ಕಲೆ-ಸಂಸ್ಕೃತಿ

ಉಪವಾಸ ನಿರತ ಕಾಲ ರಂಜಾನ್: ಬಂದೇಸಾಬ. ಮೇಗೇರಿ ರಾಮಾಪುರ

ರಂಜಾನ್ ಮುಸ್ಲಿಮರ ಪಾಲಿನ ವಸಂತ ಮಾಸವಾಗಿದೆ. ರಂಜಾನ್ ಮಾಸವು ಪುಣ್ಯಗಳನ್ನು ಬಾಚಿಕೊಳ್ಳುವ ತಿಂಗಳಾಗಿದೆ. ಜಗತ್ತಿನ ಎಲ್ಲ ಮುಸ್ಲಿಮರು ಭಯ, ಭಕ್ತಿಯಿಂದ ಆಚರಿಸುವ ಹಬ್ಬ ಇದಾಗಿದೆ. ಈ ತಿಂಗಳಲ್ಲಿ ಮುಸ್ಲಿಮ್ ಬಾಂಧವರೆಲ್ಲ ಪುಳಕಿತಗೊಳ್ಳುತ್ತಾರೆ. ಏಕೆಂದರೆ ಇದು ಪವಿತ್ರ ಕುರ್‍ಆನ್ ಅವತರಿಸಿದ ಮಾಸ. ಒಳ್ಳೆಯ ಕೆಲಸಗಳನ್ನು ಮಾಡುತ್ತ ನಮಾಜ್, ದಾನ-ಧರ್ಮ(ಜಕಾತ್) ದಂತಹ ಪುಣ್ಯ ಕರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಮಹಮ್ಮದ್(ಸ) ಪೈಗಂಬರರು ಈ ಮಾಸದಲ್ಲಿ ಬಲು ಉದಾರಿಗಳಾಗಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಹಗಲು ರಾತ್ರಿಯೆಲ್ಲಾ ಸೃಷ್ಠಿಕರ್ತನ ಆರಾಧನೆಯಲ್ಲಿ ತೊಡಗಿರುತ್ತಾರೆ. 

ಅಮವಾಸ್ಯೆಯಾದ ಎರಡು ದಿನಗಳ ನಂತರ ಆಗಸದಲ್ಲಿ ಚಂದ್ರನ ಆಗಮನದಿಂದಲೇ ಈ ರಂಜಾನ್ ಉಪವಾಸ ಆರಂಭ. ಪ್ರತಿದಿನ, ಒಂದು ತಿಂಗಳು ಕಾಲ 3-4 ಗಂಟೆಗೆ ನಸುಕಿನಲ್ಲೇ ಏಳುತ್ತಾರೆ. ರೋಜಾ ಹಿಡಿಯುವ ಸಮಯದ ಒಳಗೆ ಭೋಜನ ಕಾರ್ಯ ಮುಗಿದಿರಬೇಕು. ಅದರ ನಂತರ ಬಾಯಿಯಲ್ಲಿ ಯಾವುದೇ ತೆರನಾದ ತಿನ್ನುವ ವಸ್ತುಗಳನ್ನು ಹಾಕಬಾರದು. ನೀರನ್ನೂ ಕೂಡಾ ಕುಡಿಯುವ ಹಾಗಿಲ್ಲ. ಸತತ ಒಂದು ತಿಂಗಳ ಕಾಲ ಮಸ್ಲಿಮರು ಹಗಲು ಹೊತ್ತು ಅನ್ನ, ಆಹಾರ, ಆಸೆ, ಲೈಂಗಿಕ ಕಾಮನೆಗಳನ್ನು ತೊರೆದು ಭಕ್ತಿಯಿಂದ ದಿನವೂ 5 ಬಾರಿ ನಮಾಜು ಮಾಡುತ್ತಾ ವೃತವನ್ನು ಆಚರಿಸುತ್ತಾರೆ. ಸೂರ್ಯೋದಯಕ್ಕೆ ಮುನ್ನ ಸೇವಿಸುವ ಶಹರಿ ಭೋಜನದಿಂದ ಆ ಘಳಿಗೆಯಿಂದ ವೃತ ಆರಂಭವಾಗುತ್ತದೆ. ಸಾಯಂಕಾಲ ಸೂರ್ಯ ಮುಳುಗುವ ಹೊತ್ತಿನಲ್ಲಿ ಹಣ್ಣು ಹಂಪಲು, ಖರ್ಜೂರಗಳನ್ನು ಸೇವಿಸಿ, ಉಪವಾಸವನ್ನು ಮುರಿಯುತ್ತಾರೆ. ಸುಮಾರು 13 ಗಂಟೆಗಳ ಕಾಲ ಉಪವಾಸವಿರಬೇಕಾಗುತ್ತೆ. ಇದಕ್ಕೆ ಇಫ್ತಾರ್ ಎಂದು ಕರೆಯುತ್ತಾರೆ. ರಾತ್ರಿ  ವಿಶೇಷ ತರಾವೀಹ್ ನಮಾಜ್ ನಿರ್ವಹಿಸಲಾಗುತ್ತದೆ.

ಒಂದು ತಿಂಗಳಲ್ಲಿ ಎಲ್ಲ ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲಬೇಕು.ಅದನ್ನೇ ಉಳಿದ 11 ತಿಂಗಳಲ್ಲೂ ಪಾಲಿಸಬೇಕು. ಉಪವಾಸ ನಿತರನ ಕಣ್ಣ ಮುಂದೆ ಎಂತಹ ಮೃಷ್ಟಾನ್ನ ಭೋಜನವಿಟ್ಟರೂ ಅತ್ತ ಕಡೆ ಮನಸ್ಸು ವಾಲಬಾರದು. ಒಬ್ಬ ವ್ಯಕ್ತಿಯ ಹಿಂದಿನ ಪಾಪಗಳೆಲ್ಲವನ್ನು ಕ್ಷಮಿಸಬೇಕೆಂದರೆ ನಂಬಿಕೆ, ವಿಶ್ವಾಸದಿಂದ ಉಪವಾಸ ಕೈಗೊಂಡಲ್ಲಿ ಆ ದೇವ ಪಾಪದಿಂದ ಮಾಫೀ ಮಾಡುತ್ತಾನೆ ಎಂದು ಮಹಮ್ಮದ್ ಪೈಗಂಬರರು ಹೇಳಿದ್ದಾರೆ.

ಈ ಪವಿತ್ರ ಮಾಸದಲ್ಲಿ ಮುಸ್ಲಿಮ್ ಬಾಂಧವರೆಲ್ಲ ದಾನ, ಧರ್ಮಗಳಲ್ಲಿ ನಿರತರಾಗಬೇಕು. ಬಡವರು, ಅನಾಥರು, ವಿಧವೆಯರು, ನಿರ್ಗತಿಕರ ಕಣ್ಣೊರೆಸುವ ಕೆಲಸ ಮಾಡಬೇಕು. ರಂಜಾನ್ ತಿಂಗಳ ಕೊನೆ ವಾರದಲ್ಲಿ ಬರುತ್ತೆ. ಅದೇ ‘ಲೈಲತುಲ್ ಖುದ್ರ್’ – ಈ ರಾತ್ರಿಯೇ ಕುರ್‍ಆನ್ ಅವತೀರ್ಣಗೊಂಡಿರುತ್ತದೆ. ಇದು ಶ್ರೇಷ್ಟವಾದ ದಿನವಾಗಿದೆ. ಅಂದು ರಾತ್ರಿ ಇಡೀ ಬೆಳಕಿನ ಜಾವದವರೆಗೂ ನಮಾಜು ಮಾಡುತ್ತಾರೆ. ಹಲವಾರು ರಕಾತ, ಸುನ್ನತ್ ಕೈಗೊಂಡು ಜಾಗರಣೆ ಮಾಡಲಾಗುತ್ತದೆ.

ಈದ್ ಎಂದರೆ ಅರಬ್ಬಿ ಭಾಷೆಯಲ್ಲಿ ಸಂತೋಷ, ಆನಂದ ಮತ್ತೆ ಮರಳಿ ಬರುವುದು ಎಂದರ್ಥ. ಇದರಲ್ಲಿ ಫೀತ್ರ್ ಎಂದರೆ ದಾನ. ಬಡವರು ಶ್ರೀಮಂತರು ಎನ್ನದೇ ಪ್ರತಿಯೊಬ್ಬರೂ ಸಾಧ್ಯವಾದಷ್ಟು ದಾನ ಧರ್ಮಾಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಇದರಲ್ಲಿ ಸಮನ್ವಯತೆ ಇರಬೇಕು. ಬಡ ಬಗ್ಗರಿಗೆ ಸಾಮಾನ್ಯವಾಗಿ ದಾನ ನೀಡುತ್ತಾರೆ. ದಾನ ನೀಡುವುದನ್ನು ಜಕಾತ್ ಎಂದು ಕರೆಯುತ್ತಾರೆ. ಇದು ಇಸ್ಲಾಮ್ ಧರ್ಮದಲ್ಲಿ ಕಡ್ಡಾಯವಾಗಿ ನೀಡಲೇಬೇಕಾದ ಕರ್ತವ್ಯವಾಗಿದೆ. 

ವರ್ಷಾನುಪೂರ್ತಿ ನಮ್ಮ ದೇಹದ ಜೀರ್ಣಿಸುವ ಯಂತ್ರವು ಸ್ವಲ್ಪ ದಿನವಾದರೂ ವಿಶ್ರಾಂತಿ ಸಿಗಲೆಂದು ಈ ರೋಜಾ ಉಪವಾಸ ಕೈಗೊಳ್ಳಲಾಗುವುದು. ಇದರಿಂದ ಜೀರ್ಣಕ್ರಿಯೆಗೆ ಸಮತೋಲನವನ್ನು ನೀಡುತ್ತದೆ. ಆಯುರ್ವೇದದಲ್ಲಿ ಉಪವಾಸಕ್ಕೆ ತನ್ನದೇಯಾದ ಸ್ಥಾನವಿದೆ. ಉಪವಾಸ ವ್ರತದಿಂದ ಶಿಸ್ತು, ಸಂಯಮ, ಸಹನೆ ಬೆಳೆಯುತ್ತದೆ. ಇದು ರಂಜಾನ್‍ನಿಂದ ದೊರೆಯುವ ತರಬೇತಿಯಾಗಿದೆ.

ಶವ್ವಾಲ್ ತಿಂಗಳಲ್ಲಿ ನಸುನಕ್ಕ ಚಂದಿರನ ದರ್ಶನವಾಗುವವರೆಗೂ ಈದ್ ಹಬ್ಬ ಯಾವಾಗ ಆಚರಿಸುವುದು ಎಂಬುದು ಖಚಿತ ಇರುವುದಿಲ್ಲ. ರಂಜಾನ್ ಪ್ರಯುಕ್ತ ಮನೆಯ ಯಜಮಾನ ಎಲ್ಲ ಸದಸ್ಯರಿಗೂ ಹೊಸ ಬಟ್ಟೆ ಬರೆಗಳನ್ನು ತಂದು ಕೊಡುತ್ತಾನೆ.

ಅಲ್ಲಾಹನ  ಮಹಾನತೆಯನ್ನು ನೆನಪಿಸುವುದರ ಜೊತಗೆ ದೇವನ ದಾಸರೆಂಬ ಪ್ರಜ್ಞೆಯನ್ನು ಈ ಮೂಲಕ ಜಾಗೃತಗೊಳಿಸಲಾಗುತ್ತದೆ. ಬಡವ ಬಲ್ಲಿದ ಎನ್ನದೇ ಪರಸ್ಪರ ಆಲಂಗಿಸಿಕೊಳ್ಳುತ್ತಾರೆ. ಪ್ರಾರ್ಥನೆಯ ಬಳಿಕ ಪರಸ್ಪರ ಈದ್ ಮುಬಾರಕ್ ಎಂದು ಒಬ್ಬನು ಹೇಳಿದರೆ, ಪ್ರತಿಯಾಗಿ ಖೈರ್ ಮುಬಾರಕ್ ಎಂದು ಹೇಳುವ ಮೂಲಕ ಶುಭಾಷಯಗಳನ್ನು ಹೇಳುತ್ತಾರೆ. ಅಭಿನಂದಿಸುತ್ತಾರೆ. 

ಹಬ್ಬದಲ್ಲಿ ಸಿಹಿ ಖಾದ್ಯಗಳನ್ನು, ಸುರ್‍ಕೂರ್ಮ, ಬಿರಿಯಾನಿ, ಘಮಘಮ ಎನ್ನುವ ಅಡುಗೆ ಮಾಡಿ ಅತಿಥಿಗಳನ್ನು ಮನೆಗೆ ಕರೆ ತಂದು ಊಟ ಮಾಡಿಸಿ ಕಳುಹಿಸುತ್ತಾರೆ.  

ಈ ಭೂಮಿ ಮೇಲೆ ನೆಮ್ಮದಿಯಿಂದ ಕೂಡಿದ ಜೀವನವನ್ನು ನಾವು ಕೈಗೊಂಡರೆ ಸ್ವರ್ಗದಲ್ಲಿ ನಮ್ಮದೇ ಯಶಸ್ಸನ್ನು ಕಾಣಬಹುದಾಗಿದೆ. ಇದುಲ್ ಫಿತ್ರ್, ಬ್ರಾತೃತ್ವ, ಸೌಹಾರ್ಧ, ಶಾಂತಿ, ನೆಮ್ಮದಿ, ಸಮಾನತೆ, ಜಾತಿ ಧರ್ಮದ ಅಂತರ ಮೆರೆದ ಪ್ರೀತಿಯ ಹಬ್ಬವೇ ದರ ಜೀವಾಳ.

*****

            

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *