ಲೇಖನ

ಉರಿಯುವ ಒಲೆಯೂ ಮತ್ತು ಹೊಳೆಯುವ ನಕ್ಷತ್ರವೂ ! : ಈರಮ್ಮ ಹಾವರಗಿ

ಈ ಬದುಕು ಕೇವಲ ಅನಿಶ್ಚಿತತೆಗಳ ನಡುವೆಯೇ ಕಳೆದು ಹೋಗಿ ಬಿಡುತ್ತದೆನೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಏನನ್ನು ಸಾಧಿಸಲಾಗದೆ, ಅಂದುಕೊಂಡಂತೆ ಬದುಕಲಾಗದೆ ಜೀವನ ವ್ಯರ್ಥವಾದರೆ ಹೇಗೆ ? ಎಂಬ ನನ್ನ ಮನದ ದುಗುಡವನ್ನು ಹೇಳುವುದಕ್ಕೂ ಆಗದ ಪರಿಸ್ಥಿತಿ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ, ಜೊತೆಗೆ ಮದುವೆ,ಮಕ್ಕಳು, ಸಂಸಾರವೆಂಬ ಸಮಾಜದ ಕಟ್ಟು ಪಾಡುಗಳಿಗೆ ಹೆದರಿದ್ದೇನೆ. ಹಾಗಂತ ನಾನು ಅದನ್ನೆಲ್ಲ ವಿರೋಧಿಸುತ್ತಿಲ್ಲ. ನಮ್ಮ ಕನಸುಗಳಿಗೆ ಬೆಲೆ ಕೊಡದೆ ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡಲಾಗುತ್ತಿದೆ, ಚಿಕ್ಕ ವಯಸ್ಸಿನಲ್ಲಿಯೆ ಮದುವೆ ಮಾಡಲಾಗುತ್ತಿದೆ. ನಮ್ಮ ಹಳ್ಳಿಗಳಲ್ಲಿ “ತೊಟ್ಟಿಲಿಗೆ ತಾಳಿ ಕಟ್ಟುವ” ಪದ್ಧತಿಯೂ ಜೀವಂತಿಕೆಯನ್ನು ಪಡೆದಿದೆ. ಹಾಗಾದರೆ ಹೆಣ್ಣಾದ ನಮಗೆ, ನಮ್ಮ ಕನಸುಗಳಿಗೆ ಬೆಲೆಯಿಲ್ಲವೇ ? ತಾತ್ಸಾರ ಮನೋಭಾವದ ಎಲ್ಲರಿಗೂ ನನ್ನ ಧಿಕ್ಕಾರವಿದೆ !

ತಿರಸ್ಕಾರ ಭಾವನೆ ಪುರುಷನ ಅಂತರಾಳದಲ್ಲಿ ನೆಲೆಯೂರಿದೆ ಮತ್ತು ಹುಟ್ಟಿದ್ದು ಹೆಣ್ಣು ಎಂದು ಗೊತ್ತಾದಾಗ ಅದು ಸ್ಪೋಟಗೊಳ್ಳುತ್ತದೆ ! ತುಂಬಾ ದುಃಖದ ವಿಷಯವೆಂದರೆ ನಗರ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ, ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಬಾಹುಗಳನ್ನು ಚಾಚಿದ್ದಾಳೆ ಇದಕ್ಕೆ ಹೋಲಿಸಿದರೆ ನಮ್ಮ ಹಳ್ಳಿಯ ಸ್ತ್ರೀಯ ಬದುಕು ಕೇವಲ ಮನೆ,ಕಸ,ಮುಸುರೆಗೆ ಸೀಮಿತಗೊಂಡಿರುವುದು ಸದಾ ನನ್ನನ್ನು ಕಾಡುತ್ತದೆ. ನಾವು ನಿರಂತರ ಹೋರಾಟದಲ್ಲಿ ತೊಡಗಿದ್ದೇವೆ ಒಂದಷ್ಟು ಸುಧಾರಣೆಯ ಹೆಜ್ಜೆಗಳಿಗಾಗಿ. ನಮ್ಮ ನಾಡು, ನುಡಿ, ಜಲವನ್ನು ಹೆಣ್ಣಿಗೆ ಹೋಲಿಸಲಾಗಿದೆ ಆದರೆ ನಮ್ಮ ವರ್ತಮಾನದ ಬದುಕು ಗುಲಾಮಗಿರಿಗಿಂತಲೂ ಕಡೆಯಾಗಿದೆ. ಹೆಣ್ಣು ಯಾವ ಕ್ಷೇತ್ರದಲ್ಲಿಯೂ ಹಿಂದೆ ಉಳಿದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಸಹ ಅವಳಿಗೆ ಕೈಲಾಗದವಳು ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿದೆ.

ನಾನು ಪ್ರತಿಭಟನೆಯ ಮಾತುಗಳನ್ನಾಡುತ್ತಿಲ್ಲ ಬದಲಾಗಿ, ಸ್ತ್ರೀಯ ಹಕ್ಕಿನ ಬಗ್ಗೆ ಚರ್ಚಿಸುತ್ತಿದ್ದೇನೆ. ಇಂದಿರಾಗಾಂಧಿ, ಮಮತಾ ಬ್ಯಾನರ್ಜಿ, ನಿರ್ಮಲ ಸೀತಾರಾಮನ್, ಸುಷ್ಮಾ ಸ್ವರಾಜ್, ಜಯಲಲಿತಾರಂತಹ ಘಟಾನುಘಟಿಗಳೆ ಆಳ್ವಿಕೆ ನಡೆಸಿದ್ದರೂ ಸಹ ನಮಗೆ ಸಂಸತ್ತಿನಲ್ಲಿ ಸಿಗಬೇಕಾದ ಪ್ರಾತಿನಿಧ್ಯ ದೊರಕಿಲ್ಲ. ಪುರುಷರಿಗೆ ಹೋಲಿಸಿದರೆ ಮಹಿಳಾ ರಾಜಕಾರಣಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ರಾಜಕೀಯ ಸ್ಥಾನಮಾನ, ಮೀಸಲಾತಿಯನ್ನು ಎಲ್ಲಾ ವರ್ಗದ ಸ್ತ್ರೀಯರಿಗೂ ಒದಗಿಸಬೇಕು.

ಭಾರತದ ಬಾಕ್ಸಿಂಗ್ ದಂತಕಥೆ ಹಾಗೂ ವಿಶ್ವ ದಾಖಲೆಯ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅಸಾಧಾರಣ ಕ್ರೀಡಾ ಪಟು. ನಮಗೆಲ್ಲರಿಗೂ ಸ್ಪೋರ್ತಿಯಾದ ಅವರು ಟೋಕಿಯೋ ಒಲಂಪಿಕ್ಸಗೆ ಅರ್ಹತೆಯನ್ನು ಪಡೆದಿದ್ದಾರೆ. ಅಚ್ಚರಿಯ ವಿಷಯವೆಂದರೆ ಅವರು ಎರಡು ಮಕ್ಕಳ ತಾಯಿ. ಇಷ್ಟು ಸಾಕಲ್ಲವೆ ಹೆಣ್ಣಿನ ತಾಕತ್ತು ಎಂತಹದ್ದು ಎಂದು ತಿಳಿದುಕೊಳ್ಳಲು, ಜೊತೆಗೆ ಹಿಮಾ ದಾಸ್, ದೀಪಾ ಮಲ್ಲಿಕ್, ಪಿ.ವಿ.ಸಿಂಧು, ಸೈನಾ ನೆಹ್ವಾಲ್, ದೀಪಾ ಕರ್ಮಾಕರ್, ಸಾನಿಯಾ ಮಿರ್ಜಾ ಇನ್ನು ಅನೇಕ ತಾರೆಗಳು ಭಾರತೀಯ ಕ್ರೀಡಾ ಲೋಕದಲ್ಲಿ ಮೀನುಗುತ್ತಿದ್ದಾರೆ.

ಐಪಿಎಸ್ ಅಧಿಕಾರಿಗೆ ತನ್ನ ಗಂಡ ಗೌರವ ಕೊಡುವುದನ್ನು ಕಂಡ ಪೊಲೀಸ್ ಪೇದೆಯ ಹೆಂಡತಿಯಾದ ಎನ್.ಅಂಬಿಕಾ ತಾನು ಕಷ್ಟ ಪಟ್ಟು ಓದಿ ಐಪಿಎಸ್ ಅಧಿಕಾರಿಯಾದಂತಹ ಜೀವಂತ ಕಥೆ ನಮ್ಮೆದುರಿಗಿದೆ. ಗಂಡನ ಮನೆಯಲ್ಲಿ ಕಿರುಕುಳ ತಡೆಯಲಾಗದೆ ಮಕ್ಕಳೊಂದಿಗೆ ತವರು ಮನೆಗೆ ಬಂದು ಅವಮಾನವನ್ನನುಭವಿಸಿ ಐಎಎಸ್ ಅಧಿಕಾರಿಯಾದ ಉದಾಹರಣೆಗಳಿಗೆ ಕೊರತೆಯಿಲ್ಲ. ಇಡೀ ವಿಶ್ವವೇ ಕೊರೊನಾ ವೈರಸನ ಹಾವಳಿಯಿಂದ ತತ್ತರಿಸಿ ಹೋಗಿದೆ, ನಮ್ಮ ದೇಶದ ಪರಿಸ್ಥಿತಿಯೇನು ಇದಕ್ಕೆ ಭಿನ್ನವಾಗಿಲ್ಲ, ಇಂತಹ ಸಂದರ್ಭದಲ್ಲಿ ತುಂಬು ಗರ್ಭಿಣಿಯಾದ ಡಾ.ಮಿನಾಲ್ ದೇಶದ ಮೊದಲ ಕೊರೊನಾ ವೈರಸ್ ತಪಾಸಣಾ ಕಿಟ್ ತಯಾರಿಸಿದರು. ಮತ್ತು ಆಕೆ ಮಾತಾನಾಡುತ್ತಾ “ಕಿಟ್ ತಯಾರಿಕೆ ಹಾಗೂ ಗರ್ಭವಸ್ಥೆ ಎರಡೂ ಒಂದೇ ಹಳಿಯ ಮೇಲೆ ಸಾಗಿತು ಈಗಾಗಿ ನಾನು ಎರಡು ಮಗುವಿಗೆ ಜನ್ಮ ನೀಡಿದ್ದೇನೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರಲ್ಲ, ಒಬ್ಬ ಸ್ತ್ರಿಯಾಗಿ ಇದಕ್ಕಿಂತ ಹೆಮ್ಮೆಯ ಸಂಗತಿ ಇನ್ನೇನಿದೆ ? ಹಾಗಾಗಿ ಹೆಣ್ಣನ್ನು ಗೌರವಿಸಿ, ಅವಳ ಸಾಧನೆಗೆ ಪ್ರೋತ್ಸಾಹಿಸಿ ಮತ್ತು ನಿಮಗೆಲ್ಲರಿಗೂ ಒಂದು ವಿಚಾರವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಾನು ಪುರುಷರನ್ನು ದ್ವೇಷಿಸುತ್ತಿಲ್ಲ, ನನಗೆ ಜನ್ಮವಿತ್ತ ತಂದೆ ನನ್ನ ಬದುಕಿನ ಹೀರೋ, ಪ್ರೀತಿ ತೋರಿಸುವ ಅಣ್ಣ-ತಮ್ಮಂದಿರು, ಗೌರವಿಸುವ ಸ್ನೇಹಿತ ಎಲ್ಲರೂ ಪುರುಷರೆ, ನಾನೂ ಅವರೆಲ್ಲರನ್ನು ಗೌರವಿಸುತ್ತೇನೆ, ಆದರೆ ನಮ್ಮ ಹಕ್ಕುಗಳ ವಿಚಾರದಲ್ಲಿ ರಾಜಿಯಿಲ್ಲ.

ಹೆಣ್ಣಿನ ಸೆರಗ ತುದಿಯಲ್ಲಿ ಸಾವಿರಾರು ಕನಸುಗಳಿವೆ ಮತ್ತು ಅವುಗಳಿಗಾಗಿ ಹೋರಾಡಲು ನಾವು ಸಿದ್ಧರಿದ್ದೇವೆ. ದೇಶಕ್ಕೆ ಕೀರ್ತಿಯನ್ನು ತರುವ ಕೆಲಸ ಮಾಡಲು ಮನಸ್ಸು ತುಡಿಯುತ್ತಿದೆ ಆದರೆ ಅವಕಾಶಗಳಿಲ್ಲ. ಗೆಲ್ಲುತ್ತೇವೆಂಬ ಭರವಸೆಯಿದೆ, ಸಾಧನೆಯಿಲ್ಲದ ಸಾವನ್ನು ನಾನು ಬಯಸುವುದಿಲ್ಲ. ಹಾಗಾಗಿ ಭವಿಷ್ಯದಲ್ಲಿ ಹೊಳೆಯುವ ನಕ್ಷತ್ರವಾಗಲು ನಾನು ಶ್ರಮಿಸುತ್ತಿದ್ದೇನೆ, ವರ್ತಮಾನದಲ್ಲಿ ಉರಿಯುವ ಒಲೆಯ ಮುಂದೆ ಕುಳಿತಿದ್ದೇನೆ.

ಈರಮ್ಮ ಹಾವರಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *