ಶ್ರೀಮತಿ ವೀಣಾ ನಾಗರಾಜು ಉತ್ತಮ ಶಿಕ್ಷಕಿ, ಪ್ರತಿಭಾವಂತೆ, ಸಮಾಜಶಾಸ್ತ್ರ ವಿಷಯದಲ್ಲಿ ಎಂ. ಎ. ಪದವೀಧರೆ. ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳಜ್ಜಿ ಹಟ್ಟಿಯಲ್ಲಿ ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ. ಚನ್ನಬಸವಯ್ಯ ಸಾವಿತ್ರಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯ ಸುಪುತ್ರಿ. ಇವರ ಪತಿ ನಾಗರಾಜು ಕೂಡ ಪ್ರೌಢಶಾಲಾ ಶಿಕ್ಷಕ. ಎಂ. ಎ(ಸಮಾಜಶಾಸ್ತ್ರ) ಓದಿರುವ ಶಿಕ್ಷಕಿ ವೀಣಾ ನಾಗರಾಜು ವೃತ್ತಿಯೊಡನೆ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು 15 ಕ್ಕೂ ಹೆಚ್ಚು ಕತೆಗಳನ್ನು ಕವನಗಳನ್ನು ಸಂಭಾಷಣೆ ಶೈಲಿಯ ಕಿರು ನಾಟಕಗಳನ್ನು ಬರೆದಿದ್ದು. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅವು ಪ್ರಕಟವಾಗಿದ್ದಲ್ಲದೇ ಶಿಕ್ಷಣವಾರ್ತೆಯಲ್ಲಿಯೂ ಕೂಡ ಪ್ರಕಟವಾಗಿದ್ದು. ಇದೀಗ ಹಸಿರು ಕ್ರಾಂತಿ ದಿನಪತ್ರಿಕೆಯಲ್ಲಿ ಅವರು ಬರೆದ ಕತೆಗಳನ್ನು ಪ್ರಕಟಿಸುವ ಮೂಲಕ ಅವರ ಬರವಣಿಗೆಗೆ ಇನ್ನಷ್ಟು ಸ್ಪೂರ್ತಿ ನೀಡಿದ್ದು ಜನಜೀವಾಳ ದಿನಪತ್ರಿಕೆಯಲ್ಲಿ ಇವರು ಬರೆದ “ಮನುಜ ನೀ ಎಲ್ಲೀ ತನಕ” ಎಂಬ ನಾಟಕ ಹದಿನೈದು ಕಂತುಗಳಲ್ಲಿ ಪ್ರಕಟವಾಗಿ ಮನಸೂರೆಗೊಂಡಿದೆ.
ಇವರು ಬರೆದ ಕಥಾಸಂಕಲನ “ಹೊಂಬೆಳಕು” ಇತ್ತೀಚಿಗೆ ಪ್ರಕಟವಾಗಿದೆ. ಅದನ್ನು ಬೆಂಗಳೂರಿನ ಎಸ್. ಎಲ್. ಎನ್. ವ್ಹಿ. ಪಬ್ಲಿಕೇಶನ್ ರವರು ಪ್ರಕಟಿಸಿದ್ದು ಬಿಡುಗಡೆಯಾಗಬೇಕಿದೆ. ಇದು ಒಟ್ಟು 148 ಪುಟಗಳನ್ನು ಒಳಗೊಂಡಿದೆ. ಬೆಲೆ 120 ರೂಪಾಯಿಗಳು. ಇದರಲ್ಲಿ ಒಟ್ಟು 15 ಕತೆಗಳಿವೆ. ಮುಖಪುಟ ವಿನ್ಯಾಸದಿಂದ ಹಿಡಿದು ಕೊನೆಯ ರಕ್ಷಾಪುಟದವರೆಗೂ ಉತ್ತಮ ಮುದ್ರಣವನ್ನು ಈ ಕಥಾ ಸಂಕಲನ ಒಳಗೊಂಡಿದೆ.
ಕನ್ನಡ ಕಥನ ಸಾಹಿತ್ಯದ ಮುಖ್ಯ ಸೆಲೆ ವಾಸ್ತವವಾದವೇ ಆಗಿದೆ. ಬದುಕಿನ ಯತಾರ್ಥವನ್ನು ಕಂಡುಕೊಳ್ಳುವ ಪ್ರಾಮಾಣಿಕ ಅನುಭವದ ಅಭಿವ್ಯಕ್ತಿ ಇವರ ಕತೆಗಳಲ್ಲಿ ಎದ್ದು ಕಾಣುತ್ತದೆ. ಮೊದಲ ಕಥೆ “ಮೂಢಬೇರು” ಸಮಾಜದಲ್ಲಿ ತುಂಬಿರುವ ಮೌಢ್ಯತೆಯ ಕುರಿತು ಇಂದಿನ ವಾಸ್ತವ ಜಗತ್ತಿನಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುವ ನಿದರ್ಶನದೊಂದಿಗೆ ನಿರೂಪಿಸಿರುವುದು ಗಮನಾರ್ಹ. ಇವರು ಕತೆಗಳಲ್ಲಿ ತಮ್ಮ ಗ್ರಾಮೀಣ ಸೊಗಡಿನ ಆಡು ಭಾಷೆಯನ್ನು ಬಳಸಿದ್ದು ಓದುಗರನ್ನು ಗಮನ ಸೆಳೆಯುತ್ತದೆ.
“ಭಾನುಮತಿ” ಕತೆಯಂತೂ ಮಕ್ಕಳಾಗದೇ ಕೊರಗುವ ದೃಶ್ಯದೊಂದಿಗೆ ಆರಂಭಗೊಂಡು ಬದುಕಿನ ಆಶಯ ಹೊತ್ತ ಹೆಣ್ಣಿನ ಅನಾವರಣವನ್ನು ಒಳಗೊಂಡಿದೆ.
ಬದುಕಿನಲ್ಲಿ ಪಾಪ ಪುಣ್ಯಗಳ ಕುರಿತಂತೆ ದೃಷ್ಟಾಂತದ ರೂಪದಲ್ಲಿ ಹಳ್ಳಿ ಗೌಡನ ಬದುಕನ್ನು ರೂಪಿಸಿದ ಕತೆ “ಭೂತಾತ್ಮ” ದಿನನಿತ್ಯದ ಬದುಕಿನಲ್ಲಿ ಅನೇಕ ಕುಟುಂಬಗಳಲ್ಲಿ ಸಂಬಂಧ ಅನ್ನೋದು ವಿಭಿನ್ನತೆಯಿಂದ ಕೂಡಿರುತ್ತದೆ. ಪರಸತಿ ಪರಧನ ಯಾವತ್ತಿದ್ದರೂ ಹೊರಟು ಹೋಗೋದೆ ಎಂಬಂತೆ ಮನುಷ್ಯ ತನ್ನ ಕಾಮಪಿಪಾಶೆಗೆ ಇಳಿದರೆ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತನಾಗುವುದರಲ್ಲಿ ಸಂದೇಹವೇ ಇಲ್ಲ ಅಂತಹ ಒಂದು ಮನಕಲಕುವ ಕತೆ “ಮಾಯಾಂಗನೆ”. ಇದನ್ನು ಓದಿಯೇ ತಿಳಿಯಬೇಕು. ಸತಿಪತಿ ಒಂದಾದರೆ ಶಿವನಿಗೂ ಒಲಿಯುವುದು ಭಕ್ತಿ ಎಂಬಂತೆ ಗಂಡ ಎಂತಹವನಿದ್ದರೂ ಸತಿ ಆತನ ಕಷ್ಟಗಳಲ್ಲಿ ಸಲಹುವಳು ಎಂಬುದನ್ನು ಈ ಕತೆ ಬಿಂಬಿಸಿದೆ.
“ಹೊಂಬೆಳಕು” ಕತೆ ಕಳ್ಳನ ಹೆಂಡತಿ ಎಂದಿಗೂ ಕೆಟ್ಟವಳೇ ಎಂಬುದನ್ನು ಇಂದಿಗೂ ಸಮಾಜದಲ್ಲಿ ಎದುರಿಸುವ ಮಹಿಳೆಯ ಬದುಕನ್ನು ಕಟ್ಟಿಕೊಡುತ್ತದೆ. ಗಂಡ ಸತ್ತು ವಿಧವೆಯಾಗಿ ಕಂಕುಳಲ್ಲಿ ಮಗುವನ್ನಿಟ್ಟುಕೊಂಡು ಜೀವನ ನಡೆಸುವ ಮಹಿಳೆಯ ಬದುಕಲ್ಲಿ ನಡೆಯುವ ಘಟನೆಗಳು ಹೊಂಬೆಳಕನ್ನು ಅರಸುವ ಬಗೆ ಈ ಕತೆಯಲ್ಲಿ ಅಡಗಿದೆ.
“ಅನಾಮದೇಯ” ಕತೆಯಂತೂ ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡು ತಿರುಗಾಡುತ್ತಿರುವ ವ್ಯಕ್ತಿಗಳನ್ನು ಜನರು ಕಾಣುವ ರೀತಿಯನ್ನು ಕರುಳು ಚುರ್ ಎನ್ನುವಂತೆ ಘಟನೆಗಳನ್ನು ಪೋಣಿಸಿ ಬರೆದಿದ್ದಾರೆ. ಇದು ನಿಜಕ್ಕೂ ಮನಕಲಕುವ ಕತೆ.
“ಕಾಲ ಮಿಂಚಿದ ಮೇಲೆ” ಕತೆಯಂತೂ ಪ್ರೀತಿಸಿ ಮದುವೆಯಾಗಿ ಮೋಸ ಹೋಗುವ ಹುಡುಗಿ ಎಷ್ಟೇ ವಿದ್ಯಾವಂತಳಾದರೂ ಜಾಣೆಯಾದರೂ ಪ್ರೀತಿಯ ಮೋಹಪಾಶಕ್ಕೆ ಹೆತ್ತವರಿಂದ ದೂರವಾಗುವಾಗಿನ ದೃಡತೆ ಬದುಕನ್ನು ಅನುಭವಿಸುವಾಗಿನ ಯಾತನೆಯನ್ನು ಬಿಡಿ ಬಿಡಿಯಾಗಿಟ್ಟಿದೆ. ಇಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರೇ ಹೆಚ್ಚು ಬದುಕಿಗೆ ಧೈರ್ಯ ತಂದುಕೊಳ್ಳುವ ಶಕ್ತಿಯಿಲ್ಲದಂತಹ ಮನಸ್ಥಿತಿ ಈ ಸ್ಥಿತಿಗೆ ತಳ್ಳುತ್ತದೆ ಎಂಬುದಕ್ಕೆ ನಿದರ್ಶನ ಕಾಲ ಮಿಂಚಿದ ಮೇಲೆ.
“ಬಾಡಿದ ಹೂ” ಕತೆಯಂತೂ ದಾರುಣ ಘಟನೆಯನ್ನು ನವಯೌವನ ಶರೀರಕ್ಕೆ ಮೂಡುವ ಮೊದಲೇ ಒಲ್ಲದವನ ಜೊತೆಗೆ ಮದುವೆ ಮಾಡುವ ಸಂಪ್ರದಾಯ ಬಡ ಕುಟುಂಬಗಳಲ್ಲಿರುವುದನ್ನು ಕೇಳಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಇದು ಮಾಯವಾಗುತ್ತಿದೆಯಾದರೂ ಇಲ್ಲಿನ ಕಥಾ ನಾಯಕಿ ಚಿಕ್ಕ ವಯಸ್ಸಿನಲ್ಲಿ ತಾಯಿಯ ಮಾತಿಗೆ ಕಟ್ಟುಬಿದ್ದು ಒಲ್ಲದ ಮನಸ್ಸಿನ ಮದುವೆಯಾಗಿ ಅನುಭವಿಸುವ ನರಕಯಾತನೆ ನಿಜಕ್ಕೂ ಮನಕಲಕುವಂತಿದೆ. ಕತೆಯಲ್ಲಿ ಬರುವ ಸಂಭಾಷಣೆಗಳು ಕೂಡ ಕರುಳು ಕಿವುಚುವಂತೆ ಮಾಡುತ್ತವೆ.
“ಬರಡು ಬದುಕು” ಗ್ರಾಮೀಣ ಬದುಕಿನ ಚಿತ್ರಣ ಹೊಂದಿದ್ದು. ಬಡತನವನ್ನು ಅನುಭವಿಸುವ ಹೆಣ್ಣು ತನ್ನ ಮಕ್ಕಳೊಂದಿಗೆ ಕುಡುಕ ಗಂಡನನ್ನು ಸಲಹುತ್ತ ಬದುಕನ್ನು ಆಸೆ ಆಕಾಂಕ್ಷೆಗಳೊಂದಿಗೆ ಕಳೆಯುವ ರೀತಿ. ಕುಡಿದ ಅಮಲಿನ ಗಂಡ ಸತ್ತಾಗ ಇದ್ದ ಜಮೀನಿನಲ್ಲಿ ತೋಡುತ್ತಿದ್ದ ಬಾವಿಗೆ ನೀರು ಬರಲಿ ಎಂದು ಆಶಿಸುವ ಕನಸಿಗೆ ರೆಕ್ಕೆಯಂತೆ ಮಳೆ ಬರುವ ರೀತಿ. ಗ್ರಾಮೀಣ ಗಾದೆಮಾತುಗಳು ಆಡುಭಾಷೆಯಲ್ಲಿ ಹಾಸುಹೊಕ್ಕಾದ ಕತೆಯಿದು.
“ಕಾಲಚಕ್ರ” ಎರಡು ವಿಭಿನ್ನ ನೆಲೆಯನ್ನು ತಿಳಿಸುತ್ತದೆ. ಕ್ಯಾನ್ಸರ್ ಪೀಡಿತ ಪತ್ನಿಯ ಮಾತು ಕೇಳು ಮತ್ತೊಂದು ಮದುವೆಯಾಗಿ ಹೊಸದಾಗಿ ಬಂದ ಪತ್ನಿಯಿಂದ ಮೊದಲ ಪತ್ನಿಯು ದೂರವಾಗುವ ಜೊತೆಗೆ ಆಕೆಯ ಕುತಂತ್ರಕ್ಕೆ ತಾನೂ ಬಲಿಯಾಗಬೇಕಾದ ಪ್ರಸಂಗ ಹೊಂದಿದ ಕತೆಯಲ್ಲಿ ಮೊದಲ ಪತ್ನಿಯ ಮಗನಿಂದ ತನಗೆ ಆಶ್ರಯ ಸಿಗುವ ದಾರುಣ ಘಟನೆಗಳನ್ನು ಹೊಂದಿದ ಕತೆಯಿದು. ಈ ಕತೆಯನ್ನು ಓದುತ್ತ ಸಾಗಿದಂತೆ ಇಲ್ಲಿ ನಡೆಯುವ ಘಟನೆಗಳು ನಮ್ಮ ಅಕ್ಕಪಕ್ಕ ನಡೆಯುತ್ತಿವೆಯೇನೋ ಅನ್ನಿಸುವಂತೆ ಸಂಭಾಷಣೆ ನಿರೂಪಿತವಾಗಿದೆ.
“ಬೆಸುಗೆ”ಕತೆಯೂ ಕೂಡ ಪ್ರೀತಿಸಿ ಮದುವೆಯಾದ ಶಾಂತಿ ಮಗು ರಮ್ಯಾಳ ಜನನವಾಗುತ್ತಲೇ ಗಂಡನನ್ನು ಕಳೆದುಕೊಂಡು ಅತ್ತೆ ಮನೆಯಲ್ಲಿನ ಚುಚ್ಚು ಮಾತುಗಳಿಂದ ಬೇಸತ್ತು ಮನೆ ಬಿಟ್ಟು ರೈಲಿನಲ್ಲಿ ಹೊರಟಾಗ ಪರಿಚಿತವಾಗುವ ವ್ಯಕ್ತಿಯ ಜೊತೆಗೆ “ಬೆಸುಗೆ”ಯಾಗುವ ಬಾಂಧವ್ಯ ನಿಜಕ್ಕೂ ಆಸರೆಯನ್ನು ಬಯಸುವವರಿಗೆಲ್ಲ ಜಗತ್ತಿನಲ್ಲಿ ಹೀಗೆ ಆಗುತ್ತಿದ್ದರೆ ಎಷ್ಟೋ ಕುಟುಂಬಗಳು ಇಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿರಲಿಲ್ಲ ಎಂಬಂತೆ ಸಿನಿಮಾ ಪ್ಲ್ಯಾಷಬ್ಯಾಕ್ ಶೈಲಿಯ ಕತೆಯಿದು.
“ಆಸರೆ”ಕತೆಯೂ ಕೂಡ ಜೀತದ ಮೂಲಕ ಬದುಕನ್ನು ಕಳೆಯುತ್ತಿರುವ ಕೆಂಚ ಮತ್ತು ನಿಂಗಿಯರ ಕಷ್ಟದ ಬದುಕನ್ನು ಹೊತ್ತಿದೆ. ಇರುವ ಒಬ್ಬ ಮಗ ಭೂತರಾಜುವಿನ ಓದಿಗಾಗಿ ಅವರಿಬ್ಬರೂ ಪಡುವ ಕಷ್ಟ. ಅದನ್ನು ಎಳೆಎಳೆಯಾಗಿ ಕತೆ ಬಿಚ್ಚಿಟ್ಟಿದೆ. ಅಷ್ಟೇ ಅಲ್ಲ ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ಹೇಗೆ ತಮ್ಮ ವರ್ತನೆಯಲ್ಲಿ ಬದಲಾಗುತ್ತಾರೆ ಎಂಬುದನ್ನು ಇಲ್ಲಿ ನಿರೂಪಿಸಿದ್ದಾರೆ. ಇಂದಿನ ಯುಗದಲ್ಲಿ ವೃದ್ದಾಶ್ರಮಗಳಲ್ಲಿ ತಂದೆ ತಾಯಿಗಳನ್ನು ಇಡುವ ಮಕ್ಕಳನ್ನು ಕಾಣುತ್ತೇವೆವಲ್ಲವೇ. ? ಆದರೆ ಇಲ್ಲಿನ ನಡೆಯುವ ಘಟನೆ ಅದಕ್ಕೆ ಪೂರಕವಾಗಿದೆ.
“ಚಿಗುರಿದ ಕನಸು” ಕತೆಯಲ್ಲಿ ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದ ದಂಪತಿ ಶಾಂತವ್ವ, ಸೋಮಣ್ಣರಿಗೆ ಪವಿತ್ರ ಮತ್ತು ಗಾಯತ್ರಿ ಇಬ್ಬರು ಹೆಣ್ಣು ಮಕ್ಕಳು ಒಳ್ಳೇ ಶ್ರೀಮತಂತರ ಮನೆಗೆ ಪವಿತ್ರಳನ್ನು ವಿವಾಹ ಮಾಡಿಕೊಟ್ಟಿರುತ್ತಾರೆ. ಅಲ್ಲಿ ಬದುಕು ಕಳೆಯುತ್ತಿದ್ದ ಆಕೆ ದಿಡೀರನೇ ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿದ ದಂಪತಿಗೆ ಮತ್ತೊಬ್ಬ ಮಗಳನ್ನು ವಿವಾಹ ಮಾಡುವ ಯೋಚನೆ ಇದ್ದಾಗಲೇ ಮೊದಲ ಮಗಳ ಗಂಡನಿಗೆ ಇವಳನ್ನು ಮದುವೆ ಮಾಡುವ ಸಂದರ್ಭ ಬರುತ್ತದೆ. ಇವಳು ಕೂಡ ಅವರ ಶ್ರೀಮಂತಿಗೆ ಮಾರು ಹೋಗಿ ವಿವಾಹವಾಗುತ್ತಾಳೆ. ಅಲ್ಲಿ ನಡೆಯುವ ಘಟನೆಗಳು ಮಾನಸಿಕ ತುಮಲ. ಗಂಡನ ವ್ಯಕ್ತಿತ್ವದ ಹೋರಾಡಿ ಗೆಲವು ಸಾಧಿಸಿದ ಕತೆ.
“ಲಲನೆ” ಕತೆ ಒಬ್ಬನೇ ಮಗ ಕಾಂತೇಶನಿಗೆ ತನ್ನ ತಾಯಿ ಎಷ್ಟು ಹೆಣ್ಣು ನೋಡಿದರೂ ಯಾವುದನ್ನೂ ಮನಸ್ಸು ಮಾಡಿದಿದ್ದಾಗ ಕೊನೇ ಛಾನ್ಸ ಎಂಬಂತೆ ತಾಯಿ ಕೊಟ್ಟ ಪೋಟೋದಲ್ಲಿನ ಹುಡುಗಿಯನ್ನು ನೋಡಲೆಂದು ಬಸ್ ಹತ್ತಿ ಹೊರಟಾಗ ಪಕ್ಕದ ಸೀಟಿನಲ್ಲಿ ಕುಳಿತ ಹುಡುಗಿಯ ಮೇಲೆ ಮನಸು ಹರಿಯುತ್ತದೆ. ನಂತರ ನಡೆಯುವ ಸನ್ನಿವೇಶಗಳನ್ನು ಕತೆ ನೋಡಿಯೇ ತಿಳಿಯಬೇಕು.
ಕೊನೆಯ ಕತೆ “ಮೂಕವೇದನೆ” ಗಂಡನನ್ನು ಕಳೆದುಕೊಂಡು ಒಂಟಿ ಬದುಕನ್ನು ತನ್ನ ತೋಟದಲ್ಲಿರುವ ಸಸಿ ಗಿಡ ಮರಗಳ ಜೊತೆಗೆ ಕಳೆಯುತ್ತಿದ್ದ ಫಣಿಯಮ್ಮ ತೋಟದ ಬಾವಿಯ ನೀರು ಬತ್ತಿದಾಗ ಬೋರವೆಲ್ ಕೊರೆಸುವ ವಿಚಾರ ಮಾಡುತ್ತಾಳೆ. ಆಗ ಊರ ಗೌಡನ ಚುಚ್ಚು ಮಾತು ಅನುಭವಿಸುತ್ತಾಳೆ ಆದರೆ ಛಲ ಬಿಡದೇ ಬೋರವೆಲ್ ಕೊರೆಸುವ ಫಣಿಯಮ್ಮಳ ಬದುಕು ಬರಡಾಗೋದು ಕತೆಯ ಎಳೆ.
ಈ ರೀತಿ ಸಾಮಾಜಿಕ ವಾಸ್ತವವಾದಿ ಪರಂಪರೆಯ ಕಥನವಸ್ತು ವಿನ್ಯಾಸಗಳನ್ನು ಆಕೃತಿಗೊಳಿಸಿದ ವೀಣಾ ನಾಗರಾಜು ತಮ್ಮ ಕತೆಗಳಲ್ಲಿ ಬಳಸಿದ ಹಳ್ಳಿ ಸೊಗಡಿನ ಆಡುಭಾಷೆ. ಗಾದೆ ಮಾತುಗಳು, ಆದರ್ಶ ವಿಚಾರದ ಧ್ವನಿ ನಿಜಕ್ಕೂ ಮೊದಲ ಕಥಾಸಂಕಲನದಲ್ಲಿಯೇ ಇವರ ಬರವಣಿಗೆ ಇಷ್ಟೊಂದು ಹದವಾಗುತ್ತ ಹೊರಟಿದೆಯಲ್ಲ ಎಂದೆನಿಸದಿರದು. ಘಟನೆಗಳನ್ನು ಜೋಡಿಸುತ್ತ ಹೋಗುವ ರೀತಿ ಕೂಡ ಇವರೊಬ್ಬ ಉತ್ತಮ ಕತೆಗಾರ್ತಿ ಆಗಬಲ್ಲರು ಎಂಬುದಕ್ಕೆ ಇಲ್ಲಿನ ಎಲ್ಲ ಕತೆಗಳು ನಿದರ್ಶನ. ”ಹೊಂಬೆಳಕು” ಅವರ ಚೊಚ್ಚಲು ಕಥಾ ಸಂಕಲನ ಅವರಿಗೆ ಸಾಹಿತ್ಯ ಲೋಕದಲ್ಲಿ ಸಕಲ ಯಶಸ್ಸು ಕೀರ್ತಿ ಲಭಿಸಲಿ ಹಾಗೆಯೇ ಅವರ ಸೃಜನಶೀಲ ಸಂವೇದನೆ ನಿರಂತರವಾಗಿ ಕ್ರಿಯಾಶೀಲ ಅಭಿವ್ಯಕ್ತಿ ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ. ಅವರ ಚೊಚ್ಚಲು ಕಥಾ ಸಂಕಲನ ಸಹೃದಯ ಓದುಗರಿಗೆ ಮೆಚ್ಚುಗೆಯಾಗುವಂತಾಗಲಿ. ಅವರನ್ನು ಅಭಿನಂದಿಸಲು 9844766171 6363166103 ಅವರ ದೂರವಾಣಿ ಬಳಸಿ ಪುಸ್ತಕಗಳನ್ನು ಅಂಚೆ ಮೂಲಕ ತರಿಸಿಕೊಳ್ಳ ಬಯಸುವವರು. ಎಸ್. ಎಲ್. ಎನ್. ಪಬ್ಲಿಕೇಶಷನ್. ನಂ. 3437. 4ನೇ ಮುಖ್ಯ ರಸ್ತೆ. 9ನೇ ಅಡ್ಡರಸ್ತೆ ಶಾಸ್ತ್ರೀ ನಗರ. ಬನಶಂಕರಿ. 2ನೇ ಹಂತ. ಬೆಂಗಳೂರು. ದೂರವಾಣಿ ಸಂಖ್ಯೆ 9972129376 ಸಂಪರ್ಕಿಸಬಹುದು. ಪುಸ್ತಕಗಳನ್ನು ಕೊಂಡು ಓದುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸುವ ಪರಂಪರೆ ಇಂದು ಬೆಳೆಯಬೇಕಾಗಿದೆ. ಸಹೃದಯ ಓದುಗರು ಇಂತಹ ಉದಯೋನ್ಮುಖ ಪ್ರತಿಭೆಗಳ ಸಾಹಿತ್ಯ ಕೃತಿಗಳನ್ನು ಓದುವಂತಾಗಲಿ ಎಂದು ಆಶಿಸುವೆ.
-ವೈ. ಬಿ. ಕಡಕೋಳ