ವಾಸುಕಿ ಕಾಲಂ

ಈ ತು ಮಾಮ ತಂಬ್ಯೆನ್:ವಾಸುಕಿ ರಾಘವನ್


ನೀವು ತುಂಬಾ ಮಡಿವಂತರಾ? ನಿಮ್ಮ ಭಾವನೆಗಳು ಸುಲಭವಾಗಿ ಹರ್ಟ್ ಆಗ್ತವಾ? ನಿಮಗೆ "ನೈತಿಕತೆ" ಕನ್ನಡಕ ಬಿಚ್ಚಿಟ್ಟು ಪ್ರಪಂಚವನ್ನ ನೋಡೋ ಅಭ್ಯಾಸಾನೇ ಇಲ್ವಾ? ಹಂಗಿದ್ರೆ ಈ ಚಿತ್ರ ನಿಮಗಲ್ಲ ಬಿಡಿ. ಈ ಆರ್ಟಿಕಲ್ ಕೂಡ ನಿಮಗೆ ಸರಿಹೋಗಲ್ಲ! ನೀವು ಈ ಗುಂಪಿಗೆ ಸೇರಿಲ್ವಾ? ಹಾಗಾದ್ರೆ ಇನ್ನೇನ್ ಯೋಚ್ನೆ ಇಲ್ಲ, ಬನ್ನಿ ಈ ಫಿಲ್ಮ್ ಬಗ್ಗೆ ಮಾತಾಡೋಣ!

ಆಲ್ಫೊನ್ಸೋ ಕ್ವಾರೋನ್ ನಿರ್ದೇಶನದ "ಈ ತು ಮಾಮ ತಂಬ್ಯೆನ್" ("ನಿನ್ನ ಅಮ್ಮ ಕೂಡ") 2001ರಲ್ಲಿ ಬಿಡುಗಡೆಯಾದ ಮೆಕ್ಸಿಕನ್ ಚಿತ್ರ. "ಕಮಿಂಗ್ ಆಫ್ ಏಜ್" ಅಂದು ಕರೆಸಿಕೊಳ್ಳೋ ಚಿತ್ರ ಪ್ರಕಾರದ್ದು. ಅಂದರೆ ಬಾಲ್ಯ ಅಥವಾ ತಾರುಣ್ಯದಿಂದ ಪ್ರಬುದ್ಧ ವಯಸ್ಸಿನೆಡೆಗೆ ಹೋಗುವ ಸಂಕ್ರಮಣ ಕಾಲದ ಮೇಲೆ ಆಧರಿಸಿದ್ದು. ನಗ್ನತೆ ಹಾಗೂ ಸಂಭೋಗದ ದೃಶ್ಯಗಳಿರುವ ಕಾರಣದಿಂದ ಹಲವಾರು ದೇಶಗಳಲ್ಲಿ ಬಿಡುಗಡೆಗೆ ಅಡ್ಡಿಯಾಯಿತು. ಈ ಚಿತ್ರವನ್ನು ಕನಿಷ್ಟ ಪಕ್ಷ ಎರಡು ಸಲವಾದರೂ ನೋಡಲೇಬೇಕು. ಮೊದಲ ವೀಕ್ಷಣೆಯಲ್ಲಿ ಈ ಚಿತ್ರ ನಿಮ್ಮನ್ನು ಬೆಚ್ಚಿಬೀಳಿಸಬಹುದು, ಕಚಗುಳಿ ಇಡಬಹುದು. ಆ ಮೇಲ್ಪದರದ ಕೆಳಗೆ ಇರುವ ಅಂಡರ್ ಕರೆಂಟ್ ತಿಳಿಯಲು ಎರಡನೇ ಬಾರಿ ನೋಡಲೇಬೇಕು. ಆವಾಗ ಅಲ್ಲಿರುವ ಭಾವನಾತ್ಮಕ, ಸಾಮಾಜಿಕ, ಮಾನಸಿಕ ಮಗ್ಗುಲುಗಳ ಪರಿಚಯ ಆಗುತ್ತೆ.

ಶ್ರೀಮಂತ ಕುಟುಂಬದ ತೆನೋಚ್ ಮತ್ತು ಮಧ್ಯಮವರ್ಗದ ಹೂಲಿಯೋ ತಾರುಣ್ಯದ ಹೊಸ್ತಿಲಲ್ಲಿರುವ ಆಪ್ತ ಗೆಳೆಯರು. ಕುಡಿತ, ಸಿಗರೇಟ್, ಮಾದಕ ದ್ರವ್ಯಗಳ ಸೇವನೆ, ಗರ್ಲ್ ಫ್ರೆಂಡ್ ಗಳ ಜೊತೆ ಪಾರ್ಟೀಯಿಂಗ್ ಹೀಗೆ ಮೋಜಿನ ಜೀವನ ಇವರದು. ರಜೆಗೆಂದು ಅವರ ಗರ್ಲ್ ಫ್ರೆಂಡ್ ಗಳು ಯುರೋಪ್ ಪ್ರವಾಸಕ್ಕೆ ಹೋಗಿರುವಾಗ, ಬೋರ್ಡಮ್ ಇಂದ ನರಳುತ್ತಿರುವ ಇವರಿಗೆ ತೆನೋಚ್ ಕಸಿನ್ ಹೆಂಡತಿ ಲೂಯಿಸಾಳ ಭೇಟಿ ಆಗುತ್ತದೆ. ಅವರಿಗಿಂತ ವಯಸ್ಸಿನಲ್ಲಿ ಹತ್ತು ಹದಿನೈದು ವರ್ಷ ದೊಡ್ಡವಳಾದ ಅವಳ ಮೇಲೆ ಇವರಿಗೆ ಆಕರ್ಷಣೆ ಉಂಟಾಗುತ್ತೆ. ಅವಳನ್ನು ಇಂಪ್ರೆಸ್ ಮಾಡಲು ತಾವು "ಹೆವನ್ಸ್ ಮೌತ್" ಅನ್ನೋ ಸುಂದರವಾದ ಬೀಚ್ ಗೆ ಪ್ರವಾಸ ಹೊರಟಿದ್ದೀವಿ, ನೀನೂ ಬರಬಹುದು ಅಂತ ಆಮಂತ್ರಿಸುತ್ತಾರೆ. ಮೊದಲಿಗೆ ನಿರಾಕರಿಸಿದರೂ, ನಂತರ ತನ್ನ ಗಂಡ ಬೇರೊಬ್ಬಳ ಜೊತೆ ಇರುವುದನ್ನು ತಿಳಿದು ಬೇಸರಗೊಂಡ ಲೂಯಿಸಾ ಹಿಂದುಮುಂದು ನೋಡದೇ ಇವರ ಜೊತೆ ಹೊರಟುಬಿಡುತ್ತಾಳೆ. ರೋಡ್ ಟ್ರಿಪ್ ಅಲ್ಲಿ ತೆನೋಚ್, ಹೂಲಿಯೋ, ಲೂಯಿಸಾ ನಶೆಯ ಅಮಲಿನಲ್ಲಿ ಮನಸ್ಸು ಬಿಚ್ಚಿ ತಮ್ಮ ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ. ಬುದ್ಧಿಜೀವಿ ಬರಹಗಾರನನ್ನು ಮದುವೆಯಾಗಿರುವ ಲೂಯಿಸಾ ತನ್ನ ಹಳೆಯ ಪ್ರಿಯತಮನ ಬಗ್ಗೆ ಹೇಳಿಕೊಳ್ಳುತ್ತಾಳೆ. ತೆನೋಚ್ ಮತ್ತು ಹೂಲಿಯೋ ತಮ್ಮ ಹುಡುಗಿಯರ ಬಗ್ಗೆ, ಲೈಂಗಿಕ ಸಾಹಸಗಳ ಬಗ್ಗೆ ವರ್ಣರಂಜಿತವಾಗಿ ಕೊಚ್ಚಿಕೊಳ್ಳುತ್ತಾರೆ. ತಮ್ಮ ಲೈಂಗಿಕ ಜೀವನಗಳ ಬಗ್ಗೆ ನಿರ್ಭಿಢವಾಗಿ ಮಾತಾಡುತ್ತಾ ಆಡುತ್ತಾ, ಮಾತು ಮೀರಿ ಇನ್ನೂ ಮುಂದುವರಿಯುತ್ತಾರೆ.

ಚಿತ್ರದಲ್ಲಿ ಅಷ್ಟೊಂದು ಸೆಕ್ಸ್ ದೃಶ್ಯಗಳಿದ್ದರೂ ಯಾವುದು ಕೂಡ ಪ್ರಚೋದನೆಗೋಸ್ಕರ ಇಲ್ಲ. ಚಿತ್ರ ಶುರುವಾಗುವುದೇ ತೆನೋಚ್ ಮತ್ತು ಹೂಲಿಯೋ ಪ್ರವಾಸಕ್ಕೆ ಹೊರಟು ನಿಂತಿರುವ ತಮ್ಮ ಗರ್ಲ್ ಫ್ರೆಂಡ್ ಗಳ ಜೊತೆ ಒಂದು ಕಡೆ ಸಲ ಅನ್ನುವಂತೆ ಸಂಭೋಗ ನಡೆಸುವ ದೃಶ್ಯ. ಶ್ರೀಮಂತನಾದ ತೆನೋಚ್ ಜೊತೆ ತಮ್ಮ ಮಗಳು ಕೂಡುವ ಬಗ್ಗೆ ಅವನ ಗರ್ಲ್ ಫ್ರೆಂಡ್ ಪೋಷಕರಿಗೆ ಅಂತಹ ಆಕ್ಷೇಪಣೆ ಏನಿಲ್ಲ. ತೆನೋಚ್ ಮಿಲನದ ದೃಶ್ಯ ಸಾವಕಾಶವಾಗಿ, ತಮಾಷೆ ಮಾತುಗಳನ್ನು ಆಡುತ್ತಾ ನಡೆಯುತ್ತದೆ. ಆದರೆ ಹೂಲಿಯೋ ಗರ್ಲ್ ಫ್ರೆಂಡ್ ಪೋಷಕರು ಅವನ ಮೇಲೆ ಸದಾ ಹದ್ದಿನಕಣ್ಣು ಇಟ್ಟಿರುತ್ತಾರೆ, ಹಾಗೂ ಅವರ ಕಣ್ಣುತಪ್ಪಿಸಿ ಆತುರಾತುರವಾಗಿ ಕೂಡುತ್ತಾರೆ. ಇಬ್ಬರು ಗೆಳೆಯರ ಕಾಮಕೇಳಿಯಲ್ಲಿ ಮೆಕ್ಸಿಕೋ ದೇಶದ ಆರ್ಥಿಕ ಮತ್ತು ಸಾಮಾಜಿಕ ವರ್ಗಗಳ ಮನಸ್ಥಿತಿಯ ಪರಿಚಯ ಇದೆ. ಹಾಗೆಯೇ ಲೂಯಿಸಾ ಜೊತೆ ಕೂಡುವ ಸಂದರ್ಭ ಬಂದಾಗ ಬಹಳ ಎಗ್ಸೈಟೆಡ್ ಆಗಿ ಶೀಘ್ರಸ್ಖಲನದಿಂದ ಮುಖಭಂಗ ಅನುಭವಿಸುತ್ತಾರೆ. ಹದಿಹರೆಯದ ಆತುರತೆ, ಅನನುಭವದ ಚಿತ್ರಣ ಇಲ್ಲಿದೆ. ಎಷ್ಟೇ ಮುಜುಗರವಿಲ್ಲದೇ ಈ ದೃಶ್ಯಗಳನ್ನ ತೆಗೆದಿದ್ದರೂ ನಿರ್ದೇಶಕ ಒಮ್ಮೆ ಕೂಡ ಪ್ರಚೋದನೆಗೋಸ್ಕರ ಬೇಡದ ಆಂಗಲ್ ಗಳಿಂದ ಚಿತ್ರಿಸಿಲ್ಲ, ಲೈಟಿಂಗ್ ಆಗಲೀ ದೃಶ್ಯದ ಉದ್ದ ಆಗಲೀ ಕಥೆಗೆ ಎಷ್ಟು ಬೇಕೋ ಅಷ್ಟು ಮಾತ್ರ ಇದೆ!

ಪ್ರತಿಯೊಂದು ದೃಶ್ಯದ ಹಿಂದೆಯೂ ಇನ್ನೇನೋ ಒಂದು ಸಬ್ ಟೆಕ್ಸ್ಟ್ ಇದೆ. ರಂಜನೀಯ ಸಂಭಾಷಣೆಯ ಹಿಂದೆಯೇ ಮತ್ಸರ ಇದೆ, ನೋವಿದೆ, ಹತಾಶೆ ಇದೆ, ಪಶ್ಚಾತ್ತಾಪ ಇದೆ. ಹಾಗಾಗೇ ಇದು ಕೇವಲ ಒಂದು ಪೋಲಿ ಚಿತ್ರ ಆಗದೆ ಒಂದು ಕಲಾತ್ಮಕ ಚಿತ್ರ ಅನ್ನಿಸಿಕೊಳ್ಳುತ್ತೆ. ಹೊರ್ಮೊನ್ ಗಳ ಹೊಯ್ದಾಟದಲ್ಲಿರುವ ಯುವಕರು, ಅವರ ಹುಡುಗಾಟ, ಅಭದ್ರತೆಗಳು, ಹೊಟ್ಟೆಕಿಚ್ಚು, ಅವರ ಕಲ್ಪನಾಲೋಕ ಇದನ್ನು ಸುಂದರವಾಗಿ ತೋರಿಸಿದ್ದಾರೆ. ನಮ್ಮ ದೇಶದಲ್ಲಿ ತಲೆಯೊಳಗೆ ನಡೆಯಬಹುದಾದ ಕಥೆ ಇನ್ನೊಂದು ದೇಶದಲ್ಲಿ ನಿಜವಾಗಿ ನಡೆಯುತ್ತದೆ! ಮೆಕ್ಸಿಕೋ ನೋಡಿ ಇದು ನಮ್ಮ ದೇಶದ ಥರಾನೇ ಇದೆ ಅಲ್ವಾ ಅನ್ನಿಸಿಬಿಡ್ತು. ಸಾಮಾಜಿಕ ಮತ್ತು ಆರ್ಥಿಕ ಅಂತಸ್ತುಗಳು, ಏನೂ ಅಪೇಕ್ಷಿಸದೇ ಸಹಾಯ ಮಾಡೋ ಚಿಕ್ಕ ಊರಿನ ಜನರು, ಬೀದಿಯಲ್ಲಿ ಮೆರವಣಿಗೆ ಹೊರಡುವ ಮದುವೆ ದಿಬ್ಬಣ, ಎಳನೀರು ಗಾಡಿಗಳು, ಸಣ್ಣ ಪೆಟ್ಟಿಗೆ ಅಂಗಡಿ ನಡೆಸುವ ಹಣ್ಣು ಹಣ್ಣು ಮುದುಕಿ ಇತ್ಯಾದಿ.

ನನಗೆ ಈ ಚಿತ್ರದಲ್ಲಿ ತುಂಬಾ ಇಷ್ಟವಾಗಿದ್ದು ಇದರ ಕ್ಲೈಮ್ಯಾಕ್ಸ್. ಮೊದಲ ದೃಶ್ಯ ಹಾಗೂ ಕೊನೆಯದರ ಟೋನ್ ತದ್ವಿರುದ್ಧ. ಈ ಟ್ರಿಪ್ ಮುಗಿದ ಮೇಲೆ ತೆನೋಚ್ ಮತ್ತು ಹೂಲಿಯೋ ಒಡನಾಟ ಕಮ್ಮಿ ಆಗಿ ಹಾಗೇ ನಿಂತುಹೋಗಿರುತ್ತೆ. ಒಮ್ಮೆ ಅಚಾನಕ್ಕಾಗಿ ಸಿಕ್ಕ ಇವರು ವಿಧಿಯಿಲ್ಲದೇ ಒಟ್ಟಿಗೆ ಕಾಫೀ ಕುಡಿಯೋಕೆ ಹೋಗ್ತಾರೆ. ಅವರಿಬ್ಬರ ಮಧ್ಯೆ ವಿವರಿಸಲಾಗದ ಒಂದು ಅಂತರ ಬಂದಿರುತ್ತೆ, ಮಾತು ಮೊದಲಿನಂತೆ ಸುಲಲಿತವಾಗಿಲ್ಲ, ದನಿಯಲ್ಲಿ ಅನ್ಯೋನ್ಯತೆ ಇಲ್ಲ. ಇವರೇನಾ ತಿಕ್ಕಲು ತಿಕ್ಕಲು ಥರ ಆಡ್ಕೊಂಡು ಇದ್ದ ಗಾಢ ಸ್ನೇಹಿತರು ಅಂತ ಬೇಸರ ಮೂಡುತ್ತೆ. ಹೇಗೆ ನಾವು ಬೆಳೀತಾ ಬೆಳೀತಾ ಎಷ್ಟೋ ಗೆಳೆಯರಿಂದ ದೂರ ಆಗಿಬಿಡ್ತೀವಿ, ಹೇಗೆ ನಮ್ಮಲ್ಲಿರುವ ಅಸಮಾನತೆಗಳು ಅಂತರವನ್ನು ಸೃಷ್ಟಿಸಿಬಿಡುತ್ತವೆ ಅಲ್ವಾ? ಇಷ್ಟು ಲೈಟ್ ಹಾರ್ಟೆಡ್ ಚಿತ್ರ ಆದರೂ ಕೊನೆಯಲ್ಲಿ ಮನಸ್ಸು ಭಾರ ಆಗುವಂತೆ ಮಾಡಿರೋದಕ್ಕೇ ಈ ಚಿತ್ರ ಗ್ರೇಟ್ ಅನ್ನಿಸಿಕೊಂಡಿರೋದು!

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಈ ತು ಮಾಮ ತಂಬ್ಯೆನ್:ವಾಸುಕಿ ರಾಘವನ್

  1. ಚಿತ್ರದ ಕೊನೆ ನಿಜವಾಗ್ಲೂ 'ವಾಟ್ ದ ..' ಬಹಳ ಇಷ್ಟವಾಯಿತು. ಬೆಳೆಯುವ ಹುಡುಗರ ವಾ೦ಛೆಯ ಅತಿರೇಕ ತೋರಿಸುವ ಒಳ್ಳೆಯ ಚಿತ್ರ. ನೀವು ಬರೆಯುವುದಕ್ಕೆ ಧೈರ್ಯ ಮಾಡಿದ್ದು ಒಳ್ಳೆಯ ವಿಷಯ!!

Leave a Reply

Your email address will not be published. Required fields are marked *