ಪೀಠಿಕೆ:
ಪ್ರೀತಿಯೋ ದ್ವೇಷವೋ ಕವಿತೆಯಾಗೋದುಂಟು. ತಿರಸ್ಕಾರ, ನೋವುಗಳು ಕವಿತೆಯ ಮಿತಿ ದಾಟಿ ಕತೆಗಳಾಗೋದೂ ಉಂಟು. ಆದ್ರೆ ನಿಜಜೀವನದ ನೋವಿಗೊಂದು ಮಾತಿನ ರೂಪ ಸಿಕ್ಕರೆ ? ವಿದ್ಯಾರ್ಥಿಯೊಬ್ಬ ತನ್ನ ಇಂಟರ್ನಲ್ಸು, ಎಕ್ಸಾಮುಗಳನ್ನೇ ಕತೆಯ ವಸ್ತುವಾಗಿಸಿದ್ರೆ ? ಡಾಕ್ಟರೊಬ್ಬ ತನ್ನ ಆಪರೇಷನ್ನುಗಳ ಸುತ್ತ, ಕಂಪ್ಯೂಟರ್ ಉದ್ಯೋಗಿಯೊಬ್ಬ ತನ್ನ ಜೀವನ ಶೈಲಿಯ ಬಗ್ಗೆ, ಆಟಗಾರನೊಬ್ಬ ತಾನು ಈಗಿನ ಹಂತಕ್ಕೆ ಬರಲು ಕಷ್ಟಪಟ್ಟ ಬಗ್ಗೆಯೋ ಬರದ್ರೆ ? ಸದ್ಯಕ್ಕಂತೂ ಗೊತ್ತಿಲ್ಲ. ರಕ್ತದಾನ ಮಾಡಲೆಂದು ಹೋಗಿ, ಇತ್ತ ಸಂಜೆಯ ತಿಂಡಿಯೂ ಇಲ್ಲದೇ, ಅತ್ತ ಬಸ್ಸೂ ಇಲ್ಲದೇ ನಡಕೊಂಡೇ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೆನಪಾದ ಎಳೆ ಇಲ್ಲೊಂದು ಧ್ವನಿಯಾಗಿದೆಯಷ್ಟೆ.
ಎಲ್ಲಾ ಪ್ರಶ್ನೆಗಳಿಗೂ ಒಂದು ಉತ್ತರ, ಎಲ್ಲಾ ನೋವಿಗೂ ಒಂದು ಪರಿಹಾರ ಅನ್ನೋದು ಇದ್ದೇ ಇರುತ್ತೆ ಅಂತಾರೆ. ನೋವೇ ನಲಿವಿನ ಮೆಟ್ಟಿಲು, ಸೋಲು-ಗೆಲುವುಗಲೆಲ್ಲಾ ಒಂದೇ ನಾಣ್ಯದ ಎರಡು ಮುಖಗಳು, ನೋವು-ನಲಿವೆನ್ನೋದು ಬದುಕ ಬಂಡಿಯ ಬೇರೆ ಬೇರೆ ಕಡ್ಡಿಗಳು. ಇವತ್ತು ಮೇಲಿದ್ದ ಕಡ್ಡಿ ನಾಳೆಯ ಉರುಳುಗಾಲಿಯಲ್ಲಿ ಕೆಳಗಾಗುತ್ತೆ , ಒಳ್ಳೆ ಕಾಲ ಬಂದೇ ಬರುತ್ತೆ ಅಂತೆಲ್ಲಾ ಫೇಸ್ಬುಕ್ಕಲ್ಲಿ, ವಾಟ್ಸಾಪಲ್ಲಿ ಓದಿ, ಲೈಕೊತ್ತುತ್ತಿದ್ದ ರಾಮುವಿನ ನಿಜ ಜೀವನದಲ್ಲಿ ಆಗುತ್ತಿದ್ದುದೆ ಬೇರೆ. ಅವನಿಗೆ ಕೆಲಸ ಬರೋಲ್ಲ. ಅವನಿಗೆ ಹೇಳೋದು, ಯಾವುದಾದರೂ ಬಂಡೆಗೆ ಹೇಳೋದು ಒಂದೇ ಅನ್ನುತ್ತಿದ್ದ ಸಹೋದ್ಯೋಗಿಗಳು ಒಂದೆಡೆ. ಇದ್ಯಾವುದರ ಅರಿವಿಲ್ಲದೇ ಹೊಸದಾಗಿ ಸೇರಿ ಕಷ್ಟವಾಗುತ್ತಿದ್ದ ಕೆಲಸವನ್ನು ಇಷ್ಟಪಟ್ಟು ಕಲಿಯಲು ಪ್ರಯತ್ನಿಸುತ್ತಿದ್ದ ರಾಮು ಇನ್ನೊಂದೆಡೆ. ರಾಮು ಕಲಿಯೊಲ್ಲ ಅಂತ ಅರ್ಧ ಮನಸ್ಸಿಂದ ಏನೋ ಒಂದು ಹೇಳಿಕೊಟ್ಟ ಶಾಸ್ತ್ರ ಮಾಡುತ್ತಿದ್ದೋರು ಒಂದು ಕಡೆ ಆದ್ರೆ. ಆ ಅರೆಬರೆ ಕಲಿಯುವಿಕೆಯಿಂದ ಮಾಡುತ್ತಿದ್ದ ಪ್ರತೀ ಕೆಲಸದಲ್ಲೂ ಪರಿತಪಿಸುತ್ತಿದ್ದ ರಾಮು ಮತ್ತೊಂದೆಡೆ. ಹೊಸ ಕೆಲಸ ಅಂದ್ರೆ ಏನಾದ್ರೂ ತಪ್ಪಾಗೋದು ಸಹಜ. ಆದ್ರೆ ರಾಮುವಿಗೆ ಕೆಲ್ಸ ಕೊಟ್ಟರೆ ಎಲ್ಲಿ ತಪ್ಪು ಮಾಡಿಬಿಟ್ಟಾನೋ ಅಂತ ಹೊಸ ಕೆಲಸ ಕೊಡೋಕೆ ಹಿಂಜರಿಯುತ್ತಿದ್ದ ಜನಗಳು. ಕೆಲಸವಿಲ್ಲದೇ ಪ್ರಬುದ್ದತೆಯಿಲ್ಲ, ಪ್ರಬುದ್ದತೆ ಬರದೇ ಕೆಲಸವಿಲ್ಲ ಅನ್ನೋ ಸಂದಿಗ್ಧಗಲ್ಲಿ ರಾಮು ನಲುಗುತ್ತಿದ್ದ. ತನ್ನ ಬಗ್ಗೆ ಯಾರೇನೇ ಹಾಸ್ಯ ಮಾಡಿದ್ರೂ , ಬೈದರೂ ರಾಮುವಿನದು ಅದೇ ತಣ್ಣನೆಯ ಪ್ರತಿಕ್ರಿಯೆ. ಮುಗುಳುನಗು. ಕೊನೆ ಕೊನೆಗೆ ಈ ಮುಗುಳುನಗುವೂ ಸಹೋದ್ಯೋಗಿಗಳಿಗೆ ಸಹಿಸಲಸಾಧ್ಯವಾಗಿ ಅದಕ್ಕೂ ಏನಾದರೊಂದು ಬೈಗುಳ ಕಾಯಮ್ಮಾಗಿತ್ತು. ಆದ್ರೆ ಎಂತಹ ಐಸಾದ್ರೂ ಕರಗಲೇಬೇಕಲ್ಲ ಒಂದು ದಿನ. ಎಷ್ಟೆತ್ತರದ ಡ್ಯಾಮಾದ್ರೂ ಭದ್ರ ಮಳೆಯಾಗಿ , ಅದ್ರ ನೀರು ಅಪಾಯದ ಮಟ್ಟ ಮುಟ್ಟಿದಾಗ ತೆರೆಯಲೇಬೇಕಲ್ಲಾ ? ಕಳೆದ ಎರಡು ದಿನಗಳ ಬೆಳಿಗ್ಗೆ ಎಂಟರಿಂದ ರಾತ್ರೆ ಒಂಭತ್ತರ ತನಕದ ಆಫೀಸ್ ಕೆಲಸ ರಾಮುವಂತ ರಾಮುವನ್ನೂ ರೊಚ್ಚಿಗೆಬ್ಬಿಸಿತ್ತು. ಒಂದೆರಡು ವರ್ಷಗಳ ಹಿಂದಿನ ಭಾವವೇ ಇದ್ದಿದ್ದರೆ ಅದೆಷ್ಟು ಜನರಿಗೆ ಗ್ರಹಚಾರ ಬಿಡಿಸುತ್ತಿದ್ದನೋ ಗೊತ್ತಿಲ್ಲ. ಆದ್ರೆ ನಿನ್ನೆ. ನಿನ್ನೆಯ ರೊಚ್ಚು, ರೋಷಗಳು ಇಂದು ಹೊಟ್ಟೆ ತುಂಬಿಸೋಲ್ಲವಲ್ಲ.
ಯಾವುದೋ ಹೊಸಕೆಲಸ. ಕೆಲಸವೆನೂ ತೀರಾ ಹೊಸದಲ್ಲ. ರಾಮುವಿಗೆ ಸ್ವಂತ ಮಾಡಿ ಹೊಸದಷ್ಟೇ. ಹಿಂದೊಮ್ಮೆ ನೊಡಿದ ನೆನಪಿದ್ದರೂ ಅದು ಮಸುಮಸುಕು. ನಿನಗೆ ಇಷ್ಟೂ ಗೊತ್ತಿಲ್ವಾ ? ಇದೂ ಅರ್ಥವಾಗೋಲ್ವ ಅನ್ನೋ ಪ್ರಶ್ನೆಗಳಿಂದ ಬೇಜಾರಾಗಿ ಅವನ ಪ್ರಶ್ನೆಗಳು, ಸಂದೇಹಗಳು ಯಾವಾಗ್ಲೋ ಸತ್ತು ಹೋಗಿದ್ವು. ಆ ಎಲ್ಲಾ ಪ್ರಶ್ನೆಗಳು ಈಗ ಒಂದೊಂದಾಗಿ ಕಾಡತೊಡಗಿದ್ವು. ಎಲ್ಲ ಸರಿಯಾಗಿ ನಡೆಯಿತೆಂದ್ರೆ ಒಂದೇ ದಿನದಲ್ಲಿ ಮುಗಿದುಹೋಗೋ ಕೆಲಸ. ಆದ್ರೆ ಅದ್ರ ಪ್ರತೀ ಹಂತದಲ್ಲೂ ಏನಾದ್ರೂ ತಪ್ಪಾಗಿ ಅದು ಒಂದು ವಾರವಾದ್ರೂ ಮುಗಿಯದ ಅನಂತ ಸಾಧ್ಯತೆಗಳಿದ್ವು. ಯಾರದೋ ರಜೆಗೆ ನೆರವಾಗಲು ಯಾರಾದ್ರೂ ಕುರಿ ಬೇಕಿತ್ತು. ಆಗ ಮತ್ತೆ ನೆನಪಾದ್ದು ನಮ್ಮ ಪ್ರೀತಿಯ ರಾಮು. ಮೊದಲನೇ ದಿನ ವಿಪರೀತ ಉತ್ಸಾಹ. ಇಂದಿದನ್ನು ಮುಗಿಸೇಬಿಡುತ್ತೇನೆ ಅಂದು. ಶುರು ಮಾಡಿದ. ಒಂದು ಹಂತದವರೆಗೆ ಕೆಲಸ ಸರಿಯಾಗೇ ನಡಿದಿತ್ತು. ಸಂಜೆಯ ಸುಮಾರಿಗೆ ಯಾವುದೋ ಸಮಸ್ಯೆ ಕಚ್ಚಿಕೊಂಡಿತ್ತು. ಇಲ್ಲಿಯವರೆಗೆ ತಿಳಿದಿದ್ದನ್ನೆಲ್ಲಾ ಬಳಸಿದ್ರೂ .. ಊಹೂಂ. ಬಗೆಹರಿಯಲೊಲ್ಲದ ಸಮಸ್ಯೆಯದು. ಕೇಳಲಾರದ ಮನಸ್ಸಿನಿಂದ ಕೇಳಿದ ಒಬ್ಬನನ್ನು. ಅವನೇನೋ ಹತ್ತು ಪ್ರಶ್ನೆ ಕೇಳಿದನಿವನಿಗೆ. ತಲೆಬುಡ ಗೊತ್ತಿದ್ದರೆ ತಾನೇ ರಾಮುವಿಗೆ. ಮೊದಲನೆ ಸಲ ಹಿಂಗಿಂಗೆ, ಹಿಂಗಿಂಗೆ.. ಇಷ್ಟೇ ಅಂದಾಗ ಇಷ್ಟೇನಾ ಅಂದ್ಕೊಂಡಿದ್ದ. ಆದ್ರೆ ಸ್ವಂತ ಮಾಡೋಕೆ ಶುರು ಮಾಡಿದಾಗ್ಲೇ ಅರ್ಥವಾಗಿದ್ದು ವಾಸ್ತವ. ಮೊದಲ ಸಮಸ್ಯೆ ಬಗೆಹರಿಸಿ ಖುಷಿಯಾಗುವಷ್ಟರಲ್ಲೇ ಮತ್ತೊಂದು. ಅದಕ್ಕೊಂದು ಪರಿಹಾರವೆನ್ನುವಷ್ಟರಲ್ಲೇ ಮಗದೊಂದು. ಪ್ರತೀ ಹಂತದಲ್ಲೂ ಸಾಲು ಸಾಲು ಸಮಸ್ಯೆಗಳು. ಇವನಿಗೆ ಉತ್ತರ ಹೇಳಿ ಹೇಳಿ ಹೇಳುವವನು ದಂಗಾಗಿ ಮನೆಗೆ ಹೋಗಿದ್ದ. ಘಂಟೆ ಏಲೂಕಾಲಾಗಿ ಏಳರ ದಿನಾ ಮನೆಗೆ ಹೋಗೋ ಲೇಟ್ ಬಸ್ಸು ಹೋಗಿತ್ತು. ಪರ್ವಾಗಿಲ್ಲ. ಇವತ್ತೀ ಸಮಸ್ಯೆ ಬಗೆಹರಿಸೇ ಸಿದ್ದ ಅಂತ ನಿರ್ಧರಿಸಿಬಿಟ್ಟಿದ್ದ ರಾಮು. ಯಾಕೋ ಸಮಸ್ಯೆಗಳೊಳಗೆ ಮುಳುಮುಳುಗಿ ಅಭ್ಯಾಸವಾಗಿ ರೋಸಿಹೋಗಿದ್ದ ರಾಮುವಿಗೆ ದಿನಾ ಐದೂವರೆಯ ಮಾಮೂಲು ಬಸ್ಸಿಗೆ ಹೋಗದಿರೋದೆ ಒಂದು ಅಭ್ಯಾಸವಾಗಿಬಿಟ್ಟಿತ್ತು ! ಎಷ್ಟೇ ಲೇಟಾದ್ರೂ ಪರವಾಗಿಲ್ಲ. ಸಮಸ್ಯೆಗಳನ್ನ ತನ್ನದೇ ರೀತಿಯಲ್ಲಿ ಅರ್ಥ ಮಾಡಿಕೊಂಡು ಅದಕ್ಕೊಂದು ಪರಿಹಾರ ಹುಡುಕೋ ಹಂತಕ್ಕೆ ಹಂತ ಹಂತವಾಗಿ ಅವನಿಗರಿವಿಲ್ಲದೇ ಬೆಳೆಯುತ್ತಿದ್ದ ರಾಮು.
ಗಂಟೆ ಏಳೂವರೆಯಾಯ್ತು. ಎಂಟಾಯ್ತು. ಜನರೆಲ್ಲಾ ಜಾಗ ಖಾಲಿ ಮಾಡಲಾರಂಭಿಸಿದ್ರೂ ರಾಮುವಿನ ಕೆಲ್ಸ ಮುಗಿದಿರಲಿಲ್ಲ. ರಾಮುವಿನ ಕಷ್ಟ ನೋಡಿದ್ರೂ ನೋಡದವರಂತೆ ಎಲ್ಲೋ ಮೂಲೆಗಳಲ್ಲಿ ಒಬ್ಬಿಬ್ಬರು ಕಿವಿಗೊಂದು ಇಯರ್ಫೋನ್ ಸಿಕ್ಕಿಸಿ ತಮ್ಮ ಕಂಪ್ಯೂಟರ್ಗಳಲ್ಲಿ ಮುಳುಗಿಹೋಗಿದ್ದರು. ಎಂಟೂವರೆಯ ತನಕ ಅವರಿವರಿಗೆ ಕೇಳಿ ಕೇಳಿ ಬೇಸತ್ತ ರಾಮು ಇನ್ನು ಈ ಬಗ್ಗೆ ಯಾರಿಗೂ ಕೇಳಬಾರದೆಂದುಕೊಂಡಿದ್ದ. ಒಂದನ್ನು ಬಗೆಹರಿಸಿದರೆ ಎರಡನೆಯದು. ಅದಾದ್ರೆ ಮೂರನೆಯದು. ಮೂರನೆಯದಕ್ಕೆ ಮುಂಚೆ ಏನು ಉತ್ತರ ಕೇಳಿದೆ ಅಂತ ನೆನಪಿಸಿಕೊಂಡು ಅದನ್ನು ಪರಿಹರಿಸುವಷ್ಟರಲ್ಲಿ ಮತ್ತೆ ಮೊದಲನೆಯ ಸಮಸ್ಯೆ ಅಡ್ಡಬರುತ್ತಿತ್ತು. ಮತ್ತದೇ , ಎರಡನೆಯದು, ಮೂರನೆಯದರ ಚಕ್ರ. ಒಂಭತ್ತೂವರೆಯಾದ್ರೂ ಈ ಚಕ್ರವ್ಯೂಹದಿಂದ ಹೊರಬರಲಾಗಲಿಲ್ಲ ರಾಮುವಿಗೆ. ಹಸಿಯುತ್ತಿದ್ದ ಹೊಟ್ಟೆಯೊಂದಿಗೆ ಎದುರಿನ ಕ್ಯಾಂಟೀನಿಗೆ ನುಗ್ಗಿದ. ಅದರಲ್ಲೂ ಎಲ್ಲಾ ಖಾಲಿಯಾಗಿ ಇನ್ನೈದು ನಿಮಿಷವಾದ್ರೆ ಬಾಗಿಲು ಹಾಕೋ ಪರಿಸ್ಥಿತಿ. ಎಲ್ಲೋ ಅಪರೂಪಕ್ಕೆ ಬರುತ್ತಿದ್ದ ರಾಮು ಇಷ್ಟು ತಡವಾಗಿ ಕ್ಯಾಂಟೀನಿಗೆ ಬಂದದ್ದು ಕ್ಯಾಂಟೀನಿನವನಿಗೂ ಆಶ್ಚರ್ಯವೇ. ಮಾತಾಡುವಷ್ಟು ಶಕ್ತಿಯಾಗಲೀ, ತಾಳ್ಮೆಯಾಗಲೀ ,ಸಮಯವಾಗಲೀ ಇರಲಿಲ್ಲ ರಾಮುವಿಗೆ. ಊಟ ಗಬಗಬನೆ ತಿಂದು ಇನ್ನು ಒಂದು ಕಿ.ಮೀ ನಡೆಯಲಿಲ್ಲ ಅಂದ್ರೆ ಮಾರನೇ ದಿನ ಬೆಳಗಿನವರೆಗೂ ಆಫೀಸಲ್ಲೇ ಉಳಿಯೋ ಪರಿಸ್ಥಿತಿ ಬಂದುಬಿಡುತ್ತಿದ್ದ. ಅಂತೂ ಇಂತೂ ಮನೆಮುಟ್ಟಿದ ರಾಮುವಿಗೆ ಹಾಸಿಗೆಗೆ ಒರಗಿದ್ದೊಂದೇ ನೆನಪು. ಮಾರನೆಯ ದಿನ ಬೆಳಗಾದಾಗ ಹಿಂದಿನ ದಿನದ್ದೆಲ್ಲಾ ನೆನಪಿಗೆ ಬಂದಿತ್ತು ಮತ್ತೆ. ಗಡಿಬಿಡಿಯಲ್ಲಿ ಆಫೀಸಿಗೆ ತೆರಳಿದ್ರೂ ಹತ್ತು ನಿಮಿಷ ಲೇಟಾಗಿಬಿಟ್ಟಿದ್ದರಿಂದ ಎಲ್ಲರ ವಾರೆನೋಟ ಇವನ ಮೇಲೆ. ಲೇಟಾಗಿ ಬಂದು ಬೇಗ ಜಾರಿಕೊಳ್ಳೋರು ಎಷ್ಟೋ ಜನರಿದ್ರೂ ರಾಮುವಿನ ಮೇಲೆ ಎಲ್ಲರ ಕಣ್ಣು. ಆದ್ರೆ ಅವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳೋ ಪರಿಸ್ಥಿತಿಯಲ್ಲಿರಲಿಲ್ಲ ರಾಮು. ಕೆಲಸ ಮುಗಿಸೋದು ಮುಖ್ಯವಾಗಿತ್ತು.
ಎರಡನೇ ದಿನವೂ ಸಮಸ್ಯೆಗಳ ಸಾಗರದಲ್ಲಿ ಮುಳುಗಿದ್ರೂ ಏನು, ಯಾಕೆ, ಎತ್ತ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರಿಂದ, ಧೈರ್ಯವಾಗಿ ಇತರರನ್ನು ಕೇಳಿದ್ರಿಂದ ಹಿಂದಿನ ದಿನದ ಸಮಸ್ಯೆಗಳ ಸುಳಿಯಿಂದ ಕೊನೆಗೂ ಹೊರಬಂದಿದ್ದ. ರಾಮು ಅಂದ್ರೆ ಶತದಡ್ಡ. ಏನೇ ಹೇಳ್ಕೊಟ್ರೂ ಕಲಿಯೊಲ್ಲ ಅಂದುಕೊಂಡಿದ್ದೋರಿಗೆ ಹೊಸ ಕೆಲಸದಲ್ಲಿನ ಅವನ ಆಸಕ್ತಿ ನೋಡಿ ಆಶ್ಚರ್ಯವಾಗಿತ್ತು. ಅಷ್ಟಕ್ಕೂ ರಾಮು ಜನ್ಮತಃ ದಡ್ಡನೇನಲ್ಲ. ಶುರುವಿನಲ್ಲಿದ್ದ ಸ್ವಲ್ಪ ಜಾಸ್ತಿಯೇ ಆದ ಹಿಂಜರಿಕೆ, ಮಾಡಿದ ಕೆಲವು ತಪ್ಪುಗಳು ಅವನಿಗೆ ಆ ಇಮೇಜ್ ತಂದುಕೊಟ್ಟಿದ್ದವಷ್ಟೇ. ಇನ್ನೇನು ಆಯಿತು ಆಯಿತು ಅನ್ನುವಷ್ಟರಲ್ಲಿ ಯಾವುದೋ ಹೊಸ ಸಮಸ್ಯೆ. ಅದರಲ್ಲಿ ಮುಳುಗಿ ಅದನ್ನು ಬಗೆಹರಿಸಿಯೇ ಬಿಟ್ಟೆನೆನ್ನುವಷ್ಟರಲ್ಲಿ ಮಗದೊಂದು. ಇಂದಾದರೂ ಬೇಗ ಹೋಗಬಹುದೆಂಬ ಆಸೆಯಲ್ಲಿದ್ದ ರಾಮುವಿನ ಆಸೆಗೆ ಈ ಸಮಸ್ಯೆಗಳು ನೀರು ಹೊಯ್ದಿದ್ದವು. ಯಾರೋ ಸಮಸ್ಯೆಯಲ್ಲಿದ್ದಾರೆಂದು ಅವರಿಗೆ ಹೆಗಲು ಕೊಟ್ಟು ಲೇಟಾಗಿ ಮನೆಗೆ ಹೋಗಿದ್ದ ಎಷ್ಟೋ ದಿನಗಳು ನೆನಪಾದವು. ಅವರಲ್ಲಿ ಯಾರಾದ್ರೂ ತನಗೆ ನೆರವಾಗಬಹುದೇ ಎಂಬ ಆಸೆಯಿತ್ತು. ಮೊದಲ ದಿನ ಮಂಕಾಗಿದ್ದ ಆ ಆಸೆ ಇಂದು ಸತ್ತೇ ಹೋಗಿತ್ತು. ಘಂಟೆ ಎಂಟಾಯ್ತು. ಇನ್ನೇನು ಮುಗಿದೇ ಬಿಟ್ಟಿತೆಂಬ ಸಮಸ್ಯೆಯನ್ನ ಕೊನೆಗೂ ಬಗೆಹರಿಸುವಷ್ಟರಲ್ಲಿ ಒಂಭತ್ತಾಗಿತ್ತು. ಅಂದರೆ ಮೊದಲನೇ ದಿನವೇ ಮುಗಿಸಬೇಕಾಗಿದ್ದ ಕೆಲ್ಸಗಳು ಎರಡನೇ ದಿನ ಸಂಜೆಯಷ್ಟು ತಡವಾಗಿದ್ವು. ಇನ್ನೊಂದೇ ಹಂತ ಉಳಿದಿತ್ತು. ಅದು ಕೊನೇ ಹಂತ. ಅದು ಮುಗಿದ್ರೆ ಎಲ್ಲಾ ಮುಗಿದಂತೆ..ಆದ್ರೆ ಮುಗಿದಿರಲಿಲ್ಲ. ನಿನ್ನೆಯಂತೇ ಲೇಟು. ಕ್ಯಾಂಟೀನು ಬಾಗಿಲು ಹಾಕೋ ಅರಿವಿದ್ದರಿಂದ ಹತ್ತು ನಿಮಿಷ ಬೇಗ ಹೋಗಿದ್ದೇ ಇಂದಿನ ಸಾಧನೆ.
ಮೂರನೇ ದಿನ ಬಂತು. ನಮ್ಮದು ಮುಗಿಯಿತು. ನಮ್ಮದು ಮುಗಿಯಿತು ಅಂತ ಒಬ್ಬೊಬ್ಬರಾಗಿ ಹೇಳಿಕೊಳ್ಳತೊಡಗಿದ್ರು. ಆದ್ರೆ ರಾಮುವಿನದು ಮಾತ್ರ ಊಹೂಂ.ಕೊನೆಯ ಹಂತ ಎಷ್ಟು ಬೃಹತ್ತಾಗಿದೆ ಅಂತ ರಾಮುವಿಗೆ ಅದಕ್ಕೆ ಬಂದಾಗಲೇ ತಿಳಿದಿದ್ದು. ಮಾಡಿದಷ್ಟೂ ಮುಗಿಯುತ್ತಿಲ್ಲ. ಮಧ್ಯೆ ಮಧ್ಯೆ ಸಮಸ್ಯೆಗಳು ಬೇರೆ. ಆದ್ರೆ ಇಂದು ತನ್ನ ಸಮಸ್ಯೆಗಳನ್ನು ಸ್ವಲ್ಪ ತಡವಾದ್ರೂ ತಾನೇ ಬಗೆಹರಿಸೋದ್ರಲ್ಲಿ ಸಮರ್ಥನಾಗಿದ್ದ ರಾಮು. ಘಂಟೆ ಐದಾಯ್ತು. ನಾನಿರ್ಲಿ , ಇಲ್ಲದಿರ್ಲಿ ಉಪಯೋಗವಿಲ್ಲ. ಈ ಸಮಸ್ಯೆ ಬಗೆಹರಿಯೋದು ನಾಳೆಯೇ ಅಂತ ನಿರ್ಧರಿಸಿದ್ದ ರಾಮುವಿಗೆ ಮನದ ಮೂಲೆಯಲ್ಲೊಂದಾಸೆ. ಒಂದು ಕೊನೆಯ ಸಲ ಪ್ರಯತ್ನ ಮಾಡೋಣ. ಏನಾದ್ರೂ ಆಗಿ ಬಗೆಹರಿದುಬಿಟ್ರೆ ಅಂತ. ಆ ಪ್ರಯತ್ನದಲ್ಲೇ ಘಂಟೆ ಏಳಾದ್ರೂ ಅದರಿಂದ ಫಲ ಸಿಗಲಿಲ್ಲ. ಆದ್ರೆ ಈ ಹೊತ್ತಿಗೆ ರಾಮುವೊಂದು ಪಾಠ ಕಲಿತಿದ್ದ. ಅರಿವೇ ಗುರು. ನಿನಗೆ ನೀನೇ ಗುರು ಅಂತ. ಏಳರ ಲೇಟ್ ಬಸ್ಸಿಗೆ ಒಂದು ನಿಮಿಷವೂ ತಡವಾಗದಂತೆ ಹೋಗಿ ಹತ್ತಿದ್ದ. ನಾನು ಎಷ್ಟು ಹೊತ್ತಿದ್ರೂ ಅಷ್ಟೇ ಅಂದ ಮೇಲೆ ತಡವಾಗಿ ಇದ್ದು ಒದ್ದಾಡೋದು ಏಕೆ . ಎಲ್ಲರಂತೆ ಮಾರನೇ ದಿನ ಬಂದು ಹೊಸದಾಗಿ ಶುರು ಮಾಡಬಾರದೇಕೆ ಅನ್ನೋ ಸಾಮಾನ್ಯ ಜ್ನಾನದ ಉದಯವಾಗಿತ್ತು ರಾಮುಗೆ.
ನಾಲ್ಕನೇ ದಿನ. ರಾಮುವಿನ ಸಂಕಷ್ಟ ನೋಡಿ ಆ ಯಶಸ್ಸಿಗೂ ಬೇಸರವಾಗಿ, ಎದ್ದು ಬಂದು ರಾಮುವನ್ನಲಂಕರಿಸಿತ್ತು.ಬೇಸಿಗೆಯಲ್ಲಿ ಸುಟ್ಟು ಕರಕಲಾದ ಭೂಮಿ ನೋಡಿ ಮುನಿದ ಮಳೆಗೇ ಬೇಜಾರಾಗಿ ಎರಡು ಹನಿ ಹನಿಸಿಬಿಡುವಂತೆ ಅಲ್ಪ ಯಶ ಕೊನೆಗೂ ಸಿಕ್ಕಿತ್ತು ರಾಮುಗೆ.
ಏನು ಮಾಡಿದೆ, ಏನೇನಾಯ್ತು ಅಂತ ಕೇಳಿದೋರಿಗೆ ಒಂದು ದಿಗ್ರ್ಭಮೆ. ರಾಮುವಂತಹ ರಾಮು ಇದನ್ನೆಲ್ಲಾ ಅರ್ಥ ಮಾಡಿಕೊಂಡ್ನಾ ಅಂತ. ಅಂತಹ ಬ್ರಹ್ಮವಿದ್ಯೆಯೇನಲ್ಲ ಇದು. ನಾವೆಲ್ಲಾ ಎರಡು ದಿನದಲ್ಲಿ ಮುಗಿಸಿದ್ನ ನಾಲ್ಕು ದಿನ ತಗೊಂಡ ಅಂತ ಹಿಂದೆ ಬಿಟ್ಟು ನಗೋರಿದ್ರೆ , ಇವನೇ ಏನೋ ಹೊಸದಾಗಿ ಸಂಶೋಧನೆ ಮಾಡಿದ ಹಾಗೆ ಹೇಳ್ತಿದಾನೆ. ಇದೆಲ್ಲಾ ನಮಗೆ ಗೊತ್ತಿದ್ದಿದ್ದೇ ಅಂತ ಹೀಗಳೆದೋರು ಎಷ್ಟೋ ಜನ. ಬೇಗ ಮುಗಿಸಿದ್ದಕ್ಕೆ ಪ್ರಶಂಸಿಸೋ ಬದ್ಲು ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಅಂತ ನೂರೆಂಟು ಕೊಂಕು ತೆಗೆದ ಜನರ ಸಂದೇಹಗಳ್ನ ಬಗೆಹರಿಸೋದ್ರಲ್ಲೇ ಮತ್ತೆ ಘಂಟೆ ಐದಾಗಿತ್ತು. ಇದಾದ ಮೇಲೆ ಒಂದು ಕ್ಷಣವೂ ನಿಲ್ಲಬಾರದೆಂದು ನಿರ್ಧರಿಸಿದ್ದ ರಾಮುವಿನ ನಿರ್ಗಮನವೂ ಎಷ್ಟೊ ದಿನಗಳಾದ ಮೇಲೆ ಸರಿಯಾದ ಸಮಯಕ್ಕಾಗಿತ್ತು. ಸೇರಿ ತಿಂಗಳುಗಳಲ್ಲಿ ಕಲಿಯದಿದ್ದ ಪಾಠವನ್ನು ಎರಡು ದಿನಗಳ ಒಂಟಿ ಬಾಳು ಕಲಿಸಿಬಿಟ್ಟಿತ್ತು. ಆದ್ರೆ ಆ ಘಟನೆಯ ನಂತರ ರಾಮು ಬದಲಾಗಿ ಹೋದ. ಪ್ರಶ್ನಿಸಲು ಶುರು ಮಾಡಿದನೆಂದ್ರೆ ಅರ್ಧಂಬಂರ್ಧ ಗೊತ್ತಿರೋರು ಅವನತ್ರ ಮಾತಾಡೋದೇ ನಿಲ್ಲಿಸಿಬಿಡುವಷ್ಟು ಪ್ರಶ್ನೆಗಳು. ಆದ್ರೆ ಆ ಪ್ರಶ್ನೆಗಳಲ್ಲಿ ತಪ್ಪೇನಿರಲಿಲ್ಲ. ಕಲಿಯೋ ಹಸಿವಷ್ಟೇ. ಮೊದಮೊದಲು ರಾಮುವಿನ ಪ್ರಶ್ನೆಗಳನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳದ ಜನರಲ್ಲಿ ಕೆಲವರಿಗೆ ಅವುಗಳ ಗಾಂಭೀರ್ಯ, ರಾಮುವಿನಲ್ಲಿ ಹಂತಹಂತವಾಗಿ ಆಗುತ್ತಿದ್ದ ಬೆಳವಣಿಗೆಗಳು ಗಮನಕ್ಕೆ ಬಂದು ಅವನನ್ನು ಒಳಗೊಳಗೇ ಮೆಚ್ಚೋಕೆ ಶುರು ಮಾಡಿದ್ರು. ಯಾರು ಮೆಚ್ಚಲಿ, ಹೀಯಾಳಿಸಲಿ. ರಾಮು ದಿನೇ ದಿನೇ ಬೆಳೆಯುತ್ತಿದ್ದಾನೆ. ತನ್ನ ಹೀಯಾಳಿಸಿದವರನ್ನೆಲ್ಲಾ ತನ್ನ ಕೃತಿಯಿಂದ ಬಾಯಿಮುಚ್ಚಿಸಲು ಸಮರ್ಥನಾಗುವಂತೆ ಬೆಳೆಯುತ್ತಿದ್ದಾನೆ. ಯಾವ ಕೆಲಸಕ್ಕೂ ಬರದ ರಾಮುವೀಗ ಎಲ್ಲ ಕೆಲಸಕ್ಕೂ ಬೇಕು. ಲೇಟು ಮಾಡ್ತಾನೆ ಅನ್ನೋ ಜನರ ಮಧ್ಯೆಯೂ ಕೊಟ್ಟ ಕೆಲಸ ಹೇಗಾದರೂ ಮುಗಿಸುತ್ತಾನೆಂಬ ಭರವಸೆಯ ಜನರ ಸಂಖ್ಯೆ ಬೆಳೆಯುತ್ತಿದೆ.ಉತ್ತರವಿಲ್ಲದ ಪ್ರಶ್ನೆಗಳ ಹಿಂದೆ ದಿನಾ ಬೀಳುತ್ತಿದ್ದಾನೆ ರಾಮು. ಯಾರಿಗೂ ಬೇಡದ ಪ್ರಶ್ನೆಗಳಿಗೆ ಸಾಥಿಯಾಗುತ್ತಿದ್ದಾನೆ.ದನಿಯಾಗುತ್ತಿದ್ದಾನೆ. ಅದಕ್ಕೆ ತನ್ನದೇ ರೀತಿಯಲ್ಲೊಂದು ಉತ್ತರ ಹುಡುಕುವ ಪ್ರಯತ್ನದಲ್ಲಿ. ಈ ಪ್ರಶ್ನೋತ್ತರದ ಹುಡುಕಾಟದಲ್ಲಿ ಮತ್ತೇನೋ ಕಲಿಯೋ ಹುಮ್ಮಸ್ಸಿನಲ್ಲಿ..
*****
ಛಲ ಬಿಡದ ತ್ರಿವಿಕ್ರಮ ಈ ರಾಮು. ಚೆಂದಾಗಿದೆ
Thank you 🙂