ಈ ಬಾಳ ಪುಟಗಳಲ್ಲಿ ಭಾಮಿನಿ: ಉಮೇಶ್ ದೇಸಾಯಿ

ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆ ಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯ ಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನ ಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪ ಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆ ಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜು ಸ್ವಲ್ಪ ಅತಿ ಅನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದಾಗಲೇ ಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು. ಪಡಸಾಲೆಯಲ್ಲಿ ಕುಳಿತ ಅವನ ಮುಂದೆ ಹಾದೇ ಅಡಿಗೆ ಮನೆಗೆ ಹೋಗಬೇಕು. ನನ್ನ ನೋಡಿದವನೋ ಇಲ್ಲವೋ ಗೊತ್ತಾಗಲಿಲ್ಲ. ಹರಟೆ ಜೋರಾಗಿತ್ತು. ಗಮನಿಸಿರಲಿಕ್ಕಿಲ್ಲ ಅಂದುಕೊಂಡೆ. ಅವನನ್ನು ಇಷ್ಟು ವರ್ಷದ ನಂತರ ನೋಡುತ್ತಿರುವುದಕ್ಕೋ ಏನೋ ಗೊತ್ತಿಲ್ಲ ಹಾಕೋ ಎದೆಯಲ್ಲಿ ಅಳುಕು. ಒಂಥರಾ ಅಧೈರ್ಯದ ಭಾನೆ ತಪ್ಪು ಮಾಡಿರುವ ಹಾಗೆ… ಅವನ ಊಟ ಮುಗಿಯುವವರೆಗೂ ಕಣ್ಣು ತಪ್ಪಿಸಿಯೇ ಇದ್ದೆ. ಮೇಲಿನ ಪಡಸಾಲೆಯಲ್ಲಿ ಗಂಡಸರೆಲ್ಲ ಅಡ್ಡಾಗಿದ್ದರು. ಹೆಂಗಸರು ಹರಟೆಯಲ್ಲಿ ಮಗ್ನರಾಗಿದ್ದರು. ಮಗಳು ಮಾವಿನಕಾಯಿ ಸಲುವಾಗಿ ಪೀಡಿಸುತ್ತಿದ್ದಳು. ಅದೇ ಗಿಡ… ಗಿಡದ ತುಂಬ ತೊನೆಯುವ ಹಸಿರು, ಕಾಯಿಗಳು. ಎಷ್ಟೊಂದು ನೆನಪು ಈ ಗಿಡದ ಸುತ್ತ ಸುತ್ತಿಕೊಂಡಿವೆ ಅಲ್ಲ… !

ಭಾಮಿನಿ ಹೆಂಗಿದ್ದೀ… ಕಾಯಿಗೆ ಕಲ್ಲು ಬೀಸುತ್ತಿದ್ದವಳು ದನಿ ಬಂದ ಕಡೆ ತಿರುಗಿದೆ. ಅವ ನಿಂತಿದ್ದ ಅದೇ ಮುಗುಳು ನಗೆ ನಗುತ್ತ.

ಹುಂ ಆರಾಮ… ಏನು ಒಬ್ಬನ ಬಂದಿ… ಮನಿಯವ್ರು ಬರಲಿಲ್ಲ… ಅರಿವಿಲ್ಲದೇ ನನ್ನ ದನಿಯಲ್ಲಿ ವ್ಯಂಗ್ಯ ಇಣುಕಿತ್ತು.

ನಮ್ಮ ಬಾಯಿ ಸಾಹೇಬರಿಗೆ ಇಲ್ಲಿ ಆಗಿ ಬರಲಿಕ್ಕಿಲ್ಲ ಅಂತ ತಿಳೀತು. ನಾನೂ ಒಬ್ಬಾವನ ಬರೂದು ಅಂತ ಠರಾವಾಗಿತ್ತು. ಮಗನಿಗೂ ಇಲ್ಲಿ ಯಾರೂ ಪರಿಚಯವಿಲ್ಲ. ಹಿಂಗಾಗಿ ನಾ ಒಬ್ಬಾವ್ನ ಬಂದೆ…

ನನ್ನ ಮಗಳ ಹಟದ ಕಡೆ ಗಮನ ಹರಿಸಿ ಕಾಯಿಗಳ ಕಡೆ ಗುರಿ ಇಟ್ಟು ಕಲ್ಲು ಬೀಸಿದೆ ಒಂದು ಕಾಯಿ ಬಿದ್ದಾಗ ಮಗಳು ಚಪ್ಪಾಳೆ ಹೊಡೆದು ಸಂಭ್ರಮಿಸಿದಳು.

ನಿಂಗ ನೆನಪದೇನು… ನಾ ಗಿಡಾ ಹತ್ತಿ ಕಾಯಿ ಹರದ ಕೊಡತಿದ್ದೆ. ನೀನು, ಗೋಪಾಲ, ಶಶಿ, ನಂದಿ ಎಲ್ಲಾ ನನಗ ಕೊಡು ನನಗ ಕೊಡು ಅಂತ ಬೇಡತಿದ್ರಿ. ನಿನ್ನ ಸಲುವಾಗಿ ಸ್ಪೆಶಲ್ ಅಂತ ಯಾವಾಗಲೂ ನಾ ಒಂದು ಕಾಯಿ ಎಲ್ಲರ ಕಣ್ತಪ್ಪಿಸಿ ಕೊಡತಿದ್ದೆ…

ಬೇಕಂತಲೇ ಸುಮ್ಮನಾದೆ. ಇದು ಅವನ ಗಮನಕ್ಕೆ ಬಂದಿತೋ ಏನೋ ಗೊತ್ತಿಲ್ಲ. ಅವನಿಂದ ತಪ್ಪಿಸಿಕೊಳ್ಳುವ ಹಂಬಲ ಮಗಳನ್ನು ಕರಕೊಂಡು ಒಳಗೆ ನಡೆದೆ.

ಇಕಿ ನಂ ಟೂ ಏನು… ಮಗ ಬರಲಿಲ್ಲ… ? ಅವ ಬಿಡಲೊಲ್ಲ ಮಗಳಿಗೆ ಚಾಕಲೇಟು ತಗದುಕೊಟ್ಟ. ಅದು ಸಿಕ್ಕ ಸಂತೋಷದಲ್ಲಿ ಅವಳು ಕಾಯಿ ಮರೆತು ಓಡಿ ಹೋದಳು. ಸುಡುವ ಬಿಸಿಲು… ಎದುರಿಗೆ ನಿಂತ ಅವನು ಸುತ್ತಲೂ ಚೆಲ್ಲಿಕೊಂಡ ನೆನಪುಗಳು ನನ್ನ ಬಗ್ಗೆ ಎಲ್ಲಾ ತಿಳಕೊಂಡಿದ್ದಾನೆ. ವಾಸು ಮಾಮಾನ ಜೊತೆ ಸಂಪರ್ಕ ಇಟ್ಟುಕೊಂಡವ… ಎಲ್ಲಾ ಅವನಿಂದಲೇ ತಿಳಕೊಂಡಿರಬಹುದು.

ನೀ ನನಗ ಎಂದೂ ಕ್ಷಮಾ ಮಾಡಲಾರೆ ಅಂತ ಗೊತ್ತು ಭಾಮಿನಿ… ಬಹುಷಃ ತಪ್ಪಾತು ಅಂತ ಕೇಳುವ ಯೋಗ್ಯತಾನೂ ನಾ ಕಳಕೊಂಡೇನಿ ಅನಸ್ತದ… ಅವನ ದನಿಯಲ್ಲಿ ಪ್ರಾಮಾಣಿಕತೆ ಇತ್ತು. ಆದರೂ ನಾ ಬಗ್ಗಬಾರದು.

ಇರಲಿ ಬಿಡು. ಈಗೊಂದು ವಾರ ಆತು. ಕನಸನ್ಯಾಗ ಅತ್ಯಾ ಬರಲಿಕ್ಕ ಹತ್ಯಾಳ. ಮೊದಲ ಹೆಂಗ ಇದ್ಲು ಹಂಗ… ಏನೂ ಬದಲಾಗೇ ಇಲ್ಲ. ಸುಮ್ಮನೆ ನಿಂದರತಾಳ ಏನೂ ಮಾತಾಡೂದಿಲ್ಲ ವಿಚಿತ್ರ ಅನಸ್ತದ ನನಗ. ನಾ ಎಷ್ಟು ಅನ್ಯಾಯ ಮಾಡೇನಿ ಆದ್ರ ಅಕಿ ಏನೂ ಹೇಳೂದಿಲ್ಲ. ಸುಮ್ಮನ ನಿಂತಿರತಾಳ…

ಹೋಗಲಿ ಬಿಡು ರಾಜಾ ಹಳೆ ಸುದ್ದಿ ಎಲ್ಲಾ ಯಾಕ ಈಗ. ನಶೀಬದಾಗ ಏನಿರತದನೋ ಅದ ಆಗೂದು… ಒಳದನಿ ಕುದಿಯುತ್ತಿತ್ತು. ನಂಬಿಕೆಗಳಿಗೆ, ವಿಶ್ವಾಸಕ್ಕೆ ಅಂತಃಕರಣಕ್ಕೆ ಕೊಳ್ಳಿ ಇಟ್ಟು ಹೋದವ ಮತ್ತೆ ಹೀಗೆ ಎದರಿರಾಗಿದ್ದಾನೆ. ನಾಟಕ ಮಾಡುತ್ತಿದ್ದಾನೆ…

ಇಲ್ಲ ಭಾಮಿನಿ. ಈ ಅವಕಾಶ ಮತ್ತ ಸಿಗಲಾರದು ನಾನೂ ನೊಂದೇನಿ… ತಪ್ಪು ಅರಿವಾಗೇದ…’

ರಾಜಾ  ಹೇಳುತ್ತಲೇ ಇದ್ದ. ನಾ ಏನೂ ಪ್ರತಿಕ್ರಿಯೆ ನೀಡಬಾರದು ಎಂದುಕೊಂಡೆ. ಅವನ ಸಮ್ಮುಖದಿಂದ ಬಿಡುಗಡೆ ಆದರೆ ಸಾಕು ಅಂದುಕೊಂಡೆ. ಸರಿಯಾಗಿ ಚಹಾಕ್ಕೆ ಬರುವಂತೆ ಮಾಮಿ ಕರೆದಾಗ ನಿರಾಳವಾಗಿ ಎದ್ದೆ.


ರಾಜಾ-ಭಾಮಿನಿ ಹಿಂಗ ನಮ್ಮಿಬ್ಬರ ಹೆಸರು ತಳಕು ಹಾಕಿಕೊಂಡಿದ್ದವು. ಅವ್ವಳಿಗೆ ಅವ ಅಣ್ಣನ ಮಗ, ಅಪ್ಪನಿಗೆ ಅವ ಅಳಿಯ ಆಗುವವ. ಅಪ್ಪ ಅವ್ವಗ ಅವನ ಮ್ಯಾಲ ಪ್ರೀತಿ ನನಕಿಂತ ಒಂದು ತೂಕ ಹೆಚ್ಚಿಗೇನ ಇತ್ತು. ಇದ್ಗು ನನಗ ಯಾವಾಗಲೂ ಅನಸತಿತ್ತು. ರಾಜಾಗೂ ನನ್ನ ಸಂಗ ಬೇಕಾಗಿತ್ತು. ಅಜ್ಜನ ಮನಿಗೆ ಸೂಟಗೆ ಹೋದಾಗ ಅವನೂ ಅಲ್ಲಿ ಬರತಿದ್ದ. ಗಿಡಾ ಹತ್ತಿ ಮಾವಿನಕಾಯಿ, ಪೇರಲಕಾಯಿ ಹರದು ಎಲ್ಲಾರಿಗೂ ಹಂಚತಿದ್ದ. ತನ್ನ ಪ್ಯಾಂಟಿನ ಕಿಸೆದಾಗ ನನಗಂತ ಒಂದೆರಡು ಮುಚ್ಚಟ್ಟು ಕೊಂಡು ಎಲ್ಲಾರ ಕಣ್ಣ ತಪ್ಪಿಸಿ ಕೊಡತಿದ್ದ. ಅವ ಹಂಗ ಕೊಟ್ಟ ಪೇರಲಕಾಯಿ. ಮಾವಿನಕಾಯಿ ಯಾಕೋ ಭಾಳ ರುಚಿ ಅನಸತಿದ್ವು. ಎಲ್ಲಾರೂ ಮಾತಾಡುತಿದ್ರು. ಮುಂದ ನಾವಿಬ್ಬರೂ ಜೋಡಿ ಆಗಾವ್ರು ಅಂತ ನಗೆಚಾಟಿಗಿ, ಚೇಷ್ಟಾಕ್ಕ ಕಮ್ಮಿ ಇರಲಿಲ್ಲ. ರಾಜಾ ಪಿಯುಸಿ ಮುಗಿಸಿ ಇಂಜಿನೀಯರಿಂಗ್ ಓದಲಿಕ್ಕೆ ಹುಬ್ಬಳ್ಳಿಗೆ ಬಂದ. ನಮ್ಮ ಮನಿಯಲ್ಲಿಯ ಮಾಳಿಗೆ ಮೇಲಿನ ರೂಮು ಅವನ ವಾಸಕ್ಕೆ ತಯಾರಾತು. ಸದಾ ವರ್ಗ ಆಗುವ ನೌಕರಿಯ ಗಿರಿ ಮಾಮಾ-ರಾಜಾನ ತಂದೆ-ಹಾಗೂ ಮಾಮಿ ಮಗನನನ್ನು ಹಾಸ್ಟೆಲ್‌ನಲ್ಲಿಡದೆ ನಮ್ಮ ಮನೆಯಲ್ಲಿಟ್ಟರೆ ಮನೆ ಊಟ ಸಿಗುವುದು ಎಂದು ಲೆಕ್ಕ ಹಾಕಿದ್ದರು. ಮೇಲಾಗಿ ಮಾಮಿ ಅಪ್ಪಾಗ ಉದ್ದೇಶಿಸಿ ಮಾತೂ ಆಡಿದ್ರು.

ಭಾವುಜಿ ಈಗ ಅಳಿಯನ್ನ ಸೇವಾ ಮಾಡೂದು ಸುರು ಹಚ್ಕೋರಿ… ಟ್ರೇನಿಂಗ್ ಆದಂಗ ಆಗತದ… ಅವರ ಮಾತು ನನ್ನಲ್ಲಿ ಹೊಸ ಕಂಪನ ತಂದಿದ್ದವು. ನಾ ಈಗ ಮೊದಲಿನ ಹಾಗೆ ಇಲ್ಲ ಈ ವಿಷಯ ಕನ್ನಡಿ ನನಗೆ ಹೇಳಿತ್ತು. ಅದೂ ರಾಜಾನ ಮುಂದ ಅಡ್ಡಾಡುವಾಗ ಅವನ ಕಣ್ಣು ನನ್ನ ಬೆನ್ನ ಹತ್ತೂದು ನನಗೆ ಗೊತ್ತಾಗಿತ್ತು. ಅವ ನನ್ನ ನೋಡಬೇಕು ಅನ್ನುವ ಹಂಬಲ ನನಗೂ ಇತ್ತು. ಮಾಳಿಗಿಮ್ಯಾಲಿನ ರೂಮಿನಲ್ಲಿ ಅವನ ವಾಸ. ಅಪ್ಪ, ಅವ್ವರಿಗೂ ನಾ ಹಗಲೆಲ್ಲ ಅವನ ರೂಮಿಗೆ ಹೋಗುವುದು ತೀರ ವಿರೋಧ ಇರಲಿಲ್ಲ. ಮುಂದಿನ ಅಳಿಯ ಅವನೇ ಎಂಬ ವಿಶ್ವಾಸದಲ್ಲಿ ಅವರಿದ್ದರು. ನಾವು ಬೇರೆ ಕಡೆ ಭೇಟಿಯಾಗುವುದಿತ್ತು. ಉಣಕಲ್ ಕೆರೆದಂಡೆ, ಗಾರ್ಡನ ಹೀಗೆ ಅನೇಕ ವೇಳೆ ಸಿನೇಮಾಗಳಿಗೆ ಒಟ್ಟಿಗೆ ಹೋಗುವುದು… ಕೈ ಹಿಡಿದುಕೊಂಡು ಕೂಡುವುದು. ಇದು ಬರುಬರುತ್ತ ಮುತ್ತುಗಳ ವಿನಿಮಯದವರೆಗೂ ಮುಂದುವರೆಯಿತು. ನಾ ಮಡಿದ ಮಲ್ಲಿಗೆ ಮೂಸುತ್ತ ನನ್ನ ತುಟಿ ಕಚ್ಚುತ್ತ ಅವನನ್ನ ಮೈಮರೆಸುತ್ತಿದ್ದ. ಸುಖ ಎಂಬುದು ಇದೇ ಹಾಗೂ ಇದು ನಿರಂತರ ಎಂಬುದು ನನ್ನ ನಂಬಿಕೆಯಾಗಿತ್ತು.

ಎಲ್ಲ ಸುಖಕರ ಕತೆಗಳಿಗೂ ಒಂದು ತಿರುವು ಬರುತ್ತದೆ. ನನ್ನ ಕತೆಯಲ್ಲಿ ಅದು ಬಂದಿತ್ತು. ಕೊನಯ ವರ್ಷದ ಇಂಜಿನಿಯರಿಂಗ್ ಪರೀಕ್ಷೆ ಮುಗಿಸಿದ ರಾಜಾ ಪುಣೆಗೆ ಹೋದ. ಅವನಿಗೆ ಅಲ್ಲಿಯ ದೊಡ್ಡ ಕಂಪನಿಯಲ್ಲಿ ಸಂದರ್ಶನಕ್ಕೆ ಕರೆ ಬಂದಿತ್ತು. ನೌಕರಿಯೂ ಸಿಕ್ಕಿತು. ಅದೇಕೋ ಅವನಿಂದಾಗಲಿ ಅಥವಾ ಗಿರಿ ಮಾಮಾನಿಂದಾಗಲಿ ಪತ್ರಗಳೇ ಇಲ್ಲವಾದವು. ನಾ ಡಿಗ್ರಿಯ ಕೊನೆ ವರ್ಷದಲ್ಲಿದ್ದೆ. ವಾಸುಮಾಮಾನ್ನ ಜೊತೆ ಮಾಡಿಕೊಂಡು ಅಪ್ಪ ಪುಣೆಗೆ ಹೋದರು. ಹೋದ ಮರುದಿನವೇ ಅಪರಾತ್ರಿ ಬಂದ ಅಪ್ಪ ತೀರ ಇಳಿದು ಹೋದಂತೆ ಕಂಡ. ಬಚ್ಚಲಿಗೆ ಹೋದವನೇ ತಣ್ಣೀರು ಸುರಿದುಕೊಂಡ ಅವನ ಕ್ರಿಯೆ ನನಗೆ ಅವ್ವನಿಗೆ ಗಾಬರಿ ಮೂಡಿಸಿತ್ತು. ಜೊತೆಯಲ್ಲಿ ಬಂದ ವಾಸು ಮಾಮಾ ಅವ್ವಳನ್ನು ಕರೆದುಕೊಂಡು ರೂಮು ಸೇರಿದ. ನನಗೋ ದಿಕ್ಕು ತೋಚದ ಗತಿ. ಅಪ್ಪ ಸಹ ವಾಸುಮಾಮಾ ಹಾಗೂ ಅವ್ವ ಇದ್ದ ರೂಮು ಸೇರಿಕೊಂಡಾಗ ನನಗೆ ಮನದಟ್ಟಾಯಿತು. ಪುಣೆಯಲ್ಲಿ ಏನೋ ಆಗಬಾರದ್ದು ಆಗಿದೆ. ಎಷ್ಟೊ ಸಮಯದ ನಮತರ ನನಗೆ ರೂಮಿಗೆ ಕರೆ ಬಂತು. ಅವ್ವ ನನ್ನ ಕೈ ಹಿಡಿದು ಹತ್ತಿರ ಕೂಡಿಸಿಕೊಂಡಳು. ಅವಳು ನನ್ನಿಂದ ಉತ್ತರ ಬಯಸಿದ್ದಳು. ನನ್ನ ಹಾಗೂ ರಾಜಾನ ಸಂಬಂಧ ಎಲ್ಲಿವರೆಗೆ ಹೋಗಿದೆ ಎಂದು ಅವಳ ದನಿ ಕಂಪಿಸುತ್ತಿತ್ತು. ಅಲ್ಲಿದ್ದ ವ್ಯಕ್ತಿಗಳ ಕಣ್ಣು ನನ್ನೇ ನೋಡುತ್ತಿದ್ದವು. ನಾ ಅಳುಕಲಿಲ್ಲ. ಏನಿತ್ತು ಎಂಬುದನ್ನು ಧೃಡವಾಗಿ ಹೇಳಿದೆ. ನನ್ನ ಉತ್ತರ ಆ ರೂಮಿನಲ್ಲಿದ್ದವರಿಗೆ ನಿರಾಳತೆ ತಂದಿತ್ತು.

ರಾಜಾನಿಗೆ ಅವನ ಕಂಪನಿಯ ಹಿರಿಯ ಅಧಿಕಾರಿ ಹೆಣ್ಣು ಕೊಡಲು ಮುಂದಾಗಿದ್ದರು. ಅಷ್ಟೇ ಅಲ್ಲ ಅವ ಮುಂದಿನ ವಾರ ಜರ್ಮನಿಗೆ ಹೊರಟ್ಟಿದ್ದ. ಹೀಗಾಗಿ ತರಾತುರಿಯಲ್ಲಿ ಮದುವೆಯ ನಿಶ್ಚಯ ಕಾರ್ಯ ಮುಗಿದಿತ್ತು. ಗಿರಿಮಾಮಾ, ಮಾಮಿ ಮತ್ತು ರಾಜಾ ಯಾರಿಗೂ ಈ ವಿಷಯ ನಮಗೆ ತಿಳಿಸುವ ಸೌಜನ್ಯವೂ ಇರಲಿಲ್ಲ. ರಾಜಾ ನನ್ನಿಂದ ದೂರ ಸಾಗಿಹೋಗಿದ್ದ. ಕಟ್ಟಿಕೊಂಡ ಕನಸನ್ನು ಒಡೆದು. ನಾ ಅಳುತ್ತ ಕೂರವ ಹಾಗಿರಲಿಲ್ಲ. ಅವ್ವ ಬಹಳೇ ಸುಸ್ತಾದ ಹಾಗೆ ಕಾಣುತ್ತಿದ್ದಳು. ಅಪ್ಪ ಜಿದ್ದಿಗೆ ಬಿದ್ದವರಂತೆ ಇದೇ ವರ್ಷ ನನ್ನ ಮದುವೆ ಮಾಡುವುದಾಗಿ ಹೇಳಿದ. ಅವನ ಪ್ರಯತ್ನಕ್ಕೆ ಫಲವೂ ಸಿಕ್ಕಿತು. ಹುಡುಗನಿಗೆ ಬ್ಯಾಂಕಿನ ನೌಕರಿ, ಅತ್ತೆ ನಾದಿನಿ ಕಾಟ ಇಲ್ಲ ಮಾವನಿಗೆ ವಯಸ್ಸಾಗಿದೆ. ಧಾರವಾಡದಲ್ಲಿ ಸ್ವಂತ ಮನೆ ಹೀಗೆ ಅನೇಕ ಗುಣಗಳು… ಅಪ್ಪ ಒಪ್ಪಿಗೆ ಕೊಟ್ಟಿದ್ದ.ನಾನೂ ಹುಂಗುಟ್ಟಿದೆ. ಸಂಸಾರ ಸಾಗರದಲ್ಲಿ ಬಿದ್ದೆ. ಸಂಪ್ರದಾಯಸ್ಥ ಮನೆತನ. ಏಕಾದಶಿ, ಪಾರಣೆ ಆರಾಧನೆ ಹೀಗೆ ನೂರೆಂಟು ನಿಯಮಗಳು. ತಿಂಗಳಿಗೆ ಮೂರುದಿನ ಮೂಲೆಯಲ್ಲಿ ಕೊಡುವ ಶಿಕ್ಷೆ ವಯಸ್ಸಾದ ಮಾವ, ಇವರು ಊಟ ಮಾಡಿ ಬಡಿಸುತ್ತಿದ್ದರು. ಆ ದಿನಗಳಲ್ಲಿ ಮೊದಲೆಲ್ಲ ಈ ನಿಯಮಗಳು ಬಹಳೇ ಹತ್ತಿರ ಅನಿಸಿದವು. ಸುಲಭವಾಗಿ ಒಗ್ಗಿಕೊಂಡೆ. ಇದೂಂಥರಾ ಹೊಸದು ಮತ್ತು ಇದೇ ನನ್ನ ಬದುಕು ಅನ್ನುವ ಹಾಗೆ.

ದಿನಗಳು ಉರುಳುತ್ತಿದ್ದವು. ಕಾಲಗತಿ ತನ್ನ ಜೊತೆ ಅವ್ವ ಅಪ್ಪರನ್ನು ಸೆಳೆದೂಯ್ಯಿತ್ತು. ನಾನು ಎರಡು ಮಕ್ಕಳ ತಾಯಿಯಾಗಿದ್ದೆ. ಮಾವ ಹಾಸಿಗೆ ಹಿಡಿದಿದ್ದರು. ಡಾಕ್ಟರ್ ಉಸಾಬರಿ ಬೇಡ ಇದು ಅವರ ಹಟ. ಇವರೂ ನಾನು ಹೇಳಿ ಹೇಳಿ ಸುಸ್ತಾಗಿದ್ದೆವು. ಮಕ್ಕಳು ದೊಡ್ಡವರಾಗುತ್ತಿದ್ದರು ಮಾವ ರಾತ್ರಿ ಏಳುವವರು ಅವರಿಗೆ ನೆರವಾಗಬೇಕು ಎಂಬ ನೆಪ ಇವರು ಹೊರಗ ಮಲಗತಿದ್ರು. ಮಂಚದ ಮೇಲೆ ನಾ ಒಬ್ಬಾಕಿನ. ರಾತ್ರಿ ನೀರಸ ಅನಸತಿದ್ವು. ಎರಡು ಮಕ್ಕಳು ಆದವು ಇನ್ನು ಅಂತಾದ್ದೆಲ್ಲ ವಿಚಾರ ಮಾಡೂದು ಕಮಿಯಾಗಬೇಕು ಅಂತ. ಅಲ್ಲಿ ಇಲ್ಲಿ ನಡೆಯುವ ಭಜನೆ ಕೀರ್ತನೆಗಳ ಗುಂಪಿಗೆ ಹೋದೆ. ಮನದ ಯಾವುದೋ ಮೂಲೆಯಲ್ಲಿ ಅಸಹನೆ ಇತ್ತು. ಆಗಾಗ ಹೆಡೆ ಎತ್ತುತ್ತಿತ್ತು. ನನ್ನ ಜೀವನ ಏನು ನಾ ಹಿಂಗ… ಇವರ ಮನಿ ಸಂಪ್ರದಾಯ, ನಿಯಮ ಪಾಲಿಸ್ಕೂತ ಇರೂದು ಏನು. ನನಗ ಅಂತ ಕೆಲವು ಆಶಾ ಅವ… ಬಯಕಿ ಇರಬಹುದು ಅಂತ ಇವರು ಯಾಕ ತಿಳಕೊಳ್ಳುವುದಿಲ್ಲ. ಇವರಂತೂ ಕಟ್ಟಾ ಸಂಪ್ರದಾಯವಾದಿ. ಜುಟ್ಟು ಬಿಟ್ಟಕೊಂಡ ಓಡಾಡುತಿದ್ರು. ಮಕ್ಕಳೂ ದೊಡ್ಡವರಾಗಿದ್ರು ಅವರಿಗೂ ತಮ್ಮ ಓರಗಿ ಹುಡುಗರು ತಮ್ಮ ಅಪ್ಪನ ಚಂಡಿಕೆ ಬಗ್ಗೆ ನಗುವುದು, ಇವರಿಗೆ ಅಮಾನ ಆಗೂದು ನಡೆದಿತ್ತು. ಹೊರಗ ಒಂದು ಕಪ್ಪು ಚಹಾ ಸಹ ಇವರು ಕುಡೀತಿರಲಿಲ್ಲ. ನಾನೂ ಅದಕ್ಕ ಒಗ್ಗಿಕೊಂಡಿದ್ದೆ. ಮಕ್ಕಳು ಪ್ರಶ್ನೆ ಕೇಳತಿದ್ರು ಉತ್ತರ ಕೊಡುದು ಕಠಿಣ ಇತ್ತು. ನಮ್ಮ ಅಸಮಾಧಾನಕ್ಕಾಗಲಿ, ಭಾವನೆಗಳಿಗಾಗಲಿ ಇಲ್ಲ ಕಿಮ್ಮತ್ತಿರಲಿಲ್ಲ. ಆವಾಗಾವಾಗ ಇದರ ಬಗ್ಗೆ ಪ್ರಸ್ತಾಪ ಮಾಡಿದ್ರ ಸಿಗತಿದ್ದುದು ಪುಕಟ ಉಪದೇಶ ನಮ್ಮ ಸಂಸ್ಕೃತಿ, ಹೆಂಗಸರು ಈ ಸಂಸ್ಕೃತಿ ಉಳಸಲಿಕ್ಕೆ ಏನೆಲ್ಲ ತ್ಯಾಗ ಮಾಡ್ಯಾರು, ಹಂಗ ಹೆಂಗಸೂರಿಂದನ ಬಾಳು, ದೇಶ ಬೆಳಗತದ. ನಾನು ಚೀರಿ ಚೀರಿ ಹೇಳಬೇಕೆಂದೆ. ಹೆಂಗಸೂರಿಗೆ ಗೌರವ, ಮರ್ಯಾದೆ ಹಿಂಗ ಎಲ್ಲಾ ಬೇಡಿ ಹಾಕಿ ಅಕಿಯೊಳಗೂ ಒಂದು ಜೀವ ಅದ ಅದು ಮಿಡೀತದ ಅನ್ನುವ ಹಕೀಕತ್ತ ಮರತ್ರು ಅಂತ ನನ್ನ ಬದುಕಿನ ಈ ಸಂಧಿಗ್ಧ ಪರಿಸ್ಥಿತಿಯಲ್ಲಿಯೇ ವಾಸುಮಾಮಾನಿಂದ ಆಮಂತ್ರಣ ಬಂದಿತ್ತು. ರಾಜಾ ಬರಾವಿದ್ದಾನಂತ. ಅವ ಹೇಗಿರಬಹುದು ಅವನ ಕತೆ ಏನು… ನನ್ನ ತಳಮಳಗಳಿಗೆ ಅವ ಉತ್ತರ ಆಗಬಲ್ಲನೇ… ?

ರಾಜಾ

ಹುಬ್ಬಳ್ಳ್ಯಾಗ ಅತ್ಯಾನ ಮನಿಯೊಳಗಿನ ದಿನ ನಾ ಎಂದೂ ಮರೆಯುವ ಹಂಗಿಲ್ಲ. ಒಲಿಮ್ಯಾಲಿನ ಬಿಸಿಸಿ ಭಕ್ಕರಿ, ಜೋಡಿ ರುಚಿಯಾದ ಪಲ್ಯ ಚಟ್ನಿ, ಅತ್ಯಾ ಭಕ್ಕರಿ ತಟ್ಟುವ ದೃಶ್ಯ ನಾ ಎಂದೂ ಮರೀಲಾರೆ. ಅತ್ಯಾ ನನ್ನ ಅಳಿಯ ಎಂದು ಒಪ್ಪಿಕೊಂಡಿದ್ದಳು ಕಾಕಾಗೂ ಇದು ಒಪ್ಪಿಗಿತ್ತು. ಹೀಗಾಗಿ ಭಾಮಿನಿ ನನ್ನ ಜೊತೆ ತಿರುಗುವುದು ಅವರಿಗೆ ಗೊತ್ತಿದ್ದರೂ ಸುಮ್ಮನಿರುತಿದ್ದರು. ಅವು ಮಧುರ ದಿನಗಳು ಕಾಲೇಜಿನ ರಂಗು ರಂಗಿನ ಜೀವನ… ಭಾಮಿನಿಯೊಡನೆ ಒಡನಾಟ ಮುಂದಿನ ಜೀವನದ ಬಗ್ಗೆ ಮಧುರ ಕನಸು ರೂಪಿಸುತ್ತಿದ್ದ ಕಾಲ ಅದು.

ಆ ಕನಸುಗಳಿಗೆ ವಾಸ್ತವದ ಶಾಖ ಕೊಟ್ಟಿದ್ದು ಆಯಿ, ಇಂಜಿನಿಯರಿಂಗ್ ರಿಸಲ್ಟು, ಫಸ್ಟ್‌ಕ್ಲಾಸ್‌ನಲ್ಲಿ ಪಾಸಾದವನಿಗೆ ಪುಣೆಯಲ್ಲಿಯ ಕಂಪನಿಯಲ್ಲಿ ಸಂದರ್ಶನಕ್ಕೆ ಕರೆ ಬಂದಿತ್ತು. ಆಯ್ಕೆ ಆಗುವುದರಲ್ಲಿ ಯಾವ ಅನುಮಾನವಿರಲಿಲ್ಲ. ಗೆಳೆಯರ ಜೊತೆ ಪಾರ್ಟಿ ಮುಗಿಸಿ ತಡವಾಗಿ ಮನೆಗೆ ಬಂದವನಿಗೆ ಎದಿರಾದದ್ದು ಆಯಿ. ನನ್ನ ಜೊತೆ ಮಾತನಾಡುವ ಇರಾದೆ ಹೇಳಿದಾಗ ನಾನು ನಾಳೆಗೆ ಮುಂದೂಡಲು ಪ್ರಯತ್ನಿಸಿದೆ. ಆದರೆ ಅವಳ ದನಿಯಲ್ಲಿದ್ದ ನಿಖರತೆ ನನ್ನ ಸೆಳೆಯಿತು. ಆಯಿ ಹೇಳುತ್ತಲೇ ಹೋದಳು. ನನ್ನ ಸಂದರ್ಶನ ತಗೂಂಡ ಭಂಡಿವಾಡೇಕರ್ ನಮ್ಮ ಮನೆಗೆ ಹುಡುಕಿಕೊಂಡು ಬಂದಿದ್ದು, ಕಂಪನಿಯಲ್ಲಿ ನಾ ಆಯ್ಕೆಯಾದದ್ದು ಹೇಳಿಹೋಗಿದ್ದರು. ಹಾಗೆಯೇ ತಮ್ಮ ಮಗಳು ಮಾಧುರಿಯ ಪ್ರಸ್ತಾಪತಂದಿದ್ದರು… ಅವಳ ಜೊತೆ ಮದುವೆ ಆದರೆ ಕಂಪನಿಯಲ್ಲಿ ಸಿಗುವ ಉನ್ನತ ಹುದ್ದೆ. ವಿದೇಶದಲ್ಲಿ ಕೊಡುವ ತರಬೇತಿ ಹೀಗೆ ಅನೇಕ ಆಮಿಷಗಳನ್ನು ಆಯಿಯ ಮುಂದೆ ಇಟ್ಟದ್ದರು. ಆ ಮಾತು ಹೇಳುವಾಗ ಆಯಿಯ ದನಿ ಉತ್ಸಾಹದಿಂದ ಕಂಪಿಸುತ್ತಿತ್ತು. ಅಂದರೆ ಇದಾಗಲೇ ಅವಳಿಗೆ ಅವರ ಪ್ರಸ್ತಾಪ ಒಪ್ಪಿಗೆಯಾಗಿದೆ. ಆಯಿ ಸ್ಪಷ್ಟವಾಗಿ ಹೇಳಿದಳು. ಭಂಡಿವಾಡೇಕರ್‌ರ ಪ್ರಸ್ತಾಪ ಒಪ್ಪಿಕೊಳ್ಳುವುದರಿಂದ ನನ್ನ ಜೀವನದಲ್ಲಿ ಆಗುವ ಬದಲಾವನೆಗಳ ಬಗ್ಗೆ ನಾ ಅಳುಕುತ್ತಲೇ ಭಾಮಿನಿ ಬಗ್ಗೆ ಹೇಳಿದೆ.

ನಿಜ, ನಿಂಗ ಭಾಮಿನಿ ಬಗ್ಗೆ ಆ ಭಾವನಾ ಇರೂದು ಖರೇ ಅದ ಅಂತ ನನಗೂ ಗೊತ್ತಿದೆ. ಆದ್ರ ರಾಜಾ, ತಕ್ಕಡಿ ತೂಗಿ ನೋಡು. ಭಾಮಿನಿ ಜೋಡಿ ಏನೂ ಬರುವುದಿಲ್ಲ. ಆದ್ರ ಮಾಧುರಿ ಜೋಡಿ ವಿದೇಶದ ಟ್ರೇನಿಂಗು, ಉನ್ನತ ಹುದ್ದೆ, ಒಳ್ಳೆ ಪಗಾರ ಹಿಂಗ ಸಾಲುಸಾಲು ಬರತಾವ. ಜೀವನದಾಗ ನಾವು ಭಾವನಾ ಬದಿಗೊತ್ತಿ ಕೆಲವೊಂದು ನಿರ್ಧಾರ ತಗೋಬೇಕಾಗತದ. ಹಂಗ ನಿಶ್ಚಯ ಮಾಡಿದ ಮನುಷ್ಯ ಬೆಳಿತಾನ ಹೊಳಿತಾನ… ಆಯಿಯ ಮಾತು ಕೆಲಸ ಮಾಡಿತ್ತು. ಭಾಮಿನಿಯ ಚೆಲುವಿನ ಮುಖ ಮನಸ್ಸಿನಿಂದ ಮಾಯ ಆತು. ಮಾಧುರಿಯ ಮಾದಕ ಚೆಲುವು ವ್ಯಾಪಿಸಿಕೊಂಡಿತು.

ಎಲ್ಲಾ ಪಡೆದು ಬಂದ ಭಾಗ್ಯ ಅಂತ ಅತ್ಯಾ ಸುದ್ದಿ ಕೇಳಿ ಹಳಹಳಿಸಿದಳಂತೆ. ವಾಸುಕಾಕಾನ ಎದುರು ತನ್ನ ಅಂಗೈ ತೋರಿಸಿ… ಭಕ್ಕರಿ ಬಡದು ಬಡದು ಅಂಗೈಯೊಳಗಿನ ಗೆರಿ ಸವದು ಹೋದವು. ಭಕ್ಕರಿ ತಿಂದಾವ ಹಿಂಗ ದಗಾಮಾಡತಾನ ಅಂದುಕೊಂಡಿರಲಿಲ್ಲ… ನಿಜ ನಾ ದಗಾಕೋರ ಅವರ ದೃಷ್ಟಿಯೊಳಗ… ಆದ್ರ ನನ್ನ ಕನ್ನಡಿ ನನಗ ಹೇಳುತಿತ್ತು ನಾ ಪ್ರಾಕ್ಟಿಕಲ್ ಮನುಷ್ಯ ಅಂತ… ಭಾವನಾದ ಆ ವೇಗದಾಗ ನಿರ್ಧಾರ ಯಾವಾಗಲೂ ತಗೋಬಾರದು. ಅಂಕಿಅಂಶ ತೂಗಿತೂಗಿ ಅಳದು ಸುರದು ನಿರ್ಧಾರ ತಗೋಬೇಕು. ಮ್ಯಾನೇಜಮೆಂಟಿನ ನಿಯಮ ಅದನ್ನು ಬದುಕಿಗೂ ಅನ್ವಯಿಸಿಕೊಳ್ಳುವದರಾಗ ಏನು ತಪ್ಪು ಕಾಣಲಿಲ್ಲ ನನಗ. ಜೀವನಕ್ಕ ಗತಿ ಬಂದಿತ್ತು. ಮಾಧುರಿಯ ಜೊತೆ ಕಳೆದ ರಸ ನಿಮಿಷಗಳು, ವಿದೇಶ ಪ್ರವಾಸ, ಎಕ್ಸಿಕ್ಯೂಟಿವ ಹುದ್ದೆ… ಮುಂಬಯಿಯೊಳಗೆ ಆರಾಮ ಅನಿಸುವ ಫ್ಲಾಟು, ಕಾರು ಹಿಂಗ ಸುಖ ಅನ್ನುವುದು ಕಾಲುಚೆಲ್ಲಿ ಬಿದ್ದಿತ್ತು.

ಸುಖದ ಅಮಲು ಯಾವಾಗ ಕರಗಲಿಕ್ಕೆ ಹತ್ತಿತ್ತು ಗೊತ್ತಾಗಲೇ ಇಲ್ಲ. ಅಪ್ಪ ಹಾಗೂ ಆಯಿ ಹಾಗೂ ಮಾಧುರಿ ನಡುವೆ ಹೊಂದಾಣಿಕೆ ಕಮ್ಮಿ ಆತು ಜಗಳ ವಾದ ವಿವಾದ ಶುರು ಇಟ್ಟವು. ಅವು ತಾರಕಕ್ಕೇರಿದಾಗ ಆಯಿ ಹಾಗೂ ಅಪ್ಪಗ ಇನ್ನೂಂದ ಫ್ಲಾಟ್‌ನ್ಯಾಗ ಇಡುವುದು… ನಾ ವಾರಕ್ಕೊಮ್ಮೆ ಅವರಿಗೆ ಭೇಟಿ ಆಗಿ ಬರುವುದು ಹಿಂಗ ಠರಾವಾತು. ಆಯಿಗ ನೋವಾಗಿತ್ತು. ಅಪ್ಪ ಎಂದಿನಂತೆ ನಿರ್ಲಿಪ್ತ, ಮಾಧುರಿ ಒಂದು ಸಲನೂ ನನಗ ಅಪ್ಪ ಆಯಿ ಇದ್ದ ಫ್ಲಾಟ್‌ಗೆ ಹೋಗಲು ಜೊತೆಗೂಡಲಿಲ್ಲ. ಅವರ ಬಗ್ಗೆ ಆಕೆ ಮಾತನಾಡುತ್ತಲೇ ಇರಲಿಲ್ಲ. ನನಗೆ ಇದು ಸಹನ ಆಗತಿರಲಿಲ್ಲ ಆದ್ರ ನಾನ ಶಾಣ್ಯಾ ಆದೆ. ಮೌನ ಆಶ್ರಯಿಸಿದೆ. ಮಗ ರಾಹುಲ್ ಸಹ ಅಜ್ಜ, ಅಜ್ಜಿ ನೆನಪು ತಗೀತಿರಲಿಲ್ಲ. ಮಾಧುರಿ ಸುಮ್ಮನ ಕೂಡುವವಳಲ್ಲ ಇದು ನನಗ ಮೊದಲ ತಿಳಿದಿತ್ತು. ಈಗೀಗಂತೂ ಅವಳ ಪಾರ್ಟಿ, ಕ್ಲಬ್ ವಿಪರೀತ ಆದ್ವು ಅಂತ ಅನಿಸಿ ಒಂದು ಸಲ ಅವಳಿಗೆ ಆಕ್ಷೇಪಿಸಿದೆ.

ರಾಜಾ ನೀಇನ್ನೂ ಅದ ಧಾರವಾಡದ ಮೆಂಟಾಲಿಯೊಳಗೆ ಇರೂದು ನಂಗ ಬೇಜಾರಾತು. ಜಗತ್ತು ಬದಲಾಗೇದ ಅದರ ಜೋಡಿ ನಾವು ಹೆಜ್ಜೆ ಹಾಕಬೇಕು. ನಮ್ಮ ಲೆವಲ್‌ಗ ತಕ್ಕಂಗ ಈ ಪಾರ್ಟಿ, ಕ್ಲಬ್ಬು ಬೇಕಬೇಕು. ನೀನ ವಿಚಾರ ಮಾಡು… ಇದರಿಂದ ನಿನ್ನ ಸ್ಟೇಟಸ್ಸೂ ಹೆಚ್ಚಿಗೆ ಆಗತದ ಸುಮ್ಮನ ದೊಡ್ಡ ಪುರಾಣ ಬ್ಯಾಡ ನಿಂಗ ಬೇಡಾದ್ರ ಬಿಡು… ನಂಗ ತಡೀಬ್ಯಾಡ…

ನನಗ ಅವಳನ್ನು ತಡೆಯುವ ಶಕ್ತಿ ಇರಲೇ ಇಲ್ಲ. ರಾಹುಲ್‌ನನ್ನು ನೋಡಿಕೊಳ್ಳಲು ಆಯಾ ಇದ್ದಳು. ನನಗ ತಲಿ ಬಿದ್ದು ಹೋಗುವಷ್ಟು ಒತ್ತಡ ಕೆಲಸದ್ದು. ಯಾಕೋ ಅನಸತದ ರೊಕ್ಕ, ಅಧಿಕಾರ ಮನಷ್ಯಾಗ ಸಿಗಲಿಕ್ಕೆ ಸುರು ಆತು ಅಂದ್ರ ಅದಕ್ಕ ನಿಲಗಡೆನ ಇರುವುದಿಲ್ಲ ಅನಾಯಾಸವಾಗಿ ದೊರೆತದ್ದಲ್ಲ ಈ ಪದವಿ. ಹಿಂದೆ ನನ್ನ ಪರಿಶ್ರಮ ಅದ. ಆದ್ರ ಮಾಧುರಿಗೆ ನನ್ನ ಈ ಸ್ಥಿತಿ ಅವರ ಅಪ್ಪನ ದೇಣಿಗಿ ಅಂತ ಅನಸತದ ಒಂದೆರಡು ಸಲ ಹಂಗಂತ ಮಾತಾಡಿಯೂ ತೋರಿಸ್ಯಾಳ ಅಕಿ. ನನಗ ಸಿಟ್ಟು ಬಂದಿತ್ತು ಖರೇ… ಆದ್ರ ತಡಕೊಂಡಿದ್ದೆ. ಅಕಿ ಅಪ್ಪನದು ಸಾಧು ಸ್ವಭಾವ. ನನ್ನ ಕೈ ಹಿಡದು ತಮ್ಮ ಮಗಳ ಹಟಮಾರಿತನಕ್ಕ ಇಲಾಜಿಲ್ಲ ಅನ್ನುವ ರೀತಿ ಮಾತಾಡಿದ್ರು. ನಾನೂ ಆ ಪ್ರಕರಣ ಅಲ್ಲಿಗೇ ಮರೆತೆ. ಆದ್ರ ಮಾಧುರಿ ಹಗಲೆಲ್ಲ ಚುಚ್ಚತಿದ್ಲು. ನಾ ಬೆಳೆದುಬಂದ ಪರಿಸರ ನಾ ಮಾತಾಡುವ ಕನ್ನಡ ಎಲ್ಲ ಅವಳಿಗೆ ತಾತ್ಸಾರ. ರಾಹುಲ್ ನನ್ನ ಜೊತೆ ಕನ್ನಡ ಕಲಿತ. ಆದ್ರ ಮಾಧುರಿ ಹಪಾಪಿ ಬ್ಯಾರೇ ಇತ್ತು. ಮಗ ಇಂಗ್ಲೀಷನ್ಯಾಗ ಮಾತಾಡಬೇಕು ಅಂತ. ಅವಳಿಗೆ ತಿಳಿಹೇಳಲಿಕ್ಕೆ ಹೋಗಿ ಸೋಲೊಪ್ಪಿಕೊಂಡೆ. ನನಗೆ ಗೊತ್ತಿಲ್ಲದಂತೆ ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಮಾಡಿತ್ತು. ಬಿಪಿ, ಶುಗರ್ ಶುರು ಆಗಿದ್ವು. ಭಾಮಿನಿ ಅಪ್ಪ ನೆನಪಾಗತಿದ್ರು. ಎಷ್ಟು ಛಂದ ತಮ್ಮ ಆರೋಗ್ಯ ಕಾಪಾಡಿಕೊಂಡು ಬಂದಿದ್ರು. ಅವರು ಮುಖ್ಯ ಅಂದ್ರ ಅವರಿಗೆ ಒತ್ತಡ ನೋವು ಇರಲೇ ಇಲ್ಲ. ನೋವು ಮೊದಲಸಲ ಕೊಟ್ಟಿದ್ದು ನಾನ… ಯಾಕೆ ಹಂಗ ಮಾಡಿದೆ… ಈಗ್ಯಾಕ ಅದು ಕಸಿವಿಸಿಕೊಡತದ. ಸಮಾಧಾನ ಸಿಕ್ಕೀತು. ಹಂಗ ಒಂದು ವೇಳೆ ಭಾಮಿನಿ ಬಂದಿದ್ದರೂ ಬಂದಿರಬಹುದು. ಲಗ್ನಕ್ಕ ಎಂಬ ಉಮೇದಿ ನನಗ ಇಲ್ಲಿ ವಾಸುಮಾಮಾ ನಕಡೆ ಸೆಳೀತೋ ಏನೂ…?

ಹೌದು ಭಾಮಿನಿಗೆ ಮತ್ತ ಭೇಟಿಯಾಗಬೇಕು. ಎಲ್ಲಾ ಹೇಳಿಕೊಳ್ಳಬೇಕು. ಕ್ಷಮಿಸು ಅಂತ ಕೇಳಬೇಕು. ಅಕಿ ಕ್ಷಮಾನೂ ಮಾಡಬಹುದು. ಅಕಿ ಬಗ್ಗೆನೂ ಗೊತ್ತದ ಗಂಡ ಸಂಪ್ರದಾಯವಾದಿ ಅಂತ ತಿಳೀತು. ಹೊರಗ ಏನೂ ತಿನದಿದ್ದ ಕಟ್ಟಾ ಮಡಿವಂತ. ಇಂಥಾವನ ಜೋಡಿ ಅದ್ಹೆಂಗ ಸಂಸಾರ ಮಾಡಿಕೊಂಡಿದ್ದಾಳೋ ಮಾರಾಯಿತಿ… ಎರಡು ಮಕ್ಕಳು ಬ್ಯಾರೆ ಆಗ್ಯಾವ ಅಂತ ವಾಸುಮಾಮಾ ಹೇಳಿದ್ದ. ಅಕಿಗೆ ನನ್ನ ಬಗೆ ಇನ್ನೂ ಮಧುರಭಾವನ ಇರಲೇ ಬೇಕು. ನಾ ಬಂದೇನಿ ಅಂತ ಗೊತ್ತಾದ್ರೂ ಬಾಜೂಮನಿಗೆ ಹೋಗಿ ಕೂತಾಕಿ. ಎದಿರಾಎದಿರು ಸಿಕ್ಕಾಗಲೂ ಏನೂ ಮಾತಾಡದ ಸಿಡಕಿನ್ಯಾಕಿ ಅಕಿ. ಇಂಧಾಕಿ ಜೋಡಿ ನಾ ನನ್ನ ಮನಸ್ಸಿನ್ಯಾಗ ಇರೋದು ಹೆಂಗ ಹೇಳಿಕೊಳ್ಳಿ ಇದು ಕಷ್ಟದ ಕೆಲಸ. ಆದ್ರ ಅನಿವಾರ್ಯ ಅದ. ನಾ ಮುಂದ ಹೆಜ್ಜೆ ಇಡಲೇ ಬೆಕಾಗೇದ. ಒಂದು ವೇಳೆ ಗ್ರಹಗತಿ ಅನುಕೂಲ ಇದ್ರ ಅಕಿ ನನ್ನ ಕ್ಷಮಾನೂ ಮಾಡಬಹುದು. ಮತ್ತ ಎಲ್ಲ ಸುರಳಿತ ಆಗಬಹುದು. ಸಂಜಿನ್ಯಾಗ ಅಕಿ ಜೋತಿ ಹೊರಗ ಹೋಗುವ ನೆಪ ಮಾಡಿ ಎಲ್ಲಾ ಹೇಳಬೇಕು. ಹೌದು ಹಂಗ ಮಾಡೂದು ಬರೋಬ್ಬರಿ…


ಓದುಗ ಮಹಾಶಯ, ರಸಭಂಗವಾಗಿದ್ದರೆ ಕ್ಷಮೆ ಇರಲಿ, ಭಾಮಿನಿ, ರಾಜಾ ಇಬ್ಬರೂ ಈ ಬಾಳ ಪುಟಗಳಲ್ಲಿ ತಮ್ಮ ಹಳವಂಡಗಳನ್ನು ತೋಡಿಕೊಂಡಿದ್ದಾರೆ. ಇನ್ನೇನು ಎಲ್ಲ ಸುರಳಿತ ಆತು ನೀನು ನಿಟ್ಟುಸಿರು ಬಿಡುವ ವೇಳೆ ನಾನು ಅಂದರೆ ಕತೆಗಾರ ವಕ್ಕರಿಸಿರುವೆ. ಹೌದು ನನ್ನ ಪ್ರವೇಶ ಅನಿವಾರ್ಯ ಅಂತ. ನನಗ ಅನಿಸಿದೆ. ರಾಜಾ ಭಾಮಿನಿ ಮೊದಲು ಪ್ರೇಮಿಸಿ, ಮುಂದೆ ರಾಜಾನ ಉದ್ದೇಶ ಅಥವಾ ಸ್ವಾರ್ಥ ಸಾಧನೆಯ ಸಲುವಾಗಿ ಬೇರೆ ಆದರು. ಬೇರೆ ಬೇರೆಯವರ ಜೊತೆ ಸಂಸಾರ ಮಾಡಿ, ಮಕ್ಕಳಾದರೂ ಈ ಹಳವಂಡಗಳಿಂದ ಮುಕ್ತಿ ಹೊಂದಲಿಲ್ಲ ಅವರು. ಇದ್ಯಾವ ಮಾಯೆ ಅವರಿಗೆ ಕಾಡಿದೆ… ಯಾಕೆ ಇಬ್ಬರಲ್ಲೂ ಅದೇ ತುಡಿತಗಳಿವೆ. ಕಟ್ಟುಪಾಡು, ಸಮಾಜ ನಿಯಮ ಎಲ್ಲ ಸುಳ್ಳೇ… ಅಥವಾ ಪ್ರೀತಿಯ ಸೆಳೆತದ ಮುಂದೆ ಅದೆಲ್ಲ ಗೌಣವೇ… ಇರಬಹದು. ಅಲ್ಲವೇ ಮುಂದೇನು ಎಂಬ ಪ್ರಶ್ನೆ ನಿನ್ನಲ್ಲಿರುವ ಹಾಗೆ ನನಗೂ ಇದೆ. ಉತ್ತರ ಸಿಕ್ಕಾಗ ಖಂಡಿತ ತಿಳಿಸುವೆ. ಈಗ ಸಧ್ಯ ಅವರಿಗೆ ತಮ್ಮ ತುಡಿತಗಳು ಭಾವನೆಗಳ ಬಗ್ಗೆ ದನಿಯತ್ತಲು ಅವಕಾಶ ಕೊಡುವೆ.

ತೀರದುದ್ದಕ್ಕೂ ತುಡಿತಗಳಿವೆ 

ಅಲೆ ಬಂದು ಚುಂಬಿಸಲೆಂದು…

ಅಲೆಗಳಿಗೂ ಮಿಡಿತವಿದೆ

ಸಮಾಗಮ ಆಗಿ ಬಿಡಲೆಂದು…

೨೦೧೧

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Badarinath Palavalli
10 years ago

ರಾಜಾ ಭಾಮಿನಿಯರ ಕೋನದಲ್ಲೇ ಕಥನ ಕಟ್ಟಿಕೊಟ್ಟ ನಿಮ್ಮ ಶ್ರಮ ಎದ್ದು ಕಾಣುತ್ತದೆ.
ರಾಜಾನದ್ದು ಸ್ವಾರ್ಥವೇ ಎನಿಸಿದರೂ ಅದು ಬದುಕುವ ಅನಿವಾರ್ಯತೆ ಅನಿಸಿತು.

ಒಳ್ಳೆಯ ಕತೆ ಓದಿದ ಆನಂದ ನನ್ನದಾಯಿತು.

umesh desai
10 years ago

thank you badri bhai

ಸುಮನ ದೇಸಾಯಿ
ಸುಮನ ದೇಸಾಯಿ
10 years ago

ಛಂದ ಅದ ಕಥಿ…ಈ ಮಧ್ಯ ವಯಸ್ಸಿನ ಮನಸ್ಸಿನ ತಳಮಳವನ್ನ ಭಾಳ ಛಂದ ಚಿತ್ರಿಸಿರಿ. ವಾಸ್ತವದಲ್ಲಿ ಇಂಥಾ ಮನಃಸ್ಥಿತಿಯೊಳಗ ತೊಳಲಾಡೊವರು ಭಾಳ ಮಂದಿ ಇದ್ದಾರ. ಬಹುಶಃ ಜೀವನದ ಜೋತಿ ಕಾಂಪ್ರಮೈಸ್ ಮಾಡಿಕೊಂಡದ್ದರ ಪ್ರತಿಫಲ ಇರಬಹುದು ಅಲ್ಲಾ? ನೀವ ಹೇಳಿಧಂಗ ಸ್ವಲ್ಪ ರಸಭಂಗ ಆತು. ಇನ್ನು ಮೈಮರೆತು ಓದಬೆಕಿತ್ತು ಅನಿಸೊ ಹೊತ್ತಿನ್ಯಾಗ ಒಮ್ಮೆಲೆ ಬಡಿದು ಎಬ್ಬಿಸಿಧಂಗಾತು.. ನಂಗ ಇಷ್ಟ ಆತು….

umesh desai
10 years ago

Thank You suman desai

ಗುರುಪ್ರಸಾದ ಕುರ್ತಕೋಟಿ

ಎಲ್ಲರ ಬಾಳ ಪುಟಗಳಲ್ಲಿ ಇಂಥ ಎಷ್ಟೋ ಹಳವಂಡಗಳು ದಾಖಲಾಗಿರುತ್ತವೇ. ಪರಿಸ್ಠಿತಿಗನುಗುಣವಾಗಿ ತೊಗೊಂಡ ನಿರ್ಧಾರಗಳು ಹಳವಂಡಗಳಾಗುತ್ತವೆ! ಇದುವೇ ಜೀವನ, ಅಲ್ಲವೆ? ಕತೆ ಚೆನ್ನಾಗಿದೆ. ನಿಮ್ಮ ಶೈಲಿ ಅಂತು ಎಂದಿನಂತೆ ಸುಪರ್!

5
0
Would love your thoughts, please comment.x
()
x