ಉತ್ತರ-ಅನುತ್ತರ-ನಿರುತ್ತರಗಳ ಜೊತೆಗೊಂದು ಪ್ರತ್ಯುತ್ತರ: ಹೆಚ್ ಎನ್ ಮಂಜುರಾಜ್, ಮೈಸೂರು

ಎಲ್ಲ ಪ್ರಶ್ನೆಗಳಿಗೂ ಉತ್ತರವಿಲ್ಲವೆಂಬುದು ಗೊತ್ತಿದ್ದರೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ನನ್ನ ಮಟ್ಟಿಗೆ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಕೇಳುವುದಲ್ಲ; ನಮ್ಮಲ್ಲಿಯೇ ಕೇಳಿಕೊಳ್ಳುವುದು ಹೆಚ್ಚು ಸರಿ. ಆಗ ಪ್ರಶ್ನೋತ್ತರಗಳೆರಡೂ ನಮ್ಮವೇ ಆಗಿರುತ್ತವೆ. ಇದರಿಂದ ಮೊದಲಿಗಿಂತ ಹೆಚ್ಚು ‘ಎಚ್ಚರ’ದ ಸ್ಥಿತಿಯನ್ನು ಹೊಂದಬಹುದು. ಇರಲಿ. ಆಚಾರ್ಯ ರಜನೀಶರು ಚಾಂಗ್ ತ್ಸು ಕುರಿತು ಕೊಟ್ಟ ಡಿಸ್‍ಕೋರ್ಸ್- ಪುಸ್ತಕದ ಹೆಸರು ಶೂನ್ಯ ನಾವೆ-ಇದರಲ್ಲೊಂದು ಪ್ರಸಂಗ ಉಲ್ಲೇಖಿತವಾಗಿದೆ: ನಾವೆಯೊಂದರಲ್ಲಿ ಕುಳಿತು ಒಬ್ಬರೇ ವಿಹರಿಸುತ್ತಿರುವಾಗ, ಹಿಂದಿನಿಂದ ಇನ್ನೊಂದು ನಾವೆ ಏಕ್‍ದಂ ಡಿಕ್ಕಿ ಹೊಡೆದಾಗ ಮನದಲ್ಲುದಿಸುವ ಭಾವ: ವ್ಯಗ್ರತೆ ಮತ್ತು ಅಸಹನೆ. ಹಿಂದೆ ತಿರುಗಿ ಚೆನ್ನಾಗಿ ಬಯ್ದು ಮನದ ಕೋಪ ಶಮನವಾಗುವ ತನಕ ಎಗರಾಡಲು ಹೊರಟಾಗ, ಆ ಇನ್ನೊಂದು ನಾವೆಯಲ್ಲಿ ಯಾರೂ ಇರುವುದಿಲ್ಲ, ಅದು ಶೂನ್ಯನಾವೆ! ಯಾರಿಗೆ ಬಯ್ಯುವುದು? ಬದುಕೂ ಹಾಗೇ, ಖಾಲಿದೋಣಿ-ಬಿಳಿಯ ಹಾಳೆ-ಮರದಿಂದ ಉದುರಿದ ಎಲೆ- ಹೂವಿಂದ ಬೇರ್ಪಟ್ಟ ಎಸಳು-ಬೊಗಸೆಯಲ್ಲಿ ಮೊಗೆದುಕೊಂಡಿರುವ ಸಾಗರದ ನೀರು……ಇರಲಿ.

‘These two words will open many DOORS in life: One is PUSH and another is PULL!’

ಹೀಗೊಂದು ಎಸ್ಸೆಮ್ಮೆಸ್ಸು ನನ್ನ ಮೊಬೈಲ್ ಫೋನಿನ ಇನ್‍ಬಾಕ್ಸ್‍ಗೆ ಬಂದ ದಿನವೇ, ಇದರ ಹಲವು ರಹಸ್ಯಾರ್ಥಗಳು ಒಂದೊಂದಾಗಿ ಮನದಲ್ಲಿ ಮೂಡಿ ನಗುವಾಗಲೇ, ವಿಲಕ್ಷಣ ಪ್ರಸಂಗವೊಂದು ಜರುಗಿತು: ನನ್ನ ಪೆನ್‍ಡ್ರೈವಿನ ಸಂಬಂಧವಾಗಿ! ಇಲ್ಲಿಂದ ಈ ನಿರ್ ‘ಭಾವುಕ’ಲಹರಿಯನ್ನು ಗುನುಗಲೆಳಸುವೆ.

ಕಳೆದ ವಾರವಷ್ಟೇ ಬೆಂಗಳೂರೆಂಬ ಮಾಯಾಬಜಾರಿನಿಂದ ಹೀಗೆ ನಮ್ಮೂರಿಗೆ ಬಂದು ಹಾಗೆ ಮಾಯವಾದ- ನನ್ನ ಆತ್ಮೀಯ ಸ್ನೇಹಿತನು ಪೆನ್ ಡ್ರೈ ಕುರಿತು ಒಂದಷ್ಟು ಜೋಕುಗಳನ್ನು ಸಿಡಿಸಿ ಆನಂದವನ್ನುಂಟುಮಾಡಿದ್ದ ಬೆನ್ನಲ್ಲೇ ಈ ಘಟನೆ ಜರುಗಿದ್ದು ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಕತೆಯ ಮರದ ದಿಮ್ಮಿಯನ್ನು ನೆನಪಿಸಿತು.

ಇದರ ಹಿಂಚೂಣಿಯಲ್ಲೇ ನನ್ನ ಸಹೋದ್ಯೋಗಿ ಮಿತ್ರರ ‘ಕಳೆದ’ ತಿಂಗಳ ಪೆನ್‍ಡ್ರೈವ್ ಅನುಭವ ಕೇಳಿ ಮೂಕವಿಸ್ಮಿತನೂ ಆಗಿದ್ದೆ. ಹೀಗೆ 2010 ರ ಕೊನೆಯಲ್ಲಿ ಇಂಥ ಪೆನ್‍ಡ್ರೈವಾನುಭವವು ಒಂದರ ಮೇಲೊಂದರಂತೆ ಜರುಗಿದ್ದು, ಅದರ ಸುತ್ತಲೇ ಹುಟ್ಟಿಕೊಂಡ-ಕಟ್ಟಿಕೊಂಡ ಕತೆಗಳನ್ನು ಮೆಲುಕತೊಡಗಿದ್ದು ಆ ಮುಖೇನ ಎಲೆಕ್ಟ್ರಾನಿಕ್ಸುಗಳ ವಿಚಿತ್ರವೂ ವೈಪರೀತ್ಯವೂ ಆದ ಪಾಠಗಳಿಂದ ಮತ್ತೊಮ್ಮೆ ನನಗೆ ‘ಆಧುನಿಕ ಅವಾಂತರಗಳು’ ಮನವರಿಕೆಯಾದವು.

ಪೆನ್‍ಡ್ರೈವ್ ಸಾಧನೋಪಕರಣವನ್ನು ಎಲ್ಲೋ ಕಳೆದುಕೊಂಡು, ಹುಡುಕುತ್ತಿರುವೆ ಎಂದು ಹೇಳುತ್ತಿದ್ದ ನನ್ನ ಸಹೋದ್ಯೋಗಿ ಸನ್ಮಿತ್ರರು ಕೊನೆಗೂ ಅದು ಲಭ್ಯವಾದದ್ದರ ಹಿನ್ನೆಲೆಯನ್ನು ಅರುಹಿದರು: ಅವರು ಹೊಸದಾಗಿ ಕೊಂಡು ಬಳಸುತ್ತಿದ್ದ ವಾಷಿಂಗ್ ಮಷೀನಿನಲ್ಲಿ ಅದರಲ್ಲೂ ಪ್ಯಾಂಟಿನ ಜೇಬಿನಲ್ಲಿ ಅಡಗಿ ಕುಳಿತಿದ್ದ ಅವರ ಪೆನ್‍ಡ್ರೈವ್ ಸಾಧನವು ಏನೆಲ್ಲ ಅರ್ಜೆಂಟು-ಡಿಟರ್ಜೆಂಟು-ಸೋಪುನೀರನ್ನು ಕುಡಿದೂ ‘ಏನೂ ವ್ಯತ್ಯಾಸಗೊಳ್ಳದೇ’ ಹಾಗೆಯೇ ಸುಸ್ಥಿತಿಯಲ್ಲಿ ಈಚೆ ಬಂದದ್ದು ಮಾತ್ರವಲ್ಲದೇ ಮತ್ತೆ ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ಮಾಹಿತಿಗಳನ್ನು ‘ಏನೂ ಆಗಿಲ್ಲ’ವೆಂಬಂತೆ ಅತ್ಯಂತ ಸಹಜವಾಗಿ ತೆರೆದು ಕೊಡುವ ಪವಾಡವನ್ನು ಮೆರೆದಿತ್ತು! ಇದನ್ನು ಹೇಳಿದ ಸ್ನೇಹಿತರು, ‘ಆ ಪೆನ್‍ಡ್ರೈವ್ ತಯಾರಕ ಕಂಪೆನಿಗೆ ಈ ವಿಚಾರವನ್ನು ‘ಮೇಲಿ’ಸಿ ವಂದನೆ ಸಲ್ಲಿಸುವೆ’ ಎಂದರು. ಇದನ್ನು ಕೇಳುತ್ತಿದ್ದಾಗ ನನಗೆ, ತಾಯಗರ್ಭದೊಳಗೆ ಆರಾಮಾಗಿ ಕುಳಿತು (ಮಲಗಿ!) ಬದುಕು ನಡೆಸಿಕೊಳ್ಳುವ ಮಗು (ಭ್ರೂಣ!) ನೆನಪಾಗಿ ರೋಮಾಂಚನಗೊಂಡೆ. ಇದನ್ನು ಬರೆಯುವಾಗ ಸ್ನೇಹಿತರು ಹೇಳುವಾಗಿನ ಸಖೇದಾಶ್ಚರ್ಯವನ್ನು ಹಾಗಾಗಿಯೇ ಹಿಡಿದಿಡಲು ಒದ್ದಾಡುತ್ತಿರುವೆನು. ಏಕೆಂದರೆ ಅಲ್ಲಮಪ್ರಭುಗಳ ಮಾತು ನೆನಪಾಗುತ್ತದೆ. ‘ಚಿತ್ರದ ರೂಹು ಬಿಡಿಸಬಹುದಲ್ಲದೆ, ಪ್ರಾಣವ ಪ್ರತಿಷ್ಠಾಪಿಸಬಹುದೆ ಅಯ್ಯಾ?’

ಈ ಮುಂದೆ ವರದಿಸುವ ಘಟನೆಯು ಮೊದಲನೆಯದ್ದಕ್ಕೆ ಉಲ್ಟಾ! ನಿರಂತರವಾಗಿ ನಾನು ಬಳಸುತ್ತಿದ್ದ ಪೆನ್‍ಡ್ರೈವು ವಿಚಿತ್ರವಾಗಿ ವರ್ತಿಸಿದ ವ್ಯಥೆಯ ಕತೆ. ನಾನಷ್ಟೇ ಉಪಯೋಗಿಸುತಿದ್ದ ಈ ಸಾಧನವು ಮೊನ್ನೆ ಯಾವ ಆದೇಶವನ್ನೂ ಪಾಲಿಸದೆ ತನ್ನ ಮನಸಿಗೆ ತೋಚಿದಂತೆ ಕುಣಿದಾಡಿತು. ಕಾಲೇಜಿನ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಿ ಬಳಸುತಿದ್ದ, ಮಾಹಿತಿಯಷ್ಟೇ ಸಂಗ್ರಹವಾಗಿದ್ದ ಇದರಲ್ಲಿ ಹೇಳಿದ ಮಾತು ಕೇಳದ ತುಂಟನೊಬ್ಬನು ಸೇರಿಕೊಂಡಿದ್ದನು. ನಿಭಾಯಿಸಲು ಹೆಣಗಾಡಿದೆ.

ಘಟನೆಯ ವಿವರ: ನಮ್ಮೂರಿನ ಆಫ್‍ಸೆಟ್ ಪ್ರೆಸ್ಸೋದ್ಯಮಿ ಸ್ನೇಹಿತರು ತಮ್ಮ ವಹಿವಾಟು ಸಂಬಂಧ, ನನ್ನ ಈ-ಮೇಲ್ ಐಡಿ ಮೂಲಕ, ಬೆಂಗಳೂರಿನ ತಮ್ಮ ವ್ಯಾಪಾರೀಮಿತ್ರರಿಗೆ ತಿಂಗಳಿಗೆರಡಾವರ್ತಿ ಮೇಲಿಸುವುದು, ಅವರು ಮೇಲಿಸಿದ ಫೈಲುಗಳನ್ನು ನಾನು ಅಂತರ್ಜಾಲದ ನೆರವಿನಿಂದ ಡೌನ್ ಲೋಡಿಸಿ, ಮಿತ್ರರಿಗೆ ತಲಪಿಸುವುದು…..ಹೀಗೆ ಸಾಗುತ್ತಿತ್ತು. (ಅವರಲ್ಲಿ ನೆಟ್ ಸಂಪರ್ಕವಿಲ್ಲದ್ದ ಕಾರಣ)

ಮೊನ್ನೆಯೂ ಹಾಗೆಯೇ ಕೋರಿದಾಗ, ನನ್ನ ಮಿಂಚಂಚೆ ಖಾತೆಯನ್ನು ಓಪನಿಸಿ, ಅವರಿಗೆ ಬಂದಿದ್ದ ಮಾಹಿತಿಯನ್ನು ಪೆನ್ನಿಗೆ ಉಣಿಸಲು ಹೋದರೆ ವಿಚಿತ್ರ ಮತ್ತು ಆಶ್ಚರ್ಯ- ಎರಡೂ ಏಕಕಾಲದಲ್ಲಿ ಉಂಟಾದವು. ಈವರೆಗೂ ನನಗೆ ಇಂಥ ಅನುಭವ ಆಗಿರಲಿಲ್ಲ. ಎರಡು ಜೀಬಿ ಕೆಪಾಸಿಟಿಯ ಈ ಸಾಧನವು ಎರ್ರಾಬಿರ್ರಿ ಸಾಮಥ್ರ್ಯವನ್ನು ಹೊಂದಿರುವಂತೆ ಬಿಂಬಿಸತೊಡಗಿತು; ನಾನು ಉಣಿಸಿದ ಡಾಟಾ ಬಂದು ಕೂತಿದೆ; ಆದರೆ ಈವರೆಗೆ ಸಂಗ್ರಹವಾಗಿದ್ದ ಡಾಟಾಗಳು ಒಂದೊಂದಾಗಿ ಟಾಟಾ ಹೇಳುತ್ತಿವೆ! ಆಯಾಚಿತವಾಗಿ ತಂತಾನೇ ಮಾನಿಟರಿನಿಂದ ಕಣ್ಮರೆಯಾಗುತ್ತಿವೆ. ಫೈಲು ಮತ್ತು ಫೋಲ್ಡರಿನ ನೇಮುಗಳ ಮಾಮೂಲೀ ಇಂಗ್ಲಿಷ್ ಲೆಟರ್ಸ್ ಮಾಯವಾಗಿ ಆ ಜಾಗದಲ್ಲಿ ವಿಶೇಷವಾದ ಚಿತ್ರರೀತಿಯ ಅಕ್ಷರಗಳು (ಯಾವ ದೇಶ-ಭಾಷೆಯೋ ದೇವರೇ ಬಲ್ಲ) ತೋರುತ್ತಾ, ತಾರಮ್ಮಯ್ಯ ಹೇಳುತ್ತಿವೆ! ಮೌಸಾಗಲಿ, ಕೀಬೋರ್ಡಾಗಲಿ ವರ್ಕಾಗುತ್ತಿಲ್ಲ. ತಕ್ಷಣ ಪೆನ್ನನ್ನು ತೆಗೆಯುವುದೋ ಬೇಡವೋ ಅಂತ ಡೋಲಾಯಮಾನದಲ್ಲಿದ್ದಾಗಲೇ ಆ ಡ್ರೈವಿನಿಂದ ಎಲ್ಲ ಡಾಟಾಗಳೂ ಖಾಲಿ! ಜೊತೆಗೆ ಅದು ‘ಇನ್ನೂರು ಜೀಬಿ ಸಾಮಥ್ರ್ಯ ಹೊಂದಿದ್ದೇನೆ’ ಎಂದು ಹೆಮ್ಮೆಯಿಂದ ಬೀಗುತ್ತಿದೆ!! ಕಣ್ಣಾರೆ ಆ ಸಾಧನದತ್ತ ದೃಷ್ಟಿಸಿದೆ: ಏಕೆಂದರೆ ನನಗೆ ತಬ್ಬಿಬ್ಬಾಗಿತ್ತು. ಬಹುಶಃ ವೈರಸ್ಸಿನಾಟವಿರಬಹುದು ಅಂತಂದುಕೊಂಡು ಸ್ಕ್ಯಾನು ಮಾಡಿದೆ. ಅಂತರ್ಜಾಲ ಸಂಪರ್ಕ ಕಡಿತಗೊಳಿಸಿ ನೋಡಿದೆ; ಮತ್ತೆ ‘ಆನಿ’ಸಿ ನೋಡಿದೆ. ಉಹುಂ! ಜಗ್ಗಲಿಲ್ಲ. ನನ್ನನುಮತಿಯೇ ಇಲ್ಲದೆ ‘ಮತಿಹೀನ’ಗೊಂಡವರಂತೆ ಎರ್ರಾಬಿರ್ರಿ ವರ್ತಿಸಿತು ಆ ಪೆನ್ನು.

ಮಾನಿಟರನ್ನು ಸುಮ್ಮನೆ ನೋಡುತ್ತ ಕುಳಿತೆ, ನನ್ನ ಕಂಪ್ಯೂಟರಿನ ಹಾರ್ಡ್‍ಡಿಸ್ಕಿನೊಳಗೆ ಕುಳಿತಿದ್ದ, ಪಾಸ್‍ವರ್ಡ್ ಪ್ರೊಟೆಕ್ಷನ್ನಿಂದಲೂ ಭದ್ರವಾಗಿದ್ದ ಕೆಲವು ವರ್ಡ್‍ಫೈಲುಗಳು ಈಗ ಪೆನ್‍ಡ್ರೈವಿನೊಳಗೆ ಹಾದು ಬರತೊಡಗಿದವು. ಈ ಹಿಂದೆ ನೋಡಿದ್ದ ‘ರಜನಿಯ ಎಂದಿರನ್ ಡಿವಿಡಿ’ಯ ರೀತ್ಯ, ಆ ಫೈಲುಗಳು ಒಂದೊಂದಾಗಿ ಓಪನಾದವು. ಇಷ್ಟಾಗುತಿದ್ದರೂ ನಾನು ಆಗುತ್ತಿದ್ದ ದಿಗಿಲನ್ನು ಅನುಭವಿಸುತ್ತಲೇ ಮಾನೀಟರಿನ ಮೇಲ್ಭಾಗ ದೃಷ್ಟಿ ಕೊಟ್ಟೆ. ಖಂಡಿತ, ಈ ಫೈಲುಗಳು ಪೆನ್‍ಡ್ರೈವಿನಲ್ಲಿವೆ ಎಂದೇ ಡಿಸ್‍ಪ್ಲೇ ಹೇಳುತ್ತಿದೆ.

ನನ್ನ ಪುಣ್ಯಕ್ಕೆ, ಹೀಗೆ ಹೆಂಡ ಕುಡಿದ ಕಪಿಯಂತಾಡುತ್ತಿರುವುದು ಹಾರ್ಡ್‍ಡಿಸ್ಕ್ ಅಲ್ಲ; ಪೆನ್ ತಾನೇ! ಎಂದು ಆ ಸಮಯದಲ್ಲೂ ಸಮಾಧಾನವಾಯಿತು! ಇದಾದ ಮೇಲೆ ಪೆನ್‍ಸಂಪರ್ಕ ಕಡಿತಗೊಳಿಸಿ, ಮತ್ತೆ ಚುಚ್ಚಿದೆ. ಸ್ಕ್ಯಾನೂ ಮಾಡಿದೆ. ಪ್ರಯೋಜನವಾಗಲಿಲ್ಲ. ಮೊದಲಿದ್ದ ಫೈಲುಗಳು ಕಣ್ಮರೆಯಾಗಿದ್ದವು. ಆಗ ತಾನೇ ನೆಟ್‍ನಿಂದ ಡೌನ್‍ಲೋಡಿಸಿಕೊಂಡಿದ್ದ ಗೆಳೆಯರ ಕಡತವೊಂದು ಮಾತ್ರ ಮಾಮೂಲೀ ಇಂಗ್ಲಿಷ್ ನೇಮಿನೊಂದಿಗೆ ಭದ್ರವಾಗಿ ಕುಳಿತು ನಗುತ್ತಿತ್ತು; ಉಳಿದವೆಲ್ಲ ಅಕ್ಷರಶಃ ನಾಶವಾಗಿದ್ದವು.

ಆ ಪೆನ್ನಿನಲ್ಲಿದ್ದ ಮಾಹಿತಿಗಳಲ್ಲಿ ಬಹಳಷ್ಟು ಕಾಲೇಜಿನ ನ್ಯಾಕ್ ರೂಮಿನ ಸಿಸ್ಟಮಿನಲ್ಲೂ ಇದ್ದವೇ. ಸ್ವತಃ ಟೈಪಿಸಿದ್ದ ಕಡತಗಳು ಹಾಗೂ ಮುಂದೊಮ್ಮೆ ಅಕಾಡೆಮಿಕ್ ಉದ್ದೇಶಕ್ಕೆ ಬೇಕಾಗಬಹುದಾಗಿದ್ದ ಮುಖ್ಯ ವಿವರಗಳ ಫೋಲ್ಡರುಗಳಲ್ಲಿ ಕೆಲವು ಅತಿ ಮುಖ್ಯವೆಂದು ನಾನಂದುಕೊಂಡಂಥವು: ಯಾತಕ್ಕೂ ಇರಲೆಂದು ಪೆನ್ನಿನಲ್ಲಿಟ್ಟಿದ್ದೆ. ತೀರಾ ಗಾಬರಿಯಾಗುವ ಸಂದರ್ಭ ಇದಲ್ಲವಾದರೂ ಹೀಗೆ ಇದ್ದಕ್ಕಿದ್ದಂತೆ ನಮ್ಮಾಣತಿಯೇ ಇಲ್ಲದೆ ವರ್ತಿಸುತ್ತಿದ್ದ ಆ ಪುಟ್ಟ ಸಲಕರಣೆ ಸೆಡ್ಡು ಹೊಡೆದಿದ್ದು ನನ್ನ ಅಹಂಗೆ ಕೊಟ್ಟ ತೀವ್ರಾಘಾತವೇ ಸರಿ. ನನಗೂ ಜೀವವಿದೆ; ಇನ್ನು ನಿನ್ನ ಆಣತಿಯನ್ನು ಕೇಳಲಾರೆ; ಕೇಳೀ ಕೇಳೀ ಸಾಕಾಗಿದೆ! ಎಂಬಂತಿತ್ತು ಅದರ ಹಾವಭಾವ.
ಈ ವಿಲಕ್ಷಣ ಬೆರಗು ಮತ್ತು ನಿಗೂಢಗಳು ನನ್ನನ್ನು ಒಂದಷ್ಟು ಕಾಲ ಬೆಪ್ಪನನ್ನಾಗಿಸಿತು. ಮೊದಲೇ ನಾನು ಬೆಪ್ಪ ಮತ್ತು ಮಂಕ; ಇದಾದ ಮೇಲಂತೂ ಇನ್ನಷ್ಟು ಬೆಪ್ಪುತಕ್ಕಡಿಯೂ ಮಂಕುದಿಣ್ಣೆಯೂ ಆಗಿ ಅಸಹಾಯ’ಕತೆ’ಯಿಂದ ಆಕಾಶ ನೋಡುವಂತಾಯಿತು.

ಹಾಗೆ ನೋಡಿದರೆ, ಎಲೆಕ್ರ್ಟಾನಿಕ್ಸುಗಳು ಹೀಗೆ ವಿಚಿತ್ರವಾಗಿ ‘ಅನ್ಯಗ್ರಹನಿವಾಸಿಗಳ ಹಾರುವ ತಟ್ಟೆ’ಗೆ ಸಿಕ್ಕ ಪ್ಲೇನಿನಂತೆ ಯದ್ವಾತದ್ವಾ ವರ್ತಿಸುವುದು ಹೊಸದೇನಲ್ಲ. ಜೊತೆಗೆ ಇಂಥವಕ್ಕೆ ಒಂದು ನಿರ್ದಿಷ್ಟ ಉತ್ತರವಾಗಲಿ, ಕಾರಣವಾಗಲಿ ಇರುತ್ತದೆಂದುಕೊಂಡು ಹುಡುಕುವುದು ನನ್ನಮಟ್ಟಿಗೆ ವ್ಯರ್ಥವೇ ಸರಿ. ತಿಳಿದುಕೊಂಡು ಮಾಡುವುದಾದರೂ ಏನಿದೆ, ನಮ್ಮಂಥ ಸಾಮಾನ್ಯರು! ಯಂತ್ರಾಂಶ-ತಂತ್ರಾಂಶ ತಜ್ಞರಿಗೆ ಅಂಥವನ್ನು ಬಿಟ್ಟು ನಿಟ್ಟುಸಿರು ಬಿಡುವುದಷ್ಟೇ.

*

ಈ ನಿಟ್ಟಿನಲ್ಲಿ ನನಗೆ ಜರ್ಮನಿಯ ‘ಮರ್ಫಿಸ್ ಲಾ’ ನೆನಪಾಗುತ್ತಿದೆ. ಅದರಲ್ಲೂ ಎಲೆಕ್ಟ್ರಾನಿಕ್ಸುಗಳ ವಿಚಾರದಲ್ಲಿ ಮರ್ಫಿಯ ನಿಯಮಗಳು ನೂರಕ್ಕೆ ಇನ್ನೂರರಷ್ಟು ಸತ್ಯಸ್ಯ ಸತ್ಯ ಕಥನವೇ ಸರಿ! [Murphy (‘s Law: If anything can go wrong, it will) was born at Edwards Air Force Base in 1949 at North Base. It was named after Capt. Edward A. Murphy, an engineer working on Air Force.]

ಜಗತ್ಪ್ರಸಿದ್ಧವಾದ ಮತ್ತು ಅಷ್ಟೇ ಚರ್ಚಾತ್ಮಕವಾದ ಮರ್ಫಿಯನ್ನು ಮತ್ತು ಆತನ ನಿಯಮಗಳನ್ನು ತಿಳಿಯುತ್ತಾ ಹೋದಂತೆಲ್ಲ ನನ್ನನುಭವವು ಅಹುದಹುದೆಂದು ಗೋಣಾಡಿಸಿತು. ಅತಿಮುಖ್ಯವಾದ ಫೈಲೊಂದು, ಸಿಸ್ಟಮಿನಲ್ಲಿ ಸಮಯಕ್ಕೆ–ಎಷ್ಟು ಹುಡುಕಿದರೂ ಸಿಗದೆ, ಏನೆಲ್ಲ ಜಾಲಾಡಿದರೂ ಲಭಿಸದೆ ನಿರಾಶನಾಗಿ ಕೈಚೆಲ್ಲಿದ್ದುಂಟು. ಹಾಗೆಂದು ಸುಮ್ಮನಾಗದೆ ಶಪಿಸುತ್ತಲೇ ಹೊಸದಾಗಿ ಟೈಪಿಸಿದ ತರುವಾಯ ಒಂದೆರಡು ದಿನಗಳಾದ ಮೇಲೆ ಇನ್ನೇನೋ ಹುಡುಕುವಾಗ ಆಗ ಬೇಕಾಗಿದ್ದದ್ದು ಮೌಸಿನ ಬಾಣಕ್ಕೆ ತಗುಲಿ, ತಟ್ಟನೆ ಓಪನಾಗಿ ವಯ್ಯಾರದಿಂದ ನರ್ತಿಸುವಾಗ ಎಲಾ! ಕಳ್‍ಬಡ್ಡಿ ಮಗಂದೇ! ಅಂತ ಆಶ್ಚರ್ಯಗೊಂಡಿದ್ದೇನೆ. ನಿಸರ್ಗವು ಸದಾ ಹುಲುಮಾನವನನ್ನು ಅಚ್ಚಕಟ್ಟಾಗಿ ಆಟವಾಡಿಸಿ, ಆನಂದಿಸುತ್ತದೆಂಬ ಮರ್ಫಿಯ ನಿಯಮವೊಂದು ನಮ್ಮನ್ನಿರಲಿ, ಸ್ವತಃ ಈ ನಿಯಮದ ಸಂಜಾತನನ್ನೇ ಹುರಿದು ಮುಕ್ಕಿತೆಂಬುದು ವಿಷಾದನೀಯ ಮತ್ತು ಸ್ವಯಂಚೋದ್ಯ.

ಹುಣಸೂರಿಗೆ ಹೋಗಲು ಪ್ಲಾಟ್‍ಫಾರ್ಮಿನಲ್ಲಿ ನಿಂತಿದ್ದಾಗ ಸಾಲುಸಾಲಾಗಿ ಮೈಸೂರಿಗೆ ಬಸ್‍ಗಳು ಅದರಲ್ಲೂ ಬಹಳಷ್ಟು ಖಾಲಿಸೀಟುಗಳೊಂದಿಗೆ ಬಳುಕುತ್ತ ಹೊರಟಾಗ ಏನನಿಸಬೇಡ? ಅದೇ ಇನ್ನೊಮ್ಮೆ ಮೈಸೂರಿಗೆ ಹೋಗಲು ನಿಂತುಕೊಂಡರೆ, ಹುಣಸೂರಿನ ಕಡೆಗೆ ಅದೇ ‘ವೈಯ್ಯಾರದ ಖಾಲಿ ಬಿಂದಿಗೆ’ ಅಣಕಿಸುತ್ತ ಟಾಟಾ ಮಾಡುತ್ತಿರುತ್ತದೆ! ಕೈ ಜಾರಿ ಬಿದ್ದ ನಾಣ್ಯವೋ ಸ್ಕ್ರೂನೋ ಮತ್ತೇನೋ ಪುಟ್ಟ ಪದಾರ್ಥವು ತಕ್ಷಣಕ್ಕೆ ಕೈ ಹಾಕಿ ತೆಗೆಯಲಾಗದಂಥ ಮೂಲೆಗೆ ಉರುಳಿ ಹೋಗಿ ಕ್ಷಣಕಾಲ ತಬ್ಬಿಬ್ಬಾಗಿಸುವುದು, ಅಕ್ಷರಶಃ ಆಟವಾಡಿಸುವುದು. ಅಂದುಕೊಂಡ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡುವುದೇ ನಿಸರ್ಗವೆಂದುಕೊಂಡು, ಅಂಥ ನಿಸರ್ಗವನ್ನು ಸ್ಟಡಿ ಮಾಡುವುದೇ ವಿಜ್ಞಾನವೆಂದುಕೊಂಡು ಬದುಕುತ್ತಿದ್ದಾಗ್ಯೂ ಇಂಥ ಅಕರಾಳ-ವಿಕರಾಳಗಳು ಪದೇ ಪದೇ ಬೆಚ್ಚಿ ಬೀಳಿಸುವ ಪರಿ. ನಾನಂತೂ ಶಬ್ದಗಳ ಮತ್ತು ಪರಿಕಲ್ಪನೆಗಳ ಹಾಗೂ ಎಲ್ಲದಕ್ಕೂ ಸಿದ್ಧಾಂತದ ಹೆಸರಿಡುವ ಉನ್ನತ ನಾಗರಿಕ(?) ರೋಗದ ಗೋಜಿಗೆ ಹೋಗದೆ, ಮೌನವಾಗಿ ಅರ್ಥವಿಸಿಕೊಳ್ಳಲು-ಅರ್ಥವಾದ ಆನಂತರದ ಖಾಲಿಶೂನ್ಯವಾಗಲು ಪ್ರಯತ್ನಿಸುತ್ತಲೇ ಇರುತ್ತೇನೆ. ಅಥವಾ ಹಾಗಂದುಕೊಳ್ಳುತ್ತಿರುತ್ತೇನೆ. (ಇವನ್ನು ಕುರಿತಂತೆ, ‘Murphy’s laws site : All the laws of Murphy in one place’ ಎಂಬ ಅಂತರ್ಜಾಲ ತಾಣದಲ್ಲಿ ಸಾಕಷ್ಟು ವಿವರವಾದ ಮಾಹಿತಿ ಲಭ್ಯವಿದೆ.)

ಇಲ್ಲಿ ಇನ್ನೊಂದು ಕಾಮಿಡಿಯನ್ನು ದಾಖಲಿಸಲೇಬೇಕು: ಮನೆ ಬಿಟ್ಟು ಹೊರಟಾಗ ಮರ್ಫಿಯ ನಿಯಮ ನೆನಪಾಗಿ, ಈಗ ನಾನು ಮೈಸೂರಿಗೆ ಹೋಗಬೇಕು, ಬಸ್‍ನಿಲ್ದಾಣದ ಪ್ಲಾಟ್‍ಫಾರ್ಮಿನಲ್ಲಿ ಕಾಯಬೇಕು; ಆದರೆ ಹುಣಸೂರಿಗೆ ಖಾಲಿ ಬಸ್ ಹೊರಟು, ಹೊಟ್ಟೆಯಲ್ಲಿ ಸಂಕಟ ತರುತ್ತದೆ….. ಎಂದೆಲ್ಲ ಹಿಂದಿನ ಅನುಭವದ ಆಟವನ್ನು ಮೆಲುಕಿಸುತ್ತಾ ಹೋದರೆ, ಮರ್ಫಿಯ ನಿಯಮ ಜಾರಿಯಾಗುವುದನ್ನು ಅನುಭವಿಸಲು ಮನಸ್ಸು ತವಕಿಸುತಿದ್ದರೆ, ಏನದು? ಆಶ್ಚರ್ಯ! ಹೋದ ಕೂಡಲೇ ಮೈಸೂರಿಗೆ ಬಸ್ ಸಿಕ್ಕುವುದು ಮಾತ್ರವಲ್ಲದೇ ಸೀಟೂ ಸಿಕ್ಕುತ್ತದೆ!!

ಇದನ್ನು ಮೈಸೂರಿನಲ್ಲಿರುವ ನನ್ನ ಹಿರಿಯ ಸ್ನೇಹಿತರ ಬಳಿ ಹೇಳುತ್ತಾ, ‘ಮರ್ಫಿಯ ನಿಯಮ ಜಾರಿಯಾಗಲಿಲ್ಲ’ ಎಂದೆ! ಅದಕ್ಕವರು ನಗುತ್ತಾ ಹೇಳಿದರು: ‘ಇದೂ ಮರ್ಫಿಯ ನಿಯಮವೇ. ನೀವಂದುಕೊಂಡು ಹೊರಟಿದ್ದು ಉಲ್ಟಾ ಆಯಿತಲ್ಲ!’ ಎಂದರು. ಹೌದಲ್ಲ, ನನ್ನ ದಡ್ಡತನಕ್ಕೆ ನಾನೇ ಮರುಗಿ ಪೆದ್ದು ಪೆದ್ದಾಗಿ ನಕ್ಕುಬಿಟ್ಟೆ. ಬದುಕು ಇನ್ನಷ್ಟು ಬಿಚ್ಚಿಕೊಂಡಂತೆ ಭಾಸವಾಯಿತು. ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಕಥಾ ಸಂಕಲನದ ಕೊನೆಯ ಕತೆ ‘ರಹಸ್ಯವಿಶ್ವ’ದಲ್ಲಿನ ಕೊನೆಯ ಪ್ಯಾರ ನೆನಪಿಸಿಕೊಂಡೆ. (ಅದು ಹೀಗಿದೆ: ನಾನು ಸುಮ್ಮನೇ ನಿಂತೇ ಇದ್ದೆ. ಯಾರಿಗೂ ಹೇಳಲಾರದ, ನನಗೆ ನಾನೇ ಹೇಳಿಕೊಳ್ಳಬಹುದಾದ ರಹಸ್ಯವಿಶ್ವವೊಂದು ಅಂದಿನಿಂದ ನನ್ನೊಳಗೇ ರೂಪುಗೊಳ್ಳತೊಡಗಿತು.)

ಮರ್ಫಿಯ ಸಾವು ಎಂಥ ಪ್ರಾಕ್ಟಿಕಲ್ ಎಂದರೆ ಆತನು ರೂಪಿಸಿದ ನಿಯಮಕ್ಕೆ ಅವನ ಮೃತ್ಯುಸನ್ನಿವೇಶವೇ ಬಹುದೊಡ್ಡ ನಿದರ್ಶನವಾಗಿಬಿಟ್ಟಿತು.

ಕಾರು ಚಲಾಯಿಸುತ್ತ ಒನ್ ವೇ ರಸ್ತೆಯಲ್ಲಿ ಹೋಗುತ್ತಿರುವಾಗ ಮರ್ಫಿಯ ವಾಹನ, ಇಂಧನ ಮುಗಿದು ತಟಸ್ಥವಾಯಿತು. ಸೈಡಿನಲ್ಲಿ ಪಾರ್ಕ್ ಮಾಡಿ, ಆತನು ಕೈಯಲ್ಲಿ ಕ್ಯಾನು ಹಿಡಿದು ಬಂಕ್‍ಗೆ ನಡೆದುಕೊಂಡು ಹೋಗುವ ಸನ್ನಿವೇಶವದು. ಆಗ ಅವನ ಮುಂಭಾಗದಿಂದ- ಒನ್‍ವೇ ರಸ್ತೆಯಲ್ಲಿ ಅದೂ ರಾಂಗ್‍ಸೈಡಿನಲ್ಲಿ – ಮತ್ತೊಂದು ಕಾರು ಬಂದು ಗುದ್ದುತ್ತದೆ. ಆತ ಅಪಘಾತದಲ್ಲಿ ಮೃತನಾಗುತ್ತಾನೆ. ಮರ್ಫಿಯ ಬದುಕು ವಿಲಕ್ಷಣ ನಿಯಮಗಳನ್ನು ರೂಪಿಸಿದರೆ, ಅವನ ಸಾವು ದುರಂತವ್ಯಂಗ್ಯ (Tragic Irony) ಕ್ಕೊಂದು ಉದಾಹರಣೆಯಾಗಿ ಸಾಥ್ ಕೊಡುತ್ತದೆ. ಇಷ್ಟೆಲ್ಲದರಿಂದ ನನಗೊಂದು ಸಂದೇಶ ರವಾನೆಯಾಯಿತು: ‘ಬದುಕು ಇರುವುದು ಬದುಕಲಿಕ್ಕೆ, ಅಷ್ಟೆ! ಬೆದಕಲು ಅಲ್ಲ!’ ಅಂತ.

‘ವಿಚಾರವೆಂಬುದು ಸಂದೇಹಕ್ಕೊಳಗು’ ಎಂದ ಅಲ್ಲಮರ ಮಾತನ್ನು ನಾನಿನ್ನೂ ಜೀರ್ಣಿಸಿಕೊಳ್ಳುತ್ತಲೇ ಇರುವೆ. ಅದಕ್ಕೆ ಇರಬೇಕು: ಹೆಗ್ಗೋಡಿನ ಕೆ ವಿ ಸುಬ್ಬಣ್ಣನವರು ತಮ್ಮ ಜೀವಿತಾವಧಿಯ ಕೊನೆಯ ದಿನಗಳಲ್ಲಿ ‘ನಾನು ಆಲೋಚಿಸುವುದನ್ನು ಬಿಟ್ಟಿದ್ದೇನೆ; ಏಕೆಂದರದು ವ್ಯರ್ಥ ಮತ್ತು ನಿರರ್ಥಕ ಕೆಲಸ’ ಎಂದಿದ್ದು. ಅದೇ ಅಲ್ಲಮರ ಮಾತನ್ನು ಮುಂದುವರಿಸಿದರೆ, ‘ನಾ ಬಲ್ಲೆ, ಬಲ್ಲೆನೆಂಬ ಬಲ್ಲಿದರು, ಅರು-ಗುರು-ಹಿರಿಯರೆಲ್ಲರು ಸೀಮೆದಪ್ಪಿ, ಬಟ್ಟೆಗೆಟ್ಟರು ಕಾಣ ಗುಹೇಶ್ವರಾ!’

*

ಅಖಂಡವೂ ಅನೂಹ್ಯವೂ ಅಪರಿಮಿತ ಆಳಗಲವೂ ಆದ ವಿಶ್ವದ ಯಾವುದೋ ಮೂಲೆಯಲ್ಲಿರುವ ನಮ್ಮೀ ಪೃಥ್ವಿಯಲ್ಲಿ ಮನುಷ್ಯನೆಂಬ ‘ವಿಚಾರವಂತ’ ಇದ್ದಾನೆಂಬುದನ್ನು ನಿಸರ್ಗ ಲೆಕ್ಕಕ್ಕಿಟ್ಟುಕೊಂಡಿದೆಯೆ? ಬಹುಶಃ ಇಲ್ಲ. ನಮ್ಮ ನೀತಿ-ವಿಚಾರ-ಸೌಜನ್ಯಗಳಿಂದ ಪ್ರಕೃತಿಯ ವಿದ್ಯಮಾನಗಳನ್ನು ಬದಲಿಸಬಹುದೆ? ಇದಕ್ಕೂ ಇಲ್ಲ ಎಂಬುದೇ ಉತ್ತರ. ಅಂದಮೇಲೆ, ಮರ್ಫಿಯ ನಿಯಮ!? ಹುಲುಮಾನವರ ವಿರುದ್ಧ ನಿಸರ್ಗವು ಸೇಡು ತೀರಿಸಿಕೊಂಡು, ಸಾಧಿಸಬಹುದಾದರೂ ಏನಿದೆ? ಇವನ್ನು ತಿಳಿಯುವ ದಾರಿ ದೀರ್ಘ ಮತ್ತು ಗಹನ. ಶ್ರೀಯುತ ತೀರ್ಥರಾಮ ವಳಲಂಬೆಯವರ ‘ಧ್ಯಾನ’ ಎಂಬ ಸಹಜ ಸುಂದರ ಪುಸ್ತಕದ ಅಧ್ಯಾಯಗಳ ಓದು ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿದೆ. ಅಂದರೆ ವಿಶ್ವದ ಮಟ್ಟಿಗೆ ನಾವಿರುವ ಭೂಮಿ ಮತ್ತು ಭೂಮಿಯಲ್ಲಿನ ಚಟುವಟಿಕೆಗಳು ಪರಿಣಾಮ ಬೀರುವುದೇ ಇಲ್ಲವೆ? ಹಾಗಿದ್ದಲ್ಲಿ ಒಳಿತು-ಕೆಡಕು, ಪ್ರೀತಿ-ಹಿಂಸೆ, ದಯೆ-ಕ್ರೌರ್ಯ…..ಇಂಥ ಯುಗಳಗಳಿಗೆ ವ್ಯಾಖ್ಯಾನವೇನು??

‘ಆಕಾಶಗಂಗೆ’ ಇದೊಂದು ಗ್ಯಾಲಕ್ಸಿ! ಇದರ ವೈಶಿಷ್ಟ್ಯ ಎರಡು: ಇದು ನಮ್ಮದೇ ಅಂದರೆ ನಮ್ಮ ಸೌರವ್ಯೂಹದ ನೆಲೆ ಈ ಗ್ಯಾಲಕ್ಸಿಯಲ್ಲೇ. ಎರಡನೆಯದಾಗಿ ಬರಿಗಣ್ಣಿಗೆ ಗೋಚರಿಸುವ ಗ್ಯಾಲಕ್ಸಿಯಿದು. ನಿರಭ್ರವಾದ ಮೋಡರಹಿತ ಚಂದ್ರನಿಲ್ಲದ ಇರುಳಲ್ಲಿ ಉತ್ತರದಿಂದ ದಕ್ಷಿಣದವರೆಗೆ ಹರಡಿದ ‘ಬೆಳಕಿನ ನದಿ’ಯಿದು. ಜೊತೆಗೆ ದೃಗ್ಗೋಚರ! ಇದನ್ನು ಹಾಲುಹಾದಿ, ಕ್ಷೀರಪಥ, ಮಿಲ್ಕೀವೇ ಎಂದೆಲ್ಲ ಕರೆದು ತಣಿದಿದ್ದೇವೆ.

ವಿಶ್ವದಲ್ಲಿರುವ (ಕೇವಲ ಜಗತ್ತು ಅಲ್ಲ) ಹತ್ತುಸಾವಿರ ಕೋಟಿ ಗ್ಯಾಲಕ್ಸಿಗಳಲ್ಲಿ ‘ನಮ್ಮ ಈ ಆಕಾಶಗಂಗೆಯೂ ಒಂದು.’ ನಮ್ಮ ಈ ಆಕಾಶಗಂಗೆಯಲ್ಲಿ ಬೆಳಕಿನಾಕರ ಸೂರ್ಯಪರಮಾತ್ಮನೂ ಸೇರಿದಂತೆ ಹತ್ತು ಸಾವಿರ ಕೋಟಿ ನಕ್ಷತ್ರಗಳಿವೆ. ನಮ್ಮೀ ಕ್ಷೀರಪಥದಂತೆ ಇನ್ನೂ ಒಂದು ಕಡಮೆ, ಹತ್ತುಸಾವಿರ ಕೋಟಿ ಗ್ಯಾಲಕ್ಸಿಗಳಿವೆ! ಒಂದೊಂದು ಗ್ಯಾಲಕ್ಸಿಯಲ್ಲಿ ನಮ್ಮ ಸೂರ್ಯನೆಂಬ ನಕ್ಷತ್ರದಂತೆ, ಒಂದು ಕಡಮೆ, ಹತ್ತುಸಾವಿರ ಮಿನುಗುತಾರೆಗಳಿವೆ!! ನಮ್ಮ ಹೆಮ್ಮೆಯ ಭೂಮಿ ಇರುವ-ಭೂಮಿಯನ್ನು ಕಂಟ್ರೋಲಿಸುತ್ತಿರುವ ಅಧಿಪತಿ ಸೂರ್ಯನು ‘ವಿಶ್ವಮಟ್ಟದಲ್ಲಿ’ ತೀರಾ ಚಿಕ್ಕ ನಕ್ಷತ್ರ! ಅಯ್ಯೋ ಭಗವಂತ, ವಿಶ್ವದಲ್ಲಿ ಭೂಮಿಯ ಗಾತ್ರ ಒಂದು ಧೂಳಿನ ಕಣ ಅಥವಾ ಧೂಳಿನ ಕಣದ ಕಾಲುಭಾಗ!! ಆದರೆ ನಮ್ಮ ಭೂಮಿ ನಮ್ಮ ಪಾಲಿಗೆ ಎಷ್ಟು ದೊಡ್ಡದು ಎಂಬುದನ್ನು ವಿವರಿಸಬೇಕಿಲ್ಲ, ಅಲ್ಲವೇ.

ನಮ್ಮ ಗ್ಯಾಲಕ್ಸಿಯ ಈಗಿನ ವಯೋಮಾನ ಹನ್ನೆರಡು ಶತಕೋಟಿ ವರ್ಷ; ಇನ್ನು ಕೇವಲ ಏಳು ಶತಕೋಟಿ ವರ್ಷಗಳಷ್ಟೇ ಅಂತೆ, ಇದರ ಶೇಷಾಯುಷ್ಯ!

ಈ ಎಲ್ಲ ಆಕಾಶಪುರಾಣವನ್ನು ಇಲ್ಲಿ ಹೇಳಿದ್ದಕ್ಕೆ ಕ್ಷಮೆ ಯಾಚಿಸಲೇಬೇಕು. ಏಕೆಂದರೆ ಇದು ಗೊತ್ತಿರುವ ವಿಚಾರವೇ. ಆದರೆ ಈ ಭೂಮಿಯನ್ನೂ ಕ್ರಿಸ್ತಪೂರ್ವ-ಕ್ರಿಸ್ತಶಕ ಎಂಬ ಕಾಲಗಣನೆಯನ್ನೂ ಇನ್ನಿಲ್ಲದ ಶಾಶ್ವತವೆಂಬಂತೆ ಅಂದುಕೊಂಡು ಜೀವಿಸುತ್ತೇವಲ್ಲ! ಅದು ಈ ಅರಿವಿನಿಂದ ಅಲ್ಲಾಡಿ ಹೋಗುತ್ತದೆ. ಒಂದು ಅರಿವು ಇನ್ನೊಂದು ಅರಿವನ್ನು ತಿಂದು ತೇಗುತ್ತದೆ. ಪೂರ್ಣಚಂದ್ರತೇಜಸ್ವಿಯವರ ಮಾತು ಇಲ್ಲಿ ಉಲ್ಲೇಖಾರ್ಹ: ಜ್ಞಾನವೆಂಬುದು ಅಜ್ಞಾನದ ಅರಿವು; ಅಜ್ಞಾನವೆಂಬುದು ಜ್ಞಾನದ ಮರೆವು!

ಇಂತಪ್ಪ ವಿಶ್ವವು ಹೀಗೆ ನಿರಂತರವಾಗಿ ವಿಸ್ತರಗೊಳ್ಳುತ್ತಲೇ ಇದೆ; ಹಿಗ್ಗುತ್ತಲೇ ಇದೆ ಎಂಬುದು ವಿ-ಜ್ಞಾನಿಗಳ ಅಂಬೋಣ- ನಾವು ನಂಬೋಣ!

*

ಈ ಎಲ್ಲವನ್ನೂ ಇಂಥ ಚೌಕಟ್ಟಿನಲ್ಲಿ ನಾನು ನೆನಪಿಸಿಕೊಂಡು ಮೌನಿಯಾಗಲು ಮರ್ಫಿಯ ಮಾತು ಮತ್ತು ಬದುಕು ಹೇಗೆ ಕಾರಣವೋ ಅಷ್ಟೇ ಮಹತ್ವದ್ದು, ನನ್ನ ಪೆನ್‍ಡ್ರೈವಿನ ಕಥಾನಕ. ಚಿಕ್ಕಪುಟ್ಟ ಸಂಗತಿಗಳ ಗತಿಗಳಲ್ಲಿ ಬದುಕಿನ ಗಾಢತೆಯು ಅಂಟಿಯೂ ಅಂಟದಂತಿರುತ್ತದೆ; ಅದನ್ನು ಕಾಣುವ, ಕಾಣ್ಕೆಯಾಗಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕಷ್ಟೇ. ಇಷ್ಟಕ್ಕೂ ಚಿಕ್ಕದು-ದೊಡ್ಡದು ಎಂದು ವಿಭಜಿಸುವುದೇ ತಪ್ಪು. ಸಾಗರವೆಂಬುದು ಪುಟ್ಟ ಪುಟ್ಟ ನೀರಹನಿಗಳ ಸಂಗ್ರಹವೇ ತಾನೇ. ಎಲ್ಲವನ್ನೂ ಅಂದುಕೊಳ್ಳುವುದರಲ್ಲಿ, ಅನುಭವಕ್ಕೆ ತಂದುಕೊಳ್ಳುವುದರಲ್ಲಿ ಅಡಕವಾಗಿದೆ. ಅಷ್ಟಲ್ಲದೇ ದಾರ್ಶನಿಕ ಕವಿಋಷಿ ಕುವೆಂಪು ಹೇಳಿದ್ದು: ಇಲ್ಲಿ ಯಾವುದೂ ಮುಖ್ಯವಲ್ಲ ಅಥವಾ ಎಲ್ಲವೂ ಮುಖ್ಯ. ಯಾವುದಕ್ಕೂ ಇಲ್ಲ ಅರ್ಥ ಅಥವಾ ಎಲ್ಲಕ್ಕೂ ಇದೆ ಅರ್ಥ; ನೀರೆಲ್ಲ ಊ ತೀರ್ಥ!

ಪೆನ್ನನ್ನೂ ಪೆನ್‍ಡ್ರೈವನ್ನೂ ಈಗ ಗೌರವದಿಂದ ಕಾಣುತ್ತೇನೆ. ಏಕೆಂದರೆ PUSH ಮತ್ತು PULL ಗಳ ಮಹಾದ್ವಾರಗಳು ಎಂಥೆಂಥ ನಿಜದ ಮಜಲನ್ನು ತೆರೆದು ತೋರುತ್ತದೋ, ಬಲ್ಲವರಿಗೆ ವಿದಿತ. ಬೆಲ್ಲದ ಸವಿ; ಬೇವಿನ ಕಹಿಗಳೆರಡೂ ಗಂಟಲನ್ನು ಹಾಯ್ದ ಮೇಲೆ ರುಚಿ ಕಳೆದುಕೊಳ್ಳುವಂತೆ.

ಪ್ರಸ್ತುತ ತೇಜಸ್ವಿಯವರನ್ನೂ ಆಚಾರ್ಯ ರಜನೀಶರನ್ನೂ ಒಟ್ಟೊಟ್ಟಿಗೆ ಗಂಭೀರವಾಗಿ ಓದುತ್ತಿರುವುದರ ಹಿನ್ನೆಲೆಯಲ್ಲಿ ನನ್ನ ಮಸ್ತಿಷ್ಕವು ನನಗರಿವಿಲ್ಲದಂತೆ, ಇಂಥ ಲಹರಿಯನ್ನು ಬರೆಸುತ್ತಿದೆ. ಏಕೆಂದರೆ ಅನಿಸಿದ್ದನ್ನು ಬರೆಯುವ ಅಥವಾ ಟೈಪಿಸುವ ಖಯಾಲಿಗೆ ಇತ್ತೀಚೆಗೆ ವಶವಾಗಿರುವೆ. ಹಾಗಂತ ಈಗ ಗೊತ್ತಾಗುತ್ತಿದೆ!

ಋಷಿಯಾಗಲಾರದವನು ಕವಿಯಾಗಲಾರ (ನಾನೃಷಿಃ ಕುರುತೇ ಕಾವ್ಯಂ) ಎಂಬ ಉಪನಿಷತ್ಕಾರರ ಮಾತನ್ನು ಟ್ವಿಸ್ಟ್ ಮಾಡುವುದಾದರೆ: ತೇಜಸ್ವಿಯಂಥ ಸೂಕ್ಷ್ಮಜ್ಞ ಕಲಾವಿದ ಹಾಗೂ ಆಚಾರ್ಯ ರಜನೀಶರಂಥ ರಹಸ್ಯದರ್ಶಿ-ಇಬ್ಬರನ್ನೂ ಒಂದೇ ಕ್ಯಾನ್ವಾಸಿನ ಅಕ್ಕಪಕ್ಕ ಇಟ್ಟು (ತೂಗಿ ನೋಡಲೂ ಅಲ್ಲ; ಹೋಲಿಸಲೂ ಅಲ್ಲ; ಹೆಚ್ಚೂ ಕಡಮೆ ಅಂತ ಮೌಲ್ಯನಿರ್ಣಯ ಮಾಡಲೂ ಅಲ್ಲ) ಹಾಗೇ ಸುಮ್ಮನೆ ಜೊತೆಗಿಟ್ಟು ಮೌನವಾಗಿ ಅಷ್ಟೇ ಆಗಸದ ನೀಲಿಯಲ್ಲಿ ಲೀನವಾಗಿ ನೋಡಬಯಸುತ್ತೇನೆ. ಪರಮಾತ್ಮನನ್ನು ಅರಿಯಲು ಅಲ್ಲ; ಪರಮಾರ್ಥವನ್ನು ಅರ್ಥವಿಸಿಕೊಳ್ಳಲು!

ಏನೆಲ್ಲ ಕಂಡು-ಕೊಳ್ಳುತ್ತಿದ್ದರೂ ಯಾವುದೂ ಗಹನವನ್ನೂ ಗಗನವನ್ನೂ ಅನುಭವಿಸಲು ಸಹಕಾರಿಯಾಗುತ್ತಿಲ್ಲ ಎಂಬ ಕೊರಗು ಉಳಿದೇ ಬಿಡುತ್ತದೆ. ನಾವು ನಡತೆಯಲ್ಲಿ ಹೆಚ್ಚು ಹೆಚ್ಚು ಧಾರ್ಮಿಕರಾಗುತ್ತಾ, ತಿಳಿಯುವ ಉಮೇದಿಯಲ್ಲಿ ಆಧ್ಯಾತ್ಮಿಕರಾಗುತ್ತಾ ಹೋದ ಹಾಗೆಲ್ಲ ಪ್ರಶ್ನೆಗಳು ಕಡಮೆಯಾಗಿ ಅದರ ಜಾಗದಲ್ಲಿ ‘ಪ್ರಶ್ನಾತೀತವಾದ ಮೌನ’ ಮೂಡುತ್ತದೆ ಎಂದು ತಿಳಿಯಲಾರಂಭಿಸಿದ್ದೇನೆ. (ಇಲ್ಲೊಂದು ಸ್ಪಷ್ಟನೆ ಬೇಕು: ನಡತೆಯಲ್ಲಿ ಧಾರ್ಮಿಕತೆ ಎಂದರೆ ಪೂಜೆ-ಪುರಸ್ಕಾರಗಳಲ್ಲಿ ಮೈಮರೆಯುವುದಲ್ಲ; ಕಾಠಿಣ್ಯದ ಬದಲು ಸೌಮ್ಯತೆಯೂ ಅಹಮ್ಮಿನ ಬದಲು ವಿನಯತೆಯೂ ಅರಳುವುದು)

ಏಕೆಂದರೆ ಅರ್ಥ ಎಂಬುದು ಎಲ್ಲಿಯೂ ಇರುವುದಿಲ್ಲ; ನಮ್ಮೊಳಗೇ ಹುದುಗಿರುವುದನ್ನು ಕಂಡು-ಕೊಳ್ಳಲು ಯಾವುದೋ ನೆಪ-ನೆವ-ಆಕಸ್ಮಿಕ-ಸಾಂದರ್ಭಿಕಗಳು ನಮ್ಮಾಯುಷ್ಯದುದ್ದಕ್ಕೂ ಕೈಗೆ-ಕಾಲ್ಗೆ ತೊಡರುತ್ತಲೇ ಇರುತ್ತವೆ. ಈ ಸೃಷ್ಟಿಯನ್ನು ಅನುಭವಿಸಲು-ಅರ್ಥವಿಸಿಕೊಳ್ಳಲು ನಿಸರ್ಗವು ಪ್ರತಿ ಬಾರಿ ಇಂಥ ಸಲಕರಣೆಗಳನ್ನು ಎದುರಿಡುತ್ತಲೇ ಹೋಗುತ್ತಿರುತ್ತದೆ. ಅದನ್ನು ನಮ್ಮೊಳಗೆ ವಿಶ್ಲೇಷಿಸಿ-ಮಥಿಸಲು ವ್ಯವಧಾನ ಕೇಳುತ್ತದೆ ಎಂಬ ಗೂಢಾರ್ಥವೀಗ ತಿಳಿವಿಗೆ ಬರಹತ್ತಿದೆ.

ಇನ್ನೊಬ್ಬರ ಹೃದಯದ ಬಡಿತ ಆಲಿಸಲು ಸಾಧನ ಬೇಕು. ನಮ್ಮ ಹೃದಯದನಿಯನಾಲಿಸಲು ನಮ್ಮ ‘ಎಚ್ಚರದ ಸ್ಥಿತಿ’ ಸಾಕು ಅಂತನ್ನುವ ಸತ್ಯ ಸತತವಾಗುತ್ತಿದೆ. ಏನೆಲ್ಲ ಹೇಳಿಕೊಂಡ ತರುವಾಯವೂ ಕೊನೆಗೆ ಇನ್ನೂ ಏನೋ ಹೇಳಬೇಕೆನಿಸುತ್ತದೆ. ಅದಕ್ಕೆ ಎರಡು ಪ್ರಬಲ ಕಾರಣಗಳಿರಬಹುದು: ಒಂದು, ಹೇಳಬೇಕಾದ್ದನ್ನು ಸಮರ್ಪಕವಾಗಿ ಹೇಳಲಾಗದಾಗ. ಇನ್ನೊಂದು, ಹೇಳುತ್ತಿರುವ ವಿಷಯವೇ ಮತ್ತೆ ಮತ್ತೆ ಮಥಿಸುವಂಥ ಸ್ವರೂಪವನ್ನು ಹೊಂದಿದ್ದಾಗ!

ಏನನ್ನೂ ಹೇಳಿದಂತಾಗಲಿಲ್ಲ ಅಂತ ಅನಿಸಿದ ತಕ್ಷಣ ‘ಸುಮ್ಮನಾಗು ಅಥವಾ ನಿಲ್ಲಿಸು’ ಎಂಬುದು ಝೆನ್ ತತ್ತ್ವಜ್ಞಾನ. ಅದರನ್ವಯ, ನಿಲ್ಲಿಸುತ್ತೇನೆ ಹಾಗೂ ಸುಮ್ಮನಾಗುತ್ತೇನೆ. ಕವಿ ಕುವೆಂಪು ಅವರ ಮಾತಿನಿಂದಲೇ: ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. (ಅವರ ಕವನ ಸಂಕಲನವೊಂದರ ಹೆಸರು: ಅನುತ್ತರಾ, ತೇಜಸ್ವಿಯವರ ಮನೆಯ ಹೆಸರು: ನಿರುತ್ತರಾ)

ಹೆಚ್ ಎನ್ ಮಂಜುರಾಜ್, ಮೈಸೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಉಷಾ ನರಸಿಂಹನ್‌, ಮೈಸೂರು
ಉಷಾ ನರಸಿಂಹನ್‌, ಮೈಸೂರು
4 years ago

ಸರ್,

ಪಂಜುವಿನ ನಿಮ್ಮ ಬರವಣಿಗೆ ಓದಿದೆ.ತುಂಬ ಗಹನವಾಗಿದೆ.

ಮರ್ಫಿ ಲಾ ಕುರಿತು ಎಲ್ಲೋ ಕೇಳಿದ್ದು ನೆನಪಾಯ್ತು.

ತುಂಬ ಎತ್ತರ ಸ್ಥರದ ಆಲೋಚನಾ ಕ್ರಮ.

highly pholosophical.

ಗ್ರಹಿಸಲು ಒಂದು ಮಟ್ಟದ ಬುದ್ಧಿ ಶಕ್ತಿ ಬೇಕು.🙏

great sir.

ಹೆಚ್‌ ಎನ್‌ ಮಂಜುರಾಜ್

ಧನ್ಯವಾದಗಳು ಮೇಡಂ

2
0
Would love your thoughts, please comment.x
()
x