ಇಸ್ಪೀಟು ರಾಣಿ: ಜೆ.ವಿ.ಕಾರ್ಲೊ.


ರಶ್ಯನ್ ಮೂಲ: ಅಲೆಕ್ಸಾಂಡರ್ ಪುಷ್ಕಿನ್
ಇಂಗ್ಲಿಷಿನಿಂದ: ಜೆ.ವಿ.ಕಾರ್ಲೊ.

ಅಶ್ವದಳದ ಸೇನಾಧಿಪತಿ ನರುಮೋವನ ವಸತಿ ಗೃಹದಲ್ಲಿ ಇಸ್ಟೀಟ್ ಆಟ ಬಹಳ ಜೋರಾಗಿ ನಡೆದಿತ್ತು. ಚಳಿಗಾಲದ ಆ ರಾತ್ರಿ ಹೇಗೆ ಕಳೆಯಿತೆಂದು ಯಾರಿಗೂ ಅರಿವಾಗಲಿಲ್ಲ. ಅವರೆಲ್ಲಾ ಊಟಕ್ಕೆಂದು ಎದ್ದಾಗ ಬೆಳಗಿನ ಜಾವ ಐದಾಗಿತ್ತು! ಗೆದ್ದವರಿಗೆ ಊಟ ರುಚಿಕರವಾಗಿದ್ದರೆ, ಸೋತವರಿಗೆ ಅದೊಂದು ಯಾಂತ್ರಿಕ ಕರ್ಮವಾಯಿತು. ಕೊನೆಗೂ ಶಾಂಫೇನಿನ ಬಾಟಲಿ ಕೈ ಬದಲಾಯಿಸಿದಾಗ ಅವರಲ್ಲಿ ಹೊಸ ಹುರುಪು ತುಂಬಿ ಬಂದಿತು.

“ಸುರಿನ್? ಏನಪ್ಪ ನಿನ್ನ ಕತೆ?” ಮನೆಯ ಯಜಮಾನ ನರುಮೊವ್ ಕೇಳಿದ.
“ಅಯ್ಯೋ, ಏನಂತ ಹೇಳಲಿ? ಇವತ್ತೂ ಸೋತೆ! ನಿಜ ಹೇಳಬೇಕೆಂದರೆ ನನಗೆ ನಿಜವಾಗಲೂ ಅದೃಷ್ಟವಿಲ್ಲ. ನಾನು ಯಾವತ್ತೂ ಉದ್ರೇಕಗೊಳ್ಳುವುದಿಲ್ಲ. ಶಾಂತಚಿತ್ತದಿಂದಲೇ ಆಡುತ್ತಿರುತ್ತೇನೆ. ಆದರೂ, ಕೊನೆಗೂ ಸೋಲುತ್ತೇನೆ!”
“ನಾನು ನಿನ್ನನ್ನೇ ಗಮನಿಸುತ್ತಿದ್ದೆ. ನಿನ್ನ ಮಾನಸಿಕ ಧೃಡತೆಯ ಬಗ್ಗೆ ನನಗೆ ಅಭಿಮಾನವಿದೆ. ಕೆಲವು ಕ್ಷಣಗಳಿಗೂ ನಿನ್ನ ಮನಸ್ಸು ಚಂಚಲಗೊಳ್ಳಲಿಲ್ಲ. ಕೆಂಪು ಎಲೆಯ ಮೇಲೆ ನಿನ್ನ ದೃಷ್ಟಿ ತಪ್ಪಿ ಕೂಡ ಹೊರಳಲಿಲ್ಲ!?” ನರುಮೊವ್ ಹೇಳಿದ.

“ನರುಮೊವ್, ಈ ಹರ್ಮನನ ಬಗ್ಗೆ ನಿನ್ನ ಅಭಿಪ್ರಾಯವೇನು?” ಊಟ ಮಾಡುತ್ತಿರುವವರ ಮಧ್ಯೆ ಏನೊಂದೂ ಮಾತನಾಡದೆ ಮೌನವಾಗಿದ್ದ ಸೇನಾ ಎಂಜಿನಿಯರನ್ನು ಬೆರಳು ತೋರಿಸಿ ಒಬ್ಬನು ಕೇಳಿದ. .”ಇವನು ತನ್ನ ಜೀವಮಾನದಲ್ಲಿ ಎಂದೂ ಇಸ್ಪೀಟ್ ಎಲೆಯನ್ನು ಹಿಡಿದವನಲ್ಲ ಅಥವ ಯಾವುದೇ ಬಗೆಯ ಜೂಜಾಡಿದವನಲ್ಲ. ಆದರೂ, ಕಿಂಚಿತ್ತೂ ಬೇಸರಿಸದೆ ಬೆಳಗಿನ ಜಾವದವರೆಗೂ ನಮ್ಮ ಮಧ್ಯೆ ಕುಳಿತು ಆಟ ನೋಡುತ್ತಿರುತ್ತಾನಲ್ಲ?!”
ಹರ್ಮನನ ಕೆನ್ನೆಗಳು ಕೆಂಪಗಾದವು. “ನಿಮ್ಮ ಆಟ ನೋಡುವುದೇ ನನಗೊಂದು ಖುಶಿ!” ಅವನು ಹೇಳಿದ. ಮುಂದುವರೆಸಿ, “ಆದರೆ, ಬೇಲಿಯೊಳಗಿನ ಎರಡು ಹಕ್ಕಿ ಹಿಡಿಯಲು ಹೋಗಿ ಕೈಯಲ್ಲಿದ್ದ ಒಂದು ಹಕ್ಕಿಯನ್ನು ಕಳೆದುಕೊಳ್ಳುವ ಪೈಕಿ ನಾನಲ್ಲ!” ಎಂದ.
“ನಮ್ಮ ಹರ್ಮನ್ ಜರ್ಮನ್ ಮೂಲದವನು ಕಣಪ್ಪ. ನಮ್ಮ ಹಾಗೆ ವೃಥಾ ದುಡ್ಡು ಪೋಲು ಮಾಡುವವನಲ್ಲ. ಅವನ ಮುಷ್ಠಿ ತುಸು ಬಿಗಿಯೇ ಎನ್ನಬಹುದು!” ಟಾಮ್ಸ್ಕಿ ಹೇಳಿದ. “ಹರ್ಮನನನ್ನು ಬಿಡಿ. ಅವನ ಪರಿಸ್ಥಿತಿ ಅರ್ಥವಾಗುವಂತಾದ್ದು. ನೀವು ನನ್ನ ಅಜ್ಜಿ ಕೌಂಟೆಸ್ಸ್ ಆನ್ನಾ ಫೆಡೊಟೊವ್ನಾಳ ಬಗ್ಗೆ ಕೇಳ ಬೇಕು. ಅವಳದೊಂದು ವಿಚಿತ್ರ ಸಂಗತಿಯೇ ಸೈ!”
ಇದನ್ನು ಕೇಳಿದಂತೆಯೇ ಎಲ್ಲರ ಕಿವಿಗಳು ನೆಟ್ಟಗಾದವು.

“ಈಗ ನನ್ನಜ್ಜಿ ಇಸ್ಪೀಟ್ ಆಡುವುದನ್ನು ನಿಲ್ಲಿಸಿದ್ದಾಳೆ! ನನ್ನ ಮಟ್ಟಿಗೆ ಇದಕ್ಕಿನ್ನ ಸೋಜಿಗದ ಸಂಗತಿ ಬೇರೊಂದಿಲ್ಲ.”
“ಅದರಲ್ಲೇನು ವಿಶೇಷ? ನನಗೆ ಗೊತ್ತಿರುವಂತೆ ಅವಳಿಗೀಗ ಎಂಭತ್ತು ವರ್ಷಗಳಾದವು..” ನುರುಮೊವ್ ಹೇಳಿದ.
“ಹಾಗಾದರೆ, ನಿನಗೆ ಕಾರಣ ಗೊತ್ತಿಲ್ಲವೆಂದಾಯ್ತು?”
“ಇಲ್ಲ ಮಾರಾಯಾ. ನನಗೆ ಖಂಡಿತ ಗೊತ್ತಿಲ್ಲ!”

“ಹಾಗಾದ್ರೆ ಕೇಳು. ಅರವತ್ತು ವರ್ಷಗಳ ಹಿಂದೆ ನನ್ನ ಅಜ್ಜಿ ಪ್ಯಾರಿಸಿಗೆ ಹೋಗಿದ್ದರು. ಆ ಸಮಯದಲ್ಲಿ ನನ್ನ ಅಜ್ಜಿ ಪ್ಯಾರಿಸಿನ ಮೇಲ್ವರ್ಗದ ಸಮಾಜದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದಳಂತೆ. ಅವಳಿಗೆ “ಮಾಸ್ಕೊ ವೀನಸ್” ಎಂತಲೇ ಕರೆಯುತ್ತಿದ್ದರಂತೆ. ಅವಳದೊಂದು ಕೃಪಾಕಟಾಕ್ಷಕ್ಕೆ ಗಂಡಸರೆಲ್ಲ ಹಾತೊರೆದು ಮುಗಿಬೀಳುತ್ತಿದ್ದರಂತೆ! ರೆವರೆಂಡ್ ರಿಶೆಲ್ಯು ಮಹಾಶಯರೂ ಕೂಡ ಅವಳ ಗುಪ್ತ ಪ್ರೇಮಿ ಆಗಿದ್ದರಂತೆ! (ರೆವರೆಂಡ್ ರಿಶೆಲ್ಯೂ ಒಬ್ಬ ಕ್ರೈಸ್ತ ಕಥೊಲಿಕ್ ಧರ್ಮಾಧಿಕಾರಿಯಾಗಿದ್ದು ನಂತರ ಬಡ್ತಿ ಹೊಂದಿ ಕಾರ್ಡಿನಲ್ ನಾಗಿದ್ದ.) ಆಗ ಸಾಮಾನ್ಯವಾಗಿ ಹೆಂಗಸರು ಫಾರೊ ಎಂಬ ಇಸ್ಪಿಟ್ ಎಲೆಗಳ ಆಟ ಆಡುತ್ತಿದ್ದರು. ಒಂದು ಸಂದರ್ಭದಲ್ಲಿ ನನ್ನ ಅಜ್ಜಿ ಒರ್ಲಿನ್ಸನ ಡ್ಯೂಕನ ಎದುರು ಭಾರಿ ಮೊತ್ತದ ಆಟವನ್ನು ಸೋತಳು. ಮನೆಗೆ ಹೋಗಿ ತಾನು ಸೋತ ಹಣವನ್ನು ತುಂಬಿಸಿಕೊಡಲು ಅಜ್ಜನನ್ನು ಕೇಳಿ೮ದಳು. ನಾನು ನೋಡಿದಂತೆ ನನ್ನಜ್ಜ ಅಜ್ಜಿಯ ಗುಲಾಮನಾಗಿದ್ದ. ಆದರೂ, ಅಷ್ಟೊಂದು ದೊಡ್ಡ ಮೊತ್ತ, ಅಲ್ಲದೆ ಅದೂ ಪರ ದೇಶದಲ್ಲಿ ಹೊಂದಿಸಿಕೊಡುವುದು ಅವನ ಸಾಮರ್ಥ್ಯವನ್ನು ಮೀರಿದ್ದಾಗಿತ್ತು. ಅವನ ತಲೆ ಕೆಟ್ಟು ಹೋಯಿತು. ಆರು ತಿಂಗಳಿನಲ್ಲಿ ನನ್ನ ಅಜ್ಜಿ ಸುಮಾರು ಅರ್ಧ ದಶಲಕ್ಷ ಫ್ರಾಂಕುಗಳನ್ನು ಜೂಜಿನಲ್ಲಿ ಕಳೆದಿದ್ದಳು. ಅವನಿಂದ ಅಷ್ಟು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವೇ ಇರಲಿಲ್ಲ. ಅಜ್ಜ ಕೈ ಎತ್ತಿದ. ಅಜ್ಜಿ ದೊಡ್ಡ ನಾಟಕ ಮಾಡಿದಳು. ಅಜ್ಜನಿಗೆ ಮಂಚದ ಬಳಿ ಬಿಡದೆ ದೂರವಿಟ್ಟಳು. ಆದರೂ ಅಜ್ಜ ಏನೂ ಮಾಡಲಾರದಾದ. ವೈವಾಹಿಕ ಜೀವನದಲ್ಲಿ ಮೊದಲ ಭಾರಿ ಅಜ್ಜಿ ಅಜ್ಜನಲ್ಲಿ ಗೋಗರೆದಳು. ಎಲ್ಲ ಅಸ್ತ್ರಗಳನ್ನು ಉಪಯೋಗಿಸಿ ಕೊನೆಯದಾಗಿ ಹೃದಯ ಕರಗುವಂತೆ ಅಳಲಾರಂಭಿಸಿದಳು. ಆದರೆ ಅಜ್ಜ ಕಲ್ಲಿನ ಮೂರ್ತಿಯಾಗಿದ್ದ.

ಅಜ್ಜಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಕೆಲವು ಸಮಯದ ಹಿಂದೆ ಆಕೆಗೆ ಒಬ್ಬ ವಿಶಿಷ್ಠ ವ್ಯಕ್ತಿಯ ಪರಿಚಯವಾಗಿತ್ತು. ನಿಮಗೆ ಆವನು ಗೊತ್ತಿರಬಹುದು. ಆತ ಕೌಂಟ್ ಸೇಂಯ್ಟ್ ಜರ್ಮೇಯ್ನ್. ಇವನ ಬಗ್ಗೆ ಅನೇಕ ದಂತಕತೆಗಳಿವೆ. ಅವನು ತನ್ನನ್ನು ಒಬ್ಬ ದೇಶಾಂತರ ಯೆಹೂದಿ ಅಂತಲೇ ಪರಿಚಯ ಹೇಳುತ್ತಿದ್ದ. ಆದರೆ ಜನ ಅವನೊಬ್ಬ ಗೂಡಾಚಾರನೆಂದು ಹೇಳುತ್ತಿದ್ದರು. ಅದೇನೇ ಇದ್ದರೂ ಉಚ್ಛವರ್ಗದ ಜನರ ಮಧ್ಯೆ ಸೈಂಟ್ ಜರ್ಮೇಯ್ನ್ ಗೆ ಅಪಾರ ಗೌರವವಿತ್ತು. ಬಹಳಷ್ಟು ಜನ ಅವನ ಸ್ನೇಹಕ್ಕಾಗಿ ಹಾತೊರೆಯುತ್ತಿದ್ದರು. ಇಂದಿಗೂ ಕೂಡ ಅಜ್ಜಿ ಸೈಂಟ್ ಜರ್ಮೇಯ್ನನ್ನು ನೆನೆಸುತ್ತಿರುತ್ತಾಳೆ. ಯಾರಾದರೂ ಅವನ ಬಗ್ಗೆ ಕೆಟ್ಟದ್ದನ್ನು ಮಾತನಾಡಿದರೆ ರೋಷಗೊಳ್ಳುತ್ತಾಳೆ. ಸೈಂಟ್ ಜರ್ಮೇಯ್ನ್ ದುಡ್ಡು ಕಾಸಿನ ವಿಚಾರದಲ್ಲಿ ತುಂಬಾ ಅನುಕೂಲಸ್ತನೆಂದು ಅಜ್ಜಿಗೆ ತಿಳಿದಿತ್ತು. ಅವಳು ಅವನಿಗೊಂದು ಪತ್ರ ಬರೆದು ತನ್ನನ್ನು ತುರ್ತಾಗಿ ಭೇಟಿಯಾಗಬೇಕೆಂದು ಕರೆಸಿಕೊಂಡಳು. ವಯಸ್ಸಾಗಿತ್ತಾದರೂ ಸೈಂಟ್ ಜರ್ಮೇಯ್ನ್ ಅಜ್ಜಿಯ ಕರೆಗೆ ಓಗೊಟ್ಟು ಬಂದು ಬಿಟ್ಟ. ಅಜ್ಜಿಯ ಸ್ಥಿತಿಯ ಬಗ್ಗೆ ಕೇಳಿ ಮರುಕಪಟ್ಟ. ಅಜ್ಜಿ ತನ್ನ ಗಂಡನ ಬಗ್ಗೆ ದೂರು ಹೇಳುತ್ತಾ, ನೀನೇ ನನ್ನ ಗತಿ ಎಂದು ಅವನಿಗೆ ಮನದಟ್ಟು ಮಾಡಿದಳು.

ಸೈಂಟ್ ಜರ್ಮೇಯ್ನ್ ಯೋಚಿಸಲಾರಂಭಿಸಿದ. ಕೊನೆಗೆ,
“ನಾನು ನಿನ್ನನ್ನು ಋಣಮುಕ್ತಗಳಿಸಬಲ್ಲೆನಾದರೂ… ನನ್ನ ಸಾಲ ತೀರುವವರೆಗೂ ಜೀವನ ಪರ್ಯಂತ ನೀನು ಕೊರಗುತ್ತಿರಬೇಕಾಗುತ್ತದೆ. ಇದರಿಂದಾಗಿ ನಿನಗೆ ಮತ್ತಷ್ಟು ಸಂಕಷ್ಟ ಹೇರಲು ನಾನು ತಯಾರಿಲ್ಲ. ಆದರೆ ಒಂದು ದಾರಿ ಇದೆ. ನೀನು ಕಳೆದುಕೊಂಡದ್ದನ್ನು ವಾಪಸ್ಸು ಪಡೆಯುವ ಒಂದು ದಾರಿ ಇದೆ!..
“ಕೌಂಟ್ ಸಾಹೇಬ್ರೇ.. ನಾನು ಏನಂತ ಹೇಳಲಿ! ನಾನು ಸಂಪೂರ್ಣವಾಗಿ ಸೋತು ಹೋದವಳು. ನನ್ನ ಬಳಿ ಒಂದು ಕವಡೆಯೂ ಇಲ್ಲ!” ಎರಡೂ ಕೈಗಳನ್ನೂ ಚೆಲ್ಲುತ್ತಾ ಹೇಳಿದಳು ಕೌಂಟೆಸ್ಸ್.
“ಡಿಯರ್ ಕೌಂಟೆಸ್ಸ್, ನಿನಗೆ ದುಡ್ಡಿನ ಅವಶ್ಯಕತೆಯೇ ಇಲ್ಲ! ನಾನು ಹೇಳುವುದನ್ನು ಸ್ವಲ್ಪ ಏಕಾಗ್ರತೆಯಿಂದ ಕೇಳು.” ಎಂದು ಹೇಳುತ್ತಾ ಸೈಂಟ್ ಜರ್ಮೇಯ್ನ್ ಅವಳ ಕಿವಿಗಳಲ್ಲಿ ಒಂದು ಗುಟ್ಟನ್ನು ಹೇಳಿದ.
ತೂಕಡಿಸುತಿದ್ದವರದ್ದೆಲ್ಲಾ ಕಿವಿಗಳು ನೆಟ್ಟಗಾದವು.
ಟಾಮ್ ಸ್ಕಿ ತನ್ನ ಪೈಪನ್ನು ಉರಿಸಿದ. ಒಂದು ದೀರ್ಘ ಶ್ವಾಸವನ್ನು ಹೊರಬಿಡುತ್ತಾ,
“ಅಂದೇ ಸಂಜೆ ನನ್ನ ಅಜ್ಜಿ ಓರ್ಲಿನ್ಸನ ಡ್ಯೂಕನ ಬಳಿ ಹೋಗಿ ಅವನೊಡನೆ ಮತ್ತೊಮ್ಮೆ ಇಸ್ಪೀಟು ಆಡಲು ತಯಾರಾದಳು. ಅವಳು ಮೂರು ಎಲೆಗಳನ್ನು ಹೆಕ್ಕಿ ಒಂದರ ಹಿಂದೆ ಒಂದು ಆಡಿದಳು. ಎಲ್ಲದರಲ್ಲೂ ಅವಳೇ ಗೆದ್ದಳು. ತಾನು ಸೋತ ಪ್ರತಿ ದಮಡಿಯನ್ನೂ ವಾಪಸ್ಸು ಗೆದ್ದಳು.

“ವ್ಹಾಹ್!!… ತುಂಬಾ ಚೆನ್ನ!!” ಯಾರೋ ವ್ಯಂಗ್ಯದಿಂದ ಹೇಳಿದ.
“ಅಜ್ಜಿ ಕತೆ?!” ಹರ್ಮನ್ ಎಂದ.
“ಎಲೆಗಳನ್ನು ಮೊದಲೇ ಗುರುತಿಸಿಕೊಂಡಿರಬೇಕು!” ಇನ್ನ್ಯಾರೋ ಹೇಳಿದರು.
“ಇಂತಾದ್ದು ಏನೂ ಆಗಿರಲಿಲ್ಲ.” ಟಾಮ್ ಸ್ಕೀ ಗಂಭೀರವಾಗಿ ಹೇಳಿದ.
“ವ್ಹಾಹ್, ಏನೆಂದು ಹೇಳಲಿ ತಮ್ಮಾ!” ನರುಮೊವ್ ಹೇಳಿದ. “ನಿನ್ನಜ್ಜಿ ಮೂರು ಎಲೆಗಳನ್ನು ಹೆಕ್ಕಿ ಮೂರರಲ್ಲೂ ಗೆಲ್ಲುತ್ತಾಳೆ.. ಆದರೆ ನೀನು ಈವರೆಗೂ ಅದರ ರಹಸ್ಯವನ್ನು ಅವಳಿಂದ ತಿಳಿದುಕೊಳ್ಳಲು ಶಕ್ತನಾಗಿಲ್ಲ! ಸೋಜಿಗವೇ ಸೈ!” ಅವನ ದನಿಯಲ್ಲೂ ವ್ಯಂಗ್ಯ ತುಂಬಿತ್ತು.

“ಇಲ್ಲೇ ಇರುವುದು ಮಜಾ! ನನ್ನ ಅಜ್ಜಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಅವರಲ್ಲಿ ನನ್ನ ತಂದೆಯವರೂ ಒಬ್ಬರು. ಇವರೆಲ್ಲಾ ಹುಟ್ಟಾ ಜೂಜುಕೋರರಾಗಿದ್ದರೂ ನನ್ನ ಅಜ್ಜಿ ಮಾತ್ರ ಈ ಇಸ್ಪಿಟ್ ಎಲೆಗಳ ರಹಸ್ಯವನ್ನು ಯಾರಿಗೂ ತಿಳಿಸಿರಲಿಲ್ಲ. ಇದಕ್ಕೆ ಅಪವಾದವೆಂದರೆ ನನ್ನ ಚಿಕ್ಕಪ್ಪ ಕೌಂಟ್ ಇವಾನ್ ಇಲಿಯಿಚ್. ನಿಮಗೆ ಗೊತ್ತಿರಬಹುದು. ನನ್ನ ಈ ಚಿಕ್ಕಪ್ಪ ನಿರ್ಗತಿಕನಾಗಿ ತೀರಿಕೊಂಡ. ತನ್ನ ಯೌವನದಲ್ಲಿ ಈ ಚಿಕ್ಕಪ್ಪ ಝೊರಿಕ್ ನ ಎದುರು ಮುನ್ನೂರು ಸಾವಿರ ರೂಬಲ್ ಗಳನ್ನು ಇಸ್ಪೀಟಿನಲ್ಲಿ ಸೋತಿದ್ದ. ಅವನ ಗತಿ ಬೀದಿ ನಾಯಿಗಿಂತ ಕಡೆಯಾಯ್ತು. ಅವನ ಮೇಲೆ ಕರುಣೆ ಉಕ್ಕಿ ಬಂದು ಅಜ್ಜಿ ಅವನಿಗೆ ಮೂರು ಎಲೆಗಳ ರಹಸ್ಯವನ್ನು ತಿಳಿಸಿದಳು. ಜೊತೆಯಲ್ಲೇ, ಈ ರಹಸ್ಯವನ್ನು ಮತ್ತೆ ಎಂದೂ ಬಳಸುವುದಿಲ್ಲ ಎಂದು ಅವನಿಂದ ಭಾಷೆ ತೆಗೆದುಕೊಂಡಳು.. ಹೀಗೆ ನನ್ನ ಚಿಕ್ಕಪ್ಪ ಝೊರಿಕ್ ನ ಬಳಿ ಮತ್ತೊಮ್ಮೆ ಇಸ್ಪೀಟು ಆಡಿ ತಾನು ಕಳೆದುಕೊಂಡ ಹಣವನ್ನು ಮತ್ತೆ ಪಡೆದುಕೊಂಡ..”
“…ಒಹ್.. ಗಂಟೆ ಐದು ಮುಕ್ಕಾಲಾಯಿತು! ನಾವು ಮಲಗಲಿಕ್ಕೆ ಹೋಗುವುದು ಒಳ್ಳೆಯದು.” ಎನ್ನುತ್ತಾ ಟಾಮ್ ಸ್ಕಿ ಎದ್ದ. ಎಲ್ಲರೂ ಗಡಿಬಿಡಿಯಿಂದ ಎದ್ದು ತಂತಮ್ಮ ಮದಿರೆಯ ಗ್ಲಾಸುಗಳನ್ನು ಖಾಲಿ ಮಾಡಿದರು.

— ೨ —

ಕೌಂಟೆಸ್ಸಾಳು (ಯುರೋಪಿನಲ್ಲಿ ಮೇಲ್ವರ್ಗದ ಸ್ತ್ರೀಯರಿಗೆ ಕೌಂಟೆಸ್ಸ್ ಎಂದೂ, ಗಂಡಸರಿಗೆ ಕೌಂಟ್ ಎಂತಲೂ ಕರೆಯುತ್ತಿದ್ದರು) ತನ್ನ ಡ್ರೆಸ್ಸಿಂಗ್ ರೂಮಿನಲ್ಲಿ ಕನ್ನಡಿಯ ಎದುರಿಗೆ ಆಸೀನಳಾಗಿದ್ದಳು. ಅವಳ ಸುತ್ತ ಮೂರು ಜನ ಪರಿಚಾರಿಕೆಯರು ಅವಳಿಗೆ ಸಹಾಯ ಮಾಡುತ್ತಿದ್ದರು. ಒಬ್ಬಳ ಕೈಯಲ್ಲಿ ಗುಲಾಬಿ ವರ್ಣದ ಪ್ರಸಾಧನ ಪೆಟ್ಟಿಗೆ ಇದ್ದರೆ ಮತ್ತೊಬ್ಬಳ ಕೈಯಲ್ಲಿ ವಿವಿಧ ನಮೂನೆಯ ಹೇರ್ ಪಿನ್ನುಗಳ ಪೆಟ್ಟಿಗೆ ಇತ್ತು. ಮೂರನೆಯವಳ ಕೈಯಲ್ಲಿ ವಿವಿಧ ವರ್ಣದ ರಿಬ್ಬನ್ ಗಳು. ಕೌಂಟೆಸ್ಸಳಿಗೆ ತಾನೊಬ್ಬಳು ಜಗತ್ ಸುಂದರಿ ಎಂಬ ಕಿಂಚಿತ್ ಭ್ರಮೆ ಇರಲಿಲ್ಲವಾದರೂ ಶೃಂಗರಿಸಿಕೊಳ್ಳುವುದು ಅಭ್ಯಾಸಬಲವಾಗಿತ್ತು. ಅದೂ ಎಪ್ಪತ್ತು ವರ್ಷಗಳ ಹಿಂದಿನ ಶೈಲಿಯಲ್ಲಿ. ಅವಳ ಎದುರು ಕಿಟಕಿಯ ಬಳಿ ಒಬ್ಬ ಯುವತಿ ಕುಳಿತು ಅವಳ ಕೆಲಸದಲ್ಲಿ ಮಗ್ನಳಾಗಿದ್ದಳು. ಆಕೆ ಕೌಂಟೆಸ್ಸಳ ಆಪ್ತ ಸಹಾಯಕಿಯಾಗಿದ್ದಳು.
“ಗುಡ್ ಮಾರ್ನಿಂಗ್ ಅಜ್ಜಿ!” ಒಳಗೆ ಬಂದ ಒಬ್ಬ ಯುವ ಸೈನಿಕ ಅಧಿಕಾರಿ ಅವಳನ್ನು ವಂದಿಸಿ. “ನಿನ್ನ ಬಳಿ ಏನೋ ಕೇಳುವುದಿತ್ತು” ಎಂದ.

“ಏನದು ಪಾವ್ಲ್?” ಕೌಂಟೆಸ್ಸ ಅವನೆಡೆಗೆ ತಿರುಗಿದಳು.
“ನನ್ನೊಬ್ಬ ಸ್ನೇಹಿತನನ್ನು ನಿನಗೆ ಭೇಟಿ ಮಾಡಿಸಲೇ ಅಜ್ಜಿ? ಅವನಿಗೆ ಶುಕ್ರವಾರದ ನೃತ್ಯಕ್ಕೆ ಕರೆದುಕೊಂಡು ಬರಲೆ?.
“ಆಯ್ತು, ಆಯ್ತು ಮಗ. ನಿನ್ನೆಯ ನೃತ್ಯ ಹೇಗಿತ್ತು?”
“ಗ್ರೇಟ್, ಗ್ರ್ಯಾಂಡ್ ಮಾ! ಬೆಳಗಿನ ಐದರ ಜಾವದವರೆಗೂ ನೃತ್ಯ ನಡೆಯಿತು… ಕುಮಾರಿ ಎಲೆಟ್ಜ್ ಕಾಯಾ…! ಹೌ ಚಾರ್ಮಿಂಗ್ ಗ್ರ್ಯಾಂಡ್ ಮಾ!”
“ಚಾರ್ಮಿಂಗ್… ಸುಡುಗಾಡು!” ಅಜ್ಜಿ ಮುಖ ಸಿಂಡರಿಸಿಕೊಂಡಳು. “ತನ್ನ ಅಜ್ಜಿ ರಾಜಕುಮಾರಿ ಡಾರಿಯ ಪೆಟ್ರೊವ್ನಾ ಥರನೇ ಇದ್ದಾಳೇನೋ! ಅಂದ ಹಾಗೆ ರಾಜಕುಮಾರಿಗೆ ಈಗ ವಯಸ್ಸಾಗಿರಬೇಕು!”
“ನೀನೇನು ಮಾತಾಡ್ತೀಯಾ ಗ್ರ್ಯಾಂಡ್ ಮಾ?! ರಾಜಕುಮಾರಿ ತೀರಿಕೊಂಡು ಏಳು ವರ್ಷಗಳಾದವು!” ಇಷ್ಟು ಹೇಳಿ ಟಾಮ್ ಸ್ಕೀ ಅವಡುಗಚ್ಚಿದ. ಕೌಂಟೆಸ್ಸಾಳ ಆಪ್ತ ಸಹಾಯಕಿ ಅವನೆಡೆಗೆ ಕಣ್ಣು ಬೀರಿದಳು. ಕೌಂಟೆಸ್ಸಳಿಗೆ ತನ್ನ ಸಮಕಾಲೀನರ ದೇಹಾಂತ್ಯದ್ದ ಬಗ್ಗೆ ಯಾರೂ ಹೇಳುತ್ತಿರಲಿಲ್ಲ.

ಆದರೆ ಈ ಸುದ್ಧಿಗೆ ಕೌಂಟೆಸ್ಸ ವಿಶೇಷ ಮಹತ್ವ ನೀಡಲಿಲ್ಲ.
“ರಾಜಕುಮಾರಿ ತೀರಿಕೊಂಡಳಾ?! ನೀವ್ಯಾರೂ ನನಗೆ ಈ ವಿಚಾರವನ್ನೇ ಹೇಳಲಿಲ್ಲ! ನಮಗೆ ‘ಗೌರವವೆತ್ತ ಪರಿಚಾರಿಕೆಯರು’ ಎಂದು ಸ್ವತಃ ರಾಣಿಯೇ ನೇಮಿಸಿದ್ದಳು. ಅವಳು ಮತ್ತೊಮ್ಮೆ ಈ ಬಗ್ಗೆ ಮೊಮ್ಮಗನಿಗೆ ವಿಶದವಾಗಿ ವಿವರಿಸಿದಳು,
“ನನಗೆ ಸ್ವಲ್ಪ ಮೇಲೆಬ್ಬಿಸೋ ಮಗಾ..” ಕತೆಯನ್ನು ಮುಗಿಸುತ್ತಾ ಕೌಂಟೆಸ್ಸ ಟಾಮ್ ಸ್ಕಿಗೆ ಹೇಳಿದಳು. “ಲಿಝಾಂಕಾ… ನನ್ನ ನಶ್ಯದ ಡಬ್ಬಿ ಎಲ್ಲಿದೆಯೇ?”
ಕೌಂಟೆಸ್ಸ ಎದ್ದು ತನ್ನ ಮೂವರು ಪರಿಚಾರಿಕೆಯರ ಜತೆ ಡ್ರೆಸ್ಸಿಂಗ್ ರೂಮಿಗೆ ಹೋದಳು. ಟಾಮ್ ಸ್ಕಿ ಒಬ್ಬನೇ ಅವಳ ಆಪ್ತ ಸಹಾಯಕಿಯ ಜತೆ ಉಳಿದುಕೊಂಡ.
“ನೀವು ಕೌಂಟೆಸ್ಸಳಿಗೆ ಭೇಟಿ ಮಾಡಿಸಲಿಚ್ಛಿಸುತ್ತಿರುವ ಸ್ನೇಹಿತನ್ಯಾರಿರಬಹುದು?” ಕೌಂಟೆಸ್ಸಳ ಸಹಾಯಕಿ ಲಿಜಾವೆತಾ ಇವಾನೊವಾ ತಗ್ಗಿದ ಸ್ವರದಲ್ಲಿ ಕೇಳಿದಳು.
“ನುರುಮೊವ್ ಅಂತ. ನೀನು ಅವನನ್ನು ಬಲ್ಲೆಯಾ?”
“ಇಲ್ಲ. ಸೈನಿಕನೋ ಸಾಮಾನ್ಯನೋ?”
“ಸೈನ್ಯದವನು.”
“ಸೈನ್ಯದಳದವನೋ ಇಂಜಿನಿಯರ್?”
“ಅಶ್ವದಳದವನು. ಇಂಜಿನಯರ್ ಏಕಂದೆ ?”
ಅವಳು ಉತ್ತರಿಸಲಿಲ್ಲ. ಸುಮ್ಮನೆ ನಗೆಯಾಡಿದಳಷ್ಟೇ.
“ಪಾವ್ಲ್?” ಕೌಂಟೆಸ್ಸಾ ಡ್ರೆಸ್ಸಿಂಗ್ ರೂಮಿನಿಂದಲೇ ಕೂಗಿದಳು. “ನನಗೆ ಕೆಲವು ಕಾದಂಬರಿಗಳನ್ನು ಕಳುಹಿಸು ಮಗ. ಈಗಿನ ಕಾಲದವು ಬೇಡ, ನೆನಪಿರಲಿ.”

“ಈಗಿನವು ಅಂದರೆ ಯಾವುದಜ್ಜಿ?”
“ಅವೇ, ಕತಾನಾಯಕ ತನ್ನ ತಂದೆಯನ್ನೋ ತಾಯಿಯನ್ನೋ ಕತ್ತು ಹಿಚುಕಿ ಅಥವಾ ನೀರಿಗೆ ನೂಕಿ ಸಾಯಿಸುವುದು.. ಇಂತ ದೃಶ್ಯಗಳು ನನ್ನನ್ನು ಅಸ್ವಸ್ಥಳನ್ನಾಗಿ ಮಾಡುತ್ತವೆ.”
:”ಅಂತ ಕಾದಂಬರಿಗಳನ್ನು ಈಗ ಯಾರೂ ಬರೆಯುವುದಿಲ್ಲ ಅಜ್ಜಿ. ನಿನಗೆ ರಶ್ಯನ್ ಕಾದಂಬರಿಗಳನ್ನು ತರಲೇ?”
“ರಶ್ಯನ್ ಕಾದಂಬರಿಗಳೂ ಉಂಟೆ! ಹಾಗಾದ್ರೆ ಅವುಗಳನ್ನೇ ತಾ.”
“ಆಯ್ತು ಅಜ್ಜಿ, ನಾನು ಹೊರಟೆ. ಗುಡ್ ಬೈ ಲಿಜಾವೆತಾ ಇವಾನೊವಾ!” ಅವನು ಹೊರನಡೆದ.
ಆ ಕೊಠಡಿಯಲ್ಲಿ ಲಿಜಾವೆತಾ ಒಬ್ಬಳೇ ಆದಳು. ತಾನು ಮಾಡುತ್ತಿದ್ದ ಕೆಲಸವನ್ನು ನಿಲಿಸಿ ಅವಳು ಕಿಟಕಿಯಿಂದ ಹೊರ ನೋಡಿದಳು. ಕೆಲವು ಕ್ಷಣಗಳ ನಂತರ ಆ ರಸ್ತೆಯ ಮುಂದಿನ ತಿರುವಿನ ಬಳಿಯ ಕಟ್ಟಡದ ಬಳಿ ಒಬ್ಬ ಯುವಕ ಗೋಚರಿಸಿದ. ಅಪ್ರಜ್ಞಾಪೂರ್ವಕವಾಗಿ ಲಿಜಾವೆತಾಳ ಕೆನ್ನೆಗಳಿಗೆ ರಂಗೇರಿತು. ಅವಳು ತಕ್ಷಣ ಮುಖ ತಿರುಗಿಸಿ ತನ್ನ ಎಂದಿನ ಕಾರ್ಯದಲ್ಲಿ ವ್ಯಸ್ತಳಾದಳು. ಅಷ್ಟರಲ್ಲಿ ಕೌಂಟೆಸ್ಸಳೂ ತಯಾರಾಗಿ ಬಂದಳು.

“ನಾನು ತಯಾರಾಗಿದ್ದೇನೆ ಲಿಜಾವೆತಾ. ಸಾರೋಟಿಗೆ ಹೇಳಿ ಕಳುಹಿಸು.” ಕೌಂಟೆಸ್ಸ ಅಪ್ಪಣೆ ಕೊಟ್ಟಳು.
ಲಿಜಾವೆತಾ ಎದ್ದು ತಾನು ಹೆಣಿಯುತ್ತಿದ್ದ ವಸ್ತ್ರವನ್ನು ಮಡಚಿ ಪಕ್ಕಕ್ಕಿಟ್ಟಳು.
“ನೀನಿನ್ನೂ ಏನು ಮಾಡುತ್ತಿದ್ದೀಯಾ ಲಿಜಾವೆತಾ? ಕಿವುಡಿಯಾಗಿಲ್ಲ ತಾನೆ? ಬೇಗ ಸಾರೋಟಿಗೆ ಹೇಳು.” ಕೌಂಟೆಸ್ಸ ಅವಸರಿಸಿದಳು.
ಅಷ್ಟರಲ್ಲಿ ಸೇವಕನೊಬ್ಬ ಬಂದು, ಪಾವ್ಲ್ ಅಲೆಗ್ಸಾಂಡರೊವಿಚ್ ಕೊಟ್ಟನೆಂದು ಕೆಲವು ಪುಸ್ತಕಗಳನ್ನು ತಂದು ಕೊಟ್ಟ.
“ಲಿಜಾವೆತಾ, ನೀನೆಲ್ಲಿಗೆ ಹೋಗುತ್ತಿದ್ದೀಯಾ? ಇಲ್ಲಿಗೆ ಬಾ. ಆ ಸಾರೋಟು ಅಲ್ಲೇ ಇರಲಿ. ಇನ್ನೂ ಸಮಯವಿದೆ. ಮೊದಲು ಈ ಪುಸ್ತಕ ತೆರೆದು ಓದಿ ಹೇಳು.” ಎಂದಳು.
ಲಿಜಾವೆತಳು ಒಂದು ಪುಸ್ತಕವನ್ನು ತೆರೆದು ಓದತೊಡಗಿದಳು. ಮಧ್ಯದಲ್ಲಿ, ” ನಿನ್ನ ಗಂಟಲಿಗೆ ಏನಾಗಿದೆಯೇ ಮಾರಾಯ್ತಿ, ಸ್ವಲ್ಪ ಜೋರಾಗಿ ಓದು.” ಎಂದಳು ಕೌಂಟೆಸ್ಸಾ ಸಿಡುಕುತ್ತಾ. ಲಿಜಾವೆತಾ ಎರಡು ಮೂರು ಪುಟಗಳನ್ನು ಓದುವಷ್ಟರಲ್ಲಿ ಕೌಂಟೆಸ್ಸಾ ಆಕಳಿಸಲಿಕ್ಕೆ ಶುರು ಮಾಡಿದಳು.
“ಸಾಕು ಬಿಡೇ.. ಮುಚ್ಚು ಅದನ್ನು. ಏನಂತ ದರಿದ್ರ ಕತೆ ಬರಿತಾರೋ! ಧನ್ಯವಾದಗಳು ಅಂತ ಹೇಳಿ ಆ ಪುಸ್ತಕಗಳನ್ನು ಪಾವ್ಲ್ ಗೇ ಹಿಂದಿರುಗಿಸು. ನಿನ್ನ ಸಾರೋಟು ಎಲ್ಲೋಯ್ತೇ ಬಿನ್ನಾಣಗಿತ್ತಿ? ನಿನಗೆ ಎಷ್ಟು ಸಲ ಹೇಳಬೇಕೆಂದು ನನಗೆ ಗೊತ್ತಾಗುತ್ತಿಲ್ಲ!” ಎನ್ನುತ್ತಾ ಕೌಂಟೆಸ್ಸ ಗೊಣಗುಟ್ಟತೊಡಗಿದಳು
ಲಿಜಾವೆತಾ ಕಿಟಕಿಯಿಂದ ಕೆಳಗೆ ಇಣುಕಿದಳು.

“ಸಾರೋಟು ಬಂದು ನಿಂತಿದೆ”
“ಓಹೋ.. ನೀನು ಮೇಡಮ್ಮು ಇನ್ನೂ ತಯಾರಾಗಿಲ್ಲ! ಪ್ರತಿಭಾರಿ ನೀನು ತಯಾರಾಗಿ ಹೊರಡುವುದಕ್ಕೆ ನಾನು ಕಾಯಬೇಕು!” ಕೌಂಟೆಸ್ಸ್ ಎಗರಾಡಿದಳು.
ಲಿಜಾವೆತಾ ಅವಸರವಸರವಾಗಿ ಒಳಗೋಡಿದಳು. ಅವಳು ಹೋಗಿ ಎರಡು ನಿಮಿಷಗಳೂ ಆಗಿರಲಿಲ್ಲ. ಕೌಂಟೆಸ್ಸ್ ಗಂಟೆಯನ್ನು ಬಾರಿಸತೊಡಗಿದಳು.
ಲಿಜಾವೆತಾ ಓಡೋಡುತ್ತಾ ಹೊರಬಂದಳು.
“ಆಹಾ! ಕೊನೆಗೂ ಬಂದೇ ಬಿಟ್ಟಳಮ್ಮಾ!…. ವ್ಹಾ.. ವ್ಹಾ..ವ್ಹಾ ಇಷ್ಟೆಲ್ಲ ಶೃಂಗಾರ ಯಾರಿಗಾಗಿಯೋ!! ನೋಡೇ ಹುಡುಗಿ, ಇವತ್ತು ನಾವು ಹೊರಗೆ ಹೋಗುವುದೇ ಬೇಡ. ವಾತಾವರಣ ಯಾಕೋ ಸರಿ ಕಾಣುತ್ತಿಲ್ಲ. ಕುದುರೆಗಳನ್ನು ಬಿಚ್ಚಲು ಹೇಳಿ ಕಳುಹಿಸು… ಅಲ್ಲಲ್ಲಲ್ಲೇ… ನೀನು ಇಷ್ಟೆಲ್ಲ ಸಿಂಗರಿಸಿಕೊಂಡಿದ್ದು ಸುಮ್ಮನೇ ಆಯ್ತಲ್ಲೇ!..”
“ದೇವರೇ, ನನ್ನದೂ ಒಂದು ಬಾಳೇ..” ಲಿಜಾವೆತಾ ತನ್ನಷ್ಟಕ್ಕೆ ರೋಧಿಸತೊಡಗಿದಳು.

ಲಿಜಾವೆತಾ ಹೀಗೆ ರೋಧಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ಕೌಂಟೆಸ್ಸ ಮೂಲತಃ ಕೆಟ್ಟ ಹೆಂಗಸರಾಗಿರಲಿಲ್ಲ. ಕುಲೀನ ಮನೆತನದಲ್ಲಿ ಹುಟ್ಟಿ ಬೆಳೆದ ಅವಳಿಗೆ ಆ ವರ್ಗಕ್ಕೆ ತಕ್ಕ ದೊಡ್ಡಸ್ತಿಕೆ, ಆಹಂಕಾರ ಎಲ್ಲವೂ ಧಾರಾಳವಾಗಿ ಲಭಿಸಿತ್ತು. ಅದಲ್ಲದೆ ಅವಳ ಇಳಿ ವಯಸ್ಸು. ಈಗ ಹೇಳಿದ್ದನ್ನು ಮತ್ತೊಂದು ಗಳಿಗೆಯಲ್ಲಿ ಮರೆಯುತ್ತಿದ್ದಳು. ವಯಸ್ಸಿಗನುಗುಣವಾದ ಕಿರಿಕಿರಿ ಅವಳಲ್ಲಿತ್ತು. ಅವಳು ಯಾವುದೇ ಸಮಾಜಿಕ ಕಾರ್ಯಕ್ರಮಗಳನ್ನು ಬಿಡದೆ ಹಾಜರಾಗುತ್ತಿದ್ದಳು. ಕಾಲದ ಬದಲಾವಣೆಯ ಬಗ್ಗೆ ಅವಳು ತಲೆ ಕೆಡಿಸಿಕೊಂಡಿರಲಿಲ್ಲ. ಅವಳ ಯೌವನದ ಕಾಲದ ಫ್ಯಾಶನನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಳು. ಅವಳಿಗೆ ಎಲ್ಲರೂ ಎದುರು ಗೌರವ ಕೊಟ್ಟರೂ ಬೆನ್ನ ಹಿಂದೆ ನಗೆಯಾಡುತ್ತಿದ್ದರು. ಇದರ ಮಧ್ಯೆ ಲಿಜಾವೆತಾಳ ಸ್ಥಿತಿ ಮಾತ್ರ ಚಿಂತಾಜನಕವಾಗಿತ್ತು. ಮನೆ ತುಂಬಾ ಕೌಂಟೆಸ್ಸಳ ಪುರಾತನ ಪರಿಚಾರಿಕೆಯರೇ ತುಂಬಿಕೊಂಡಿದ್ದರು ಹಾಗೂ ಅವರ ಮೇಲೆ ಅವಳಿಗೆ ಕಿಂಚಿತ್ತೂ ನಿಯಂತ್ರಣವಿರಲಿಲ್ಲ. ಕೌಂಟೆಸ್ಸಾಳಿಗೆ ಟೀ ಕಾಸಿ ಕೊಡುವ ಜವಬ್ಧಾರಿ ಲಿಜಾವೆತಾಳ ಮೇಲೆ ಬಿದ್ದಿತ್ತು. ಒಂದೇ ಸಕ್ಕರೆ ಜಾಸ್ತಿಯಾಗಿದೆ ಅಥವಾ ಕಡಿಮೆಯಾಗಿದೆ ಎಂದು ಕೌಂಟೆಸ್ಸಾ ಅವಳಿಗೆ ಪ್ರತಿಭಾರಿಯೂ ಮಂಗಳಾರತಿ ಎತ್ತುತ್ತಿದ್ದಳು. ಕಥೆಗಳನ್ನು ಓದಲು ಹೇಳುತ್ತಾ ಲೇಖಕನ ತಪ್ಪುಗಳನ್ನು ಇವಳ ಮೇಲೆ ಹೊರಿಸುತ್ತಿದ್ದಳು. ತಿರುಗಾಡಲು ಎಂದು ಕರೆದುಕೊಂಡು ಹೋಗಿ ಹವಮಾನ ಕೆಟ್ಟರೆ ಇವಳನ್ನು ಶಪಿಸುತ್ತಿದ್ದಳು. ಲಿಜಾವೆತಾಳಿಗೆ ಇಂತಿಷ್ಟು ಸಂಬಳ ಎಂದು ಗೊತ್ತು ಮಾಡಿದ್ದರೂ, ಅದು ಇದುವರೆಗೂ ಅವಳ ಕೈಗೆ ಸಿಕ್ಕಿರಲಿಲ್ಲ. ಆದರೂ ಅವಳು ಎಲ್ಲರಂತೆಯೇ ಉಡಬೇಕಿತ್ತು.. ಕೌಂಟೆಸ್ಸಳ ಸಮಾಜದಲ್ಲಿ ಅವಳನ್ನು ಎಲ್ಲರೂ ಗುರುತಿಸುತ್ತಿದ್ದರಾದರೂ ಯಾರೂ ಗೌರವಿಸುತ್ತಿರಲಿಲ್ಲ. ಸೌಂಧರ್ಯದಲ್ಲಾಗಲೀ ನಡತೆಯಲ್ಲಾಗಲೀ ಲಿಜಾವೆತಾ ಕುಲೀನ ಹೆಣ್ಣು ಮಕ್ಕಳಿಗಿಂತ ನೂರು ಪಾಲು ಮುಂದಿದ್ದರೂ, ದೂರಾಲೋಚನೆಯ ಹುಡುಗರು ಮಾತ್ರ ಕುಲೀನ ಮನೆತನದ ಹೆಣ್ಣುಮಕ್ಕಳು ನೃತ್ಯಕ್ಕೆ ಸಿಗದಿದ್ದಾಗ ಮಾತ್ರ ಅವಳನ್ನು ಆರಿಸಿಕೊಳ್ಳುತ್ತಿದ್ದರು! ಆದರೂ, ತನ್ನೆಲ್ಲಾ ಸಂಕಷ್ಟಗಳಿಂದ ಪಾರು ಮಾಡಿ ತನಗೆ ಹೊಸ ಬಾಳನ್ನು ದಯಪಾಲಿಸುವ ಯುವಕನ್ಯಾರದರೂ ಸಿಕ್ಕಾನೆಯೇ ಎಂದು ಅವಳು ಎದುರುನೋಡುತ್ತಾ ಕರಗಿಹೋಗುತ್ತಿದ್ದಳು.

ಅಂದು ಬೆಳಿಗ್ಗೆ ಎಂದಿನಂತೆ ಲಿಜಾವೆತಾ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಹೆಣಿಗೆ ಕೆಲಸದಲ್ಲಿ ಮಗ್ನಳಾಗಿದ್ದಳು. ಆಕಸ್ಮತ್ತಾಗಿ ಅವಳ ದೃಷ್ಟಿ ಕೆಳಗೆ ರಸ್ತೆಯ ಮೇಲೆ ಹೋಯಿತು. ಸಮವಸ್ತ್ರ ಧರಿಸಿದ್ದ ಯುವಕನೊಬ್ಬ ಮೇಲೆ, ತನ್ನ ಕಿಟಕಿಯ ಮೇಲೆಯೇ ದೃಷ್ಟಿ ನೆಟ್ಟು ನಿಂತಿರುವುದು ಅವಳಿಗೆ ಕಾಣಿಸಿತು. ಅವನ ಸಮವಸ್ತ್ರದಿಂದಾಗಿ ಅವನು ಇಂಜಿನಿಯರಿಂಗ್ ದಳದವನೆಂದು ಪತ್ತೆ ಹಚ್ಚುವುದು ಅವಳಿಗೆ ಕಷ್ಟವಾಗಲಿಲ್ಲ.ಲಿಜಾವೆತಾ ತಲೆ ತಗ್ಗಿಸಿ ತನ್ನ ಕೆಲಸದಲ್ಲಿ ಮಗ್ನಳಾಗಲು ಪ್ರಯತ್ನಿಸಿದಳು. ಐದು ನಿಮಿಷಗಳ ನಂತರ ಅವಳು ಅಪ್ರಜ್ಞಾಪೂರ್ವಕವಾಗಿ ಮತ್ತೆ ಕೆಳಗೆ ದೃಷ್ಟಿ ಹರಿಸಿದಳು. ಆ ಯುವಕ ಹಾಗೆಯೇ ನಿಂತಿದ್ದ! ಅವಳು ಮತ್ತೆ ತನ್ನ ಕೆಲಸದಲ್ಲಿ ನಿರತಳಾದಳು. ಮುಂದಿನ ಒಂದು ತಾಸು ಅವಳು ಕೆಳಗೆ ನೋಡಲೇ ಇಲ್ಲ. ಊಟಕ್ಕೆ ಕರೆ ಬಂದಾಗ ಅವಳು ಎದ್ದಳು. ಅಪ್ರಯತ್ನಪೂರ್ವಕವಾಗಿ ಮತ್ತೆ ಕೆಳಗೆ ನೋಡಿದಳು. ಆ ಯುವಕ ಆಫೀಸರ್ ಹಾಗೆಯೇ ನಿಂತಿದ್ದ. ಹಿ ಸಂಗತಿಯಿಂದ ಅವಳು ಕೊಂಚ ವಿಚಲಿತಳಾದಳು. ಊಟವಾದ ನಂತರ ಲಿಜಾವೆತಾ ಅರೆಮನಸ್ಸಿನಿಂದ ಕಿಟಕಿಯ ಬಳಿ ಹೋಗಿ ಬಗ್ಗಿ ಕೆಳಗೆ ನೋಡಿದಳು. ಈ ಭಾರಿ ಆ ಆಫೀಸರ್ ಅಲ್ಲಿ ಕಾಣಿಸಲಿಲ್ಲ. ಅವಳು ಈ ಘಟನೆಯನ್ನು ಅಲ್ಲಿಯೇ ಮರೆತುಬಿಟ್ಟಳು.

ಎರಡು ದಿನಗಳ ನಂತರ ಲಿಜಾವೆತಾ ಕೌಂಟೆಸ್ಸಳೊಂದಿಗೆ ಸಾರೋಟು ಹತ್ತುವುದರಲ್ಲಿದ್ದಳು.. ಅಷ್ಟರಲ್ಲಿ ಅದೇ ಯುವಕ ಆಫಿಸರ್ ಅವಳಿಗೆ ಮತ್ತೊಮ್ಮೆ ಕಾಣಸಿಕ್ಕಿದ. ಅವನು ಸಾರೋಟಿನ ಬದಿಯಲ್ಲೇ ಎಂಬಂತೆ ನಿಂತಿದ್ದ.. ಅವನ ಉಣ್ಣೆಯ ಕೋಟಿನ ಕಾಲರ್ ಅವನ ಮುಖ ಮುಚ್ಚಿತ್ತು. ಆದರೂ ಅವನ ಕಪ್ಪು ಕಣ್ಣುಗಳು ಆ ಮಬ್ಬುಗತ್ತಲೆಯಲ್ಲೂ ಮಿಂಚುತ್ತಿದ್ದವು. ಯಾಕೋ ಲಿಜಾವೆತಾಳಿಗೆ ಹೆದರಿಕೆಯಾಯಿತು. ಅವಳು ಮೆಲ್ಲಗೆ ಕಂಪಿಸತೊಡಗಿದಳು.

ಮನಗೆ ಹೋಗುತ್ತಿದ್ದಂತೆ ಲಿಜಾವೆತಾ ತನ್ನ ಕಿಟಕಿಯನ್ನು ತೆರೆದು ಕೆಳಗೆ ನೋಡಿದಳು. ಅವನು ಅಲ್ಲೇ ನಿಂತಿದ್ದ. ಅವನ ದಿಷ್ಟಿ ಕಿಟಕಿಯ ಮೇಲೆಯೇ ನೆಟ್ಟಿತ್ತು. ಅವಳು ತಕ್ಷಣ ವಾಪಸ್ಸು ಬಂದಳು. ಒಂದು ಅವ್ಯಕ್ತ ಭಾವನೆಯಿಂದ ಪುಳಕಿತಳಾದಳು.
ಅಂದಿನಿಂದ ಇದೊಂದು ದಿನನಿತ್ಯದ ರೂಢಿಯಾಯಿತು. ಪ್ರತಿನಿತ್ಯ ಅಂತಷ್ಟು ವೇಳೆಯಲ್ಲಿ ಅವನು ಲಿಜಾವೆತಾಳ ಕಿಟಕಿಯ ಬಳಿ ನಿಂತುಕೊಂಡು ಮೇಲೆ ನೋಡುತ್ತಿದ್ದ. ಹೀಗೆ, ಅವರ ಮಧ್ಯೆ ಒಂದು ವಿಧದ ಬಾಂಧವ್ಯ ಬೆಳೆಯಿತು. ಅವನು ಬಂದು ಕಿಟಕಿಯ ಕೆಳಗೆ ನಿಂತುಕೊಳ್ಳುವ ಸಮಯ ಅವಳಿಗೆ ಹೇಗೋ ಗೊತ್ತಾಗುತ್ತಿತ್ತು ಹಾಗೂ ಅವಳು ಕಿಟಕಿಯಿಂದ ಕೆಳಗೆ ಇಣುಕುತ್ತಿದ್ದಳು.ಅವಳೂ ಧೈರ್ಯದಿಂದ ಅವನ ದೃಷ್ಟಿಗೆ ದೃಷ್ಟಿ ಕೊಡಹತ್ತಿದಳು. ಆ ಹೊತ್ತಿನಲ್ಲಿ ಅವನ ಕೆನ್ನೆಗಳೂ ಕೆಂಪೇರುತ್ತಿದ್ದುದ್ದು ಲಿಜಾವೆತಾಳ ಸೂಕ್ಷ್ಮ ಗಮನಕ್ಕೆ ಬೀಳದೆ ಹೋಗುತ್ತಿರಲಿಲ್ಲ. ಒಂದು ವಾರದ ನಂತರ ಲಿಜಾವೆತಾ ಅಪರಿಚಿತ ಯುವಕನನ್ನು ನೋಡಿ ಮುಗುಳ್ನಗತೊಡಗಿದಳು.
ಒಬ್ಬ ಯುವಕ ಆಫೀಸರನನ್ನು ಭೇಟಿ ಮಾಡಿಸುತ್ತೇನೆಂದು ಟಾಮ್ಸ್ಕಿ ಕೌಂಟೆಸ್ಸಳಿಗೆ ಹೇಳಿದಾಗ ಲಿಜಾವೆತಾಳ ಕಿವಿಗಳು ನೆಟ್ಟಗಾಗಿದ್ದವು. ಆದರೆ ಅವನು ಇಂಜಿನಿಯರಿಂಗ್ ದಳದವನಲ್ಲವೆಂದು ಗೊತ್ತಾಗಿ ನಿರಾಶಳಾಗಿದ್ದಳು ಮತ್ತು ತನ್ನ ಗುಟ್ಟು ಟಾಮ್ಸ್ಕಿಗೇನಾದ್ರೂ ಗೊತ್ತಾಗಿ ಬಿಟ್ಟಿತೇ ಎಂದು ಆತಂಕಪಟ್ಟಿದ್ದಳು.

ಹರ್ಮನ್, ಜರ್ಮನ್ ಸಂಜಾತನಾಗಿದ್ದರೂ ಅವನ ತಂದೆ ರಶ್ಯನ್ ನಿವಾಸಿಯಾಗಿದ್ದ, ತಂದೆಯ ಕಡೆಯಿಂದ ಅವನಿಗೆ ಒಂದು ಸಣ್ಣ ಮೊತ್ತ ಬಳುವಳಿಯಾಗಿ ಲಭಿಸಿತ್ತು. ಈ ಯುವಕ ಹರ್ಮನ್ ಇತರೆ ಯುವಕರಂತಲ್ಲ. ತಂದೆಯಿಂದ ಬಂದ ಹಣವನ್ನು ಅವನು ಕಿಂಚಿತ್ತೂ ಮುಟ್ಟಿರಲಿಲ್ಲ.. ಅನಾವಶ್ಯವಾಗಿ ಅವನು ದುಡ್ಡು ಖರ್ಚು ಮಾಡುತ್ತಿರಲಿಲ್ಲ. ಅವನ ಪಗಾರದಲ್ಲೇ ದಿನದೂಡುತ್ತಿದ್ದ. ಸ್ವಭಾವದಿಂದ ಮಹತ್ವಾಕಾಂಕ್ಷಿಯಾಗಿದ್ದ. ಈ ವರೆಗೆ ಅವನೂ ಯಾರಿಗೂ ಔತಣ ಕೊಟ್ಟವನಲ್ಲ. ಜೀವನದಲ್ಲಿ ಅವನಿಗೊಂದು ಉದ್ಧೇಶವಿತ್ತು. ಆದ್ದರಿಂದ ಅವನು ತನ್ನ ಪ್ರಾಯದ ಇತರೆ ಹುಡುಗರಿಗಿಂತ ಭಿನ್ನನಾಗಿದ್ದ. ಮೂಲತಃ ಅವನೊಬ್ಬ ಜುಗಾರೀಯಾಗಿದ್ದರೂ ಕನಸಿನ ಬಾಲಕ್ಕೆ ಜೋತು ಬೀಳುವಷ್ಟು ಹುಚ್ಚನೂ ಆಗಿರಲಿಲ್ಲ. ಆದರೂ, ಭಾಗವಹಿಸದಿದ್ದರೂ, ಇಡೀ ರಾತ್ರಿ ಜೂಜಾಟದ ಮನೆಯಲ್ಲಿ ಕುಳಿತು ನೋಡುವಷ್ಟು ಹುಚ್ಚನಾಗಿದ್ದ.

ಕೌಂಟೆಸ್ಸಳ ಮೂರು ಎಲೆಗಳ ವಿಚಾರವಾಗಿ ಹರ್ಮನ್ ತುಂಬಾನೆ ತಲೆಕೆಡಿಸಿಕೊಂಡಿದ್ದ. ಹಗಲು ರಾತ್ರಿ ಅವನ ಮನಸ್ಸಿನೊಳಗೆ ಅದೇ ವಿಚಾರ ಮಥಿಸುತ್ತಿತ್ತು. “ಹೀಗೊಂದು ವೇಳೆ ಕೌಂಟೆಸ್ಸ ಈ ಮೂರು ಕಾರ್ಡುಗಳ ರಹಸ್ಯವನ್ನು ನನಗೆ ತಿಳಿಸುವಂತಳಾಗಿದ್ದರೆ?!.. ನಾನೂ ಯಾಕೆ ಒಂದು ಕೈ ನೋಡಬಾರದು?.. ನಾನು ಅವಳನ್ನು ಭೇಟಿ ಮಾಡಿ ಆಕೆಯ ಆಪ್ತತೆ ಗಳಿಸಬೇಕು! ಇದಕ್ಕೆ ಕಾಲಾವಕಾಶ ಬೇಕು. ಈಗಾಗಲೇ ಅವಳಿಗೆ ಎಂಭತ್ತೇಳಾಗಿದೆ. ಅವಳದು ಏನು ಗ್ಯಾರಂಟಿ? ನಾಳೆ ಸತ್ತರೂ ಸತ್ತಳೇ ಇಲ್ಲ ನಾಡಿದ್ದು ಸತ್ತರೂ ಸತ್ತಳೆ! ಈಗ ಪ್ರಶ್ನೆ ಏನೆಂದರೆ, ಈ ವಿಚಾರ ನಿಜವೋ ಸುಳ್ಳೋ ಎಂಬುದು. ಸುಳ್ಳಿರಲಾರದು. ಕಂಜೂಸಿತನ, ಸಂಯಮ ಮತ್ತು ಕಾರ್ಯತತ್ಪರತೆ. ಇವೇ ನನ್ನ ಮೂರು ಅದೃಷ್ಟದ ಕಾರ್ಡುಗಳು. ಇವನ್ನು ಬಳಸಿ ನಾನು ಖಂಡಿತ ಧನವನ್ನು ಸಂಪಾದಿಸುತ್ತೇನೆ, ಬೆಳೆಸುತ್ತೇನೆ ಮತ್ತು ಧನಿಕನಾಗುತ್ತೇನೆ ಎಂದು ಅವನು ನಿಶ್ಚಯಿಸಿದ.

ಹೀಗೆ ಯೋಚಿಸುತ್ತಾ ಅವನು ಸೈಂಟ್ ಪೀಟರ್ಸಬರ್ಗ್ ಮುಖ್ಯ ರಸ್ತೆಗೆ ಬಂದು ಮುಟ್ಟಿದ. ರಸ್ತೆ ಸಾರೋಟುಗಳಿಂದ ಕಿಕ್ಕಿರಿದಿತ್ತು. ಅವನೊಂದು ವೈಭವಯುತ ಕಟ್ಟಡದ ಬಳಿ ಬಂದು ಮುಟ್ಟಿದ್ದ. ಸಾರೋಟಿನಿಂದ ಕುಲೀನ ಮನೆತನದ ಜನರೊಬ್ಬಬ್ಬರೆ ಇಳಿದು ಆ ಕಟ್ಟಡದ ವಿಶಾಲವಾದ ಹೆಬ್ಬಾಗಿಲಿನೊಳಗೆ ಹೋಗುತ್ತಿದ್ದರು.
“ಇದು ಯಾರ ಮನೆ?” ಹರ್ಮನ್ ಎದುರಿಗಿದ್ದ ಧ್ವಾರಪಾಲಕನನ್ನು ಕೇಳಿದ.
“ಇದು ಕೌಂಟೆಸ್—ರವರ ಮನೆ. ” ಅವನು ಹೇಳಿದ.
ಹರ್ಮನ್ ಆಶ್ಚರ್ಯಪಟ್ಟ. ಮತ್ತೊಮ್ಮೆ ಮೂರು ಕಾರ್ಡಿನ ವಿಚಾರ ಅವನ ಮನಸ್ಸಿನೊಳಗೆ ಸುಳಿಯಿತು. ಆ ವಿಶಾಲವಾದ ಮನೆ, ಮನೆಯ ಒಡತಿ, ಹಾಗೂ ಮೂರು ಎಲೆಗಳ ಗುಟ್ಟಿನ ವಿಚಾರವನ್ನೇ ಮತ್ತೆ ಮತ್ತೆ ಯೋಚಿಸುತ್ತಾ ಅವನು ಅಲ್ಲಿಯೇ ಅಡ್ಡಾಡತೊಡಗಿದ. ತನ್ನ ಕೊಠಡಿಗೆ ಹೋದ ಮೇಲೂ ಅವನಿಗೆ ಬಹಳ ಹೊತ್ತು ನಿದ್ದೆ ಬೀಳಲೇ ಇಲ್ಲ. ಅವನ ಮನಸ್ಸಿನ ಪರದೆಯ ಮೇಲೆ ಬರೇ ಇಸ್ಪಿಟ್ ಎಲೆಗಳು, ಕಂತೆ ಕಂತೆ ನೋಟುಗಳೇ ಹರವಿಕೊಂಡಿದ್ದವು. ಅವನು ಎಲೆಗಳನ್ನು ಆಡಲು ಕುಳಿತ್ತಿದ್ದ. ಅದೃಷ್ಟವಶಾತ್ ಅವನು ಗೆಲ್ಲುತ್ತಲೇ ಹೋದ. ಕಂತೆ ಕಂತೆ ಹಣ, ಬೊಗಸೆ ತುಂಬಾ ಚಿನ್ನವನ್ನು ತುಂಬಿಸಿಕೊಂಡು ಅವನ ಕೋಟಿನ ಜೇಬುಗಳು ತೊನೆದಾಡುತ್ತಿದ್ದವು. ಬೆಳಿಗ್ಗೆ ಎದ್ದಾಗ ಅವನು ಗೆದ್ದಿದ್ದ ಸಂಪತ್ತೆಲ್ಲಾ ಕಾಣೆಯಾಗಿತ್ತು. ನಿರಾಸೆಯಿಂದ ಎದ್ದು ಮತ್ತೆ ಕೌಂಟೆಸ್ಸಳ ಮನೆಯ ಬಳಿ ಬಂದು ನಿಂತ. ಯಾವುದೋ ಅವ್ಯಕ್ತ ಶಕ್ತಿ ಅವನನ್ನು ಅಲ್ಲಿಗೆ ಎಳೆದು ತಂದಿತ್ತು. ಅವನು ತಲೆ ಎತ್ತಿ ಮಹಡಿಯ ಕಡೆಗೆ ನೋಡಿದ. ಅಲ್ಲಿನ ಒಂದು ಕಿಟಕಿಯ ಬಳಿ ಒಂದು ಸಮೃದ್ಧ ಕೇಶರಾಶಿಯ ಯುವತಿಯೊಬ್ಬಳು ಓದುವುದರಲ್ಲೋ ಅಥವಾ ಹೊಲಿಯುವುದರಲ್ಲೋ ಮಗ್ನಳಾಗಿದ್ದಳು. ಅವನು ಅವಳೆಡೆಗೆ ನೋಡುತ್ತಲೇ ನಿಂತುಕೊಂಡ. ಯುವತಿ ಒಮ್ಮೆ ಕತ್ತೆತ್ತಿ ಹೊರಗೆ ನೋಡಿದಳು. ಕಪ್ಪು ಕಂಗಳ ಸುಂದರ ಚೆಲುವೆ. ಆ ಗಳಿಗೆಯಲ್ಲೇ ಅವನು ಒಂದು ನಿರ್ಧಾರಕ್ಕೆ ಬಂದ.

**********

ಲಿಜಾವೆತಾ ಇವನೋವ ತನ್ನ ಕೋಟು ಮತ್ತು ಹ್ಯಾಟನ್ನು ಬಿಚ್ಚಿ ಇಟ್ಟಿದ್ದಳಷ್ಟೇ. ಸಾರೋಟು ತಯಾರಾಗಿರಿಸಲು ಕೌಂಟೆಸ್ಸಳಿಂದ ಮತ್ತೊಮ್ಮೆ ಅಪ್ಪಣೆಯಾಯಿತು. ಸಾರೋಟು ತಯಾರಾಗಿ ಹೆಬ್ಬಾಗಿಲ ಬಳಿ ಬಂದು ನಿಂತಿತು. ಇಬ್ಬರು ನೌಕರರು ಮುಂದೆ ಬಂದು ಕೌಂಟೆಸ್ಸಾಳನ್ನು ಎತ್ತಿ ಸಾರೋಟಿನಲ್ಲಿ ಕುಳ್ಳಿರಿಸಿದರು. ಇಂಜಿನಿಯರಿಂಗ್ ದಳದ ಯುವಕ ಸಾರೋಟಿನ ಬದಿಯಲ್ಲೇ ನಿಂತಿರುವುದನ್ನು ಲಿಜಾವೆತಾ ಗಮನಿಸಿದಳು. ಅವನು ಮೆಲ್ಲಗೆ ಅವಳ ಕೈಯನ್ನಿಡಿದಾಗ ಅವಳು ಗಾಬರಿಗೊಂಡಳು. ಅವಳು ಪ್ರತಿಕ್ರಿಯಿಸುವ ಮುನ್ನವೇ ಅವನೊಂದು ಕಾಗದದ ಮಡಿಕೆಯನ್ನು ಅವಳ ಕೈಯೊಳಗೆ ತುರುಕಿ ಬಂದ ಹಾಗೆಯೇ ಅಲ್ಲಿಂದ ಮಾಯವಾದ. ಲಿಜಾವೆತಾ ಅದನ್ನು ಚಾಣಾಕ್ಷತೆಯಿಂದ ತನ್ನ ಕೈಗವಸಿನೊಳಗೆ ತುರುಕಿ ಬಚ್ಚಿಟ್ಟಳು. ಪ್ರಯಾಣದುದ್ದಕ್ಕೂ ಅವಳು ಹೊರಗೆ ಏನೂ ನೋಡಲಿಲ್ಲ, ಏನನ್ನೂ ಕೇಳಿಸಿಕೊಳ್ಳಲಿಲ್ಲ. ಕೌಂಟೆಸ್ಸಾ ಮಾತ್ರ ಬಡಬಡಿಸುತ್ತಲೇ ಇದ್ದಳು: ‘ಆಗ ಬಂದಿದ್ದನಲ್ಲ ಯುವಕ ಅದು ಯಾರೇ? ಆ ಸೇತುವೆಯ ಹೆಸರೇನು? ಅದೇನು ಅಲ್ಲಿ ಬರೆದಿರುವುದು?… ಇದಕ್ಕೆ ಲಿಜಾವೆತಾ ಕೊಟ್ಟ ಉತ್ತರವನ್ನು ಕೇಳಿದ ಕೌಂಟೆಸ್ಸಾ ರೇಗಿದಳು.
“ಇವತ್ತು ನಿನಗೆ ಏನಾಗಿದೆಯೇ ಹುಡುಗಿ? ತಲೆ ನೆಟ್ಟಗಿದೆ ತಾನೆ?”

ಅದೂ ಕೂಡ ಲಿಜಾವೆತಾಳಿಗೆ ಕೇಳಿಸಲಿಲ್ಲ! ವಾಪಸ್ಸು ಮನೆಗೆ ಬಂದೊಡನೇಯೇ ಅವಳು ತನ್ನ ಕೊಠಡಿಗೆ ಓಡಿ ಹೋಗಿ ಕೈಗವಸಿನಿಂದ ಚೀಟಿಯನ್ನು ಹೊರ ತೆರೆದು ಓದತೊಡಗಿದಳು. ಅದೊಂದು ಪ್ರೇಮ ಪತ್ರವಾಗಿತ್ತು. ಅಕ್ಷರ ಅಕ್ಷರಗಳಲ್ಲೂ ಪ್ರೀತಿ ತುಂಬಿ ತುಳುಕುತ್ತಿದ್ದ ಆ ಪತ್ರವನ್ನು ಒಂದು ಜರ್ಮನ್ ಕಾದಂಬರಿಯಿಂದ ಹರ್ಮನ್ ಯಥಾವತ್ತಾಗಿ ನಕಲು ತೆಗೆದಿದ್ದೆಂದು ಲಿಜಾವೆತಾಳಿಗೆ ಹೇಗೆ ಗೊತ್ತಾಗಬೇಕು? ಅದನ್ನು ಓದಿ ತುಂಬಾ ಖುಶಿಪಟ್ಟಳು.

ಆದರೆ ಮರುಕ್ಷಣದಲ್ಲೇ ಅವಳಿಗೆ ಗಾಬರಿಯಾಯಿತು. ಜೀವನದಲ್ಲಿ ಮೊಟ್ಟ ಮೊದಲ ಭಾರಿಗೆ ಒಬ್ಬ ಯುವಕ ಅವಳಿಗೆ ಪ್ರೇಮ ಪತ್ರ ಕಳಿಸುತ್ತಿರುವುದು ಹಾಗೂ ಆ ಮಧುರ ಅನುಭವವನ್ನು ಹೇಗೆ ನಿಭಾಯಿಸುವುದೆಂದು ಅರ್ಥವಾಗದೆ ಅವಳು ವಿವಶಳಾದಳು.. ಅವನ ಧೈರ್ಯ ನೋಡಿ ಅವಳಿಗೆ ಸೋಜಿಗವಾಯಿತು. ಹಿಂದು ಮುಂದು ಯೋಚಿಸದೆ ತಾನೂ ಅವನ ಮೇಲೆ ಅನುರಕ್ತಳಾಗುತ್ತಿರುವುದನ್ನು ನೆನೆಸಿ ನಾಚಿಕೆಪಟ್ಟುಕೊಂಡಳು. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಕಂಗಾಲಾದಳು. ನಾಳೆಯಿಂದ ತಾನು ಕುಳಿತುಕೊಳ್ಳುತ್ತಿರುವ ಜಾಗವನ್ನು ಬದಲಾಯಿಸಿ ಅವನನ್ನು ನಿರ್ಲಕ್ಷಿಸಬೇಕೆಂದು ತೀರ್ಮಾನಿಸಿದಳು. ಆ ಪತ್ರವನ್ನು ಆ ಯುವಕನಿಗೆ ಹಾಗೇ ಹಿಂದಕ್ಕೆ ಕಳುಹಿಸುವುದೋ, ಇಲ್ಲ ಒಂದು ನಿರ್ಲಕ್ಷಿತ ಉತ್ತರ ಬರೆಯುವುದೋ ಎಂಬ ಗೊಂದಲದಲ್ಲಿ ಬಿದ್ದಳು. ಈ ಬಗ್ಗೆ ಅವಳು ಯಾರ ಸಲಹೆಯನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವಳಿಗೆ ತನ್ನ ಆಪ್ತರು ಎನಿಸಿಕೊಳ್ಳುವವರು ಯಾರೂ ಇರಲಿಲ್ಲ. ಅವಳು ಒಬ್ಬಂಟಿಯಾಗಿದ್ದಳು. ಯೋಚಿಸಿ ಯೋಚಿಸಿ ಕೊನೆಗೆ ಅವನಿಗೆ ಉತ್ತರರಿಸುವುದೇ ಸರಿಯೆಂದು ತೀರ್ಮಾನ ತೆಗೆದುಕೊಂಡು ಅವನಿಗೆ ಪತ್ರವನ್ನು ಬರೆಯಲು ಕುಳಿತುಕೊಂಡಳು. ಯಾವುದೂ ಸರಿ ಎನಿಸದೆ ಬರೆದಿದ್ದವನ್ನೆಲಾ ಹರಿದು ಹಾಕತೊಡಗಿದಳು. ಕೊನೆಗೆ ತಕ್ಕ ಮಟ್ಟಿಗೆ ಸರಿ ಎನಿಸಿದ್ದನ್ನು ಬರೆದು ಮುಗಿಸಲು ಯಶಸ್ವಿಯಾದಳು. ಅವಳು ಬರೆದ ಪತ್ರ ಹೀಗಿತ್ತು:

“ಮಹಾಶಯರೇ, ನಿಮ್ಮ ಉದ್ದೇಶಗಳ ಬಗ್ಗೆ ನನಗೆ ಖಡಾಖಂಡಿತವಾಗಿ ಯಾವುದೇ ಸಂಶಯಗಳಿಲ್ಲವಾದರೂ ಈಗಿನ ಪರಿಸ್ಥಿತಿಯಲ್ಲಿ ನಿಮ್ಮ ಗೆಳೆತನವನ್ನು ನಿರಾಕರಿಸಲು ನನಗೆ ವಿಷಾದವಾಗುತ್ತಿದೆ. ಆದುದರಿಂದ ನಿಮ್ಮ ಪತ್ರವನ್ನು ಹಾಗೆಯೇ ವಾಪಸ್ಸು ಕಳುಹಿಸುತ್ತಿದ್ದೇನೆ.
ಮಾರನೆಯ ಬೆಳಿಗ್ಗೆ ಹರ್ಮನ್ ಅವಳ ಕಿಟಕಿಯ ಕೆಳಗೆ ಹಾಜರಾದಾಗ ಲಿಜಾವೆತಾ ಎದ್ದು ನಡುಕೋಣೆಗೆ ಹೋದಳು. ಅಲ್ಲಿ ಒಂದು ಚಿಕ್ಕದಾದ ಕಿಟಕಿಯಿತ್ತು. ಅದನ್ನು ತೆರೆದು ಲಿಜಾವೆತಾ ತಾನು ಬರೆದಿದ್ದ ಪತ್ರವನ್ನು ಕೆಳಗೆ ಹರಿಯಬಿಟ್ಟಳು. ಅದು ಗಾಳಿಯಲ್ಲಿ ತೇಲಾಡುತ್ತಾ ರಸ್ತೆಯ ಮೇಲೆ ಬಿದ್ದು ಬಿಟ್ಟಿತು! ಇಂತಾದನ್ನು ನಿರೀಕ್ಷಿಸುತ್ತಿದ್ದ ಹರ್ಮನ್ ಅದನ್ನು ಎತ್ತಿಕೊಂಡು ತನ್ನ ಕೋಟಿನ ಜೇಬಿಗಿಳಿಸಿ ಇನ್ನೂ ತೆರೆಯದಿದ್ದ ಒಂದು ಬೇಕರಿಯ ಮೆಟ್ಟಿಲುಗಳನ್ನು ಹತ್ತಿ ಲಘುಬಗೆಯಿಂದ ಬಿಡಿಸಿದ. ತಾನು ಬರೆದ ಪತ್ರದೊಂದಿಗೇ ಚಿಕ್ಕದೊಂದು ಪತ್ರವಿತ್ತು. ಇದನ್ನು ಅವನು ಮೊದಲೇ ಊಹಿಸಿದ್ದ. ಅವನು ಗಂಭೀರ ಆಲೋಚನೆಗಳಿಂದ ಆವೃತ್ತನಾಗಿ ಭಾರವಾದ ಹೆಜ್ಜೆಗಳನ್ನಿಡುತ್ತಾ ತನ್ನ ಕೊಠಡಿಯ ಕಡೆಗೆ ಹೆಜ್ಜೆ ಹಾಕಿದ.

ಇದಾದ ಮೂರು ದಿನಗಳ ನಂತರ ಒಂದು ಸಣ್ಣ ಹುಡುಗಿ ಬಂದು ಲಿಜಾವೆತಾಳ ಕೈಗೊಂದು ಚೀಟಿಯನ್ನು ಕೊಟ್ಟಳು. ಲಿಜಾವೆತಾ ಅದನ್ನು ದುಗುಡದಿಂದ ತೆರೆದಳು. ಅದು ಅವನದೇ ಪತ್ರವಾಗಿತ್ತು. ಅವಳು ಆ ಪುಟಾಣಿಗೆ ಹೇಳಿದಳು: “ಇದು ನನಗಲ್ಲ ಕಂದ. ಇದನ್ನು ತಪ್ಪಿ ನನ್ನ ಬಳಿ ತಂದಿದ್ದೀಯಾ.”
“ಇಲ್ಲ ಅಕ್ಕ, ಅದು ನಿನಗೇ! ಒಮ್ಮೆ ಓದಿ ನೋಡಂತೆ?” ಎಂದಳು ಆ ಚೂಟಿ.
ಅವಳು ಅದರ ಮೇಲೆ ಒಮ್ಮೆ ಕಣ್ಣಾಡಿಸಿದಳು. ಹರ್ಮನ್ ಅವಳನ್ನೊಮ್ಮೆ ಭೇಟಿಯಾಗಲು ಕೇಳಿಕೊಂಡಿದ್ದ.
ಇದು ಸಾಧ್ಯವೇ ಇಲ್ಲ! ಲಿಜಾವೆತಾ ತನ್ನಷ್ಟಕ್ಕೇ ಹೌಹಾರಿದಳು.
“ಪುಟ್ಟೀ, ಇದು ನನಗಲ್ಲ!” ಎಂದು ಲಿಜಾವೆತಾ ಅದನ್ನು ಹರಿದು ಹಾಕಿದಳು.
“ನಿನಗಲ್ಲದಿದ್ದಲ್ಲಿ ಅದನ್ನು ಯಾಕೆ ಹರಿದು ಹಾಕಿದೆ ಅಕ್ಕಾ? ನಾನು ಅದನ್ನು ಅವರಿಗೇ ವಾಪಸ್ಸು ಕೊಡುತ್ತಿದ್ದೆ.” ಹುಡುಗಿ ಮುಖ ಬಾಡಿಸಿಕೊಂಡು ಹೇಳಿದಳು.

“ಪುಟ್ಟಾ, ನೀನು ಮತ್ತೊಮ್ಮೆ ಇಂತ ಪತ್ರಗಳನ್ನು ನನಗೆ ತಂದುಕೊಡಬೇಡ ಆಯ್ತಾ? ‘ನಿನಗೆ ನಾಚಿಕೆಯಾಗಬೇಕು’ ಅಂತ ನಾನು ಹೇಳಿದೆನೆಂದು ನಿನಗೆ ಪತ್ರವನ್ನು ಕೊಟ್ಟವನನಿಗೆ ಹೇಳು ಆಯ್ತಾ ಪುಟ್ಟಿ?”
ಆದರೆ ಹರ್ಮನ್ ಇಷ್ಟು ಬೇಗ ಸೋಲೊಪ್ಪಿಕೊಳ್ಳುವವನಲ್ಲ. ಅಂದಿನಿಂದ ಒಂದಲ್ಲ ಒಂದು ದಾರಿಯಿಂದ ಅವಳಿಗೆ ಅವನ ಪತ್ರಗಳು ಧಾಳಿಯಿಡತೊಡಗಿದವು. ಲಿಜಾವೆತಾ ಅವನ್ನು ಹರಿದು ಹಾಕುವುದನ್ನು ಒಂದು ದಿನ ನಿಲ್ಲಿಸಿಬಿಟ್ಟಳು. ಅವಳು ತನ್ನ ಸುತ್ತ ಕಟ್ಟಿಕೊಂಡಿದ್ದ ಗೋಡೆಯನ್ನು ಕೆಡವಿಹಾಕುವುದರಲ್ಲಿ ಹರ್ಮನ್ ಯಶಸ್ವಿಯಾಗಿದ್ದ. ಕ್ರಮೇಣ ಅವಳು ಅವನ ಪತ್ರಗಳಿಗೆ ಉತ್ತರಿಸತೊಡಗಿದಳು! ಅಷ್ಟೇ ಅಲ್ಲ, ಅವು ಧೀರ್ಘವಾಗಿಯೂ, ರಸಭರಿತವೂ, ಪ್ರೇಮಪೂರಿತವೂ ಆಗಿದ್ದವು ಕೂಡ! ಲಿಜಾವೆತಾ ಅವನಿಗಾಗಿಯೇ ಕಿಟಕಿಯನ್ನು ತೆರೆದಿಟ್ಟಳು.

“ಇವತ್ತು ಸಂಜೆ ನಮ್ಮ ವಿದೇಶಿ ಪ್ರತಿನಿಧಿಗಳ ಮನೆಯಲ್ಲಿ ನೃತ್ಯಕೂಟ ಇದೆ. ಕೌಂಟೆಸ್ಸಾಳಿಗೂ ಆಮಂತ್ರಣ ಕೊಟ್ಟಿದ್ದಾರೆ. ನೀನು ನನ್ನನ್ನು ಭೇಟಿಯಾಗಲು ಬಯಸುವುದಾದರೆ ಇಂತ ಅವಕಾಶ ಮತ್ತೊಮ್ಮೆ ಸಿಗದು. ನಾವು ನೃತ್ಯಕೂಟಕ್ಕೆ ಹೋದನಂತರ ಮನೆಯಲ್ಲಿ ಒಬ್ಬ ಚೌಕಿದಾರನನ್ನು ಬಿಟ್ಟರೆ ಬೇರ್ಯಾರು ಇರುವುದಿಲ್ಲ. ಅವನೂ ಸ್ವಲ್ಪ ಹೊತ್ತಿನ ನಂತರ ನಿದ್ದೆ ಹೋಗುತ್ತಾನೆ. ನೀನು ಹನ್ನೊಂದುವರೆಗೆ ನೆಟ್ಟಗೆ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಬಾ. ಅಲ್ಲಿ ನಿನಗೆ ಸಂದರ್ಶನ ಕೊಠಡಿ ಸಿಗುವುದು. ಅಲ್ಲಿ ಯಾರೂ ಇರುವುದಿಲ್ಲ. ಯಾರಾದರೂ ಇದ್ದು ಕೇಳಿದರೆ, ಕೌಂಟೆಸ್ಸಳನ್ನು ನೋಡಲು ಬಂದೆ ಎಂದು ಹೇಳು. ಅವಳು ಇಲ್ಲವೆಂಬ ಉತ್ತರ ಬರುತ್ತದೆ. ಆ ಸಂದರ್ಭದಲ್ಲಿ ನಿನಗೆ ವಾಪಸ್ಸಾಗದೆ ಬೇರೆ ದಾರಿ ಇಲ್ಲ.. ಮನೆಯ ಪರಿಚಾರಿಕೆಯರೆಲ್ಲಾ ಒಂದು ರೂಮಿನಲ್ಲಿ ಕುಳಿತುಕೊಂಡು ಹರಟುತ್ತಿರುವ ಸಂಭವವೇ ಹೆಚ್ಚು. ಸಂದರ್ಶನದ ಕೊಠಡಿ ದಾಟಿದ ನಂತರ ಎಡಕ್ಕೆ ತಿರುಗು. ಅದು ಕೌಂಟೆಸ್ಸಳ ಶಯನಾಗೃಹ. ಅಲ್ಲಿ ಎದುರಿಗೆ ನಿನಗೊಂದು ಪರದೆ ಕಾಣಿಸುವುದು. ಪರದೆಯ ಹಿಂದೆ ಎರಡು ಬಾಗಿಲುಗಳು ಕಾಣಿಸುತ್ತವೆ. ಬಲ ಬದಿಯ ಬಾಗಿಲು ಕೌಂಟೆಸ್ಸಳ ಆಪ್ತ ಕೊಠಡಿಯದಾದರೆ, ಎಡ ಬಾಗಿಲು ದಾಟಿ ಒಳಗೆ ಬಂದರೆ ನಿನ್ನ ಎದುರಿಗೆ ಒಂದು ತಿರುಗುಣಿ ಮೆಟ್ಟಿಲ ಏಣಿ ಕಾಣಸಿಗುತ್ತದೆ. ಅದು ನಿನ್ನನ್ನು ನನ್ನ ಕೊಠಡಿಗೆ ಮುಟ್ಟಿಸುತ್ತದೆ.”

ಲಿಜಾವೆತಾ ಹೇಳಿದ್ದ ಹೊತ್ತಿಗೆ ಕಾಯುತ್ತಲ್ಲಿದ್ದ ಹರ್ಮನ್ ಉದ್ವೇಗದಿಂದ ಮೆಲ್ಲಗೆ ಕಂಪಿಸುತ್ತಿದ್ದ. ಹತ್ತೂವರೆಯ ಹೊತ್ತಿಗೆ ಅವನು ಕೌಂಟೆಸ್ಸಳ ಮನೆಯ ಮುಂದಿದ್ದ. ಹವಮಾನ ಭಿಗಡಾಯಿಸಿತ್ತು. ಗಾಳಿ ಹೂಂಕರಿಸುತ್ತಾ ಬೀಸುತ್ತಿತ್ತು. ಮಂಜಿನ ತೆಳು ಚಕ್ಕೆಗಳು ಹೂಗಳಂತೆ ಗಾಳಿಯಲ್ಲಿ ತೇಲುತ್ತಾ ರಸ್ತೆಯ ಮೇಲೆ ಜಮೆಯಾಗುತ್ತಿದ್ದವು. ರಸ್ತೆಯ ಮೇಲಿನ ದೀಪಗಳು ಮಂದವಾಗಿ ಉರಿಯುತ್ತಿದ್ದವು. ರಸ್ತೆಯ ಮೇಲೆ ಒಬ್ಬ ನರಮನುಷ್ಯನೂ ಕಾಣಿಸುತ್ತಿರಲಿಲ್ಲ. ರಾತ್ರಿ ಪಯಣಿಗರನ್ನು ಹುಡುಕುತ್ತಾ ಒಂದು ಸಾರೋಟು ಮೆಲ್ಲಗೆ ಸಾಗಿತು. ದಪ್ಪನೆಯ ಉಣ್ಣೆಯ ಕೋಟು ಧರಿಸಿದ್ದ ಹರ್ಮನನಿಗೆ ಥಂಡಿ ಗಾಳಿಯ ಅಥವ ಬೀಸುತ್ತಿರುವ ಗಾಳಿಯ ಕಿಂಚಿತ್ತೂ ಪರಿವೆ ಇರಲಿಲ್ಲ.
ಕೊನೆಗೂ ಕೌಂಟೆಸ್ಸಾಳ ಸಾರೋಟು ಮನೆಯ ಹೆಬ್ಬಾಗಿಲ ಬಳಿ ಬಂದು ನಿಂತಿತು. ಬೆಚ್ಚನೆಯ ಬಟ್ಟೆಯನ್ನು ಧರಿಸಿದ್ದ ಕೌಂಟೆಸ್ಸಳನ್ನು ಹೊತ್ತುಕೊಂಡು ಇಬ್ಬರು ಆಳುಗಳು ಮೆಟ್ಟಿಲುಗಳನ್ನು ಇಳಿದು ಬಂದರು. ತಲೆಗೆ ಹೂ ಮುಡಿದು ಸಂಜೆ ಉಡುಪಿನಲ್ಲಿದ್ದ ಲಿಜಾವೆತಾ ಕೌಂಟೆಸ್ಸಳ ಹಿಂದೆ ಇಳಿದು ಬಂದಳು. ಸಾರೋಟು ಅವರನ್ನು ಹೊತ್ತುಕೊಂಡು ಆ ನಿರ್ಜನ ರಸ್ತೆಯ ಮೇಲೆ ಓಡತೊಡಗಿತು. ಕೆಲ ಹೊತ್ತು ಹೊರಗಡೆಯೇ ನಿಂತಿದ್ದ ಆಳು ಒಳಗೆ ಹೋದ. ಕ್ರಮೇಣ ಮನೆಯ ಒಂದೊಂದೇ ದೀಪಗಳು ಆರಿ ಎಲ್ಲೆಲ್ಲೂ ಕತ್ತಲು ಆವರಿಸಿತು.
ಮರೆಗೆ ನಿಂತಿದ್ದ ಹರ್ಮನ್ ಹೊರ ಬಂದು ಕೌಂಟೆಸ್ಸಳ ಮನೆಯ ಎದುರು ಶತಪಥ ಹಾಕತೊಡಗಿದ. ಒಂದು ದೀಪ ಕಂಬದ ಕೆಳಗೆ ನಿಂತು ತನ್ನ ಗಡಿಯಾರವನ್ನೊಮ್ಮೆ ನಿರುಕಿಸಿದ. ಗಂಟೆ ಹನ್ನೊಂದಾಗಿ ಇಪ್ಪತ್ತು ನಿಮಿಷಗಳಾಗಿದ್ದವು. ಅವನು ಅಲ್ಲಿಯೇ ನಿಂತ. ಆ ಪ್ರದೇಶ ನಿರ್ಜನವಾಗಿತ್ತು. ಸರಿಯಾಗಿ ಹನ್ನೊಂದುವರೆಗೆ ಕೌಂಟೆಸ್ಸಳ ಮನೆಯ ಮೆಟ್ಟಲುಗಳನ್ನು ಹತ್ತಿ ದೀಪ ಉರಿಯುತ್ತಿದ್ದ ಒಂದು ದಿವಾನಖಾನೆಯನ್ನು ತಲುಪಿದ. ಅಲ್ಲಿ ಯಾರೂ ಇರಲಿಲ್ಲ. ತ್ವರಿತವಾಗಿ ಮೆಟ್ಟಿಲುಗಳನ್ನು ಹತ್ತಿ ಅವನು ಸಂದರ್ಶನದ ಕೊಠಡಿಗೆ ತಲುಪಿದ.. ಒಂದು ಪುರಾತನ ಕುರ್ಚಿಯ ಮೇಲೆ ಚೌಕಿದಾರನೊಬ್ಬ ಕುಳಿತುಕೊಂಡೇ ನಿದ್ದೆ ಹೋಗಿದ್ದ. ಬೆಕ್ಕಿನ ಹೆಜ್ಜೆಗಳನ್ನಿಟ್ಟು ಹರ್ಮನ್ ಅವನನ್ನು ದಾಟಿ ಮುಂದೆ ಹೋದ. ನಡು ಸಾಲು ಮತ್ತು ಊಟದ ಸಾಲಿನಲ್ಲಿ ಬೆಳಕಿರಲಿಲ್ಲವಾದರೂ ನಿರೀಕ್ಷಣಾ ಕೊಠಡಿಯ ಬೆಳಕು ಮಂದವಾಗಿ ಹರಡಿತ್ತು.

ಹರ್ಮನ್ ಕೌಂಟೆಸ್ಸಾಳ ಶಯನಗೃಹ ಪ್ರವೇಶಿಸಿದ. ಅಲ್ಲೊಂದು ಪುರಾತನ ದೇವಪೀಠ ವಿವಿಧ ಪ್ರತಿಮೆಗಳಿಂದ ತುಂಬಿ ಹೋಗಿತ್ತು. ಪೀಠದ ಮುಂದೆ ಒಂದು ಬತ್ತಿ ಉರಿಯುತ್ತಿತ್ತು. ಸುತ್ತಲೂ ಮೃದು ಆಸನಗಳ ಪುರಾತನ ಕುರ್ಚಿಗಳು ತುಂಬಿದ್ದವು. ಗೋಡೆಗಳ ಮೇಲೆ ಚೀನೀ ರೇಷ್ಮೆಯ ಪರದೆಗಳು ರಾರಾಜಿಸುತ್ತಿದ್ದವು. ಒಂದು ಮೂಲೆಯಲ್ಲಿ ದೊಡ್ಡ ಗಾತ್ರದ ಎರಡು ತೈಲ ಚಿತ್ರಗಳನ್ನು ನಿಲ್ಲಿಸಲಾಗಿತ್ತು. ಮೊದಲನೆಯದು, ಸುಮಾರು ನಲ್ವತ್ತು ವರ್ಷಗಳ, ಹಸಿರು ಸಮವಸ್ತ್ರ ಧರಿಸಿದ್ದ ಗಂಡಸಿನದು. ಎದೆಯ ಮೇಲೆ ರಜತ ನಕ್ಷತ್ರವೊಂದು ಎದ್ದು ಕಾಣಿಸುತ್ತಿತ್ತು. ಮತ್ತೊಂದು ಗುಂಗುರು ಕೂದಲಿನ ಒಬ್ಬ ಯೌವನಸ್ಥ ಸ್ತ್ರೀಯದು. ಇವಿಷ್ಟೇ ಅಲ್ಲದೆ ಮತ್ತೂ ಆನೇಕ ಸಣ್ಣ ಪುಟ್ಟ ಕಲಾಕೃತಿಗಳು ಅಲ್ಲಿ ತುಂಬಿ ಹೋಗಿದ್ದವು. ಹರ್ಮನ್ ಪರದೆಯ ಹಿಂದಕ್ಕೆ ಹೋದ. ಅಲ್ಲಿ ಎಡ ಬಲಕ್ಕೆ ಒಂದೊಂದು ಧ್ವಾರಗಳಿದ್ದವು. ಅವನು ಎಡಗಡೆಯ ಧ್ವಾರವನ್ನು ತೆರೆದ. ಎದುರಿಗೆ ತಿರುಗಣಿ ಮೆಟ್ಟಿಲ ಏಣಿ ಕಾಣಿಸಿತು. ಆದರೆ ಅವನು ಮುಂದಕ್ಕೆ ಹೋಗಲಿಲ್ಲ. ಹಿಂದಿರುಗಿ, ಬಲಗಡೆಯ ಧ್ವಾರವನ್ನು ತೆರೆದು ಒಳನುಗ್ಗಿದ.

ವೇಳೆ ಸರಿಯುತ್ತಲಿತ್ತು. ಎಲ್ಲೆಡೆ ಮೌನ ಆವರಿಸಿತ್ತು. ನಿಶ್ಶಬ್ಧವನ್ನು ಭೇಧಿಸುತ್ತಾ ನಡುಕೋಣೆಯ ಗಡಿಯಾರ ಮಧ್ಯರಾತ್ರಿಯ ಹನ್ನೆರಡು ಗಂಟೆಯನ್ನು ಬಾರಿಸಿತು. ಹರ್ಮನ್ ಒಮ್ಮೆಲೆ ದಿಗಿಲುಗೊಂಡ. ಅಲ್ಲಿ ಮತ್ತೆ ಮೌನ ನೆಲೆಸಿತು. ಆ ಕತ್ತಲ ಜಾಗದಲ್ಲಿ ಅವನು ಯಾವುದೋ ಒಂದು ಗಟ್ಟಿ ವಸ್ತುವಿಗೆ ಒರಗಿ ನಿಂತಿದ್ದ. ಅವನ ಹೃದಯ ಡವಡವ ಬಡಿಯುತ್ತಿತ್ತಾದರೂ ಶಾಂತವಾಗಿದ್ದ. ಗಡಿಯಾರ ಮತ್ತೊಮ್ಮೆ ಒಂದು ಗಂಟೆಯನ್ನು ಸೂಚಿಸಿತು. ನಂತರ.. ಎರಡು. ಮತ್ತಷ್ಟು ಹೊತ್ತಿನ ನಂತರ ಕೆಳಗಿನ ನಿರ್ಜನ ರಸ್ತೆಯಲ್ಲಿ ದೂರದಿಂದ ಸಾರೋಟಿನ ಸಪ್ಪಳ ಕೇಳಬರತೊಡಗಿತು. ಅಪ್ರಯತ್ನಪೂರ್ವಕವಾಗಿ ಅವನ ದೇಹ ಉದ್ವೇಗದಿಂದ ಕಂಪಿಸತೊಡಗಿತು. ಸಾರೋಟಿನ ಸಪ್ಪಳವು ಹತ್ತಿರ ಹತ್ತಿರವಾಗುತ್ತಾ ಬಂದು ಮನೆಯ ಎದುರಿಗೆ ನಿಂತಿತು. ಕೆಲ ಹೊತ್ತಿನ ಬಳಿಕ ಕೆಲಸದಾಳುಗಳ ಗಡಿಬಿಡಿ ಸದ್ದು ವಾತಾವರಣ ತುಂಬಿತು. ಅಷ್ಟರಲ್ಲಿ ಮೂವರು ಪರಿಚಾರಿಕೆಯರು ಒಳಗೆ ಬಂದು ಕೌಂಟೆಸ್ಸಳ ಶಯನಗೃಹದ ಬತ್ತಿಗಳನ್ನು ಹೊತ್ತಿಸಿದರು. ಅವರ ಹಿಂದೆ ಬಂದ ಕೌಂಟೆಸ್ಸ ಸುಸ್ತಾಗಿ ಒಂದು ದೊಡ್ಡದಾದ ಮೆತ್ತನೆಯ ಕುರ್ಚಿಯ ಮೇಲೆ ದೊಪ್ಪನೆ ಮೈ ಚೆಲ್ಲಿದಳು. ಇದನ್ನೆಲ್ಲಾ ಹರ್ಮನ್ ಬಾಗಿಲ ಬಿರುಕಿನಿಂದ ಗಮನಿಸತೊಡಗಿದ. ಅವನ ಬಗಲಿನಿಂದಲೇ ಲಿಜಾವೆತಾ ಅವಸರವಸರದಿಂದ ತಿರುಗಣಿ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋಗಿದ್ದು ಅವನ ಗಮನಕ್ಕೆ ಬಂದಿತು. ಅವನ ಅಂತರಾತ್ಮ ಅವನನ್ನು ಛೇಡಿಸಿತಾದರೂ ಅವನು ಅದನ್ನು ಧೃಡವಾಗಿ ಮೆಟ್ಟಿನಿಂತು ಕಲ್ಲಿನ ಮೂರ್ತಿಯ ಹಾಗೆ ಸುಮ್ಮನಿದ್ದು ಒಳಗಿನ ವಿದ್ಯಮಾನಗಳನ್ನು ಗಮನಿಸತೊಡಗಿದ.

ಕೊನೆಗೂ ಕೌಂಟೆಸ್ಸ ಎದ್ದು ನಿಂತು ನಿಲುವುಕನ್ನಡಿಯ ಬಳಿ ಸಾಗಿ ಒಂದೊಂದೇ ಬಟ್ಟೆಗಳನ್ನು ಕಳಚತೊಡಗಿದಳು. ಅವಳ ಊದಿಕೊಂಡ ಪಾದಗಳ ಕೆಳಗೆ ಒಂದು ರಾಶಿ ವಸ್ತ್ರಗಳು ರಾಶಿ ಬಿದ್ದಿದ್ದವು.
ಕೌಂಟೆಸ್ಸ, ಹರ್ಮನನ ಮುಂದೆ ಕೃತಕ ಪುಕ್ಕಗಳನ್ನು ಕಳಚಿ ಬೆತ್ತಲೆ ನಿಂತ ಹಕ್ಕಿಯಂತೆ ಕಾಣಿಸುತ್ತಿದ್ದಳು ಮತ್ತು ಆ ದೃಶ್ಯ ಅವನ ಕಣ್ಣಿಗೆ ಅಹ್ಲಾದಕರವಾಗಿಯೇನೂ ಕಾಣಿಸಲಿಲ್ಲ.
ವಯಸ್ಸಾದ ಎಲ್ಲವರಂತೆ ಕೌಂಟೆಸ್ಸಳೂ ಕೂಡ ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಳು. ಸೇವಕಿಯರನ್ನು ಕಳುಹಿಸಿ ಅವಳು ಕಿಟಕಿ ಬಳಿಯ ಆಸನದ ಮೇಲೆ ಕುಳಿತುಕೊಂಡಳು. ಸೇವಕಿಯರು ಹಚ್ಚಿದ್ದ ಮೊಂಬತ್ತಿಗಳು ಆರಿದ್ದವು. ಸೀಮೆ ಎಣ್ಣೆಯ ದೀಪವೊಂದು ಮಂದ ಪ್ರಕಾಶ ಬೀರುತ್ತಾ ಉರಿಯುತ್ತಿತ್ತು. ಕೌಂಟೆಸ್ಸ ತನ್ನಷ್ಟಕ್ಕೆ ಏನೋ ಬಡಬಡಿಸುತ್ತಿದ್ದಳು. ಅವಳ ಶೂನ್ಯ ದೃಷ್ಟಿ ಅವಳ ಮಾನಸಿಕ ಏಕಾಂಗಿತನವನ್ನು ತೋರಿಸುತ್ತಿತ್ತು.
ಒಮ್ಮೆಲೆ, ಅವಳ ನಿರ್ಜೀವ ಮುಖದ ಮೇಲೆ ಜೀವಕಳೆ ತುಂಬಿತು. ಅವಳ ಕಂಪಿಸುತ್ತಿದ್ದ ತುಟಿಗಳು ಸ್ಥಬ್ಧವಾದವು. ಕಣ್ಣುಗಳಲ್ಲಿ ಆತಂಕ ತುಂಬಿಕೊಂಡಿತು. ಅವಳ ಮುಂದೆ ಒಬ್ಬ ಅಪರಿಚಿತ ಯುವಕ ನಿಂತಿದ್ದ!

“ಮೇಡಮ್… ದಯವಿಟ್ಟು ಹೆದರಬೇಡಿ!” ಆ ಯುವಕ ಮೆಲ್ಲನೆಯ ದನಿಯಲ್ಲಿ ಹೇಳಿದ “ನಾನು ನಿಮಗೆ ಯಾವುದೇ ಕೇಡು ಮಾಡಲು ಬಂದವನಲ್ಲ. ಬದಲಾಗಿ ನಿಮ್ಮಿಂದಲೇ ನನಗೊಂದು ಉಪಕಾರ ಆಗಬೇಕು!” ಅವನು ತುಂಬಾ ವಿನಮ್ರತೆಯಿಂದ ಹೇಳಿದ.
ಅವನು ಹೇಳಿದ್ದು ಅವಳು ಕೇಳಿಸಿಕೊಂಡಿರಲೇ ಇಲ್ಲ. ಅವಳು ದುಗುಡದಿಂದ ಬಾಯಿ ಬಿಟ್ಟು ಅವನನ್ನೇ ನೋಡುತ್ತಿದ್ದಳು. ಅವಳಿಗೆ ಕಿವಿಗಳು ದೂರವೆಂದು ತಿಳಿದ ಹರ್ಮನ್ ಬಗ್ಗಿ ಅವಳ ಕಿವಿಗಳಲ್ಲಿ ಮತ್ತೊಮ್ಮೆ ಅದನ್ನೇ ಉಸುರಿದ.
“ನೀವು ಮನಸ್ಸು ಮಾಡಿದರೆ ನನ್ನ ಜೀವನವನ್ನು ಬೆಳಗಿಸಬಹುದು…” ಅವನು ಗೋಗರೆದ. “ನಿಮಗೆ ಇಸ್ಪಿಟ್ ಆಟದಲ್ಲಿ ಗೆಲ್ಲಬೇಕಾದ ಆ ಮೂರು ಎಲೆಗಳ ರಹಸ್ಯ ಗೊತ್ತಿದೆ ಎಂದು ನಾನು ಕೇಳಿದೆ…”
ಅವನು ಅಷ್ಟಕ್ಕೇ ನಿಲ್ಲಿಸಿದ. ಅವನು ಹೇಳಿದ್ದು ಅವಳಿಗೆ ಅರ್ಥವಾಗಿ ಸೂಕ್ತವಾದ ಉತ್ತರವನ್ನು ಕೊಡಲು ಮಾತುಗಳನ್ನು ಹುಡುಕುತ್ತಿದ್ದಾಳೆಂದು ಅವನಿಗೆ ಅನಿಸಿತು.
ಕೊನೆಗೂ ಅವಳ ಬಾಯಿಂದ ಮಾತುಗಳು ಹೊರಟವು. “ಅದೊಂದು ಮಹಾನ್ ಸುಳ್ಳು. ಖಂಡಿತವಾಗಿಯೂ ಅದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ.” ಅವಳು ಗೇಲಿಯ ನಗೆ ನಗಲು ಪ್ರಯತ್ನಿಸಿದಳು.
“ನನಗೇನೂ ಹಾಗಂತ ಅನಿಸಿಲ್ಲ!” ಅವನು ನಿಜವಾಗಲೂ ಸಿಟ್ಟಾದ. “ನೀನು, ನಿನ್ನ ಮಗ ಕೌಂಟ್ ಇವಾನ್ ಇಲಿಯಿಚನಿಗೆ ಗೆಲ್ಲಲು ಸಹಾಯ ಮಾಡಿದ್ದೆ..?”

ಕೌಂಟೆಸ್ಸ ಒಮ್ಮೆಲೇ ಅಸ್ವಸ್ಥಳಾದಂತೆ ಕಂಡು ಬಂದಳು. ಅವಳ ಮೊಗದ ಮೇಲೆ ವಿವಿಧ ಭಾವನೆಗಳ ತಾಕಲಾಟಗಳು ನಡೆದು ಅವಳು ಮತ್ತೊಮ್ಮೆ ಭಾವಶೂನ್ಯಳಾದಳು.
“ಮೇಡಮ್, ಆ ಕಾರ್ಡುಗಳು ಯಾವುವು ಎಂದು ಹೇಳುತ್ತೀರಾ?”
ಕೌಂಟೆಸ್ಸ ಮೂಕಿಯಾದಳು.
“ಕೌಂಟೆಸ್ಸ, ನೀನು ಯಾರಿಗಾಗಿ ಈ ಮೂರು ಎಲೆಗಳ ರಹಸ್ಯವನ್ನು ಜೋಪಿಟ್ಟುಕೊಂಡಿದ್ದೀಯ? ನಿನ್ನ ಮೊಮ್ಮಕ್ಕಳಿಗೆ? ಅವರ ಬಳಿ ಇಷ್ಟೊಂದು ಧನವಿದೆಯೋ ಅವರು ಅದರ ಮೌಲ್ಯವನ್ನೂ ಅರಿಯರು. ಅವರಿಗೆ ಅದರ ಅಗತ್ಯವಿಲ್ಲ. ನನ್ನ ಸ್ಥಿತಿ ಹಾಗೆ ಇಲ್ಲ. ಒಂದು ಕೊಪೆಕ್ ಕೊಪೆಕ್ ಗೂ (ರಶ್ಯಾದ ರೂಬಲ್ ನ ೧/೧೦೦ ಭಾಗ) ನಾನು ಸಂಘರ್ಶ ನಡೆಸಬೇಕಾಗಿದೆ. ನಿನ್ನ ಇಸ್ಪೀಟ್ ಎಲೆಗಳ ರಹಸ್ಯ ನನಗೆ ಗೊತ್ತಾಗುವುದರಿಂದ ಯಾವುದೇ ಅನಾಹುತಗಳು ಖಂಡಿತಾ ಉಂಟಾಗುವುದಿಲ್ಲ..”
ಅವನು ಅವಳ ಉತ್ತರಕ್ಕಾಗಿ ಆತುರದಿಂದ ಕಾಧು ನಿಂತ. ಆದರೆ, ಕೌಂಟೆಸ್ಸ ಭಾಯಿ ತೆರೆಯಲಿಲ್ಲ. ಕಲ್ಲಿನ ಮೂರ್ತಿಯಂತೆ ಸುಮ್ಮನಾದಳು. ಹರ್ಮನ್ ಅವಳ ಮುಂದೆ ಮೊಣಕಾಲನ್ನೂರಿದ.

“ನಿನ್ನ ಹೃದಯದಲ್ಲಿ ಕರುಣೆ ಎಂಬ ಭಾವಕ್ಕೆ ಕಿಂಚಿತ್ತೂ ಅಸ್ಪದ ಇದ್ದಲ್ಲಿ, ಮೊದಲ ಭಾರಿ ನೀನೊಂದು ಮಗುವನ್ನು ಹೆತ್ತು ಅದರ ಅಳುವಿಗೆ ನಿನ್ನ ಹೃದಯ ಚಡಪಡಿಸುತ್ತಿದ್ದಿದ್ದಲ್ಲಿ ಖಂಡಿತ ನನ್ನ ಕೋರಿಕೆಯನ್ನು ಮನ್ನಿಸದೇ ಇರುತ್ತಿರಲಿಲ್ಲ. ನಿನ್ನ ಇಸ್ಪಿಟ್ ಎಲೆಗಳ ರಹಸ್ಯ ನನ್ನ ಮುಂದೆ ತೆರೆದಿಡು. ಈ ಕಾರಣಕ್ಕೆ ನಿನ್ನಲ್ಲಿ ಯಾವುದೇ ಅಪರಾಧಿ ಭಾವನೆಗಳು ಕಾಡುತ್ತಿದ್ದಲ್ಲಿ ತಲೆಕೆಡಿಸಿಕೊಳ್ಳಬೇಡ. ಅವು ನನ್ನ ತಲೆ ಮೇಲಿರಲಿ. ನಿನ್ನ ಜೀವನ ಪಯಣ ಹೇಗೂ ಕೊನೆಯಾಗುವುದರಲ್ಲಿದೆ. ಆ ರಹಸ್ಯವನ್ನು ನಿನ್ನ ಹೃದಯದಲ್ಲೇ ಮುಚ್ಚಿಟ್ಟು ಸತ್ತರೆ ಯಾರಿಗೆ ಉಪಕಾರವಾದೀತು? ಒಬ್ಬ ನತದೃಷ್ಟ ಯುವಕನ ಸಂತೋಷ ನಿನ್ನ ಕೈಯಲ್ಲಿದೆ. ಅವನೊಬ್ಬನೇ ಅಲ್ಲ, ಅವನ ಮಕ್ಕಳು ಮೊಮ್ಮಕ್ಕಳು ನಿನಗೆ ಸದಾ ಋಣಿಯಾಗಿರಬಲ್ಲರು”
ಕೌಂಟೆಸ್ಸ ಮತ್ತೂ ಮಾತನಾಡೆಲಿಲ್ಲ
ಹರ್ಮನ್ ಎದ್ದು ನಿಂತ.
ಸಿಟ್ಟಿನಿಂದ ಅವನು ಕಂಪಿಸುತ್ತಿದ್ದ.
“ಲೇ ಹಠಮಾರಿ ಮುದುಕಿ! ನಿನ್ನ ಬಾಯಿ ಬಿಡಿಸುವ ವಿದ್ಯೆ ನಾನು ಚೆನ್ನಾಗಿ ಬಲ್ಲೆ.!”
ಅವನು ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಪಿಸ್ತೂಲನ್ನು ಹೊರತೆಗೆದ.
ಪಿಸ್ತೂಲನ್ನು ನೋಡುತ್ತಿದ್ದಂತೆ ಕೌಂಟೆಸ್ಸಳ ಮುಖ ಬಿಳುಚಿಕೊಂಡಿತು. ಮುಖಕ್ಕೆ ಕೈಯನ್ನಡ್ಡ ಹಿಡಿದಳು. ಹಿಂದಕ್ಕೆ ಸರಿಯುತ್ತಾ ಕುರ್ಚಿಯ ಮೇಲೆ ಕುಸಿದು ಬಿದ್ದಳು.
ಅವಳ ಕೈಯನ್ನು ಬಲವಾಗಿ ಬಿಗಿದಿಡಿದು, “ನಿನ್ನ ನಾಟಕ ಸಾಕು ಮಾಡು ದರವೇಶಿ ಮುದುಕಿ. ಕೊನೆಯ ಭಾರಿ ನಿನ್ನನ್ನು ಕೇಳುತ್ತಿದ್ದೇನೆ. ಆ ಮೂರು ಇಸ್ಪೀಟು ಎಲೆಗಳ ಹೆಸರುಗಳನ್ನು ಹೇಳು.”
ಅವಳು ಮತ್ತೂ ಮಾತನಾಡಲಿಲ್ಲ.
ಅವಳು ಸತ್ತಿರಬಹುದೆಂದು ಹರ್ಮನ್ ಭಾವಿಸಿದ.

– ೪ –

ಲಿಜಾವೆತಾ ತನ್ನ ಉಡುಪನ್ನು ಬದಲಾಯಿಸಿದಯೇ ತನ್ನ ಕೋಣೆಯಲ್ಲಿ ಕುಳಿತುಕೊಂಡಿದ್ದಳು. ಅವಳು ವಿವಶಳಾಗಿದ್ದಳು. ಅವಳ ಉಡುಪನ್ನು ಕಳಚವಲು ನೆರವಾಗಲು ಬಂದಿದ್ದ ಪರಿಚಾರಿಕೆಯನ್ನು ವಾಪಸ್ ಕಳಿಸಿದ್ದಳು. ಅವಳ ಎದೆ ಡವಗುಟ್ಟುತ್ತಿತ್ತು. ಅವಳು ತನ್ನ ಕೋಣೆಯಲ್ಲಿ ಹರ್ಮನನನ್ನು ನಿರೀಕ್ಷಿಸಿದ್ದಳಾದರೂ ಅವನು ಅಲ್ಲಿ ಬಂದಿಲ್ಲವೆಂದು ಅವಳಿಗೆ ಮೇಲ್ನೋಟಕ್ಕೆ ಖಚಿತವಾಗಿತ್ತು. ಒಳಗಿಂದೊಳಗೆ ಅವನು ಅಲ್ಲಿ ಇರದಿದ್ದರೆ ಸಾಕು ಅಂತಲೂ ಅವಳಿಗೆ ಅನಿಸಿತ್ತು. ಅವನಿಗೆ ಆಮಂತ್ರಣವಿತ್ತಿದ್ದನ್ನು ನೆನೆಸಿಕೊಂಡು ಅವಳಿಗೇ ನಾಚಿಕೆಯಾಯಿತು. ಆ ಸಂಜೆ ಮೊದಲು ಅವನು ಮಾತನಾಡಿದ್ದೂ ಅವಳು ಕೇಳಿಸಿಕೊಂಡಿರಲಿಲ್ಲ. ಅಂದು ಸಂಜೆ ನೃತ್ಯಕೂಟದಲ್ಲಿ ಒಂದು ವಿಶೇಷ ಘಟಿಸಿತು. ರಾಜಕುಮಾರಿ ಪಾವ್ಲಿನ್, ಟಾಮ್ಸ್ಕಿಯ ಜತೆ ವೈಯಾರ ಆಡುವ ಅವಕಾಶವನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದು ಯಾಕೋ ಟಾಮ್ಸ್ಕಿಯ ಮೇಲೆ ಬೇಜಾರು ಮಾಡಿಕೊಂಡವಳಂತೆ ನಿರ್ಲಕ್ಷ ತೋರತೊಡಗಿದಳು. ಟಾಮ್ಸ್ಕಿ ಕೂಡ ಸ್ವಾಭಿಮಾನಿ ಯುವಕ. ಅವನೂ ರಾಜಕುಮಾರಿ ಪಾವ್ಲಿನಳನ್ನು ಉಪೇಕ್ಷಿಸಿದ. ಅಂದು ರಾತ್ರಿ ಪೂರ್ತಿ ಅವನು ಲಿಜಾವೆತಾಳೊಟ್ಟಿಗೆ ನೃತ್ಯಮಾಡಿದ.. ನೃತ್ಯದುದ್ದಕ್ಕೂ ಅವಳ ಹಾಗೂ ಇಂಜಿನಿಯರ್ ಆಫಿಸರನ ಬಗ್ಗೆ ಕೆಣಕುತ್ತಾ ತಮಾಷೆ ಮಾಡಿದ. ಇದೆಲ್ಲಾ ಇವನಿಗೆ ಹೇಗೆ ಗೊತ್ತಾಯಿತೆಂದುಯ ಲಿಜಾವೆತಾ ಆಶ್ಚರ್ಯಪಟ್ಟಳು.

“ಇದು ನಿಮಗೆ ಹೇಗೆ ಗೊತ್ತು?” ಅವಳು ಕೇಳಿದಳು.
“ನಿನ್ನನ್ನು ಚೆನ್ನಾಗಿ ಬಲ್ಲ ಒಬ್ಬ ವ್ಯಕ್ತಿಯ ಸ್ನೇಹಿತನಿಂದ!” ಅವನು ನಗೆಯಾಡಿದ.
“ಯಾರಪ್ಪಾ ಅವನು!?”
“ಅವನ ಹೆಸರು ಹರ್ಮನ್.” ಲಿಜಾವೆತಾ ಮಾತನಾಡಲಿಲ್ಲ. ಆದರೆ ತನ್ನ ಕಾಲುಗಳು ಸ್ವಾಧೀನ ತಪ್ಪುತ್ತಿವೆ ಅಂತ ಅವಳಿಗೆ ಅನಿಸತೊಡಗಿತು.
“ಈ ಹರ್ಮನ್ ಇದ್ದಾನಲ್ಲ, ಒಬ್ಬ ರೊಮ್ಯಾಂಟಿಕ್ ಮನುಷ್ಯ. ದೈಹಿಕವಾಗಿ ನೆಪೊಲಿಯನ್ ಆದರೆ, ಮಾನಸಿಕವಾಗಿ ಮೆಫಿಸ್ಟೋಫಿಲಿಸ್ (ಯುರೋಪಿನ ಸಾಹಿತ್ಯ ಪುರಾಣದಲ್ಲಿ ಮೆಫಿಸ್ಟೋಫಿಲಿಸನ ಬಗ್ಗೆ ವಿಸ್ತೃತ ವ್ಯಾಖ್ಯಾನಗಳಿದ್ದರೂ, ಸರಳವಾಗಿ ಹೇಳುವುದಾದರೆ ಇವನು ದೇವರ ದೃಷ್ಟಿಯಲ್ಲಿ ಬಹಿಷ್ಕೃತ ಏಂಜಲ್, ಅಥವಾ ಸೈತಾನ) ನನಗೆ ಗೊತ್ತಿರುವಂತೆ ಅವನ ಅಂತಸಾಕ್ಷಿಯ ಮೇಲೆ ಈಗಾಗಲೇ ಮೂರು ಅಳಿಸಲಾಗದಂತ ಕಲೆಗಳಿವೆ… ಅರೇ, ನೀನ್ಯಾಕಮ್ಮ ಇಷ್ಟೊಂದು ಬಿಳುಚಿಕೊಂಡೆ!!”
“ನನಗೆ ತಲೆ ನೋವು ಶುರುವಾಗಿದೆ.. ಅಂದ ಹಾಗೆ, ಏನವನ ಹೆಸರು.. ಹರ್ಮನ್.. ಏನು ಹೇಳಿದ?”
“ಅವನು, ತನ್ನ ಖಾಸಾ ಗೆಳೆಯ ಏನೂ ಪ್ರಯೋಜನವಿಲ್ಲ ಅಂತ ಭಾವಿಸಿಕೊಂಡಿದ್ದಾನೆ. ಅವನಿಗೆ ನಿನ್ನ ಮೇಲೆ ಅನುರಾಗ ಉಂಟಾಗಿದೆ, ಹಾಗೂ ಈ ಬಗ್ಗೆ ನಾನು ಅವನಿಗೆ ಕಿಂಚಿತ್ತೂ ಸಹಕಾರ ಕೊಡುತ್ತಿಲ್ಲ ಎಂದು ಭಾವಿಸಿದ್ದಾನೆ. ನಿನ್ನ ಬಗ್ಗೆ ನಾನು ಏನು ಹೇಳಿದರೂ ಮೈಯೆಲ್ಲಾ ಕಿವಿಯಾಗಿ ಕೇಳುತ್ತಾನೆ!”

“ಅವನು ನನ್ನನ್ನು ಎಲ್ಲಿ ನೋಡಿದ್ದಾನಂತೆ?”
“ನನಗೇನು ಗೊತ್ತು? ಚರ್ಚಿನಲ್ಲಿ?…. ರಸ್ತಯ ಮೇಲೆ?…” ಅಷ್ಟರಲ್ಲಿ ಮೂವರು ನೀರೆಯರು ಬಂದು ಅವನನ್ನು ಸುತ್ತುವರೆದರು.
ಅವರಲ್ಲೊಬ್ಬಳು ರಾಜಕುಮಾರಿ ಪಾವ್ಲಿನ್. ಅವಳು ರಾಜಿಯಾಗುವ ಹಂತಕ್ಕೆ ತಲುಪಿದ್ದಳು. ಅಲ್ಲಿಂದ ಟಾಮ್ಸ್ಕಿ, ಲಿಜಾವೆತಾ ಮತ್ತು ಹರ್ಮನರನ್ನು ಮರೆತೇ ಬಿಟ್ಟ! ಕೌಂಟೆಸ್ಸಳೂ ಕೂಡ ಹೊರಡುವ ತಯಾರಿ ನಡೆಸಿದಳು.
ಟಾಮ್ಸ್ಕಿ ಸಮಯ ಕಳೆಯಲು ಅವಳೊಂದಿಗೆ ಮಾತನಾಡಿದ್ದನಾದರೂ ಅವಳಿಗದು ಇಷ್ಟವಾಯಿತು. ಅವಳು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ಚಿತ್ರಣಕ್ಕೂ ಟಾಮ್ಸ್ಕೀ ಕಡೆದುಕೊಟ್ಟ ಹರ್ಮನನ ಚಿತ್ರಣಕ್ಕೂ ತಾಳೆಯಾಗಿತ್ತು. ಅವಳು ಓದಿದ ಪ್ರೇಮ ಕತೆಗಳಲ್ಲಿ ಬರುತ್ತಿದ್ದ ನಾಯಕರ ವ್ಯಕ್ತಿತ್ವವೂ ಹಾಗೇ ಇರುತ್ತಿತ್ತು. ಒಮ್ಮೆಲೇ ಅವಳ ಕೋಣೆಯ ಬಾಗಿಲು ತೆರೆದುಕೊಂಡು ಹರ್ಮನ್ ಒಳಗೆ ಪ್ರವೇಶಿಸಿದ. ಅವಳು ಗಡಿಬಿಡಿಯಿಂದ ಭ್ರಮಾ ಲೋಕದಿಂದ ವಾಸ್ತವಕ್ಕೆ ಇಳಿದದಳು.
“ನೀನು ಎಲ್ಲಿದ್ದೆ?” ಅವಳು ಆತಂಕದಿಂದ ಕೇಳಿದಳು.
“ನಾನು ಮುದುಕಿಯ ಕೋಣೆಯಲ್ಲಿದ್ದೆ. ಅಲ್ಲಿಂದಲೇ ಬಂದೆ. ಮುದುಕಿ ಸತ್ತು ಹೋದಳು!”

“ದೇವರೇ!! ಏನಂದೆ?”
“ಅವಳು ಸತ್ತು ಹೋಗಲಿಕ್ಕೆ ನಾನೇ ಕಾರಣ ಎಂದು ಹೇಳಲು ವಿಷಾದಿಸುತ್ತೇನೆ.”
ಲಿಜಾವೆತಾ ಅವನನ್ನೇ ಬಿಟ್ಟ ಕಂಗಳಿಂದ ನೋಡಿದಳು. ಅವಳಿಗೆ ಟಾಮ್ಸ್ಕಿ ಹೇಳಿದ ಮಾತುಗಳು ನೆನಪಿಗೆ ಬಂದವು”… ಅವನ ಅಂತಸಾಕ್ಷಿಯ ಮೇಲೆ ಮೂರು ಅಳಿಸಲಾಗದಂತ ಕಲೆಗಳಿವೆ..” ಅವನು ಅವಳ ಪಕ್ಕದಲ್ಲೇ ಕಿಟಕಿಯ ಬಳಿ ಕುಳಿತುಕೊಂಡು ಏನೆಲ್ಲಾ ಆಯಿತೆಂದು ವಿವರಿಸಿದ.
ಅವನು ಹೇಳಿದ್ದನ್ನು ಲಿಜಾವೆತಾ ಬಾಯ್ದೆರೆದು ಕೇಳಿಸಿಕೊಂಡಳು. ಅವನ ಪ್ರೀತಿ, ಆ ಪ್ರೇಮಪತ್ರಗಳಲ್ಲಾ ಒಂದು ಮೊಡ್ಡ ಮೋಸವಾಗಿತ್ತು. ತನ್ನ ಮೂಲಕ ಕೌಂಟೆಸ್ಸಳೊಂದಿಗೆ ಸಲುಗೆ ಗಳಿಸಿ ಅವಳಿಂದ ಮೂರು ಎಲೆಗಳ ರಹಸ್ಯವನ್ನು ಪಡೆಯುವುದೇ ಅವನ ಮುಖ್ಯ ಉದ್ಧೇಶವಾಗಿತ್ತು. ಅವನ ಉದ್ದೇಶಕ್ಕೆ ಅವಳೊಂದು ಸಾಧನವಾಗಿದ್ದಳಷ್ಟೇ. ಅವಳ ಹೃದಯ ಪಶ್ಚಾತ್ತಾಪದಿಂದ ಕೊರಗತೊಡಗಿತು. ತನ್ನ ಯಜಮಾನತಿಯ ಸಾವಿಗೆ ಅವಳು ಅಪರೋಕ್ಷವಾಗಿ ಕಾರಣಕರ್ತಳಾಗಿದ್ದಳು. ಎಷ್ಟೇ ಅದುಮಿಟ್ಟರೂ ಅವಳ ದುಃಖದ ಕಟ್ಟೆ ಹೊಡೆಯಿತು. ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹರ್ಮನ್ ಕೂಡ ಭಾವೋದ್ವೇಗಗೊಂಡಿದ್ದ. ಆದರೆ, ಬೇರೆಯೇ ಕಾರಣಗಳಿಗಾಗಿ. ಅವನ ಅಂತರಾತ್ಮ ಯಾವುದೇ ಅಪರಾಧಿ ಭಾವನೆಗಳಿಂದ ಘಾಸಿಗೊಳ್ಳದೆ ಶಾಂತವಾಗಿತ್ತು. ಇಸ್ಪಿಟ್ ಎಲೆಗಳ ರಹಸ್ಯ ಅವಳೊಂದಿಗೇ ಧಪನವಾಗುವುದೇ ಅವನಿಗೆ ದೊಡ್ಡ ಕೊರಗಾಗಿತ್ತು.

“ನಿಜವಾಗಲೂ ನೀನೊಬ್ಬ ರಾಕ್ಷಸ..!” ಕೊನೆಗೂ ಲಿಜಾವೆತಾ ಬಾಯಿ ಬಿಟ್ಟಳು
“ನಿಜ ಹೇಳ್ಬೇಕೂಂದ್ರೆ ಅವಳು ಸಾಯಲಿ ಎಂದು ನಾನು ಬಯಸಿದವನೇ ಅಲ್ಲ. ನನ್ನ ಪಿಸ್ತೂಲಿನಲ್ಲಿ, ನಿಜವಾಗಲೂ ಗುಂಡುಗಳೇ ಇರಲಿಲ್ಲ!”
ಅಲ್ಲಿ ಮತ್ತೆ ಮೌನ ನೆಲೆಸಿತು.
ಬೆಳಗಿನ ಜಾವ ಆಗುತ್ತಲಿತ್ತು. ಲಿಜಾವೆತಾ ಮೊಂಬತ್ತಿಗಳನ್ನು ಆರಿಸಿದಳು. ಕೋಣೆಯಲ್ಲಿ ಮಂದ ಬೆಳಕಿತ್ತು. ಕಣ್ಣೀರನ್ನು ಒರೆಸುತ್ತಾ ಲಿಜಾವೆತಾ ಹರ್ಮನನ ಕಡೆಗೆ ನೋಡಿದಳು. ಅವನು ಎರಡೂ ಕೈಗಳನ್ನು ಎದೆಯ ಮೇಲೆ ಕಟ್ಟಿ ಗಂಭೀರನಾಗಿ ಕುಳಿತುಕೊಂಡಿದ್ದ. ಅವನ ಹಣೆಯ ಮೇಲೆ ದಪ್ಪನಾದ ನೆರಿಗೆಗಳು ಮೂಡಿದ್ದವು. ಈಗ ಅವನು ನೆಪೊಲಿಯನನ ಹಾಗೆಯೇ ಕಾಣಿಸುತ್ತಿದ್ದಾನೆಂದು ಲಿಜಾವೆತಾಳಿಗೆ ಅನಿಸಿತು.
“ನಿನ್ನನ್ನು ಈಗ ಹೊರಗೆ ಕಳಿಸುವುದು ಹೇಗೆ?” ಲಿಜಾವೆತಾ ತನ್ನಷ್ಟಕ್ಕೇ ಕೇಳಿದಳು. “ನಿನಗೆ ಗುಪ್ತ ಮೆಟ್ಟಿಲುಗಳಿಂದ ಹೊರಗೆ ಕಳುಹಿಸುವುದೆಂದು ನಾನು ಯೋಚಿಸಿದ್ದೆ. ಅದಕ್ಕೆ ಕೌಂಟೆಸ್ಸಳ ಶಯನಗೃಹವನ್ನು ಹಾದು ಹೋಗಬೇಕು. ನನಗೆ ಅಷ್ಟು ಧೈರ್ಯ ಸಾಲುತ್ತಿಲ್ಲ.”
“ಅದು ಎಲ್ಲಿದೆ ಹೇಳು. ನಾನೇ ಹುಡುಕಿಕೊಂಡು ಹೊರಹೋಗುತ್ತೇನೆ.” ಅವನು ಅವಸರದಿಂದ ಎದ್ದ.
ಲಿಜಾವೆತಾ ಎಲ್ಲಿಂದಲೋ ಒಂದು ಬೀಗದ ಕೈಯನ್ನು ತಂದು ಅವನ ಕೈಗಿತ್ತು ಕೆಲವು ಸೂಚನೆಗಳನ್ನು ಕೊಟ್ಟಳು. ಲಿಜಾವೆತಾಳ ಹಸ್ತವನ್ನು ಹಿಡಿದು ಅವಳ ಹಣೆಗೆ ಒಂದು ಶೀತಲ ಮುತ್ತನ್ನಿಕ್ಕಿ ಅವನು ತಿರುಗಣಿ ಮೆಟ್ಟಿಲುಗಳನ್ನು ಇಳಿದು ಕೌಂಟೆಸ್ಸಳ ಶಯನಗೃಹಕ್ಕೆ ಹೋದ. ಕೌಂಟೆಸ್ಸಳ ಮುಖ ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಶಾಂತವಾಗಿತ್ತು. ಕೆಲಹೊತ್ತು ಅವನು ಅಲ್ಲಿಯೇ ನಿಂತು ಅವಳನ್ನೇ ದಿಟ್ಟಿಸಿ ನೋಡಿದ, ಅವಳು ಎಚ್ಚರಗೊಳ್ಳಬಹುದೆನ್ನುವ ನಿರೀಕ್ಷೆಯಲ್ಲಿ. ನಂತರ ಅವನು ತಿರುಗಿ ಬಲ ಬಾಗದ ಬಾಗಿಲನ್ನು ತೆರೆದ. ಅಲ್ಲಿ ಕೆಳಗೆ ಹೋಗುವ ಗುಪ್ತ ಮೆಟ್ಟಿಲುಗಳಿದ್ದವು. ಅವನು ಇಳಿಯತೊಡಗಿದ. ಈ ಮನೆತನದ ಅದೆಷ್ಟು ಗಂಡಸರು ಈ ಮೆಟ್ಟಿಲುಗಳಿಂದ ಇಳಿದು ಹತ್ತಿ ಸಮಾಧಿಗಳಲ್ಲಿ ಲೀನರಾಗಿದ್ದಾರೋ?! ಹರ್ಮನ್ ಯೋಚಿಸಿದ. ಮೆಟ್ಟಿಲುಗಳ ಬುಡದಲ್ಲಿ ಒಂದು ಬಾಗಿಲಿತ್ತು. ಲಿಜಾವೆತಾ ಕೊಟ್ಟ ಬೀಗದ ಕೈಯಿಂದ ಹರ್ಮನ್ ಅದನ್ನು ತೆರೆದ. ಒಂದು ಕಿರಿದಾದ ಓಣಿಯನ್ನು ದಾಟಿ ಅವನು ರಸ್ತೆಗೆ ಇಳಿದ.

– ೫ –

ಕೌಂಟೆಸ್ಸಾಳ ಶವಸಂಸ್ಕಾರದ ವಿಧಿವಿಧಾನಗಳು ಜರುಗಿದ ಕಾನ್ವೆಂಟಿನಲ್ಲಿ ತನ್ನ ನಮನಗಳನ್ನು ಸಲ್ಲಿಸಲು ಹರ್ಮನ್ ಕೂಡ ಬೆಳಿಗ್ಗೆ ಒಂಭತ್ತು ಗಂಟೆಗೆ ಅಲ್ಲಿಗೆ ಹಾಜರಾದ. ಅವಳ ಮರಣದಿಂದ ಪಶ್ಚಾತ್ತಾಪವಾಗಿರದಿದ್ದರೂ ಅವನು ಮಾನಸಿಕವಾಗಿ ತುಸು ಅಳುಕಿದ್ದ: “ಯಾರಿಗೂ ಕೇಡು ಬಯಸದ ಆ ಪಾಪದ ಮುದುಕಿಯನ್ನು ಸಾಯಿಸಿಬಿಟ್ಟೆಯಲ್ಲಾ ಎಂದು ಅವನ ಅಂತರಾತ್ಮ ಮೆಲ್ಲನೆ ತಿವಿಯುತ್ತಿತ್ತು. ಅವನು ಖಂಡಿತವಾಗಿಯೂ ದೈವಭೀರು ಆಗಿರಲಿಲ್ಲ. ಆದರೂ ಮೂಡನಂಬಿಕೆಗಳನ್ನು ನಂಬುತ್ತಿದ್ದ. ಬದುಕಿದ್ದ ಕೌಂಟೆಸ್ಸಳಿಗಿಂತ ಮೃತಪಟ್ಟ ಕೌಂಟೆಸ್ಸಳಿಗೆ ಹೆಚ್ಚು ಹೆದರಿದ್ದ. ಅವಳ ಪ್ರೇತ ತನ್ನ ಮೇಲೆ ಏನು ಕೇಡು ಬಗೆಯುವುದೋ ಎಂದು ಹೆದರಿ ಅವಳ ಕ್ಷಮೆಯನ್ನು ಕೇಳಲು ಬಂದಿದ್ದ.

ಚರ್ಚು ಭರ್ತಿಯಾಗಿತ್ತು. ಹರ್ಮನ್ ಕಷ್ಟಪಟ್ಟು ಒಳಗೆ ಹೋಗಲು ದಾರಿಮಾಡಿಕೊಂಡ. ಚರ್ಚಿನ ಮಧ್ಯಭಾಗದಲ್ಲಿ ಒಂದು ಎತ್ತರದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಹೂಗಳಿಂದಲಂಕೃತಗೊಂಡ ಶವ ಪೆಟ್ಟಿಗೆಯಲ್ಲಿ ಕೌಂಟೆಸ್ಸಳ ಕಳೇಬರವನ್ನು ಇಡಲಾಗಿತ್ತು. ಸುತ್ತ, ಅವಳ ಹತ್ತಿರದವರಾದ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ನೆಂಟರಿಷ್ಟರು, ಮನೆಕೆಲಸದವರು ಕಪ್ಪು ಬಟ್ಟೆ ಧರಿಸಿ ನೆರೆದಿದ್ದರು. ಅವರ ಕೈಯಲ್ಲಿ ಮೊಂಬತ್ತಿಗಳು ಉರಿಯುತ್ತಿದ್ದವು. ಭುಜಕ್ಕೆ ಸಂತಾಪ ಸೂಚಕ ರಿಬ್ಬನನ್ನು ಕಟ್ಟಿಕೊಂಡಿದ್ದರು.
ಕೌಂಟೆಸ್ಸಳ ಪ್ರಾಯದಿಂದಾಗಿ ಅವಳ ಮರಣ ಅನೀರಿಕ್ಷಿತವಾಗಿರಲಿಲ್ಲವಾದ್ದರಿಂದ ಯಾರೂ ಶೋಕ ಪ್ರದರ್ಶನದಲ್ಲಿ ತೊಡಗಿರಲಿಲ್ಲ. ಬಂದು ಬಳಗದವರು ಅವಳನ್ನು ಈಗಾಗಲೇ ಸತ್ತವರ ಪಟ್ಟಿಯಲ್ಲಿ ಸೇರಿಸಿದ್ದರು. ಒಬ್ಬ ಕ್ರೈಸ್ತಭಕ್ತೆಯಾಗಿ ಆದರ್ಶಪ್ರಾಯ ತುಂಬು ಜೀವನ ನಡೆಸಿದ ಕೌಂಟೆಸ್ಸಳಿಗೆ ಧರ್ಮಗುರುಗಳು ಬಾಯ್ತುಂಬಾ ಹೊಗಳಿದರು.

ಶವಸಂಸ್ಕಾರದ ಪೂಜೆ ಮುಗಿಯುವ ಹೊತ್ತಿಗೆ ಚರ್ಚಿನಲ್ಲಿ ಗಾಢ ಮೌನ ತುಂಬಿತ್ತು. ಕೌಂಟೆಸ್ಸಳಿಗೆ ವಿದಾಯ ಕೋರಲು ಮೊದಲು ಅವಳ ಆಪ್ತ ಸಂಬಂಧಿಕರು ಮುಂದಾದರು. ಕೊನೆಯಲ್ಲಿ ಹರ್ಮನ್ ಮುಂದೆ ಬಂದ. ಅವನು ಬಹಳ ಹೊತ್ತು ಅಲ್ಲಿಯೇ ಮೊಣಕಾಲೂರಿಕೊಂಡೇ ಇದ್ದ. ನಂತರ ಎದ್ದು ವೇದಿಕೆಯನ್ನು ಹತ್ತಿ ಶವಪೆಟ್ಟಿಗೆಯೊಳಗೆ ಬಗ್ಗಿದ… ಕೌಂಟೆಸ್ಸಳು ಒಮ್ಮೆ ಅವನನ್ನು ತಿರಸ್ಕಾರದಿಂದ ದಿಟ್ಟಿಸಿ ನೋಡಿ ಕುಹಕದಿಂದ ಒಂದು ಕಣ್ಣು ಹೊಡೆದಂತಾಯ್ತು.. ಇದು ಅವನ ಮೇಲೆ ಎಂತ ಆಘಾತ ಉಂಟುಮಾಡಿತೆಂದರೆ ಹರ್ಮನ್ ಕಾಲು ಉಳುಕಿದಂತಾಗಿ ಸಮತೋಲನ ತಪ್ಪಿ ಕೆಳಗೆ ಬಿದ್ದ. ಸುತ್ತಲ್ಲಿದ್ದವರೆಲ್ಲಾ ಅವನನ್ನು ಹಿಡಿದು ಸಂಭಾಳಿಸಿದರು. ಲಿಜಾವೆತಾಳೂ ಕೂಡ ತಲೆ ತಿರುಗಿ ಚರ್ಚಿನಲ್ಲಿ ಬಿದ್ದಳು. ಈ ಎರಡು ಘಟನೆಗಳಿಂದ ಚರ್ಚಿನಲ್ಲಿ ಮೂಡಿದ್ದ ಗಾಂಭಿರ್ಯತೆಗೆ ಕೆಲಮಟ್ಟಿಗೆ ಧಕ್ಕೆ ಉಂಟಾಯಿತು. ಯಾರೋ ಒಬ್ಬ ಇನ್ನೊಬ್ಬನ ಕಿವಿಗಳಲ್ಲಿ ಉಸುರಿದ: “ಆ ಆಫೀಸರ್ ಇದ್ದಾನಲ್ಲ?… ಕೌಂಟೆಸ್ಸಳ ಅನಧಿಕೃತ ಮಗನಂತೆ!”
“ಹೌದೇನು!” ಅವನ ಕಣ್ಣುಗಳು ಹಿರಿದಾದವು.

ಅವತ್ತು ಇಡೀ ದಿವಸ ಹರ್ಮನ್ ಮಾನಸಿಕವಾಗಿ ಅಸ್ವಸ್ಥನಂತಿದ್ದ. ಒಂದು ರೀತಿಯ ಆತಂಕ, ಉದ್ವೇಗದಿಂದ ಚಡಪಡಿಸುತ್ತಿದ್ದ. ಅವನು ಸಾರಾಯಿ ಕುಡಿಯುವುದರಲ್ಲಿ ಹಿಡಿತವನ್ನು ಸಾಧಿಸಿದ್ದನಾದರೂ, ಇಂದು ಅವನಿಗೆ ಸೆರೆ ಕುಡಿಯಬೇಕೆನಿಸಿತು. ಊರ ಹೊರಗಿನ ಒಂದು ಸಾರಾಯಿ ಅಡ್ಡೆಗೆ ಹೋಗಿ ಕಂಠಪೂರ್ತಿ ಕುಡಿದು ಬಂದ. ಅವನ ಮನಸ್ಸು ಶಾಂತಗೊಳ್ಳುವ ಬದಲು ಮತ್ತೂ ಅಸ್ವಸ್ಥಗೊಂಡಿತು. ಬಟ್ಟೆ ಬದಲಾಯಿಸದೆಯೇ ಮಂಚದ ಮೇಲೆ ಉರುಳಿದ.

ಅವನು ಎಚ್ಚರಗೊಂಡಾಗ ಕೋಣೆಯೊಳಗೆ ಬೆಳದಿಂಗಳು ಹರಡಿತ್ತು. ಅವನು ಗಡಿಯಾರ ನೋಡಿಕೊಂಡ. ಎರಡು ಮುಕ್ಕಾಲಾಗಿತ್ತು. ಮತ್ತೆ ನಿದ್ದೆಡ ಹೋಗಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಮಂಚದ ಮೇಲೆ ಎದ್ದು ಕುಳಿತು ಕೌಂಟೆಸ್ಸಳ ಬಗ್ಗೆ ಯೋಚಿಸಲಾರಂಭಿಸಿದ.
ಅಷ್ಟರಲ್ಲಿ ಯಾರೋ ತನ್ನ ಕಿಟಕಿಯ ಬಳಿಯಿಂದ ಸಾಗಿ ಮುಂದಕ್ಕೆ ಹೋದಂತಾಯಿತು. ಅವನು ಅದನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ತನ್ನ ಕೋಣೆಯ ಬಾಗಿಲನ್ನು ಯಾರೋ ತೆರೆದಂತಾಯಿತು. ತನ್ನ ಕೈಯಾಳು ಇರಬೇಕು. ಇವತ್ತೂ ಕಂಠಪೂರ್ತಿ ಕುಡಿದು ಬಂದಿರಬೇಕು ಅಂದು ಕೊಂಡ. ಮತ್ತಷ್ಟು ಸಮಯದ ನಂತರ ಅವನು ಕೈಯಾಳಲ್ಲ ಮತ್ತ್ಯಾರೋ ಅಪರಿಚಿತರಿರಬೇಕು ಅಂತ ಅವನಿಗನಿಸಿತು. ಮೃದುವಾದ ಚಪ್ಪಲಿಗಳ ಹಗುರವಾದ ಕಾಲ ಸಪ್ಪಳ ಅವನಿಗೆ ಅಪರಿಚಿತವಾಗಿತ್ತು. ಅಷ್ಟರಲ್ಲಿ ಬಾಗಿಲು ಪೂರ್ಣವಾಗಿ ತೆರೆದುಕೊಂಡಿತು. ಸಂಪೂರ್ಣವಾಗಿ ಶ್ವೇತ ವಸ್ತ್ರ ಧರಿಸಿದ್ದ ಒಂದು ವ್ಯಕ್ತಿ ಒಳ ಪ್ರವೇಶಿಸಿತು. ತನ್ನ ಹಿಂದಿನ ದಾದಿ ಇರಬೇಕು! ಈ ಹೊತ್ತಿನಲ್ಲಿ ಇವಳಿಗೆ ಇಲ್ಲೇನು ಕೆಲಸ ಎಂದು ಆಶ್ಚರ್ಯಪಟ್ಟ. ಆ ಆಕೃತಿ ಗಳಿಯಲ್ಲಿ ತೇಲುತ್ತಾ ಎಂಬಂತೆ ಅವನ ಎದುರಿಗೆ ಬಂದು ನಿಂತಾಗ ಅವನು ಗಲಿಬಿಲಿಗೊಂಡ. ಆ ಶ್ವೇತ ವಸ್ತ್ರಧಾರಿಣಿ ಕೌಂಟೆಸ್ಸಳಾಗಿದ್ದಳು.

ಕೌಂಟೆಸ್ಸ ಗಡಸು ಸ್ವರದಲ್ಲಿ ಅವನಿಗೆ ಹೇಳಿದಳು: “ನನ್ನ ಇಚ್ಛೆಯ ಹೊರತಾಗಿಯೂ ನಿನಗೆ ಇಸ್ಪಟ್ ಎಲೆಗಳ ರಹಸ್ಯವನ್ನು ತಿಳಿಸಿಕೊಡಲು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ನಾನು ಹೇಳುವುದನ್ನು ಕಿವಿಗೊಟ್ಟು ಕೇಳು. ಕೆಲವು ಷರತ್ತುಗಳು ಅನ್ವಯವಾಗುತ್ತವೆ. ಮೂರು, ಏಳು ಮತ್ತು ಎಕ್ಕಾ ಒಂದರ ಹಿಂದೆ ಒಂದು ಆಡಿದೆಯಾದರೆ ನೀನು ಗೆಲ್ಲುತ್ತಿಯಾ. ಸರಿಯಾಗಿ ಕೇಳು. ಒಂದೇ ಭಾರಿ. ಜೀವಮಾನ ಪೂರ್ತಿ ಮತ್ತೆಂದೂ ನೀನು ಇಸ್ಪೀಟು ಎಲೆಗಳನ್ನು ಮುಟ್ಟುವ ಹಾಗಿಲ್ಲ. ಇನ್ನೊಂದು…, ನನ್ನ ಸಹಾಯಕಿ ಲಿಜಾವೆತಾ ಇವನೋವಾಳೊಡನೆ ನೀನು ಮದುವೆಯಾದರೆ ನೀನು ನನ್ನ ಮೇಲೆ ನಡೆಸಿದ ದೌರ್ಜನ್ಯವನ್ನು ಮರೆತುಬಿಡುತ್ತೇನೆ..”
ಇಷ್ಟು ಹೇಳಿ ಕೌಂಟೆಸ್ಸ ಬಂದ ಹಾಗೆಯೇ ಬಾಗಿಲನ್ನು ಎಳೆದು ವಾಪಸ್ಸು ಹೊರಟು ಹೋದಳು. ಹರ್ಮನನಿಗೆ ಮತ್ತೊಮ್ಮೆ ಯಾರೋ ಕಿಟಕಿಯಿಂದ ಒಳಗೆ ಇಣುಕಿ ನೋಡಿದಂತಾಯಿತು.

ಈ ಘಟನೆಯಿಂದ ಚೇತರಿಸಿಕೊಳ್ಳಲು ಹರ್ಮನನಿಗೆ ತುಸು ಸಮಯವೇ ಹಿಡಿಯಿತು. ನಂತರ ಕಷ್ಟಪಟ್ಟು ಎದ್ದು ಅವನು ಬೇರೆ ಕೋಣೆಗೆ ಹೋದ. ಅವನ ಕೈಯಾಳು ನೆಲದ ಮೇಲೆಯೇ ಬಿದ್ದುಕೊಂಡಿದ್ದ. ಆವನಿಗೆ ಏಳಿಸುವುದೇ ದೊಡ್ಡ ಸಾಹಸವಾಯಿತು. ಅವನಿಗೆ ಏನೂ ಗೊತ್ತಿರಲಿಲ್ಲ. ಮುಂಬಾಗಿಲು ಅಗುಳಿ ಹಾಕಿದಂತೆಯೇ ಇತ್ತು. ಹರ್ಮನ್ ತನ್ನ ಕೋಣೆಗೆ ವಾಪಸ್ಸು ಬಂದ. ಒಂದು ಕಾಗದ ಮತ್ತು ಲೇಖನಿಯನ್ನು ಹೆಕ್ಕಿಕೊಂಡು ತನ್ನ ಅನುಭವವನ್ನು ಸವಿಸ್ತಾರವಾಗಿ ಬರೆದ.

– ೬ –

ಭೌತಿಕ ಜಗತ್ತಿನಲ್ಲಿ ಹೇಗೆ ಎರಡು ವಸ್ತುಗಳು ಒಂದೇ ಜಾಗದಲ್ಲಿ ಒಂದೇ ಸಮಯದಲ್ಲಿ ಇರಲು ಸಾಧ್ಯವಿಲ್ಲವೋ , ಹಾಗೆಯೇ ಎರಡು ಬೇರೆ ಬೇರೆ ವಿಚಾರಗಳು ನೈತಿಕ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ. ಹರ್ಮನನ ಮನಸ್ಸಿನೋಳಗೆ ಮೂರು, ಏಳು ಮತ್ತು ಎಕ್ಕಗಳ ವಿಚಾರವೇ ಆಕ್ರಮಿಸಿಕೊಂಡಿರುವಾಗ ಕೌಂಟೆಸ್ಸಳ ಬಗ್ಗೆ ಯೋಚಿಸಲು ಅಲ್ಲಿ ಜಾಗವಿರಲಿಲ್ಲ. ಮೂರು, ಏಳು, ಎಕ್ಕಾವೇ ಅವನ ದಿನನಿತ್ಯದ ಮಂತ್ರವಾಯಿತು. ರಸ್ತೆಯಲ್ಲಿ ಯಾವುದಾದರೂ ಆಕರ್ಷಕ ಯುವತಿ ಎದುರಾದರೆ, “ವ್ಹಾಹ್, “ಮೂರು’ ಥರ ಕಾಣ್ತಾ ಇದ್ದಾಳೆ ಎಂದು ಉದ್ಗರಿಸುತ್ತಿದ್ದ. ಯಾರಾದರೂ ಸಮಯ ಎಷ್ಟಂದು ಕೇಳಿದರೆ ಇಷ್ಟಕ್ಕೆ ಇನ್ನೂ ಏಳು ನಿಮಿಷ ಬಾಕಿ ಇದೆ ಅನ್ನುತ್ತಿದ್ದ! ಯಾರಾದರೂ ದಪ್ಪನೆಯ ವ್ಯಕ್ತಿ ಕಂಡು ಬಂದರೆ ಎಕ್ಕಾ ಇದ್ದಂಗಿದ್ದಾನಲ್ಲಾ ಅಂದುಕೊಳ್ಳುತ್ತಿದ್ದ. ಸಂಖ್ಯೆ ಮೂರು ಅವನಿಗೆ ಹೂವಿನ ಹಾರದಂತೆ ಕಂಡರೆ ಏಳು ಬೃಹತ್ ರೋಮನ್ ಕಂಭದಂತೆ ಕಾಣುತ್ತಿತ್ತು. ಎಕ್ಕಾ, ದೊಡ್ಡ ಜೇಡರ ಬಲೆಯಂತೆ ಅವನ ಮನದ ಪುಟದ ಮೇಲೆ ಮೂಡುತ್ತಿತ್ತು. ಇಸ್ಪಿಟ್ ಎಲೆಗಳು ಮತ್ತು ಅವುಗಳಿಂದ ದೊಡ್ಡ ಮೊತ್ತವನ್ನು ಗೆಲ್ಲುವ ವಿಚಾರ ಬಿಟ್ಟರೆ ಅವನ ಮನಸ್ಸಿನೊಳಗೆ ಬೇರ್ಯಾವುದಕ್ಕೂ ಸ್ಥಾನವಿರಲಿಲ್ಲ. ಕೆಲಸಕ್ಕೆ ರಜೆ ಹಾಕಿ ಅವನು ಹೊರಗೆ ಹೋಗಲು ನಿರ್ಧರಿಸಿದ. ಪ್ಯಾರಿಸಿಗೆ ಹೋಗಿ ಅಲ್ಲಿಯ ಯಾವುದಾದರೂ ಹೆಸರುವಾಸಿ ಜೂಜು ಕೇಂದ್ರದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಅವನು ಹಾತೊರೆಯುತ್ತಿದ್ದ. ಆದರೆ ಅವನ ಅದೃಷ್ಟ ಬೇರೆಯದೇ ದಾರಿಯನ್ನು ತೋರಿಸಿತು.

ಮಾಸ್ಕೊ ನಗರದಲ್ಲಿ ಆಗ ಇಸ್ಪೀಟು ಆಡುವ ಧನಿಕರ ಗುಂಪೊಂದು ಸಕ್ರಿಯವಾಗಿತ್ತು. ಇದನ್ನು ಚೆಕಾಲಿನ್ಸ್ಕಿ ಎನ್ನುವವನು ನಡೆಸುತ್ತಿದ್ದ. ಅವನು ತನ್ನ ಇಡೀ ಜೀವಮಾನವನ್ನು ಇಸ್ಪೀಟು ಆಡುವುದರಲ್ಲೇ ಕಳೆದು ಅಗಾಧ ಐಶ್ವರ್ಯವನ್ನು ಕಮಾಯಿಸಿದ್ದ. ಅವನ ಮನೆ ಯಾವತ್ತೂ ಜೂಜುಕೋರರಿಗೆ ತೆರೆದೇ ಇರುತ್ತಿತ್ತು ಮತ್ತು ಸಮಾಜದಲ್ಲಿ ಅವನಿಗೆ ತುಂಬಾ ಗೌರವವಿತ್ತು. ಅವನೊಮ್ಮೆ ಸೈಂಟ್ ಪೀಟರ್ಸ್ಬರ್ಗ್ ನಗರಕ್ಕೆ ಬಂದಿದ್ದ. ನಗರದ ಕುಲೀನ ಮನೆತನದ ಹುಡುಗರು ತಂತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅವನ ಹಿಂದೆ ಬಿದ್ದರು. ಅವನ ಬಂಗಲೆ ಒಂದು ಥರ ಅವರಿಗೆ ಪುಣ್ಯಕ್ಷೇತ್ರದಂತಾಯಿತು. ಹರ್ಮನನ ಗೆಳೆಯ ನರುಮೊವ್ ಅವನನ್ನು ಚಿಕಾಲಿನ್ಸ್ಕಿಯ ಬಂಗಲೆಗೆ ಕರೆದುಕೊಂಡು ಹೋದ. ಪರಿಚಯ ಮಾಡಿಸಿದ. ಅವನನ್ನು ಆತ್ಮೀಯವಾಗಿ ಸ್ವಾಗತಿಸಿದ ಚೆಕಾಲಿನ್ಸ್ಕಿ ಅವನಿಗೆ ಕುಳಿತುಕೊಳ್ಳಲು ಹೇಳಿದ.

ಸಮಾಜದ ಗಣ್ಯವ್ಯಕ್ತಿಗಳೆಲ್ಲಾ ಚೆಕಾಲಿನ್ಸ್ಕಿಯ ಮನೆಯಲ್ಲಿ ತುಂಬಿ ಹೋಗಿದ್ದರು. ಅಲ್ಲಿ ಸಂಭ್ರಮದ ವಾತಾವರಣವಿತ್ತು. ನಡುಮನೆಯಲ್ಲಿ ಒಂದು ಉದ್ದದ ಮೇಜಿನ ತುದಿಯಲ್ಲಿ ಮನೆಯ ಯಜಮಾನ ವಿರಾಜಮಾನನಾಗಿದ್ದ. ಅವನ ಸುತ್ತ ಇಸ್ಪಿಟ್ ಆಟಗಾರರು ಈಗಾಗಲೇ ನೆರೆದಿದ್ದರು. ಅವನಿಗೆ ಸುಮಾರು ಅರವತ್ತು ವರ್ಷ ಪ್ರಾಯವಾಗಿತ್ತು. ಬೆಳ್ಳಿ ಕೂದಲುಗಳು ಅವನಿಗೆ ವಿಶಿಷ್ಟ ಕಳೆಯನ್ನು ಕೊಟ್ಟಿದ್ದವು. ಒಟ್ಟಿನಲ್ಲಿ ಅವನ ಖುಶಾಲ ಮನೋಭಾವ ಎಲ್ಲರನ್ನೂ ಆಕರ್ಶಿಸಿಸುತ್ತಿತ್ತು. ಚೆಕಾಲಿನ್ಸ್ಕಿ ತನ್ನ ಸುತ್ತ ನೆರೆದಿದ್ದವರಿಗೆ ಇಸ್ಪಿಟ್ ಎಲೆಗಳನ್ನು ಹಂಚಲು ಶುರುಮಾಡಿದ. ಮೇಜಿನ ಮೇಲೆ ಮುವ್ವತ್ತಕ್ಕೂ ಮಿಕ್ಕಿ ಜನರಿಗೆ ಎಲೆಗಳನ್ನು ಚೆಲ್ಲಿದ್ದ. ಪ್ರತಿ ಒಂದು ಎಲೆ ಎಸೆದಾಗಲೂ ಚೆಕಾಲಿನ್ಸ್ಕಿ ಆಟಗಾರರಿಗೆ ಎಲೆಗಳನ್ನು ಜೋಡಿಸಿಡಲು ಹಾಗೂ ತಂತಮ್ಮ ನಷ್ಟಗಳನ್ನು ಬರೆದಿಡಲು ಸಮಯ ಕೊಡುತ್ತಿದ್ದ.. ಅಂತೂ ಆ ಆಟ ಮುಗಿಯಿತು. ಚೆಕಾಲಿನ್ಸ್ಕಿ ಮತ್ತೊಮ್ಮೆ ಎಲೆಗಳನ್ನು ಹೆಕ್ಕಿದ.

“ನನಗೂ ಒಂದು ಅವಕಾಶ ಸಿಗಬಹುದೇ?” ಹರ್ಮನ್ ಕೇಳಿದ.
ಚೆಕಾಲಿನ್ಸ್ಕಿ ತಲೆ ಬಗ್ಗಿಸಿ, ನಾಟಕೀಯವಾಗಿ ಅವನಿಗೆ ಆಹ್ವಾನವಿತ್ತ. ನುರುಮೊವ್ ಅವನ ಬೆನ್ನು ತಟ್ಟಿ ಶುಭ ಕೋರಿದ. ಆಟ ಶುರುವಾಯ್ತು.
“ಸ್ಟೇಕ್!” ಹರ್ಮನ್ ದೊಡ್ಡ ದನಿಯಲ್ಲಿ ಹೇಳಿದ.
“ಎಷ್ಟು?” ಕಣ್ಣುಗಳನ್ನು ಕಿರಿದಾಗಿಸುತ್ತಾ ಕೇಳಿದ ಚೆಕಾಲಿನ್ಸ್ಕಿ. “ಇಲ್ಲಿಂದ ನನಗೆ ಸರಿಯಾಗಿ ಕಾಣಿಸುತ್ತಿಲ್ಲ.”
“ನಲ್ವತ್ತೇಳು ಸಾವಿರ ರೂಬಲುಗಳು!” ಹರ್ಮನ್ ಹೇಳಿದ.
ಒಮ್ಮೆಲೆ ಆ ಕೋಣೆಯಲ್ಲಿ ಗಾಢ ಮೌನ ತುಂಬಿಕೊಂಡಿತು. ಎಲ್ಲರ ಕಣ್ಣುಗಳೂ ಹರ್ಮನನ ಕಡೆಗೆ ತಿರುಗಿದವು.
“ಇವನಿಗೆ ತಲೆ ಕೆಟ್ಟಿಲ್ಲ ತಾನೆ?” ನರುಮೊವ್ ತನ್ನಷ್ಟಕ್ಕೆ ಅಂದುಕೊಂಡ.
ಚೆಕಾಲಿನ್ಸ್ಕಿಯ ತುಟಿಗಳ ಮೇಲಿದ್ದ ನಗೆಯು ಮಾಸಲಿಲ್ಲ.

“ತಮ್ಮಾ, ಇಷ್ಟು ಭಾರಿ ಮೊತ್ತವನ್ನು ಇಲ್ಲಿ ಇದುವರೆಗೆ ಯಾರೂ ಆಡಿರಲಿಲ್ಲ. ಈ ವರೆಗೂ ಇಲ್ಲಿ ಆಡಿದ ಅತ್ಯಧಿಕ ಮೊತ್ತವೆಂದರೆ ಇನ್ನೂರ ಎಪ್ಪತ್ತೈದು ರೂಬಲುಗಳು!”
“ಇರಬಹುದು. ಆದರೆ ನೀವು ನನ್ನ ಎಲೆಯನ್ನು ತಿರಸ್ಕರಿಸುವುದಿಲ್ಲವೆಂದು ನಂಬಿದ್ದೇನೆ.” ಹರ್ಮನ್ ಹೇಳಿದ.
ಚೆಕಾಲಿನ್ಸ್ಕಿ ಶಿರ ಬಾಗಿಸಿದ.
“ನನಗೆ ನನ್ನ ಅತಿಥಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆಯಾದರೂ ಹಣ ಮುಂದಿಟ್ಟರೆ ಮಾತ್ರ ನಿಮ್ಮ ಬಾಜೀ ಸ್ವೀಕರಿಸಲಿಕ್ಕೆ ಸಾಧ್ಯ. ಆಟದ ಗಾಂಭೀರ್ಯಕ್ಕೆ ಮತ್ತು ಶಿಸ್ತಿಗಾಗಿ ಮಾತ್ರ ಈ ನಿಯಮ ಮಾಡಿದ್ದೇವೆ.”
ಹರ್ಮನ್ ಮರುಮಾತನಾಡಲಿಲ್ಲ. ಜೇಬಿನಿಂದ ಬ್ಯಾಂಕ್ ಪತ್ರವನ್ನು ಹೊರತೆಗೆದು ಮೇಜಿನ ಮೇಲಿಟ್ಟ. ಅದರ ಮೇಲೆ ಕಣ್ಣಾಡಿಸಿದ ಚೆಕಾಲಿನ್ಸ್ಕಿ ಅದನ್ನು ಹರ್ಮನನ ಇಸ್ಪೀಟು ಎಲೆಗಳ ಮೇಲಿಟ್ಟು ಡೀಲ್ ಮಾಡಲು ಶುರು ಮಾಡಿದ. ಬಲಬದಿಗೆ ಒಂಭತ್ತು ಮತ್ತು ಎಡಬದಿಗೆ ಮೂರು ಸಂಖ್ಯೆಯ ಎಲೆಗಳು ಬಿದ್ದವು.

“ನಾನು ಗೆದ್ದೆ! ನಾನು ಗೆದ್ದೆ !!” ಹರ್ಮನ್ ತನ್ನ ಎಲೆಗಳನ್ನು ತೋರಿಸುತ್ತಾ ಕೂಗಿದ.
ಆಟದ ಕೋಣೆಯೊಳಗೆ ಒಮ್ಮೆಲೆ ವಿದ್ಯುತ್ ಸಂಚಾರವಾದಂತಾಯಿತು. ಎಲ್ಲರೂ ಒಮ್ಮೆಲೇ ಮಾತನಾಡತೊಡಗಿದರು. ಚೆಕಾಲಿನ್ಸ್ಕಿಯ ಹಣೆಯ ಮೇಲೆ ಒಂದು ಕಿರಿದಾದ ಗೆರೆ ಮೂಡಿ ಮಾಯವಾಯಿತು. ತುಟಿಗಳ ಮೇಲಿನ ನಗು ಮಾತ್ರ ಮಾಸಿರಲಿಲ್ಲ.
“ನಿಮ್ಮ ಹಣವನ್ನು ಎಣಿಸಲೇ?” ಅವನು ಕೇಳಿದ.
“ನಿಮ್ಮಿಷ್ಟ.” ಎಂದ ಹರ್ಮನ್. ಚೆಕಾಲಿನ್ಸ್ಕಿ ಜೇಬಿನಿಂದ ಒಂದು ದೊಡ್ಡ ನೋಟಿನ ಕಂತೆಯನ್ನು ಹೊರತೆಗೆದು ಹಣವನ್ನು ಎಣಿಸಿ ಹರ್ಮನನಿಗೆ ಕೊಟ್ಟ. ಅದನ್ನು ಇಸಿದುಕೊಂಡು ಹರ್ಮನ್ ಮೇಜಿನ ಮೇಲಿಂದ ಎದ್ದ. ನುರುಮೊವ್ ವಿಸ್ಮಿತನಾಗಿದ್ದ, ಅವನಿಗೊಂದು ನಗು ಬೀರಿ ಹರ್ಮನ್ ಹೊರಟುಹೋದ.

ಮರುದಿನ ಹರ್ಮನ್ ಮತ್ತೆ ಜುಗಾರಿ ಅಡ್ಡೆಗೆ ಹಾಜರಾದ. ಆಟ ಅದಾಗಲೇ ಆರಂಭವಾಗಿತ್ತು. ಅವನನ್ನು ನೋಡುತ್ತಿದ್ದಂತೆ ಎಲ್ಲರೂ ಕುತೂಹಲಭರಿತರಾಗಿ ಅಲ್ಲಿ ಮತ್ತೆ ಮೌನ ತುಂಬಿತು. ಚೆಕಾಲಿನ್ಸ್ಕಿ ಶಿರಬಾಗಿ ಅವನನ್ನು ಸ್ವಾಗತಿಸಿದ.
ಎರಡನೆ ಆಟ ಆರಂಭವಾಗುತ್ತಿದ್ದಂತೆ ಹರ್ಮನ್ ಒಂದು ಕಾರ್ಡನ್ನು ಹೆಕ್ಕಿ ಅದರ ಮೇಲೆ ನಲ್ವತ್ತೇಳು ಸಾವಿರ ಸಾವಿರ ರೂಬಲುಗಳನ್ನಷ್ಟೇ ಅಲ್ಲದೆ ಹಿಂದಿನ ದಿನ ಗೆದ್ದಿದ್ದ ನಲ್ವತ್ತೇಳು ಸಾವಿರ ರೂಬಲುಗಳನ್ನೂ ಅದರ ಮೇಲಿಟ್ಟ.
ಚೆಕಾಲಿನ್ಸ್ಕಿ ಎಲೆಗಳನ್ನು ಎಸೆದ.
ಬಲಕ್ಕೆ ಜಾಕ್ ಮತ್ತು ಎಡಕ್ಕೆ ಏಳು ಬಿದ್ದಿತ್ತು. ಹರ್ಮನ್ ತನ್ನ ಬಳಿ ಇದ್ದ ಏಳು ತೋರಿಸಿದ.
ಕೋಣೆಯಲ್ಲಿದ್ದವರ ಎಲ್ಲರ ಬಾಯಿಂದಲೂ ವಿವಿಧ ಉದ್ಗಾರಗಳು ಹೊರಟವು. ಚೆಕಾಲಿನ್ಸ್ಕಿ ಕೊಂಚ ಅಸ್ವಸ್ಥನಾದಂತೆ ಕಾಣುತ್ತಿದ್ದ. ಆದರೂ ತಡಮಾಡದೆ ತೊಂಭತ್ತುನಾಲ್ಕು ಸಾವಿರ ರೂಬಲುಗಳನ್ನು ಎಣಿಸಿ ಮೇಜಿನ ಮೇಲಿಟ್ಟ. ಹರ್ಮನ್ ಅವುಗಳನ್ನು ಪಡೆದು ಅಲ್ಲಿಂದ ಹೊರಟು ಹೋದ. ಮಾರನೆಯ ದಿನ ಹರ್ಮನ್ ಮತ್ತೆ ಜೂಜು ಅಡ್ಡೆಗೆ ಹಾಜರಾದ. ಎಲ್ಲರೂ ಅವನ ಹಾದಿ ಕಾಯುತ್ತಿದ್ದವರಂತೆ ಕುತೂಹಲದಿಂದ್ದಿದ್ದರು. ಎಲ್ಲರೂ ತಂತಮ್ಮ ಆಟಗಳನ್ನು ಮುಗಿಸಿ, ಹರ್ಮನನ ಆಟ ನೋಡಲು ಕಾತರರಾಗಿರುವಂತೆ ಕಂಡು ಬಂದಿತು. ಚೆಕಾಲಿನ್ಸ್ಕಿಯ ಮನೆಯಾಳುಗಳು ಕೂಡ ಸುದ್ಧಿ ತಿಳಿದು ಅಲ್ಲಿಗೆ ಬಂದು ಜಮಾಯಿಸಿದರು. ಈ ಭಾರಿ ಮೇಜಿನ ಮೇಲೆ ಹರ್ಮನನಲ್ಲದೆ ಬೇರ್ಯಾರೂ ಪಾಲ್ಗೊಳ್ಳಲಿಲ್ಲ. ಚೆಕಾಲಿನ್ಸ್ಕಿಯ ಕೈಗಳು ಕಂಪಿಸುತ್ತಿರುವಂತೆ ಭಾಸವಾಗುತ್ತಿತ್ತಾದರೂ ಅವನು ಸಮತೋಲನ ಕಳೆದುಕೊಳ್ಳಲಿಲ್ಲ. ಇಬ್ಬರೂ ಒಂದೊಂದು ಕಂತೆ ಎಲೆಗಳನ್ನು ತೆಗೆದುಕೊಂಡು ಕಲೆಸತೊಡಗಿದರು. ಹರ್ಮನ್ ಒಂದು ಎಲೆಯನ್ನು ಹೆಕ್ಕಿ ಅದನ್ನು ಮೇಜಿನ ಮೇಲೆ ಮಗುಚಿಟ್ಟು ಅದರ ಮೇಲೆ ತಾನು ಈವರೆಗೆ ಗೆದ್ದ ಹಣವನ್ನೆಲ್ಲಾ ಪೇರಿಸಿಟ್ಟ. ಕೋಣೆಯೊಳಗೆ ಸಾಸಿವೆ ಬಿದ್ದರೂ ಕೇಳುವಷ್ಟು ನಿಶ್ಶಬ್ಧತೆ ತುಂಬಿಕೊಂಡಿತ್ತು.

ಚೆಕಾಲಿನ್ಸ್ಕಿಯ ಕೈಗಳು ಎಲ್ಲರಿಗೂ ಕಾಣಿಸುವಂತೆ ಕಂಪಿಸುತ್ತಿದ್ದವು. ಆದರೂ ತನ್ನ ಕಂತೆಯಂದ ಎರಡು ಕಾರ್ಡುಗಳನ್ನು ಎಳೆದು ಒಂದು ಬಲಕ್ಕೆ, ಒಂದು ಎಡಕ್ಕೆ ಎಸೆದ. ಬಲಕ್ಕೆ ರಾಣಿ, ಎಡಕ್ಕೆ ಎಕ್ಕಾ ಬಿದ್ದಿತ್ತು.
“ನನ್ನ ಎಕ್ಕಾ ಗೆದ್ದಿತು!!” ಹರ್ಮನ್ ಹುಚ್ಚನಂತೆ ಕೂಗಿದ.
ಚೆಕಾಲಿನ್ಸ್ಕಿಯ ಕಣ್ಣುಗಳು ಕಿರಿದಾದವು….
“ಗೆಳೆಯಾ, ನಿನ್ನನ್ನು ರಾಣಿ ಸೋಲಿಸಿದಳು” ಚೆಕಾಲಿನ್ಸ್ಕಿ ಮಂದಹಾಸ ಬೀರುತ್ತಾ ಹೇಳಿದ. “ನಿನ್ನ ಎಲೆಯನ್ನು ಮತ್ತೊಮ್ಮೆ ನೋಡು? ನಿನ್ನ ಬಳಿ ಇರುವುದು ರಾಣಿ!!!”
ಹರ್ಮನ್ ಮಗುಚಿಟ್ಟಿದ್ದ ಕಾರ್ಡನ್ನು ತಿರುಗಿಸಿ ಒಮ್ಮೆ ನೋಡಿದ. ಅವನ ಮುಖ ಬಿಳುಚಿಕೊಂಡಿತು. ಬಾಯೊಳಗಿನ ಪಸೆ ಆರಿತು. ತುಟಿಗಳು ಕಪ್ಪಗಾಗತೊಡಗಿದವು. ಅವನು ಹುಚ್ಚು ಹಿಡಿದವನಂತೆ ರೋಧಿಸತೊಡಗಿದ.

ದಿಟವಾಗಿಯೂ ಅವನ ಕೈಯಲ್ಲಿ ರಾಣಿ ಇತ್ತು.
ರಾಣಿ ವ್ಯಂಗ್ಯದಿಂದ ಅವನನ್ನು ನೋಡಿ ಕಣ್ಣು ಮಿಟುಕಿಸಿದಂತಾಯಿತು. ಅದು ಮುದಿ ಕೌಂಟೆಸ್ಸಳಂತೆಯೇ ಅವನಿಗೆ ಕಾಣಿಸತೊಡಗಿದಳು.
“ಮುದಿ ಕೌಂಟೆಸ್ಸ!!” ತಾನೆಲ್ಲಿದ್ದೇನೆ ಎಂಬುದನ್ನು ಅರಿಯದೆ ಅವನು ಜೋರಾಗಿ ಚೀರಿದ.
ಚೆಲಾನ್ಸ್ಕಿ ಮೇಜಿನ ಮೇಲಿದ್ದ ಹಣವನ್ನೆಲ್ಲಾ ನಿರ್ವಿಕಾರವಾಗಿ ಬಾಚಿಕೊಂಡ.
ಹರ್ಮನ್ ಸಾವಾಕಾಶವಾಗಿ ಎದ್ದು ಬಾಗಿಲ ಕಡೆಗೆ ಹೆಜ್ಜೆ ಹಾಕತೊಡಗಿದ. ಅವನು ತೂರಾಡುತ್ತಿದ್ದ.
ಅವನು ಹೊರಗೆ ಹೋದಂತೆ ಅಡ್ಡೆಯೊಳಗೆ ಮತ್ತೆ ಎಂದಿನಂತೆ ಗದ್ದಲ ತುಂಬಿತು.
ಏನೂ ನಡೆದಿಲ್ಲವೆಂಬಂತೆ ಚೆಕಾಲಿನ್ಸ್ಕಿ ಮತ್ತೆ ಇಸ್ಪಿಟ್ ಎಲೆಗಳನ್ನು ಕಲೆಸತೊಡಗಿದ.
ಆಟ ಮುಂದುವರೆಯಿತು.

**********

ದಿನಗಳೆದಂತೆ ಹರ್ಮನ್ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡ. ಅವನು ಈಗ ಮಾಸ್ಕೋದ ‘ಒಬುಕೊವ್ ಆಸ್ಪತ್ರೆ’ ಯಲ್ಲಿ ಹದಿನೇಳನೇ ಕೋಣೆಯಲ್ಲಿದ್ದಾನೆ. ಯಾರು ಮಾತನಾಡಿಸಿದರೂ ಉತ್ತರಿಸುವುದಿಲ್ಲ. ಅವನಷ್ಟಕ್ಕೇ ಏನೋ ಬಡಬಡಿಸುತ್ತಿರುತ್ತಾನೆ. ನೀವು ಕಿವಿಗೊಟ್ಟು ಕೇಳಿದರೆ ಮಾತ್ರ ಗೊತ್ತಾಗುತ್ತದೆ: ಮೂರು… ಏಳು…ಎಕ್ಕಾ!!!
ಕೌಂಟೆಸ್ಸಳ ಮನೆ ಸಿಬ್ಬಂಧಿಯವಳೊಬ್ಬಳ ಮಗನೊಡನೆ ಲಿಜಾವೆತಾ ಮದುವೆಯಾದಳು. ಹುಡುಗ ಸರ್ಕಾರಿ ನೌಕರಿಯಲ್ಲಿದ್ದು ಕೈ ತುಂಬಾ ದುಡಿಯುತ್ತಿದ್ದಾನೆ.
ಟಾಮ್ ಸ್ಕಿಗೆ ಸೈನ್ಯದಲ್ಲಿ ಕಪ್ತಾನನ ಭಡ್ತಿ ಸಿಕ್ಕಿ, ಅವನ ಮತ್ತು ರಾಜಕುಮಾರಿ ಪಾವ್ಲಿನಾಳ ಮದುವೆಯೂ ಆಯಿತು.

-ಜೆ.ವಿ.ಕಾರ್ಲೊ. 

(ರಶ್ಯನ್ ಲೇಖಕ ಅಲೆಕ್ಸಾಂಡರ್ ಪುಷ್ಕಿನನ The Queen of Spades (1834) ಕತೆಯ ಅನುವಾದ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x