ಊಟಕ್ಕೇನು?: ಅನಿತಾ ನರೇಶ್ ಮಂಚಿ


’ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?’ ಅನ್ನೋ ಪದ್ಯ ಎಲ್ಲರಿಗೂ ತಿಳಿದಿದೆ. ಅದರಲ್ಲಿ ನಾಯಿ ಮರಿಯನ್ನು ’ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು’  ಎಂದು ಕೇಳಿದಾಗ ಅದು ’ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು’ ಎಂಬ ಉತ್ತರ ನೀಡುತ್ತದೆ ಅಲ್ವಾ..! ಅಂದರೆ ನಾಯಿ ಮರಿಗೂ ಆಹಾರ ಎಂದರೆ  ಹೊಟ್ಟೆ ತುಂಬಲು, ಶರೀರವನ್ನು ಪೋಷಿಸಲು ಇರುವಂತಹುದು ಎಂದು ತಿಳಿದಿದೆ ಎಂದಾಯಿತಲ್ಲ.  ಆದರೆ ನನ್ನಂತ ಹುಲು ಮಾನವಳ ದೃಷ್ಟಿಯಲ್ಲಿ ತಿಂಡಿ ಎಂಬುದು ’ಪ್ರೆಸ್ಟಿಜ್’ ಪ್ರಶ್ನೆಯಾಗಿದ್ದ ಕಾಲವೊಂದಿತ್ತು. 

ಆಗಷ್ಟೇ ಹೈಸ್ಕೂಲಿಗೆ ಕಾಲಿಟ್ಟ ದಿನಗಳು. ಪ್ರೈಮರಿ ಶಾಲೆಯ ಮುಗ್ಧ ಮನಸು ಏನೋ ಹೊಸತಿಗೆ ತೆರೆದುಕೊಳ್ಳುವ ಕಾಲ. ’ಇನ್ನು ನೀನು ಹೈಸ್ಕೂಲು’ ಎಂದು ಎಲ್ಲರೂ ನೆನಪಿಸಿ ಅದೇನೋ ವಿಶೇಷವಾದದ್ದು ಎಂದು ಕ್ಷಣ ಕ್ಷಣಕ್ಕೂ ಅನ್ನಿಸುತ್ತಿದ್ದ ಸಮಯ. ನಾವೇನೋ ವಿಶಿಷ್ಟ ವ್ಯಕ್ತಿಗಳು ಎಂದು ನಮಗೆ ನಾವೇ ಅಂದುಕೊಳ್ಳುತ್ತಿದ್ದ ವಯಸ್ಸು. ಇದೆಲ್ಲದರ ಜೊತೆಗೆ  ಫೈಲ್ ಆಗುವುದೇನು ವಿಶೇಷವಲ್ಲದ, ಆಕಸ್ಮಿಕವಾಗಿ ಪಾಸ್ ಆದರೂ ಏಳನೆಯ ತರಗತಿಯಲ್ಲೇ ವಿದ್ಯಾಭ್ಯಾಸ ನಿಲ್ಲಿಸಿ  ಕ್ಲಾಸ್ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವ ಹಲವು ಮಕ್ಕಳ ನಡುವೆ ಹೈಸ್ಕೂಲ್ ಏರುವ ಅದೃಷ್ಟವನ್ನು ಪಡೆದ ನಾವುಗಳು.. ಇಂತಹ ಹಲವು ಸಂಗತಿಗಳು ನಮ್ಮನ್ನು  ಅತಿಲೋಕ ಜೀವಿಗಳನ್ನಾಗಿ ಮಾಡಿತ್ತು.
ಇಂತಹ ನಾವುಗಳು ತಿನ್ನುವ ಆಹಾರವೂ ವಿಶೇಷವಾದದ್ದೇ ಆಗಿರಬೇಕೆಂಬ ನಂಬಿಕೆ ನನ್ನ ಮತ್ತು ನನ್ನಂತಹ ಹಲವು ಗೆಳತಿಯರದ್ದಾಗಿತ್ತು.  ನಮ್ಮ ಮನೆಯಲ್ಲಿ ನೀರು ದೋಸೆ ಎನ್ನುವುದು ಅನ್ನದಷ್ಟೇ ಬಳಕೆಯಲ್ಲಿತ್ತು. ನನ್ನ ಗೆಳತಿಯರೆಲ್ಲ ಹೆಚ್ಚಿನವರು ರೈತ ಕುಟುಂಬದವರಾದ ಕಾರಣ ಅಕ್ಕಿ ರೊಟ್ಟಿ ಅವರ ನಿತ್ಯದ ತಿಂಡಿಯಾಗಿತ್ತು. ಅದಲ್ಲದಿದ್ದರೆ ಅಕ್ಕಿಯದ್ದೇ ಆದ ಕಡುಂಬಿಟ್ಟು ಎಂಬ ಇನ್ನೊಂದು ತಿಂಡಿ ರೂಢಿಯಲ್ಲಿತ್ತು. ಅದು ಬಿಟ್ಟು ಬೇರೆಲ್ಲಾ ತಿಂಡಿಗಳು ವಿಶೇಷ ಸಂದರ್ಭಗಳೇನಾದರೂ ಇದ್ದರೆ ಮಾತ್ರ ಮಾಡುತ್ತಿದ್ದರಷ್ಟೆ. ಮಧ್ಯಾಹ್ನದ ಬುತ್ತಿಗೆ ಇದನ್ನೇ ತುಂಬಿ ತರುತ್ತಿದ್ದೆವು. ಕೆಲವು ಮಕ್ಕಳು ಗಂಜಿಯೂಟ ತರುವವರಿದ್ದರು. ಊಟ ಮಾಡುವಾಗಲೋ, ಅಥವಾ ಉಂಡಾದ ನಂತರ ಬುತ್ತಿ ಪಾತ್ರೆಯನ್ನು ತೊಳೆಯಲು ಹೋಗುವಾಗ ಎಲ್ಲರೂ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ ಎಂದರೆ ’ಊಟಕ್ಕೇನು’ ಎನ್ನುವುದಾಗಿತ್ತು.

ಈಗ ಬರುತ್ತಿದ್ದ ಉತ್ತರಗಳು ಅದ್ಭುತವಾಗಿರುತ್ತಿತ್ತು. ಪೂರಿ ಬಾಜಿ, ಚಪಾತಿ ಪಲ್ಯ, ಮಸಾಲೆ ದೋಸೆ. ಎಣ್ಣೆ ಮಸಾಲೆ ರೊಟ್ಟಿ, ಸ್ವೀಟ್ ಇಡ್ಲಿ, ಇಡ್ಲಿ ಸಾಂಬಾರ್, ಚಟ್ನಿ.. ಹೀಗೆ ಹೋಟೆಲ್ ನ ಮಾಣಿ ಹೇಳುವ ಎಲ್ಲಾ ಹೆಸರುಗಳು ನಮ್ಮ ಬಾಯಲ್ಲಿ ಹೊರಡುತ್ತಿತ್ತು. ಇಷ್ಟು ಸಾಲದೇ ಹೀಗೇ ಹೇಳುವುದರಲ್ಲೂ ಹೊಸ ಹೊಸ ಆವಿಷ್ಕಾರಗಳು ನಡೆದು, ಇಷ್ಟರವರೆಗೆ ಹೆಸರು ಕೇಳದಂತೆ ಇರುವ ಯಾವುದೋ ತಿಂಡಿಯಾದರೆ ಅದಕ್ಕೆ ಹೆಚ್ಚು ಮಹತ್ವವಿರುತ್ತಿತ್ತು. 

ಆಗಷ್ಟೇ ನಮ್ಮಲ್ಲಿ ಟಿ ವಿ ಎನ್ನುವ ಅಮೂಲ್ಯ ವಸ್ತು ಬಂದು ಮೇಜನ್ನಲಂಕರಿಸಿತ್ತು. ಆಂಟೆನಾವನ್ನು ಆಗಾಗ ತಿರುಗಿಸಿ ಬರ್ರ್ ಎಂದು ಬರುವ ಶಬ್ಧದ ನಡುವೆ ನಮಗೆ ಕೇಳಬೇಕಾದ ಸಂಭಾಷಣೆಗಳನ್ನು ಕಿವಿಗೊಟ್ಟು ಕೇಳುತ್ತಾ, ಆ ಚುಕ್ಕಿಗಳ ನಡುವೆ ಹೌದೋ ಅಲ್ಲವೋ ಎಂದು ಕಾಣುತ್ತಿದ್ದ ಕಪ್ಪು ಬಿಳುಪಿನ ಚಿತ್ರಗಳನ್ನು ನೋಡುತ್ತಾ ಪರಮಾನಂದವನ್ನು ಅನುಭವಿಸುತ್ತಿದ್ದೆವು. ಯಾವುದೋ ಹಿಂದಿಯ ಚಲನಚಿತ್ರದ ನಡುವೆ ಕೇಳಿದ ಒಂದು ತಿಂಡಿಯ ಹೆಸರು ನನ್ನನ್ನು ಅತಿಯಾಗಿ ಆಕರ್ಷಿಸಿ ಮರು ದಿನ ನನ್ನ ಗೆಳತಿಯರನ್ನು ದಂಗು ಬಡಿಸಬೇಕು ಎಂದು ಅದನ್ನು ನೋಟ್ಸ್ ಪುಸ್ತಕದ ಕೊನೆಯಲ್ಲಿ ಬರೆದಿಟ್ಟುಕೊಂಡದ್ದಲ್ಲದೇ ಇಡೀ ದಿನ ಉರು ಹೊಡೆದು ನೆನಪಿಟ್ಟುಕೊಂಡಿದ್ದೆ. 

 ಮರುದಿನ ಮಧ್ಯಾಹ್ನ ಯಾವಾಗ ಆದೀತೋ ಎಂದು ಕಾಯುತ್ತಾ ರಾತ್ರಿ ಸರಿಯಾಗಿ ನಿದ್ದೆಯೂ ಬಾರದೇ ಹೊರಳಾಡುತ್ತಿದ್ದೆ.  ಬೆಳಗಾದೊಡನೇ ಅವಸರದಿಂದ ಬ್ಯಾಗ್ ತುಂಬಿಸಿ ಬುತ್ತಿ ಹಿಡಿದು ಶಾಲೆಗೆ ಓಡಿದ್ದೆ. ಬೋರ್ಡಿನಲ್ಲಿ ಬರೆದ ಅಕ್ಷರಗಳು ಕಾಣಿಸದೇ ಟೀಚರುಗಳು ಹೇಳುವ ಪಾಠಗಳೂ ಕಿವಿಗೆ ಬೀಳದೇ ಒದ್ದಾಡುವ ಸ್ಥಿತಿ ನನ್ನದು. ಮಧ್ಯಾಹ್ನವಾಗುತ್ತಿದ್ದಂತೇ ಎಲ್ಲರಿಂದ ದೂರ ಹೋಗಿ, ತಂದಿದ್ದ ಬುತ್ತಿಯನ್ನು ಗಬ ಗಬನೆ ನುಂಗಿದೆ.  ಬಾವಿ ಕಟ್ಟೆಯ ಕಡೆಗೆ ಮೊದಲೇ ನಡೆದು ನೀರೆಳೆದು ಬುತ್ತಿ ಪಾತ್ರೆಯನ್ನು ಸ್ವಚ್ಛವಾಗಿ ತೊಳೆದುಕೊಂಡೆ. ಈಗ ಒಬ್ಬೊಬ್ಬರಾಗಿ ನನ್ನ ಗೆಳತಿಯರೂ ಊಟ ಮುಗಿಸಿ ಅಲ್ಲಿಗೆ ಬರತೊಡಗಿದರು. 

ಊಟಕ್ಕೇನು? ಎಂಬ ಮಾಮೂಲಿ ಪ್ರಶ್ನೆ ನನ್ನ ಕಡೆಗೆ. ನಾನು ಗಂಟಲು ಸರಿ ಮಾಡಿಕೊಂಡು ’ಬ್ರೆಡ್ ಬಟರ್ ಜ್ಯಾಮ್’ ಎಂದೆ. ಇಲ್ಲಿಯವರೆಗೆ ಯಾರೂ ಕೇಳರಿಯದ ತಿಂಡಿ. ಬ್ರೆಡ್ ಆದರೂ ಕೇಳಿ ತಿಳಿದಿತ್ತೋ ಏನೋ ಉಳಿದ ಹೆಸರುಗಳು ಎಲ್ಲರಿಗೂ ಹೊಸತು. ಅಚ್ಚರಿಯಿಂದ  ನನ್ನ ಕಡೆಗೆ ನೋಡಿದರು. ಅಲ್ಲಿಂದ ನಂತರ ಆಗಾಗ ನನ್ನ ತಿಂಡಿ ಅದೇ ಆಗಿ ನಾನು ಮುಖ್ಯ ವ್ಯಕ್ತಿಯಾಗಿ ಗುರುತಿಸಲ್ಪಟ್ಟೆ.  ಸ್ವಲ್ಪ ಸಮಯ ಕಳೆದು  ಬೇರೆಯವರಿಗೂ ಈ ತಿಂಡಿಯ ಹೆಸರು  ಕೇಳಿ ಕೇಳಿ ಅಭ್ಯಾಸವಾಗಿದ್ದರೂ  ಅದನ್ನು ಹೇಳಲು ಹಿಂಜರಿಯುತ್ತಿದ್ದರು. ಯಾಕೆಂದರೆ ಒಮ್ಮೆಯೂ ತಿಂದು ನೋಡಿರದ ತಿಂಡಿ. ಯಾರಾದರೂ ಅಪ್ಪಿ ತಪ್ಪಿ ಈ ಹೆಸರನ್ನು ಹೇಳಿದರೋ ನನ್ನ ಗೆಳತಿಯರು ನನ್ನ ಪರವಾಗಿ ಅವರಲ್ಲಿ ಹೇಗಿತ್ತದು? ಹೇಗೆ ಮಾಡಿದ್ರು ನಿಮ್ಮಮ್ಮ? ಎಂದೆಲ್ಲಾ ಕೇಳಿ ಅವರು ಮತ್ತೊಮ್ಮೆ ಆ ಹೆಸರು ಎತ್ತದಂತೆ ಮಾಡುತ್ತಿದ್ದರು.

ನಾನೂ ಕೂಡಾ ಆ ಸಮಯದಲ್ಲಿ ರುಚಿ ಕೂಡಾ ನೋಡಿರದ  ಯಾವುದೋ ಅದ್ಭುತ ಲೋಕದ ತಿಂಡಿಯೇನೋ ಎಂದು ಪ್ರಚಾರ ಗಿಟ್ಟಿಸಿದ ಈ ’ಬ್ರೆಡ್ ಬಟರ್ ಜ್ಯಾಮನ್ನು  ಈಗ ನಮ್ಮ ನಾಯಿ ಮರಿಗೆ ಹಾಕಿದರೂ ನನ್ನನ್ನೊಮ್ಮೆ ಮೇಲೆ ಕೆಳಗೆ ನೋಡಿ, ಮುಖ ತಿರುಗಿಸಿ ಮಲಗುವಾಗ ನನ್ನ  ಅಂದಿನ ಮಾಯಾಲೋಕದ ಭ್ರಮೆ ಕಣ್ಣೆದುರೇ ಕರಗುತ್ತದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Savithri
Savithri
9 years ago

ha ha ha……. 😀 good one atte

suguna
suguna
9 years ago

hahaha super 

Santosh
Santosh
9 years ago

Chennagi barediddira baalyada nenapugalanna.

With regards,

Santosh Kulkarni

ಶ್ರೀನಿವಾಸ್ ಪ್ರಭು
ಶ್ರೀನಿವಾಸ್ ಪ್ರಭು
9 years ago

ಬರಹ ಓದುವಾಗ ನಗೆಯು ಬರುತಿದೆ…ಎನಗೆ ….

ಇದು ಇಂದಿನ ವಾಸ್ತವ. ಹಿಂದಿನಿಂದಲೂ ನಾವು ನಮ್ಮದ್ದನ್ನು ಮರೆತು ಪರದೇಶಿಗಳ ಉಡುಗೆ ತೊಡುಗೆ, ಊಟ ತಿಂಡಿ ಇತ್ಯಾದಿ ಅನುಕರಿಸುವಲ್ಲಿ ಸಫಲಲತೆ ಕಂಡಿದ್ದೇವೆ. ಆದರೆ ಪರದೇಶಿಗಳು ನಮ್ಮದ್ದನ್ನು ಅನುಸರಿಸುತ್ತಿದ್ದಾರೆ. ನಾನು ಈ ದಿನ ಅಜಮನ್ ನಲ್ಲಿರುವ ಲೂ ಲೂ ಸೆಂಟರಿಗೆ ಹೋಗಿದ್ದೆ. ಅಲ್ಲಿ ಕಡುಬು, ಬಟಾಟೆ ಒಡೆ,  ಕಡಲೆ ಬೇಳೆ ಒಡೆ, ತುಳುವಿನ ಪುಂಡಿ ಇತ್ಯಾದಿ ಕಂಡು ಬೆರಗಾದೆ. ಮುಂದೆ ನಮ್ಮ ತಿಂಡಿಗಳನ್ನು ತಿನ್ನಬೇಕಾದರೆ ನಾವು ಪರದೇಶಕ್ಕೆ ಹೋಗಬೇಕಾಗಿ ಬರಬಹುದೇ? ಅಥವಾ ಪರದೇಶಿಗಳು ನಮ್ಮ ತಿಂಡಿಗಳ ಪೇಟೆಂಟ್ ಪಡೆದು ನಮ್ಮಲ್ಲಿ ಸ್ಟಾಲ್ ತೆರೆಯುವಂತೆ ಆಗಬಹುದೇ? ಏನೇ ಇರಲಿ ಇವತ್ತು ರಾತ್ರಿ ಊಟಕ್ಕೆ ಒಂದು ಕಡುಬು, ಎರಡು ಪುಂಡಿ ಅದರೊಟ್ಟಿಗೆ ನಾಲಗೆ ಚಪಲಕ್ಕೆ ಒಂದು ವಡೆ. ಸಾಲದೇ? 

4
0
Would love your thoughts, please comment.x
()
x