ಉಗುಳುವುದೂ ಒಂದು ಕಲೆ ; ಬೇಡವಾದ ಅಗುಳನು: ಸುಂದರಿ ಡಿ.

ಉಗುಳುವುದು ಎಂದೊಡನೇ ಬಾಯಿಯ ಮುಖೇನ ಬೇಡವಾದ ಎಂಜಲನು ಹೊರಹಾಕುವ ಕ್ರಿಯೆ ಎಂದೇ ಗ್ರಹಿಸುವ ನಾವು ಉಗುಳುವ ಕ್ರಿಯೆಯನ್ನು ಸೀಮಿತಾರ್ಥದಲ್ಲಿ ಬಳಸುತ್ತಿದ್ದೇವೆ ಎನಿಸುತ್ತದೆ. ಏಕೆಂದರೆ ಬೇರೆಯವರನ್ನು ಬೈಯ್ಯುವ, ನಮಗೆ ಬೇಡವಾದವರನ್ನು ಬಿಡುವ ಕ್ರಿಯೆಯನ್ನೂ ಈ ಪರಿಭಾಷೆಯಲೇ ಕರೆಯುವುದು ರೂಢಿ. ಆದರೆ ಬೇಡವಾದುದನು ಹೊರ ಹಾಕುವ ಕ್ರಿಯೆಯನ್ನೇ ಉಗುಳುವುದು ಎಂದು ಗ್ರಹಿಸಬೇಕಾಗುತ್ತದೆ ಎಂದು ನನಗನಿಸುತ್ತದೆ. ಇದೊಂದು ನುಡಿಗಟ್ಟೆಂಬುದನು ತಕ್ಷಣಕೆ ನಾವು ಮರೆತಿರುತ್ತೇವೆ. ಜೀವರಾಶಿಯಲಿ ಈ ಸಂಗತಿ ಕ್ಷಣ ಕ್ಷಣವೂ ಜರುಗುತ್ತಲೇ ಇರುತ್ತದೆ. ನಮ್ಮ ದೇಹದ ಪ್ರತಿಯೊಂದು, ಪ್ರತಿಯೊಂದೂ ಅಂಗೋಪಾಂಗಗಳೂ ಕೂಡಾ ತಮಗೆ ಬೇಡವಾದುದನು ಹೊರಹಾಕುವ ಮುಖೇನ ತನ್ನನ್ನು ತಾನು ಸದಾ… ಸದಾ… ಸದಾ… ಶುದ್ಧವಾಗಿಸಿಕೊಳ್ಳಲು ಹವಣಿಸುತ್ತಲೇ ಇರುತ್ತವೆ. ಕಣ್ನು ತನಗೆ ಬೇಡವಾದುದನು ರಾತ್ರಿಯಿಡೀ ಉಗುಳಿರುತ್ತದೆ ಅದೇ ನಾವು ಬೆಳಗಾಗೆದ್ದು ಮುಖಮಜ್ಜನದ ಮೂಲಕ ಶುಚಿಗೊಳಿಸುವ ಕ್ರಿಯೆಗೆ ಪ್ರೇರಕ. ಇನ್ನು ಅಜ್ಜಿಯಂದಿರ ಗುಗ್ಗೆ ಕಡ್ಡಿ ಯಾರಿಗೆ ತಾನೇ ನೆನಪಿಲ್ಲ! ಕಿವಿ ತನಗೆ ಬೇಡವಾದುದನು ಹೊರಕಳಿಸಿದ ಕಾಯಕವ ಅಜ್ಜಿ ಅಮ್ಮಂದಿರು ಪೂರ್ತಿಗೊಳಿಸಿದುದೂ ಇದೇ ಗುಗ್ಗೆಕಡ್ಡಿಯ ಮೂಲಕವೇ ತಾನೆ. ನಾಲಿಗೆಯೋ ಸೈನಿಕನಂತೆ ನಿಂತು ಹೊಟ್ಟೆಯೊಳಗೆ ಸೇರಬಾರದುದನು ಒಂದಿಷ್ಟೂ ಸೇರಗೊಡದೇ ನಾಜೂಕಾಗಿ ಹೊರಹಾಕುತ್ತಲೇ ಇರುತ್ತದೆ.

ಇದಕ್ಕೆ ಪೂರಕವೆಂಬಂತೆ ವಡ್ಡಾರಾಧನೆಯಲ್ಲಿ ಇರುವ ಹಲವು ಕತೆಗಳಲ್ಲಿ ಸುಕುಮಾರಸ್ವಾಮಿಯ ಕಥೆಯೂ ದೀರ್ಘ ಮತ್ತು ಸುಂದರವಾದ ಕಥಾಗುಚ್ಚವೇ ಸರಿ. ಈ ಸುಕುಮಾರ ಸ್ವಾಮಿಯು ಅತೀವ ಸುಖಸೋಪಾನದಲಿ ಬೆಳೆದ ಕಾರಣದಿಂದ ಆತ ತಿನ್ನುವ ಅಗುಳಲಿ ಒಂದಾದರೂ ದಪ್ಪಅಗುಳು ಬೆರೆತು ಆತನ ಬಾಯಿ ಸೇರಿದರೋ ಮುಗಿಯಿತು. ಆತನ ನಾಲಿಗೆಯೇ ಬೇಡವಾದುದನು, ತನಗೆ ಒಗ್ಗದುದನು ಬಾಯಿಂದ ಹೊರಗೆಡವಿ ತನಗೆ ಈ ವರೆಗೆ ಅಭ್ಯಾಸವಾದುದನು ಮತ್ತು ತನಗೆ ಸೇರುವುದನು ಮಾತ್ರವೇ ಆಸ್ವಾದಿಸುವ ಸುಕುಮಾರನ ಪರಿ ಎಲ್ಲರಿಗೂ ಒಂದಿಲ್ಲೊಂದು ರೀತಿಯಲಿ ಆಗಿಯೇ ಆಗಿರುತ್ತದೆ. ಕೆಲವರಿಗೆ ಹಾಗಲಕಾಯಿಯೋ, ಮತ್ತೆ ಹಲವರಿಗೆ ಉಗಾದಿಯಲಿ ಬೆಲ್ಲದೊಡನಿರುವ ಬೇವೂ ವರ್ಜ್ಯವಾಗಿ ಪರಿಣಮಿಸಿರುವಂತೆ ಒಂದಲ್ಲಾ ಒಂದು ರೀತಿಯಲಿ ನಾವೆಲ್ಲಾ ಒಂದಲ್ಲಾ ಒಂದು ಕಾರಣಕ್ಕಾಗಿ ಸುಕುಮಾರರಂತೆ ವರ್ತಿಸಿರುತ್ತೇವೆ. ಶ್ರೀಮಂತಿಕೆಯ ಅರ್ಥದಲ್ಲಿ ಅಲ್ಲವಾದರೂ ಬೇಡವಾದದ್ದನ್ನು ಜೀವ ನಿರಾಕರಿಸಿ, ತನಗೆ ಬೇಕಾದದ್ದನ್ನು ಮಾತ್ರವೇ ಆಗುಮಾಡಿಕೊಳ್ಳುವ ಸುಕುಮಾರನ ಈ ಕಲೆಯ ಪರಿ ಹಲವು ಬಾರಿ, ಕೆಲವು ಕಾರಣಗಳಿಗಾಗಿಯಾದರೂ ಬೇಕೆನಿಸುತ್ತದೆ. ಈ ಅರ್ಥದಲ್ಲಿ ಉಗುಳುವುದೂ ಒಂದು ಕಲೆ ಎಂದು ನಾನು ಕರೆದದ್ದು. ಉಗುರು ತನ್ನಡಿಯಲಿ ಹೊಕ್ಕ ಮಣ್ಣನೋ, ಹಾಗೆಯೇ ಕಾಲಿಗೆ ಚುಚ್ಚಿದ ಮುಳ್ಳನೂ ಅಸಾಧ್ಯ ನೋವ ನೀಡಿಯಾದರೂ ಅಲ್ಲಿಂದ ಹೊರಹಾಕುವಂತೆ ಮಾಡುವಲ್ಲಿ ಅವುಗಳೂ ಯಶಸ್ವಿಯಾಗುತ್ತವೆ.

ದೇಹವು ನಾವು ಸೇವಿಸಿದ ಆಹಾರದಿಂದ ಬೇಕಾದ ಶಕ್ತಿಯನು ಪಡೆದು ಬೇಡವಾದುದನು ಬೆಳಗಾಗುತ್ತಲೇ ಹೊರಹಾಕಿಬಿಡುತ್ತದೆ. ಹೀಗೆ ಹೊರಹಾಕುವ ಮೂಲಕ ದೇಹವು ಬೇಡವಾದುದನು ದೂರಮಾಡಿ ಅನುದಿನವೂ ಒಂದಿಲ್ಲೊಂದು ರೀತಿಯಲಿ ಶುಚಿಗೊಳುತಲೇ ಇರುತ್ತದೆ. ಉಸಿರಾಡುವ ಕ್ರಿಯೆಯೂ ಇದಕ್ಕೆ ಹೊರತಲ್ಲ. ಹೀಗೆ ಇಡೀ ದೇಹ ಒಂದಿಲ್ಲೊಂದು ರೀತಿಯಲಿ ಬೇಕಾದ, ಸಾತ್ವಿಕವಾದುದನು ಉಳಿಸಿಕೊಂಡು ಬೇಡವಾದುದನು ಬಿಟ್ಟು ಹೊಸತನದಲೇ ಪ್ರಕೃತಿಯಂತೆ ತನ್ನನ್ನು ನಿತ್ಯ ನೂತನವಾಗಿಸಿಕೊಳ್ಳುವ ಕಾಯಕದಲಿ ಮಗ್ನವಾಗಿರುತ್ತದೆ. ಆದರೆ ಮನಸೇಕೋ ಈ ಪರಿಯಲಿ ಇರುವುದಿಲ್ಲವೆಂಬುದೇ ಸೋಜಿಗ 1 ಏಕೆಂದರೆ ಬೇಕಾದುದನು ಮಾತ್ರವೇ ಉಳಿಸಿಕೊಳ್ಳುವ ಬೇಡವಾದುದನು ಉಗುಳುವ ದೇಹದ ಕಲೆಯು ಅದೇಕೋ ಮನಸಿಗೆ ಸಿದ್ದಿಸಿಲ್ಲವೆಂಬುದೇ ಬೇಸರದ ಸಂಗತಿ. ದೇಹಕ್ಕಿರುವ ಈ ಕಲೆ ಮನಸಿಗೇಕಿಲ್ಲ?? ಹಾಗಾಗಿಯೇ ನಾನು ಉದ್ದೇಶಪೂರ್ವಕವಾಗಿಯೇ ಉಗುಳುವುದನ್ನೂ ಒಂದು ಕಲೆ ಎಂದು ಕರೆಯುತ್ತೇನೆ. ಏಕೆಂದರೇ ಯಾರೂ ಹೇಳಿಕೊಡದ, ಯಾರಿಂದಲೂ ನೋಡಿಯೂ ಕಲಿಯದ ಈ ದೇಹ ತನಗೆ ತಾನೇ ವೈದ್ಯನಾಗಿ ತನ್ನದೇ ಸ್ವೆತಾಸ್ಕೋಪ್ ಹಿಡಿದು ಸದಾ ಜಾಗೃತವಾಗಿ ತೀವ್ರ ನಿಗಾ ವಹಿಸುತ್ತಿರುತ್ತದೆ. ಅತಿಯಾದುದನು ತತ್ಕ್ಷಣದಲೇ ವಾಂತಿಯಾಗಿಯೋ, ಅತಿಸಾರದಲೋ ಹೊರಹಾಕಿ ಒಂದಷ್ಟು ಕಾಲದಲೇ ತನ್ನನ್ನು ಸುದಾರಿಸಿಕೊಳಲು ಅನುವಾಗುವ ದೇಹ ತನಗೆ ಬೇಡವಾದಾಗ ಬೇಡವಾದುದನು ಹೊರಹಾಕಿಬಿಡುತ್ತದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯದಲಿ “ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ ತಾಳ್ದೊಡಲಿಂಗೆ ಸುಖವನೀವಂತೆ” ಎಂಬಂತೆ ತನಗೆ ತಾನೇ ನಿಗ್ರಹ ಹೇರಿಕೊಳ್ಳುವ, ಆಮುಖೇನ ಸುಧಾರಿಸಿಕೊಳ್ಳಲು ಸದಾ ಅನುವಾಗಿರುತ್ತದೆ.

ಅಲ್ಲಿಗೆ ಬೇಡವಾದುದನು ಬೇಡವೆನಿಸಿದ ಕೂಡಲೇ ವಿಲೇವಾರಿ ಮಾಡುವ ದೇಹದ ಚಾಕಚಕ್ಯತೆ ಮನಕೆ ಏಕೆ ಸಿದ್ಧಿಸಿಲ್ಲ ! ಕಂಪ್ಯೂಟರ್ ಎಂಬ ಅಗಾಧ ಮೆಮೋರಿ ಪೆಟ್ಟಿಗೆಯೊಳಗಿರುವ ಅನುಕ್ರಮ ಕಡತಗಳ ಚಿಪ್ಪುಗಳ ನಿವಾಳಿಸಿ ಬಿಸಾಡುವಂಥ ಪರಿಯಲಿ ನಮ್ಮ ಮೆದುಳಲಿ ಅಸಾಧಾರಣ ಕಡತಗಳ ಸಂಗ್ರಹವಾಗಿರುತ್ತವೆ. ಅದೂ ವಾರ್ಷಿಕವಾಗಿ, ಮಾಸಿಕವಾಗಿ ಮತ್ತು ಪಾಕ್ಷಿಕವಾಗಿ ಅಷ್ಟೇ ಅಲ್ಲ ದೈನಿಕವಾಗಿಯೂ ಮಾಹಿತಿಗಳ ಆರೋಹಣ ಕ್ರಮದ ಜೋಡಣೆಯ ಪರಿ ಅಚ್ಚರಿಯೇ ಸರಿ. ಮನಕೆ ಖುಷಿ ಕೊಡುವ ಸಂತಸದ ಕ್ಷಣಗಳು , ಬಾಲ್ಯದಲಿ ಕಳೆದ ನೂರೆಂಟು ಸವಿ ನೆನಪುಗಳು, ಕುಣಿದು ಕುಪ್ಪಳಿಸಿದ ರೀತಿ, ಮಂಗಗಳೇ ನಾಚುವಂತಾಡಿದ ಮರಕೋತಿಯಾಟ, ಮೀನುಗಾರರನೂ ಮೀರಿಸುವ ಮೀನುಗಳ ಶೋಧಕಾರ್ಯ, ಆದಿಮಾನವರೇ ನಾಚುವಂತೆ ಶೋಧಿಸಿ ತಿಂದ ರೀತಿ, ಕದ್ದು ಮೆದ್ದ ಹಣ್ಣಿನ ಅಳೆಯಲಾಗದ, ಹೇಳಲೂ ಅಗದ ಸವಿರುಚಿ, ಅಂಕಗಳ ಬೆನ್ನು ಹತ್ತದೇ ಬರಿಯ ಆಟದ ಮೂಟೆಯನೇ ಹೊತ್ತು ತಿರುಗಿದ ಕೋಟ್ಯನುಕೋಟಿ ಸವಿನೆನಪುಗಳ ಮೂಟೆಯೇ ನಮ್ಮ ಮೆದುಳಿನ ಚಿಪ್ಪಿನಲಿರುತ್ತವೆ ಆದರೂ ಅದನ್ನೆಲ್ಲ ಪ್ರತ್ಯೇಕ ಫೋಲ್ಡರ್ನಲ್ಲಿಟ್ಟು ಭದ್ರಗೊಳಿಸಿರುವ ನಾವು ಬೇಡವಾದ ಮರೆಯಲೇಬೇಕಾದ ಕೆಲ ಘಟನೆಗಳ ಸುತ್ತಲೂ ಸುತ್ತುತ್ತಲೇ ಇರುತ್ತೇವೆ. ಸ್ಮೃತಿಪಟಲದಲಿ ಹೆಚ್ಚು ನೆನಪಿಗೆ ತಂದುಕೊಳ್ಳುವ ಸಂಗತಿಗಳು ಹೆಚ್ಚು ತಾಜಾತನವಾಗಿ ಮರುಪ್ರಸಾರವಾಗುತ್ತಿರುತ್ತವೆ ಎಂಬುದು ಸತ್ಯ. ಆದರೂ ನಾವು ಮನಸಿಗೆ ಬೇಡವಾದುದನು ಉಗುಳುವುದ ಕಲಿಯಬೇಕಿದೆ ದೇಹದಂತೆ ಮನವೂ ಶಿಸ್ತಿನ ಸಿಪಾಯಿಯಾಗದಿದ್ದಲ್ಲಿ ಮನಸೂ ಸಮಸ್ಯೆಯ ಗೂಡಾಗಿ ಹಲವು ನೋವುಗಳಿಗೆ ಬೀಡಾಗುವಲ್ಲಿ ಸಂಶಯವಿಲ್ಲ.

ನಿಮ್ಹಾನ್ಸ್ ಗೆ ನಾನೊಮ್ಮೆ ಹೋಗಿದ್ದೆ. ಹೌದಾ ಎಂದು ಹುಬ್ಬೇರಿಸಬೇಡಿ……ಖಾಯಿಲೆಯ ಕಾರಣಕ್ಕಾಗಿ ಅಲ್ಲ ಬದಲಿಗೆ ತರಬೇತಿಯ ಸಲುವಾಗಿ. ಅಲ್ಲಿ ನೋಡಿದೆ ಮನುಕುಲ ಅದಾವ ಮಟ್ಟದ ಮನೋವೇದನೆಯಲಿ ಬಳಲಿ ಬೆಂಡಾಗಿದೆ ಎಂದು! ಆದರೆ ಅಮೇರಿಕಾ ಮೊದಲಾದ ಮುಂದುವರಿದ ದೇಶಗಳಲ್ಲಿ ಮನೋಸಂಬಂಧಗಳ ದಟ್ಟಣೆಯ ಕೊರತೆಯಿಂದಾಗಿ ಅದೆಷ್ಟೋ ಆತ್ಮಹತ್ಯಾ ಪ್ರಕರಣಗಳಿಗೆ ದಾರಿಯಾಗುತ್ತಿದೆ ಎಂದು ಹಿಂದೆಯೇ ಓದಿದ್ದೆ, ಆದರೆ ನಮ್ಮಲ್ಲಿಯೂ ಆ ಮಟ್ಟಕ್ಕಲ್ಲದಿದ್ದರೂ ಮನೋಯಾತನೆಯ ಖಾಯಿಲೆಗಳಿಗೇನೂ ಕೊರತೆಯಿಲ್ಲ. ಎಷ್ಟೋ ಹೇಳಿಕೊಳ್ಲಲಾಗದ, ಅನುಭವಿಸಲೂ ಆಗದ ಸಂಗತಿಗಳನ್ನು ಒಳಗಿಟ್ಟು ಕಾಯಿಸಿ, ಕುದಿಸಿ ಮನೋಪಾತ್ರೆಯೇ ಸತ್ವ ಕಳೆದುಕೊಂಡು ಬೆಂಡಾಗಿ, ಕಡೆಗೆ ಆವಿಯಾಗುವ ಪ್ರಕ್ರಿಯೆಗೂ ಒಳಗಾಗಿರುವ ಸಂಗತಿ ಸತ್ಯಸ್ಯ ಸತ್ಯ.

ಪ್ರತಿಯೊಬ್ಬರ ಬದುಕಿನಲಿ ಎಡರು-ತೊಡರುಗಳು ಇದ್ದೇ ಇರುತ್ತವೆ. ರಸ್ತೆಯಲಿ ನಾವು ಎಷ್ಟೇ ಎಚ್ಚರಿಕೆಯಿಂದ ವಾಹನ ಚಲಾಯಿಸಿದರೂ ಬೇರೆಯವರ ತಪ್ಪುಗಳಿಂದಲೇ ಹಲವು ಬಾರಿ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ. ಹಾಗೆಯೇ ಬದುಕಿನಲಿ ಕೂಡಾ ಆಗಿಹೋಗಿರುತ್ತದೆ. ಈ ಪರಿಯ ಘಟನೆಗಳಲ್ಲದೇ ನಮ್ಮ ಬರಿಯ ಸಾತ್ವಿಕ ಆಲೋಚನೆಯಿಂದಲೋ, ಅತಿಯಾದ ನಂಬಿಕೆಯಿಂದಲೋ, ಸದಾಶಯಗಳ ಮೆಟ್ಟಿಲುಗಳೇರಬಹುದೆಂಬ ನಂಬಿಕೆಯಿಂದಲೋ ಅಥವಾ ಅಜಾಗರೂಕತೆಯಿಂದಲೋ ಹಲವು ತಪ್ಪುಗಳಿಗೆ ಅರಿವಿಲ್ಲದೆಯೂ ದಾರಿಮಾಡಿಕೊಟ್ಟಿರುತ್ತೇವೆ. ಅಂತೂ ಪ್ರತಿಯೊಬ್ಬರ ಬದುಕಿನಲಿ ಒಂದಿಲ್ಲೊಂದು ಆಕ್ಸಿಡೆಂಟ್ಗಳು ಆಗಿ ನಮ್ಮನ್ನು ಊನಗೊಳಿಸಿರುತ್ತವೆ. ಅದು ಬರಿಯ ದೈಹಿಕ ಊನವೇ ಆಗಬೇಕೆಂದಿಲ್ಲ ಮಾನಸಿಕ ಊನವೂ ಅದಕಿಂತ ದೊಡ್ಡದೆ. ಇಂತಹ ಊನಗಳಾದಾಗ ಅದು ಹೀಲ್ ಆಗಲು ಅಂದರೆ ವಾಸಿಯಾಗಲು ಮನೋಸ್ಥೈರ್ಯವೆಂಬ ಮುಲಾಮು ಜೊತೆಗೆ ಕಾಲವೆಂಬ ದಿವ್ಯೌಷಧ ಬೇಕೇ ಬೇಕು. ಈ ನಡುವೆ ಮನುಕುಲ ನಮ್ಮನ್ನು ಪುರಸ್ಕರಿಸುವರೋ? ಅಥವಾ ತಿರಸ್ಕರಿಸುವರೋ? ಎಂಬ ಗೋಜಲಿಗೆ ಸಿಕ್ಕ ಮನೋಯಾತನೆ ಆ ಸಮಯದಲ್ಲಿ ಮತ್ತಷ್ಟು ಅಧೀರರನ್ನಾಗಿ ಮಾಡುತ್ತವೆಂಬಲ್ಲಿ ಯಾವ ಸಂಶಯವೂ ಇಲ್ಲ. ಕುಟುಂಬದ ನೆರೆ-ಹೊರೆಯವರ ಮತ್ತು ಸಮಾಜದ ನಿಂದನೆ ಇಂತಹ ಮನೋ ಊನತೆಗೆ ಕಾರಣವಾಗದಿರದು. ಹಾಗಾಗಿ ನನಗನಿಸುವುದು ವ್ಯಕ್ತಿ ಮುಖ್ಯವಾಗಬೇಕೇ ಹೊರತು ಆತನ ಈ ಕ್ಷಲಣದ ಸ್ಥಿತಿ ಅಲ್ಲ. ಆತನ ಈ ಸ್ಥಿತಿಗೆ ಇದೇ ಕಾರಣ ಎಂದು ನಿರ್ಧರಿಸಲು ನಮಗೆ ಗೊತ್ತಿರುವುದು ಭಾಗಶಃ ಅರಿವೇ ಹೊರತು ಪೂರ್ಣವಲ್ಲ. ಏಕೆಂದರೆ ನಾವು ಬೇರೆಯವರಿಂದ ಕೇಳಿದ್ದೆಲ್ಲ ನಿಜವಲ್ಲ ಅದು ಹೇಳಿದವರ ಅನಿಸಿಕೆಯಾಗಿರುತ್ತದೆ ಅಂತೆಯೇ ನಾವು ಕಂಡಿದ್ದೆಲ್ಲ ಸತ್ಯವಲ್ಲ ಏಕೆಂದರೆ ಅದು ನಮ್ಮ ದೃಷ್ಠಿಕೋನವಾಗಿರುತ್ತದೆ. ಒಂದು ಕಲಾಕೃತಿಯನ್ನು ನೂರುಜನರ ಮುಂದಿರಿಸಿ ಅದರ ಬಗೆಗಿನ ಅನಿಸಿಕೆ, ಅಭಿಪ್ರಾಯಗಳನು ಅಭಿವ್ಯಕ್ತಿಸಲು ಹೇಳಿದರೆ ನೂರುಜನರ ನೋಟಕ್ಕೂ ಆ ಕಲಾಕೃತಿಯು ಒಂದೇ ರೀತಿಯಲಿ ದಕ್ಕಿರುವುದಿಲ್ಲ. ಹಾಗೆಯೇ ಬೇರೆಯವರ ಬಗೆಗಿನ ನಮ್ಮ ಅಭಿಪ್ರಾಯವೂ ಆಗಿರುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಆರೋಗ್ಯಯುತ ಮನಸನ್ನು ಕಾಪುವಲ್ಲಿ ಸಮಾಜದ ಭಾಗವಾದ ನಮ್ಮ ಪಾಲು ಹಿರಿದೆಂದೇ ನನಗನಿಸುತ್ತದೆ. ಹಾಗಾಗಿ ಬೇರೆಯವರ ಇಂತಹ ಸ್ಥಿತಿಗೆ ನಾವೇ ಕಾರಣರಾಗಿರುತ್ತೇವೆ. ಹಾಗೆ ಆಗದಿರುವುದೇ ಒಳಿತು. ಇದನ್ನು ಸಾಹಿತ್ಯಲೋಕವೂ ದಟ್ಟವಾಗಿಯೇ ಪ್ರತಿಪಾದಿಸಿದೆ ತ್ರಿವೇಣಿಯವರ “ಬೆಕ್ಕಿನಕಣ್ಣು”, ತೈಲೂರು ವೆಂಕಟಕೃಷ್ಣ ಅವರ “ಪಾರ್ವತಿ” ಕಾದಂಬರಿಗಳನ್ನು ಸಾಂಕೇತಿಕವಾಗಿ ಇಲ್ಲಿ ಉಲ್ಲೇಖಿಸಬಹುದು. ಅಂತೆಯೇ “ಗಾಳಿಮಾತು” ಸಿನಿಮಾ ಕೂಡ.

ಆದರೂ ಮಾನಸಿಕ ಊನತೆಗೆ ಗುರಿಯಾಗುವ ಮುನ್ನ ಇಂತಹ ಸ್ಥಿತಿ ನನಗೇ ಮೊದಲಲ್ಲ, ನನಗಿಂತಲೂ ತೀರಾ ಹೀನಾಯವಾಗಿದ್ದ ಬದುಕನ್ನು ಬದುಕಿ ತಮ್ಮ ಬದುಕನ್ನು ಬಂಗಾರವಾಗಿಸಿಕೊಂಡು ಆಗಿಹೋದವರ ಮತ್ತು ಬರಿಯ ನೋವಿನಲೇ ಬಳಲಿ ಬೆಂಡಾಗಿ ಬದುಕು ಮುಗಿಸಿದವರ ಚಿತ್ರಗಳನು ನಮ್ಮ ಮುಂದಿರಿಸಿಕೊಂಡು ನಮಗೆ ಯಾರು ಮಾದರಿಯಾಗಬೇಕೆಂಬುದನು ನಿರ್ಧರಿಸಿ ಆ ನಿಟ್ಟಿನಲಿ ಹೆಜ್ಜೆಯನಿಡಲು ತೊಡಗಿಕೊಳ್ಳುವಿಕೆಯ ಮೂಲಕ ಹೊಸ ಮಾರ್ಗವನು ಕಂಡುಕೊಂಡು ಸಾಗುವಾಗ ಬೇಡವಾದ ಸಂಗತಿಯನು ಮನದಿಂದ ಉಗುಳಿ ಮುಂದಡಿಯನಿಡುವ ದಿಟ್ಟತನವನು ತೋರದಿದ್ದರೆ ನೊಂದ ಜೀವಗಳಿಗೆ ಸಾತ್ವಿಕ ಮಾರ್ಗದ ದಿಕ್ಕು ತೋರುವ ಮೈಲಿಗಲ್ಲಾಗುವಲ್ಲಿ ವಿಫಲವಾದಂತಾಗುತ್ತದೆ. ಹಾಗಾಗಿ ಮಾನಸಿಕವಾಗಿಯೂ ಬೇಡವಾದ ಸಂಗತಿಯನು ಉಗುಳುವ ಕಲೆಯನು ಕರಗತಮಾಡಿಕೊಳ್ಳಬೇಕಿರುವುದು ಅತ್ಯಗತ್ಯ. ಇದಕ್ಕೆ ಪೂರಕವಾಗಿ ವ್ಯಾಟ್ಸಾಪ್ನಲ್ಲಿ ಹರಿದಾಡಿದ ಈ ಸಂದೇಶವೊಂದು ಪುಷ್ಠಿಕೊಡುವಂತಿದೆ. “ಈಗೀಗ ಯಾವ ಪ್ರಶ್ನೆಗಳೂ ನನ್ನ ದೀರ್ಘಕಾಲದವರೆಗೆ ಕಾಡೋದಿಲ್ಲ ಯಾವ ನೋವೂ, ಯಾವ ಸಂಗತಿ ಕೂಡಾ ಯಾಕೆಂದರೆ, ನನಗೀಗ ಗೊತ್ತು ಹೆಣ ಹೊರುವ ಕಷ್ಟ ಮಣಭಾರವಾಗೋದು ಸತ್ತ ದೇಹ ಮಾತ್ರವಲ್ಲ, ಸತ್ತ ಕ್ಷಣಗಳು ಕೂಡಾ.” ಹಾಗಾಗಿ ಹಳೆಯ ದುಃಖಗಳಿಗಾಗಿ ಹೊಸಕಣ್ಣೀರು ಸುರಿಸುವ ಬದಲು, ಸತ್ತ ಕ್ಷಣಗಳನು ಹೊತ್ತು ತಿರುಗುವ ಬದಲು ಬೇಡವಾದ ಸಂಗತಿಗಳನು ಮಾನಸಿಕವಾಗಿ ಉಗುಳುವ ಕಲೆಯನು ಸಿದ್ಧಿಸಿಕೊಳ್ಳಬೇಕಿದೆ. ಹಾಗಾಗಿ ಇದೊಂದು ಕಲೆ ಎಂದು ನಾನು ಕರೆದದ್ದು.

-ಸುಂದರಿ ಡಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x