ಸಂಜೆ ಸೂರ್ಯ ಮೆಲ್ಲನೆ ಮರೆಯಾಗುವುದನ್ನು ನೋಡಿದಾಗ, ಮನಸ್ಸಿನ ಆಸೆಗಳು ನಿಧಾನವಾಗಿ ಕರಗತೊಡಗಿದವು. ನೀ ಬರುವ ಹಾದಿಯನ್ನು ದಿಟ್ಟಿಸಿದಾಗ ನಿರಾಸೆಯ ಕಾರ್ಮೋಡ ಕವಿಯಿತು. ಈ ಸಂಜೆಯು ನೀ ಬರಲಿಲ್ಲ, ಪ್ರೀತಿಗಾಗಿ ಕಾಯುವುದರಲ್ಲಿ ಏನೋ ನೆಮ್ಮದಿ. ನನ್ನ ತಾಳ್ಮೆಗೆ ಮನಸೋತ ಬಾನಿಂದ ಕಣ್ಣೀರ ಸಿಂಚನ. . . ! ಮತ್ತದೇ ಹಳೆಯ ನೆನಪುಗಳು ಒಂದೋದಾಗಿ ನೆನಪಾಗತೊಡಗಿದವು.
ಅಂದು ಯಾವುದೋ ಕೆಲಸದ ತರಾತುರಿಯಲ್ಲಿ ಹೋಗುತ್ತಿದ್ದ ನನಗೆ ನಾಲ್ಕಾರು ಹುಡುಗಿಯರ ಮದ್ಯೆ ನಗುತ್ತಾ ನಿಂತಿದ್ದ ನೀನು ಕಾಣಿಸಿದೆ. ಭೇಟಿ ಆಕಸ್ಮಿಕವಾದರೂ ಸಂಬಂಧ ಶಾಶ್ವತ ಅಲ್ಲವೇ?ಕ್ಷಣಕಾಲ ನಾ ಕಲ್ಲಾದೆ. ಮೊದಲ ನೋಟಕೆ ಮರುಳಾಗುವುದು ಎಂದರೆ ಇದೆ ಇರಬೇಕು. ನನ್ನ ನಿನ್ನ ಸಂಬಂಧ ಬಹಳ ವರ್ಷಗಳದ್ದು ಅನಿಸಿದ್ದು ಸತ್ಯ. ನೀನು ನನಗೆ ಸೇರಬೇಕಾದಳು ಎನ್ನುವ ಆತ್ಮವಿಶ್ವಾಸದ ನುಡಿ. ಪ್ರಿತಿಯಲ್ಲಿ ಮಾತ್ರ ಇಷ್ಟಪಟ್ಟ ವಸ್ತುವನ್ನು ನನ್ನದು ಅಂತ ಹೇಳೋಕೆ ಸಾಧ್ಯ. ನೀನೇನೋ ಮನೆಗೆ ಹೋದೆ. ನಾನು ಮತ್ತೆ ಮನೆಗೆ ಬರಲೇ ಇಲ್ಲ. ನನ್ನ ಮನಸ್ಸು ನಿನ್ನ ಹಿಂದೆಯೇ ಬಂದಿತ್ತು.
ಒಂದು ರಾತ್ರಿ ಕಳೆಯುವುದು ಒಂದು ವರ್ಷ ಕಳೆದಂತೆ ಆಯಿತು. ಹೀಗೆ ಆಗುತ್ತಿರುವುದು ಮೊದಲ ಅನುಭವವಾದರೂ ಏನೋ ಹೇಳಲಾಗದ ಸಂತೋಷ. ಸೂರ್‍ಯ ಎದ್ದನೋ ಇಲ್ಲವೋ ಗೊತ್ತಿಲ್ಲ. ನಾನು ಮಾತ್ರ ಎದ್ದು ಯುದ್ದಕ್ಕೆ ಹೋಗುವ ಹಾಗೆ ಸಿದ್ದನಾದೆ. ನೀ ಬರುವ ದಾರಿಯಲ್ಲಿ ಕಾದು ಕುಳಿತೆ. ಕಾದೆ. . . . . ಕಾದೆ. . . . ನೀ ಬರಲಿಲ್ಲಿ. ನೀ ಬಂದೇ ಬರುತ್ತೀಯ ಎನ್ನುವ ನಂಬಿಕೆ ಹೆಚ್ಚಾಗತೊಡಗಿತು. ಪ್ರೀತಿ ಎಂದರೆ ನಂಬಿಕೆ ಅನ್ನುತ್ತಾರೆ. ಪ್ರೀತಿ ಜೋತೆಯಲ್ಲಿ ನಂಬಿಕೆ ಕೂಡ ಬಲಾವಾಗುತ್ತದೆ. ಎಂಥ ವಿಪರ್ಯಾಸ ನಿನ್ನ ಒಂದು ನೋಟಕ್ಕೆ ಗಂಟೆಗಟ್ಟಲೆ ಕಾಯುತ್ತಾ ಕುಳಿತುಕೊಳ್ಳುವುದು ಪ್ರೀತಿಯಲ್ಲಿ ಮಾತ್ರ ಸಾಧ್ಯ. ಆ ತಾಳ್ಮೆ ಇರೋದು ಪ್ರೀತಿಗೆ ಮಾತ್ರ. ಕೋನೆಗೂ ನನ್ನ ಪ್ರಾರ್ಥನೆ ನಿನಗೆ ಕೆಳಿಸಿತೇನೋ ನೀನು ಬಂದೆ. ನನ್ನ ಕಡೆ ತಿರುಗಿಯು ನೋಡಲಿಲ್ಲ. ಪಾಪ! ನಿನಗೇನು ಗೊತ್ತು ನಿನ್ನನ್ನು ಪ್ರೀತಿಸುವ ಜೀವ ಇಲ್ಲಿದೆ ಎಂದು.
ಪ್ರತಿದಿನ ನೀ ಬರುವ ದಾರಿಯನ್ನು ಕಾಯುವುದೇ ನನ್ನ ಕೆಲಸವಾಯಿತು. ನೀ ಮಾತ್ರ ಒಮ್ಮೆಯೂ ನನ್ನ ಕಡೆ ತಿರುಗಿ ನೋಡಲಿಲ್ಲ. ದಿನ ಕಳೆದಂತೆ ನನಗೆ ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೆ ನಿನ್ನಲ್ಲಿ ನಾನು ಮರೆಯಾಗತೊಡಗಿದೆ. ಯಾರಿಗೂ ತಿಳಿಯದ ಹಾಗೆ ಬರುವ ಕಲೆ ಪ್ರೀತಿಗೆ ಮಾತ್ರ ಗೊತ್ತಿರೋದು. . . ! ನೀನು ನನ್ನನ್ನು ನೋಡಿಯೂ ನೋಡದ ಹಾಗೇ ಹೋಗುವಾಗ ಮನಸ್ಸಿಗೆ ಸಣ್ಣ ನೋವು. ಆದರೂ ನೀನು ಇಂದಲ್ಲ ನಾಳೆ ನನ್ನನ್ನು ನೋಡುತ್ತಿಯ ಅನ್ನೋ ಸಮಾಧಾನವನ್ನು ನನಗೆ ನಾನೆ ಮಾಡಿಕೊಳ್ಳುತ್ತಿದ್ದೆ.
ದಿನಗಳು ಉರುಳಿದಂತೆ ನೀನು ನನ್ನನ್ನು ಗಮನಿಸತೊಡಗಿದೆ. ಅದೊಂದು ದಿನ ನೀನು ತಿರುಗಿ ನೋಡತ್ತೀಯ ಅನ್ನೋ ನಂಬಿಕೆಯಿಂದ ಕಾದು ಕುಳಿತೆ. ನೀ ಬಂದೆ ನನ್ನ ನೋಡದೆ ಮುನ್ನಡೆದಾಗ ಆಕಾಶವೇ ಕಳಚಿ ಬಿದ್ದ ಅನುಭವ. ಕ್ಷಣಕಾಲ ತಲೆ ತಗ್ಗಿಸಿ ನಿಂತೆ, ಮುಂದೆ ಹೋಗುತ್ತಿದ್ದ ನೀನು ಒಮ್ಮೆ ನನ್ನ ಕಡೆ ತಿರುಗಿ ನೋಡಿದೆ. ಆ ಕ್ಷಣ ನಾ ಬದುಕ್ಕಿದ್ದೆ ಹೆಚ್ಚು, ಸ್ವರ್ಗ ಸಿಕ್ಕ ಅನುಭವ. ದಿನ ಕಳೆದಂತೆ ನಮ್ಮಿಬ್ಬರ ಕಂಗಳು ಒಂದಾದವು, ಅದೊಂದು ದಿನ ನಾನೇ ಧೈರ್‍ಯ ಮಾಡಿ ನಾ ನಿನ್ನ ತುಂಬಾ ಪ್ರೀತಿಸುತ್ತೀನಿ ಅಂದೇ ನೀನು ಸಂತೋಷವಾಗಿ ಒಪ್ಪಿಕೊಂಡೆ. ಅಂದಿನಿಂದ ಶುರುವಾಯಿತು ನಮ್ಮಿಬ್ಬರ ಪ್ರೀತಿ.
ಮುಂದೆ ನಾವೀಬ್ಬರು ಸೇರಿ ಪ್ರಪಂಚದ ಎಲ್ಲಾ ಸಂತೋಷವನ್ನು ಅನುಭವಿಸಿದೆವು. ದಿನ ಹೇಗೆ ಕಳೆಯಿತೊ, ವರ್ಷ ಹೇಗೋ ಹೋಯಿತೋ, ತಿಳಿಯದಾಯಿತು. ನಾವೀಬ್ಬರು ಒಟ್ಟಿಗೆ ಸೇರಿ ಆಡಿದ ಮಾತುಗಳು ಎಷ್ಟೋ, ಮಾಡಿದ ಆಣೆಗಳೆಷ್ಟೋ, ನಾವು ಹೀಗೆ ಬಾಳಬೇಕು ಹೀಗೆ ಇರಬೇಕು ಎಂದು ಕಂಡ ಕನಸುಗಳೆಷ್ಟೂ, ಇದೇ ಜಾಗದಲ್ಲಿ ನಾನು ನಿನಗೆ ಕಾಯುತ್ತಾ ಕುಳಿತ್ತಿದ್ದೆ. ಅಂದು ನನ್ನ ಜೀವನದ ಮಹತ್ವದ ದಿನ ನಾನು ನಿನ್ನಿಂದ ಮರೆಯಲಾಗದ ಮುತ್ತನ್ನು ಪಡೆದ ದಿನ. ಈ ಇಳಿ ಸಂಜೆ ಹೊತ್ತಲ್ಲಿ ನಾವೀಬ್ಬರು ಒಟ್ಟಗೆ ಕುಳಿತು ಪರಸ್ಪರ ಎಂದೂ ದೂರಾಗಬಾರದು ಎಂದು ಒಬ್ಬರ ಮೇಲೆ ಒಬ್ಬರು ಆಣೆ ಮಾಡಿದ ದಿನ.
ಇಂದಿಗೆ ಸುಮಾರು ಒಂದು ತಿಂಗಳು ಕಳೆದಿದೆ. ದಿನ ಪ್ರತಿ ನಾವಿಬ್ಬರು ಸೇರುತ್ತಿದ್ದ ಜಾಗದಲ್ಲಿ ನಿನಗಾಗಿ ಕಾಯುತ್ತಾ ಕುಳಿತ್ತಿದ್ದೇನೆ. ಸಂಜೆ ಸೂರ್‍ಯ ನನ್ನ ನೋವನ್ನು ನೋಡಲಾರದೇ ಮರೆಯಾಗುತ್ತಿದ್ದಾನೆ. ಆದರೇ ನೀನು ಮಾತ್ರ ಬರುತ್ತಿಲ್ಲ. ಅಂದು ನನ್ನೊಂದಿಗೆ ದೂರವಾಗೊಲ್ಲ ಅಂತ ಮಾತು ಕೊಟ್ಟು ಹೋದವಳು ಇದುವರೆಗೂ ಯಾಕೆ ಬರಲಿಲ್ಲ. ಅಂದು ಕಾಯುವುದರಲ್ಲಿ ಇದ್ದ ಸುಖ ಇಂದು ನನಗೆ ಕಾಣುತ್ತಿಲ್ಲ. ನಾನು ಮಾಡಿದ ತಪ್ಪಾದರೂ ಏನು? ನೀನು ಕುಳಿತ ಜಾಗವನ್ನು ಸ್ಪರ್ಶಿಸಿದಾಗ ಮನಸ್ಸಿಗೆ ಏನೋ ಖುಷಿ. ನೀ ಬರುವ ದಾರಿಯನ್ನು ದಿಟ್ಟಿಸಿದಾಗ ಮತ್ತದೆ ನೋವು. ಅದೇ ಜಾಗಲ್ಲಿ ಮುಳುಗುವ ಸಂಜೆ ಸೂರ್‍ಯನನ್ನು ನೋಡಿದಾಗ ನನಗೆ ಕಾಡುವ ಪ್ರಶ್ನೆಯೊಂದೆ ಈ ಸಂಜೆ ಯಾಕಾಗಿದೆ ನೀನೀಲ್ಲದೇ. . . . . . . ?
******
ಪ್ರೇಮಿಯ ಭಾವನೆಗಳನ್ನು ಚೆನ್ನಾಗಿ ಬರೆದಿದ್ದೀರಿ. ಆದರೆ ಈ ಲೇಖನ ಮನಸ್ಸಿನಲ್ಲಿ ಬಹುಕಾಲ ನಿಲ್ಲುವುದಿಲ್ಲ. ಯಾಕೆಂದರೆ ಈ ಕಥೆಯಲ್ಲಿ ಹೊಸತು ಏನೂ ಇಲ್ಲ. ಕಥೆಯ ಕೊನೆಯಲ್ಲಿನ ನೋವು ಇನ್ನೂ ಚೆನ್ನಾಗಿ ಬರೆಯಬಹುದಿತ್ತು. ಈ ಮೊದಲೇ ಹೇಳಿದ ಹಾಗೆ, ಪ್ರೇಮಿಯ ಭಾವನೆಗಳನ್ನು, ಮೊದಲ ಭಾಗದಲ್ಲಿ ಚೆನ್ನಾಗಿ ನಿರೂಪಿಸಿದ್ದೀರಿ. ಇನ್ನೂ ಬರೆಯಿರಿ. ಆವಾಗ ಬರವಣಿಗೆ ಪಕ್ವವಾಗುವುದು. ನಿಮಗೆ ಶುಭವಾಗಲಿ. ನಿಮ್ಮ ಇನ್ನೂ ಹೊಸ ಲೇಖನಗಳ ನಿರೀಕ್ಷೆಯಲ್ಲಿ ಇರುವೆ.ಪ್