ನೀ ಮುಗಿಲಾಗು
ನಾ ಕಡಲಾಗುವೆ
ಜೊತೆ ಇರದಿದ್ದರೇನಂತೆ
ರೆಪ್ಪೆ ತೆರೆದರೆ ನನಗೆ ನೀನು,
ನಿನಗೆ ನಾನು..
ಎಲ್ಲಿರುವೆ? ಹೇಗಿರುವೆ? ಎಲ್ಲೋ ಸಾಗಬೇಕಿದ್ದ ಈ ನನ್ನ ಬದುಕನ್ನು ಇನ್ನೆಲ್ಲಿಗೆ ತಂದು ನಿಲ್ಲಿಸಿರುವೆ. ಎಲ್ಲಿಗೆ? ಯಾತಕೆ? ಏನೂ ಕೇಳದೆ ಕಣ್ಮುಚ್ಚಿ ನಿನ್ನ ಹಿಂಬಾಲಿಸಿ ಬಂದೆ ಕಣ್ತೆರೆದು ನೋಡಿದಾಗ ಕವಲು ದಾರಿಯಲ್ಲಿ ನಾ ಒಂಟಿ ಪಯಣಿಗ. ನೀನು ಇನ್ನಾರದೋ ಬದುಕಿನ ಸಾರಥ್ಯವ ಹಿಡಿದಿರುವೆಯ? ಆದರೆ ನನ್ನ ಪರಿಸ್ಥಿತಿ ಗೂಡನ್ನು ತಪ್ಪಿಸಿಕೊಂಡ ಜೇನು ಹುಳುವಿನಂತೆ ಎತ್ತ ಸಾಗಿದರು ಅದು ನನ್ನದಲ್ಲದ ದಾರಿ. ನನ್ನ ಜೀವನ ನೀರಿನೊಳಗೆ ವೀಣೆ ಮೀಟಿದಂತಾಗಿದೆ, ನಾದವಿಲ್ಲ, ರಾಗವಿಲ್ಲ, ಭಾವವಿಲ್ಲ. ನೀ ಬಾಳಿಗೆ ಬಂದದ್ದಾದರು ಏನಕೆ? ಶಾಪಗ್ರಸ್ತ ಗಿಳಿಯಂತಾಗಿದೆ ಮನವು. ಸುಂದರವಾಗಿ ನನ್ನ ಬಾಳ ಕಾನನದಲ್ಲಿ ಒಂಟಿಯಾಗಿ ಸುಖವಾಗಿ ಹಾರಾಡುತ್ತ ಇದ್ದ ಆ ನನ್ನ ಮನವು ಇನ್ನೆಲ್ಲಿದೆ. ಆಗಲು ಒಂಟಿ, ಈಗಲು ಒಂಟಿ ಆದರೆ ಆಗ-ಈಗಿನ ನಡುವಲ್ಲಿ ಏನಾಯಿತು, ಯಾಕಾಯಿತು. ಆಗ ನಾನಾಗಿಯೇ ಇಷ್ಟಪಟ್ಟ ಒಂಟಿತನ ಯಾರ ಹಂಗಿಲ್ಲದೆ, ಗುಂಗಿಲ್ಲದೆ ಎಷ್ಟು ಅರ್ಥಪೂರ್ಣವಾಗಿತ್ತು. ನನ್ನ ಮನದ ತೋಟದಲ್ಲಿ ಮೈ ನೆರೆದ ಹೂಗಳಿಗೆ ನಾನೆ ದುಂಬಿ. ಆದರೆ ಈಗ ನೀನಿಲ್ಲದ ಹೂ ತೋಟ ನಿಶ್ಪಲ-ನಿಶ್ಚಲ. ಎಲ್ಲೋ ಸುಖವಾಗಿ ಹಾರುತ್ತಿದ್ದ ಈ ಮನವೆಂಬ ದುಂಬಿಯ ಕರೆದೊಯ್ದು ಯಾವುದೋ ಸಾಗರದ ನಡುವಿನಲ್ಲಿ ತಂದು ಇರಿಸಿ ಜೊತೆ ಮುರಿದೆ. ಎತ್ತ ಸಾಗಲಿ ಗೆಳತಿ? ಎತ್ತ ನೋಡಿದರು ತೀರ ಕಾಣದ ಸಾಗರ. ಈ ಒಂಟಿತನದ ಹಸಿವಲಿ, ಈ ಅಳುವಿನ ದಣಿವಲಿ ಎಷ್ಟು ದಿನ ಹಾರಬಲ್ಲೆ? ಈಜಬಲ್ಲೆ? ತೀರ ಕಾಣುವ ಮೊದಲೇ ಮುಳುಗಿ ಹೋಗುವೆನೆ?
ನೀ ಕಡಲಾಗು
ನಾ ದಡವಾಗುವೆ
ಜೊತೆ ಇರದಿದ್ದರೇನಂತೆ
ಗಳಿಗೆಗೊಮ್ಮೆ ಬಂದು ತಬ್ಬಿ
ಮುತ್ತಿಕ್ಕಿ ಹೋಗುವೆಯಲ್ಲ
ಅಷ್ಟು ಸಾಕು..
ಏನೇನೊ ಭಾವನೆ ಆದರೆ ಯಾವುದನ್ನು ನಾನು ಹೇಳಿಕೊಳ್ಳಲೇ ಇಲ್ಲ. ಬೇಡವೆಂದರು ಈ ನನ್ನ ಕಣ್ಗಳು ನಿನ್ನ ಕಂಡೊಡನೆ ನಿನ್ನನ್ನೇ ಹಿಂಬಾಲಿಸುತ್ತದೆ. ಜಾತ್ರೆಯ ತೇರಿನ ಎದುರು ನಿಂತು ದೇವರಿಗೆ ಕೈ ಮುಗಿದು ನಿಂತಾಗಲು ಈ ಮುಗ್ದ ಕಣ್ಣುಗಳು ನಿನ್ನನ್ನೇ ಹುಡುಕುತ್ತೆ. ನೀ ಕಂಡರೆ ಈ ಕಣ್ಣುಗಳಿಗೆ ತೃಪ್ತಿ. ಆದರೆ ಈ ಮನಸ್ಸು ನೂರಾರು ನಿನಗಾಗಿಯೇ ಇರಿಸಿದ ಮಾತುಗಳನ್ನು ಹೇಳಲಾಗದೆ ಕಣ್ಣೀರಿಡುತ್ತದೆ. ನನ್ನ ಮನವು ನಿನ್ನ ಕಂಡಾಗ ಅದರ ಪರಿಸ್ಥಿತಿ ಹೇಗಿರುತ್ತೆ ಗೊತ್ತಾ? ಯಾವುದೋ ಅಪರಿಚಿತ ವ್ಯಕ್ತಿ ಮಗುವನ್ನು ಎತ್ತಿಕೊಂಡಾಗ ಆ ಮಗು ತನ್ನ ತಾಯಿಯೆಡೆಗೆ ಎರಡು ಕೈ ಚಾಚಿ ಅಂಗಲಾಚುತ್ತ ದೊಂಬಾಲು ಬಿದ್ದು ಅಳುತ್ತದಲ್ಲ ಹಾಗೆ ಈ ಮನ ನನ್ನ ಬಳಿ ಇರಲು ಒಪ್ಪುವುದೇ ಇಲ್ಲ ಆದರೆ ನಿನ್ನ ಕಾಣದಿದ್ದರೂ ಈ ಮನವು ನಿರಾಳವಾಗದು ಅರ್ದ ನಿದ್ರೆಯಿಂದ ಎದ್ದ ಮಗುವು ತಾಯಿಯನ್ನು ಹುಡುಕಿದಂತೆ.
ಕಾಣದೆ ಹೋದರೆ
ನೀನು ಅರೆಗಳಿಗೆ
ಮರುಳಾಗಿಯೇ ಹೋಗುವೆ
ನಾನು ಮರುಗಳಿಗೆ…
ಆದರೂ ಒಂದು ರೀತಿಯ ಭಯ ಎಲ್ಲಾದರೂ,ಹೇಗಾದರೂ ಈ ಕಣ್ಣಿನ ಭಾವನೆ ನಿನಗೆ ತಿಳಿದು ತಿರಸ್ಕೃತ ನೋಟದಿಂದ ನೀ ನೋಡಿದರೆ ಎಂದು. ಬಹುಶಃ ಆ ಕ್ಷಣವೇ ಈ ಮನವು ಅಸುನೀಗಿರುತ್ತದೆ. ಆ ಕ್ಷಣ ನನ್ನ ನಿರೀಕ್ಷೆ, ಬಯಕೆ, ಚಡಪಡಿಕೆ, ಆಸೆ, ಕನಸು, ಪ್ರೀತಿ ಎಲ್ಲವೂ ಇನ್ನಿಲ್ಲವಾದರೆ ಅದರ ಜೊತೆಗೆ ನಾನು ಕೂಡ ಇನ್ನಿಲ್ಲ.
ಚಿರವಿರಹಿ ಆಕಾಶದಂತೆ, ನಿಸ್ಸಹಾಯಕ ಸಾಗರದಂತೆ, ಭಗ್ನ ಪ್ರೇಮಿ ಈ ಧರೆಯಂತೆ ನಾ ಮೌನವಾಗಿ ಏನನ್ನೂ ಹೇಳದೆ ಇರುವುದೆ ಒಳ್ಳೆಯದಲ್ಲವೆ ಗೆಳತಿ.
ಮುಂಜಾವು ಮೂಡಿದಂತೆ, ಸಾಯಂಕಾಲ ಸತ್ತಂತೆ, ಮೊದಲ ಪುಟವೇ ಕೊನೆಯಾದಂತೆ, ಆರಂಭವೇ ವಿದಾಯವಾದಂತೆ ನನ್ನೊಳಗೆ ಹರಿದ ಗುಪ್ತಗಾಮಿನಿ ನೀನು…
ಹೆಸರಿಡದ ಬಂಧವಿದು
ಉಸಿರಾಗಿದೆ,
ಉಸಿರಾಡುವ ಮುನ್ನ
ಅಸುನೀಗಿದೆ..
ಅಪರಾತ್ರಿಯಲ್ಲಿ ಬಡಿದ ಸಿಡಿಲಿಗೆ ಎದ್ದು ಕುಳಿತಾಗ ನೆನಪಾಗಿದ್ದು ಸಿಡಿಲಲ್ಲ, ನೀನು. ಮೊದಲ ಮಳೆ ಭೂಮಿ ತಾಕಿದಾಗ ಅದರ ಕಂಪಲ್ಲಿ ನೆನಪಾಗಿದ್ದು ನೀನೆ, ಮುಸ್ಸಂಜೆ ಸಂಪಿಗೆ ಕಂಪಲ್ಲು ನೆನಪಾಗಿದ್ದು ನೀನೆ, ದಾರಿಯಲ್ಲಿ ಸಾಗುವಾಗ ರಸ್ತೆ ಬದಿ ನಿಂತ ಮಗುವಿನ ನಗು ಕಂಡಾಗ ನೆನಪಾಗಿದ್ದು ನೀನೆ, ಕಿಟಕಿಯೊಳಗೆ ಬೀಸಿಬಂದ ಗಾಳಿ ಮೈ ಸೋಕಿದಾಗ ನೆನಪಾಗಿದ್ದು ನೀನೆ, ಮುಂಜಾನೆ ಎದ್ದು ದೇವರ ಮುಖ ನೋಡುವಾಗ ನೆನಪಾಗಿದ್ದು ನೀನೆ, ಹೀಗೆ ಪ್ರತಿ ಕ್ಷಣದಲ್ಲೂ ಎಲ್ಲವು ನೀನೆ, ಎಲ್ಲೆಲ್ಲೂ ನೀನೆ…
ಒಮ್ಮೆ ಪ್ರೇಮದ ಕೈ ಚಾಚು ಗೆಳತಿ. ಈ ಮನದ ಜಗದಲ್ಲಿರುವ ಒಲವೆಲ್ಲ ನಿನ್ನದೆ. ನನ್ನ ಅಭಿಸಾರಕೆ ಅಧಿನಾಯಕಿ ನೀನೆ. ಆದರೆ ಮೊದಲ ಹೆಜ್ಜೆ ನಿನ್ನಿಂದ ಆರಂಭವಾಗಲಿ ಗೆಳತಿ. ಕೊನೆವರೆಗು ಹೆಜ್ಜೆಹೆಜ್ಜೆಗೂ ಕಾವಲಾಗಿ ಜೊತೆಯಾಗಿ ನಾನಿರುವೆ..
ನಿನ್ನ ಕಣ್ಣಲ್ಲಿ ನನ್ನ ಕಂಡೊಡನೆ
ಬದಲಾಗಿಯೇ ಹೋಯಿತು ಜೀವನವೇ,
ಕನಸಲು ನೀನು ಬಂದೊಡನೆ
ಬಲವಾಗಿಯೇ ಹೋಯಿತು ನನ್ನೊಲವೇ.
ನನ್ನ ಬದುಕನು
ನಿನಗೆ ಮುಡಿಸಲು,
ಆದೆ ನೀನು ಈ
ಜೀವಕೆ ಜೀವ.
ನನ್ನ ಉಸಿರನು
ನಿನಗೆ ಅರ್ಪಿಸಲು,
ಆದೆ ನೀನು ಈ
ಜೀವದ ಜೀವ….
ಇಂತಿ ನಿನ್ನವನು
ಅಜಿತ್ ಭಟ್