ಅನ್ವರ್ಥ ನಾಮಕ್ಕೆ ವೈದ್ಯ, ವಿದ್ವಾಂಸ, ವ್ಯಾಪಾರಿ ಹೀಗೆ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಹಾಗೆಯೇ ಒಂದಷ್ಟು ಮಿನಿ ಕವಿತೆ, ಚುಟುಕು ಅಂತ ಎರಡು ಸಾಲು ಗೀಚಿದ ಕವಿಗಳಿಗೆ ಕೂಡ ಅವರ ವಿಳಾಸದ ಕೆಳಗೆ ಅವರಿಗೂ ಗೊತ್ತಿಲ್ಲದಂತೆ ‘ಕವಿಗಳು’ ಅಂತ ಅನ್ವರ್ಥಕ ನಾಮವೊಂದು ತಗಲಿ ಹಾಕಿಕೊಂಡು ಬಿಡುತ್ತದೆ. ಇದನ್ನು ನಾನು ಯಾಕೆ ಉದಾಹರಿಸುತ್ತಿರುವೆನೆಂದರೆ ಕೆಲವೊಂದು ಪರ್ಯಾಯ ಹೆಸರುಗಳು ನಮಗೆ ಅದು ಹೇಗೋ ಜಿಗುಟು ಜಿಗುಟು ಮೇಣದಂತೆ ಅಂಟು ಹಾಕಿಕೊಂಡು ಬಿಡುತ್ತದೆ. ಮತ್ತೆ ನಾವು ಬಿಟ್ಟರೂ ಅದು ನಮ್ಮನ್ನು ಬಿಡದಂತೆ ಕಾಡುತ್ತದೆ. ನನಗೂ ಕೂಡ ಹೀಗೆ ಆಗಿದೆ. ಯಾವುದೋ ಒಂದು ಕ್ಷಣದಲ್ಲಿ ಹಾಳು ಮೂಳು ಕವಿತೆ ಗೀಚಲು ಶುರು ಮಾಡಿದ ನಾನು , ಒಂದೊಮ್ಮೆ ಏನಾಗುತ್ತೋ? ಒಂದು ಕೈ ನೋಡಿಯೇ ಬಿಡುವ ಅಂತ ಪತ್ರಿಕೆಗೆ ಕಳುಹಿಸಿ ಬಿಟ್ಟಿದ್ದೆ. ನಾನು ಕಳುಹಿಸಿದ ಸಮಯದಲ್ಲಿ ಪತ್ರಿಕೆಗೆ ಕವಿತೆಯ ಕೊರತೆಯಿತ್ತೋ, ಅಥವಾ ಜಾಗ ಸಾಕಷ್ಟು ಮಿಕ್ಕಿತ್ತೋ? ಒಂದೂ ಗೊತ್ತಿಲ್ಲ. ಒಂದಂತೂ ಸತ್ಯ, ಯಾವಾಗಲೋ ಒಮ್ಮೆ ಅದೃಷ್ಟವಶಾತ್ ನನ್ನ ಪದ್ಯವೊಂದು ಪತ್ರಿಕೆಯಲ್ಲಿ ಮೋರೆ ತೋರಿಸಿದ್ದೇ ತಡ, ಮತ್ತೆ ನನಗೂ ಗೊತ್ತೇ ಆಗದಂತೆ ನನ್ನ ಹೆಸರಿನ ಕೆಳಗೆ ‘ಕವಯತ್ರಿ’ ಅನ್ನೋ ನಾಮಧೇಯ ತಳುಕು ಹಾಕಿಕೊಂಡಿ ಬಿಟ್ಟಿತ್ತು. ಅದೇನೇ ಇರಲಿ, ನಾನು ಕವಿತೆ ಬರೆಯಲಿ, ಬಿಡಲಿ ಕವಯತ್ರಿ ಅನ್ನೋ ಪುಕ್ಕಟೆ ಪಟ್ಟವನ್ನು ಕಟ್ಟಿಕೊಂಡು ತಿರುಗುತ್ತಲೇ ಇದ್ದೇನೆ. ಕೆಲವೊಮ್ಮೆ ಇದೆಷ್ಟು ಮಣಭಾರ ಅಂದರೆ ಮೇಲೆ ಹೊರಲೂ ಆಗದೆ, ಕೆಳಗೆ ಇಳಿಸಲೂ ಆಗದೆ ಒದ್ದಾಡುವಂತಾಗುತ್ತದೆ. ಅಷ್ಟೊಂದು ಎದೆಯನ್ನು ನಿರಾಳವಾಗಿಸಿದ ಹಕ್ಕಿಯಂತಹ ಕವಿತೆಯ ಅದೃಶ್ಯ ಕಿರೀಟ ಅದ್ಯಾಕೆ ಅಷ್ಟೊಂದು ತೂಕ ? ಅಂತ ಹಲವು ಬಾರಿ ಯೋಚಿಸಿ ಒದ್ದಾಡಿದ್ದೇನೆ.
ಅದಿರಲಿ, ಆದರೂ ಕವಿ ಅಂತ ಅಂದಾಕ್ಷಣ ಜನರು ನಮ್ಮನ್ನು ವಿಭಿನ್ನವಾಗಿ ನೋಡುವುದಂತು ಸುಳ್ಳಲ್ಲ. ನಾವು ಯಾವುದೇ ಸಭೆ ಸಮಾರಂಭಗಳಿಗೆ ಹೋಗಲಿ, ಒಂದೋ ವೇದಿಕೆಯ ಮೇಲೆ ಕರೆದು ಕುಳ್ಳಿರಿಸುತ್ತಾರೆ, ಇಲ್ಲವೇ ವೇದಿಕೆಯ ಮೇಲಿಂದಲೇ ಕವಿಗಳ ಉಪಸ್ಥಿತಿಯನ್ನು ಗೌರವಿಸುತ್ತಾ, ಅವರಿಗೆ ಮಾತಿನಲ್ಲೇ ವೇದಿಕೆಯ ಪಟ್ಟ ಕೊಟ್ಟು ಬಿಡುತ್ತಾರೆ. ಅಸಲಿಗೆ ಈ ಕವಿಗಳ ಕಷ್ಟ ಸುಖಗಳು, ಪಟ್ಟ ಪಾಡುಗಳು ಇವರಿಗೇನು ಗೊತ್ತು?. ಅದೆಷ್ಟೋ ಗೀಚಿದ ಕವಿತೆಗಳು ಸಂಪಾದಕರ ಕಸದ ಬುಟ್ಟಿ ಸೇರಿ ತದನಂತರ ಮುನಿಸಿಪಾಲಿಟಿಯ ದೊಡ್ಡ ಲಾರಿಯೊಳಗೆ ಸೇರಿ ಸಾಗಿದೆಯೋ? ಅಥವಾ ಸಂಪಾದಕರ ಮನೆಯ ಬಿಸಿನೀರ ಹಂಡೆಗೆ ಬೆಂಕಿಯುರಿಯಾಗಿದೆಯೋ? ದೇವನೇ ಬಲ್ಲ. ಯಾವ ರೀತಿಯಲ್ಲಿಯೋ ಕವಿತೆ ಸುಟ್ಟು ಬೂದಿಯಾಗುವ ಶೋಕದ ಬೇಗೆ ಅರಿವಿಲ್ಲದೆಯೇ ನಮ್ಮ ಎದೆಯನ್ನೂ ತಾಕಿ ಸುಟ್ಟು ಹಾಕಿ ಬಿಡುತ್ತದೆ. ಸುಖಾ ಸುಮ್ಮಗೆ ಗೀಚಿದ ಕವಿತೆಯೊಂದು ಯಾಕಿಷ್ಟು ಆಪ್ತವಾಗುತ್ತದೆ ಅನ್ನೋದು ನಮ್ಮ ಅರಿವಿಗೂ ನಿಲುಕದ ಅದೃಶ್ಯ ಸಂಗತಿ. ಕವಿತೆ ಹುಟ್ಟುತ್ತದೆ, ಸಾಯುತ್ತದೆ, ಕೆಲವು ಹುಟ್ಟೋದಿಕ್ಕೆ ಮುಂಚೆಯೇ ಸತ್ತಿರುತ್ತೆ. ಕೆಲವಂತೂ ಸತ್ತ ಮೇಲೂ ಮರು ಹುಟ್ಟು ಪಡೆದು ಬಿಡುತ್ತವೆ. ಇದು ಕವಿತೆಯ ಅಮೂರ್ತ ಸಂಗತಿಗಳು. ಇಂತಹ ತೊಳಲಾಟವನ್ನು ಕವಿಯಾದವನು ಮಾತ್ರ ಅನುಭವಿಸಲಿಕ್ಕೆ ಸಾಧ್ಯ. ಬಹುಷ; ಇದು ಕವಿತೆಗಷ್ಟೆ ಅರ್ಥವಾಗುವ ಸಂಗತಿಯಾದ ಕಾರಣವೇ ಇರಬೇಕು, ಕವಿತೆಯ ಮೋಹಕ್ಕೆ ಬಿದ್ದವರು ಯಾವುದೋ ಗುಂಗಿನಲ್ಲಿ ಕಳೆದು ಹೋಗುವುದು. ಕವಿಗಳೆಲ್ಲಾ ಅರೆ ಮರುಳರು ಅಂತ ಎಲ್ಲರೂ ಗೇಲಿ ಮಾಡಿ ನಗುವುದು.
ಆದರೆ ಈ ಕವಿಗಳು ಕೆಲವೊಮ್ಮೆ ಪೇಚಿನಲ್ಲಿ ಸಿಕ್ಕಿ ಹಾಕಿಕೊಂಡು ಕವಿ ಪಟ್ಟದಿಂದ ತಪ್ಪಿಸಿಕೊಳ್ಳಲಾರದೆ ಇರುವ ಪ್ರಸಂಗಳು ಸಾಕಷ್ಟಿವೆ. ಅದೆಷ್ಟೋ ಸಲ ಏನಾಗುತ್ತದೆ ಅಂದರೆ, ಇದು ಜಿಲ್ಲಾ ಮಟ್ಟದ ಕವಿಗೋಷ್ಟಿ, ನಿಮಗೊಂದು ಅಪೂರ್ವ ಅವಕಾಶ ಅಂತ ನಮ್ಮನ್ನು ಆಹ್ವಾನಿಸಿ, ಯಾರಿಗೂ ದಕ್ಕದ ಪಟ್ಟ ನಮಗೆ ದಕ್ಕಿದೆಯೇನೋ ಅನ್ನುವ ಭ್ರಮೆ ಹುಟ್ಟಿಸಿ ಬಿಡುತ್ತಾರೆ. ಅಷ್ಟಕ್ಕೆ ನಮ್ಮ ಎದೆಯ ಬಡಿತ ಏರುಪೇರಾಗಿ ಕವಿತೆಯ ಧ್ಯಾನ ಶುರುವಾಗಿ ಬಿಡುತ್ತದೆ. ನಾವೋ ತಾಲೂಕು ಮಟ್ಟದ ವೇದಿಕೆಗಳಲ್ಲಿ ಬಾವಿಯ ಆಚೆ ತುದಿಯಿಂದ ಈಚೆ ತುದಿಗೆ ಮರಿ ಕಪ್ಪೆಯಂತೆ ಬಾವಿಯೊಳಗೆ ಕುಪ್ಪಳಿಸುತ್ತಿದ್ದವರು ಏಕಾ ಏಕಿ ಜಿಲ್ಲಾ ಮಟ್ಟಕ್ಕೆ ಏರಿದೆವೆಂಬ ಸಂತಸದಿಂದ, ಇದ್ದ ಬದ್ದ ಹಳೆ ಕವಿತೆಯನ್ನೆಲ್ಲಾ ಒಟ್ಟು ಸೇರಿಸಿ , ಚೆಲ್ಲಾ ಪಿಲ್ಲಿಯಾಗಿದ್ದ ರುಂಡ ಮುಂಡಗಳನ್ನೆಲ್ಲಾ ಯಥಾವತ್ತಾಗಿ ಜೋಡಿಸಿ ಅದಕ್ಕೆ ಹೊಸ ರೂಪು ಕೊಟ್ಟು ಸಂಭ್ರಮಿಸುತ್ತೇವೆ. ಇದರ ಪ್ರಭಾವ ಮತ್ತೆ ರಾಜ್ಯ ರಾಷ್ಟ್ರ ಅಂತ ಹಬ್ಬುತ್ತಾ ಹೋಗುತ್ತದೆ. ದೊಡ್ಡ ಸಮಾರಂಭ ಅಂತ ಸರಭರ ರೇಷಿಮೆ ಸೀರೆಯುಟ್ಟು ಹೋದರೆ , ಒಪ್ಪವಾಗಿ ಜೋಡಿಸಿಟ್ಟ ಖಾಲಿ ಕುರ್ಚಿಗಳೆಲ್ಲಾ ನಮ್ಮನ್ನು ನೋಡಿ ಅಣಕಿಸಿದಂತಾಗುತ್ತದೆ. ಇಂತಹ ಸಂಭ್ರಮದ ಕವಿಗೋಷ್ಟಿಯಲ್ಲಿ ಒಂದೊಮ್ಮೆ ನಾನೂ ಪಾಲ್ಗೊಂಡು ಭ್ರಮನಿರಸನವಾದ ಕಥೆಯನ್ನು ಹೇಳಲೇ ಬೇಕಿದೆ.
ಒಮ್ಮೆ 15 ವರುಷಗಳ ಹಿಂದೆ ಕವಿಗೋಷ್ಟಿಯೊಂದರಲ್ಲಿ ಭಾಗವಹಿಸಿದ್ದೆ. ಆಗಲೇ ಹೇಳಿದ ಹಾಗೆ ಆಗೆಲ್ಲಾ ಕವಿಗೋಷ್ಟಿಗಳಲ್ಲಿ ಭಾಗವಹಿಸುವುದು, ಪತ್ರಿಕೆಗಳಲ್ಲಿ ನಮ್ಮ ಹೆಸರು ಅಚ್ಚಾಗಿ, ನಾನೂ ಒಬ್ಬಳು ಕವಿ ಅಂತ ಗುರುತಿಸಿಕೊಳ್ಳುವುದು ಇವೆಲ್ಲಾ ಹೆಮ್ಮೆ ತರಿಸುವ ವಿಚಾರವಾಗಿತ್ತು. ಹಾಗೇ ಆ ಕವಿಗೋಷ್ಟಿಯಲ್ಲಿ ನಾನು ಕವಿತೆ ಓದೋದಿಕ್ಕೆ ಮುಂಚೆ ನನ್ನ ಪರಿಚಯವನ್ನು ನಿರೂಪಕರು ಉತ್ಪ್ರೇಕ್ಷೆ ಮಾಡುತ್ತ ಹೇಳುತ್ತಿರ ಬೇಕಾದರೆ, ಒಂದು ಕಡೆ ಮನಸು ಹಿಡಿಯಾಗುತ್ತಾ, ಮತ್ತೊಂದು ಕಡೆಯಿಂದ ಬಲೂನಿನಂತೆ ಉಬ್ಬುತ್ತಾ ಹೋಗುತ್ತಿತ್ತು. ಅಂತೂ ನನ್ನ ಸರದಿ ಬಂದು ಕವಿತೆ ಓದಿದ್ದೊಂದೇ ಗೊತ್ತು, ಬೇರೆಯವರ ಕವಿತೆಯ ಬಗ್ಗೆ ನಿಗಾವಹಿಸಿದ್ದೆನೋ ಇಲ್ಲವೋ ನೆನಪಿಲ್ಲ. ಎಲ್ಲರ ಕತೆಯೂ ಇಷ್ಟೇ ಆಗಿರುವಾಗ ತಮಾಷೆಯ ಸಂಗತಿಯೆಂದರೆ ಅವರವರ ಕವಿತೆಗೆ ಪೂರ್ಣ ಶೋತೃಗಳು ಅವರು ಮಾತ್ರ ಅನ್ನುವ ಸತ್ಯ ಹೊಳೆದದ್ದು. ಅವರವರ ಸ್ವಂತ ಕಿವಿಗಳಿಗೆ ಅನಿವಾರ್ಯ, ಕೇಳದೆ ಬೇರೆ ವಿಧಿಯಿಲ್ಲ. ಆದರೆ ಅಧ್ಯಕ್ಷರ ಪಾಡು ಚಿಂತಾಜನಕ. ಅಧ್ಯಕ್ಷ ಗಾದಿ ಸಿಕ್ಕಿದೆ. ಅಟ್ಟದ ಮೇಲೆ ಕುಳ್ಳಿರಿಸಿ ಆಗಿದೆ. ತೀರ್ಪು ಕೊಡದೆ, ಅನಿಸಿಕೆ ಹೇಳದೆ ಬೇರೆ ಉಪಾಯವಿಲ್ಲ. ಆ ದಿನ ನಾನು ಮತ್ತು ನನ್ನ ಜೊತೆಗೆ ಇದ್ದ ಒಂದಷ್ಟು ಓರಗೆಯ ಕವಿಗಳು ಕವಿತೆ ಓದಿ ನಿರಾಳರಾಗಿ ಅಧ್ಯಕ್ಷರ ಮಾತುಗಳಿಗೆ ಕೌತುಕುದ ಕಿವಿಯಾಗುತ್ತಾ ಕುಳಿತ್ತಿದ್ದೆವು.
ಅಧ್ಯಕ್ಷರೋ ನಮ್ಮ ಕವಿತೆಯನ್ನೆಲ್ಲಾ ಹಿಗ್ಗಾಮುಗ್ಗ ಎಳೆದು ಚೆನ್ನಾಗಿ ಜಾಡಿಸಿ ಬಿಟ್ಟಿದ್ದರು. ಅವರು ಹೇಳಿದ್ದು ವಸ್ತುನಿಷ್ಠವಾಗಿತ್ತು, ಮತ್ತು ಆ ಕಾರ್ಯಕ್ರಮಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದರೆಂಬುದು ಬೇರೆ ಮಾತು. ಆದರೆ ಇಷ್ಟರವರೆಗೆ ಹೊಗಳಿಸಿಕೊಂಡೇ ಇದ್ದ ನಮ್ಮ ಪಾಡು ಹೇಗಾಗಿರಬೇಡ?. ಎಷ್ಟೆಂದರೆ , ಇನ್ನು ಮುಂದೆ ಕವಿತೆ ಬರಿಯಲೇ ಬಾರದು ಅನ್ನೋ ತೀರ್ಮಾನಕ್ಕೆ ಬಂದು ಬಿಟ್ಟಿದ್ದೆ. ಆದರೆ ಕವಿತೆ ಗೀಚುವುದು ಎಂದರೆ ಒಂದು ಚಟ. ಒಮ್ಮೆ ಕವಿತೆಯ ಗೀಳು ಹತ್ತಿತೆಂದರೆ, ಈ ಹುಚ್ಚಿಗೆ ಯಾವುದೇ ಮದ್ದು ಇಲ್ಲವೇನೋ?. ಆಮೇಲೆ ನಾನೇ ಕವಿತೆಗೆ ಅಂಟಿಕೊಂಡೆನೋ, ಅಥವಾ ಕವಿತೆಯೇ ನನಗೆ ಅಂಟಿಕೊಂಡಿತೋ ಒಂದೂ ಗೊತ್ತಿಲ್ಲ. ಅಂತೂ ಇಂತೂ ಕವಿತೆ ಗೀಚುವುದೂ ತಪ್ಪಲಿಲ್ಲ, ಆಗೊಮ್ಮೆ ಈಗೊಮ್ಮೆ ವೇದಿಕೆಯ ಮೇಲೆ ಹಣಕಿ ಹಾಕಿ ಕವಿತೆ ಓದಿ ಬರುವುದು ತಪ್ಪಲಿಲ್ಲ. ಮತ್ತೊಮ್ಮೆ ಹೀಗೇ ಕವಿಗೋಷ್ಟಿಯೊಂದರಲ್ಲಿ ಭಾಗವಹಿಸಿದ್ದಾಗ , ಅಂದು ನಮ್ಮ ಕವಿತೆಗಳ ಜನ್ಮ ಜಾಲಾಡಿದವರೇ ಅಂದಿನ ಅಧ್ಯಕ್ಷರಾಗಬೇಕೆ?. ಆ ಕ್ಷಣದಲ್ಲಿ ನನ್ನ ಕೈ ಕಾಲು ಎಲ್ಲಾ ಬಿದ್ದು ಹೋಗಿ , ಹೇಗೆ ನಡುಗುವ ಸ್ವರದಲ್ಲಿ ಕವಿತೆ ವಾಚಿಸಿ ಬಂದೆನೋ ಗೊತ್ತಿಲ್ಲ. ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಲು ಎದ್ದದ್ದೇ ತಡ, ನನ್ನ ಕವಿತೆಯ ಅವಸ್ಥೆ ನೆನೆದು ಸಿಕ್ಕಾಪಟ್ಟೆ ಭಯವಾಗಿ ಹೋಗಿತ್ತು. ಕವಿತೆಗೆ ಪೆಟ್ಟು ಕೊಟ್ಟರೆ ನೋವಾಗುವುದು ನನಗೆ ತಾನೇ?!. ಇದ್ಯಾವುದರ ಸಂಗತಿ ಗೊತ್ತಿಲ್ಲದ ನನ್ನ ಊರಿನವರ ಬಾಯಿಂದ ಅದೇನೋ ದೊಡ್ಡ ಹೆಸರು ಗಳಿಸಿಕೊಂಡಿದ್ದೆ. ಜೀವನದಲ್ಲಿ ಏನೂ ಸಾಧನೆ ಮಾಡಲಿಕ್ಕಾಗದೆ ಎಲ್ಲರ ಮುಂದೆ ನಿಕೃಷ್ಠರಾಗಿ ಬಿಡುವ ಸಂದರ್ಭದಲ್ಲಿ, ಅರ್ಥವಾಗದ ಎರಡು ಸಾಲು ಗೀಚಿ ಕವಿ ಅಂತ ಒಮ್ಮೆ ಕರೆಸಿಕೊಂಡರೆ ಸಾಕು ನೋಡಿ!, ಎಲ್ಲರಿಗಿಂತ ದೊಡ್ದ ಮನುಷ್ಯರಂತೆ ಪರಿಗಣಿಸುತ್ತಾರೆಂದು ಗೊತ್ತಾಗಿಯೇ ಬಿಟ್ಟಿತ್ತು.
ಅಂತಹುದರಲ್ಲಿ ಇಂದು ಊರವರ ಎದುರಿಗೆ ಇದೆಲ್ಲಾ ನೀರಿಗಿಟ್ಟ ಹೋಮ ಆಗುತ್ತದೆಯೆಂದು ಇನ್ನಿಲ್ಲದ ಸಂಕಟವಾಗಿತ್ತು. ಅಧ್ಯಕ್ಷರಿಗೆ ನನ್ನ ಪರಿಸ್ಥಿತಿ ಅರ್ಥವಾಯಿತೋ ಏನೋ ಗೊತ್ತಿಲ್ಲ, ಅದೃಷ್ಟವಷಾತ್ ನನ್ನ ಕವಿತೆಯನ್ನಂತು ಮೆಚ್ಚಿಕೊಂಡು ಬಾಯಿತುಂಬಾ ಹೊಗಳಿ ನಾನು ಬೆಕ್ಕಸ ಬೆರಗಾಗುವಂತೆ ಮಾಡಿ ಬಿಟ್ಟಿದ್ದರು. ನಾನೋ ಬದುಕಿದೆಯಾ. . ಬಡ ಜೀವವೇ ಅಂತ ಮನಸಿನಲ್ಲೇ ಕಾಣದ ದೇವರಿಗೆ ನೂರೊಂದು ಬಾರಿ ಅಡ್ಡ ಬಿದ್ದು ಬಿಟ್ಟಿದ್ದೆ. ಆದರೆ ಅವರ ಅಚಾನಕ್ ಹೊಗಳಿಕೆ ನನ್ನ ಕವಿತೆಯೆಂಬ ಮರಿ ಹಕ್ಕಿಗೆ ರೆಕ್ಕೆ ಪುಕ್ಕ ಹುಟ್ಟಿ ಮತ್ತೆ ಮೇಲೆ ಹಾರಲು ಹವಣಿಸಿದ್ದು ಸುಳ್ಳಲ್ಲ. ಆದರೆ ನನ್ನ ಕವಿತೆಯೆಂಬ ಹಕ್ಕಿಗೆ ಎತ್ತರಕ್ಕೆ ಹಾರಲು ಮತ್ತಷ್ಟು ಬಲ ಬರಲೇ ಇಲ್ಲ ಎಂಬುದು ಇನ್ನೂ ನನಗೆ ಬೇಸರದ ಸಂಗತಿ. ಕೆಲವರಿಗಂತೂ ತಮ್ಮ ಕವಿತೆಯ ಬಗ್ಗೆ ಅದೇನೋ ಭಯಂಕರ ಪ್ರೀತಿ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅಂತಾರಲ್ಲ ಹಾಗೆ. ಆದರೆ ಅವರ ಕವಿತೆಗೆ ಒಂದೋ ಕೈ ಇರೋದಿಲ್ಲ, ಒಂದೋ ಕಾಲು ಇರೋದಿಲ್ಲ. ಇನ್ನು ಕೆಲವರ ಕವಿತೆಗಂತೂ ಹೃದಯವೇ ಇರೋದಿಲ್ಲ. ಹಾಗಂತ ನಾವು ಬಾಯಿಬಿಟ್ಟು ಹೇಳೋ ಹಾಗಿಲ್ಲ. ಹೇಳಿದರೆ ನಾವೇ ಅಪರಾಧಿಗಳಾಗಿ ಬಿಡುವ ಸಾಧ್ಯತೆಯೇ ಹೆಚ್ಚು. ಕವಿಗೋಷ್ಠಿಯ ವಿಚಾರ ಮಾತಾಡುತ್ತಿದ್ದೆ, ವಿಷಯಾಂತರ ಆಯಿತು ನೋಡಿ. ವಿಷಯಕ್ಕೆ ಬರುವೆ ಈಗ. ಹೆಚ್ಚಿನ ಕವಿಗೋಷ್ಟಿಗಳು ಕಾಟಾಚಾರಕ್ಕೆಂಬಂತೆ ಮಾಡಿ ಮುಗಿಸುತ್ತಾರೆ. ಒಂದು ಕವಿತೆಗೆ ಮೂರೇ ನಿಮಿಷ ಅಂತ ಸಮಯ ಕೂಡ ನಿಗದಿ ಮಾಡಿ ಬಿಡುತ್ತಾರೆ.
ಒಂದಷ್ಟು ಸಹೃದಯ ಕವಿಗಳು ಸಮಯಕ್ಕೆ ನ್ಯಾಯ ಒದಗಿಸುತ್ತಾ ಎರಡೇ ನಿಮಿಷದಲ್ಲಿ ಚೀಟಿ ಬರೋದಿಕ್ಕೆ ಮುಂಚೆ ಕವಿತೆ ಓದಿ ನಿರಾಳರಾಗಿ ಬಿಡುತ್ತಾರೆ. ಇನ್ನು ಕೆಲವರಂತು ಇದ್ಯಾವುದಕ್ಕೆ ಸೊಪ್ಪು ಹಾಕದೆ , ಸಿಕ್ಕಿದ್ದು ಇದೇ ಸದಾವಕಾಶ ಅಂತ ಒಂದಷ್ಟು ಪೀಠಿಕೆ ಮಾತನಾಡಿ, ಸ್ವಾಗತ, ಪ್ರಸ್ತಾವನೆ, ಮುಖ್ಯ ಭಾಷಣ, ಧನ್ಯವಾದ ಸಮರ್ಪಣೆಯನ್ನೂ ಮುಗಿಸಿ ಕವಿತೆ ಓದಲು ಶುರು ಮಾಡುತ್ತಾರೆ. ಒಂದು ಕವಿತೆ ಸಾಲದೆಂಬಂತೆ ಇನ್ನೊಂದು ಕವಿತೆ ಹಿಡಿದು ಓದಲು ತೊಡಗುತ್ತಾರೆ. ಸಂಘಟಕರಿಗೆ ಏನೂ ಮಾಡಲು ತೋಚದೆ, ಉಳಿದ ಕವಿ ಮಹಾಶಯರಿಗೆ ಶೀರ್ಷಿಕೆ ಓದಲೂ ಪುರುಸೊತ್ತು ಕೊಡದಂತೆ ಗಡಿಬಿಡಿ ಮಾಡಿ ಬಿಡುತ್ತಾರೆ. ಶಾಲು ಹೊದೆಸಿ, ಸ್ಮರಣಿಕೆ ಕೊಟ್ಟು ಎಲ್ಲರನ್ನು ಸಾಗಹಾಕಿದ ಮೇಲಷ್ಟೇ ನಿರೂಪಕರಿಗೆ ಹೋದ ಜೀವ ಮತ್ತೆ ಬಂದಂತಾಗುವುದು. ಈ ಎಲ್ಲಾ ಕಾರಣಗಳಿಂದ ನನಗಂತೂ ಮೊದಲಿದ್ದ ಉತ್ಸಾಹವೆಲ್ಲಾ ಜರ್ರನೆ ಇಳಿದು ನೂರೆಂಟು ನೆವ ಹೇಳಿ ಈ ಕವಿಗೊಷ್ಟಿಯೆಂಬ ಪ್ರಹಸನದಿಂದ ತಪ್ಪಿಸಿಕೊಳ್ಳುತ್ತಿರುವೆ. ಆದರೆ ಕವಿತೆ ಗೀಚೋದರಿಂದ ಪಾರಾಗಲು ಮಾತ್ರ ಸಾಧ್ಯ ಆಗಲೇ ಇಲ್ಲ ನೋಡಿ!. ಆದರೆ ಕೆಲವರಂತು ಕವಿಗೋಷ್ಟಿಗೆ ಆಹ್ವಾನ ಬಂದದ್ದೇ ತಡ, ಸಂತೋಷದ ಪರಾಕಾಷ್ಟೆಯಲ್ಲಿ ಹುಚ್ಚೆದ್ದು ಕುಣಿದು ಬಿಡುತ್ತಾರೆ. ಪತ್ರಿಕೆಯಲ್ಲಿ ಪೆÇೀಟೋ ಕೂಡ ಕೊಟ್ಟು ಬಿಡುತ್ತಾರೆ. ಅಷ್ಟಕ್ಕೇ ಕವಿತೆಯ ತಲೆ ಬುಡ ಗೊತ್ತಿರದ ಓದುಗರು ಇವರೇನೋ ಮಹಾನ್ ಬುದ್ಧಿವಂತರು ಅನ್ನೋ ಹಾಗೆ ಕಣ್ಣರಳಿಸಿ ಬಿಡುತ್ತಾರೆ. ಆದರೆ ತಮಾಷೆಯ ಸಂಗತಿಯೆಂದರೆ ತುಂಬಾ ಜನ ನನ್ನಲ್ಲಿ ಕೇಳೋದಿದೆ, ನಿಮ್ಮದು ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ಬಂದ ಬರಹಕ್ಕೆ ನೀವೆಷ್ಟು ದುಡ್ಡು ಕೊಟ್ಟಿರುವಿರಿ? . ನನ್ನ ಬಳಿಯೂ ಬರೆದ ಚೆಂದದ ಲೇಖನವಿದೆ, ಯಾವ ಸಂಪಾದಕರ ಬಳಿ ಇದನ್ನು ಕೊಡಬೇಕು? ಎಂದು ವಿದ್ಯಾವಂತರೂ ಕೂಡ ಕೇಳುವಾಗ ನಾನು ಕಕ್ಕಾಬಿಕ್ಕಿಯಾಗಿ ಬಿಡುತ್ತೇನೆ. ಸಾವಧಾನದಿಂದ ಬರಹ ಕಳಿಸುವ ವಿಧಾನವನ್ನೆಲ್ಲಾ ಅವರಿಗೆ ತಿಳಿಸಿ, ಆಯ್ಕೆಯಾಗಿ, ಪ್ರಕಟಗೊಂಡರೆ ನಿಮಗೇ ಸಂಭಾವನೆ ರೂಪದಲ್ಲಿ ಹಣ ಬರುತ್ತದೆ ಅಂತ ತಿಳಿ ಹೇಳುವಾಗ ಹೀಗೂ ಉಂಟೇ ಅನ್ನುವ ಅಚ್ಚರಿಯ ಭಾವ ಅವರಲ್ಲಿ ವ್ಯಕ್ತವಾಗುವುದರ ನೋಡಬೇಕು. ಪತ್ರಿಕೆಯಲ್ಲಿ ಬರುವ ಪುಟ್ಟ ಜಾಹಿರಾತಿಗೆ ದೊಡ್ದ ಮೊತ್ತ ಕೊಡಬೇಕು ಅಂತ ಗೊತ್ತಿರುವ ಅವರಿಗೆ ಒಂದು ಪುಟದ ಲೇಖನಕ್ಕೆ ಅದೆಷ್ಟು ಹಣ ಆಗಬಹುದೋ ? ಎಂಬುದು ಅವರ ದೂರದ ಲೆಕ್ಕಾಚಾರ.
ನಮ್ಮ ಊರಿನಲ್ಲಿ ಮೂರು ಜನ ನಾವುಗಳು ‘ಕವಯತ್ರಿಯರು’ ಅನ್ನೋ ಬಿರುದಾಂಕಿತ ಹೊಂದಿದವರಿದ್ದೇವೆ. ನಾವು ಮೂರು ಜನರು ಕೂಡ ಬೇರೆ ಬೇರೆ ವಯೋ ಮಾನದವರು. ನೋಡಲು ಕೂಡ ಭಿನ್ನತೆ ಇದೆ. ಆದರೆ ಊರಿನವರೆಲ್ಲಾ ನಮ್ಮ ಮೂವರನ್ನು ಯಾಕೆ ಗೊಂದಲ ಮಾಡಿ ಕೊಳ್ಳುತ್ತಾರೋ ಗೊತ್ತಿಲ್ಲ. ನಿಮ್ಮ ಕವಿತೆ ಮೊನ್ನೆ ಪತ್ರಿಕೆಯಲ್ಲಿ ಓದಿದೆ ಭಾರಿ ಚೆನ್ನಾಗಿತ್ತು ಅಂತ ಸಹೃದಯರೊಬ್ಬರು ಹೊಗಳಿ ಹೊಗಳಿ ಅಟ್ಟಕೇರಿಸುತ್ತಿರುವಾಗ, ನಾನು ಬರೆಯದೆ ಓಬಿರಾಯ ಕಾಲವಾಯಿತ್ತಲ್ಲ ಅಂತ ಯೊಚಿಸುವಾಗಲೇ ಗೊತ್ತಾದದ್ದು, ಇವರು ಮತ್ತೊಬ್ಬ ಕವಿಯತ್ರಿಯನ್ನು ನಾನು ಎಂದು ಎಡವಟ್ಟು ಮಾಡಿಕೊಂಡಿದ್ದಾರೆಂದು. ಮತ್ತೊಮ್ಮೆ ನನಗೆ ಸಿಕ್ಕ ಪ್ರಶಸ್ತಿಗೆ ಮತ್ತೊಬ್ಬಳಿಗೆ ಅಭಿನಂದನೆ ತಿಳಿಸಿದ್ದರು. ಇದು ಅನೇಕ ಭಾರಿ ಹೀಗೆ ಆಗುವುದರಿಂದ ನಾನು ‘ಅವಳಲ್ಲ’ ಅಂತ ನಾವು ಮೂರು ಮಂದಿಯೂ ಸ್ಪಷ್ಟೀಕರಣ ಕೊಡದೆ, ಹೌದೌದು! ವಂದನೆಗಳು ಅಂತ ಹೇಳಿ ಅಲ್ಲಿಂದ ನುಣುಚಿಕೊಂಡು ಬಿಡುತ್ತೇವೆ. ತದನಂತರ ಆ ಕತೆಯನ್ನು ಒಬ್ಬರಿಗೊಬ್ಬರು ಹೇಳುತ್ತಾ ನಕ್ಕು ಹಗುರವಾಗುವುದುಂಟು. ಕೆಲವೊಮ್ಮೆ ಪರವೂರಿನವರೂ ಅದೆಷ್ಟು ಗೊಂದಲ ಹುಟ್ಟಿಸಿ ಬಿಡುತ್ತಾರೆಂದರೆ, ನನಗೆ ಬರುವ ಪತ್ರಿಕೆ, ಆಮಂತ್ರಣಗಳನ್ನು ಅವರ ಹೆಸರಿಗೆ, ಅವರದ್ದು ನನ್ನ ಹೆಸರಿಗೆ ಟಪಾಲು ಗುದ್ದಿ ಸಾವಿರದೊಂದು ಬಾರಿ ಫೆÇೀನಾಯಿಸಿ ಟಪಾಲು ಇನ್ನು ಬಂದಿಲ್ಲವೇ? ನಾನೇ ಖುದ್ದಾಗಿ ಸರಿಯಗಿ ವಿಳಾಸ ಬರೆದು ಹಾಕಿರುವೆನಲ್ಲಾ? ಅಂತ ನಮ್ಮನ್ನೇ ಪೇಚಿಗೆ ಸಿಕ್ಕಿಸಿ ನಮ್ಮ ಹೆಸರಿನ ಬಗ್ಗೆಯೇ ನಮಗೆ ಅನುಮಾನ ಬರುವಂತೆ ಮಾಡಿ ಬಿಡುತ್ತಾರೆ. ಅದೇನೇ ಇರಲಿ, ಈ ಕವಿತೆಯ ಸಹವಾಸದಿಂದ ಸಿಗುವ ಸುಖ, ಸಂತೋಷ, ನಗು, ದಕ್ಕುವ ಗೆಳೆತನ, ವಿಶ್ವಾಸ, ಹೊಸ ಅನುಭವ ಎಲ್ಲವೂ ಅಪಾರ. ಮೂರಕ್ಷರದ ಕವಿತೆಗೆ ಎಷ್ಟೊಂದು ಶಕ್ತಿಯಿದೆ ಅಂತ ನೆನೆದುಕೊಳ್ಳುವಾಗಲೆಲ್ಲಾ ಕವಿತೆಗೆ ತಲೆಬಾಗಿ ಬಿಡುತ್ತೇನೆ. ಕವಿತೆಗೆ ಮನಸು ಶರಣಾಗುತ್ತಾ, ಕವಿತೆಯ ಸೆರಗು ಹಿಡಿದು ಮಗುವಿನಂತೆ ಸಾಗುತ್ತೇನೆ.
ಕವಿತೆಯೆಂಬ ನಾಮಾಂಕಿತವನ್ನು ಹೊತ್ತುಕೊಂಡು ಊರೂರು ತಿರುಗುವಾಗ, ಅದೆಷ್ಟೋ ಜನರಿಗೆ, ಈ ಕವಿಗಳು ಮರುಳರಂತೆ ಕಂಡದ್ದಿದೆ. ಅದು ಹೌದಿರಲೂ ಬಹುದು. ನನಗಂತು ಗೆಳತಿಯರೊಂದಿಗೆ ಓದು, ಬರಹ, ಕವಿತೆ ಬಿಟ್ಟರೆ ಬೇರೆ ವಿಷಯವೇ ಮಾತನಾಡಲು ಸಿಗಲೊಲ್ಲದು. ಇದನ್ನು ಕೇಳುತ್ತ ರೋಸಿ ಹೋದ ನನ್ನ ತಂಗಿಯೊಮ್ಮೆ, ಅಕ್ಕಾ. . ನಿಂಗೆ ಹುಚ್ಚು ಗಿಚ್ಚು ಏನಾದರೂ ಹಿಡಿದಿದೆಯಾ. . ? ಅಂತ ಕೇಳಿದ್ದಳು. ಅಷ್ಟೊತ್ತಿಗಾಗಲೇ ನನ್ನ ಗೆಳತಿಯೊಬ್ಬಳು ಫೆÇೀನಾಯಿಸಿ, ಸ್ಮಿತಾ. . ಮನೆ ತುಂಬಾ ನೆಂಟರು. ಬರೆಯದೆ ಓದದೆ ಮೂರು ದಿನದ ಮೇಲಾಯಿತು. ಪುಸ್ತಕ, ಪೆನ್ನು ಹಿಡಿಯದೆ ಹುಚ್ಚೇ ಹಿಡಿದಂತೆ ಆಗುತ್ತಿದೆ ಅಂತ ಆಕೆ ಆತಂಕ ವ್ಯಕ್ತ ಪಡಿಸುತ್ತಿರುವಾಗ , ನಾನು ನಿಜಕ್ಕೂ ಗರಬಡಿದವಳಂತೆ ಆಗಿಬಿಟ್ಟೆ. ಸಧ್ಯ ! ನನ್ನೊಬ್ಬಳ ಕತೆ ಮಾತ್ರ ಅಲ್ಲ ಇದು ಅಂತ ಸಮಾಧಾನ ಪಟ್ಟುಕೊಂಡೆ. ಈ ಹುಚ್ಚಿನಿಂದ ಯಾರಿಗೂ ತೊಂದರೆಯಿಲ್ಲವೆನ್ನಿ. ಆದರೂ ಈ ಹುಚ್ಚನ್ನು ಬಿಡಿಸುವ ಮದ್ದು ಯಾವುದಾದರೂ ಇರಬಹುದೇ?!.
ಈ ಹುಚ್ಚಿಗೆ ಯಾವುದು ಮದ್ದು
-ಸ್ಮಿತಾ ಅಮೃತರಾಜ್. ಸಂಪಾಜೆ