ಇಷ್ಟು ಗಡಿಬಿಡಿ ಮಾಡ್ಕೊಂಡ್ ಯಾಕ ಹೋದ್ರಿ?: ಗುರುಪ್ರಸಾದ ಕುರ್ತಕೋಟಿ

guruprasad-kurtakoti
ಅವತ್ತು ಎಪ್ರಿಲ್ ೨೧ ನೆ ತಾರೀಖು, ಮದ್ಯಾಹ್ನದ ಹೊತ್ತು. ಫೇಸ್ ಬುಕ್ ಮೆಸ್ಸೆಂಜರ್ ನಲ್ಲಿ ಬಂದ “ಎಂತದ್ರೋ” ಅನ್ನೋ ಮೆಸ್ಸಜು ನನ್ನ ಕಣ್ಣು ಹಿಗ್ಗಿಸಿತ್ತು. ಯಾವ ಹಿರಿಯರು ಆನ್ಲೈನ್ ಇದ್ದಾರೆ ಅಂತ ಗೊತ್ತಿದ್ರೂ, ಅವರು ನನಗೆ ಎಷ್ಟು ಚೆನ್ನಾಗಿ ಪರಿಚಯ ಇದ್ರೂ, ಅವರನ್ನ  ಮಾತಾಡಿಸಬೇಕು ಅಂತ ಆಸೆ ಆದರೂ ಪಿಂಗ್ ಮಾಡೋಕೆ ಹೆದರತಿದ್ನೋ, ಅವರೇ ನನಗೆ “ಎಂತದ್ರೋ” ಅನ್ನೋ ಮೆಸ್ಸೇಜ್ ಕಳಸಿದ್ರೆ ನನಗೆ ಎಷ್ಟು ಖುಷಿ ಆಗಬೇಡಾ? ಅವತ್ತಿನ ದಿನ ನಾನು ಅಮೇರಿಕದಲ್ಲಿ ಇದ್ದೆ, ಅವ್ರು ಬೆಂಗಳೂರಿನಲ್ಲಿ. ನನಗೆ ಮದ್ಯಾಹ್ನ, ಅವರಿಗೆ ರಾತ್ರಿ. ಮಲೆನಾಡಿನ ಕಡೆ “ಎಂತದ್ರೋ” ಅನ್ನೋದು ನಮ್ಮ ಧಾರವಾಡದ ಕಡೆ “ಏನಂತೀರಿ?” ಅಂದಂತೆ. ಅವರು ಹಾಗೆ ಕೇಳಿದ್ದಕ್ಕೆ ಒಂದು ಹಿನ್ನೆಲೆ ಇದೆ… ಆಮೇಲೆ ಹೇಳ್ತೀನಿ… ಹಾಗೇ ನಮ್ಮ ಮಾತುಕತೆ ಮುಂದುವರೆಯಿತು…
“ನಮಸ್ಕಾರ ಗುರುಗಳೆ! ಕಡಿಗೆ?”
“ಎಂತಿಲ್ಲೆ ಮಾರಾಯಾ ಸಾಯ್ಲಿ… ಇಲ್ ಬಾಳಾ ಶಕೆ…”
“ಈ ಬದಿಗೆ ಬಂದ್ಬಿಡಕಾಗಿತ್ತು! ಇಲ್ಲಿ ಚಳಿ ಮುಗೀತೆ ಇಲ್ಲೆ… ಸಾಯ್ಲಿ” 
“ಸಂತ್ಯಾಗ ನಿಂತಾನ ಕಬೀರ' ಮತ್ತ 'ದೊಡ್ಡಪ್ಪ' ಎರಡೂ ಸೆಕೆಂಡ್ ಎಡಿಶನ್ ರಿಲೀಸ್ ಗೆ ರೆಡಿ.”
“Woತಿ! ಒಳ್ಳೆಯ ಸುದ್ದಿ. ಆರೋಗ್ಯ ಹೆಂಗದ ಸರ್?”
“ಎರಡೂ ಮುಂದಿನ ತಿಂಗಳದಾಗ. ಅನಂತ್ ನಾಗ್ ಮತ್ತ ಪ್ರಕಾಶ್ ರೈ ಗೆ ಹೇಳೀನಿ. ಬಿಡುಗಡಿ ಮಾಡ್ಲಿಕ್ಕೆ ಹೂಂ ಅಂದಾರ. ಈಗ ಅಡ್ಡಿ ಇಲ್ಲಾ.”
“ಸುಪರ್”
“ಸರಿ. ಅಂ ಮತ್ತೆ ಸಿಗ್ತೆ. ಅಕ್ಕಾ?” 
“ಅಕ್ಕು ” 
“:) ಮಲಗ್ತೆ. ಹನ್ನೊಂದಾಗಿ ಹೋಜು.”
“ಶುಭ ರಾತ್ರಿ”
ಈಗ ಅವರು ಯಾರು ಅಂತ ಗೊತ್ತಾಗಿರಬೇಕಲ್ಲ? ಶ್ರೀ. ಗೋಪಾಲ ವಾಜಪೇಯಿ ಅವರೇ ಆ ಹಿರಿಯರು! ನನಗೆ ಅವರು ಮಿತ್ರರು, ಮಾರ್ಗದರ್ಶಕರು, ಗುರುಗಳು ಎಲ್ಲ. ಅವರಿಗೆ ಅವತ್ತು ಆ  ಖುಷಿಯನ್ನು ನನ್ನ ಜೊತೆಗೆ ಹಂಚಿಕೊಳ್ಳಬೇಕು ಅಂತ ಅನಿಸಿದ್ದೇ ನನಗೆ ಪುಳಕ ತರುವಂತಹ ವಿಷಯ. ಅವರು ಇತ್ತೀಚಿಗೆ ನಮ್ಮನ್ನೆಲ್ಲ ಬಿಟ್ಟು ದೂರ ಹೋದರು ಅನ್ನೋದನ್ನ ಇನ್ನೂ ಅರಗಿಸಿಕೊಳ್ಳಲಾಗದ ಮನಸ್ಥಿತಿಯಲ್ಲಿರುವ ಅವರ ಎಲ್ಲ ಅಪ್ತರಲ್ಲಿ ನಾನೂ ಒಬ್ಬ! ಅವರ ಜೊತೆ ಕಳೆದ ಅಮೂಲ್ಯ ಕ್ಷಣಗಳಲ್ಲಿ ಕೆಲವನ್ನಾದರೂ ಹಂಚಿಕೊಳ್ಳುವ ಬಯಕೆಯ ಪ್ರತಿಫಲವೇ ಈ ಬರಹ.   
    
ನಾವಿಬ್ಬರೂ ಉತ್ತರ ಕರ್ನಾಟಕದವರೇ ಆದರೂ ಅವರು ಅವತ್ತು ಮಲೆನಾಡ ಕನ್ನಡದಲ್ಲಿ ಯಾಕೆ ಮಾತಾಡಿದರು ಅಂದರೆ, ಕೆಲವು ವರ್ಷಗಳನ್ನು ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಳಿಯ ಹಾರ್ಸಿಕಟ್ಟಾ ಎಂಬ ಊರಿನಲ್ಲಿ ಕಳೆದಿದ್ದರಂತೆ. ಅದಕ್ಕೆ ಆ ಭಾಷೆ ಅವರಿಗೆ ಚೆನ್ನಾಗಿ ಬರುತ್ತಿತ್ತು. ನನ್ನ ಹೆಂಡತಿ ಅಲ್ಲಿಯವಳೇ ಆದ್ದರಿಂದ ನನಗೂ ಅಲ್ಪ ಸ್ವಲ್ಪ ಹವ್ಯಕ ಕನ್ನಡ ಬರುತ್ತೆಂದು ಅವರಿಗೆ ಗೊತ್ತಿತ್ತು. ಅದಕ್ಕೆ ಅವಾಗವಾಗ ನನ್ನ ಬಳಿ ಹಾಗೆ ಮಾತಾಡೋರು. ಅದೂ ಅಲ್ಲದೆ ಅವರಿಗೆ ಅಲ್ಲಿನ ಊಟವೂ ಇಷ್ಟ ಆಗಿತ್ತು. ಒಮ್ಮೆ ನಮ್ಮ ಮನೆಗೆ ಊಟಕ್ಕೆ ಬಂದಾಗ ನನ್ನ ಹೆಂಡತಿ ಮಾಡಿದ್ದ ಮಲೆನಾಡಿನ ನಳಪಾಕವನ್ನು ಸವಿದು ಕೊಂಡಾಡಿದ್ದರು. ಸಮಾನಮನಸ್ಕ ಗೆಳೆಯರೆಲ್ಲ ಸೇರಿ ಮಾಡಿದ್ದ ನಮ್ಮ ‘ಸಂಬಾರ್’ ಎಂಬ ಬಳಗದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವತ್ತು ನಮ್ಮ ಮನೆಗೆ ಬಂದಿದ್ದರು. ಅವತ್ತಿನ ದಿನ ನಾವೆಲ್ಲಾ ಸೇರಿ, ಶ್ರೀ. ಕರ್ಕಿ ಕೃಷ್ಣಮೂರ್ತಿ ಅವರ ಮನೆಯಲ್ಲಿ “ಸಂಸ್ಕಾರ” ಚಲನಚಿತ್ರ ನೋಡಿದ್ದೆವು. ನಡು ನಡುವೆ ಗುರುಗಳಿಗೆ ಆ ಚಿತ್ರಕ್ಕೆ ಸಂಬಂಧಿಸಿದ ಯಾವುದೊ ಒಂದು ವಿಷಯ ನೆನಪಾಗುತ್ತಿತ್ತು. “ತಡ್ರೀ… ಸ್ವಲ್ಪ pause ಮಾಡ್ರಿ …” ಅನ್ನೋರು, ನೆನಪಾದ ವಿಷಯವನ್ನು ರಸವತ್ತಾಗಿ ಹೇಳೋರು. ಹಾಗೆ ಎಷ್ಟು ಸಲ pause ಮಾಡಿದೆವೋ ಲೆಕ್ಕವಿಲ್ಲ. ಅವರ ಮಾತಿನ ಭೂರಿ ಭೋಜನ ನಮಗೆ! ಅವತ್ತು ಇನ್ನೂ ಎಷ್ಟೋ ವಿಷಯಗಳ ಬಗ್ಗೆ ಮಾತಾಡಿದ್ದರು. ಅನಂತನಾಗ್, ಸುಂದರ್ ಕೃಷ್ಣ ಅರಸ್, ಬೇಂದ್ರೆ, ಸಿ. ಅಶ್ವಥ್, ಕೀರ್ತಿನಾಥ ಕುರ್ತಕೋಟಿ, ಕಾರ್ನಾಡ್… ಎಲ್ಲರ ಬಗ್ಗೆ ನೆನಪುಗಳನ್ನು ಹಂಚಿಕೊಂಡರು. ಆ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ. 

“ಸರ್, ಒಮ್ಮೆ ಸಿರ್ಸಿಗೆ ಹೋಗೋಣಂತ … ನಾನ ನಿಮ್ಮನ್ನ ಕಾರಿನ್ಯಾಗ ಕರಕೊಂಡ ಹೋಗ್ತೀನಿ…” ಅಂತ ಹೇಳಿದ್ದೆ. ಅವರೂ “ಹೂ ಹೋಗೋಣಂತ” ಅಂದಿದ್ರು. ಆದ್ರೆ ಅದು ಸಾಧ್ಯವಾಗಲೇ ಇಲ್ಲ.


ಒಂದು ಸಲ ಶ್ರೀ. ಗೋಪಾಲ ವಾಜಪೇಯಿ ಅವರು “ಕೇಳು ನಾಟಕ” ಅನ್ನುವ ಅಪರೂಪದ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಅದು ಹೆಸರಾಂತ ಕಲಾವಿದೆ ಶ್ರೀಮತಿ. ಜಯಲಕ್ಷ್ಮಿ ಪಾಟೀಲ ಅವರ ಮನೆಯಲ್ಲಿ ಇತ್ತು. ಅದರಲ್ಲಿ ಭಾಗವಹಿಸಲು ಗುರುಗಳು ನನಗೂ ಕರೆದಿದ್ದರು ಅನ್ನೋದೇ ನನಗೆ ದೊಡ್ಡ ವಿಷಯ! ಅದು ಅವರೇ ಬರೆದ “ಸಂತ್ಯಾಗ ನಿಂತಾನ ಕಬೀರ” ನಾಟಕದ ಶ್ರವಣ ಕಾರ್ಯಕ್ರಮ. ಒಬ್ಬೊಬ್ಬರಿಗೆ ಒಂದೊಂದು ಪಾತ್ರವನ್ನು ಕೊಟ್ಟಿದ್ದರು. ನಾವೆಲ್ಲಾ ಕುಳಿತುಕೊಂಡು ಆ ಪಾತ್ರದ ಸಂಭಾಷಣೆಗಳನ್ನು ಆ ಸನ್ನಿವೇಶಕ್ಕೆ ತಕ್ಕ ಭಾವದೊಂದಿಗೆ ಹೇಳುತ್ತಿದ್ದೆವು. ಉಳಿದವರಿಗೆ ಕಣ್ಣು ಮುಚ್ಚಿಕೊಂಡು ಆಸ್ವಾದಿಸುವ ಕೆಲಸ ಕೊಟ್ಟಿದ್ದರು. ಅದೊಂದು ವಿಶಿಷ್ಟ ಅನುಭವ! ದೃಶ್ಯ ಮಾಧ್ಯಮಗಳೇ ಮೇಲುಗೈ ಪಡೆದಿರುವ ಈಗಿನ ಕಾಲದಲ್ಲಿ ಕಣ್ಣು ಮುಚ್ಚಿಕೊಂಡು, ಕೇಳಿ ನಮ್ಮದೇ ಮನಸ್ಸಿನ ಪರದೆಯ ಮೇಲೆ ದೃಶ್ಯಗಳನ್ನು ಮೂಡಿಸಿಕೊಳ್ಳುವ ಆ ಬಗೆಯನ್ನು ಹೇಳಿಕೊಟ್ಟ ಗುರುಗಳ ಬಗ್ಗೆ ನನಗೆ ಹೆಮ್ಮೆ! ಅವತ್ತು ಇನ್ನೂ ಎಷ್ಟೋ ಪ್ರಖ್ಯಾತ ರಂಗ ಕಲಾವಿದರು ಅಲ್ಲಿ ಬಂದಿದ್ದರು. ಅವರ ಜೊತೆ ಭಾಗವಹಿಸಿದ ನಾನೇ ಧನ್ಯ. ಅವತ್ತು ಮಾಡಿದ್ದು ಒಂದು ಸಣ್ಣ ತಾಲೀಮು ಅಷ್ಟೇ. ಕೇಳು ನಾಟಕವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಬಯಕೆ ಅವರಿಗಿತ್ತು. ಅದು ಯಾಕೋ ಕೈಗೂಡಲಿಲ್ಲ.

—    

ನನಗೊಮ್ಮೆ ಶ್ರೀ. ಪಿ. ಶೇಷಾದ್ರಿ ಅವರ ಜೊತೆ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ನಿಗದಿತ ದಿನದಂದು ಅವರ ಕಾರ್ಯಾಲಯದಲ್ಲಿ  ಅವರನ್ನು ಭೇಟಿಯಾಗುವದಾಗಿ ನಿರ್ಧಾರವಾಗಿತ್ತು. ಗುರುಗಳ ಮನೆಯೂ ಅಲ್ಲೇ ಹತ್ತಿರ ಇದ್ದುದರಿಂದ, ನಾನು ಅವರಿಗೆ ಫೋನಾಯಿಸಿ ನಾನು ಶೇಷಾದ್ರಿ ಅವರನ್ನು ಭೇಟಿಯಾಗಲು ಬರುತ್ತಿರುವುದಾಗಿಯೂ, ನಿಮ್ಮನ್ನೂ ಭೇಟಿಯಾಗಲು ನಿಮ್ಮ ಮನೆಗೆ ಬರಲೇ ಅಂತ ಕೇಳಿದೆ. ಅದಕ್ಕವರು… “ಮುದ್ದಾಂ ಬರ್ರೀ… ನಾನೂ ಶೇಷಾದ್ರಿ ಅವರನ್ನ ಭೆಟ್ಟಿ ಆಗಿ ಭಾಳ ದಿವ್ಸ ಆತು… ನಾನೂ ಬರ್ತೀನಿ ನಿಮ್ಮ ಜೋಡಿ” ಅಂದ್ರು. ನನಗೋ ಅವರು ನನ್ನ ಜೊತೆ ಬರುತ್ತಾರೆ ಅನ್ನೋದೇ ಸಂಭ್ರಮ! ಶೇಷಾದ್ರಿ ಅವರ ಆಫೀಸ್ ಗೆ ಒಟ್ಟಿಗೆ ಹೋದೆವು. ಯಾವುದೋ ಲೊಕೇಶನ್ ನೋಡೋಕೆ ಅಂತ ಹೋಗಿದ್ದ ಶೇಷಾದ್ರಿ ಅವರು ಬರೋದು ಸ್ವಲ್ಪ ತಡ ಆಯಿತು. ನಾನು ಗೋಪಾಲ ವಾಜಪೇಯಿಯವರನ್ನು ಕರೆದುಕೊಂಡು ಬರುತ್ತೇನೆಂದು ಅವರಿಗೆ ಮೊದಲೇ ಗೊತ್ತಿರಲಿಲ್ಲವಾದ್ದರಿಂದ ಅವರನ್ನು ತುಂಬಾ ಕಾಯಿಸಿಬಿಟ್ಟೆನೆಂದು ವ್ಯಥೆ ಪಟ್ಟರು. ಅವರನ್ನು ಕರೆದುಕೊಂಡು ಬರುವ ವಿಚಾರ ಮೊದಲೇ ಯಾಕೆ ತಿಳಿಸಲಿಲ್ಲ ಅಂತ ನನಗೆ ಸಣ್ಣಗೆ ಗದರಿದರು. ನಂತರ ಅಲ್ಲೊಂದಿಷ್ಟು ಹರಟೆ, ಚಹಾ ಆಯಿತು. 

“…ಇವಾ ನಮ್ಮ ಹುಡುಗ… ಸ್ವಲ್ಪ ಬಣ್ಣದ ಗೀಳು ಅದ. ಚೊಲೋ ಬರೀತಾನ…” ಅಂತ ಅವರ ಮುಂದೆ ಹೇಳಿದರು. ನಂತರ ತಮ್ಮ ಮನೆಗೆ ಒತ್ತಾಯದಿಂದ ಊಟಕ್ಕೆ ಕರೆದೊಯ್ದರು. 
“ನಿಮ್ಮ ಅಪ್ಪ ಅವರ್ನೂ ಒಂದ ಸಲಾ ನಮ್ಮ ಮನಿಗೆ ಕರ್ಕೊಂಡ್ ಬರ್ರಿ..” ಅಂದ್ರು.. ಆದರೆ ಅದೇ ಗುರುಗಳ ಜೊತೆ ನನ್ನ ಕೊನೆಯ ಭೇಟಿ ಆಗುವುದೆಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ. ಯಾಕೆಂದರೆ ಮುಂದೆ ಕೆಲವೇ ದಿನಗಳ ನಂತರ ನಾನು ದೀರ್ಘಾವಧಿಯ ಕೆಲಸದ ಮೇಲೆ ಅಮೆರಿಕೆಗೆ ಹೋಗಬೇಕಾದ ಪ್ರಸಂಗ ಬಂತು. ಆಮೇಲೆ ಅವಾಗವಾಗ ಫೆಸಬುಕ್ ನಲ್ಲಿ ಮಾತಿಗೆ ಸಿಗೋರು.  

ಫೆಸ್ ಬುಕ್ ನಲ್ಲಿ ಲಕ್ಷ್ಮೇಶ್ವರದ ಗೆಳೆಯರೆಲ್ಲರ ಸೇರಿಸಿ ಒಂದು ಗ್ರೂಪ್ ಮಾಡಿಕೊಂಡಿದ್ದೇವೆ. ಅದರಲ್ಲಿ ನಡೆಯುತ್ತಿದ್ದ ಯಾವುದೇ ಮಾತುಕತೆಗಳಲ್ಲಿ ಅವರು ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಊರಿನ ಬಗ್ಗೆ, ಅದರ ಇತಿಹಾಸದ ಬಗ್ಗೆ, ಊರಿನ ಹೆಮ್ಮೆಗೆ ಕಾರಣರಾದವರ ಬಗ್ಗೆ ನಮಗೆ ತಿಳುವಳಿಕೆ ನೀಡುತ್ತಿದ್ದರು. ಅವರಿಂದ ಅಲ್ಲೊಂದು ಲವಲವಿಕೆ ಖಂಡಿತ ಇತ್ತು. ಅವರಿಲ್ಲದ ಆ ಗ್ರೂಪು ಈಗ ಭಣಗುಡುತಿದೆ! ಲಕ್ಷ್ಮೇಶ್ವರದ ಬಗ್ಗೆ ಅಪಾರ ಹೆಮ್ಮೆ ಅವರಿಗೆ ಇತ್ತು. ಅಲ್ಲೊಂದು ದಿನ ಎಲ್ಲರನ್ನೂ ಸೇರಿಸಿ ಸಮ್ಮೇಳನ ಮಾಡುವ ಬಗ್ಗೆ ಮಾತಾಡಿದ್ದೆವು. ಅದೂ ನನಸಾಗಲಿಲ್ಲ…ಹೀಗೆ ಅವರ ಜೊತೆಗಿನ ಇನ್ನೂ ಎಷ್ಟೋ ಆತ್ಮೀಯ ಒಡನಾಟಗಳು ಮನಸ್ಸಿನಲ್ಲಿ ಸುಳಿಯುತ್ತವೆ….   

ನನ್ನ ಬರಹಗಳನ್ನು ಆಗಾಗ ಓದಿ ಮೆಚ್ಚಿದ್ದರು. ತಪ್ಪಾದಾಗ ಎಷ್ಟೋ ಸಲ ಸಣ್ಣಗೆ ಗದರಿದ್ದೂ ಇದೆ. 
“ನಿಮ್ಮದು ತುಂಬಾ ಸರಳ, ಓದಿಸಿಕೊಂಡು ಹೋಗುವ ಶೈಲಿ … ಬರಿಯೋದ್ ನಿಲ್ಲಸಬ್ಯಾಡ್ರಿ ಗುರುಪ್ರಸಾದ” ಅಂತ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಂಯ್ ಗುಡುತಿದೆ. ಅಮೆರಿಕೆಗೆ ಬಂದು ಒಂದು ವರ್ಷ  ಹೆಚ್ಚು ಕಡಿಮೆ ಬರೆಯೋದನ್ನೇ ನಿಲ್ಲಿಸಿದ್ದ ನನಗೆ ಅವರ ಬಗ್ಗೆನೇ ಬರೆಯುವಂತೆ ಅವರೇ ಪ್ರೇರೇಪಿಸಿದರೆ…? ಇರಬಹುದೇನೋ! ಇಲ್ಲದಿದ್ದರೆ ಮುಂಜಾನೆ ೩ ಗಂಟೆಗೆ ಎದ್ದು ಕೂತು ಈ ಬರಹ ಬರೆಯುತ್ತಿದ್ದೇನೆ?! 

ಇದನ್ನು ಬರೆದಾದ ಮೇಲೆ ಬರಹವನ್ನು ಪಂಜು ಪತ್ರಿಕೆಗೆ ಕಳಿಸಿ ನಂತರ ಸಂಪಾದಕ ಮಿತ್ರ ನಟರಾಜುರೊಡನೆ ಮಾತಾಡೋವಾಗ, ಅವರ ಬಗ್ಗೆ ನೆನಪಿನ ಸಂಚಿಕೆ ಯಾಕೆ ತರಬಾರದು ಅನ್ನುವ ಆಲೋಚನೆ ಅವರು ಮುಂದಿಟ್ಟರು. ನಾನು ಕೂಡಲೇ ನನಗೆ ಪರಿಚಯವಿದ್ದ ಅವರ ಆತ್ಮೀಯರಲ್ಲಿ ಕೆಲವರನ್ನು ಕೇಳಿಕೊಂಡೆ. ಎಲ್ಲರಿಗೂ ಸಾಧ್ಯವಾಗಲಿಲ್ಲವಾದರೂ ಕೆಲವರು ಪ್ರೀತಿಯಿಂದ ಬರೆದು ಕೊಟ್ಟರು. ಅವರಿಗೆ ನಾವು ಅಭಾರಿಯಾಗಿದ್ದೇವೆ. ವಿಶೇಷವೆಂದರೆ ಈ ಸಂಚಿಕೆಯಲ್ಲಿನ ಬರಹಗಳು ವೈವಿಧ್ಯಮಯವಾಗಿವೆ. ಅವರ ಜೊತೆ ವಿವಿಧ ಕಾಲಘಟ್ಟಗಳಲ್ಲಿ ಒಡನಾಡಿದವರು ಬರೆದ ಆತ್ಮೀಯ ಲೇಖನಗಳು. ಅವರ ಮಗ ಶ್ರೀ. ವಿಶ್ವಾಸ ವಾಜಪೇಯಿ, ಸ್ನೇಹಿತ ಶ್ರೀ. ಶ್ರೀಪತಿ ಮಂಜನಬೈಲ್, ಅವರನ್ನು ಯಾವಾಗಲು ಕಾಕಾ ಅಂತಲೇ ಕರೆಯುತ್ತಿದ್ದ ಮಗಳ ಸ್ಥಾನದಲ್ಲಿರುವ ಶ್ರೀಮತಿ. ಜಯಲಕ್ಷ್ಮಿ ಪಾಟೀಲ, ಶಿಷ್ಯ ಶ್ರೀ. ಉಮೇಶ ದೇಸಾಯಿ ಹಾಗೂ ಗುರುಗಳಾದ ಶ್ರೀ. ಶಶಿಕಾಂತ ಕುರ್ತಕೋಟಿ ಇವರೆಲ್ಲರ ಬರಹಗಳಿವೆ. ಇದು ಶ್ರೀ. ಗೋಪಾಲ ವಾಜಪೇಯಿಯವರಿಗೆ ನಮ್ಮ ಕಡೆಯಿಂದ ಶೃದ್ಧಾಂಜಲಿ…

-ಗುರುಪ್ರಸಾದ ಕುರ್ತಕೋಟಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Umesh Desai
Umesh Desai
7 years ago

ಗುರು ಒಂದು ತಿದ್ದುಪಡಿ ಅದ ಕರ್ಕಿ ಅವರ ಮನೆಯಲ್ಲಿ ನೋಡಿದ್ದು

'ಒಂದಾನೊಂದು ಕಾಲದಲ್ಲಿ' ಸಂಸ್ಕಾರ ಅಲ್ಲ ಹಾಂ ಮತ್ತ ಅವತ್ತ ವೈನಿ ಅವ್ರ

ನಳಪಾಕ ನಾನೂ ಸವೆದಿದ್ದೆ…!!

ಗುರುಪ್ರಸಾದ ಕುರ್ತಕೋಟಿ
Reply to  Umesh Desai

ಉಮೇಶ್, ಹೌದು, ಅದು ಒಂದಾನೊಂದು ಕಾಲದಲ್ಲಿ…ನೆನಪಿಸಿದ್ದಕ್ಕೆ ಧನ್ಯವಾದಗಳು!  

ಕೊಲ್ಲೀರ ಸೋಮಣ್ಣ
ಕೊಲ್ಲೀರ ಸೋಮಣ್ಣ
7 years ago

Kannadadalle baribeku antha kashtapatte, aadare haalada mobilu kai kodtu. Guruprasadrantha prathibavantha kalavida, lekhaka maththu aayojakarondige susamayavannu hanchikolluvanthe needida bhagyakke, aa bhagavanthanige naanu chiraRuni. 

ಗುರುಪ್ರಸಾದ ಕುರ್ತಕೋಟಿ

ಸೋಮಣ್ಣ, ನೀವು ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಖುಷಿ ಆಯ್ತು. 🙂 

4
0
Would love your thoughts, please comment.x
()
x