ಜಗದ ಕತ್ತಲೆಯನ್ನೆಲ್ಲ ಹೊಡೆದೋಡಿಸುವ ಬೆಳಕು ಯಾರಿಗೆ ತಾನೆ ಇಷ್ಟವಿಲ್ಲ? ಝಗಮಗಿಸುವ ದೀಪಗಳ ಹಬ್ಬವಾದ ದೀಪಾವಳಿ ಎಂದರೆ ಬಾಲ್ಯದಿಂದಲೂ ಏನೋ ಒಂದು ಆಕರ್ಷಣೆ. ಕಳೆದು ಹೋದ ಅದೆಷ್ಟೋ ದೀಪಾವಳಿಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಈಗಿನ ತರಾವರಿ ಬಣ್ಣದ ಬಲ್ಬುಗಳ ದೀಪಗಳು ಹಿಂದಿನ ಮಣ್ಣಿನ ಹಣತೆಗಳ ಮುಂದೆ ಮಸುಕಾಗಿ ಬಿಡುತ್ತವೆ.
ದೀಪಾವಳಿ ಇನ್ನೂ ತಿಂಗಳಿರುವಾಗಲೇ ಮನೆಯಲ್ಲಿ ಸಡಗರ ಪ್ರಾರಂಭವಾಗುತ್ತಿತ್ತು. ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ ಉದ್ದವಾದ ಕೋಲೊಂದಕ್ಕೆ ಹಳೆಯ ಬಟ್ಟೆಯನ್ನು ಕಟ್ಟಿ ಜೇಡರ ಬಲೆಗಳನ್ನೆಲ್ಲ ಅವ್ವ ತೆಗೆಯುತ್ತಿದ್ದಳು. ನಂತರ ಅದೇ ಕೋಲಿಗೆ ಮದಿ ಹುಲ್ಲಿನ ಕಸಬರಿಗೆಯೊಂದನ್ನು ಕಟ್ಟಿ ಧೂಳು ಕೊಡವುತ್ತಿದ್ದಳು. ಒಳಗಿದ್ದ ವಸ್ತುಗಳನ್ನೆಲ್ಲ ಒಂದೊಂದಾಗಿ ಹೊರಗೆ ಇಡುವುದು, ಅವುಗಳನ್ನು ಒರೆಸುವಂತಹ ಚಿಲ್ಲರೆ ಕೆಲಸಗಳನ್ನು ನಾವು ಅಕ್ಕ-ತಂಗಿಯರೆಲ್ಲ ಹಂಚಿಕೊಳ್ಳುತ್ತಿದ್ದೆವು. ಹಿಂದಿನ ದಿನವೇ ಅಪ್ಪ ಪೇಟೆಯಿಂದ ಸುಣ್ಣದ ಹರಳುಗಳನ್ನು ತಂದು ನೆನೆ ಹಾಕಿರುತ್ತಿದ್ದರು. ದೊಡ್ಡ ಬಾನಿಯೊಂದರಲ್ಲಿ ಸುಣ್ಣದ ಹರಳುಗಳನ್ನು ಸುರುವಿ ಅದರ ಮೇಲೆ ನೀರನ್ನು ಹುಯ್ಯುತ್ತಿದ್ದಂತೆಯೇ “ಹಿಸ್..” ಎಂದು ಶಬ್ದ ಮಾಡುತ್ತ ಹಾಲಿನ ಬಣ್ಣದ ಹೊಗೆ ಏಳುತ್ತಿತ್ತು. ಖತಖತನೆ ಕುದಿಯುವ ಆ ಸುಣ್ಣದ ಹರಳುಗಳನ್ನು ನಿಂತು ನೋಡುವುದೇ ನಮಗೊಂದು ಸಂಭ್ರಮವಾಗಿರುತ್ತಿತ್ತು. ಮರುದಿನ ಬೆಣ್ಣೆಯಂತೆ ಅಳ್ಳಕವಾದ ಸುಣ್ಣದ ಮೇಲೆ ನಿಂತಿರುತ್ತಿದ್ದ ಕೆನೆಯನ್ನು ಅಪ್ಪ ವೀಳ್ಯದೆಲೆಗೆ ಹಚ್ಚಿಕೊಳ್ಳಲು ಒಂದು ಪುಟ್ಟ ಡಬ್ಬಿಗೆ ತೆಗೆಯುತ್ತಿದ್ದರು. ನಂತರ ಅವ್ವ-ಅಪ್ಪ ತಮ್ಮ ಅಂಗೈಗಳಿಗೆ ಗಾಣದ ಎಣ್ಣೆ(ಕುಸುಬೆ ಎಣ್ಣೆ)ಯನ್ನು ಸವರಿಕೊಂಡು ಗೋಡೆಗೆ ಸುಣ್ಣವನ್ನು ಬಳಿಯುತ್ತಿದ್ದರು. ಸಂಜೆಯಾಗುತ್ತಿದ್ದಂತೆಯೇ ನೆಲದ ಮೇಲೆ ಬಿದ್ದ ಸುಣ್ಣದ ಕಲೆಗಳನ್ನೆಲ್ಲ ಒಣ ಬಟ್ಟೆಯಿಂದ ಒರೆಸುತ್ತಿದ್ದೆವು. ನಂತರ ನೆಲವನ್ನು ಶುಭ್ರವಾಗಿ ತೊಳೆದ ನಂತರ ಹೊರಗಿಟ್ಟ ವಸ್ತುಗಳನ್ನೆಲ್ಲ ತಂದು ಜೋಡಿಸುತ್ತಿದ್ದೆವು ಅಂದು ಮಲಗುವಾಗ ಮಧ್ಯರಾತ್ರಿಯೇ ಆಗಿರುತ್ತ್ತಿತ್ತು.
ಹೀಗೆ ಆರಂಭಗೊಳ್ಳುತ್ತಿದ್ದ ಹಸನು ಮಾಡುವ ಕಾರ್ಯಕ್ರಮ ಹಬ್ಬದ ಹಿಂದಿನ ದಿನದವರೆಗೂ ನಡೆಯತ್ತಿತ್ತು. ಹಾಸಿಗೆ ಹೊದಿಕೆಗಳನ್ನು ಮಡಿ ಮಾಡುವುದು, ಪಾತ್ರೆ-ಪಡಗಗಳನ್ನು ಶುಚಿಗೋಳಿಸುವುದು, ಹಬ್ಬಕ್ಕೆಂದು ನಾಲ್ಕೈದು ಬಗೆಯ ಫಳಾರಗಳನ್ನು ತಯಾರಿಸುವುದು ಎಲ್ಲವನ್ನೂ ಅವ್ವ ಹೂವನ್ನೆತ್ತಿದಷ್ಟೇ ಹಗುರವಾಗಿ ಮಾಡಿ ಮುಗಿಸುತ್ತಿದ್ದಳು.
ಹಬ್ಬದ ಮೊದಲ ದಿನ ನರಕ ಚತುರ್ದಶಿಯಂದು ನಸುಕಿನಲ್ಲಿಯೇ ಏಳಬೇಕಿತ್ತು. ಇಲ್ಲದಿದ್ದಲ್ಲಿ ಅಪ್ಪನಿಂದ ನೀರಿನ ಪ್ರೋಕ್ಷಣೆಯಾಗುತ್ತಿತ್ತು. ಅಪ್ಪ ಆಕಾಶಬುಟ್ಟಿ, ತಳಿರು ತೋರಣಗಳನ್ನು ಕಟ್ಟಿ ಹಣತೆಗಳನ್ನು ಹಚ್ಚಿಟ್ಟರೆ ಅವ್ವ ನಮಗೆಲ್ಲ ಒಬ್ಬರಾದ ಮೇಲೊಬ್ಬರಂತೆ ಕರೆದು ತಲೆಗೆ ಬಿಸಿ ಬಿಸಿ ಎಣ್ಣೆಯನ್ನು ತಟ್ಟಿ ಅಭ್ಯಂಜನವನ್ನು ಮಾಡಿಸುತ್ತಿದ್ದಳು. ದೀಪಾವಳಿಯ ದಿನ ಮಾತ್ರ ಹೊಸ ಬಟ್ಟೆಯನ್ನು ಕಾಣುತ್ತಿದ್ದ ನಮಗೆಲ್ಲ ಇನ್ನಿಲ್ಲದ ಸಂಭ್ರಮ. ಅಪ್ಪ, ಅಣ್ಣನಿಗೆ ಆರತಿ ಬೆಳಗಿ ಅವ್ವ ಮಾಡಿಟ್ಟಿರುತ್ತಿದ್ದ ಫಳಾರಕ್ಕೆ ಕೈ ಹಚ್ಚುತ್ತಿದ್ದೆವು.
ಮಾರನೆಯ ದಿನ ಅಮವಾಸ್ಯೆಯಂದು ಲಕ್ಷ್ಮಿಯನ್ನು ಕೂರಿಸಿ ಸಿಂಗಾರಗೊಳಿಸುತ್ತಿದ್ದೆವು. ಹೊಸ ಹೊಸ ನೋಟುಗಳು ಹಾಗೂ ಬೆಳ್ಳಿಯ ನಾಣ್ಯಗಳನ್ನ ಇಟ್ಟು ಕೈ ಮುಗಿದು ಧನ ಕನಕಾದಿಗಳು ಇಮ್ಮಡಿಯಾಗಲಿ ಎಂದು ಬೇಡಿಕೊಳ್ಳುತ್ತಿದ್ದೆವು. ಸಂಜೆ ಹೊಸ ಬಟ್ಟೆಗಳನ್ನು ಧರಿಸಿ ಪರಿಚಯಸ್ಥರ ಅಂಗಡಿಗಳಿಗೆ ತೆರಳಿ ಅಲ್ಲಿಯ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಬಣ್ಣ ಬಣ್ಣದ ಲೈಟಿನ ಸರಗಳು, ದೀಪಗಳಿಂದ ಬೆಳಗುತ್ತಿದ್ದ ಪೇಟೆಯನ್ನ ನೋಡುವುದೇ ಒಂದು ಚೆಂದ. ಜೊತೆಗೆ ಬಗೆ ಬಗೆಯ ಪಟಾಕಿಯ ಸದ್ದಿನಿಂದ ಭಯವಾದರೂ ಒಂದು ರೀತಿಯ ಸಡಗರ ಮನೆ ಮಾಡಿರುತ್ತಿತ್ತು.
ಹಬ್ಬದ ಕೊನೆಯ ದಿನ ಬಲಿ ಪಾಡ್ಯಮಿಯ ದಿನವಂತೂ ನಮಗೆಲ್ಲ ಬಿಡುವಿಲ್ಲದಂತೆ ಕೆಲಸ. ದನಕರುಗಳನ್ನು ಹೊಂದಿದವರ ಮನೆಯಿಂದ ಅಪ್ಪ ಹೇರಳವಾಗಿ ಸಗಣಿಯನ್ನು ತರುತ್ತಿದ್ದರು. ಅವ್ವನಿಗೆ, ಸಾರಿಸಿ ರಂಗೋಲಿ ಇಟ್ಟು ಪಾಂಡವರನ್ನು ಕೂರಿಸುವ ಕೆಲಸ. ಗಟ್ಟಿಯಾದ ಸಗಣಿಯಿಂದ ವೃತ್ತಾಕಾರದಲ್ಲಿ ಪಡಸಾಲೆಯ ಮಧ್ಯ ಭಾಗದಲ್ಲಿ ಗುಳ್ಳವ್ವ ಎಂದು ಹೇಳುವ ಪಾಂಡವರನ್ನು ಮಾಡಿಡುತ್ತಿದ್ದಳು. ಪ್ರತಿ ಬಾಗಿಲಿನ ಅಕ್ಕ ಪಕ್ಕದಲ್ಲೂ, ಅಂಗಳದಲ್ಲೂ, ತುಳಸಿ ಕಟ್ಟೆಯ ಮುಂದೆ ಹೀಗೆ ಎಲ್ಲವನ್ನೂ ಲೆಕ್ಖ ಹಾಕಿದರೆ ಐವತ್ತರಿಂದ ಅರವತ್ತು ಪಾಂಡವರು ವಿರಾಜಮಾನರಾಗಿರುತ್ತಿದ್ದರು. ನಂತರ ಸುಣ್ಣ ಹಾಗೂ ಕ್ಯಾಮಿ (ಕೆಂಪು ಬಣ್ಣದ ಹುಡಿ) ಗಳ ನೀರಲ್ಲಿ ತನ್ನ ಮುಷ್ಠಿಗಳನ್ನು ಅದ್ದಿ ಅಂಗಳದಿಂದ ಅಡುಗೆಯ ಮನೆಯವರೆಗೂ ಅವ್ವ ಪಾಂಡವರ ಹೆಜ್ಜೆಗಳನ್ನು ಇಡುತ್ತಿದ್ದಳು. ನಾವು ಮಕ್ಕಳೆಲ್ಲ ಹೊಲ, ಗದ್ದೆಗಳಗುಂಟ ಹೋಗಿ ಹೊನ್ನಾರಿ ಹೂ, ಉತ್ತರಾಣಿ ಕಡ್ಡಿ, ಚಂಡು ಹೂ, ಗುರೆಳ್ಳು ಗಿಡದ ದಂಟು, ಜೋಳದ ದಂಟುಗಳನ್ನು ಒಟ್ಟು ಮಾಡಿಕೊಂಡು ಬರುತ್ತಿದ್ದೆವು. ಪಾಂಡವರಿಗೆ ಅರಿಷಿನ ಕುಂಕುಮವನ್ನಿಟ್ಟು, ಮೊಸರು ಸುರಿದು ಹೊತ್ತು ತಂದ ಹೂ ದಂಟುಗಳಿಂದ ಸಿಂಗರಿಸುತ್ತಿದ್ದೆವು. ಆದರೆ ಇಂದು ದುಡ್ಡು ಕೊಟ್ಟರೂ ನೂರು ಗ್ರಾಂ ಸಗಣಿ ಹುಟ್ಟಲಾರದು. ಪಾಂಡವರನ್ನು ಕೂರಿಸುವುದು ದೂರದ ಮಾತು. ಕಾಣಬೇಕೆಂದರೆ ಹತ್ತಿರದ ಹಳ್ಳಿಗಳಿಗೇ ಹೋಗಬೇಕು. ಅದರಲ್ಲೂ ಇಂದಿನ ಮಕ್ಕಳು ಸಗಣಿಯನ್ನು ಕಂಡರೆ ಇಸ್ಸೀ… ಎಂದು ಮುಖ ಸಿಂಡರಿಸುತ್ತವೆ.
ಸಂಜೆ ಸೂರ್ಯ ಮುಳುಗುವ ಮುನ್ನವೇ ಮತ್ತೊಮ್ಮೆ ಪಾಂಡವರನ್ನು ಪೂಜಿಸಿ ಆರತಿ ಎತ್ತಿ ಮನೆಯ ಹೆಂಚಿನ ಮೇಲೆ ಇಡಲಾಗುತ್ತಿತ್ತು. ಇದರೊಂದಿಗೆ ದೀಪಾವಳಿಯ ಸಡಗರ ಮುಗಿಯುತ್ತಿತ್ತು. ವರ್ಷದಿಂದ ವರ್ಷಕ್ಕೆ ಮೊಟಕುಗೊಳ್ಳುತ್ತಿರುವ ಆಚರಣೆಗಳು, ಸಂಪ್ರದಾಯಗಳು ತಮ್ಮ ಅಸ್ತಿತ್ವವವನ್ನು ಕಳೆದುಕೊಳ್ಳುತ್ತಿವೆ. ನಮ್ಮಿಂದ ಸಾಧ್ಯವಿರುವ ಮಟ್ಟಿಗಾದರೂ ಆಚರಣೆಗಳನ್ನು ಉಳಿಸಿಕೊಂಡರೆ ನಮ್ಮ ಬಾಲ್ಯದ ಹಬ್ಬಗಳ ಸಡಗರಗಳು ನಮ್ಮ ಮುಂದಿನ ತಲೆಮಾರಿಗೂ ಮುಂದುವರೆಯಬಹುದು.
-ಗೌರಿ.ಚಂದ್ರಕೇಸರಿ, ಶಿವಮೊಗ್ಗ.