ಈ ಪಟ್ಟಣಗಳಿಗೆ ಏನಾಗಿದೆ?: ಗೌರಿ ಚಂದ್ರಕೇಸರಿ.

ಬಾಲ್ಯದಲ್ಲಿ ನಾವು ಕಂಡುಂಡ ಪಟ್ಟಣಗಳು ಈಗಿನಂತಿರಲಿಲ್ಲ. ಥೇಟ್ ಆದಿ ಕವಿ ಪಂಪ ಬನವಾಸಿಯನ್ನು ಬಣ್ಣಸಿದ ರೀತಿಯಲ್ಲಿ ಕಾಣಿಸುತ್ತಿದ್ದವು. ಹಸಿರುಡುಗೆ ತೊಟ್ಟ ಪ್ರಕೃತಿ, ಕೀ ಕೀ ಎನ್ನುವ ಹಕ್ಕಿಗಳ ಕಲರವದೊಂದಿಗೆ ತೆರೆದುಕೊಳ್ಳುತ್ತಿದ್ದ ಬೆಳಗು, ಮನೆ ಮನೆಯ ಮುಂದೆಯೂ ಬೃಂದಾವನ, ಅಲ್ಲಿ ಚುಕ್ಕೆ ಇಟ್ಟು ರಂಗೋಲಿ ಎಳೆಯುತ್ತಿರುವ ಹೆಂಗಳೆಯರು, ರೇಡಿಯೋದಿಂದ ಹೊರ ಹೊಮ್ಮುತ್ತಿದ್ದ “ಈ ಮಣ್ಣು ನಮ್ಮದು ಈ ಗಾಳಿ ನಮ್ಮದು, ಕಲಕಲನೆ ಹರಿಯುತಿಹ ನೀರು ನಮ್ಮದು” ಎಂಬಂತಹ ಹಾಡುಗಳು, ಬೀದಿ ನಲ್ಲಿಗಳಲ್ಲಿ ನೀರು ಹಿಡಿಯುತ್ತ ನಿಂತ ಗಂಡಸರು, ಹೆಂಗಸರು, ಅಲ್ಲಲ್ಲಿ ಕಾಣುತ್ತಿದ್ದ ಪೇರಲ, ಮಾವಿನ ತೋಟಗಳು, ಹಳೆಯ ಹೆಂಚಿನ ಮನೆಗಳು, ಸಂಜೆ ಹಸುಗಳು ಗೋಪಾಳದಿಂದ ಮನೆಗೆ ಬರುವಾಗಿನ ಗೋಧೂಳಿ ಪಟ್ಟಣಗಳಲ್ಲಿ ಈಗ ಎಲ್ಲಿಯೂ ಕಾಣ ಸಿಗುವುದಿಲ್ಲ.

ಪಟ್ಟಣಗಳು ಸಿಟಿ ಎಂದು ಕರೆಸಿಕೊಳ್ಳಲು ತೊಡಗಿದ ಬೆನ್ನಲ್ಲೇ ಎಲ್ಲವೂ ಬದಲಾಗಿ ಹೋಯಿತು. ದುಡಿಯುವ ಕೈಗಳಿಗೆ ಕೆಲಸ ಕೊಡುವ ಭರದಲ್ಲಿ ಕಾರ್ಖಾನೆಗಳು ತಲೆ ಎತ್ತಿ ನಿಂತವು. ಕೆಟ್ಟು ಪಟ್ಟಣ ಸೇರು ಎಂಬ ಮಾತನ್ನು ಎಲ್ಲ ಯುವ ಜನರು ಅಕ್ಷರಶ: ಪಾಲಿಸುತ್ತ ಬಂದರು. ಊರ ಅಂಚಿಗಿದ್ದ ಹೊಲ-ಗದ್ದೆ ಕಾಡುಗಳು ಕರಗಿ ಕಾಂಕ್ರೀಟ್ ನಾಡಾಯಿತು. ಅಲ್ಲಿಂದ ಆರಂಭವಾಯಿತು ಪಟ್ಟಣಗಳ ಸ್ನಿಗ್ಧ ಸೌಂದರ್ಯದ ನಿರ್ನಾಮ. ಮಳೆಗಾಲದ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದವು ಕಾನ್ವೆಂಟು, ಕಾಲೇಜುಗಳು. ಹೆಂಚಿನ ಮನೆಗಳೆಲ್ಲ ಮಣ್ಣಾಗಿ ಮಹಡಿ ಮನೆಗಳು ತಲೆ ಎತ್ತಿ ನಿಂತವು. ಕನ್ನಡ ಕಂಪನ್ನು ಮಾತ್ರ ಬೀರುತ್ತಿದ್ದ ಪಟ್ಟಣಕ್ಕೆ ದಾಳಿ ಇಟ್ಟ ಅನ್ಯ ಭಾಷೆಗಳು ನಮ್ಮ ಮಾತೃ ಭಾಷೆಯನ್ನು ನುಂಗಿ ನೆಣೆದು ಬಿಟ್ಟವು.

ನಮ್ಮ ಬಾಲ್ಯದಲ್ಲಿ ಮದ್ಯದಂಗಡಿಗಳು ನಮ್ಮ ಕಣ್ಣಿಗೇ ಬೀಳುತ್ತಿರಲಿಲ್ಲ. ಆದರೆ ಇಂದು ಶಾಲಾ-ಕಾಲೇಜುಗಳ ಮಗ್ಗುಲಲ್ಲೇ ತಲೆ ಎತ್ತಿ ನಿಂತಿವೆ. ಕಾನೂನು ಕಟ್ಟಳೆಗಳು ತಿಂದುಂಡು ಕಡತಗಳಲ್ಲಿ ಬೆಚ್ಚಗೆ ಮಲಗಿಬಿಟ್ಟಿವೆ. ಹಿಂದೆ ಬೀದಿಗೆ ಒಂದೋ ಎರಡರಂತೆ ಕ್ಲಿನಿಕ್‍ಗಳು ಇರುತ್ತಿದ್ದವು. ಆದರೆ ಈಗ ನಾಲ್ಕು ಹೆಜ್ಜೆಗೊಂದರಂತೆ ಕ್ಲಿನಿಕ್‍ಗಳು. ವೈದ್ಯರು ಹೆಚ್ಚಾದಂತೆ ಜನರಿಗೆ ಬರುವ ಕಾಯಿಲೆಗಳಲ್ಲೂ ಹೆಚ್ಚಳವಾಗಿದೆ. ಬೀದಿಗೆ ಹತ್ತರಂತೆ ತಲೆ ಎತ್ತಿರುವ ಅಂಗಡಿಗಳಿಗೆ ತೆರಳಿ ಇನ್ನೂ ಮೀಸೆ ಮೂಡದ ಹುಡುಗರಿಂದ ಹಿಡಿದು ವಯಸ್ಸಾದವರೂ ಕೂಡ ಹೊಗೆಸೊಪ್ಪು, ಗುಟಕಾ, ಮಾವಾ, ಸಿಗರೇಟು, ಬೀಡಿ ಇನ್ನೂ ಏನೇನೋ ಹೆಸರಿನ ವಿಷ ಪದಾರ್ಥಗಳನ್ನು ಅಗಿಯುತ್ತ, ಸೇದುತ್ತ ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ.

ಈ ಪಟ್ಟಣಗಳಿಗೆ ಏನಾಗಿದೆ? ಪಟ್ಟಣಗಳು ಇದ್ದ ಹಾಗೆಯೇ ಇವೆ. ಆದರೆ ಬದಲಾಗಿದ್ದು ನಾವು, ನಮ್ಮ ಜೀವನ ಶೈಲಿ. ನಮ್ಮೆಲ್ಲರ ಮೇಲೆ ತನ್ನ ಮಾಯಾಜಾಲವನ್ನು ಹರಡಿದ ಟಿ.ವಿ. ನಮ್ಮ ಸಂಸ್ಕೃತಿಯನ್ನೇ ಅಸಂಸ್ಕೃತಗೊಳಿಸಿದೆ. ಗೃಹ ಬಳಕೆಯಲ್ಲಿ ಬಳಸುವ ಯಂತ್ರೋಪಕರಣಗಳು ನಮ್ಮ ಶ್ರಮವನ್ನೇ ತಟಸ್ಥವಾಗಿಸಿವೆ. ಫಾಸ್ಟ್ ಫುಡ್ ಎಂದು ಕರೆಸಿಕೊಳ್ಳುವ ಆಹಾರ ನಮ್ಮ ಆರೋಗ್ಯವನ್ನೇ ಕಸಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಂಗಮ ವಾಣಿ ಎಂಬ ಮಾಯಾಂಗನೆ ಮಕ್ಕಳು ಮುದುಕರಾದಿಯಾಗಿ ಎಲ್ಲರ ಬುದ್ಧಿಯನ್ನೇ ಮಂಕಾಗಿಸಿದೆ, ಕ್ರಿಯಾಶೀಲತೆಗೆ ತುಕ್ಕು ಹಿಡಿಯುವಂತೆ ಮಾಡಿದೆ. ನಮ್ಮ ಹಿರಿಯರು ಅವರ ಬಾಲ್ಯದ ಸಮಯದಲ್ಲಿದ್ದ ಪಟ್ಟಣಗಳನ್ನು ಬಣ್ಣಿಸುತ್ತಾರೆ. ನಮ್ಮ ಮಕ್ಕಳೆದುರು ನಾವು ನಮ್ಮ ಬಾಲ್ಯದ ಪಟ್ಟಣಗಳನ್ನು ವರ್ಣಿಸುತ್ತೇವೆ. ಅಂದರೆ ಪಟ್ಟಣಗಳು ಬದಲಾಗುತ್ತಲೇ ಇವೆ. ಅಲ್ಲಲ್ಲ ಪಟ್ಟಣಗಳನ್ನು ನಾವು ಬದಲಾಯಿಸುತ್ತ ಹೊರಟಿದ್ದೇವೆ.

-ಗೌರಿ ಚಂದ್ರಕೇಸರಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x