ಸುಮ್ ಸುಮನಾ ಅಂಕಣ

ಉಡಪಿ ರಾಯನ್ ಹೋಟೆಲ್: ಸುಮನ್ ದೇಸಾಯಿ ಅಂಕಣ

ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ…..
ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ…..
ಖಾರಾ ಚಕ್ಕುಲಿ ಶೇವು ಚಿವಡಾ ಗೆಳತನ ಮಾಡಿದ್ವ…
ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ…..
ಅಂಟಿನ ಉಂಡಿ ಶಟಗೊಂಡ ಹೋಗಿ ಡಬ್ಬ್ಯಾಗ ಕೂತಿತ್ತ……..
ಚಹಾ ಕುಡಿದರ ಪಾನಪಟ್ಟಿ ಓಡೊಡಿ ಬರತಿತ್ತ…….
ಇದೇಲ್ಲಾ ಆದಮ್ಯಾಲೆ ನಾಲ್ಕ ರೂಪಾಯಿ ಬಿಲ್ಲ ಆಗಿತ್ತ….
ಅದನ್ನ ನೋಡಿ ನನ್ನ ಎದಿ ಝಲ್ಲ ಅಂದಿತ್ತ…………..

ಈ ಹಾಡನ ನಮ್ಮ ಅಮ್ಮ ಸಣ್ಣವರಿದ್ದಾಗ ತಮ್ಮ ವಾರಿಗಿ ಗೇಳ್ತ್ಯಾರ ಜೋಡಿ ಹಾಡತಿದ್ರಂತ… ಆವಾಗಿನ್ನು ಹೋಟೆಲ್ ಗೊಳ ತಲಿ ಎತ್ತಲಿಕತ್ತ ಕಾಲದಾಗ ಹೋಟೆಲ್ ಅಂದ್ರ ಒಂದು ಆಶ್ಚರ್ಯದ ವಿಷಯ ಆಗಿತ್ತು. ಯಾರರ ಹೋಟೆಲ್ ಕ್ಕ ಹೋಗತಾರಂದ್ರ ಅಂಥವರನ್ನ ಆಗಾಧಪಟ್ಟ ನೋಡತಿದ್ರಂತ. ಮಂದಿ ಈ ಇಡ್ಲಿ ದ್ವಾಸಿ ರುಚಿಗೆ ಮಳ್ಳ ಆಗಿ ಚಹಾದಂಗಡಿಗೆ ಹಗಲೆಲ್ಲಾ ಭೆಟ್ಟಿಕೊಡತಿದ್ರಂತ. ನಮ್ಮಮ್ಮ ಈ ಹಾಡನ್ನ ನನ್ನ ಮಕ್ಕಳ ಮುಂದ ಹಾಡಿತೋರಿಸಿದಾಗ ನನ್ನ ಮಕ್ಕಳು ” ಅಜ್ಜಿ ಇಷ್ಟೆಲ್ಲಾ ತಿಂದರು ಬರೆ ಫೊರ ರೂಪಿಸ್ ಬಿಲ್ಲ ಆಗತಿತ್ತೇನು? ನೀವ ಸಣ್ಣವರಿದ್ದಾಗ ಶೇವಪೂರಿ ಮತ್ತ ಗೋಬಿಮಂಚೂರಿ, ಎಲ್ಲಾ ಸಿಗತಿದ್ದಿಲ್ಲೇನ? ಅಂತ ನೂರಾಎಂಟು ಪ್ರಶ್ನೆ ಕೇಳತಿರತಾರ.

ಹೋಟೆಲ್ ಇಟ್ಟವರನ್ನ ಆಗಿನ ಕಾಲದಾಗ ತಿನ್ನೊ ಅನ್ನಾನ ರೊಕ್ಕಕ್ಕ ಮಾರಕೋತಾರ ಕೇಡಗಾಲ ಬಂದದ ಅಂತ ಅಂತಿದ್ರಂತ. ಆದರ ಈಗ ಹೋಟೆಲ್ ಬಿಸಿನೆಸ್ ಒಂದು ಪ್ರತಿಷ್ಠಿತ ಉದ್ಯಮ ಆಗೇದ. ಹಿಂದಕಿನ ಕಾಲದಾಗ ಹೋಟೆಲ್ ಗೆ ಕೆಲವೊಂದಿಷ್ಟು ಆಯ್ದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಇರತಿತ್ತು, ” ಹುಬ್ಬಳ್ಳಿ ಅಶೋಕ ಹೋಟೆಲ ಶುರು ಆದ ಹೊಸದಾಗಿನ ಸುದ್ದಿ ಅಂತ ನಮ್ಮ ಮಾಮಾ ಹೇಳ್ತಿದ್ರು , ಆ ಹೋಟೆಲಿಗೆ ಪೈಜಾಮ ಮತ್ತ ಧೋತರಾ ಉಟಗೊಂಡ ಬಂದ ಮಂದಿಗೆ ಪ್ರವೇಶ ಇದ್ದಿಲ್ಲಂತ. ಪ್ಯಾಂಟು ಸೂಟು ಹಾಕ್ಕೊಂಡವರಿಗೆ ಮಾತ್ರ ಒಳಗ ಬಿಡತಿದ್ರಂತ. ಆದ್ರ ಈಗ ಯಾವ ನಿಭಂಧನೆಗಳು ಇಲ್ಲಾ. ಯಾರ ಯಾವ ಹೋಟೆಲಿಗೆ ಬೇಕಂದ್ರ ಹೋಗಬಹುದು.

ಕಾಲಾ ಬದಲಾಧಂಘ ಆಯಾ ವಿಷಯಕ್ಕ ಇರೊ ಮಹತ್ವ ಕಡಿಮಿ ಆಕ್ಕೊತ ಹೋಗತದ. ಈಗ ಹೆಜ್ಜಿ ಹೆಜ್ಜಿಗೊಂದ ಹೋಟೆಲ್ ಆಗ್ಯಾವ. ಹೋಟೆಲಗೊಳ ಅಂದ್ರ ಜೀವನದ ಅವಿಭಾಜ್ಯ ಅಂಗಗಳಾಗ್ಯಾವ ಈಗ. ನಾವು ಮನಿ ಊಟಕ್ಕಿಂತಾ ಹೆಚ್ಚು ಹೋಟೆಲ್ ಮ್ಯಾಲೆನ ಭಾಳ ಅವಲಂಬಿತರಾಗೇವಿ. ಮದಲೆಲ್ಲಾ ಮನ್ಯಾಗ ಎನರೆ ಫಂಕ್ಷನ ಇದ್ರ ಮನ್ಯಾಗಿನ ಹೆಣ್ಣಮಕ್ಕಳೆಲ್ಲಾ ಕುಡಿ ಸಿಹಿ ಅಡಗಿ ಮಾಡಿ ಎಲ್ಲಾರನು ಕರದು ಊಟಕ್ಕ ಬಡಸತಿದ್ರು ಆದ್ರ ಈಗ ಅಯ್ಯೊ ಮನ್ಯಾಗ ಧಾವತಿ ಮಾಡಿ ಎಲ್ಲೆ ರಗಳಿ ಸೋಸೊದು, ಥಣ್ಣಗ ಹೋಟೆಲನ್ಯಾಗ ಪಾರ್ಟಿ ಕೊಟ್ಟ್ರಾತು ಅನ್ನೊ ವಿಚಾರ ಮಾಡತಾರ ಮಂದಿ. ಜನರ ಈ ಮನೋಭಾವಕ್ಕ ಯಾವ ಪರಿಹಾರನು ಇಲ್ಲಾ.ನಮ್ಮಜ್ಜಿ ಹೇಳತಿದ್ರು ಸುಮಾರು ಐವತ್ತನೇ ದಶಕದ ಹೊತ್ತಿನ್ಯಾಗ ಸೈಕಲ್ ಗಳ ಬಳಕಿ ಭಾಳ ಇಧ್ಧಂಥಾ ಹೊತ್ತಿನ್ಯಾಗ ನಮ್ಮಜ್ಜಿ ಗೆಳತಿಯೊಬ್ಬರು ಗಂಡಗಚ್ಚಿ ಹಾಕ್ಕೊಂಡು ಸೈಕಲ್ ಓಡಸ್ತಿದ್ರಂತ. ಗಿರಣಿ, ಪ್ಯಾಟಿ ಸಂತಿ ಅಂತೆಲ್ಲಾ ಸೈಕಲ್ ಮ್ಯಾಲೆನ ಓಡ್ಯಾಡತಿದ್ರಂತ. ಅವರನ್ನ ನೋಡಿ ಆಗಿನ ಕಾಲದಾಗ ಮಂದಿ ಅಯ್ಯ ಗಂಡಬೀರಿಹಂಗ ಹೇಂಗ ತಿರಗತಾಳ ನೋಡ. ಹೆಣ್ಣು ಹಿಂಗ ರಸ್ತೆಕ್ಕ ಬಂದದ್ದಕ್ಕ ಮಳಿ ಬೆಳಿ ಕಡಿಮ್ಯಾಗೇದ. ಕಲಿಗಾಲಾ ಹಿಂಗೆಲ್ಲಾ ಮಾಡಸ್ತದ ಅಂತ ಆಡ್ಕೋತಿದ್ರಂತ.  ಆದ್ರ ಈಗ ಬಾಲವಾಡಿ ಹೋಗೊ ಸಣ್ಣ ಸಣ್ಣ ಮಕ್ಕಳು ಸುಧ್ಧಾ ಸೈಕಲ್ ಓಡಸ್ತಾರ. ಹೆಣ್ಣು ಭೂಮಿಯೋಳಗಿನ ವಾಹನಗಳಷ್ಟ ಅಲ್ಲಾ ಆಕಾಶದಾಗಿನ ವಿಮಾನ ಸುಧ್ಧಾ ಹಾರಿಸ್ತಾರ. ಇವತ್ತ ಹೆಣ್ಣಿನ ಈ ಪ್ರಗತಿಯ ಗತಿ ನೋಡಿ ಜಗತ್ತು ಹೆಮ್ಮೆಪಡತದ. ಮೊದಲಿನಂಘ ಯಾರು ಯಾರನ್ನು ನೋಡಿ ಹೀಯಾಳಿಸಂಗಿಲ್ಲಾ.

ಮೊದಮೊದಲಿಗೆ ರೇಡಿಯೊ, ಟೆಲಿವಿಷನ್,ದೂರವಾಣಿ, ಹೊಸದಾಗಿ ಚಾಲ್ತಿ ಬಂದಾಗನು ಹಿಂಗಾ ಇತ್ತು ಯಾರದೆ ಮನಿಯೊಳಗ ರೇಡಿಯೋದಾಗ ಸಂಗೀತ, ನಾಟಕ ಸುದ್ದಿ ಪ್ರಸಾರ ಆಗಲಿಕತ್ತಿದ್ರ ಜನಾ ಆಘಾದಬಟ್ಟು ನೋಡಕೊತ ಕೂಡತಿದ್ರಂತ ಅಂತ ಅಮ್ಮ ಹೇಳತಿರತಾಳ. ಹೆಂಗೆಂಗ ದೂರದರ್ಶನದ ಆವಿಷ್ಕಾರ ಆಗಿ ಮನಿಮನಿಯೊಳಗ ದೂರದರ್ಶನ ಅನ್ನೊ ಮಾಯಾಜಾಲಾ ಹರಡಲಿಕತ್ತು. ಸಾವಕಾಶಾಗಿ ರೇಡಿಯೋ ತನ್ನ ಆಕರ್ಷಣೆ ಕಳಕೊಳ್ಳಿಕ್ಕೆ ಹತ್ತಿತ್ತು.

ನಂಗೂ ನೆನಪದ ನಾವ ಸಣ್ಣವರಿದ್ದಾಗ ಟಿವ್ಹಿಯೊಳಗಿನ ರಾಮಾಯಣ , ಮಹಾಭಾರತ ಧಾರಾವಾಹಿಗೊಳು ಪ್ರಸಾರ ಆಗೊವಾಗ ನಮ್ಮ ವಠಾರದಾಗ ಎಲ್ಲಾರು ಯಾರ ಮನ್ಯಾಗ ಟಿವ್ಹಿ ಅದ ಅಂತ ಹುಡಕ್ಯಾಡಿಕೊಂಡ ಹೋಗಿ ನೋಡಿ ಬರತಿದ್ರು. ಯಾಕಂದ್ರ ಇಗಿನಂಘ ಟಿವ್ಹಿ ದಿನಾವಶ್ಯಕ ವಸ್ತು ಆಗಿರಲಿಲ್ಲಾ ಬೆರಳೆಣಿಕಿಯಷ್ಟ ಮಂದಿ  ಮನಿಯೊಳಗ ಇರ್ತಿತ್ತು. ಚಿತ್ರಸಹಿತ ಪ್ರಸಾರ ಆಗುವ ಆ ಮಾಯಾಮೋಹಿನಿಯು ಜನಸಾಮಾನ್ಯರ ಚರ್ಚಾ ವಸ್ತು ಆಗಿತ್ತು. ಆಘಾಧ, ವಿಸ್ಮಯಗಳ ಆಗರವಾಗಿತ್ತು ನಮ್ಮಜ್ಜಿ ಮನಿಯೊಳಗ ರವಿವಾರಕ್ಕೊಮ್ಮೆ ಸಂಜಿಮುಂದ ಸಿನೇಮಾ ಪ್ರಸಾರ ಆಗೊಹೊತ್ತಿಗೆ ನಮ್ಮ ಮನಿಯೋಳಗ ನಮಗ ಕೂಡಲಿಕ್ಕೆ ಜಾಗಾ ಇರ್ತಿದ್ದಿಲ್ಲಾ. ಅಷ್ಟು ಜನರಿಂದ ತುಂಬಿ ತುಳುಕತಿತ್ತು.

ದೊಡ್ಡವರಿಂದ ಹಿಡದು ಸಣ್ಣವರ ತನಕಾನು ದೂರದರ್ಶನದ ಆಕರ್ಷಣೆಗೆ ಸಿಕ್ಕಿ ಹಾಕ್ಕೊಂಡಿದ್ರು. ಆಗೆಲ್ಲಾ ಹಿರಿಯರು ಸುಡಗಾಡ ಡಬ್ಬಿ ಮುಂದ ಕೂತು ಅದನ್ನ ನೋಡಿ ನೋಡಿನ ಹುಡುಗುರು ಕೆಟ್ಟ ಹೋಗಲಿಕತ್ತಾರ ಅಂತ ಬೈತಿದ್ರಂತ. ಆದ್ರ ಈಗ ಮುಂಝಾನೆ ಎದ್ದಕೂಡಲೆ ಚಹಾ ಕುಡಿಯೊದರಿಂದ ಹಿಡಕೊಂಡ ರಾತ್ರಿ ಊಟದ ತನಕಾ ಎಲ್ಲಾ ಸಡಗರಾ ಟಿವ್ಹಿ ಮುಂದನ ಆಗಬೇಕು. ದಿನ ನಿತ್ಯದ ಜೀವನದಾಗ ದೂರದರ್ಶನ ಅಷ್ಟ ಅನಿವಾರ್ಯ ಅನ್ನೊ ಪರಿಸ್ಥಿತಿ ಅದ.

“ ಆಡು ಮುಟ್ಟದ ಸೊಪ್ಪಿಲ್ಲಾ, ಟಿವ್ಹಿ ಮೊಬೈಲ್ ಇಲ್ಲದ ಮನೆಯಿಲ್ಲಾ” ಅಂತ ಹೊಸಾ ಗಾದೆಮಾತು ಸೃಷ್ಠಿಮಾಡಿದ್ರು ತಪ್ಪೆನಿಲ್ಲಾ ಅನಿಸ್ತದ. ಒಂದವೇಳೆ ಈಗೆನಾದ್ರು ಬುಧ್ಧ ಇದ್ರ “ ಸಾವಿಲ್ಲದ ಮನೆ ಸಾಸಿವೆ ” ಅಲ್ಲಾ “ ಟಿವ್ಹಿ ಮೊಬೈಲ್ ಇಲ್ಲದ ಮನೆಯಿಂದ ಸಾಸಿವೆ ತಗೊಂಡ ಬಾ ” ಅಂತಿದ್ನೇನೊ. ನೋಡ್ರಿಹೆಂಗ ವಸ್ತುಸ್ಥಿತಿ ತನ್ನ ಮಹತ್ವ ಕಳಕೊಳ್ಳತದ. ಹಳೆಯದಕ್ಕ ಜಾಗಾ ಮಾಡಿಕೊಟ್ಟು , ಹೊಸಾ ವಿಷಯಗಳನ್ನ ಸ್ವಾಗತಾ ಮಾಡ್ತಾ  “ಕಾಲಾಯ ತಸ್ಮೈ ನಮಃ ” ಅನಕೋತ ಹೋಗೊದ ಅಷ್ಟ…

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಉಡಪಿ ರಾಯನ್ ಹೋಟೆಲ್: ಸುಮನ್ ದೇಸಾಯಿ ಅಂಕಣ

 1. ಹುಬ್ಬಳ್ಳಿ ಹೊಟೆಲು ಅಲ್ಲಿ ಸಿಗೋ ತಿನಸುಗಳ ಬಗ್ಗೆ ಎಷ್ಟು ಬರದರೂ ಕಮೀನ..
  ಆ ರುಚಿ ನಮೂನಿ ಎಲ್ಲೂ ಸಿಗೂದಿಲ್ಲ..ಒಂದೊಂದು ಹೊಟೆಲಗೂ ಒಂದೊಂದು ವಿಶೇಷ ಅದ.
  ಇನ್ನೂ ಬರೀಬಹುದಾಗಿತ್ತು ಮುಖ್ಯಅಂದ್ರ ಈಗ ಹುಬ್ಬಳ್ಳಿ ಬದಲಾಗೇದ ಈಗ ಸಿಗೂ ಹೊಟೆಲ್ ತಿನಸಿನ್ಯಾಗ
  ಏನರೆ ಬ್ಯಾರೆ ನಮೂನಿ ಸಿಗತಾವೇನು…?

 2. ಅದೇಗೆ ಎಲೆ-ಅಡಿಕೆ ಜೊತೆ ಕೆಜಿಗಟ್ಟಲೆ ಸುಣ್ಣ ತಿಂದ ಬಾಯಿಯಿಂದ್,
  ಖಾರದ ಮೆಣಸಿನ ಕಾಯಿ ಮಂಡಕ್ಕಿ ಜೊತೆ ಬಿಸಿ ಚಹಾ
  ಕುಡಿತಾರೆ ಅನ್ನೋದು ಇವತ್ತಿಗೂ ಬಗೆ ಹರಿಯದ ಪ್ರಶ್ನೆ. ಗ್ರೇಟ್
  ಹುಬ್ಬಳ್ಳಿ!!

 3. ಚಂದಾ ಬರ್ದೇರಿ ಅಕ್ಕಾರೆ. ಹೊಸ ನೀರು ಬಂದಂಗೆ ಹಳೆ ನೀರು ಕೊಚ್ಚಿಕೊಂಡು ಹೋಗ್ಲಿಕ್ಕೆ ಬೇಕಲ್ಲಾ ? ಹಂಗೇ ಇದೂ..
  ಅಖಿಲೇಶ್ ಭಾಯ್ ಡೌಟ್ ಮಜಾ ಐತಿ 🙂

 4. ಬರ್ತಾ ಬರ್ತಾ ನಿಮ್ಮ ಲೇಖನ ಸುಧಾರಿಸ್ಲಿತಾವ,
  ಒ೦ದು ಪುಸ್ತಕ ಬಿಡುಗಡೆ ಮಾಡ್ರಿ ……ಶೈಲಿ ಛ೦ದ ಅದ,,,,

Leave a Reply

Your email address will not be published.