"ಭಾವದಲೊಬ್ಬ ದೇವನ ಮಾಡಿ….
ಮನದಲ್ಲೊಂದು ಭಕ್ತಿಯ ಮಾಡಿ
ಕಾಯದ ಕೈಯಲಿ ಕಾರ್ಯವೂ ಉಂಟೆ?
ವಾಯಕೆ ಬಳಲುವರು ನೋಡ …..
ಎತ್ತನೇರಿ ಎತ್ತನರಸುವರು
ಎತ್ತ ಹೋದರಯ್ಯ ..ಗ಼ುಹೇಶ್ವರ….. "
ಅಲ್ಲಮ ಪ್ರಭು ಅವರ ವಚನ ಸಾಹಿತ್ಯವನ್ನು ನನ್ನ ಮೆಚ್ಚಿನ ಹುಡುಗನೊಬ್ಬ ಹಾಡುವುದನ್ನು ಆಗಾಗ ಕೇಳುತ್ತಲೇ ಇದ್ದೆ.. ಅದು ಈ ಬರಹಕ್ಕೆ ಎಷ್ಟರ ಮಟ್ಟಿಗೆ ಹೊಂದುತ್ತದೋ ಇಲ್ಲವೋ ಗೊತ್ತಿಲ್ಲ.. ಆದರೆ ಈ ಬರಹ ಬರೆಯುವ ಹೊತ್ತಿಗೆ ಈ ಹಾಡು ನನ್ನನ್ನ್ನು ಬಹುವಾಗಿ ಕಾಡಿದ್ದಂತೂ ಸತ್ಯ.
ಹೊಸಪೇಟೆ ದಾಟಿ ಮರಿಯಮ್ಮನಹಳ್ಳಿ ಕಡೆ ಸಾಗುವ ಎತ್ತರದ ರಸ್ತೆಯಲ್ಲಿ ಕಣವಿ ವೀರಭದ್ರೇಶ್ವರ ದೇವಸ್ಥಾನ ಬರುತ್ತದೆ. ಮೊದ ಮೊದಲು ಬಸ್ ಕೋರಿಕೆ ಸ್ಟಾಪ್ ನೀಡುವಂತೆ ದೇವಸ್ಥಾನ ಬಂದ ತಕ್ಷಣವೇ ಒಂದೆರಡು ನಿಮಿಷ ನಿಲ್ಲಿಸಿ ಮುಂದೆ ಇಳಿಜಾರಿನಲ್ಲಿ ಚಲಿಸುವುದು ನಡೆಯುತ್ತಿತ್ತು. ಆಗ ವಾಹನಗಳ ಭರಾಟೆ ಯಾಗಲಿ, ಟ್ರಾಫಿಕ್ ಜಾಮ್ ಆಗುವುದಾಗಲಿ ಇದ್ದಿಲ್ಲ. ಈ ಭಾಗದ ಜನರಲ್ಲಿ ನಿಜ, ಎಲ್ಲಾ ಕಡೆಯೂ ಜನರಿಗೆ ದೇವರೆಂದರೆ, ದೇವಸ್ಥಾನವೆಂದರೆ ಭಕ್ತಿ ಅದಕ್ಕಿಂತ ಹೆಚ್ಹಾಗಿ ಭಯ ಇರುತ್ತದೆ. ಭಕ್ತಿ ಇರುವವರು ಕಣ್ಣು ಮುಚ್ಚಿ ಕೈ ಮುಗಿಯುತ್ತಾರೆ.. ಭಯವಿದ್ದವರು ಗಲ್ಲ ಗಲ್ಲ ಬಡಿದು ಕೊಂಡು ಬೇಡಿಕೊಳ್ಳುತ್ತಾರೆ. ಅದ್ಸರಿ, ಭಕ್ತಿ ಮತ್ತು ಭಯ ಎರಡೂ ಮನುಷ್ಯನನ್ನು ಆವರಿಸುವುದು ಯಾವಾಗ? ಚಿಕ್ಕಂದಿನಿಂದಲೇ ನಮ್ಮ ಹಿರಿಯರು ಹೇಳಿಕೊಟ್ಟಿದ್ದೋ ಕಲಿಸಿಕೊಟ್ಟಿದ್ದೋ ಆಗಿರುತ್ತದೆ. ನಾನು ಚಿಕ್ಕವನಿದ್ದಾಗಿನಿಂದಲೂ ಆ ರಸ್ತೆಯಲ್ಲಿ ಬಸ್ಸಲ್ಲಿ ಓಡಾಡುವುದು ರೂಢಿ. ಅಜ್ಜಿ, ತಾತ, ಅವ್ವ, ಅಕ್ಕ, ಚಿಕ್ಕಮ್ಮ, ಗೆಳೆಯರು ಎಲ್ಲರೊಂದಿಗೂ ತಿರುಗಾಡಿದ್ದಿದೆ.
ವರ್ಷಗಳಿಂದಲೂ ತಿರುಗಾಡಿದ್ದರೂ ಕಣವಿ ವೀರಭದ್ರೇಶ್ವರ ದೇವಸ್ಥಾನದ ಒಳಗೆ ಹೆಜ್ಜೆ ಇಟ್ಟಿದ್ದು ಕೇವಲ ಎರಡು ಅಥವಾ ಮೂರು ಬಾರಿ ಅಷ್ಟೇ. ಆ ದೇವಸ್ಥಾನ ಬಂದ ತಕ್ಷಣವೇ ಕೈಯಲ್ಲಿದ್ದ ಪಾವಲಿ, ಎಂಟಾಣೆ, ರುಪಾಯಿ ಕಾಯಿನ್ ತೆಗೆದು ಕಿಟಕಿಯಿಂದ ಎಸೆದು "ಈರಬದ್ದೆವ್ರೆ ಕಾಪಾಡಪ್ಪ" ಅಂದು ಕೈ ಮುಗಿದು ಸಾಗುವ ಮಂದಿ ದಿನಕ್ಕೆ ಅಲ್ಲಿ ಸಾವಿರಗಳ ಲೆಕ್ಕದಲ್ಲಿ ಸಿಗುತ್ತಿದ್ದರು. ಕೈ ಮುಗಿದು, ಗಲ್ಲ ಗಲ್ಲ ಬಡಿದುಕೊಂಡು ಬೇಡಿಕೊಳ್ಳುವವರ ಸಾಲಿನಲ್ಲಿ ಲೌಕಿಕ ಬದುಕಿನಲ್ಲಿ ಒದ್ದಾಡುವವರದೇ ಹೆಚ್ಚು ಸಂಖ್ಯೆ. ಗಾಡಿ, ಬಸ್ಸು, ಕಾರು, ಲಾರಿ, ಇನ್ನ್ಯಾವ್ದೋ ವಾಹನದಲ್ಲಿ ಚಲಿಸುವಾಗ ಆ ದಾರಿಯಲ್ಲಿ ಯಾವುದೇ ಅವಘಡ, ತೊಂದರೆ ಎದುರಾಗದಿರಲೆಂದು ಈರಬದ್ದೇವ್ರಿಗೆ ಕಪ್ಪ ಸಲ್ಲಿಸಿ ಅಡ್ಡ ಬಿದ್ದು ಕೇಳುತ್ತಿದ್ದರು. ಇನ್ನು ಕೆಲವು ಭಕ್ತರು "ಮನೆ ದೇವರೆಂದೋ" "ಸಿಟ್ಟಿನ ದೇವರೆಂದೋ" ಯಾವಾಗಾದ್ರೂ ಸರಿ, ಆತನದೊಂದು "ಸಿಟ್ಟಿನ ಕಣ್ಣು" ತಮ್ಮ ಮೇಲೆ ಬೀಳದಿರಲೆಂದು ಸಾಷ್ಟಾಂಗ ಹಾಕಿ ಬರುವವರದೂ ಒಂದು ಗುಂಪು.
ಎಲ್ಲಾ ಓ.ಕೆ. ಈ ಗುಡ್ಡದ ಮೇಲಿನ ದೇವರುಗಳು, ದಾರಿಯಲ್ಲಿ ಗುಡಿ ಕಟ್ಟಿಸಿಕೊಂಡ ದೇವರುಗಳು, ಭಕ್ತರನ್ನು ಎಷ್ಟರಮಟ್ಟಿಗೆ ಕಾಯುತ್ತಾರೋ ಗೊತ್ತಿಲ್ಲ. ಆದರೆ, ದಾರಿಯಲ್ಲಿ ಕಂಡ ಗುಡಿಗಳಿಗೆ ಗಾಡಿ, ಬಸ್ಸು, ಕಾರು ತರುಬಿ (ನಿಲ್ಲಿಸಿ) ಕೈ ಮುಗಿದು ಕಾಣಿಕೆ ಹಾಕಿ, ತೀರ್ಥ "ಸೊರಕ್ಕೆಂದು" ಗಂಟಲಿಗಿಳಿಸಿ ಸಾಕ್ಷಿಯಾಗಿ ಹಣೆ ಮೇಲೆ ಒಂದು ಕುಂಕುಮದ ಬೊಟ್ಟು ಇಟ್ಟುಕೊಂಡು ಸಾಗುತ್ತಾರಲ್ಲ? ಅವರ ಜರ್ನಿ ಎಷ್ಟರಮಟ್ಟಿಗೆ ಸೇಫ್ ಆಗಿರುತ್ತದೆ? ಅವರ ಜರ್ನಿ ಉದ್ದಕ್ಕೂ ಅಸ್ತಿತ್ವದ ದೇವರು ಕಾಪಾಡುತ್ತಾನೆನ್ನು ವುದು ಯಾವ ಗ್ಯಾರಂಟಿ? ಇದನ್ನು ದೇವರ ಅಸ್ತಿತ್ವಕ್ಕೆ ಪ್ರಶ್ನೆ ಕೇಳುವವನಂತೆ ನಾನು ಕಂಡರೂ ಪರಿಹಾರ ಅಥವಾ ಉತ್ತರವೆನ್ನುವಂತೆ "ಅವರವರ ಆಯಷ್ಯ ಎಷ್ತಿರುತ್ತೋ ಅಷ್ಟೇ ಜೀವನ" ಎಂದು ಮೊಟಕು ಮಾಡಿ ಹೇಳುವವರೇ ಜಾಸ್ತಿ.
ಇರಲಿ, ಮತ್ತೆ ಈರಬದ್ದೇವ್ರು ಕಡೆ ಬರಾಣ. ಅಲ್ಲಿ ಬರು ಬರುತ್ತಾ ದಟ್ಟ ವಾಹನಗಳ ಸಾಗಣೆ ಹೆಚ್ಚಾಯಿತು. ಈರಬದ್ದೇವ್ರು ಪ್ರಭಾವ, ಭಕ್ತರ ದಂಡು, ಕಾಣಿಕೆ ಹುಂಡಿ, ಹೆಚ್ಚುತ್ತಲೇ ಬಂತು. ಬರೀ ಗುಡ್ಡದ ಮೇಲಿನ ಒಂದು ಚಿಕ್ಕ ಗರ್ಭ ಗುಡಿಯ "ಈರಬೆದ್ದೇವ್ರಿಗೆ" ಈಗ ರಾಜಕೀಯ ಪ್ರೇರಿತ ಮಂದಿಗಳಿಂದ, ದುಡ್ಡಿದ್ದವರ "ಭಕ್ತಿ" ಹೆಚ್ಚಿದ್ದರಿಂದ ದೇವಸ್ಥಾನದ ಜೀರ್ಣೋದ್ದಾರಕ್ಕೆ ಕಾಣಿಕೆ ಹರಿದು ಬಂತು. ಮಂಗಳಾರತಿ ಮಾಡಿ ಜೀವನ ಸಾಗಿಸುವ ಅರ್ಚಕರ ಜೀವನ ಕಣ್ಣು ತೆರೆದಂತಾಯಿತು. ಅಪರಿಚಿತ ಪ್ರಯಾಣಿಕರೂ "ಈರಬದ್ದೆವ್ರೇ ಕಾಪಾಡಪ್ಪ" ಅನ್ನತೊಡಗಿದರು. ಅದರಂತೆ "ಈರಬದ್ದೇವ್ರು" ಕೂಡ ಭಕ್ತರನ್ನು ತನ್ನ ಬಿರುಗಣ್ಣಿನಿಂದಲೇ ನೋಡುತ್ತಿದ್ದ. ಅಷ್ಟಾಗಿಯೂ ದೇವಸ್ಥಾನ ದಾಟಿದ ಇಳಿಜಾರಿನಲ್ಲಿ ಆಗಾಗ ಲಾರಿಗಳು, ಕಾರುಗಳು ತುಂಗಭದ್ರಾ ನದಿ ದಂಡೆಯ ಗುಂಡಿಗಳಿಗೆ ಬಿದ್ದು ಅಪಘಾತಗಳಾಗುತ್ತಿದ್ದವು. ಉಳಿದ ಪ್ರಯಾಣಿಕರು ಬಸ್ಸಿನಲ್ಲಿ, ಕಾರಿನಲ್ಲಿ ತೆರಳುತ್ತಾ "ಈರಬದ್ದೇವ್ರಿಗೆ ಕಾಣ್ಕೆ ಹಾಕಿ ಕೈ ಮುಗ್ದು ಬರಾಕೇನು ಧಾಡಿ ಈ ಮೂಳಕ್ಕೆ" ಅಂದು ತಿವಿಯುವಂತೆ ಗೊಣಗಿ ಸಾಗುತ್ತಿದ್ದರು. ಆಗೆಲ್ಲಾ "ಈರಬದ್ದೇವ್ರು ಪ್ರಭಾವಳಿ ಹೆಚ್ಚು ಚರ್ಚಿತವಾಗಿತ್ತು.
ಮೊದಲಿಂದಲೂ ಈ ಪ್ರದೇಶ ಗಣಿಗಾರಿಕೆಗೆ ಖ್ಯಾತಿ. ಇತ್ತೀಚಿಗೆ ಅದು ಮತ್ತೇನೋ ಆಗಿದೆ. ಅದಿರಿನ ಲಾರಿಗಳ ಸಾಗಣೆಯಿಂದ ಅದೆಷ್ಟು ಟ್ರಾಫಿಕ್ ಜಾಮ್ ಆಗುತ್ತಿತ್ತು ಅಂದರೆ, ದಿನಗಟ್ಟಲೆ, ವಾಹನಗಳು ರಸ್ತೆ ಬದಿಯಲ್ಲಿ ನಿಂತು ಬಿಸಿಲಿಗೆ ಮೈ ಕಾಯಿಸಿಕೊಂಡು ಮನುಷ್ಯರ ಬೆವರು ಕುಡಿಯುತ್ತಿದ್ದವು. ಆ ಕಡೆ ಈರಬದ್ದೇವ್ರು ಗುಡಿ ಹತ್ತಿರ ಮತ್ತು ಈ ಕಡೆ ಕೊಪ್ಳದಿಂದ ಹೊಸಪೇಟೆ ಮಾರ್ಗದ ಶೀಮ್ಲಾ ಧಾಭಾ ದವರೆಗೆ ಕನಿಷ್ಠ ಇಪ್ಪತ್ತೈದು ಕಿಲೋಮೀಟರ್ ನಷ್ಟು ರಸ್ತೆ ಸಂಚಾರದಿಂದ ಸ್ತಬ್ಧವಾಗು ತ್ತಿತ್ತು. ಪ್ರತಿ ನಿತ್ಯ ಪೊಲೀಸರಿಗೆ ಟ್ರಾಫಿಕ್ ಕ್ಲಿಯರ್ ಮಾಡಿ ಎದೆ ತುಂಬಾ ಧೂಳು ತುಂಬಿಕೊಳ್ಳುವುದು ಕಾಯಕ ಮತ್ತು ಕರ್ಮವೇ ಆಗಿತ್ತು, ಮತ್ತದು ಪ್ರಯಾಣಿಕರ ಕರ್ಮವೂ ಆಗಿತ್ತು. ಹಗರಿಬೊಮ್ಮನಹಳ್ಳಿಯಿಂದ ಹೊಸಪೇಟೆಗೆ ಕೇವಲ ೩೮ ಕಿಲೋಮೀಟರ್ ದಾರಿ. ಹೊಸಪೇಟೆಗೆ ಪ್ರತಿನಿತ್ಯ ಕಾಲೇಜ್ ಓದಿಗಾಗಿ ಓಡಾಡುವವರ ಆ ಭಾಗದ ವಿಧ್ಯಾರ್ಥಿಗಳ ಸಂಖ್ಯೆಯೂ ಹೆಚ್ಚು. ಕಣವಿ ಈರಬದ್ದೇವ್ರು ಗುಡಿ ಹತ್ರ ಬಂದು ಟ್ರಾಫಿಕ್ ಇತ್ತೆಂದರೆ ಸಾಕು, ಅಲ್ಲಿಂದ ಹುಡುಗ ಹುಡುಗಿಯರು ಬಸ್ಸಿಳಿದು ಕಾಲೆಳೆಯುತ್ತಲೇ ಮೂರು ನಾಲ್ಕು ಕಿ. ಮೀ. ಸಾಗಿ ಕಾಲೇಜ್ ಸೇರುವುದು ರೂಢಿಯಾಗಿತ್ತು.
ದೇವರಿಗೆಂದೇ ಪಾದ ಯಾತ್ರೆ ಹೊರಟು ತೀರಿಸುವವರಿಗೂ ಈ ಟ್ರಾಫಿಕ್ ಜಾಮ್ ಆದ ಸಮಯದಲ್ಲಿ ಕಾಲೆದುಕೊಂಡು ನಡೆದು ಹೋಗುವವರಿಗೂ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿದ್ದಿಲ್ಲ. ವ್ಯತ್ಯಾಸವೆಂದರೆ ಅವರು ಭಕ್ತಿಯ ಪಯಣದಲ್ಲಿ ದೇವರ ದರ್ಶನಕ್ಕೆಂದೇ ಹೊರಟಿರುತ್ತಾರೆ. ಇವರು ತಮ್ಮ ಪಯಣದ ಡೆಸ್ಟಿನಿ ತಲುಪಲು ಹೊರಟಿರುತ್ತಾರೆ. ಪಾದಯಾತ್ರೆಯೂ, ಪಯಣವೂ ಒಮ್ಮೊಮ್ಮೆ ಡೆಸ್ಟಿನಿ ತಲುಪದೇ ಮಧ್ಯೆ ಹುದುಗಿಸಿಕೊಳ್ಳುತ್ತದೆ. ಅದು ಜೇವವನ್ನೂ ತೆಗೆದು…
ಆಗ ರಸ್ತೆ ಬದಿಯಲ್ಲಿದ್ದ ಈರಬದ್ದೇವ್ರು ಆಗಲಿ ಏಳು ಬೆಟ್ಟದ ತಿಮ್ಮಪ್ಪನೇ ಆಗಲಿ ಉಹೂ … ಅವರೂ ನಿಸ್ಸಾಹಕರು.. ನನ್ನಂಥವರು "ಎಲ್ಲಿಯ ದೇವರು? ಎಲ್ಲಿಯ ಭಕ್ತಿ? ಅದೆಲ್ಲಿಂದ ಪಾದಯಾತ್ರೆ? ಅದ್ಯಾವ ಕಡೆಗೆ ಪಯಣ? ಯಾವ ದಿಕ್ಕಿನಿಂದ ಯಾವ ದೇವರು ನಮ್ಮನ್ನು ಕಾಪಾಡುತ್ತಾನೆ?" ಅಂದರೆ ದೇವರು ದೊಡ್ಡವನು ಅವನಿಗೆ ಹಾಗನ್ನಬಾರದು ಅಂತಲೇ ಪುಕ್ಕಟೆ ಸಲಹೆ ಸಿಗುತ್ತವೆ… ಹೋಗಲಿ, ಹಾಗನ್ನುವವರು ನಿಚ್ಚಳವಾಗಿ ಎದುರಿಗೆ ದೇವರನ್ನು ಕಂಡಿದ್ದಾರಾ? ಅದಕ್ಕೂ ಅವರು "ಯಾವುದೋ ಮಾರ್ಗದಿಂದಲಾದರೂ ಕಾಪಾಡುತ್ತಾನೆ" ಅನ್ನುತ್ತಾರೆ..
ನನಗೆ ಗೊತ್ತಿದ್ದಂತೆ ಇದೇ ಈರಬದ್ದೇವ್ರು ತನ್ನ jurisdiction ನಲ್ಲಿ ಅದೆಷ್ಟೋ ಅಪಘಾತಗಳಿಗೆ, ಜೀವ ಹಾನಿಗೆ ಸಾಕ್ಷಿಯಾಗಿದ್ದಾನೆ. ಯಾವುದೇ ತೊಂದರೆ ಇಲ್ಲದೇ ಸಾಗಿದರೆ ದೇವರಿದ್ದಾನೆ ಅಂತಲೂ ಪ್ರಾಣಹಾನಿ ಉಂಟಾದರೂ ಭಕ್ತಿ ಇಲ್ಲದೇ ನಡೆದ ಘಟನೆ ಅಂತಲೂ ನಂಬಿಸುವ ಮಂದಿಗೆ ದೇವರು ತನ್ನ ಅಸ್ತಿತ್ವವನ್ನು ತಾನೇ ತಾನಾಗಿ ಯಾಕೆ ತೋರಿಸಿಕೊಳ್ಳುವುದಿಲ್ಲ? ಅಥವಾ ಪ್ರಾಣ ಹಾನಿ ಆದವರ ಜೀವವನ್ನು ಏಕೆ ಉಳಿಸಲಿಲ್ಲ ಅನ್ನಿಸಿಬಿಡುತ್ತೆ.. ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿದ್ದ ಈರಬದ್ದೇವ್ರು ಗುಡಿ ಮುಂದಿ ನಿಂದಲೇ ಸಾಗುತ್ತಿದ್ದ ದಾರಿಯನ್ನು ಬಂದ್ ಮಾಡಿ ಅದೇ ಈರ್ಬದ್ದೇವ್ರು ಗುಡಿ ಬುಡದಲ್ಲೇ ಇರುವ ಗುಡ್ಡವನ್ನು ಅಗೆದು ಸುರಂಗ ಮಾರ್ಗವನ್ನು ನಿರ್ಮಿಸಿ ಚೆಂದಗೊಳಿಸಿದ್ದಾರೆ.. ಮತ್ತೀಗ ಅಲ್ಲಿ ಟ್ರಾಫಿಕ್ ಜಾಮ್ ಇಲ್ಲ.. ಈರ್ಬದ್ದೇವ್ರು ದರ್ಶನಕ್ಕೆ ನಡೆಯುವ ಭಕ್ತ ಜನ ಗುಡ್ಡದ ಮೇಲಿನ ಗುಡಿಯ ಕಡೆ ತಿರುಗಿ ನೋಡುವುದು ಕಡಿಮೆ ಆಗಿದೆ. ಹೋದೆನೆಂದರೂ ಅದಕ್ಕೆಂದೇ ಪ್ರತ್ಯೇಕವಾಗಿ ಮಾರ್ಗ ಕ್ರಮಿಸಬೇಕು.
ಈರಬದ್ದೇವ್ರು ತಾನು ಸೈಡಲ್ಲಿ ನಿಂತು ಭಕ್ತರಿಗೆ ಅನುಕೂಲವಾಗಲೆಂದು ಆಶೀರ್ವದಿಸಿರಬೇಕು ಇಲ್ಲವೇ ಮನುಷ್ಯ ತನ್ನ ತಾಂತ್ರಿಕ ಮಾತು ಯಾಂತ್ರಿಕ ಬದುಕಿಗೆ ಅವಶ್ಯಕತೆ ಇರುವ ಮಾರ್ಗಗಳನ್ನು ಸೃಷ್ಟಿಸಿ ಕೊಂಡಿದ್ದಾನೆಂತಲೂ ಅನ್ನಿಸಬಹುದು.. ಒಟ್ಟಿನಲ್ಲಿ ಗುಡ್ಡದ ಮೇಲಿನ ಈರಬದ್ದೇವ್ರು ತನ್ನ ಅಸ್ತಿತ್ವವನ್ನು ತನ್ನಷ್ಟಕ್ಕೇ ಮಾತ್ರವೇ ಅಥವಾ ಕೆಲವೇ ಭಕ್ತರಿಗೆ ಮಾತ್ರವೇ ಸೀಮಿತಗೊಳಿಸಿದ್ದಾನೆ ಅನ್ನಿಸಿತು.. ಪ್ರಯಾಣಿಕರ ಇತ್ತೀಚಿನ ಸುರಂಗ ಮಾರ್ಗದಲ್ಲಿ ಸಾಗುವ ಸಮಯದಲ್ಲೇ ಈರಬದ್ದೇವ್ರು ಅಲ್ಲೇ ಇರುವ ಬಗ್ಗೆಯಾಗಲಿ, ಆತನ ಅಸ್ತಿತ್ವದ ಬಗ್ಗೆ ಯೋಚಿಸುವ ಭಕ್ತಿಗೆ ಮರೆವಿನ ಪೊರೆ ಆವರಿಸಿದಂತೆ ಕಾಣುತ್ತೆ.
ನಿನ್ನೆ ನನ್ನ ಪರಿಚಯದ ಮತ್ತು ತುಂಬಾ ಗೌರವಿಸುವ (ಹಾಲಿ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದರು ) ಬಳ್ಳಾರಿಯ ಎನ್. ರುದ್ರಮುನಿ ಎನ್ನುವವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಾದ ಯಾತ್ರೆ ಹೊರಟು ಬೆಟ್ಟದ ದಾರಿ ಮಧ್ಯೆ ಆಂಧ್ರ ಸರ್ಕಾರದ ಬಸ್ಸೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತರಾದರು.. ಈಗ ಹೇಳಿ ಭಕ್ತಿಯಿಂದ ಅಲ್ಲವೇ ಭಕ್ತ ಪಾದ ಯಾತ್ರೆ ಹೊರಟಿದ್ದು? ದೇವರಿದ್ದಾ ನೆಂದಲ್ಲವೇ ದರ್ಶನಕ್ಕೆ ಹೋಗಿದ್ದು? ಅಂಥ ಪ್ರಾಂಜಲ ಮನಸ್ಸಿನ ಭಕ್ತನನ್ನು ದಾರಿ ಮಧ್ಯೆದಲ್ಲೇ ಜೀವ ತೆಗೆದ ವಿಪರ್ಯಾಸಕ್ಕೆ "ಅಯ್ಯೋ ದುರ್ವಿಧಿ" ಅನ್ನುತ್ತೆವೆಯೇ ಹೊರತು "ಅಯ್ಯೋ ಬಡ್ಡಿ ಮಗನೇ ದೇವರೇ" ಅಂತೇನಾದರೂ ಯಾರಾದ್ರೂ ಅಂದಿದ್ದು ಕೇಳಿದ್ದೆವಾ? ಇಲ್ಲ… ನನಗೆ ಹಾಗನ್ನಬೇಕೆನಿಸಿತು
…
ಆಗಲೇ ಈರಬದ್ದೇವ್ರು ಗುಡಿ, ಟ್ರಾಫಿಕ್ ಜಾಮ್, ಭಕ್ತರು, ಪ್ರಯಾಣಿಕರು, ಭಕ್ತಿ, ಭಯ, ಅಪಘಾತ, ಸಾವು ಪಾದಯಾತ್ರೆ ಎಲ್ಲ ನೆನಪಾದವು……
*****
ರ್ಭದ್ರದೆವರ ನೆನಪಿಸಿದ ತಮ್ಮ ಲೆಖನ ಕಾಲೇಜು ದಿನಗಳನ್ನು ನೆನೆಪಿಸಿದವು. ನಂಬಿಕೆ ಮತ್ತು ವಿದ್ಯೆಯ ನಡುವಿನ ತೆಳು ಪರದೆ ಭಕ್ತಿ
nanage eradu vishya, yavaththu artha agalilla, ondu devaru ondu srusti. Devare madida ee srusti antha navu nabodare devaranna srusti madidavru yaru. Nave allave. Hola huluvaga raitha chavti ittkondirthane, yake ethige bhaya idre adu helida mathu kelathe antha. Hage Nam poorvajaru avara mathu kelali antha devaranna srusti made nammalli bhaya huttisi bittidare aste. Hagadre devaru ilva? Nodi ellaragu ondu kone idde irathe, kone yava reethi antha nirdara madoke agalla aa devarigu saha aste… Ghatanegalu nadedu bidothe.. addakke vidhiyata antha heli summane irodu sari alva…. Nodi namma deha aneka jeeva kanagalitha nirmisalpattigde… adu hege huttitu, adu prakruthi vishaya… alli prakruthine devaru… Namage kayile bandre… adakke prakruthiyallina badalavane aste… devaru yaro bandu namge kayile barisdru.. yaro mata madidru… andkollokke sadyavilla..
ಲೇಖನ ವೈಚಾರಿಕೆತೆಗೆ , ಚಿಂತನೆಗೆ ಪ್ರೇರೇಪಿಸುತ್ತದೆ . ದೇವರು ಅಸ್ತಿತ್ವದ ಬಗ್ಗೆ ಜನರ ನಂಬಿಕೆ , ಹಲವು ನೆಲೆಗಳಲ್ಲಿ ಕೊನೆಗೊಳ್ಳುತ್ತದೆ . ಉತ್ತಮ ಲೇಖನ .
nice
It is nice sir.
ಇದು ಯಾಕೋ ಸ್ವಲ್ಪ ಅತಿರೇಕ ಅನಿಸುತ್ತೆ, ಬರಹ ಅಷ್ಟೊಂದು ಪ್ರಶಂಸನೀಯ್ ಅನ್ನಿಸಿಲ್ಲ್
There are ritual and spiritual planes of visualising and understanding 'God'. Your write up has good insights about superficialities of ritualistic vision of God by a section of people who are in majority. Aarambhadalli neevu ullekhisiruva 'Etthaneri etthanarasuvaru ettha hoadarayya' ennuva Allama ra vachana-bhaaga devara ella marmavannu thannalli adagisittukondide! Good one Amar!
ಚಿಂತನೆಗೀಡು ಮಾಡುವ ಬರಹ! ಎಷ್ಟೋ ಪ್ರಶ್ನೆಗಳಿಗೆ ನಮಗೆ ಉತ್ತರ ಗೊತ್ತಿಲ್ಲ. ದೇವರುಗಳ ಸೃಷ್ತಿ ಮಾಡಿರುವುದೇ ನಾವು! ಒಬ್ಬೊಬ್ಬರದು ಒಂದೊಂದು ನಂಬಿಕೆ, ಆ ನಂಬಿಕೆಯೇ ನಮ್ಮ ಬದುಕಿನ ತಳಹದಿ. ಅನಿಷ್ಚಿತತೆಯೇ ಬದುಕು. ಹೀಗಿರುವಾಗ ಎಲ್ಲ ಘಟನೆಗಳಿಗೆ ದೇವರನ್ನು ದೂಷಿಸುವುದು ಎಷ್ಟು ಸರಿ? ಅನ್ನುವುದು ನನ್ನ ಪ್ರಶ್ನೆ.
Deepa write KVOR Colony nick name story like Kurubi, chupi, muchula, chavi, sherupav, sheruvari