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.. 

ಹಾಗಿದ್ದರೆ ಸಾಕು ಬಿಡಿ ಇನ್ನೇಕೆ ಮಾತು .. ನೀವೀಗ ನನ್ನ ಈ ಪುರಾಣ ಓದಿ ಬೆವರೊರೆಸಿಕೊಂಡರೆ ನಾನು ಬೆವರು ಹರಿಸಿ ಬರೆದದ್ದು ಸಾರ್ಥಕ ಎನ್ನುವಲ್ಲಿಗೆ ಬೇಸಿಗೆಯ ಬೆವರುಪುರಾಣವು ಸಮಾಪ್ತಿಗೊಳ್ಳುತ್ತದೆ. 

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಎಂತಾ ಸೆಖೆ ಮಾರ್ರೆ..: ಅನಿತಾ ನರೇಶ್ ಮಂಚಿ

  1. ಪ್ಛ್….. ಇದಿಷ್ಟು  ಓದೋದ್ರಲ್ಲಿ ನಾಲ್ಗೆ ಒಣ್ಗೋತು…ನೋಡಿ… ಆದ್ರೂ  ನೆಟ್ ನಲ್ಲಿ  ತೆಗೆದು ಓದೋಕೆ ಕರೆಂಟು ಮಾತ್ರ ಇತ್ತು ಅನ್ನೋದೇ ಪುಣ್ಯ ಅನ್ಕಂಡೆ ಮಾರ್ರೆ…ಚೆಂದವಿದೆ….ಹನಿ ಬೆವರ ಬರಹ….

  2. ಹಾಸ್ಯ ಮಿಶ್ರಿತವಾಗಿ ಅಲ್ಲಲ್ಲಿ ನಗುವಿನ ತಂಪು ಇರೋದ್ರಿಂದ ಅಷ್ಟೊಂದು ಬೆವರಿಲ್ಲ..:) ಚಂದದ ಬರಹ

     

  3. ನನಗೆ ಯಾವತ್ತೂ ಈ ದಕ್ಷಿಣಕನ್ನಡದ ಬಗ್ಗೆ ಕುತೂಹಲ. ತುಂಬಾ ಚೆನ್ನಾಗಿದೆ ಲೇಖನ

Leave a Reply

Your email address will not be published. Required fields are marked *