ಉಪದ್ವ್ಯಾಪಿ:ಉಮೇಶ್ ದೇಸಾಯಿ

 

ಹುಬ್ಬಳ್ಳಿಯಿಂದ ಬಿಟ್ಟ ರಾಜಹಂಸ ಹರಿಹರಕ್ಕ ಬಂದಾಗ ಲೇಟಾಗಿತ್ತು. ಸೀಟ್ ನಂ೭ರಲ್ಲಿ ಕುಳಿತ ನಮ್ಮ ನಾಯಕನಿಗೆ ಎಚ್ಚರವಾಗಿದ್ದು ಅಲ್ಲಿ ಹತ್ತಿದ ಪ್ರಯಾಣಿಕ ಕಂಡಕ್ಟರ್ ಜೋಡಿ ವಾದಕ್ಕಿಳಿದಾಗ. ಪ್ರಯಾಣಿಕ ಮುಂಗಡ ಟಿಕೆಟ್ ಮಾಡಿಸಿದ್ದ. ಯಶವಂತಪುರದಾಗ ಮುಂದ ಹೋಗಲಿಕ್ಕೆ 

ಗಾಡಿ ಹಿಡಿಯುವನಿದ್ದ. ಬಸ್ಸು ಹರಿಹರಕ್ಕ ಮುಟ್ಟಿದ್ದು ಒಂದು ತಾಸು ತಡಾ. ಇದು ಅವನ ಕ್ಷೋಭೆಗೆ ಕಾರಣ. ಆ ಪಯಣಿಗನ ಜೋಡಿ ಹೆಂಡತಿ,ಎರಡು ಮಕ್ಕಳು ಇದ್ರು. ಅಕಿನೂ ಚಾಲಕ/ನಿರ್ವಾಹಕರಿಗೆ ಮಂಗಳಾರತಿ ಎತ್ತಿದ್ಲು. ಬಸ್ಸು ಹುಬ್ಬಳ್ಳಿ ಹತ್ತಿರದ ವರೂರ ಹತ್ರ ಊಟಕ್ಕ ನಿಲ್ಸಿದ್ದು ಅದೂ ಅರ್ಧ ತಾಸುಗಟ್ಟಲೇ ಈ ಪರಿ ಲೇಟಾಗಲಿಕ್ಕೆ ಕಾರಣ ಅಂತ ನಮ್ಮ ನಾಯಕ ನಿರ್ವಾಹಕನಿಗೆ ಹೇಳಿದ. ಈ ನಶ್ವರ ಬಸ್ಸಿನಲ್ಲಿ ಸಿಕ್ಕ ಈ ಅಭೂತಪೂರ್ವ ಸಪೋರ್ಟು ನೋಡಿ ಹರಿಹರದಲ್ಲಿ ಹತ್ತಿದ ಗಂಡಸು ಉಬ್ಬಿದ. ನಿರ್ವಾಹಕ ಬೈಸಿಕೊಂಡ. ಒಗ್ಗರಣಿ ಹಾಕಿದ ನಮ್ಮ ನಾಯಕನ ಮೇಲೆ ದುಮುಗುಟ್ಟಿದ.

ಹರಿಹರದಾಗ ಆ ಫ್ಯಾಮಿಲಿ ಜೊತಿ ಒಬ್ಬಾಕಿನ ಇದ್ದ ಯುವತಿನೂ ಹತ್ತಿದ್ಲು. ಅಕಿಗೆ ಬಿಡಲಿಕ್ಕೆ ಬಂದ ವಯಸ್ಸಾದ ವ್ಯಕ್ತಿ ,ಆ ಹುಡುಗಿ ಅಪ್ಪ ಇರಬೇಕು ಕಂಡಕ್ಟರ್ ಗ ವಿನಂತಿ ಮಾಡಿ ಕಾಳಜಿತಗೊಳ್ಳಲು ಕೇಳುತ್ತಿದ್ದ. ನಿರ್ವಾಹಕನ ಮೈ ಮ್ಯಾಲ ಸೇವಾಭೂತ ಆವಾಹಿಸಿಕೊಂಡು ಆ ಯುವತಿಯ ಸೂಟಕೇಸ್ ಲೇಡಿಸಗಂತ ಮೀಸಲಿಟ್ಟ ಮುಂದಿನ ಸೀಟಿನ ಕೆಳಗ ಇಟ್ಟ. ಅಕಿ ಅಪ್ಪ ಇನ್ನೊಮ್ಮೆ ನಿರ್ವಾಹಕನಿಗೆ ಕೇಳಿಕೊಂಡು ಕೆಳಗಿಳಿದು ಹೋದ. ಅಂತೂಇಂತೂ ಹರಿಹರ ಬಸ್ ನಿಲ್ಡಾಣ ದಾಟಿ ಹೊರಡ್ತು. ರಸ್ತೆ ತಿರುವಿನ್ಯಾಗ ಯಾರೋ ಕೈ ತೋರಿಸಿದ್ರು, ಮತ್ತ ನಿಂತು ಕೈ ತೋರಿಸಿದ ಯುವಕನನ್ನು ಹತ್ತಿಸಿಕೊಂಡು ಹೊರಟಿತು. ಬಸ್ಸು ಅರ್ಧಾಕ್ಕರ್ಧ ಖಾಲಿ ಇತ್ತು. ಯುವಕ ಹಿಂದ ಹೋಗಿ ಕೂತ. 

ನಮ್ಮ ನಾಯಕನ ಹಿಂದ ವಯಸ್ಸಾದ ದಂಪತಿ ಕೂತಿದ್ರು. ಯಜಮಾನ್ರ ಹಣಿಮ್ಯಾಲಿನ ಅಕ್ಷಂತಿ, ಆ ಹೆಣ್ಣಮಗಳು ಹಚಕೊಂಡ ಕುಂಕುಮದ ಸ್ಟೈಲು ಅವರು ಪಕ್ಕಾ ಸಂಪ್ರದಾಯವಾದಿ ಅನ್ನೂದನ್ನು ಜಗಜ್ಜಾಹೀರು ಮಾಡಿತ್ತು. ನಾಯಕನ ಸಮಾನಾಂತರವಾಗಿ ಒಂದು ಫ್ಯಾಮಿಲಿ ಕೂತಿತ್ತು

ಸೀಟು ನಂ ೯ ಮತ್ತು ಹತ್ತರಾಗ. ಹೆಂಡತಿಗೆ ವಯಸ್ಸು ಸಣ್ಣದು. ಮೇಲಾಗಿ ನೋಡಲಿಕ್ಕೆ ಛಂದ ಇದ್ಲು ಗಂಡ ಸ್ವಲ್ಪ ವಯಸ್ಸಾದವರಂಗ. ತಲಿ ಟಕ್ಕಲ್ ಬಿದ್ದಿತ್ತು. ಅವ ನಮ್ಮ ನಾಯಕಗ ಹಿತವಚನ ಹೇಳಿದ. ಅಡ್ಜಸ್ಟ ಮಾಡ್ಕೋಬೇಕ್ರಿ ಜೀವನದಾಗ ಇದು ಅವನ ಘೋಷವಾಕ್ಯ..! ಅವರ ಮಾತು ಮೊದಲ ಕೇಳಿದ್ದ ನಾಯಕ ಅವರು ಪಕ್ಕಾ ಹುಬ್ಬಳ್ಳಿಯವ್ರು. ಮೇಲಾಗಿ ಅವರು ಒಂದು ಬಾಕ್ಸುತುಂಬ ರೊಟ್ಟಿ ತಗೊಂಡು ಹೊರಟಿದ್ರು. ಕಂಡಕ್ಟರ ಕೇಳಿದಾಗ ಅವರು ಹಿಂಗ ಹೇಳಿದ್ದು ನಾಯಕಗ ನೆನಪಿತ್ತು ಪಕ್ಕಾ ಹುಬ್ಬಳ್ಳಿ ಮಂದಿಗೂ ಈ ಬೆಂಗಳೂರಿನ ಬೀಜಮಂತ್ರ "ಅಡ್ಜಸ್ಟಮೆಂಟ್ " ಬಾಯಿಪಾಠ ಆಗಿದ್ದು ನಾಯಕಗ ಬ್ಯಾಸರ ಅನಿಸಿತು. ಇವನ ಹಿಂದ ಕುಳತ ಆ ಹಿರಿಮುತ್ತೈದೆಗೆ ಆ ಯುವತಿ ಹಿಂಗ ಒಬ್ಬಾಕಿನ ಬಸ್ಸಿನ್ಯಾಗ ಅಡ್ಡಾಡುವುದು ಮನಸ್ಸಿಗೆ ಬಂದಿರಲಿಲ್ಲ ತಮ್ಮ ಯಜಮಾನರ ಕಡೆ ತಮ್ಮ ಅಪೀಲು ಹೇಳಿದ್ರು. ಆ ಹಿರಿಯರು ಸ್ಥಿತಪ್ರಜ್ಞರಾಗಿ "ಕಾಲ ಕೆಟ್ಟದ.." ಅನ್ನುವ ಅಣಿಮುತ್ತು ಉದುರಿಸಿದ್ರು.

ಹರಿಹರ,ದಾವಣಗೆರಿ ದಾಟಿ ಮುಂದ ಹೊಂಟಿತ್ತು ಬಸ್ಸು. ನಾಯಕಗ ನಿದ್ದಿ ಹಾರಿಹೋತು. ಅದು ಇನ್ನೂ ದೂರ ಹೋಗಿದ್ದು ಹರಿಹರದಾಗ ಹತ್ತಿದ ಯುವಕ ಎದ್ದು ಮುಂದಹೋಗಿ ಆ ಹುಡುಗಿ ಹತ್ರಹೋಗಿ ಕೂತ. ಅವ ಹಾಕ್ಕೊಂಡು ಬಂದಿದ್ದ ಸೆಂಟು ಅವನ ಪರಿಚಯ ಹೇಳಿತು.ಯುವತಿಯ ಹೆಗಲಮ್ಯಾಲ ಕೈ ಹಾಕಿಕೂತ ಅವ. ನಾಯಕನಿಗೆ ಕಂಡಕ್ಟರ್ ಬಳಿ ದೈನಾಸಪಟ್ಟು ಕೇಳಕೊಂಡ ಅಕಿ ಅಪ್ಪ ನೆನಪಾದ. ಎಷ್ಟು ಮೋಸಮಾಡತಾರ ಈ ಹುಡುಗ್ಯಾರು..ಛ್ಹೀ ..ಅವಗ ಹಿಂದಿನ ಸೀಟಿನ ಹಿರಿಯರ ಪ್ರತಿಕ್ರಿಯಾ ಏನಿರಬಹುದು ಅನ್ನಿಸಿ ಹಿಂದತಿರುಗಿ ನೋಡಿದ. ಆ ಹಿರಿಜೀವಗಳೂ ಅಲ್ಲಿ ನಡೆಯುತ್ತಿದ್ದ ಪ್ರಸಂಗವನ್ನೇ ನೋಡುತ್ತಿದ್ದರು..!

ಆ ಹುಡುಗಿ ಅಪ್ಪಗ ಈ ವಿಷಯಗೊತ್ತಾದ್ರ ಆಗುವ ಆಘಾತ ಹೆಂಗಿರಬಹುದು ಈ ಯೋಚನಾದಾಗ ನಿದ್ದಿ ಇನ್ನೂ ದೂರಾತು. ಇದ್ದಕ್ಕಿದ್ದಂತೆ ಮುಂದಿನ ಸೀಟಿನಮೇಲೆ ಕುಳಿತ ಅವರಿಬ್ರೂ ಎದ್ದು ಹಿಂದ ಹೋದರು. ನಮ್ಮ ನಾಯಕನ ಚುಚ್ಚುವ ಕಣ್ಣುಗಳಿಂದ ದೂರ..! ನಿಟ್ಟುಸಿರು ಚೆಲ್ಲಿದ ನಾಯಕ

ಹಾಳಾಗಿ ಹೋಗಲಿ ಅಂತ ಶಪಿಸಿದ. ಕಣ್ಣುಮುಚ್ಚಿ ನಿದ್ದಿ ಜೋಡಿ ಗುದ್ದಾಡಹತ್ತಿದ, ತಂಪು ಗಾಳಿ ಅಪ್ಪಳಿಸತಿತ್ತು. ನೋಡಿದ್ರ ಬಾಜೂ ಸೀಟಿನ ಛಂದನ ಹೆಂಡತಿ ಕೂತ ಕಿಟಕಿ ತೆಗೆದಿತ್ತು. ಅಕಿ ಎರಡು ಸೀಟ್ ಮ್ಯಾಲ ಮುದ್ದಿ ಆಗಿ ಮಲಗಿದ್ಲು. ಚಾದರ ಹೊತಗೊಂಡು ಅಕಿ ಗಂಡನೂ ಮುಂದಿನ ಜೋಡ ಸೀಟಿನಮ್ಯಾಲೆ ಅದರೀತಿ ಮಲಗಿದ್ದ. ನಾಯಕಗ ಥಂಡಿ ತಡೀಲಿಕ್ಕೆ ಆಗವಲ್ತು. ಅಕಿಗೆ ಕಿಟಕಿ ತೆಗೆದಿದ್ದು ಖಬರೂ ಇಲ್ಲ. ತಾನ ಎದ್ದು ಕಿಟಕಿ ಮುಚ್ಚಿದ್ರಾತು ಅಂತ ಇವ ಎದ್ದ. ಕಿಟಕಿ ಎಳೀಲಿಕ್ಕೆ ಕೈ ಚಾಚಿದವ ಚಾಲಕ ಹೊಡೆದ ಬ್ರೇಕ್ ಗೆ ಜೋಲಿಹೋಗಿ ಚಾಚಿದ ಕೈ ಅ ಛಂದ ಇದ್ದ ಹೆಂಡತಿ ಮ್ಯಾಲ ಬಿತ್ತು. 

ಅನಾಹುತ ಆತು ಅಂತ ಅಕಿ ಜೋರಾಗಿ ಚೀರಿದ್ಲು. ಲೈಟ ಹಚ್ಚಲಿಕ್ಕೆ ಹೇಳಿದ ನಿರ್ವಾಹಕ ಬಂದ. ಬಸ್ ನಿಲ್ಲಿಸಿ ಚಾಲಕ ಬಂದ. ಇದ್ದಬಿದ್ದ ಮಂದಿ ಜಮಾಯಿಸಿದ್ರು. ಅಕಿ ಅಳೂದರ ಮುಂದ ನಾಯಕನ ಸಮಜಾಯಿಷಿ ಯಾರಿಗೂ ಕೇಳಲೇ ಇಲ್ಲ. ಎಲ್ಲಾರೂ ನಮ್ಮ ನಾಯಕಗ ಒಂದನಾಕು ಬಿಗದ್ರು..

ಆ ವಯೋವೃದ್ಧರು ತಮ್ಮ ಹೆಂಡತಿಗೆ ಹೇಳತಿದ್ರು.."ಕಾಲ ಕೆಟ್ಟದ…"

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x