ಕಥಾಲೋಕ

ಉಬ್ಬಿಯ ಸ್ವಗತ……..: ಅಮರ್ ದೀಪ್ ಪಿ.ಎಸ್.

Amardeep
ಗೆಳೆಯ,
ಮೇರೆ ಬಾತೋ ಮೇ ತೇರಿ ಫಿಕರ್ ಸದಾ………………….
ಮೇರೆ ಯಾದೋಂ ಮೇ ತೇರಿ ಫಿಕರ್ ಸದಾ………………..
 
ಖುಷಿಯಾಗಬೇಡ, ನಿನ್ನ ನೆನಸ್ಕೊಂಡು ಈ ಹಾಡು ಗುನುಗುತ್ತಿಲ್ಲ.  ತುಂಬಾ ಹಾಯಾಗಿದ್ದೆ ಕಣೋ ನಾನು, ಸ್ವಾಭಿಮಾನಿ.  ಚಿಕ್ಕಂದಿನಲ್ಲಿ ನನ್ನಿಬ್ಬರು ಗೆಳತಿಯರೊಡನೆ ಹರಟುತ್ತಾ, ನಗುತ್ತಾ ಶಾಲೆಗೆ, ಕಾಲೇಜಿಗೆ ಹೋಗುವುದು ಓದು ಕಲಿಯಲು ಎನ್ನುವುದನ್ನೇ ಮರೆತು ತುಂಬಾ ನಲಿಯುತ್ತಿದ್ದೆ. ಕಾಲೇಜಿನಲ್ಲಿ ಚೂಡಿ ಹಾಕಿದರೆ ವೇಲ್ ಹಾಕದೇ ಹೊರಟರೆ, ಇದ್ದರೂ ಕೊರಳಿಗಷ್ಟೇ ಸುತ್ತಿಕೊಂಡು ತಿರುಗುವುದನ್ನು ನೋಡಿ ಫ್ಯಾಮಿಲಿ ಫ್ರೆಂಡ್ಸ್ ಥರವಿದ್ದ ಹುಡುಗನೊಬ್ಬ ಗದರಿಸಿ ವೇಲ್ ಧರಿಸಲು ಹೇಳಿದ್ದು ಈಗಲೂ ಕಿವಿಯಲ್ಲಿದೆ.  ಅಪ್ಪನಿಗೆ ನಾನು ಹೆಣ್ಣು ಮಗಳಾಗದೇ ಗಂಡುಬೀರಿ ಥರಾ ಪಟಪಟಾಂತ ವಟಗುಟ್ಟುತ್ತಿದ್ದರೆ “ಇವಳ ತಂಟೆಗೆ ಯಾರೂ ಬರಲಾರರು ಬಿಡು” ಅನ್ನುವಷ್ಟು ಸಲುಗೆ. ಇದ್ದ ಸಣ್ಣ ಹಳ್ಳಿಯಲ್ಲಿ ಮುಕ್ಕಾಲು ಗಂಟೆಯಲ್ಲಿ ಸುತ್ತಿದರೆ ಸಾಕು ಊರೇ ಮುಗಿದು ಹೋಗವಷ್ಟು ಕೊರಗು. ಅಪ್ಪಿತಪ್ಪಿ ಮೋಡ ಕಪ್ಪಿಟ್ಟರೆ ಸಾಕು, ಇದ್ದ ಸೈಕಲ್ ಏರಿ ಇಬ್ಬರು ಜೀವದ ಗೆಳತಿಯರನ್ನು ಎಳೆದುಕೊಂಡು ಸೀದಾ ಊರ ರಥಬಯಲಲ್ಲಿನ ಮಠದ ಅಂಗಳದಲ್ಲಿ ಹಾಜರು. ಇನ್ನೇನು ದೊಡ್ಡ ಹನಿಗಳು ಜಾರಿ ಜಿನುಗುತ್ತಿವೆಯೆಂದರೆ ಅಲ್ಲಿಂದ ಸೈಕಲ್ಲನ್ನು ನಡೆಸಿಕೊಂಡು ಆ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಮನೆಗೆ ಬರುವ ಹೊತ್ತಿಗಾಗಲೇ ಅಮ್ಮನ ಉರಿಗಣ್ಣು ಮತ್ತು ಮಳೆಯಲ್ಲಿ ನೆನೆದು ನೆಗಡಿ, ಜ್ವರ ವಕ್ಕರಿಸಿದರೆ ಹೇಗೆ? ಎನ್ನುವ ಕಾಳಜಿ. ನಾನು ಬೆಳೆದಂತೆ ಚಪ್ಪಲಿ ಚಿಕ್ಕದಾದವು. ತರುವ ಹೊಸ ಡ್ರೆಸ್ ದೊಡ್ಡದಿರುತ್ತಿರುದ್ದವು.  ಇಂಥಾದ್ದೇ ಬೇಕೆಂದು ಹಠ ಮಾಡಿದ ನೆನಪಿಲ್ಲ. ಅಷ್ಟಕ್ಕೂ ಅಪ್ಪ ಅಮ್ಮನ ಕಷ್ಟದ  ಜೀವನ ನನಗೆ ಚಿಕ್ಕಂದಿನಿಂದಲೂ ಹಾಸುಹೊಕ್ಕಿದೆ. ಬಹುಶ: ಅದೇ ನನ್ನ ಸ್ವಾವಲಂಭಿತನಕ್ಕೆ, ಸ್ವಂತ ದುಡಿದು ನೆಲೆ ಕಂಡುಕೊಳ್ಳಲು ಪ್ರೇರಣೆ.
 
ನನ್ನ ಗೆಳತಿಯರೆಲ್ಲಾ ಓದಿ ದಾಟಿದರೂ ನಾನಿನ್ನೂ ಪಿಯುಸಿಯಲ್ಲೇ ಡುಮ್ಕಿ ಹೊಡೆದು ಪಾಸಾಗಿದ್ದೆ.  ಅವರೆಲ್ಲಾ ಇಂಜನಿಯರಿಂಗ್ ಮತ್ತೊಂದು ಮಾಡಿಕೊಂಡರೆ, ನಾನು ಗೆಳತಿಯೊಬ್ಬಳು ಖಾಸಗಿ ಎಜ್ಯಕೇಷನ್ ಸಂಸ್ಥೆಯಲ್ಲಿ ಕಲಿಯಲು ಹೊರಟರೆ ಅವಳ ಜೊತೆಗೆಂದು ಹೋದೆ. ಅಲ್ಲಿನ ಕಲಿಕಾ ವಿದ್ಯೆಯೊಂದು ಕೈ ಹಿಡಿಯಿತು. ಅಲ್ಲಿಂದ ನೌಕರಿ, ದುಡಿಮೆ, ಕೆಲಸ ಎಲ್ಲವೂ ಕರಗತವಾಯಿತು.  ಆಗಲೂ ಗೆಳತಿಯರು ಸಿಕ್ಕರೆ ಮತ್ತದೇ ಹರಟೆ, ನಗು. ಕುಟುಂಬದ ದುರ್ಬರ ಹಣಕಾಸಿನ ಮುಗ್ಗಟ್ಟೆನ್ನವುದು ಬಿಟ್ಟರೆ, ಏನಿದ್ದಿಲ್ಲ ಆಗ?  ನನ್ನ ನಿಷ್ಕಲ್ಮಶ ನಗೆ, ಮಾತು, ನಿಷ್ಠೆಯ ಕೆಲಸ, ಸಹುದ್ಯೋಗಿಗಳ ಪ್ರೋತ್ಸಾಹ, ಉತ್ತಮ ನಡವಳಿಕೆ ಎಲ್ಲವೂ ನನ್ನ ಸ್ವಾವಲಂಭಿ ಜೀವನಕ್ಕೆ ದಾರಿಯೇ. ನಡುವೆ ಆಗಾಗ ಗೆಳತಿಯರು, ಸಹಪಾಠಿ ಗೆಳೆಯರು ಮನೆಗೆ ಬಂದರೆ ಸಾಕು ಮತ್ತದೇ ನಗು, ಹರಟೆ. ಚಿಕ್ಕ ಚಿಕ್ಕ ಸಂತೋಷ.
 
ಗೆಳತಿಯರಿಬ್ಬರೂ ಓದು ಮುಗಿಸಿ ನೌಕರಿ, ದೊಡ್ಡ ಸಂಬಳ, ನಗರವಾಸ, ಕಡೆಗೆ ವಿದೇಶದ ವಾಸಕ್ಕೂ ಒಗ್ಗಿಕೊಂಡಿದ್ದರೂ ನಾನಿಲ್ಲೇ ರಥಬಯಲ ಊರಲ್ಲೇ ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದೆ.  ಆಗೆಲ್ಲಾ ಗೆಳತಿಯರು ಅಮ್ಮ ಅಪ್ಪ, ಊರು, ಬಾಲ್ಯ, ಸಂಭಂಧಗಳಿಂದ ದೂರವಿದ್ದ ಹಳಹಳಿಯನ್ನು ಹಂಚಿಕೊಳ್ಳುತ್ತಿದ್ದರೆ “ನನ್ನದಿನ್ಯಾವಗೋ ವಲಸೆ ಪ್ರಹಸನ” ಅನ್ನಿಸಿದರೂ ಈಗಿದ್ದ ಗುಚ್ಚ ಪ್ರೀತಿ, ನೆನಪಿನಿಂದ ಹೊರಬರಲು ಮನಸ್ಸಾಗುತ್ತಿದ್ದಿಲ್ಲ.  ಇಪ್ಪತ್ತೈದು ಚಿಲ್ಲರೆ ವಯಸ್ಸಾದರೂ ಅಮ್ಮ ಇಷ್ಟದ ಅಡುಗೆ ಮಾಡಿ ತಿನ್ನಿಸಿ, ಕೆಲಸ ಹೊರಟಾಗ ಬುತ್ತಿ ಡಬ್ಬಿ ಕಟ್ಟುತ್ತಿದ್ದಳು.  ಇದನ್ನೇ ಆಗಾಗ ಗೆಳತಿಯರಲ್ಲಿ ಹೇಳುವ ಖುಷಿಯ ಮಧ್ಯೆದಲ್ಲಿ “ಅದರಿಂದ ದೂರ ಬಂದ ನಂತರ ನಿನ್ನ ಕಾಡುವ ಒಂಟಿತನ” ನಿನಗೆ ಪಾಠ ಕಲಿಸುತ್ತದೆನ್ನುವ ಮಾತುಗಳಿಗೆ ನಾನು ಕಿವಿಯಾಗುತ್ತಲೇ ಇರಲಿಲ್ಲ.  ಈ ಮಧ್ಯೆ ನಗರವಾಸಕ್ಕೆ ಜೀವ ಹೊಂದಿಕೊಂಡಿತು.
 
ರಥಬಯಲು ಬದಲಾಗಲಿಲ್ಲ. ಹಸಿರು ತಲೆಯೆತ್ತಲಿಲ್ಲ. ನಡೆದರೆ, ಅನುಭವಿಸಿದರೆ ತಬ್ಬಿ ಧಗೆ ಹತ್ತುವ ರಣಬಿಸಿಲ ಊರು. ಬದಲಾದದ್ದು ಮಾತ್ರ ನಮ್ಮ ಕಣ್ಣೆದುರಿನ ಬದುಕು,  ಎದ್ದರೇ ನಯವಾಗಿರುವ, ಬಿದ್ದರೆ ಹೊಸಕುವ ಜನರ ಮನೋಸ್ಥಿತಿ.  ಮೊದಲಿದ್ದಂತೆ ಧೋ ಮಳೆಯೂ ಇಲ್ಲ. ಗೆಳತಿಯರಿರಲಿ, ನಾನೊಬ್ಬಳಾದರೂ ರಥಬಯಲಿರಲಿ,  ಅಂಗಳದಲ್ಲೂ ನಿಂತು ನೆನೆಯಲು ಸ್ವಾತಂತ್ರ್ಯವಿಲ್ಲ.  ನಿಜ ಹೇಳಬೇಕೆಂದರೆ,  ಈಗಲೂ ಆಸೆ,  ಏನ್ಮಾಡ್ಲಿ, ನೆನೆಯಲು ಮನಸಿಲ್ಲ.  ಕಾರಣ, ಮನಸ್ಸೇ ಒಂದು ನದಿಯಂತಾಗಿದೆ.
 
ಅದೆಲ್ಲಿದ್ದೆಯೋ ಗೆಳೆಯ ನೀನು, ಒಂದೂರಿನವರಲ್ಲ, ಜೊತೆಗೆ ಬಾಲ್ಯ ಹಂಚಿಕೊಂಡವರಲ್ಲ, ಓದಿದವರಲ್ಲ,  ಅಂತೂ ಭೇಟಿಯಾದೆ.  ನಿನ್ನ ಸಿಟ್ಟು, ದುಡುಕುತನ, ಹಠಮಾರಿ ಕೆಲಸದ ಹಸಿವು ನೋಡಿದರೆ, ಇವನೆಂದಾದರೂ ಒಬ್ಬರಿಗೆ ಒಬ್ಬ ಗೆಳೆಯನಾಗಿಯಾದರೂ ಆಗಲು ಸಾಧ್ಯವಿಲ್ಲ ಅನ್ನಿಸಿದ್ದು ಸುಳ್ಳಲ್ಲ.  ಆದರೆ, ಹೊಸದೇನಾದರೂ ಕಲಿಯಲು, ಉಲ್ಲಾಸದಿಂದಿರಲು, ನಗಲು ನಿನ್ನಲ್ಲಿ ಯಾವುದೇ ಇಸಂಗಳಿರಲಿಲ್ಲ ಅನ್ನೋದೂ ಸಹಜ.  ದಿನಗಳೆದಂತೆಲ್ಲಾ ನಾನು ಕುಟುಂಬದ ನಿರ್ವಹಣೆಯಲ್ಲೇ ಮದುವೆಯ ಯೋಚನೆ ಮರೆತಿದ್ದೆ. ಮನೆಯವರ ನಿರ್ಧಾರಕ್ಕೆ ತಲೆಬಾಗಿ ಒಪ್ಪಿಕೊಂಡೂ ಬಿಟ್ಟಿದ್ದೆ. ನನಗೆ ಸ್ವಾವಲಂಭಿತನದಲ್ಲಿ ಹಠದ ಮನೋಭಾವವಿತ್ತೇ ಹೊರತು, ಹೊಂದಾಣಿಕೆ ಜೀವನ, ಬಂದದ್ದು ಬರಲಿ, ಎದುರಿಸುವ ಧೈರ್ಯವೊಂದಿರಲಿ ಎನ್ನುವ ಗುಣದವಳು ಕಣೋ ನಾನು. 
 
ಮದುವೆಯಾಗುವ ಮುನ್ನ ನಗರವನ್ನೂ ಬಿಟ್ಟು ದೂರ ದೇಶದ ದುಡಿಮೆಯ ಅನ್ನದ ಋಣ ಎಳೆದೊಯ್ಯಿತು. ಅದೆಲ್ಲಿತ್ತೋ ಶಾಪದಂಥ ಒಂಟಿತನ ಗೊತ್ತಿಲ್ಲ ಕಣೋ. ದಿನಗಳೆದಂತೆಲ್ಲಾ ಕೆಲಸ ಮತ್ತು ಮನೆ ಇವೆರೆಡೇ.  ಹಲ್ಲು ಕಿರಿದು ಮಾತನಾಡಲು ಅಡ್ಡಿಯಿದ್ದದ್ದು ಅಕ್ಕಪಕ್ಕದವರಿಗಿದ್ದ ಅವರದೇ ಪ್ರಪಂಚ. ಸಂಜೆಗೆ, ಮುಂಜಾನೆಗೆ ತಿಂಡಿಯಾಯ್ತಾ? ಅಡುಗೆಯಾಯ್ತಾ? ಪೂಜೆಯಾಯ್ತಾ? ಅಂತೆಲ್ಲಾ ಮಾತಾಡಿಸಲು ಮನಸ್ಸುಗಳೇ ಅಲ್ಲಿಲ್ಲ.  ಒಂದಿಷ್ಟು ಕನ್ನಡದ ಕತೆ, ಕಾದಂಬರಿಗಳ ಸರಕಿತ್ತು, ಜೊತೆಗೆ. ಓದಿದೆ, ಮುಗಿಸಿದೆ. ಮುಂದೆ?  ಇಡೀ ಮನೆಯಲ್ಲಿ ಒಬ್ಬಂಟಿಯಾಗಿ ನಾನೇ ಗೋಡೆಗಳಿಗೆ, ಕನ್ನಡಿಯೊಂದಿಗೆ, ಮೂಕ ದೇವರೊಂದಿಗೆ ಕೊನೆಗೆ ನನ್ನೊಂದಿಗೇ ಮಾತಾಡುತ್ತಾ ತಿರುಗಬೇಕು. ಅಡುಗೆ ಮನೆಯಲ್ಲಿ ಅಮ್ಮನಿಲ್ಲ. ಪಡಸಾಲೆಯಲ್ಲಿ ನಿವೃತ್ತ ಅಪ್ಪನಿಲ್ಲ.  ನೆನೆದಾಗ ಬಂದೆನೆಂದರೆ, ಗೆಳತಿಯರಿಲ್ಲ. ಹೋಗಲಿ ಇದ್ದ ಊರಲ್ವಾ? ಚೂರು ರಥಬಯಲಲ್ಲಿ ಹೆಜ್ಜೆ ಹಾಕಿ ಬರುವಂತೆಯೂ ಇಲ್ಲ. ಏನ್ಮಾಡ್ಲಿ?  ದುಬಾರಿ ಫೋನಿದೆ, ಮಾತೂ ಆಡುತ್ತೇವೆ.  ಫೋನಿಟ್ಟ ಕ್ಷಣದಿಂದಲೇ ಒಬ್ಬಂಟಿ.   ಮಾತಾಡ ಬಯಸಿದರೂ ಮುಖ ಕೊಟ್ಟು ನಕ್ಕಂತಿರದ ಸಂಭಾಷಣೆಗಳು.  ದೂರದಿಂದ ಎಲ್ಲರೂ  “ಹುಷಾರು, ಆಗಾಗ ಫೋನ್ ಮಾಡು, ಇಲ್ಲ ನಾವೇ ಮಾತಾಡ್ತೀವಿ. ಒಬ್ಳೇ ಇದೀನಂತಾ ಬೇಸರ ಮಾಡ್ಕೊಬೇಡ…………..” ಹೀಗೆ. 
 
ದೂರವಿದ್ದರೂ ಚಿಕ್ಕ ಚಿಕ್ಕ ಸಂತೋಷ ಹಂಚಿಕೊಳ್ಳಲು ಒಂದು ಹಾಡು, ಜೋಕು, ಚೂರು ಸಮಾಧಾನದ ಮಾತು, ಒಂದೊಂದರಿಂದಲೇ  ಹತ್ತಿರಾದಾಗ ನಿನ್ನ ಹಳೆ ಸಿಡುಕು ಮುಖ, ಸಿಟ್ಟು ಇವೆಲ್ಲಾ ನಿನ್ನವಾ? ಅನ್ನಿಸ್ತಿತ್ತು.  ನನ್ನ ಒಂಟಿತನಕ್ಕೊಬ್ಬ ಗೆಳೆಯ ಸಿಕ್ಕ. ಮೊದಮೊದಲು ನಿಮಿಷಗಳ ಮಾತು, ಗಂಟೆಗಳ ಲೆಕ್ಕದಲ್ಲಿ ಸಾಗಿತು.  ಮಾತು ಕೆಲಸ, ಆರೋಗ್ಯದಿಂದ ಹಿಡಿದು,  ಹಳೆಯ ಅನುಭವದ ಕಥನಗಳನ್ನು ಹಂಚಿಕೊಳ್ಳುವಷ್ಟು ಸಲೀಸಾಗಿದ್ದವು. ಒಬ್ಬಳೇ ಇದ್ದರೆ ಏನಾದರೂ ಆಗಿಬಿಡುತ್ತದೆ ಅಥವಾ ನಾನೇನಾದರೂ ಮಾಡಿಕೊಂಡುಬಿಡುತ್ತೇನೆನ್ನುಷ್ಟು ಕೊರಗುತ್ತಿದ್ದ ನನ್ನನ್ನು ತುಸು ಹಗುರಾಗಿಸಿದವನು ನೀನು.  ಬಾಲ್ಯದ ಗೆಳೆಯ ಮತ್ತು ಅತ್ತೆಯ ಮಗನ ಹೆಸರಿನ ಅರ್ಧ ಪಾಲು ನಿನಗಿತ್ತೆನ್ನುವುದು ಬಿಟ್ಟರೆ ನಿನ್ನ ಇಷ್ಟಪಡುವಂಥಾ ಪ್ರೀತಿಸುವಂಥ ಯಾವುದೇ ಆಸೆಗಳಿದ್ದಿಲ್ಲ ನನಗೆ.  ಆದರೆ, ನಿನ್ನ ವ್ಯಕ್ತಿತ್ವ ಇಷ್ಟವಾಗಿತ್ತು.
 
ಪ್ರತಿ ಕರೆ ಮಾಡಿದಾಗಲೂ “ಈ ಬಾರಿ ದೇಶಕ್ಕೆ ಬಂದ್ರೆ ಚೂರು ಭೇಟಿ ಮಾಡು, ಪ್ಲೀಸ್ ……… ” ಅನ್ನುವಾಗ ಮಾತ್ರ ನಿನ್ನೆಡೆಗೆ ಒಂದು ಸಾಫ್ಟ್ ಕಾರ್ನರ್. ಅದು ನಿನ್ನಲ್ಲಾದ ಬದಲಾವಣೆಯ ಸೂಚನೆ.  ಅಂತೂ ಅದೊಮ್ಮೆ ಹಿಂದಿರುಗಿದಾಗ ಭೇಟಿಯೇನೋ ಆದೆ.  ಹಿರಿ ಹಿರಿ ಹಿಗ್ಗಿ ಫೋನಲ್ಲಿ ತಾಸುಗಟ್ಟಲೇ ಮಾತಾಡುತ್ತಿದ್ದ ನೀನು ಎದುರಿಗೆ ತಡವರಿಸಿದ ರೀತಿ ನೋಡಿದರೆ, ನನಗೇ  ಸಂಕಟವಾಗುತ್ತಿತ್ತು.  ಭೇಟಿಯಾದ ಖುಷಿಗೆ ರೆಸ್ಟುರಾಂಟ್ ಒಂದರಲ್ಲಿ ಎದುರುಬದುರು ಕುಳಿತರೆ ನನ್ನ ಕಣ್ಣ ಆಳದೊಳಕ್ಕೆ ಇಳಿದ ನಿನ್ನ ಭರಿಸುವುದೇ ಕಷ್ಟವಾಗಿತ್ತು ಕಣೋ.    ಸುತ್ತ ಟೇಬಲ್ ಗಳು ಖಾಲಿ ಇದ್ದರೂ ಜನ ಅಲ್ಲಿ ಕುಳಿತು ನಮ್ಮಿಬ್ಬರನ್ನೇ ಗುರಾಯಿಸುತ್ತಿದ್ದಾರೆಂಬ ದಿಗಿಲು ಬೇರೆ. ಆ ಕಡೆ ನೋಡುವಷ್ಟರಲ್ಲಿ ಅರ್ಧ ಚಂದ್ರಾಕಾರದಲ್ಲಿ ತೆರೆದ ರವಿಕೆಯ ನುಣುಪು ಬೆನ್ನಿಗೆ ಮುತ್ತನಿಟ್ಟು ತಬ್ಬಿಬ್ಬು ಮಾಡಿಬಿಟ್ಟೆಯಲ್ಲಾ  ಪಾಪಿ,  ಹೇಗಾಗಿರಬೇಡ?  ಆಗ ಮಾತ್ರ ನನಗೆ ಗಂಡನಾಗುವ ಹುಡುಗನ ಚಿತ್ರ ಕಣ್ಣೆದುರಿಗೆ ನಿಂತಂತಾಯಿತು.  
 
ಹುಡುಗಿಯರಿಗೆ ಹುಡುಗರಿಗಿರುವಷ್ಟು ಆತುರವಷ್ಟೇ ಅಲ್ಲ. ಅವಸರವೂ ಇರುವುದಿಲ್ಲವೆನ್ನುವ ಸಣ್ಣ ಸಂಗತಿ ಗೊತ್ತಾಗಲಿಲ್ಲ ಕಣೋ ನಿಂಗೆ? ಸಂಯಮದಿಂದ ಕೂತು ಆಡಿದ್ದರೆ ಚೆಂದಗೆ ನಕ್ಕು ನಾಲ್ಕು ಮಾತಾದರೂ ಆಗುತ್ತಿದ್ದವು. ಹಾಳುಗೆಡವಿಬಿಟ್ಟೆ.   ನನ್ನ ಒಂಟಿತನಕ್ಕೆ ನಗು ಬೆರೆಸಿ ಮಾತಾದ ಮಾತ್ರಕ್ಕೆ ನೀನು ಗೆಳೆಯನಿಂದ ಇನಿಯನಾಗಬಲ್ಲೆಯಾ? ಅಥವಾ ನಕ್ಕು ಹಗುರಾಗಿ ಸನಿಹಳಾದ ಮಾತ್ರಕ್ಕೆ ನಿನ್ನ ತೆಕ್ಕೆಗೆ, ಪ್ರೀತಿಗೆ ಬಿದ್ದೆನೆಂದು ಅದ್ಹೇಗೆ ಅಂದ್ಕೊಂಡೆ?  ಇಳಿಸಂಜೆ ಹೊತ್ತು ಗಾಡಿಯ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಎದ್ದು ಬಂದದ್ದೇ ಮನೆಯಲ್ಲಿ ಒಂದೂ ಮಾತಾಡದೇ ಕುಳಿತವಳಿಗೆ ಹೊಳೆದದ್ದು “ಇವನು ಇನಿಯ-ನಲ್ಲ, ತುಂಬ ಸನಿಹ ಬಂದಿಹನಲ್ಲ……………….” ಸಾಲು.  
ನೀನೇ ಹೆಸರಿಟ್ಟಂತೆ……….ಉಬ್ಬಿ…………  (!) ………….


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *