ಊದ್ಗಳಿ ಕವನ ಸಂಕಲ: ನಂದಾದೀಪ, ಮಂಡ್ಯ

ಉದ್ಗಳಿ ಕವನ ಸಂಕಲನ ಪುಸ್ತಕದ ಹೆಸರೇ ವಿಭಿನ್ನ ಎನಿಸಿತು.. ಆ ಹೆಸರೇ ಕೇಳಿಲ್ಲ ಹಾಗಂದರೆ ಅರ್ಥ ಏನು ಎನ್ನುವ ಕುತೂಹಲದಲ್ಲೆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಮೊದಲು ಪುಸ್ತಕದ ಮುಖಪುಟದಲ್ಲಿದ್ದ ಅಗ್ಗಿಷ್ಟಿಕೆ, ಕೊಳವೆ ನೋಡಿ ಇದಕ್ಕೂ ಹೆಸರಿಗೂ ಏನು ಸಂಬಂಧ ಎಂದು ಮುನ್ನುಡಿ ಓದಿದಾಗಲೇ ತಿಳಿದಿದ್ದು ‘ಊದ್ಗಳಿ’ ಎಂದರೆ ಒಲೆಯ ಊದುವ ಪುಟ್ಟದಾದ ಒಂದು ಕೊಳವೆ ಎಂದು..(ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಹಾಗಾಗಿ ಹೊಸ ಪದ ಎನಿಸಿದ್ದು)

ನಿಜಕ್ಕೂ ಒಬ್ಬ ಹೆಣ್ಣು ಮಗಳು ಪುಟ್ಟ ಗ್ರಾಮದಲ್ಲಿ ಹುಟ್ಟಿ ಶಿಕ್ಷಣ ಹೆಣ್ಣು ಮಕ್ಕಳಿಗೆ ಬೇಡವೆನ್ನುತ್ತಿದ್ದ ಸಂದರ್ಭದಲ್ಲು ಓದಿ ಶಿಕ್ಷಕಿಯಾಗಿ ಇಷ್ಟು ಮುಂದುವರೆದು ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಕವಯತ್ರಿ ದಾಕ್ಷಾಯಣಿ ನಾಗರಾಜ ಮಸೂತಿ ಯವರು ಎಂದರೆ ತಪ್ಪಾಗಲಾರದು..

ಹೆಣ್ಣು ಮಕ್ಕಳು ಒಲೆಯ ಊದುತ್ತ ಅಲ್ಲಿ ಯೋಚನೆ, ಆಲೋಚನೆಗಳನ್ನು ಮಾಡುತ್ತಾರೆ.. ಹಾಗೆಯೇ ಇಲ್ಲಿ ಕವಯಿತ್ರಿ ದಾಕ್ಷಾಯಣಿಯವರು ತಮಗೆ ಬಂದ ಮನಸಿನ ಭಾವನೆಗಳನ್ನು ತಮ್ಮ ಕವನ ರೂಪದಲ್ಲಿ ಹೇಳಿದ್ದಾರೆ..

ಈ ಸಂಕಲನದಲ್ಲಿ ಪ್ರೇಮ, ವಿರಹ, ಆಸೆ, ನಿರಾಸೆ, ದಾಂಪತ್ಯ, ಪ್ರೀತಿಯ ಅಹಂ ಅಷ್ಟೇ ಅಲ್ಲದೆ ಕೋಮುವಾದವನ್ನು ಬಳಸಿಕೊಂಡಿದ್ದಾರೆ..
ಎಲ್ಲವನ್ನು ಸಮವಾಗಿ ಬಳಸಿ ಸಾಗುವ ಕವಿತೆಗಳು ಇಷ್ಟವಾಗುತ್ತವೆ..

ಮದುವೆಯಾಗದೆ ವಯಸ್ಸಾಗಿ ಉಳಿದ ಹೆಣ್ಣು ಮಗಳ ಸ್ವಗತ, ಅವಳಿಗೆ ಬರುವ ಮೂದಲಿಕೆ ಮಾತುಗಳು ‘ನಲವತ್ತರ ಹುಡುಗಿ’ ಕವನದಲ್ಲಿ ಆ ನೋವನ್ನು ಬಿಡಿಸಿ ಹೇಳಿದ್ದಾರೆ..

ನನ್ನ ದೇವರು ನಿನ್ನ ದೇವರು ಎನ್ನುವ ಈ ಸಮಾಜ ಮೊದಲು ನಾವೆಲ್ಲರೂ ಮನುಷ್ಯರು ಅನ್ನೋದನ್ನೇ ಮರೆತ ಪ್ರಸ್ತುತ ಸ್ಥಿತಿಯನ್ನು ‘ಮರೆತೆವೇಕೆ ನಾವು?’ ಕವನದಲ್ಲಿ ಅರ್ಥವತ್ತಾಗಿ ಹೇಳುತ್ತಾರೆ..

ಶೂನ್ಯ ಭಾವ ಹುಟ್ಟಿದಾಗ ಯಾರನ್ನೋ ಕಳೆದುಕೊಂಡ ಭಾವ ಆವರಿಸಿದಾಗ ಆಗುವ ಅನುಭವ ‘ಕವಿತೆ ಹುಟ್ಟುತ್ತಿಲ್ಲ’, ಪ್ರೀತಿಯ ಅಹಮಿಕೆಗಳು ಹೆಚ್ಚಾದಾಗ ಕೇಳುವ, ಮನಸಿನಲಿ ಬರುವ ಭಾವಗಳು ‘ಏನಿತ್ತು ನನ್ನ ನಿನ್ನ ನಡುವೆ’, ಪ್ರೀತಿಸಿದ ಗೆಳೆಯ ಜೊತೆಗೆ ಇರದಿದ್ದರೂ ಉಕ್ಕಿಬರುವ ಒಲವಿನ ಯಾತನೆಗಳನ್ನು ‘ಇರಲಾರೆ ಗೆಳೆಯ’, ಕಳೆದುಕೊಂಡ ಪ್ರೀತಿಯ ಮರೆಯಲು ಯತ್ನಿಸಿದಾಗ ಮನಸು ಪಡುವ ಆಯಾಸವನ್ನು ‘ದಣಿದಿದ್ದೇನೆ’ ಕವನಗಳಲ್ಲಿ ಬಿಂಬಿಸಿ.. ಅಷ್ಟೇ ಅಲ್ಲದೆ ಇನ್ನೂ ಹಲವಾರು ಕವಿತೆಗಳನ್ನ ತಮ್ಮ ಬೇರೆ ಬೇರೆ ಕವನಗಳಲ್ಲಿ ವಿವಿಧ ವಿಷಯಗಳ ಜೊತೆ ಬರೆದಿರುವುದು ಚಂದವೆನಿಸುತ್ತದೆ..

ಇನ್ನೂ ಕೊನೆಯದಾಗಿ ನಮ್ಮೆಲ್ಲ ದುಃಖದ ಭಾವನೆಗಳನ್ನು ಮನಸಿಂದ ಎಷ್ಟೇ ಹೊರ ಹಾಕಿದರೂ ಯಾರಿಗೂ ಗುಟ್ಟು ಬಿಟ್ಟುಕೊಡದ ‘ದಿಂಬು’ ಕವನದಲ್ಲಿ ದಿಂಬನ್ನ ನಂಬಿಕಸ್ತ ಗೆಳೆಯ ಎಂದು ಹೇಳಿರುವುದು ತುಂಬಾ ಇಷ್ಟವಾಗುತ್ತದೆ..

ಕವಯಿತ್ರಿ ದಾಕ್ಷಾಯಣಿಯವರು ತಮ್ಮ ಮೊದಲ ಕವನ ಸಂಕಲನದಲ್ಲಿ ಓದುಗರನ್ನು ಗೆದ್ದಿದ್ದಾರೆ.. ಆದರೆ ಇನ್ನಷ್ಟು ಪದಗಳ ಮೇಲೆ ಹಿಡಿತ ಬರಬೇಕಿತ್ತು, ಜೊತೆಗೆ ಕವನ ಮುಗಿಸುವಾಗ ಆತುರ ತೋರಿದ್ದಾರೆ ಎನಿಸುತ್ತದೆ..

ನನ್ನ ಮೆಚ್ಚಿನ ಕವಯಿತ್ರಿ ದಾಕ್ಷಾಯಣಿಯವರ ಕವನ ಸಂಕಲನ ಓದಿ ಖುಷಿ ಎನಿಸಿತು.. ನಿಮ್ಮಿಂದ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಅಪೇಕ್ಷಿಸುತ್ತ.. ನಿಮ್ಮ ಸಾಹಿತ್ಯ ಕ್ಷೇತ್ರದ ಸಾಧನೆಗೆ ಒಳಿತಾಗಲಿ ಎಂದು ಹಾರೈಸುತ್ತೇನೆ..

ನಂದಾದೀಪ, ಮಂಡ್ಯ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x