ಲೇಖನ

ಋಣಮುಕ್ತವಲ್ಲದ ಬದುಕು ನಮ್ಮದು: ಗಾಯತ್ರಿ ಬಡಿಗೇರ

                 
ತಂದೆ ತಾಯಿ ನಾವ ಹುಟ್ಟಿದಮ್ಯಾಗ ತುಸು ಖರ್ಚು ಮಾಡಿ ಹೆಸರಿಟ್ಟಿರಂಗಿಲ್ರಿ. ಹುಟ್ಟಿದ ಜಾತಕ ತಗಸಿ ಅದು ಇದು ಅಂತಾ ಪಾಪಾ ಬಾಳ ತಿರಗ್ಯಾಡಿ ಬಂಗಾರದಂಗ ಹೆಸರ ಇಟ್ಟಿರತಾರ.. ನಾವ ದೀಡ ಪಂಡಿತ್ರ ಅದೀವಿ ಅಲ್ಲ. ‘ಅಂದ ಅನಸ್ಕೊದ ಚಂದಗೇಡಿಂತ’ ಹಂಗ ಎತ್ತಾಗರ ಪತ್ತಾಗರ ಅರ್ಧಂಬರ್ಧಾ ಹೆಸರ ಕರಕೋತ ನಾಯಿ, ನರಿ, ಹಂದಿ, ಮಗಾ, ಮಚ್ಚಾ, ಮಾಮಾ, ಮಾಮಿ ಅದು ಇದು ಸುಡಾಗಾಡ ಸಂತಿ ವಟ್ಟ ಹಿಂತಾ ಹೆಲ್ಪಿಂಗ ಶಬ್ದಗಳನ್ನ ಬಳಸ್ಕೊತ ಇರೋಮಟ ಒಳ್ಳೆ ಸಂಬಂಧ ಕುದ್ರಸ್ಕೊಂಡಿರ್ತ್ತೆವಿ.

ಹಂಗ ನನ್ನ ಜೀವದ ಗೆಳತಿದು ನಂದು ನಂಟ ನೋಡ್ರಿ. ಇಬ್ಬರು ದಿನಾ ಶಾಲೆಗೆ ಬಾಳ ಚಂದ ಮಾತಡ್ಕೊತ ಕೂಡಿ ಹೋಗತ್ತಿದ್ವಿರಿ. ಹಂಗಾ ಜೀವಾಕ ಬಾಳ ಸ್ವತಃ ಆದ ನನ್ನ ಗೆಳತಿಗೆ ಮನೆ ನೆನಪ ಬಾಳ ಕಾಡಾಕತ್ತದ. ಅದ್ಕಂತಾ ನಾಲ್ಕದಿನಾ ಇದ್ದು ಅವ್ವಾ ಮಾಡಿದ ಬುತ್ತಿ ಜೊತೆಗೆ ಬಂದ್ಲು. ಈ ಸಲಾ ಬಾಳ ದಿನಾ ಉಳ್ಕೋಲಿಲ್ಲ ಬೇಗನ ತಿರುಗಿದ್ಲಲ್ಲಾ ಅಂತಾ ಸ್ವಲ್ಪ ನೆಮ್ಮದಿ ಆತ್ರಿ. ದೂರ್ದ ಪ್ರಯಾಣ ಮಾಡಿ ಬ್ಯಾಸರ ಆಗಿರಬೇಕಂತ ಮಲಗಾಕ ಹೇಳಿ ಸ್ವಲ್ಪ ಹೊರಗ ಹೋದೆ. ಆದ್ರ ಆ ತಾಯಿ ಮಲಗ್ಯಾಳಂತ ನಾನ ಅನಕ್ಕೊಂಡ್ರ ದೊಡ್ಡ ರಾಮಾಯಣನ ಶುರು ಮಾಡಕ್ಕೊಂಡ ಕುಂತಾಳ. ಅದೇನು ಅಂತಿರೇನು? ಕೇಳ್ರಿ ಕರ್ಮ, ಹೊತ್ತಿಲ್ಲದ ಹೊತ್ತನ್ಯಾಗ ಬರೋ ಧಾರವಾಡದ ಮಳೆಯಂಗ ಕಣ್ಣೀರ ಸುರಸಾಕತ್ತಾಳ ಹಡದವ್ವ. ಎದೆಗ ಬಾಣ ಬಿಟ್ಟಂಗ ಆತ ನೋಡ್ರಿ. ನನ್ನ ಜೀವಾನು ಚುರುಚುರು ಅನ್ನಾಕತ್ತ. ಆದ್ರ ಯಾರೆ ಆಗ್ಲಿ ಬಾಳ ಅಳುವಾಗ ಯಾಕ ಅಳಾತಿ ಅಂತ ಕೇಳಬಾರದ್ರಿ. ಹಂಗೆನಾದ್ರು ಕೇಳಿದ್ರ ನಮ್ಮವು ಸೊಂಡೆರ ಬಾಯತದ ಹಲ್ಲರ ಮುರಿತಾವ. ಅದ್ಕ ಅವರ ಮನಸ್ಸ ಹಗರ ಆಗೋತನಾ ಸುಮ್ನ ಗಮನಸಬೇಕ್ರಿ.

ಮೂರಸಂಜೆ ಆಗಿತ್ತ. ನಿಧಾನಕ ಕೇಳಿದೆ ಯಾಕ ಅಳಾತಿದ್ದಿ, ಎನ ಅಗಿತ್ತ, ಮನ್ಯಾಗ ಎನರ ತೊಂದ್ರೇನ? ಯಾರ್ಯರೆ ಬೈದ್ರೆನ ಅಂತಾ ಕೇಳೋಷ್ಟಗೆ ಮತ್ತ ಅಳಾಕ ಶುರಾ ಮಾಡಿದ್ಲು. ಬಾಳ ಮಾಡಿ ಇದ್ಕ ಅನಬೋದ “ಇಲ್ಲದ ಮಾಡಿ ಗಲ್ಲಾ ಬಾರಸ್ಕೊಂಡ್ರಂತ” ಅದು ನನ್ನಾಂತಾಕೀನ ಇರಬೇಕ ನೋಡ್ರಿ. ಆದ್ರು ಬಿಡಲಿಲ್ಲ ಹೇಳಾಕ ಶುರು ಮಾಡಿದ್ಲು. ಅಪ್ಪಾ ಬಸ್ ಸ್ಯ್ಟಾಂಡ ತನಾ ಬಿಡಾಕ ಜೊತೆಗ ಬಂದ ಪರೀಕ್ಷೆ ಹತ್ರಕ ಅದಾವಂತ ಪೆನ್ನ ಕೊಡಾಸಾಕ ಮುಂದ ಆದ್ನು, ಮೂರ ಪೆನ್ನನ್ಯಾಗ ಒಂದ ಹಿಡಸ್ತ. ಅದ್ಕ ಇರ್ಲಿ ಅಂತಾ ಬಸ್ ಸ್ಟ್ಯಾಂಡನ್ಯಾಗ ಕುಂದ್ರಿಸಿ ಮತ್ತ ನಾಲ್ಕ ಪೆನ್ನ ತಂದ ಕೊಟ್ಟ. ತೋಗೊ ಈ ಪೆನ್ನ ಬಾಳ ಚಲೋ ಮುಡತಾವಂತ ಪರೀಕ್ಷೆ ಚಲೋ ಬರಿ ಅಂತಾ ಬಸ್‍ಗೆ ಹತ್ತಿಸಿ ಹೋದ್ರು.

ಅವಾಗ ಹೊಟ್ಯಾಗ ಖಾರ ಕಲಿಸಿದಷ್ಟ ಸಂಕಟ ಆತ. ನಮಗ ಎಷ್ಟ ಕಾಳಜಿ ಮಾಡೊ ತಂದೆ ತಾಯಿ ಸಿಕ್ಕಾರಲ್ಲಾ ಹೆಂತಾ ಪುಣ್ಯಾ ಮಾಡೆವಿ. ಆದ್ರ ನಾವೇಷ್ಟು ಅವರಿಗೆ ಪರೋಪಕಾರಿ ಆಗೆವಿಯಂತ ನೆನಸ್ಕೊಂಡ ನನ್ನಮ್ಯಾಗ ನಾನ ಬ್ಯಾಸ್ರ ಮಾಡಕ್ಕೊಂಡ ಅತ್ತೆ ಅಂದ್ಲು.

ಒಂದ ಲೇಖನ ಬರವಣಿಗೆಗೆ ಮಾತ್ರ ಸಿಮಿತ ಅನ್ನೊ ಹುಚ್ಚ ಕಲ್ಪನೆ ಅಷ್ಟೆ. ಆದ್ರ ಒಂದ ಕ್ಷಣಾ ವಿಚಾರ ಮಾಡಿ ನೋಡಿದ್ರ ಹೆತ್ತವರ ಪಾಲ ನಮ್ಮ ಬದುಕಿನ್ಯಾಗ ಎಷ್ಟ ಐತಂತ ತಿಳಿತೈತಿ. ಅವಳ ಕಥೆ ಹೇಗೋ ಹಂಗ ನಮ್ಮಪ್ಪಾ ಯಾವಗ ನನ್ನನ್ನ ದಾರವಾಡಕ ಓದಾಕ ಸಾಲಿಗೆ ಸೇರಿಸಿದಾ ಸತತ ಆರನೆ ವರ್ಷ ದಿನಾ ಬಸ್‍ಗೆ ಬಿಡಾಕ ಬರೋದು ಇನ್ನೆನ ತಿರುಗಿ ಊರ ಸಮೀಪದಾಗ ಅದೆನಿ ಅನ್ನೊಷ್ಟಗಿ ನಂಗ ಕಾದ ಮನೆಗ ಕರಕೊಂಡ ಹೋಗತಾರ. ಮಾಡಿದವರ ಬಗ್ಗೆ ಹೇಳಾಕ ಈ ಒಂದ ಜನ್ಮನೂ ಸಾಲಂಗಿಲ್ಲ ಹಂತಾ ಋಣಮುಕ್ತವಲ್ಲದ ಬದುಕ ನಮ್ಮದು.

ದೊಡ್ಡ ಸಾಲಿ ಅಂತಾ ಹಾಸ್ಟಲನ್ಯಾಗ ಓದಾಕ ಇಟ್ಟಾರ. ಆದ್ರ ನಾವಿಲ್ಲಿ ಏನ್ ಕಡದ ಕಟ್ಟೆ ಹಾಕತ್ತೇವಿ ಹೇಳ್ರಿ? ಮತ್ತ ತಿಳಿಕೊ ಬೇಕಾವಾ ತಂಗೆವ್ವಾ ಇಷ್ಟ ಚಂದ ಹೇಳಾತಿ ಅಂತಿರೇನ? ನಿಜಾ ಇದು ನಮ್ಮ ಸಮಸ್ಯೆ ಅಷ್ಟಲ್ಲ ನಮ್ಮಂತ ಶಾಣೆ ಮಂದಿ ಸುಮಾರ ತೋಂಬತ್ರಷ್ಟ ಅದಾರಪಾ. ಹಾಸ್ಟೆಲ್, ಪಿಜಿ, ರೂಮ್‍ ಅಂತಾ ತಂದೆ ತಾಯಿ ಚಂದಕ ಮಾಡಿ  ಇಟ್ಟಿರತಾರೆನ್ರಿ? ಪೋನ್ ಮಾಡಿ ತಂದೆ ತಾಯಿ ಕಷ್ಟ ಕೇಳೊ ಮಕ್ಕಳ ನಾವ ಯಾವಾಗ ಆಗತ್ತೇವಿ? ಏನೋ ವಟ್ಟ ಬಿಡದಂಗ ನಾಚಿಕೆ ಇಲ್ದಂಗ ಊಟ ಸರಿಲ್ಲ, ಕುಡ್ಯಾಕನು ನೀರಿಲ್ಲ, ಹೊರಗ ಹೋಗಿ ತಿನ್ನಬೇಕಂದ್ರ ರೊಕ್ಕ ಖಾಲಿ ಆಗ್ಯಾವ. ಬರೆ ಹಿಂತಾವ ಮಾತ ನೋಡ್ರಿ.  ಮನ್ಯಾನ ಮಂದಿನ ಮರಗಸೊ ಕೆಲಸ ನೋಡ್ರಿ. ಗೌರ್ವಮೆಂಟ ಕೆಲಸಾ ತಗೊತಿಯೋ ಇಲ್ವೊ ಆದ್ರ ಗೌರ್ವಮೆಂಟ ಅನ್ನ ಸಿಕ್ಕೆತಿ ಅಂತಾ ಖುಷಿ ಪಡಬೇಕು. ಪಾಪಾ ಅವರ ಅನ್ಕೊಂಡಂಗ ಹಾಸ್ಟೆಲ್‍ನ್ಯಾಗದು ಮೊದ್ಲಿನಂಗ ಯಾವ ಸಮಸ್ಯೆ ಇಲ್ರಿ. ಮಕ್ಕಳ ಆರಾಮ ಇರಾತಾರ. ಆಡಂಬರ ಜೀವನಾ ಮಾಡಾಕ ಒಂದಿಷ್ಟ ಸಿಂಪತಿ ಪಡ್ಕೊಕ ಒಂದ ದಾರಿ ಅಷ್ಟೆ. ಅದರ ಉಪಯೊಗ ಎಷ್ಟರ ಮಟ್ಟಿಗೆ ತೊಗಕ್ಕತ್ತೇವಿ ಅಂತಾ ಸ್ವಲ್ಪ ಕಬರ ತಾಗಲೇಬೇಕ. ಆಡೋ ಮಾತ ತುಸು ಒರಟ ಅನಸಬೊದಲ್ವಾ?. ಆದ್ರ ಅನಿವಾರ್ಯ.

ಸುಮಾರ ಮಂದಿನ ನೋಡಿ ಕೆಲವೋಂದಿಷ್ಟ ಕೇಳಿ ನಿಮ್ಮ ಕೂಡ ಹೇಳಾಕತ್ತೆನ್ರಿ. ಮೊನ್ನೆತಾನೆ ಪದ್ಮರಾಜ ದಂಡಾವತಿಯವರು ಬರೆದ “ಯಾಕೆ ಆ ಹುಡುಗ ಹಾಗೆ ಮಾಡಿಕೊಂಡ” ಎಂಬ ಲೇಖನ ಬಾಳ ಅದ್ಭುತವಾಗಿತ್ತು. ವಿಷಯ ಇಷ್ಟೇ, ತಾಯಿ ಹೆರೋದು ವಸ್ತುನಲ್ಲ, ತನ್ನ ಕನಸಗಳನ್ನು ನನಸು ಮಾಡಬಲ್ಲ ಒಂದ ರೂಪಾ ಅಂತಾ. ಅವಾಗಿನ ಪರಿಸ್ಥಿತಿ ಹೆಂಗಪಾ ಅಂದ್ರ ಊಟ್ರ ಊಟಿಲ್ಲಾ ಮಲಗಾಕ ನೆಮ್ಮದಿ ಇರಂಗಿಲ್ಲ. ಒಣ ಖಾರಾ ರೊಟ್ಟಿ ತಿಂದ ಹೆಂಗ ಅದಾರ ನೋಡ್ರಿ. ನಾವು ಒಂದ ಗುದ್ದಿದ್ರ ಸಾಯಿತ್ತೇವಿ. ಏನರ ಒಂದ ಕೆಲಸ ಮಾಡಕ ಕೊಟ್ರ ಒತ್ರನು ಅಲ್ಲ ಒಗಾತಿನು ಅಲ್ಲ. ಇವಾಗ ನಮ್ಮಂಗ ಇದ್ದ ಸೌಕರ್ಯಗಳಂತೂ ಇಲ್ಲವೆ ಇಲ್ಲಾ. ಆರ್ಥಿಕ  ಸ್ಥಿತಿ ಬಾಳ ಗಂಭೀರ ಇತ್ರಿ. 

ನಮಗ ಹಂಗಲ್ರಿ ಒಂದೇನು ಕಡಿಮೆ ಬೀಳಂಗಿಲ್ಲ. ಮಂದಿ ಅನ್ನೊಂಗಿಲ್ಲ, ಮಕ್ಕಳ ಅನ್ನೊಂಗಿಲ್ಲ, ಹೆದ್ರಿಕೆ ಅನ್ನೊ ಶಬ್ದದ ಅರ್ಥನ ತಿಳಿದಂಗ ಆಗೈತಿ. ಜೀವನದ ದೊಡ್ಡ ಸಾಧನೆ ಎರಡೇ ಸ್ನೇಹ, ಪ್ರೀತಿ.. ಅದ್ರಾಗ ಪ್ರೇಮಕಹಾನಿ ಇಲ್ದೆ ಇರೊರ ಅದಾರಂದ್ರ ಅವರಂತ ಹಿಂದುಳಿದ ಜನಾಂಗನೆ ಯಾವದಿಲ್ಲ ನೋಡ್ರಿ. ಫಾರ್ವಡ್ ಆಗ್ಯಾರ ಒಬ್ಬರ ಅಂದ್ರ ಅದ್ರಾಗ ಬ್ಯಾರೆನ ಐತಿ. ಅದೇನು ಅಂತಿರೇನು? ಕೈಯಾಗ ಹರಾಮದ ಒಂದಿಷ್ಟ ರೊಕ್ಕಾ ಹೇಳಿದಂಗ ಕೇಳಾಕರ ಕೇಳಸ್ಕೊರಕರ ಒಬ್ಬ ಸಂಗಾತಿ, ರಹಸ್ಯ ಕೊಡ್ ಬಳಸಿ ಉಪಯೊಗ ಮಾಡೋ ಮೆಸೇಜ್, ವಾಟ್ಸ್‍ಪ್, ಫೇಸ್‍ಬುಕ್ ಇದ್ರ ಮುಗೀತ ನೋಡ್ರಿ. ಅವರಂತಾ ದೇವ ಮಾನವರೆ ಎಲ್ಲೂ ಇಲ್ರಿ ಮತ್ತ. ಹಿಂತಾ ಕ್ವಾಲಿಟೀಸನ ಮೆಂಟೇನ್ ಮಾಡಕೋತ “ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ” ಮಾಡತ್ತೇವಿ.  

ರಥಾ ಸಾಗತದ ಆದ್ರ ಅದಕ್ಕ…… ಆಧಾರ ಯಾರು? ಅಂತ ನೆನೆಪಿಗೆ ಬಂದ್ರ ಅಷ್ಟ…. ಸಾಕ ನೋಡ್ರಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಋಣಮುಕ್ತವಲ್ಲದ ಬದುಕು ನಮ್ಮದು: ಗಾಯತ್ರಿ ಬಡಿಗೇರ

  1. ಲೇಖನ ಓದಿದೆ. ತುಂಬಾ ಸೊಗಸಾಗಿ ಸ್ಥಳಿಯ ಭಾಷೆಯಲ್ಲಿ ಬರೆದಿದ್ದೀರಿ. ಖುಶಿಯಾಯಿತು…

     

Leave a Reply

Your email address will not be published. Required fields are marked *