ಅನಿ ಹನಿ

ಉಳಿತಾಯ: ಅನಿತಾ ನರೇಶ್ ಮಂಚಿ

ಅತ್ತ ಕಡೆಯಿಂದ ಚಿಕ್ಕಿಯ ಫೋನ್. ಹೇಗಿದ್ದರೂ ಅರ್ಧ ಗಂಟೆಗಿಂತ ಕಮ್ಮಿ ಮಾತನಾಡಿ ನಮಗಿಬ್ಬರಿಗೂ ಗೊತ್ತೇ ಇಲ್ಲ. ’ಲೈನಲ್ಲಿರು ಬಂದೇ’ ಎಂದು ಕೂಗಿ ಅಡುಗೆ ಮನೆಗೆ ನುಗ್ಗಿ ಸ್ಟವ್ ಆಫ್ ಮಾಡಿ, ಪಕ್ಕದ ಕೋಣೆಯ ಫ್ಯಾನ್ ನಿಲ್ಲಿಸಿ ಮತ್ತೆ ಲ್ಯಾಂಡ ಫೋನಿನ ರಿಸೀವರ್ ಕೈಯಲ್ಲಿ ಹಿಡಿದು ಲ್ಯಾಂಡಾದೆ. ನಮ್ಮ ಪಕ್ಕದ ಮನೆಯ ದನಗಳಿಗೆ ತಿನ್ನಲು ಹಾಸನದಿಂದ ತರಿಸಿದ ಒಣ ಹುಲ್ಲಿನ ಬಣ್ಣದಿಂದ ಹಿಡಿದು ಮೊನ್ನೆ ನಮ್ಮನೆ ನಾಯಿಯ ಬಾಯಿಗೆ ಸಿಕ್ಕಿ ಸತ್ತ ಹೆಗ್ಗಣದ ಬಾಲದವರೆಗಿನ ಕಥೆ ನನ್ನ ಕಡೆಯಿಂದ ಅವಳಿಗೆ ರವಾನೆಯಾದರೆ, ಅವಳು ಅವಳ ಹಿಂದಿನ ಮನೆಯ ಮುಸ್ಲಿಮ್ ಹುಡುಗ ದುಬೈಯಿಂದ ಅವನ ಹೆಂಡತಿಗೆ ತಂದ ಹೊಸಾ ಸೀರೆಯ ವಿನೂತನ ವರ್ಣ ಸಂಯೋಜನೆಯನ್ನೂ, ಅದರ ಜರಿಯ ವಿನ್ಯಾಸವನ್ನೂ ವರ್ಣಿಸಿ ನನ್ನ ತಲೆಗಿಳಿಸಿದಳು. ಇಷ್ಟೆಲ್ಲಾ ಆಗುವಾಗ ಅತ್ತ ಕಡೆಯಿಂದ ಚಿಕ್ಕಪ್ಪನ ಸ್ವರ ಕೇಳಿಸಿತು. ’ಎಷ್ಟು ಹೊತ್ತಾಯಿತು ಮಾತನಾಡೋದು ಬಿಲ್ ಸುಮಾರಾಗಿರಬಹುದು ಈಗ…’ ಅದಕ್ಕೆ ಚಿಕ್ಕಿ.. ’ಎಲ್ಲಿಂದ… ಮೊನ್ನೆ ನೀವು ಹಾಕಿಸಿದ ಹೊಸಾ ಪ್ಲಾನ್ ಉಂಟಲ್ಲಾ ಅದ್ರಲ್ಲಿ ದಿನಕ್ಕೆ ೫೦ ನಿಮಿಷ ಫ್ರೀ ಅಲ್ವಾ.. ತಿಂಗಳಿಗೆ ೧೫೦೦ ಕಟ್ಟಿದರಾಯಿತು ಅಷ್ಟೇ ನೋಡಿ.. ಅದರಲ್ಲೇ ಮಾತಾಡಿದ್ದು’ ಅಂದಳು. ಕೂಡಲೇ ’ಹೋ.. ಅದಿದೆಯಲ್ಲಾ.. ಸರಿ ಸರಿ ಮಾತಾಡು’ ಎನ್ನುವ ಚಿಕ್ಕಪ್ಪನ ಪ್ರಸನ್ನ ಸ್ವರ ಕೇಳಿತ್ತು. ಮತ್ತೆ ನಮ್ಮ ಮಾತು ಅಡೆತಡೆಯಿಲ್ಲದೇ ಮುಂ…..ದುವರಿಯಿತು. 

ನಮ್ಮ ಚಿಕ್ಕಪ್ಪನ ಸ್ಪೆಷಾಲಿಟಿ ಎಂದರೆ ಉಳಿತಾಯ. ಅವರು ಯಾವುದರಲ್ಲೇ ಇರಲಿ ಉಳಿತಾಯ ಮಾಡದೇ ಕೆಲಸ ಮಾಡುವ ಜಾಯಮಾನದವರೇ ಅಲ್ಲ. ಅವರ ಮನೆಯಿಂದ ನಮ್ಮ ಮನೆಗೆ ಬರಲು ಸಾಧಾರಣ ನೂರು ಕಿ.ಮೀಟರ್ ದೂರ. ಒಂದೇ ಬಸ್ಸಿನಲ್ಲಿ ಬಂದು ತಲುಪಬಹುದು. ಆದರೆ ನಮ್ಮ ಚಿಕ್ಕ ಕಂಡುಕೊಂಡ ಸತ್ಯದ ಪ್ರಕಾರ ಒಂದೇ ಬಸ್ಸಿನಲ್ಲಿ ಬಂದರೆ ಟಿಕೆಟಿನ ಹಣ ಹೆಚ್ಚು. ಅದರ ಬದಲು ಮತ್ತೆರಡು ಬಸ್ಸು ಬದಲಾಯಿಸಿ ಬಂದರೆ ಭರ್ತಿ ಐವತ್ತು ಪೈಸೆ ಉಳಿತಾಯ ಆಗುತ್ತಿತ್ತು. ಹಾಗಾಗಿ ನಮ್ಮ ಚಿಕ್ಕಪ್ಪನಂತೂ ಹಾಗೇ ಬಂದು ಹೋಗಿ ಮಾಡುತ್ತಿದ್ದರು. ಆ ಬಸ್ಸು ಬದಲಾಯಿಸಿದಲ್ಲಿ ಒಂದು ಕಡೆ  ಅವರಿಗೆ ಪರಿಚಯ ಇರುವ ಕಿಣಿ ಮಾಮನ ಹೋಟೆಲ್ ಮತ್ತು ಇನ್ನೊಂದು ಕಡೆ ಕಾಮತ್ ಕೋಲ್ಡ್ ಹೌಸ್ ಅವರ ಕ್ಲಾಸ್ ಮೇಟ್ ನದ್ದೇ ಇತ್ತು. ಕಿಣಿ ಮಾಮನ ಹೋಟೆಲ್ಲಿಗೆ ಒಮ್ಮೆ ನುಗ್ಗಿ ಹೋಟೆಲಿನಲ್ಲಿ ಎರಡಿಡ್ಲಿ ತಿಂದು ಕಾಫಿ ಕುಡಿಯದೇ ಹತ್ತು ರೂಪಾಯಿ ಕೊಟ್ಟು, ಕಾಮತ್ ಕೋಲ್ಡ್ ಹೌಸಿನಲ್ಲಿ ಒಂದು ಸೋಡ ಶರಬತ್ತು ಕುಡಿದು ಹದಿನೈದು ರೂಪಾಯಿ ಕೊಟ್ಟು ಕೈ ಮುಗಿಯುತ್ತಿದ್ದರು. 

ಇವರು ಇದೊಂದೇ ಅಂತ ಅಲ್ಲ.. ಉಳಿದ ಎಲ್ಲಾ ವಿಷಯದಲ್ಲೂ ಬಹಳ ಲೆಕ್ಕಾಚಾರದ ಮನುಷ್ಯ. ಮನೆಗೆ ತರಕಾರಿ ತರಬೇಕಿದ್ದರೆ ಸಂತೆಯ ಎಲ್ಲಾ ಅಂಗಡಿಯಲ್ಲೂ ಮೊದಲು ಹೋಗಿ ಕ್ರಯ ವಿಚಾರಿಸುತ್ತಿದ್ದರು. ಹೀಗೆ ವಿಚಾರಿಸುವಾಗ ನಡೆಯಲು ಕಷ್ಟವಾದರೆ ಆಟೋ ಮಾಡುತ್ತಿದ್ದರು. ಎಲ್ಲಾ ಅಂಗಡಿಯ ಕ್ರಯ ಕೇಳಿ ಕೆ.ಜಿ.ಗೆ ಒಂದು ರುಪಾಯಿ ಕಡಿಮೆ ಇದ್ದ ಅಂಗಡಿಯಲ್ಲೇ ಅವರ ಖರೀದಿ ನಡೆಯುತ್ತಿತ್ತು. ಅದೂ ಕೂಡಾ ಮನೆಯ ಅಗತ್ಯಕ್ಕೆ ಎರಡು ಕೆ ಜಿ ಆಲೂಗಡ್ಡೆ ಸಾಕು ಎಂದಿದ್ದರೆ ಅವರು ಐವತ್ತು ಕೆ ಜಿಯ ಮೂಟೆಯನ್ನು ಇನ್ನೂ ರಿಡಕ್ಷನ್ ರೇಟಿನ ಆಧಾರದಲ್ಲಿ ತೆಗೆಕೊಳ್ಳುತ್ತಿದ್ದರು. ಅದೇ ಆಟೋದವನಿಗೆ ನೂರು ರೂಪಾಯಿ ತೆತ್ತು ಮನೆಯವರೆಗೂ ಅದನ್ನು ಹೊತ್ತು ತರುತ್ತಿದ್ದರು. ಮತ್ತೆ ವಾರಗಟ್ಟಲೆ ಅವರ ಮನೆಯಲ್ಲಿ ಅಲೂಗಡ್ಡೆ ಪಲ್ಯ, ಸಾರು, ಸಾಂಬಾರು, ಬೋಂಡಾ, ಅಂಬಡೆಗಳದ್ದೇ ಕಾರುಬಾರು. ಇದಾಗಿ ಗ್ಯಾಸಿಗೆ, ಎಸಿಡಿಟಿಗೆ, ಹೊಟ್ಟೆ ಸರಿಯಿಲ್ಲದ್ದಕ್ಕೆ ಎಂದು ಡಾಕ್ಟ್ರ ಬಿಲ್ಲು ಬೇರೆ. ಆದರೆ ಚಿಕ್ಕಪ್ಪನ ಲೆಕ್ಕಾಚಾರ ಮೊದಲು ಉಳಿಸಿದ ಕೆ.ಜಿ.ಯ ಮೆಲಿನ ಒಂದು ರುಪಾಯಿಯನ್ನೇ  ಇನ್ನೂ ನೆನೆಯುತ್ತಲೇ ಇರುತ್ತಿತ್ತು. 

ಒಮ್ಮೆ ನನ್ನ ದೊಡ್ಡಪ್ಪನ ಬಾವನ ಮಗನ ಮದುವೆ ಇತ್ತು. ಅವರು ತಮ್ಮ  ಪತ್ನೀಸಮೇತವಾಗಿ ಮದುವೆಯ ಹೇಳಿಕೆ ಕೊಡಲು ಆತ್ಮೀಯರಾದ ಚಿಕ್ಕಪ್ಪನ ಮನೆಗೆ ಬಂದಿದ್ದರು. ಆ ಸುದ್ದಿ ಈ ಸುದ್ದಿ ಮಾತನಾಡುತ್ತಾ ಮದುವೆಗೆ ಚಿನ್ನ ಎಲ್ಲಿಂದ ತೆಗೆದುಕೊಂಡಿರಿ ಎಂದು ಕೇಳಿದರು ಚಿಕ್ಕಪ್ಪ. ಚಿಕ್ಕಿ ಕಣ್ಣು ಹಾರಿಸಿ ಸನ್ನೆ ಮಾಡಿದರೂ ಅರ್ಥವಾಗದ ಅವರು ’ಇಲ್ಲ ಇನ್ನೂ ತೆಗೆದುಕೊಳ್ಳಬೇಕಷ್ಟೇ’ ಎಂದು ಬಿಟ್ಟರು. ಕೂಡಲೇ ಜಾಗೃತವಾದ ಚಿಕ್ಕಪ್ಪನ ಉಳಿತಾಯದ ಬುದ್ಧಿ ಅವರಿಗೆ ಚಿನ್ನ ಕಡಿಮೆ ಕ್ರಯದಲ್ಲಿ ನಾನು ತೆಗೆದುಕೊಡ್ತೇನೆ ಎಂದು ಆಶ್ವಾಸನೆ ಕೊಟ್ಟೇ ಬಿಟ್ಟಿತು. ನೀವು ದೊಡ್ಡ ಪೇಟೆಯ ದೊಡ್ಡ ಅಂಗಡಿಗೆ ಎಲ್ಲಾ ಹೋಗಿ ಅಲ್ಲಿ ಅವರು ನೈಸ್ ಆಗಿ ಮಾತನಾಡಿ ಕೊಡುವ ಹಳಸಲು ಜ್ಯೂಸ್ ಕುಡಿದು ಒಂದಕ್ಕೆ ಹತ್ತು ಕೊಟ್ಟು ಚಿನ್ನ ತರ್ತೀರಿ. ಅದೇ ಚಿನ್ನವನ್ನು ನಾನು ಇಲ್ಲಿ ಕಮ್ಮಿಗೆ ಕೊಡಿಸ ಬಲ್ಲೆ.  ನನಗೆ ಗುರ್ತದ ಆಚಾರಿಯೊಬ್ಬ ಇದ್ದಾನೆ. ಅವನು ಎಂತ ಹೊಸಾ ಕ್ರಮದ ಚೈನ್ ಕೂಡಾ ಕಡಿಮೆ ಮಜೂರಿಯಲ್ಲಿ ಮಾಡಿ ಕೊಡ್ತಾನೆ. ಆ ಕೆಲಸ ನೀವು ನನಗೆ ಬಿಡಿ ಎಂದು ತಮ್ಮ ಹಿರಿತನ ತೋರಿದರು. ಬಂದವರಿಗೂ ಕಡಿಮೆ ಖರ್ಚಲ್ಲಿ ಆಗುವುದಾದರೆ ಎಲ್ಲಿಯಾದರೆ ಏನು? ಚಿನ್ನ ಚಿನ್ನವೇ ಅಲ್ಲವಾ ಅಂತನ್ನಿಸಿ ಇವರ ರಾಗಕ್ಕೆ ಕೊರಳಾಡಿಸಿದರು. ಅವರ ಪತ್ನಿಗೆ ನನ್ನ ಚಿಕ್ಕಮ್ಮನ ಕೊರಳಲ್ಲಿದ್ದ ಸರದ ಡಿಸೈನೊಂದು ತುಂಬಾ ಹಿಡಿಸಿ ಇಂತದ್ದೇ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದರು. ಚಿಕ್ಕಪ್ಪ ಹೆಮ್ಮೆಯ ಸ್ವರದಲ್ಲಿ ಇದೂ ಅವನೇ ಮಾಡಿದ್ದು. ಸುಮಾರು ಜನಕ್ಕೆ ಇಷ್ಟ ಆಗಿದೆ ಎಂದರು. ಅವರು ಶುಭಸ್ಯ ಶೀಘ್ರಂ ಎಂದು  ಚಿಕ್ಕಪ್ಪನ ಜೊತೆಗೇ ಹೋಗಿ ಅಚಾರಿಯಲ್ಲಿ ಮಾತನಾಡಿ ಪ್ಯಾಟರ್ನ್ ಪುಸ್ತಕ ನೋಡಿ ಮಾರ್ಕ್ ಮಾಡಿಸಿ ಆರ್ಡರ್ ಕೊಟ್ಟು ಹೊರಟರು.

ಮದುವೆಯ ದಿನ ಹತ್ತಿರ ಬಂದರೂ ಆಭರಣ ಕೈಗೆ ಸಿಕ್ಕಿರಲಿಲ್ಲ. ಅದಕ್ಕೆ ಚಿಕ್ಕಪ್ಪ ’ನೀವೇನೂ ಹೆದರಬೇಡಿ. ಮದುವೆ ದಿನ ಬೆಳಿಗ್ಗೆ ನಾನು ಬೇಗ ಬರ್ತೇನೆ ನಿಮ್ಮ ಚಿನ್ನದ ಸಮೇತ’ ಎಂದು ಅವರಿಗೆ ಸಮಾಧಾನ ಮಾಡಿದ್ದರು. ಅವರು ಒಳಗಿದ್ದ ಅಳುಕನ್ನು ತೋರಿಸಿಕೊಳ್ಳದೇ ಚಿಕ್ಕಪ್ಪನ ಮೇಲಿನ ನಂಬುಗೆಯಿಂದ ಒಪ್ಪಿದರು. ಚಿಕ್ಕಿ ಒಂದೆರಡು ಬಾರಿ ನೆನಪಿಸಿದರೂ ಚಿಕ್ಕಪ್ಪ ಅವನೆಲ್ಲಿ ಓಡಿ ಹೋಗ್ತಾನೆ. ಮದುವೆ ದಿನ ಗೊತ್ತುಂಟು ಅವನಿಗೆ .. ಕೊಟ್ಟೇ ಕೊಡ್ತಾನೆ. ಹಾಗೆಲ್ಲ ಅವಸರ ಮಾಡಿದ್ರೆ ಅದು ಸರಿಯಾಗಬೇಡ್ವಾ ಎಂದು ಚಿಕ್ಕಮ್ಮನಿಗೆ ಜೋರು ಮಾಡಿದರು. ಅಂತೂ ಮದುವೆಯ ಮುನ್ನಾ ದಿನ ಚಿಕ್ಕಪ್ಪ ಹೋಗಿ ಆಚಾರಿಯಲ್ಲಿ ವಿಚಾರಿಸಿದರೆ ’ಅಯ್ಯೋ .. ನಾನು ಮದುವೆ ಮುಂದಿನ ತಿಂಗಳು ಎಂದೇ ತಿಳಿದದ್ದು.. ಅದನ್ನು ಇನ್ನು ಶುರು ಮಾಡಬೇಕಷ್ಟೇ.. ನೀವು ಎಂತದ್ದು.. ಸ್ವಲ್ಪ ಮೊದಲೇ ಹೇಳಬಾರದಾ.. ಈಗ ಬಂದು ತಲೆ ಮೇಲೆ ಕೂತ್ರೆ ಆಗ್ತದಾ.. ಎಂತ ಸ್ವಾಮೀ ನೀವು..ಇಲ್ಲಿ ನೋಡಿ ನಿಮ್ಮಿಂದ ಮೊದಲು ಬಂದ ಆರ್ಡರುಗಳದ್ದೇ ಇನ್ನೂ ಕೆಲ್ಸ ಆಗ್ಲಿಲ್ಲ..’ ಎಂದ. ’ಅದೆಲ್ಲಾ ನನ್ಗೆ ಗೊತ್ತಿಲ್ಲಾ ನಾಳೆಯೇ ಮದುವೆ ಇವತ್ತು ಆಗಲೇಬೇಕು.. ಇದು ನನ್ನ ಮಾತ್ರ ಅಲ್ಲ ನಿನ್ನ ಮರ್ಯಾದೆಯ ಪ್ರಶ್ನೆ ಕೂಡಾ.. ರಾತ್ರಿಯೇ ಕೂತು ಮಾಡಿ ಕೊಡು’ ಎಂದು ಚಿಕ್ಕಪ್ಪ ತಗಾದೆ ತೆಗೆದರು. ಅಂತೂ ಇಂತೂ ಚಿಕ್ಕಪ್ಪನೂ ಆಚಾರಿಯೊಂದಿಗೇ ನಿದ್ದೆ ಬಿಟ್ಟು ರಾತ್ರೆಯೆಲ್ಲಾ ಕೂತು ಆಭರಣ ಸಿದ್ದ ಪಡಿಸಿಕೊಂಡು ಮದುವೆ ಸುಧಾರಿಸಿದರು. ಆಚಾರಿ ತನ್ನ ಮಾಮೂಲಿ ಬಿಲ್ಲಿನ ಜೊತೆಗೆ ರಾತ್ರೆಯ ಓವರ್ ಡ್ಯೂಟಿಯ ಡಬ್ಬಲ್ ಚಾರ್ಜನ್ನು ಸೇರಿಸಿದ್ದನ್ನು ಚಿಕ್ಕಪ್ಪ ತಾನೇ ಚುಕ್ತಾ ಮಾಡಿದರು ಎಂಬುದು ಚಿಕ್ಕಿ ನನ್ನಂತೆ ಹಲವರಿಗೆ ತಿಳಿಸಿದ ಗುಟ್ಟಿನ ಸುದ್ದಿಯಾಗಿತ್ತು.

ಇದು ಕೇವಲ ನನ್ನ ಚಿಕ್ಕಪ್ಪನದ್ದು ಸಮಸ್ಯೆ ಎಂದು ನಾನು ನನ್ನ ಗೆಳತಿಯ ಅತ್ತೆಯನ್ನು ನೋಡುವವರೆಗೆ ಅಂದುಕೊಂಡಿದ್ದೆ. ಆದರೆ ಅವರನ್ನು ನೋಡಿದೊಡನೇ ನನ್ನ ಭ್ರಮೆಯ ಬೆಟ್ಟ ಕರಗಿತು. ಅವರ ಉಳಿತಾಯದ ಲೆಕ್ಕಾಚಾರ ಇನ್ನೂ ಚೆಂದದ್ದು. ಊಟಕ್ಕೆ ಕುಳಿತೊಡನೆಯೇ ಅವರು ಫ಼್ರಿಡ್ಜಿನ ಬಾಗಿಲು ತೆಗೆದು ಸೇರು, ಪಾವು, ಚಟಾಕಿನ ವಿವಿಧ ಅಳತೆಯ ಪಾತ್ರೆಗಳನ್ನು ಹೊರ ತೆಗೆದು ತಮ್ಮ ಹತ್ತಿರ ಇಟ್ಟುಕೊಳ್ಳುತ್ತಿದ್ದರು. ಅದೆಲ್ಲ ನಿನ್ನೆ, ಮೊನ್ನೆ, ಮೊನ್ನೆಯ ನಿನ್ನೆ .. ಹೀಗೆ ಉಳುಗಡೆಯಾದ ಪದಾರ್ಥಗಳ ಪಾತ್ರೆಗಳು. ಅವರು ಕ್ರಮ ಪ್ರಕಾರವಾಗಿ ಮೊನ್ನೆಯ ನಿನ್ನೆಯನ್ನು ಖಾಲಿ  ಮಾಡಿ ಮೊನ್ನೆಯದನ್ನು ಸ್ವಲ್ಪ ಉಳಿಸಿ, ನಿನ್ನೆಯದನ್ನು ಅದಕ್ಕಿಂತ ಕೊಂಚ ಹೆಚ್ಚು ಉಳಿಯುವಂತೆ ಊಟ ಮಾಡುತ್ತಿದ್ದರು. ಯಾರಾದರೂ ಮನೆಗೆ ಬಂದರೆ ಒತ್ತಾಯ ಮಾಡಿ  ಹಳೆಯದನ್ನು ಚೆನ್ನಾಗಿದೆ ಮೊನ್ನೆ ಮಾಡಿದ್ದಾದರೂ ಇವತ್ತು ಮಾಡಿದ್ದಕ್ಕಿಂತ ಫ್ರೆಶ್ ಇದೆ ಎಂದು ಶಿಫಾರಸ್ಸು ಮಾಡಿ ಬಡಿಸಿ ತಿನ್ನುವವರೆಗೆ ಕದಲದಂತೆ ಕಾವಲಿರುತ್ತಿದ್ದರು. ಗೆಳತಿಯ ಹತ್ತಿರ ಗುಟ್ಟಿನಲ್ಲಿ ಅಲ್ವೇ .. ಇವರು ಇವತ್ತಿನ ಅಡುಗೆಯ ರುಚಿ ನೋಡೋದೇ ಇಲ್ವೇನೇ ಎಂದೆ.. ಅದಕ್ಕವಳು ’ನೋಡ್ತಾರೆ ಕಣೆ.. ನಾಳೆ’ ಎಂದಳು.  

ಇವರು ಊಟ ತಿಂಡಿಯ ವಿಷಯದಲ್ಲಿ ಮಾತ್ರವಲ್ಲ ಎಲ್ಲಾ ವಿಚಾರದಲ್ಲೂ ಉಳಿತಾಯ ಮಾಡ್ತಾರೆ ಅಂತ ನನಗೆ ಮೊನ್ನೆಯೇ ತಿಳಿದಿದ್ದು. ಮನೆಯಲ್ಲಿ ನನ್ನ ಗೆಳತಿಗೆ ಹುಷಾರಿಲ್ಲದಿರುವಾಗ ತಂದ ಸಿರಪ್ ಬಾಟಲನ್ನು ಖಾಯಿಲೆ ವಾಸಿಯಾದ ನಂತರ ಉಳಿದ ಔಷಧದ ಸಮೇತ ಕವಾಟಿನಲ್ಲಿರಿಸಿದ್ದಳು. ಅವರ ಅತ್ತೆ ಅದರ ಇನ್ಸ್ಟ್ರಕ್ಷನನ್ನು ಓದಿ ಬಾಟಲಿ ಓಪನ್ ಮಾಡಿದ ನಂತರ ಕೇವಲ ಒಂದು ವಾರ ಬಳಸಬಹುದಷ್ಟೇ ಎಂಬುದನ್ನು ತಿಳಿದುಕೊಂಡರು. ದಿನ ಲೆಕ್ಕ ಹಾಕಿ ನೋಡಿದರೆ ಅಂದಿಗೇ ಅದರ ಅವಧಿ ಮುಗಿಯುವಂತಿತ್ತು. ಮತ್ತೇನೂ ಯೋಚಿಸಲಿಲ್ಲ. ಅಷ್ಟು ಔಷಧವನ್ನು ಇನ್ನು ಸೊಸೆ ಚೆಲ್ಲಿ ಹಾಳು ಮಾಡುತ್ತಾಳೆಂದು ಹಾಗೇ ಎತ್ತಿ ಬಾಯಿಗೆರೆದುಕೊಂಡರು. ಸಂಜೆ ಮನೆಗೆ ಮಗ ಸೊಸೆ ಬರುವಾಗ ತಲೆ ಸುತ್ತು, ಹೊಟ್ಟೆ ಸಂಕಟದಿಂದ ಬಳಲುತ್ತಿದ್ದ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಾಗಲೇ ಸತ್ಯದ ಅರಿವಾಗಿದ್ದು. ಇಷ್ಟೆಲ್ಲಾ ಆದರೂ ಅವರ ಉಳಿತಾಯದ ರೋಗವೇನೂ ವಾಸಿಯಾಗಿಲ್ಲ. 

ಮೊದಲೆಲ್ಲಾ ನಮ್ಮೂರ ಗದ್ದೆಯಲ್ಲೇ ಬೆಳೆಯುತ್ತಿದ್ದ ಸೌತೆಕಾಯಿ, ಕುಂಬಳಕಾಯಿ, ಚೀನೀಕಾಯಿ ಮುಂತಾದವುಗಳನ್ನು ಮನೆಯ ಮಾಡಿನ ಕೆಳಗೆ  ಬಾಳೆಬಳ್ಳಿಯಿಂದ ಗಂಟು ಹಾಕಿ ನೇತು ಹಾಕುತ್ತಿದ್ದರು. ಅಥವಾ ಮರದ ಕಂಬದ ಸುತ್ತಲೂ ಅದನ್ನು ಬಾಳೆಯ ಬಳ್ಳಿಯಿಂದ ಬಿಗಿದು ಕಟ್ಟುತ್ತಿದ್ದರು. ಇದು  ಆ ತರಕಾರಿಗಳು ಚೆನ್ನಾಗಿ ಗಾಳಿಯಾಡಿ ಹಾಳಾಗದೇ ವರ್ಷವಿಡೀ  ಉಳಿಸುವಂತಹ ಕ್ರಮವಾಗಿತ್ತು. ಆದರೆ ಇದನ್ನು ಅಡುಗೆಗೆ ಬಳಸುವುದು  ಯಾವಾಗ ಅಂದರೆ ಯಾವುದಾದರೊಂದರಲ್ಲಿ ತೂತು ಬಿದ್ದು ಹಾಳಾಗಲು ಪ್ರಾರಂಭವಾಗಬೇಕು.  ಆಗ ಅದನ್ನು ತೆಗೆದು ಅದರಲ್ಲಿ ಚೆನ್ನಾಗಿರುವ ಭಾಗವನ್ನು ಪದಾರ್ಥಕ್ಕೆ ಬಳಸುತ್ತಿದ್ದರು.  ಚೆನ್ನಾಗಿರುವ ತರಕಾರಿ ಕೊಳೆಯುವರೆಗೂ ಅದಕ್ಕೆ ಕತ್ತಿ ತಾಗುವ ಯೋಗವೇ ಬರುತ್ತಿರಲಿಲ್ಲ. ಯಾರಾದರೂ  ಈ ಕುರಿತು ಕೇಳಿದರೆ ’ಅದು ಇನ್ನು ವರ್ಷಕಾಲವೂ ಹಾಳಾಗಲಿಕ್ಕಿಲ್ಲ. ಇಷ್ಟು ಬೇಗ ಕೊಯ್ದು ಮುಗಿಸುವುದ್ಯಾಕೆ? ತರಕಾರಿ ಇಲ್ಲದೆ ಮರ್ಯಾದೆ ಹೋಗುವ ಕಾಲಕ್ಕೆ ಬೇಕಾಗುತ್ತದೆ’  ಎಂಬುದು ಅವರ ಅನುಭವದ ಉತ್ತರವಾಗುತ್ತಿತ್ತು.

ಈ ಉಳಿತಾಯದೊಂದಿಗೇ ಮರ್ಯಾದೆ ಪ್ರಶೆಯು ಯಾವಾಗಲೂ ಜೊತೆ ಸೇರಿಯೇ ಇರುತ್ತದೆ ಎನ್ನುವುದಕ್ಕೆ ನನ್ನ ಅಜ್ಜನ ಗೆಳೆಯರೊಬ್ಬರು ಸಾಕ್ಷಿ. ಅವರ ಮಗನ ಉಪನಯದ ಸಡಗರ. ಅದೇನು ಕಥೆಯೋ ಗೊತ್ತಿಲ್ಲ. ಅವರು ಅಂದುಕೊಂಡದ್ದಕ್ಕಿಂತ ಹೆಚ್ಚು ಜನರು ಬಂದು ಸೇರಿದ್ದರು. ಊಟಕ್ಕೆ ಬಡಿಸಲು ಶುರು ಆಗಿತ್ತು. ಆದರೇನು.. ಸಾರನ್ನ ಬರುವಾಗಲೇ ಮಾಡಿಟ್ಟ ಅನ್ನ ಮುಗಿಯಿತು.  ಊಟಕ್ಕೆ ಎಲ್ಲರೂ ಕುಳಿತಾಗಿದೆ ಏಳಿಸುವಂತಿಲ್ಲ. ಸಾಂಬಾರು ಬಡಿಸಬೇಕಿದ್ದರೆ ಅನ್ನ ಬರಬೇಕಲ್ಲ. ಬಡಿಸಲು ನಿಂತವರು ಅಡುಗೆಯವರಲ್ಲಿ ಹೋಗಿ ’ಹೇಗೂ ಕುದಿಯುವ ನೀರುಂಟಲ್ಲ..ಸ್ವಲ್ಪ  ಅಕ್ಕಿ ಹಾಕಿ. ನಾವು ನಿಧಾನಕ್ಕೆ ಪಾಯಸ, ಭಕ್ಷ್ಯ ಎಲ್ಲಾ ಬಡಿಸುತ್ತೇವೆ. ಅದಾಗುವಾಗ ಅನ್ನ ಬೆಂದಿರುತ್ತದೆ’ ಎಂದು ಉಪಾಯ ಹೇಳಿದರು. ಸರಿ ಎಂದು ಅನ್ನಕ್ಕೆ ನೀರಿಟ್ಟಾಯಿತು. ಅನ್ನ ಮಾಡಲು ಅಕ್ಕಿ ಬೇಡವೇ .. ಅಕ್ಕಿ ಗೋಣಿ ಎತ್ತಿ ಹಾಕಿದರೂ ಒಂದು ಅಕ್ಕಿಯೂ ಇಲ್ಲ. ಹೋಗಿ ತರೋಣ ಎಂದರೆ  ಹತ್ತಿರದಲ್ಲೆಲ್ಲೂ  ಅಂಗಡಿಯೂ ಇಲ್ಲ. ಮನೆಯೊಡತಿಗೆ ನಾಚಿಕೆ, ಸಂಕಟ. ಅಜ್ಜನ ಸ್ನೇಹಿತರು ಕಾಲು ಸುಟ್ಟ ಬೆಕ್ಕಿನಂತೆ ಅತ್ತಿತ್ತ ಸುಳಿಯುತ್ತಿದ್ದರೇ ವಿನಃ ಸಮಸ್ಯೆಗೆ ಉತ್ತರ ದೊರಕಲಿಲ್ಲ. ಆಗ ಅವರ ಹೆಂಡತಿಗೆ ಪಕ್ಕನೇ ನೆನಪಿಗೆ ಬಂದದ್ದು ಅಟ್ಟದಲ್ಲಿಟ್ಟ ಒಂದು ಮುಡಿ ಅಕ್ಕಿ. ಕೂಡಲೇ ಗಂಡನ ಬಳಿ ಬಂದು ಅದನ್ನು ನೆನಪಿಸಿದರು. ಅದನ್ನು ಕೇಳಿದ ಅಜ್ಜನ ಗೆಳೆಯರು ಹೆಂಡತಿಯನ್ನು ಯಕ್ಷಗಾನದ ರಕ್ಕಸನ ಆರ್ಬಟೆಯಲ್ಲಿ ಬಯ್ಯುತ್ತಾ.. ’ಅಲ್ಲಾ ನಿನ್ನ ಬುದ್ಧಿಗೆಂತ ಮಣ್ಣು ಹಿಡಿದಿದೆಯಾ ಹೇಗೆ? ಅದು ಮರ್ಯಾದೆ ಹೋಗುವ ಕಾಲಕ್ಕೆ ಅಂತ ಇಟ್ಟದ್ದು’ ಎಂದರಂತೆ. ಆಗ ಗಂಡನ ಈ ಹುಚ್ಚಾಟಕ್ಕೆ ಬೇಸತ್ತ ಆಕೆ ’ಈಗಲೂ ಹೋಗದ ನಿಮ್ಮ ಮರ್ಯಾದೆ ಇನ್ನು ಹೋಗುವ ಕಾಲ ಬರಲಿಕ್ಕಿಲ್ಲ’ ಎಂದು ಗಟ್ಟಿಯಾಗಿ ನುಡಿದು ಅದನ್ನೆತ್ತಿ ತಂದು ಅಡುಗೆಯವರೆದುರು ಇಟ್ಟರಂತೆ.. 

ಇಂತಹ ಅಂತೆ ಕಂತೆಗಳ ಕಥೆಗಳು ನನ್ನ ಉಳಿತಾಯ ಖಾತೆಯಲ್ಲಿ ಇನ್ನೂ ಅನೇಕಾನೇಕವಿದೆ. ಅದನ್ನೆಲ್ಲಾ ನನ್ನ ಮರ್ಯಾದೆ ಹೋಗುವ ಕಾಲಕ್ಕೆ ಬೇಕಾದೀತು  ಅಂತ ಬಚ್ಚಿಟ್ಟಿದ್ದೇನೆ ಎಂದು ಹೇಳುವಲ್ಲಿಗೆ  ಈ ಉಳಿತಾಯ ಪುರಾಣಕ್ಕೆ ಮಂಗಳ ಹಾಡೋಣ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಉಳಿತಾಯ: ಅನಿತಾ ನರೇಶ್ ಮಂಚಿ

  1. ವಾವ್- ಚೆನ್ನಾಗಿದೆ – ನನಗೂ ಎರಡು ಡಾಲರ್ ಉಳಿಸಲು ಹತ್ತು ಮಾಲಗಳಿಗೆ ಓಡಾಡಿ ಇಪ್ಪತ್ತು ಡಾಲರ್ ಗ್ಯಾಸ ಖರ್ಚುಮಾಡುವ ಜಾಣರ ಪರಿಚಯವಿದೆ.

     

     

  2. ಉಳಿತಾಯ ಪ್ರಹಸನಗಳು ಚೆನ್ನಾಗಿವೆ ಮೇಡಂ…

Leave a Reply

Your email address will not be published. Required fields are marked *