ಶ್ರಾವಣ ತಿಂಗಳ ಕೊನಿ ಸೋಮವಾರ. ಊರ ಬಸನದೇವ್ರ ಗುಡಿಯೊಳಗ ತಿಂಗಳಾನುಗಟ್ಲೆ ನಡೆದ ಬಸವ ಪುರಾಣಕ್ಕೆ ಅಂದು ಮಂಗಳ ಹೇಳೋ ದಿವ್ಸ. ಹೇಳಿಕೇಳಿ ಅದು ಲಿಂಗಾಯತರು ಬಾಳ ಮಂದಿ ಇರೋ ಬಸವನೂರು. ಲಿಂಗಾಯತರಿಗೆ ಬಸವಪುರಾಣದ ಮಂಗಲೋತ್ಸವೆಂದರೆ ಕೇಳಬೇಕೆ. ಪ್ರತಿಯೊಂದು ಮನೆಗೆ ಸಾವಿರಾರು ರೂ.ಪಟ್ಟಿ ವಸೂಲು ಮಾಡಿದ್ರು. ಊರು ಜನರು ಬುಟ್ಟಿಗಟ್ಟಲೆ ರೊಟ್ಟಿ, ಚೀಲಗಟ್ಟಲೆ ಜ್ವಾಳ-ಗೋದಿ ಕೊಟ್ಟು ‘ಬಸಣ್ಣ ನಿನ್ನ ಜಾತ್ರಿ ಚಂದಂಗ ನಡಿಯುವಂಗ ನೋಡಕೋಳ್ಳಪೋ. ಎಲ್ಲಾ ನಿನ್ನ ಕೂಡೇತಿ’ ಎಂದು ಬೇಡಿಕೊಂಡಿದ್ದರು.
ಬಸಣ್ಣದೇವ್ರ ಗುಡಿಮುಂದಿನ ದೊಡ್ಡ ಪೆಂಡಾಲದೊಳಗ ಊರ ಹಿರಿಕಿರ್‍ಯಾರೆಲ್ಲ ಮುಕುರಿಕೊಂಡಿದ್ದರು. ಪೆಂಡಾಲದ ಒಂದು ಮೂಲೆಯ ಖುರ್ಚಿಯ ಪೋಟೋದಲ್ಲಿದ್ದ ಬಸವಣ್ಣ ಹೂಹಾರ, ಊದುಕಡ್ಡಿ ಹೊಗಿ, ಕುಂಕುಮದೊಳಗ ಕಳದುಹೋಗಿದ್ದ. ಅದರ ಪಕ್ಕದಲ್ಲಿನ ವೇದಿಕೆಯ ಮೇಲೆ ಹತ್ತಿಪ್ಪತ್ತು ಖುರ್ಚಿಗಳೊಳಗ ಊರ ಹಿರಿಕರಾದ ಬಸಣ್ಣನ ಭಕ್ತರು ವಿರಾಜಮಾನರಾಗಿದ್ದರು.
ಜಗಮಗಿಸುವ ಲೈಟ್ ಬೆಳಕಿನಲ್ಲಿ ನಡೆದ ಬಸವಪುರಾಣವನ್ನು ತಿಂಗಳುಗಟ್ಟಲೆ ರಾಗಾಲಾಪನದೊಂದಿಗೆ ಚಂದಂಗ ಹೇಳಿದ್ದ ಪುರಾಣಿಕ ಸಿವಗಂಗಯ್ಯನನ್ನು ಹೂಹಾರ ಹಾಕಿ ಸನ್ಮಾನಿಸಲು ಶುರು ಹಚ್ಚಿಕೊಂಡರು. ಅಲ್ಲಿಯವರೆಗೆ ಚಂದಂಗ ನಡೆದಿದ್ದ ಸಮಾರಂಭ ಮಾದರ ಚನ್ನಪ್ಪ ತನ್ನ ಲುಂಗಿಯ ಸೆರಗಿನಿಂದ ಹೂಹಾರ ತೆಗೆದುಕೊಂಡು ದಡಗ್ನ ಸ್ಟೇಜ್ ಕಡೆ ಬಂದಿದ್ದರಿಂದ ಸಮಾರಂಭದ ದಿಕ್ಕು ಬದಲಾಯಿತು. ರಾಮಬಾಣದಂಗ ತನ್ನ ಕಡೆನ ನೆಟ್ಟಗ ಬರುತ್ತಿದ್ದ ಚನ್ನಪ್ಪನನ್ನು ನೋಡಿದ ಶಿವಗಂಗಯ್ಯ ಮುಂದೆನು ಮಾಡಬೇಕು, ಎದುರಾಗಲಿರುವ ಆಪತ್ತಿನಿಂದ ಪಾರಾಗುವ ಬಗೆಯಂತು ಎಂದು ಒಳಗೆ ಬೇಯುತ್ತ, ಬೆವರುತ್ತಿರುವಾಗ ಚನ್ನಪ್ಪನ ಕೈಲಿದ್ದ ಹಾರ ಅವರ ಕೊರಳಿಗೆ ಉರುಳಾಗಿ ಬಿದ್ದೇ ಬಿಡ್ತು.
ಯಕಶ್ಚಿತ್ ಒಬ್ಬ ಹೊಲೇರಾಂವ ಸ್ಟೇಜಿಗೆ ಬರೋದಂದ್ರೇನು. ಇದು ಬಸವನೂರು ಇತಿಹಾಸದಲ್ಲಿಯೆ ಪ್ರಪ್ರಥಮವಾಗಿ ನಡೆದ ಅಮಂಗಳ. ಅದೂ ಅವತಾರಪುರುಷ ಬಸವಣ್ಣನವರು ಪೋಟ ಇರೋ ವೇದಿಕೆ ಮೇಲೇಯೇ. ನಿಬ್ಬೆರಗಾದ ಜನರ ಬಿಟ್ಟ ಕಣ್ಣು ಬಿಟ್ಟಂಗೆ ಇದ್ದವು. ಇದ್ಯಾವುದರ ಖಬರಿಲ್ಲದ ಮಾದಾರ ಚನ್ನಪ್ಪ ಹೋಯ್ದಾಡಕೋತ ಬಂದು ಮೈಕ್ ಮುಂದ ನಿಂತಗೊಂಡ ‘ಅಲೋ ಅಲೋ’ ಎಂದು ಮೈಕ್ ಟೆಸ್ಟ್ ಮಾಡಿ ಮಾತಿಗೆ ನಿಂತೇಬಿಟ್ಟ.
‘ಮಹಾಜನಗಳ್ರಾ, ಬಸಣ್ಣ ನಿಮಗಷ್ಟ ಅಲ್ಲ. ನಮ್ಮ ಮಂದಿಗೂ ಅಂವ ತಂದಿ ಇದ್ದಂಗ. ಆತ ನಮ್ಮ ದೇಸಂಬೋ ದೇಸದ ಸಂವಿಧಾನ ಕೆತ್ತಿದ ಶಿಲುಪಿ ಬಾಬುಸಾಬರಿಗೆ ಅಣ್ಣ ಇದ್ದಂಗ. ಅಂವಾ ಏನ್ ಹೇಳ್ಯಾನಂಬೋದು ನಾವು ತಿಳ್ಕಂಡು ಪಾಲನಾ ಮಾಡಬೇಕು. ನಮ್ದು ನಿಮ್ದು ರಗುತ ಒಂದ ಐತಿ. ನಾವು ನಿವು ಬ್ಯಾರಿ ಅಲ್ಲ. ಅಣ್ಣ ತಮ್ಮರಿದ್ದಂಗ……’ ಎಂದು ಏನೆನೋ ಒದರುತ್ತಿದ್ದ. ಅಷ್ಟರೊಳಗ ವೇದಿಕೆ ಮೇಲಿದ್ದ ಗೌಡ್ರ ರಂಗಪ್ಪ ‘ಏ ಏನ್ ನೋಡತಿರಿ ಎಳಕೋಳ್ರಲೆ ಅಂವನ, ಎಕ್ಕಡಾ ಎಲ್ಲಿಡಬೇಕು ಅಲ್ಲೆ ಇಡಬೇಕು. ಚಂದ ಐಥಿ ಅಂತ ದೇವರ ಮನಿಗೆ ತರಾಕ ಆಗೂದಿಲ್ಲ. ಅಂವನ ಇಲ್ಲಿ ಮಟ ಬಿಟ್ಟದ್ದ ತಪ್ಪಾಗೈತಿ’ ಅಂತ ಚೀರಕೋತ ಎದ್ದು ಬಂದೇಬಿಟ್ಟ.
ಮಾಧಾರ ಚನ್ನಪ್ಪಗ ಸಿಟ್ಟು ಎಲ್ಲಿತ್ತೋ ಎನೋ. ತಗದು ಒಂದು ಗೌಡ್ರ ರಂಗಪ್ಪನ ಕಪಾಳಕ್ಕೆ ಬಿಟ್ಟು ಬಿಟ್ಟ. ಮೊದಲೆ ಅಂವ ಸೆರೆ ಕುಡುದು ಬಂದಂಗಿತ್ತು. ರಂಗಪ್ಪ ಕಪಾಳ ಮುಟ್ಟಿಕೊಳ್ಳುವ ಮುಂಚೇಯೆ ಅಲ್ಲಿ ಚನ್ನಪ್ಪನ ಹತೋಡಾದಂಥ ಕೈಬೆರಳುಗಳು ಕೆಂಪಗ ಮೇಲೆದ್ದು ತಮ್ಮ ಗುರುತುಳಿಸಿದ್ದವು. ಜನ ಎಲ್ಲ ಎದ್ದು ನಿಂತು ‘ಏ ಹಿಡಿಕೋಳ್ರೋ ಆ ಸೂ.. ಮಗನ್ನ’ ಅಂತ ಅನ್ನೋದ್ರೋಳಗ ಚನ್ನಪ್ಪನ ಕಾಕಾನ ಮಗ ಯಲ್ಯಾ ಗಾಳಿಯಂಗ ಹಾರಿ ಬಂದು ಚನ್ನಪ್ಪನ ಸ್ಟೇಜ್‌ನಿಂದ ಹೊರಗ ಎಳಕೊಂಡು ಹೋಗಿ ಅವನ ಪಲ್ಸರ್ ಗಾಡಿ ಹತ್ತಿಸಿದ. ಇಬ್ಬರನ್ನು ಹೊತಗೊಂಡ ಪಲ್ಸರ್ ವಾಯುದೂತನಂಗ ಗಾಳಿ ಸಿಳಕೊಂಡು ಹಾರಿ ಹೋತು.
ಗೌಡ್ರ ರಂಗಪ್ಪನನ್ನು ಒಂದಿಷ್ಟು ಮಂದಿ ಸೈಡಿಗೆ ಕರಕೊಂಡು ಬಂದು ಟಾವೆಲ್ಲಿನಿಂದ ಗಾಳಿ ಹಾಕಿ, ನೀರು ಕುಡಿಸಿ ಆರೈಕೆ ಮಾಡತೊಡಗಿದರು. ಇನ್ನೊಂದಿಷ್ಟು ಮಂದಿ ಆ ಹೊಲಿ ಸೂಳಿಮಗ ಎಲ್ಯಾದಾನ ನೋಡ್ರೆಲೆ ಅನಕೊಂಡ ಅಂವನ ಊರ ತುಂಬ ಹುಡಕ್ಯಾಡಾಕ ಹತ್ಯು.
***
ಚನ್ನಪ್ಪ ಸಣ್ಣಾಂವ ಇರುವಾಗ ಮನಿಯೊಳಗ ಅಪ್ಪ ಅವ್ವನ ಕೂಡೆ ಜಗಳಾ ಮಾಡಿದ ನೆಪ ಮಾಡ್ಕೊಂಡು ಮಂಗಳೂರು ಕಡೆ ಓಡಿ ಹೋಗಿದ್ನಂತ. ಅಲ್ಲಿ ‘ಹೊಲೇರ ಹುಡುಗ’ ಎಂಬೋ ಹೊಲಸ ಶಬ್ದದ ಕಾಟವಿಲ್ಲದೆ ಹತ್ತಾರು ವರ್ಷ ಮಂಗಳೂರಿನ ಇಟ್ಟಂಗಿ ಬಟ್ಟಿಯೊಳಗ ಕೆಲಸ ಮಾಡಿದ. ಮಂಗಳೂರಿನಲ್ಲಿ ಬಲವರ್ದನೆಗೊಳ್ಳುತ್ತಿದ್ದ ಡಿಎಸ್‌ಎಸ್‌ನ ಸಂಪರ್ಕಕ್ಕೆ ಬಂದಿದ್ದ. ಬಿಡುವಿನ ವೇಳೆಯಲ್ಲಿ ಡಿಎಸ್‌ಎಸ್‌ನ ಎಲ್ಲ ಸಭೆ ಸಮಾರಂಭದೊಳಗ ಭಾಗವಹಿಸುತ್ತಿದ್ದ. ಪ್ರತಿಭಟನಾದೊಳಗ ಎಲ್ಲಾರಕ್ಕಿಂತ ಮುಂದ ನಿಂತು ಧಿಕ್ಕಾರ ಅಂತ ಕೂಗುತ್ತಿದ್ದ. ಆಗೆಲ್ಲ ಅವನಿಗೆ ತನ್ನೂರಿನ ತನ್ನ ಕೇರಿ ಜನರ ದುಸ್ಥಿತಿ ನೆಪ್ಪ ಆಕ್ಕಿತ್ತು. ತಾನು ತನ್ನೂರಿನ ಮೇಲ್ಜಾತಿಯವರ ವಿರುದ್ಧ ಹಿಂಗ ಒಮ್ಯಾದರೂ ಹೋರಾಟ ಮಾಡಬೇಕು ಅಂತ ಕನಸ ಕಾಣ್ತಿದ್ದ.
ಹತ್ತೋರುಷದ ಮಂಗಳೂರಿನ ವಾಸ ಚನ್ನಪ್ಪನನ್ನು ಹೊಸ ಮನುಷ್ಯನನ್ನಾಗಿ ಮಾಡಿತ್ತು. ತನ್ನೂರಿಗೆ ಹೋಗಿ ಏನಾದರೂ ಸಾಧನಾ ಮಾಡಬೇಕು ಅಂತ ಆಸಾ ಆಗಿ ಊರಿಗೆ ಬಂದಿದ್ದ. ಅಪ್ಪ ಅವ್ವ ಅಷ್ಟೊತ್ತಿಗೆ ಶಿವನ ಪಾದ ಸೇರಿದ್ದರು. ಒಂದಿಬ್ಬರು ಅಣ್ಣತಮ್ಮಂದಿರಿದ್ದರಾದರೂ ಅವರು ತಮ್ಮ ತಮ್ಮ ಹೆಂಡ್ರ ಮಕ್ಕಳ ಕೂಡ ಬ್ಯಾರೆ ಮನೆ ಮಾಡಿಕೊಂಡಿದ್ದರು.
ಚನ್ನಪ್ಪನ ಕೈಯಾಗ ದುಡಕೊಂಡು ಬಂದಿದ್ದ ರೊಕ್ಕ ಇತ್ತು. ತಲಿಯೊಳಗ ಡಿಎಸ್‌ಎಸ್ ಹಚ್ಚಿದ ದೀಪ ಇತ್ತು. ತನ್ನ ಕೇರಿಗೆ ಬಂದು ‘ನಮ್ಮ ಮಂದಿ ಮುಂದಕ್ಕ ಬರಬೇಕು… ಮುಂದಕ್ಕ ಬರಬೇಕು…’ಅಂತ ಬಡಕೊಂಡೆ ಬಡ್ಕೊಂಡ. ಆದ್ರ ಊರ ಗೌಡ್ರ ಹೊಲದೊಳಗ ದುಡಕೊಂಡು, ದನಕೊಂಡು ಬರತಿದ್ದ ಕೇರಿ ಜನರಿಗೆ ಈ ಚನ್ನಣ್ಣನ ಮಾತು ಕ್ವಾಣದ ಮುಂದ ಕಿಣ್ಣೂರಿ ಬಾರಿಸಿದಂಗ ಆಕ್ಕಿತ್ತು.
ಇವನೌನ ನಮ್ಮೂರು ಕೇರಿ ಜನರಿಗೆ ಬುದ್ಧಿ ಬರೂದಿಲ್ಲ ಅಂತ ತಾನು ಊರು ಬಿಟ್ಟ ಪಕ್ಕದ ತಾಲೂಕು ಕೇಂದ್ರದೊಳಗ ಬಾಡಿಗೆ ಮನಿ ಮಾಡಿ ಅಲ್ಲೆ ನೆಲೆಗೊಂಡ. ನಿಧಾನಕ್ಕೆ ತಾಲೂಕಿನ ದಲಿತರನ್ನು, ಸ್ಲಂ ಜನರನ್ನು ಒಗ್ಗೂಡಿಸಿ ಡಿಎಸ್‌ಎಸ್ ಶಾಖಾ ಆರಂಭಿಸಿದ.
ತಾಲೂಕಿನ ದೊಡ್ಡ ದೊಡ್ಡ ಅಧಿಕಾರಿಗಳು ಇವನ ಹೋರಾಟದ ಬಗ್ಗೆ ಒಳಗೊಳಗೆ ಹೆದರಿಕೊಂಡಿದ್ದರೂ ಹೊರಗೆ ಮೆಚ್ಚುಗೆಯ ಮಾತುಗಳನ್ನಾಡಿ ನಿನ್ನ ಒಳ್ಳೆ ಕೆಲಸಕ್ಕ ನಮ್ಮ ಕಚೇರಿ ಪಾಲು ತುಗೋಳಪ್ಪಾ ಅಂತ ಸಣ್ಣ-ಸಣ್ಣ ರೊಕ್ಕದ ಪೆಂಡಿ ಕೊಡತಿದ್ರು. ತಮಗ ಜನರಿಂದ ಬಂದ ಕ(ತೆ)ಪ್ಪ ಕಾಣಿಕೆಯೊಳಗ ಸ್ವಲ್ಪ ಪಾಲು ಇಂವಗ ತಗದಿಟ್ಟು ತಿಂಗಳ ಕೊನೆ ತಾರೀಖು ಇವನ ಮನಿಗೆ ತಲುಪಿಸತಿದ್ರು.
ಕಪ್ಪ ಕಾಣಿಕೆ ಯಾರು ಸಲ್ಲಿಸುತ್ತಿರಲಿಲ್ಲವೋ ಅವ್ರ ಕಚೇರಿ ಮುಂದ ಚನ್ನಪ್ಪ ಹೆಗಲ ಮ್ಯಾಲೊಂಡು ಕೆಂಪು ಟವೆಲ್ಲು ಹಾಕ್ಕೊಂಡು ತನ್ನ ಬಾಡಿಗೆ ಹೋರಾಟದ ಹುಡುಗರೊಂದಿಗೆ ದಾಂಗುಡಿ ಇಡುತ್ತಿದ್ದ. ‘ಜಡ್ಡು ಜಡ್ಡು ನಕ’ ತಮಟೆ ಸದ್ದು, ಭ್ರಷ್ಟ ಅಧಿಕಾರಿಗೆ ಧಿಕ್ಕಾರ ಎಂಬ ಘೋಷಣೆಯೊಂದಿಗೆ. ಆ ಅಧಿಕಾರಿಯ ಯಾವುದಾದರೂ ಒಂದು ಲಂಚ ಹೊಡೆದ ಪ್ರಕರಣ ಅವನಿಗಿರುವ ಪತ್ರಕರ್ತರ ನೆಟವರ್ಕ್‌ನಿಂದ ಗೊತ್ತಾಗಿಬಿಟ್ಟಿರುತ್ತಿತ್ತು.
ಡಿಎಸ್‌ಎಸ್ ಶಾಖಾ ಖರ್ಚಿಗಂತ ಎಲ್ಲೆಲ್ಲಿಂದಲೋ ದುಡ್ಡು ನೀರಿನಂಗ ಹರಿದು ಬರತಿತ್ತು. ಒಂದು ಪಲ್ಸರ್ ಮೋಟಾರ್ ಸೈಕಲ್ ತುಗೊಂಡಿದ್ದ.
ಇಷ್ಟರೊಳಗ ಚನ್ನಪ್ಪ ‘ಚನ್ನಪ್ಪಣ್ಣ’ ಆಗಿದ್ದ. ಬಂಗಾರದ ಹಗ್ಗವೊಂದು ಅವನ ಉಬ್ಬಿದ ಕೊರಳ ಸಿರಾ ಸುತ್ತುವರೆದಿತ್ತು. ಬಂಗಾರದ ತುಣುಕಗಳು ಬೆರಳನ್ನು ಬಂದಿಸಿದ್ದವು. ಭಾರಿ ಅಮೌಂಟಿನ ಮೊಬೈಲೊಂದು ಯಾವಾಗಲೂ ಕಿವಿಗಂಟಿಕೊಂಡಿರುತ್ತಿತ್ತು. ನೋಡುನೋಡುತ್ತಿದ್ದಂತೆ ಊರಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಸದಸ್ಯನೂ ಆಗಿಬಿಟ್ಟ. ಇತ್ತಿತ್ತಲಾಗಿ ಊರ ಹೊರಗಿನ ಮಸಾರಿ ತೊಗರಿ ಹೊಲದಲ್ಲಿ ಊರ ಮೇಲ್ಜಾತಿಯ ಹುಡುಗಿಯೊಬ್ಬಳ ಬೆವರಿಳಿಸಿ ಬೆವರುತ್ತಿದ್ದ ಎಂಬ ಗುಮಾನಿಯೂ ಊರಲ್ಲೆಲ್ಲ ಹಬ್ಬಿಕೊಂಡಿತ್ತು. ಈ ಸುದ್ದಿಯಿಂದ ಊರ ಮಂದಿ ಕೊತ ಕೊತ ಕುದಿಯುತ್ತಿದ್ದರೆ, ಕೇರಿ ಮಂದಿ ಇದನ್ನು ತಮ್ಮ ಮಂದಿಯ ವಿಜಯೋತ್ಸವವೆಂದು ಹುರುಪುಗೊಂಡಿದ್ದರು. ಇಷ್ಟರಲ್ಲಾಗಲೆ ಚನ್ನಪ್ಪನ ಕಾಕಾನ ಮಗ ಯಲ್ಯಾ ಸೇರಿದಂತೆ ಹತ್ತಾರು ಹುಡುಗರು ಇವನ ಹಿಂಬಾಲಕರಾಗಿ ಪರಿವರ್ತನೆಯಾಗಿದ್ದರು.
* * *
‘ಇವರೌರ, ನಾವೆನು ತೆಪ್ಪ ಮಾಡಿವಿ ಅಂತ ನಮಗ ಹಿಂಗ ಹಾರಾಡಾತಾರು. ನಮ್ಮ ಮಂದಿ ಸ್ಟೇಜ್ ಹತ್ತಿದರ ಸಾಕು ದೊಡ್ಡ ಗಲಾಟೆ ಮಾಡ್ತಾರ. ನಾವಂದ್ರ ಎನ್ ತಿಳದಾರ ಮಕ್ಕಳು. ಡಾಕ್ಟರ್ ಬಾಬುಸಾಬ್ರು ಬರೆದ ಸಂವಿಧಾನ ನಮ್ಮ ಬೆನ್ನಿಗೆ ಐತಿ. ಇವರಮ್ಮನ್, ನಾಳಿ ಪೊಲೀಸ್ ಠಾಣಾಕ್ಕ ಹೋಗಿ ಇವರ ಮ್ಯಾಲ ಅಟ್ರಾಸಿಟಿ ಕೇಸ್ ಹಾಕಿ ಸ್ಟೇಷನ್‌ದೊಳಗ ಹಾಕಿಸ್ತಿನಿ’ ಎಂದು ಪಲ್ಸ್‌ರ್ ಸವಾರಿ ಮಾಡುತ್ತಿದ್ದ ಚನ್ನಪ್ಪ ಏನೇನೊ ಒದರಾಡುತ್ತಲೆ ಇದ್ದ. ಹಿಂದ ಕುಳಿತಿದ್ದ ಯಲ್ಯಾ ತಣ್ಣಗ ಕೇಳಿಸಿಕೊಳ್ಳುತ್ತಿದ್ದ.
ಇತ್ತ ಊರ ಜನ ಚನ್ನಪ್ಪನ ದುವರ್ತನೆ ಬಗ್ಗೆ ದೊಡ್ಡ ದೊಡ್ಡ ಮಿಟಿಂಗ್ ಶುರು ಹಚ್ಚಿಕೊಂಡಿದ್ದರು. ಊರ ಹಿರ್‍ಯಾರು ನಾಳೆ ಪೊಲೀಸ್ ಠಾಣಾಕ್ಕ ಹೋಗಿ ಪಿರ್‍ಯಾದಿ ನೀಡೋಣ ಅನ್ನೋ ತೀರ್ಮಾನಕ್ಕೆ ಬಂದು ಮೀಟಿಂಗ್ ಸಮಾಪ್ತಿಗೊಳಿಸಿದ್ದರು. ಬೂದಿ ಮುಚ್ಚಿದ ಕೆಂಡದಂಗ ಒಳಗ ನಿಗಿ ನಿಗಿ ಕೆಂಡ ಇಟ್ಕೊಂಡು ಊರ ತಣ್ಣಗ ಮಲಕ್ಕೊಂಡಿತ್ತು. ಊರ ಮ್ಯಾಲ ಸಾಗಿ ಬಂದಿದ್ದ ಚಂದಪ್ಪ ತನ್ನ ತಣ್ಣನೆಯ ಬೆಳದಿಂಗಳಿಂದ ಬೂದಿ ಮುಚ್ಚಿದ ಕೆಂಡವನ್ನು ತಂಪುಗೊಳಿಸುವ ವಿಫಲ ಯತ್ನ ನಡೆಸಿದ್ದ.
ಬಸಣ್ಣದೇವ್ರ ಪೌಳ್ಯಾಗ ಮಲಕ್ಕೊಂಡಿದ್ದ ಹರೇದ ಹುಡುಗರಿಗೆ ಆ ಬೆಳದಿಂಗಳಲ್ಲೂ ರಕ್ತ ಕೊತ ಕೊತ ಕುದಿತಿತ್ತು. ಬಹುತೇಕ ಆ ಹುಡುಗರೆಲ್ಲ ಬಸವಣ್ಣನ ಜಾತಿಗೆ ಸೇರಿದವರೆ ಆಗಿದ್ದರು. ಆ ಹುಡುಗರು ಜಗಜ್ಯೋತಿ ಬಸವಣ್ಣನ ಬಗ್ಗೆ ಓದಿಕೊಳ್ಳದೆ ಇದ್ರೂ ಬಸವಣ್ಣನ ಖ್ಯಾತಿಯ ಬಗ್ಗೆ ಟಿವಿಯಲ್ಲಿ ಕೇಳಿ ಬಹಳಷ್ಟು ತಿಳಿದುಕೊಂಡಿದ್ದರು. ಬಸವಣ್ಣನ ಉಚ್ಚ ಜಾತಿಯವರಾದ ನಮ್ಮ ಮ್ಯಾಲ ಯಕಶ್ಚಿತ್ ಹೊಲ್ಯಾರಾಂವ ಒಬ್ಬ ದಾಳಿ ಮಾಡಿದ್ದು ಆವರಿಗೆ ಸಹಿಸಲಾರದ ಅವಮಾನವಾಗಿ ಕಾಡತೊಡಗಿತು. ಅವರಿಗೆ ನಾಳೆ ಪೊಲೀಸ್ ಠಾಣೆಗೆ ಹೋಗಿ ಪಿರ್‍ಯಾದಿ ನೀಡುವವರೆಗೆ ತಾಳ್ಮೆ ಇಲ್ಲವಾಗಿತ್ತು. ನಾಳೆ ಬೆಳಗ್ಗೆ ಈ ಹಲ್ಕಾ ಹಿರ್‍ಯಾರು ಪೊಲೀಸ್ ಠಾಣೆವರೆಗೆ ನಡೆದು ಹೋಗಿ ಪಿರ್‍ಯಾದಿ ನೀಡುತ್ತಾಯೇ ಅನ್ನೋದರ ಮೇಲೆ ಇವರಿಗೆ ಭರವಸೆಯೆ ಇರಲಿಲ್ಲ.
ತಣ್ಣನೆಯ ಬೆಳದಿಂಗಳಲ್ಲಿ ಈ ಹುಡುಗರ ದಂಡು ಊರು ದಾಟಿ ಕೇರಿ ದಾರಿ ಹಿಡಿದಿತ್ತು. ಆ ದಂಡಿನ ನಡಿಗೆಯಲ್ಲಿ ಯುದ್ಧಕ್ಕೆ ಹೊರಟವರ ಗತ್ತು ಮತ್ತು ಮುಖದಲ್ಲಿ ಮಹತ್ಕಾರ್ಯ ಮಾಡುವವ ದಾಷ್ಟವಿತ್ತು. ಕೈಯಲ್ಲಿ ಸೈಕಲ್ ಚೈನ್, ಹೆಗಲಲ್ಲಿ ಇಳಿಬಿದ್ದಿದ್ದ ಟವೆಲ್ಲಿನಲ್ಲಿ ಹಿಡಿಗಾತ್ರದ ಕಲ್ಲುಗಳಿದ್ದವು.
ಕೇರಿ ದುರಗವ್ವನ ಗುಡಿಮುಂದ ಚಂದ್ರಾಮನ ಬೆಳದಿಂಗಳನ್ನು ಹೊಚ್ಚಿಕೊಂಡು ಮೈ ಚಲ್ಲಿದ್ದ ಹೊಲೆರ ಮಂದಿಯ ಅಂಗಾಂಗಗಳು ಇದ್ದಕಿದ್ದಂತೆ ಲಟಕ್ ಪಟಕ್ ಎಂದು ಮುರಿಯತೊಡಗಿದವು. ದೇಹವೆಂಬೋ ದೇಹಗಳ ನವತೂತುಗಳಿಗೆ ಅಕ್ಕಪಕ್ಕ ಮತ್ತೊಂದಿಷ್ಟು ತೂತು ಹುಟ್ಟಿ ಅವು ನಲ್ಲಿಯಂತೆ ರಗುತ ಸುರಿಯತೊಡಗಿದವು.
ನಾಳೆಯ ಪ್ರತಿಕಾರದ ತಂತ್ರ ಹೆಣೆಯುತ್ತ ತನ್ನ ತಾಲೂಕು ಕೇಂದ್ರದ ಖೋಲಿಯೊಳಗ ಅಂಗಾತ ಬಿದ್ದುಕೊಂಡಿದ್ದ ಚನ್ನಪ್ಪನ ಮೊಬೈಲು ಒಮ್ಮೆಲೆ ಕಿರುಗುಟ್ಟಲು ಅಂವ ಹೆದರುತ್ತಲೆ ಅದನ್ನು ಕಿವಿಗಾಣಿಸಿಕೊಂಡ. ಕಿವಿಯುತ್ಪಾದಿಸಿದ ಬೆವರಿನಿಂದ ಮೊಬೈಲು ತೊಯ್ದು ಗಿಜಿಗಿಜಿಯಾಯಿತು.
ಅದೆ ಆತಂಕದಲ್ಲಿ ಆತನಿಂದ ಸುದಿ ಪೊಲೀಸ್‌ಠಾಣೆಗೆ ವರ್ಗಾವಣೆಯಾಗಿ ಅಲ್ಲಿಂದ ೧೦೮ ಅಂಬ್ಯುಲೆನ್ಸ್‌ಗೆ ಟ್ರಾನ್ಸಪರ್ ಆಗಿ ಅಂಬ್ಯುಲೆನ್ಸ್‌ನವರು ರಕ್ತ ಸೋರಿಸಕೋತ ಬಿದ್ದಿದ್ದ ಕೇರಿ ಜನರನ್ನು ತುಂಬುಕೊಂಡು ಬಂದು ನಗರದ ಕಿಮ್ಸ್ ಆಸ್ಪತ್ರೆಗೆ ತಂದು ಒಗೆದರು.
****
ರಾತ್ರಿ ಹಗಲಾಗೊದ್ರೋಳಗ ಬಸವನೂರು ಎಲ್ಲ ಪತ್ರಿಕೆಗಳಿಗೆ ಆಹಾರವಾಗಿತ್ತು. ನಾಡಿನ ದೊಡ್ಡ ದೊಡ್ಡ ಮಿನಿಷ್ಟರಗಳು, ಮುಖಂಡರಗಳು ಆಸ್ಪತ್ರೆಗೆ ದಾವಿಸಿದರು. ಕೇರಿ ಜನರ ಮುರಿದ ಕೈಕಾಲುಗಳನ್ನು ಮುಟ್ಟಿ ಮುರಿದದ್ದು ಹೌದೋ ಅಲ್ಲವೊ ಎಂದು ದೃಡಪಡಿಸಿಕೊಂಡು ಮೂಗಿನಿಂದ ಮುಸು ಮುಸು ಶಬ್ದ ಹೊರಡಿಸಿದರು. ಮರುಕ್ಷಣವೇ ಗಂಟಲವನ್ನು ಸರಿ ಮಾಡಿಕೊಂಡ ಮುಖಂಡರುಗಳು ಎದುರಾದ ಟಿವಿ ವಾಹಿನಿಗಳಿಗೆ ‘ದಲಿತರ ಮೇಲಿನ ಅನ್ಯಾಯವನ್ನು ನಾವು ಖಂಡಿಸುತ್ತೇವೆ’ ಎಂಬರ್ಥ ಹಾಡನ್ನೆ ಒಬ್ಬರ ನಂತರ ಒಬ್ಬರು ರೀಪಿಟು ರೀಪಿಟಾಗಿ ಹಾಡಿದರು.
ರಾಜ್ಯದ ರಾಜದಾನಿಯಿಂದಲೂ ಕೆಲವು ದಲಿತ ಮುಖಂಡರು ಆಸ್ಪತ್ರೆಗೆ ದಾವಿಸಿ ಬಂದರು. ರಕ್ತದ ಕಲೆ ಮೇಲೆ ನೊಣ ಕುಳ್ಳಿರಿಸಿಕೊಂಡು ಕುಳಿತಿದ್ದ ಕೇರಿಯವರ ಮಾತಾಡಿಸಿ ಪೋm ತೆಗೆಸಿಕೊಂಡರು. ಚನ್ನಪ್ಪ ಅಂದೆಲ್ಲಾ ಬಿಜಿಯೋ ಬೀಜಿ. ಬಂದವರೆಲ್ಲ ಚನ್ನಪ್ಪನನ್ನು ಪ್ರತ್ಯೇಕವಾಗಿ ಕರೆದು ಗಹನವಾಗಿ ಚರ್ಚೆ ನಡೆಸಿದ್ದೆ ನಡೆಸಿದ್ದು. ‘ಹಿಂಗ ಬಿಟ್ಟರ ನಮಗೆ ಉಳಿಗಾಲ ಇಲ್ಲ’ ಅಂತ ಸಿಡಿದೆದ್ದ ದಲಿತ ನಾಯಕರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸುವ ತೀರ್ಮಾನ ಮಾಡಿದರು.
ಆ ವಾರವೆಲ್ಲ ಮತ್ತಷ್ಟು ಬೀಜಿಯಾದ ಚನ್ನಪ್ಪ ಯಾರ್‍ಯಾರನ್ನೋ ಆಸ್ಪತ್ರೆಗೆ ಕರೆಸಿ ತನ್ನ ಕೇರಿಯ ಅದರಲ್ಲಿಯೂ ಅತಿ ಹೆಚ್ಚು ಗಾಯವಾಗಿ ಮಲಗಿದವರನ್ನು ಬಿಟ್ಟೂ ಬೀಡದೆ ಎಬ್ಬಿಸಿ ಅವರ ಪರೀಸ್ಥಿತಿಯನ್ನು ಬಂದವರಿಗೆ ಮನದಟ್ಟು ಮಾಡುತ್ತಿದ್ದ. ಮೇಲ್ಜಾತಿಯವರು ತನಗೂ ನಾದರೂ ದೋಕಾ ಮಾಡ್ಯಾರು ಎಂಬ ಭಯದಿಂದ ತನ್ನ ಹಿಂಬಾಲಕ ಹುಡುಗರನ್ನು ಜೊತೆಗಿಟ್ಟುಕೊಂಡೆ ಓಡಾಡುತ್ತಿದ್ದ.
ಆ ಕೇರಿಯ ಹುಡುಗರ ಅಪ್ಪ-ಅಣ್ಣಂದಿರೆಲ್ಲ ಜಗಳದಲ್ಲಿ ದವಾಖಾನಿ ಸೇರಿದ್ದರು. ಆ ಸಿಟ್ಟಿಗೆ ಹುಡುಗರೆಲ್ಲ ಚನ್ನಪ್ಪ ಹೇಳಿದ್ದಕ್ಕೆಲ್ಲ ಹೂಂ ಎನ್ನುವ ಹಂತಕ್ಕೆ ಬಂದಿದ್ದರು. ತನ್ನ ಓಡಾಟದ ಖರ್ಚಿಗೆ, ಪ್ರತಿಭಟನೆಯ ಸಿದ್ಧತೆಗೆ ಸಾವಿರಾರು ರೂ.ಖರ್ಚು ಮಾಡಬೇಕಾಗುತ್ತದೆ ಎಂದು ಆ ಖರ್ಚಿಗೆ ಎಲ್ಲ ಹುಡುಗರು ತಮ್ಮ ಮನೆಗಳಿಂದ ಸಾಧ್ಯವಾದಷ್ಟು ದುಡ್ಡು ತರಬೇಕೆಂದು, ಮುಂದೆ ಸರಕಾರದಿಂದ ಪ್ರತಿಯೊಬ್ಬ ಗಾಯಗೊಂಡವರಿಗೆ ಹತ್ತಾರು ಸಾವಿರ ರೂ. ಪರಿಹಾರ ಬರುತ್ತದೆ ಎಂದು ಚನ್ನಪ್ಪ ಆ ಹುಡುಗರಿಗೆ ಕೇಳಿದ್ದ. ಬಂದ ಪರಿಹಾರದ ಹಣದಲ್ಲಿ ಅದನ್ನು ಮರಳಿಸುದಾಗಿ ಭರವಸೆ ನೀಡಿದ್ದ. ಕೆಲವು ಹುಡುಗರು ತಮ್ಮ ಮನೆಯಲ್ಲಿ ಇದ್ದ ಬಿದ್ದ ರೊಕ್ಕ ತಂದುಕೊಟ್ಟಿದ್ದರೆ, ರೊಕ್ಕವಿಲ್ಲದವರು ‘ಈಗ ನೀನೆ ಹಾಕು ಚನ್ನಪಣ್ಣ. ಮುಂದೆ ಬರುವ ಬರುವ ಪರಿಹಾರದಲ್ಲಿ ಮುರಿದುಕೊಳ್ಳುವಂತಿ’ ಎಂದಿದ್ದರು.
ಆ ವಾರದಂಚಿಗೆ ದೊಡ್ಡಮಟ್ಟದ ಪ್ರತಿಭಟನೆಯೊಂದನ್ನು ಜಿಲ್ಲಾ ಕೇಂದ್ರದ ಜಗಜ್ಯೋತಿ ಬಸವಣ್ಣನ ಸರ್ಕಲ್ಲಿನಲ್ಲಿ ಚನ್ನಪ್ಪ ಸಂಘಟಿಸಿದ್ದ. ಎಲ್ಲೆಲ್ಲಿಂದಲೋ ವಿವಿಧ ಸಂಘಟನೆಗಳ ಜನರು ಬಂದು ಪ್ರತಿಭಟನೆಯಲ್ಲಿ ಭಗವಹಿಸಿ ಮೇಲುಜಾತಿಯ ಜನರ ದೌರ್ಜನ್ಯದ ವಿರುದ್ಧದ ಘೊಷಣೆ ಕೂಗಿದ್ದು ನೋಡಿ ಚನ್ನಪ್ಪನಿಗೆ ಆನೆ ಬಲ ಬಂದಗಾತು .ಸಮಾಜ ಕಲ್ಯಾಣ ಸಚಿವ ಬಸಪ್ಪನೋರು ಪ್ರತಿಭಟನಾ ಸ್ಥಳಕ್ಕೆ ಬಂದು ಪರಿಹಾರ ಧನವನ್ನು ಬಿಡುಗಡೆ ಮಾಡಿಸುವುದಾಗಿ ಮತ್ತು ದೌರ್ಜನ್ಯ ನಡೆಸಿದವರನ್ನು ಜೈಲಿಗೆ ಹಾಕುವುದಾಗಿ ಭರವಸೆ ನೀಡಿದ ನಂತರವೇ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು.
* * *
ಇತ್ತ ಬಸವನೂರಿನ ಊರು-ಕೇರಿ ಹಳಿ ತಪ್ಪಿದ್ದವು. ಊರು ಕೇರಿ ನಡುವಿನ ಕಂದರ ದಿನದಿಂದ ದಿನಕ್ಕೆ ಬಿರುಕು ಬೀಡುತ್ತಾ ಸಾಗಿತ್ತು. ಈ ಮುಂಚೆ ಊರವರ ಹೊಲದಲ್ಲಿ ಕೂಲಿ ಮಾಡಿ ಬದುಕಿನ ಹೊಟ್ಟೆ ಹೊರೆಯುತ್ತಿದ್ದ ಕೇರಿಯವರು ಈಗ ಮನೆ ಬಿಟ್ಟು ಹೊರ ಬರುತ್ತಿರಲಿಲ್ಲ. ಬೆಳಗಾದರೆ ತಮ್ಮ ಹೊಲಮನೆಗಳ ಕೆಲಸಕ್ಕೆ ಕೇರಿಯ ದಾರಿ ತುಳಿಯುತ್ತಿದ್ದ ಊರವರು ಕೇರಿ ಕಡೆ ಮುಖ ಸೈತ ತಿರುಗಿಸುತ್ತಿಲ್ಲ. ಭೂಮ್ತಾಯಿ ಎದಿಮ್ಯಾಲ ಕಸ ಎದೆ ಮಟ ಬೆಳೆದದ್ದನು ನೋಡಲಾರದೆ ಊರ ರೈತರು ಕೂಲಿಯಾಳಿಗಾಗಿ ತಮ್ಮ ಟಾಕ್ಟರ್‌ಗಾಡಿಗಳನ್ನು ಪಕ್ಕದೂರಿನ ಕೇರಿ ಕಡೆ ತಿರುಗಿಸಿದ್ರು.
ಇತ್ತ ಕೇರಿ ಜನರ ಗುಡಿಸಲುಗಳ ಅಡಕಲು ಗಡಿಗೆಯಲ್ಲಿನ ಕಾಳುಗಳು ದಿನದಿಂದ ದಿನಕ್ಕೆ ತಳ ಸೇರುತ್ತಿದ್ದವು. ಹಿತ್ತಿಲ ದೊಡ್ಡಿಯಲ್ಲಿನ ಮೇವು ಕರಗಿ ದಂದಕ್ಕಿಯಲ್ಲಿನ ದನಗಳು ಅಂಬಾ ಎಂದರೂ ಕೇಳುವವರಿರಲಿಲ್ಲ. ಮನೆಯೊಳಗಿನ ಹೈಕಳುಗಳು ಹೊಟ್ಟೆ ಹಸಿವು ತಾಳಲಾರದೆ ಹೊಟ್ಟೆ ನೆಲಕ್ಕೆ ಹಚ್ಚಿ ಬೊಕ್ಕ ಬೊರಲಾಗಿ ಬಿಳುತ್ತಿದ್ದವು. ಊರು ಕೇರಿಯ ನಡುವೆ ಅಂಹಕಾರದ, ವೈಷಮ್ಯದ ವಿಷ ನಾಗರ ಹೆಡೆ ಎತ್ತಿ ಓಡಾಡುತ್ತಿತ್ತು.
ಪೊಲೀಸರು ಬಸವನೂರಲ್ಲಿ ಬೀಡಾರ ಬಿಟ್ಟಿದ್ದರು. ಮಾಧ್ಯಮದವರು ‘ಮತ್ತೆ ಗಲಾಟೆ ಆಯಿತೆ? ಆಯಿತೆ?’ ಎಂದು ಬಸವನೂರಿಗೂ ಕಚೇರಿಗೂ ಪರದಾಡುತ್ತಿದ್ದರು. ಮತ್ತೆ ಜಗಳ ಆಗದಿರಲಿ ಎಂದು ಪೋಲಿಸರು, ಇನ್ನೊಮ್ಮಿ ಆದರೂ ಜಗಳವಾಗಲಿ ಎಂದು ಮಾಧ್ಯಮದವರು ಬಸಣ್ಣದೇವ್ರ ಗುಡಿಗೆ ಹರಕೆ ಹೊತ್ತಿದ್ದರು.
ಹೆಂಡತಿ ಮಕ್ಕಳನ್ನು ಬಹಳಷ್ಟು ದಿನ ಬಿಟ್ಟು ಡ್ಯೂಟಿ ಮೇಲಿದ್ದ ಪೊಲೀಸರ ಕೈಯಲ್ಲಿನ ಮಾಯಾ ಮೊಬೈಲುಗಳಿದ್ದವು. ಅವುತರಲ್ಲಿ ಹರಿದಾಡುವ ಚಿತ್ರಗಳು ಪೊಲೀಸರ ಕಿಬ್ಬೊಟ್ಟೆಯಾಳದಲ್ಲಿ ಮಿಡಿ ನಾಗರ ಮಿಸುಕುವಂತೆ ಮಾಡುತ್ತಿದ್ದವು. ಮಿಡಿ ನಾಗರದ ಮಿಸುಕಾಟ ತಾಳಲಾರದ ಪೊಲೀಸರು ಕೇರಿಯ ಗುಡಿಸಲುಗಳ ಹೆಣ್ಣುಮಕ್ಕಳತ್ತ ಕದ್ದು ಮುಚ್ಚಿ ಕಣ್ಣು ಹಾಕುತ್ತಿದ್ದರು. ಅವರ ಕಾಮಾಲಿ ಕಣ್ಣಿಗೆ ಕೇರಿಯ ಹೆಣ್ಣುಗಳೆಲ್ಲರೂ ಸೂಳೆಯರಂತೆ ಬಾಸವಾಗುತ್ತಿದ್ದರು. ಇದೆ ವಿಷಯಕ್ಕೆ ಮೊನ್ನೆ ಒಂದು ದಿನ ಒಬ್ಬ ಪೊಲೀಸ್ ಕೇರಿ ಹುಡುಗರ ಕೈಯಿಂದ ಒದೆ ತಿನ್ನ್ನುವುದನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡನಂತೆ. ಊರು ಹುಡುಗರು ಈ ತಮಾಷೆ ನೋಡಿ ವ್ಯಂಗ್ಯ ನಗೆ ನಕ್ಕಿದ್ದರು.
ಮುಕ್ಕಾಲುಪಾಲು ಊರ ಗಂಡಸರ ಮೇಲೆ ಕೇರಿಯವರು ಜಡಿದಿದ್ದ ಅಟ್ರಾಸಿಟಿ ಕೇಸು ತೂಗಾಡುತ್ತಿತ್ತು. ಪ್ರಮುಖ ಆರೋಪಿಗಳು ಊರ ಹೊರಗಿನ ಮೇವಿನ ಬಣವೆಗಳಲ್ಲಿ ತಪ್ಪಿಸಿಕೊಂಡಿದ್ದರು. ಅವರ ಮನೆಯ ವೃದ್ಧರು, ತಾಯಂದಿರು ಒಯ್ದು ಬುತ್ತಿ ಕೊಟ್ಟಾಗಲೆ ಅವರ ಹೊಟ್ಟೆಗೆ ಆಹಾರ.
ದುರ್ಘಟನೆ ನಡೆದು ತಿಂಗಳಾದರೂ ಊರು ಕೇರಿ ಒಂದಾಗಲೂ ಸಾಧ್ಯವಾಗಿರಲಿಲ್ಲ. ಊರವರು ತಮ್ಮ ಹೊಲ ಮನೆ ಕೆಲಸಕ್ಕೆ ಬೇರೆ ಊರಿಂದ ಕೂಲಿ ಆಳು ಕರೆಸುವುದನ್ನು ರೂಡಿಸಿಕೊಂಡಿದ್ದರು. ಕೇರಿಯವರ ಅಡಕಲ ಗಡಿಗೆಯಲ್ಲಿನ ಕಾಳು ಬಹುತೇಕ ಖಾಲಿಯಾಗಿದ್ದವು. ಆಸ್ಪತ್ರೆಯಲ್ಲಿನ ಗಾಯಗೊಂಡವರಿಗೆ ಖರ್ಚು ಮಾಡಿ ಕೈಗಂಟು ಕರಗಿತ್ತು. ಇಂಥ ದಿನಗಳಲ್ಲಿಯೆ ಕೇರಿಯವರಿಗೆ ಸುವಾರ್ತೆಯೊಂದು ಬಂತು. ನಮ್ಮ ದೇಶದ ಮಹಾನ್ ಸರಕಾರ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಪರಿಹಾರವನ್ನು ಬಿಡುಗಡೆ ಮಾಡಿ ದಲಿತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು.
ಪರಿಹಾರದ ರೊಕ್ಕ ಇಸಿದುಕೊಳ್ಳಲು ದಲಿತರು ತಮ್ಮ ನಾಯಕ ಮಾದಾರ ಚನ್ನಪ್ಪನ ಹತ್ತಿರ ದಾವಿಸಿದರು. ರೊಕ್ಕದ ಪೆಂಡಿಗಳನ್ನು ಪಕ್ಕದಲ್ಲಿಟ್ಟುಕೊಂಡ ಕುಳಿತಿದ್ದ ಚನ್ನಪ್ಪ ತನ್ನ ಲೆಕ್ಕದ ಪುಸ್ತಕವನ್ನು ತೆಗೆದು ಈ ಮಹಾನ್ ಹೋರಾಟದಲ್ಲಿ ಇಲ್ಲಿಯವರೆಗೆ ತಾನು ಮಾಡಿದ್ದ ಖರ್ಚಿನ ವಿವರ ನೀಡತೊಡಗಿದ. ಮೊಬೈಲ್ ಕರೇನ್ಸಿ, ಪಲ್ಸರ್‌ನ ಪೆಟ್ರೋಲ್, ಓಡಾಟದಲ್ಲಿ ಮಾಡಿದ್ದ ತಿಂಡಿ-ತಿರ್ಥ ಇವಕ್ಕೆಲ್ಲ ಹತ್ತಾರು ಸಾವಿರ ರೂ. ಖರ್ಚಾಗಿದೆ. ಅದನ್ನೆಲ್ಲಾ ಇದರಲ್ಲಿ ಮುರುಕೊಂಡು ಕೊಡ್ತಿನಿ’ ಎಂದ. ಕೇರಿ ಜನರು ‘ಹೌದೌದು, ಒಪ್ಪುವ ಮಾತು ಎಂದು ಗೋಣು ಹಾಕಿದರು.
ದುರದೃಷ್ಟವಶಾತ್ ಲೆಕ್ಕದ ಕೊನೆಯಲ್ಲಿ ಹಲವು ದಲಿತರು ಸರಕಾರದ ಪರಿಹಾರ ಹಣವು ಮಿಕ್ಕಿ ತಾವೆ ಕೊಡಬೇಕಾಗಿ ಬಂತು. ಇನ್ನು ಕೆಲವು ಹಸಿಗಾಯ ಮಾಯದವರಿಗೆ ಹತ್ತಾರು ರೂ.ಗಳ ಪರಿಹಾರ ಧನವನ್ನು ಚನ್ನಪ್ಪ ಊದಾರ ಮನಸ್ಸಿನಿಂದ ಮುಲಾಜಿಲ್ಲದೆ ಕೊಟ್ಟುಬಿಟ್ಟ.
ಕೇರಿ ಹುಡುಗರಿಗೆ ಏನೂ ಮಾಡಬೇಕೆಂದು ದಿಕ್ಕೆ ತೋಚದಾಯಿತು. ಚನ್ನಪ್ಪ ಕೊಟ್ಟ ಚಿಲ್ಲರೆ ಕಾಸನ್ನು ಚನ್ನಪ್ಪನ ಮುಖದ ಮೇಲೆ ಎಸೆದು ಹೊರ ನಡೆದುಬಿಟ್ಟರು. ಅವರ ಕಣ್ಣುಗಳಲ್ಲಿ ಹತಾಸೆಯ, ಸಿಟ್ಟಿನ ಬಿಸಿ ಕಣ್ಣೀರು ಬಸಿಯುತ್ತಿದ್ದುದನ್ನು ಊರು ಜನರು ಗಮನಿಸಿದರು.
ಕೇರಿ ಜನರು ರಾತ್ರಿಯೆಲ್ಲ ನಿದ್ರೆಯಿಲ್ಲದೆ ಹೊರಳಾಡಿ ಒಂದು ತಿರ್ಮಾನಕ್ಕೆ ಬಂದಿದ್ದರು. ಮರುದಿನ ಕೇರಿಜನರು ತಮ್ಮ ಹರಕು ಬಟ್ಟೆ, ಮಾಸಿದ ಟ್ರಂಕು, ಸೊರಗಿದ ಮಕ್ಕಳೊಂದಿಗೆ ಮಂಗಳೂರಿನ ಬಸ್ಸು ಹತ್ತಿ ಊರು ಕೇರಿ ಎರಡು ಬಿಟ್ಟು ವಲಸೆ ಹೊರಟಿದ್ದರು.
ತಾಲೂಕು ಕೇಂದ್ರದ ತಿರುವಿನೊಂದರಲ್ಲಿ ಬಸ್ ನಿಧಾನಗೊಂಡಾಗ ಚನ್ನಪ್ಪ ಮತ್ಯಾವದೋ ಪ್ರತಿಭಟನೆ ಹಮ್ಮಿಕೊಂಡು ಧಿಕ್ಕಾರ ಕೂಗುತ್ತಿದ್ದ. ಹಿಂಬಾಲಕರ ಕೈಯಲ್ಲಿನ ತಮಟೆ ‘ಜಡ್ಡು ಜಡ್ಡು ನಕುನ ನಕುನ…’ ಎಂಬ ಶಬ್ದ. ಕೇರಿ ಜನರಿಗೆ ಚನ್ನಪ್ಪನ ತಲೆ ಮೇಲೆ ಕ್ಯಾಕರಿಸಿ ಉಗಿ ಬೇಕು ಎನ್ನುವಷ್ಟು ಸಿಟ್ಟು ನೆತ್ತಿಗೆರತೊಡಗಿತು. ಪುಣ್ಯಕ್ಕೆ ಬಸ್ಸು ಮುಂದಕ್ಕೆ ಚಲಿಸಿ ಚನ್ನಪ್ಪನನ್ನು ಬಚಾವು ಮಾಡಿತು.
* * *
-ಹನಮಂತ ಹಾಲಗೇರಿ
ಮೇಲ್ಜಾತಿಯವರು, ಕೆಳಜಾತಿಯವರು ಎನ್ನುವ ರಾಜಕೀಯ, ಇದರಲ್ಲಿ ಹಣ, ಹೆಸರು ಮಾಡುವ ರೀತಿಯನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಆದರೆ ಎರಡು ಸಂದೇಹ,
೧. ಚನ್ನಪ್ಪ ಸ್ವಲ್ಪ ಪ್ರಭಾವಶಾಲಿ ವ್ಯಕ್ತಿ ಆಗಿರುವಾಗ, ಆತನ ಭಾಷಣಕ್ಕೆ ವಿರೋಧವ್ಯಕ್ತಪಡಿಸುವುದು ಸಂಶಯ.
೨. ಬಸವೇಶ್ವರರು ಪ್ರತಿಪಾಧಿಸಿದ್ದು ಜಾತ್ಯಾತೀತ ಸಮಾಜ. ಹಾಗಿರುವಾಗ, ಬಸವ ಪುರಾಣದ ಕೊನೆಯ ದಿನ ಚೆನ್ನಪ್ಪನನ್ನು ವಿರೋಧಿಸುವುದು ಸರಿಯಿಲ್ಲ ಅನಿಸಿತು.
ಅಂತಸತ್ವವಿರುವ ಕಥೆ
ಬಸವಣ್ಣ ನಮ್ಮ ನಾಡಿನ ಒಬ್ಬ ದುರಂತ ನಾಯಕ. ಬಸವಣ್ಣನವರು ಸಾರಿದ ಸರ್ವ ಜಾತಿ ಸಮನ್ವಯದ ವಸುದೈವ ಕುಟುಂಬದ ಕಲ್ಪನೆ ಇಂದಿನ ಸಮಾಜದಲ್ಲಿ ಎಷ್ಟರಮಟ್ಟಿಗೆ ಉಳಿದಿದೆ ಎನ್ನುವುದನ್ನು ಇ ಕಥೆ ಎತ್ತಿಹಿಹಿಡಿದಿದೆ. ಸಮಾಜದ ಸ್ತರಗಳನ್ನ ನಿವಾರಿಸಲು ಬಸವಣ್ಣ ಅವಿರತವಾಗಿ ಶ್ರಮಿಸಿದರು, ಅಂತರ್ ಜಾತೀಯ ವಿವಾಹಗಳನ್ನು ಮಾಡಿಸಿದರು. ಆದ್ರೆ ಅವ್ರ ಹೆಸರಲ್ಲೇ ಲಿಂಗಾಯತ ಅಂತ ಜಾತಿ ಕಟ್ಟಿಕೊಂಡು ಬಸವಣ್ಣನ ಫೋಟೊವನ್ನ ಮನೆ ಮನೆಗೂ ತಗುಲಿಸಿಕೊಂಡು ಆರಾದಿಸಿದರು, ಆದರೆ ಅವರ ತತ್ವಗಳು ಗಾಳಿಗೆ ತೂರಿಹೊದವು. ಇಂದು ಲಿಂಗಾಯತರು ಅಂತರ್ ಜಾತಿ ವಿವಾಹವನ್ನ ವಿರೋದಿಸುತ್ತಾರೆ. ನನ್ನ ಪ್ರಕಾರ ಅಂತರ್ ಜಾತಿ ವಿವಾಹವನ್ನ ವಿರೋದಿಸೋರು ಲಿಂಗಾಯತರು ಅಥವಾ ವೀರಶೈವರೇ ಅಲ್ಲ. ದೇವನೂರು ಒಂದು ಮಾತು ಹೇಳ್ತಾರೆ, "ವೀರಶೈವ ಜಾತಿಯಾದರೆ ಸಾವು, ಧರ್ಮವಾದರೆ ಬದುಕು'.
ಇನ್ನು ದಲಿತ ಸಂಘಟನೆಗಳು ಹೇಗೆ ದಾರಿ ತಪ್ಪಿವೆ ಎಂಬುದನ್ನು ಇಲ್ಲಿ ಸಚಿತ್ರವಾಗಿ ತೋರಿಸಲಾಗಿದೆ. ಯಾರದೋ ಕಾರ್ಯಸಾಧನೆಗಾಗಿ ಶೋಷಿತರು ನಿತ್ಯ ಬಲಿಯಾಗುತ್ತಲೇ ಇರುವುದು ವಾಸ್ತವ. ಮೇಲೆ ಒಬ್ಬರು ಗೆಳೆಯರು ತಿಳಿಸಿರುವಂತೆ ಅಷ್ಟು ಪ್ರಭಾವಿಯಾದವನಿಗೆ ವೇದಿಕೆ ಏರಿದ್ದನ್ನೇ ನೆಪ ಮಾಡಿ ಹಲ್ಲೆ ಮಾಡಿದ ಸಂದರ್ಭದಲ್ಲಿ ಕಥೆ ಸ್ವಲ್ಪ ದುರ್ಬಲವಾಯಿತು ಎನಿಸಿದರೂ ನಮ್ಮ ಕುಬ್ಜ ಹಳ್ಳಿಗಳು ಇಂದಿಗೂ ಹೀಗೆಯೇ ಇವೆ ಎಂಬುದು ಕೂಡ ನಿಜವೇ. ನಿರೂಪಣ ಶೈಲಿಯೇ ಕಥೆಗಾರನ ಶಕ್ತಿ. ಇದು ವಾಸ್ತವಿಕ ಹಾಗು ಸರ್ವಕಾಲಿಕ ಕಥೆ ಎಂಬುದು ನಮ್ಮ ಸಮಾಜದ ದುರಂತ.
ಶೋಷಿತ ವರ್ಗಗಳ ಬವಣೆಯನ್ನು ಯತಾವತ್ತಾಗಿ ಚಿತ್ರಿಸಲಾಗಿದೆ. ಅವರ ಹಕ್ಕಿನ ಹಣ ಅಥವಾ ಸೌಲಭ್ಯಗಳ ಸೋರಿಕೆಯಿಂದಾಗಿಯೂ ಶೋಷಿತರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಕಥಾ ನಿರೂಪಣೆ ಉತ್ತಮವಾಗಿದೆ. ಗ್ರಾಮ್ಯ ಭಾಷೆಯು ಕಥೆಗೆ ನೈಜತೆಯನ್ನು ನೀಡಿದೆ. ಧನ್ಯವಾದಗಳು.
ಇದು ಗ್ರಾಮ ಭಾರತದಲ್ಲಿ ನಡೆಯುವ ಸಾಮಾನ್ಯ ಜೀವನ ಚಿತ್ರಣ. ಈಗ ಜಗತ್ತಿನ ತುಂಭಾ ತತ್ವ ಮಾಯವಾಗಿ ಲಾಂಛನಗಳೇ ವಿಜೃಂಬಿಸಿ ಅಟ್ಟಹಾಸದಿಂದ ಮೆರೆಯುತ್ತಿರುವಾಗ ಒಂದು ಮಾತು ನೆನೆಯುತ್ತೇನೆ
ಸತ್ಯವೇ ದೇವರು- ಹರಿಶ್ಚಂದ್ರ ಮತ್ತು ಗಾಂಧಿಜಿ.
ಸತ್ಯದ ಅನುಷ್ಟಾನವೇ ಧರ್ಮ- ಜಾಜ್ ಬನ್ರಾಡ್ ಷಾ