ಕಥಾಲೋಕ

ಇವನು ಬದುಕಲೇ ಬೇಕು: ಜೆ.ವಿ.ಕಾರ್ಲೊ, ಹಾಸನ.


ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್
ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ.

‘ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಎಲ್ಲಾ ಸರಿಯಾಗಿದೆ.’ ವೈದ್ಯರು ಹೇಳುತ್ತಿದ್ದರು..
ಅವಳಿಗೆ ವೈದ್ಯರ ಸ್ವರ ಗಟ್ಟಿಯಾಗಿ, ಬಹಳ ದೂರದಿಂದೆಂಬಂತೆ ಕೂಗಿ ಹೇಳಿದಂತೆ ಭಾಸವಾಯಿತು.
‘ನಿನಗೆ ಗಂಡು ಮಗು ಹುಟ್ಟಿದ್ದಾನೆ!’ ವೈದ್ಯರು ಹೇಳಿದರು.
‘ಏನು?’ ಆಕೆ ಪ್ರಯಾಸದಿಂದ ಕೇಳಿದಳು. 
‘ಗಂಡು ಮಗು, ಗಂಡು ಮಗು. ಈಗ ಕೇಳಿಸಿತೇನು?’
‘ಮಗು ಹೇಗಿದೆ ಡಾಕ್ಟರ್?’
‘ಚೆನ್ನಾಗಿದೆ. ಚೆನ್ನಾಗಿದೆ.’
‘ನಾನು ನೋಡಬಹುದೆ, ಡಾಕ್ಟರ್?’
‘ಖಂಡಿತಾ, ಖಂಡಿತಾ. ಇನ್ನೊಂದು ಗಳಿಗೆ..’
‘ಮಗು ಖಂಡಿತವಾಗಿಯೂ ಆರೋಗ್ಯದಿಂದೆಯಾ ಡಾಕ್ಟರ್?’ ಅವಳು ಮತ್ತೆ ಕೇಳಿದಳು.

‘ಹೌದಮ್ಮ. ನಿನ್ನ ಮಗ ಚೆನ್ನಾಗಿದ್ದಾನೆ.’
‘ಅವನು ಇನ್ನೂ ಅಳುತ್ತಿದ್ದಾನಾ ಡಾಕ್ಟರ್?..’
‘ಎಲ್ಲಾ ಸರಿಯಾಗಿದೆ ಕಣಮ್ಮ. ನೀನು ಈಗ ಸ್ವಲ್ಪ ವಿಶ್ರಾಂತಿ ತೆಗೆದುಕೊ.’
‘ಅವನು ಅಳುವುದನ್ನು ಯಾಕೆ ನಿಲ್ಲಿಸಿದ್ದಾನೆ ಡಾಕ್ಟ್ರೆ? ನೀವು ನನಗೆ…’
‘ನೀನು ಸುಮ್ಮಸುಮ್ಮನೆ ಉದ್ವೇಗಗೊಳ್ಳಬೇಡ ಕಣಮ್ಮ. ನಿನ್ನ ಮಗ ಆರೊಗ್ಯವಾಗಿದ್ದಾನೆ.’
‘ನನಗೆ ಅವನನ್ನು ನೋಡಬೇಕು. ದಯವಿಟ್ಟು ನನಗೆ ತೋರಿಸಿ ಡಾಕ್ಟ್ರೆ.’ ಅವಳು ಗೋಗರೆದಳು.
‘ನೋಡಮ್ಮ, ನಿನ್ನ ಮಗು ಆರೋಗ್ಯವಾಗಿದೆ. ನಿನಗೆ ನನ್ನ ಮೇಲೆ ನಂಬಿಕೆ ಬರುತ್ತಿಲ್ಲವೇ?’ ಅವಳ ಕೈಯನ್ನು ಮೃದುವಾಗಿ ತಟ್ಟುತ್ತಾ ವೈದ್ಯರು ಕೇಳಿದರು.

‘ಆ ಹೆಂಗಸು ನನ್ನ ಮಗೂಗೆ ಏನು ಮಾಡುತ್ತಿದ್ದಾಳೆ ಡಾಕ್ಟ್ರೆ?’
‘ನೋಡಮ್ಮ, ನಿನ್ನ ಮಗೂನ ಆಕೆ ಮೀಯಿಸುತ್ತಿದ್ದಾಳೆ. ನೀನು ಹೀಗೆ ಹಟ ಹಿಡಿದರೆ ಹೇಗೆ?’
‘ಹಾಗಾದ್ರೆ ನನ್ನ ಮಗು ಖಂಡಿತಾ ಸರಿಯಾಗಿದೆ ತಾನೆ?’
‘ಖಂಡಿತವಾಗಿಯೂ ಕಣಮ್ಮ! ನೀನೀಗ ಸ್ವಲ್ಪ ವಿಶ್ರಮಿಸು. ಎಲ್ಲಿ ಕಣ್ಣು ಮುಚ್ಚು… ಹುಂ..’
‘ಅವನು ಬದುಕಬೇಕೆಂದು ನಾನು ಎಷ್ಟೊಂದು ಬೇಡಿಕೊಂಡಿದ್ದೇನೆ, ಎಷ್ಟೊಂದು ಹರಕೆಗಳನ್ನು ಹೊತ್ತು ಕೊಂಡಿದ್ದೇನೆ ಗೊತ್ತೆ ಡಾಕ್ಟ್ರೇ?’

‘ಅದ್ಯಾಕಮ್ಮ? ನಿನ್ನ ಮಗನಿಗೆ ಏನೂ ಆಗೋಲ್ಲ. ಆರೋಗ್ಯವಾಗಿದ್ದಾನೆ.’
‘ನನ್ನ ಮುಂಚಿನ ಒಂದು ಮಗುವೂ ಉಳಿಯಲಿಲ್ಲ ಡಾಕ್ಟ್ರೆ’ ಅವಳ ದನಿಯಲ್ಲಿ ಆತಂಕವಿತ್ತು.

ವೈದ್ಯರು, ಸುಸ್ತಾಗಿ ನಿಸ್ತೇಜಗೊಂಡ ಆಕೆಯ ಮುಖವನ್ನೇ ಗಮನಿಸಿದರು. ಈ ಮೊದಲು ಅವರು ಆಕೆಯನ್ನು ನೋಡಿರಲಿಲ್ಲ. ಆಕೆ ಮತ್ತು ಅವಳ ಗಂಡ ಆ ಊರಿಗೆ ಹೊಸಬರಾಗಿದ್ದರು. ಸೂಲಗಿತ್ತಿಯ ಜಾಗದಲ್ಲಿ ಬಂದಿದ್ದ ಆ ಖಾನಾವಳಿಯ ಯಜಮಾನನ ಹೆಂಡತಿ ಡಾಕ್ಟರರಿಗೆ ಈಕೆಯ ಗಂಡ ಸ್ಥಳೀಯ ಗಡಿ ಸುಂಕದ ಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಇತ್ತೀಚಿಗೆ, ಅಂದರೆ ಮೂರು ತಿಂಗಳ ಹಿಂದೆ ಅಚಾನಕ್ಕಾಗಿ ಒಂದು ಟ್ರಿಂಕು ಮತ್ತೊಂದು ಸೂಟುಕೇಸಿನೊಡನೆ ತಮ್ಮ ಖಾನಾವಳಿಗೆ ಬಂದು ಇಳಿದಿದ್ದರು ಎಂದು ತಿಳಿಸಿದ್ದಳು. ಈಕೆಯ ಗಂಡ ಮಹಾನ್ ಕುಡುಕ, ಜಗಳಗಂಟ, ದುರಾಂಕಾರಿ ಎಂದೂ, ಆದರೆ ಈಕೆ ಅಷ್ಟೇ ಒಳ್ಳೆಯ ಹೆಂಗಸು ಮತ್ತು ದೈವಭೀರು ಎಂದು ಖಾನಾವಳಿ ಯಜಮಾನನ ಹೆಂಗಸು ವೈದ್ಯರಿಗೆ ವರದಿ ಒಪ್ಪಿಸಿದ್ದಳು. ಅಷ್ಟೇ ಅಲ್ಲ, ಅವಳು ಯಾವತ್ತೂ ಅಳುಮುಖದಲ್ಲೇ ಇದ್ದು, ಅಲ್ಲಿದ್ದಷ್ಟು ದಿನ ಒಮ್ಮೆಯೂ ಆಕೆ ಮುಗುಳ್ನಕ್ಕಿದ್ದು ತಾನು ಕಂಡಿಲ್ಲವೆಂದೂ ಹೇಳಿದ್ದಳು. ಈಕೆ ಆ ಕುಡುಕನ ಮೂರನೆ ಹೆಂಡತಿ ಎಂದೂ, ಮೊದಲನೆಯವಳು ಸತ್ತಿದ್ದು, ಎರಡನೆಯವಳು ಇವನ ಕಾಟ ತಡೆಯಲಾರದೆ ವಿಚ್ಛೇದನ ಪಡೆದುಕೊಂಡಿದ್ದಾಳೆಂಬ ಗುಸುಗಸು ಸುದ್ದಿಯನ್ನೂ ವೈದ್ಯರಿಗೆ ಮುಟ್ಟಿಸಿದ್ದಳು. ಆದರೆ ಅದು ಕೇವಲ ಗುಸು ಗುಸು ಸುದ್ದಿಯಾಗಿತ್ತಷ್ಟೇ.

ಅವಳ ಹೊದಿಕೆಯನ್ನು ಎದೆ ಮಟ್ಟಕ್ಕೆ ಎಳೆಯುತ್ತಾ, ‘ನೀನು ಏನೂ ಚಿಂತೆ ಮಾಡಬೇಡ ಕಣಮ್ಮ. ನಿನ್ನ ಮಗು ಆರೋಗ್ಯವಾಗಿದೆ.’ ಎಂದರು.

‘ನನ್ನ ಇತರ ಮಕ್ಕಳ ಬಗ್ಗೆಯೂ ಹಾಗೇ ಹೇಳಿದ್ದರು ಡಾಕ್ಟ್ರೇ.. ಆದರೆ, ಒಂದೂ ಉಳಿಯಲಿಲ್ಲ! ಕಳೆದ ಹದಿನೆಂಟು ತಿಂಗಳುಗಳಲ್ಲಿ ನಾನು ಮೂರು ಮಕ್ಕಳನ್ನು ಕಳೆದುಕೊಂಡಿದ್ದೇನೆ ಡಾಕ್ಟ್ರೇ. ಆದ್ದರಿಂದ ನಾನು ವೃಥಾ ಆತಂಕಗೊಂಡಿದ್ದೇನೆ ಎಂದು ನೀವು ಭಾವಿಸಿಕೊಂಡರೆ ನನ್ನನ್ನು ಕ್ಷಮಿಸಬೇಕು.’ ಎಂದಳು ಆಕೆ.
‘ಮೂರು?’ ವೈದ್ಯರು ಆಶ್ಚರ್ಯದಿಂದ ಹುಬ್ಬೇರಿಸಿದರು.

‘ಹೌದು ಡಾಕ್ಟ್ರೇ. ಇದು, ನಾಲ್ಕು ವರ್ಷಗಳಲ್ಲಿ, ನನ್ನ ನಾಲ್ಕನೆಯ ಮಗು.’
ವೈದ್ಯರು ಏನು ಹೇಳುವುದೆಂದು ತೋಚದೆ ಅಸಹಾಯಕತೆಯಿಂದ ಸುಮ್ಮನಾದರು.
‘ಮೂರು ಮಕ್ಕಳನ್ನು ಒಂದರ ಹಿಂದೆ ಒಂದು ಕಳೆದುಕೊಳ್ಳುವುದೆಂದರೆ ಏನೆಂದು ನಿಮಗೆ ಖಂಡಿತ ಅರ್ಥವಾಗಲಾರದು ಡಾಕ್ಟ್ರೇ!..’ ಅವಳು ನಿಟ್ಟುಸಿರು ಬಿಟ್ಟಳು. ‘ಈಗಲೂ ನನ್ನ ಕಣ್ಣ ಮುಂದೆ ಅವರ ಮುಗ್ದ ಮುಖಗಳು ಹಾದು ಹೋಗುತ್ತಿವೆ. ನನ್ನ ಮುದ್ದು ಕಂದ ‘ಗುಸ್ತಾವ್’ ಈಗಲೂ ನನ್ನ ಎದೆಗವುಚಿಕೊಂಡು ಮಲಗಿದಂತೆ ನನಗೆ ಭಾಸವಾಗುತ್ತಿದೆ. ಗುಸ್ತಾವ್ ಎಷ್ಟೊಂದು ಸುಂದರನಾಗಿದ್ದ ಗೊತ್ತೇ ಡಾಕ್ಟ್ರೇ? ಆದರೆ ಯಾವಾಗಲೂ ಕಾಯಿಲೆಯಿಂದ ನರಳುತ್ತಿದ್ದ. ಮಕ್ಕಳು ಅರೋಗ್ಯ ತಪ್ಪಿದಾಗ ಬಹಳ ಕಷ್ಟ ಡಾಕ್ಟ್ರೇ. ಏನು ಮಾಡುವುದೆಂದೇ ತೋಚುವುದಿಲ್ಲ.’
‘ಹೌದಮ್ಮ, ನನಗೆ ಗೊತ್ತು.’ ವೈದ್ಯರು ಉತ್ತರಿಸಿದರು.

ಹೆಂಗಸು ಮುಚ್ಚಿದ ಕಣ್ಣುಗಳನ್ನು ಒಮ್ಮೆ ತೆರೆದು ವೈದ್ಯರನ್ನು ಕಣ್ಣಗಲಿಸಿ ನೋಡಿ ಮತ್ತೆ ಮುಚ್ಚಿದಳು.
‘ನನ್ನ ಮುದ್ದು ಹುಡುಗಿಯ ಹೆಸರು ‘ಐಡಾ’ ಡಾಕ್ಟ್ರೇ.. ಕ್ರಿಸ್ಮಸ್‍ಗೆ ಕೆಲವೇ ದಿನಗಳ ಹಿಂದೆ ತೀರಿಕೊಂಡಳು. ಅಂದರೆ ನಾಲ್ಕು ತಿಂಗಳ ಹಿಂದೆಯಷ್ಟೇ. ನೀವವಳನ್ನು ನೋಡಬೇಕಿತ್ತು ಡಾಕ್ಟ್ರೇ..’
‘ಹೋಗಲಿ ಬಿಡಮ್ಮ. ದೇವರು ನಿನಗೆ ಮತ್ತೊಂದು ಮಗುವನ್ನು ದಯಪಾಲಿಸಿದ್ದಾನೆ.’
‘ಐಡಾ ಎಷ್ಟೊಂದು ಸುಂದರವಾಗಿದ್ದಳೆಂದರೆ..’
‘ಹೌದಮ್ಮ, ಹೌದು.’ ವೈಧ್ಯರು ಅವಳನ್ನು ಸಂತೈಸುತ್ತಾ ಹೇಳಿದರು.

‘ನಿಮಗೇಗೆ ಗೊತ್ತು ಡಾಕ್ಟ್ರೇ?’
‘ಅದರಲ್ಲಿ ಅನುಮಾನವೇ ಇಲ್ಲ ಕಣಮ್ಮ. ಇದು ಕೂಡ ಸುಂದರವಾದ ಮಗು.’ ಎಂದು ವೈದ್ಯರು ಅಲ್ಲಿಂದ ಕಿಟಕಿಯ ಬಳಿ ಸಾಗಿ ಹೊರಗೆ ನೋಡುತ್ತಾ ನಿಂತರು.
ಅದೊಂದು ಏಪ್ರಿಲ್ ತಿಂಗಳ ನೀರಸ ಮಧ್ಯಾಹ್ನವಾಗಿತ್ತು. ಹೊರಗೆ ಬೀದಿ ಬದಿಯ ಮನೆಗಳ ಛಾವಣಿಗಳ ಮೇಲಿನ ಕೆಂಪು ಹೆಂಚುಗಳ  ಮೇಲೆ ಮಳೆ ಒಂದೇ ಸಮನೆ ರಪರಪ ಬಡಿಯುತ್ತಿತ್ತು.

‘ಐಡಾ ತುಂಬಾ ಮುದ್ದಾಗಿದ್ದಳು ಡಾಕ್ಟ್ರೇ.. ನೋಡಲು ಎರಡು ಕಣ್ಣೂ ಸಾಲದು! ವಯಸ್ಸು ಎರಡಾಗಿತ್ತು. ಆದರೂ, ನನಗ್ಯಾಕೋ ಹೆದರಿಕೆ. ಮೈಯೆಲ್ಲಾ ಕಣ್ಣಾಗಿದ್ದೆ. ಗುಸ್ತಾವ್ ತೀರಿ ಕೊಂಡಿದ್ದ. ‘ಒಟ್ಟೊ’ನನ್ನೂ ಆಗಷ್ಟೇ ಮಣ್ಣು ಮಾಡಿದ್ವೀ. ನನ್ನ ಪಾಲಿಗೆ ಉಳಿದವಳು ಐಡಾ ಒಬ್ಬಳೇ! ಎಷ್ಟೋ ಭಾರಿ ಮಧ್ಯರಾತ್ರಿಯಲ್ಲೆದ್ದು ಅವಳು ಉಸಿರಾಡುತ್ತಿದ್ದಾಳೋ ಇಲ್ಲವೋ ಎಂದು ನೋಡುತ್ತಿದ್ದೆ…’
‘ಅಮ್ಮಾ!..’ ವೈದ್ಯರು ಗದರಿಸಿದಂತೆ ಹೇಳಿದರು, ‘ದಯವಿಟ್ಟು ನೀವಿನ್ನು ಮಲಗಿ.’ ಆ ಹೆಂಗಸು ನಿಸ್ತೇಜಳಾಗಿದ್ದಳು…

‘ಅವಳು ಸತ್ತಾಗ ನಾನು ಮತ್ತೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ ಡಾಕ್ಟ್ರೇ.. ‘ನನಗಿನ್ನು ಮಕ್ಕಳೇ ಬೇಡ.. ನಾನು ಹೆರುವುದೂ ಬೇಡ, ಅವು ಸಾಯುವುದೂ ಬೇಡ..’ ಎಂದು ನಾನು ಅವಳ ಶವ ಸಂಸ್ಕಾರ ನಡೆಯುತ್ತಿರುವಾಗ ಅರಚಿದ್ದೆ. ನನ್ನ ಗಂಡ!.. ನೀವು ನಂಬುತ್ತೀರಾ ಡಾಕ್ಟ್ರೇ?.. ಕೈಯಲ್ಲಿ ಬಿಯರ್ ಗ್ಲಾಸನ್ನು ಹಿಡಿದು ಸಂತಾಪ ಸೂಚಕ ಸಭೆಯಲ್ಲಿ ಏನೆಂದ ಗೊತ್ತೇ?.. ಡಿಯರ್, ಎಲ್ಲಾ ಮರೆತು ಬಿಡು. ನನಗೆ ವರ್ಗವಾಗಿದೆ. ಹೊಸ ಊರು. ಹೊಸ ಜೀವನ. ಹೊಸ ಡಾಕ್ಟ್ರು. ಎಲ್ಲಾ ಮರೆತುಬಿಡು!.. ಆ ಹೊಸ ಡಾಕ್ಟರು ನೀವೇ ಅಲ್ವೇ?’

‘ಹೌದು ಕಣಮ್ಮ. ಅವನೇ ನಾನು!’
‘ನನಗೆ ಹೆದರಿಕೆಯಾಗುತ್ತಿದೆ ಡಾಕ್ಟ್ರೇ..’
‘ಎಂತಾ ಹೆದರಿಕೆಯಮ್ಮ?’
‘ನನ್ನ ನಾಲ್ಕನೇ ಮಗು ಬದುಕುತ್ತದೆ ಎಂದು ಏನು ಖಾತರಿ ಡಾಕ್ಟ್ರೇ?’
‘ಅಂತಾ ವಿಚಾರಗಳ ಬಗ್ಗೆ ನೀನು ಯೋಚಿಸುವುದೇ ಅಲ್ಲಾ..’
‘ಡಾಕ್ಟ್ರೇ..! ನಮ್ಮ ವಂಶದಲ್ಲೇ ಇಂತಾದೊಂದು ಊನವಿದ್ದಲ್ಲಿ..’
‘ಇದೊಂದು ಶುದ್ಧ ಬುರುಡೆ ದಾಸಯ್ಯನ ಕತೆ ಕಣಮ್ಮ!’
‘ಒಟ್ಟೋ ಹುಟ್ಟಿದಾಗ ನನ್ನ ಗಂಡ ಮುಖ ಸಿಂಡರಿಸಿ ಏನು ಹೇಳಿದ ಗೊತ್ತೇ ಡಾಕ್ಟ್ರೇ?.. ಥುತ್ತ್.. ನನಗೆ ಹುಟ್ಟುತ್ತಿರುವ ಮಕ್ಕಳು ಇಷ್ಟೊಂದು ಪೀಚಲು, ಬಡಕಲು ಯಾಕೋ.. ಮೂರು ದಿನಗಳ ನಂತರ ಒಟ್ಟೊ ಸತ್ತು ಹೋದ. ನಂತರ ಗುಸ್ತಾವ್. ನಂತರ ಐಡಾ. ಎಲ್ಲರೂ ಸತ್ತರು. ಮನೆ ಒಮ್ಮೆಲೇ ಖಾಲಿಯಾಯ್ತು.’
‘ಆದದ್ದೆಲ್ಲಾ ಆಯ್ತು ಕಣಮ್ಮ. ಅದರ ಬಗ್ಗೆ ಮತ್ತೆ ಯೋಚಿಸಬೇಡ.’

‘ಇದೂ ಪೀಚಲಾ ಡಾಕ್ಟ್ರೇ?’
‘ಇದು ಮಾಮೂಲಿ ಮಗು ಕಣಮ್ಮ..’
‘ಅಂದ್ರೆ ಪೀಚಲು?’
‘ಹೌದು. ಸ್ವಲ್ಪ ಪೀಚಲಾಗಿದ್ದಾನೆ ಮಿಸೆಸ್ ಹಿಟ್ಲರ್‍ರವರೇ! ಏನಂತೀಗಾ? ಪೀಚಲು ಮಕ್ಕಳೇ ಮುಂದೆ ಗಟ್ಟಿ ಮುಟ್ಟಾಗೋದು!’
ಆಕೆ ಸುಸ್ತಾಗಿ ಸುಮ್ಮನಾದಳು.

‘ಏನೂ ಆತಂಕಪಡಬೇಡ ಮಿಸೆಸ್ ಹಿಟ್ಲರ್.. ನಿಮ್ಮ ಮಗ ಖಂಡಿತ ಬದುಕುತ್ತಾನೆ. ನಿಮಗೆ ಹೆಸರು ತರುತ್ತಾನೆ! ಅವನಿಗೆ ಏನೆಂದು ಹೆಸರಿಡುವುದೆಂದು ಯೋಚಿಸಿರಬೇಕಲ್ಲ?’
‘ಗಂಡು ಮಗುವಾದರೆ ‘ಅಡೋಲ್ಫಸ್’ ಎಂದು ನನ್ನ ಗಂಡ ತೀರ್ಮಾನಿಸಿದ್ದಾರೆ..’ ಅವಳೆಂದಳು
‘ಅಂದರೆ, ಪುಟ್ಟದಾಗಿ ‘ಅಡೊಲ್ಫ್’’
‘ಹೌದು. ನನ್ನ ಗಂಡನ ಹೆಸರು ‘ಅಲೋಯ್ಸ್’’
‘ಹೆಸರು ತುಂಬಾ ಚೆನ್ನಾಗಿದೆ.’ ವೈದ್ಯರು ಹೇಳಿದರು.

‘ಬೇಡ ಡಾಕ್ಟ್ರೇ. ಹಾಗೆ ಹೇಳ್ಬೇಡಿ. ನನ್ನ ‘ಒಟ್ಟೊ’ ಹುಟ್ಟಿದಾಗಲೂ ಹೀಗೆಯೇ ಹೇಳಿದ್ದರು. ಅವನು ತೀರಿಕೊಂಡ. ಈ ಮಗೂ ಕೂಡ ಹಾಗೆಯೇ ಆಗುತ್ತದೆ. ದಯವಿಟ್ಟು ಇವನಿಗೆ ಕ್ರೈಸ್ತದೀಕ್ಷೆ ಕೊಟ್ಟುಬಿಡಿ.’
‘ನೋಡಿ, ನೋಡಿ ಮಿಸೆಸ್ ಹಿಟ್ಲರ್.. ದಯವಿಟ್ಟು ನೀವು ಉದ್ವೇಗಗೊಳ್ಳಬೇಡಿ.’ ಮೇಲೇಳಲು ಪ್ರಯತ್ನಿಸುತ್ತಿದ್ದ ಆಕೆಯ ಭುಜಗಳನ್ನಿಡಿದು ವೈದ್ಯರು ಸಂತೈಸಿದರು.

‘ನಿಮ್ಮ ಪೂರ್ವಾಗ್ರಹಗಳನ್ನೆಲ್ಲಾ ಬಿಟ್ಟು ಬಿಡಿ. ನಾನು ಕುತೂಹಲಕ್ಕಾಗಿ ಕೇಳಿದೆನೆಯೇ ಹೊರತು ಬೇರ್ಯಾವ ಉದ್ದೇಶಗಳಿಲ್ಲ ಕಣಮ್ಮ. ನಿಜವಾಗಿಯೂ ಅಡೊಲ್ಫಸ್ ಹೆಸರು ನನಗೆ ಚೆನ್ನಾಗಿದೆ ಎನಿಸಿತು. ಅದು ಅಲೋಯ್ಸ್ ಹೆಸರಿಗೆ ಹೊಂದಿಕೆಯಾಗುತ್ತದೆ. ನೋಡಮ್ಮ, ಬಂದ ನಿನ್ನ ಮಗರಾಯ!’
ಖಾನಾವಳಿಯ ದಢೂತಿ ಹೆಂಗಸು ಬಟ್ಟೆಯಲ್ಲಿ ಸುತ್ತಿದ್ದ ಪುಟ್ಟ ಮಗುವನ್ನು ತನ್ನ ವಿಶಾಲವಾದ ಎದಗವುಚಿಕೊಂಡು ಲಗುಬಗೆಯಿಂದ ಬಾಣಂತಿಯ ಮಂಚದೆಡೆಗೆ ಬಂದಳು. ಅವಳ ಮುಖ ಮುಗುಳ್ನಗೆಯಿಂದ ಬಿರಿದಿತ್ತು.
‘ತಗೊಳಮ್ಮ ನಿನ್ನ ಪುಟ್ಟ ಕಂದನನ್ನ..’ ಎಂದಳು ನಾಟಕೀಯವಾಗಿ. ಶುಭ್ರ ಶ್ವೇತ ಬಟ್ಟೆಯಲ್ಲಿ ಸುತ್ತಿದ್ದ ಮಗುವಿನ ತೆಳು ಗುಲಾಬಿ ಬಣ್ಣದ ತಲೆ ಮಾತ್ರ ಹೊರಗೆ ಕಾಣುತ್ತಿತ್ತು. ‘ಕಣ್ತುಂಬಾ ನೋಡು!’ ಎಂದು ಅವಳ ಪಕ್ಕದಲ್ಲಿ ಇರಿಸಿದಳು.

‘ಒಮ್ಮೆ ಅವನನ್ನು ನೋಡು. ಎಷ್ಟೊಂದು ಸುಂದರವಾಗಿದ್ದಾನೆ. ಅವನ ಕೈಗಳು ನೋಡು ಎಷ್ಟೊಂದು ನಾಜೂಕಾಗಿವೆ! ಒಮ್ಮೆಲೇ ನಿನ್ನ ನೋವನ್ನೆಲ್ಲಾ ಮರೆತುಬಿಡುತ್ತೀಯ.’ ವೈದ್ಯರು ಹೇಳಿದರು.
ಆದರೆ ಮಿಸೆಸ್ ಹಿಟ್ಲರ್ ಮಗುವಿನ ಕಡೆಗೆ ನೋಡಲೇ ಇಲ್ಲ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಅವಡುಗಚ್ಚುತ್ತಾ ಬಿದ್ದುಕೊಂಡಿದ್ದಳು.

‘ಯಾಕಮ್ಮ? ಏನಾಯ್ತು?..’ ಖಾನಾವಳಿಯ ಹೆಂಗಸು ಆತಂಕದಿಂದ ಕೇಳಿದಳು. ‘ಅವನೇನು ನಿನ್ನನ್ನು ಕಚ್ಚುವುದಿಲ್ಲ.’
‘ನನಗೆ ಹೆದರಿಕೆಯಾಗುತ್ತಿದೆ. ನನಗೆ ಮತ್ತೊಂದು ಮಗುವಾಗಿದೆ ಮತ್ತು ಅದು ಇನ್ನೂ ಜೀವಂತವಾಗಿದೆ ಎಂದು ನನಗೆ ನಂಬಲೇ ಆಗುತ್ತಿಲ್ಲ…’ ಎಂದು ಅವಳು ಮೆಲ್ಲಗೆ ಮಗುವಿನೆಡೆಗೆ ಕತ್ತು ತಿರುಗಿಸಿದಳು. ಬಟ್ಟೆಯಲ್ಲಿ ಸುತ್ತಿದ್ದ ಆ ಪುಟ್ಟ ಮಗು ಶಾಂತವಾಗಿ ನಿದ್ರಿಸುತ್ತಿತ್ತು.
‘ಇದು ನನ್ನ ಮಗು ತಾನೆ?’ ಆಕೆ ಕೇಳಿದಳು. ‘ಎಷ್ಟು ಸುಂದರವಾಗಿದೆ!’
ವೈದ್ಯರು ಮೇಜಿನ ಬಳಿ ನಡೆದು ತಮ್ಮ ವಸ್ತುಗಳನ್ನು ಬ್ಯಾಗಿಗೆ ತುಂಬತೊಡಗಿದರು. ಬಾಣಂತಿ ಮಗುವನ್ನು ಮಾತನಾಡಿಸುತ್ತಾ ಖುಷಿಯಿಂದ ಸಂಭ್ರಮಿಸುತ್ತಿದ್ದಳು.

‘ನಿನ್ನ ಯಜಮಾನರು ಬರುತ್ತಿರುವ ಹಾಗೆ ಕಾಣಿಸುತ್ತದಮ್ಮ!’ ಎಂದಳು ಖಾನಾವಳಿಯ ಹೆಂಗಸು.
ವೈದ್ಯರು ಬಾಗಿಲು ತೆರೆಯುತ್ತಾ ಹೊರಗೆ ತಲೆ ಹಾಕಿದರು.
‘ಒಹ್! ಮಿಸ್ಟರ್ ಹಿಟ್ಲರ್? ಬನ್ನಿ..ಬನ್ನಿ.’
ಹಸಿರು ಸಮವಸ್ತ್ರ ಧರಿಸಿದ್ದ ಕುಳ್ಳನೆಯ ವ್ಯಕ್ತಿ ಒಳಗೆ ಬರುತ್ತಿದ್ದಂತೆ ವೈದ್ಯರ ಮೂಗಿಗೆ ಸಾರಾಯಿಯ ಘಾಟ ಅಡರಿತು. ಅವನು ತನ್ನ ಪುಟ್ಟ ಮೂಗಿನ ಕೆಳಗೆ ಚಕ್ರವರ್ತಿ ಫ್ರಾಂeóï ಜೋಸೆಫನಂತೆ ದಟ್ಟವಾದ ಮೀಸೆಗಳನ್ನು ಬೆಳೆಸಿದ್ದ.

‘ಶುಭಾಶಯಗಳು ಮಿಸ್ಟರ್ ಹಿಟ್ಲರ್. ನಿಮಗೆ ಗಂಡು ಮಗುವಾಗಿದೆ.’ ಎಂದರು ವೈದ್ಯರು.
‘ಗಂಡು ಮಗು?’
‘ಹೌದೌದು.. ಗಂಡು ಮಗು. ಮಗು ಮತ್ತು ನಿನ್ನ ಹೆಂಡತಿ ಇಬ್ಬರೂ ಆರೋಗ್ಯವಾಗಿದ್ದಾರೆ.’
ಅವನು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮಂಚದ ಬಳಿ ಸಾಗಿದ.
‘ಕ್ಲಾರಾ?….’ ಅವನು ಮೆಲ್ಲಗೆ ಉಸುರುತ್ತಾ ಮಗುವಿನ ಕಡೆಗೆ ಬಾಗಿದ. ಬಾಗುತ್ತಾ ಬಾಗುತ್ತಾ ಅವನು ಮಗುವಿಗೆ ಒಂದು ಅಡಿಯಷ್ಟು ಸಮೀಪಕ್ಕೆ ಬಾಗಿದ. ಮಗುವಿನ ಪಕ್ಕಕ್ಕೆ ಮುಖ ತಿರುಗಿಸಿ ಮಲಗಿದ್ದ ಅವನ ಹೆಂಡತಿ ತುಸು ಆತಂಕದಿಂದಲೇ ಅವನನ್ನು ನೋಡಿದಳು.  

‘ಏನೇ ಹೇಳಿ, ನಿಮ್ಮ ಮಗುವಿನ ಪುಫ್ಫುಸಗಳು ಮಾತ್ರ ಬಲು ಗಟ್ಟಿಯಾಗಿವೆ! ಭೂಮಿಗೆ ಇಳಿದಾಗ ಅವನು ಅರಚಿದ್ದು ನೀವು ಕೇಳಬೇಕಿತ್ತು!’ ಖಾನಾವಳಿಯ ಹೆಂಗಸು ಹೇಳಿದಳು.
‘ಕ್ಲಾರಾ!.. ದೇವರೇ!! ಇವನು ‘ಒಟ್ಟೊ’ನಿಗಿಂತ ಪೀಚಲಾಗಿದ್ದಾನೆ ಕಣೇ!’ ಮಿಸ್ಟರ್ ಹಿಟ್ಲರ್ ಉದ್ಗರಿಸಿದ. 
‘ಮಗು ಆರೋಗ್ಯವಾಗಿದೆ. ಏನೂ ತೊಂದರೆಯಿಲ್ಲ.’ ವೈದ್ಯರು ಹೇಳಿದರು. ಮಿಸ್ಟರ್ ಹಿಟ್ಲರ್ ನೆಟ್ಟಗೆ ಎದ್ದು ನಿಂತು ಮೆಲ್ಲಗೆ ವೈದ್ಯರ ಕಡೆಗೆ ತಿರುಗಿದ. ಅವನ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.
‘ನೀವು ಏನೇ ಹೇಳಿದರೂ ಅದು ನಮ್ಮ ಸಮದಾನಕ್ಕೆಂದು ನಮಗೆ ಅರ್ಥವಾಗುತ್ತದೆ ಡಾಕ್ಟ್ರೇ..’
‘ನೀವು ಹಳೆಯದನ್ನೇ ನನಗೆ ಹೇಳಬೇಡಿ ಮಿಸ್ಟರ್ ಹಿಟ್ಲರ್. ನಿಮ್ಮ ಈ ಮಗುವಂತೂ..’
‘ಎಷ್ಟೊಂದು ಪೀಚು.. ಇದು ಕೂಡ ಖಂಡಿತಾ ಉಳಿಯಲಾರದು ಡಾಕ್ಟ್ರೇ..’
‘ಅದು ಈಗಷ್ಟೇ ಹುಟ್ಟಿದ ಎಳೆ ಮಗು. ಅದಕ್ಕೆ ಸ್ವಲ್ಪ ಸಮಯ ಕೊಡಿ ಮಿಸ್ಟರ್ ಹಿಟ್ಲರ್..’ 
‘ಆದರೂ..’

‘ಆದರೂ.. ಏನಂತ? ಅದನ್ನು ಸಾಯಿಸಿಬಿಡುತ್ತಿರೇನು?’ ಖಾನಾವಳಿಯ ಹೆಂಗಸು ದಬಾಯಿಸಿದಳು.
ಮಗುವಿನ ತಾಯಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಅವಳ ಮೈಯೆಲ್ಲಾ ಕಂಪಿಸುತ್ತಿತ್ತು. ವೈದ್ಯರು ಅವಳ ಗಂಡನ ಬಳಿ ಸಾಗಿ ತಮ್ಮ ಕೈಯನ್ನು ಮೃದುವಾಗಿ ಅವನ ಭುಜದ ಮೇಲಿರಿಸಿ ಹೇಳಿದರು, ‘ನಿನ್ನ ಹೆಂಡತಿಯನ್ನು ದಯವಿಟ್ಟು ನೋಯಿಸಬೇಡ. ಇದು ತುಂಬಾ ಮುಖ್ಯ.’ ಎನ್ನುತ್ತಾ ಅವನ ಭುಜವನ್ನೊಮ್ಮೆ ಅದುಮಿ ಅವನನ್ನು ಹೆಂಡತಿಯ ಮಂಚದ ಬಳಿ ತಳ್ಳುತ್ತಾ ಹೋದರು. ಅವನು ಪ್ರತಿರೋಧಿಸಿದರೂ ಲೆಕ್ಕಿಸದೆ ಅವನ ಭುಜದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದರು. ಕೊನೆಗೂ ಅವನ ಪ್ರತಿರೋಧ ಮುರಿದು ಬಿದ್ದು ಅವನು ಮೆಲ್ಲಗೆ ಬಾಗಿ ಹೆಂಡತಿಯ ಒದ್ದೆ ಕೆನ್ನೆಯನ್ನು ಚುಂಬಿಸಿದ.

‘ಕ್ಲಾರಾ.. ಡಿಯರ್, ಅಳಬೇಡ ಕಣಮ್ಮ..’ ಎಂದ.
‘ಅವನು ಖಂಡಿತ ಬದುಕುತ್ತಾನೆ ಅಲೋಯ್ಸ್.. ಈ ಭಾರಿ ದೇವರು ನನ್ನ ಪ್ರಾರ್ಥನೆಯನ್ನು ಖಂಡಿತಾ ನೇರವೇರಿಸುತ್ತಾನೆ.’ ಎಂದಳು ಆಕೆ ಬಿಕ್ಕುತ್ತಾ.
‘ಖಂಡಿತವಾಗಿಯೂ ಕ್ಲಾರಾ..’
‘ದೇವರೇ, ಈ ಭಾರಿಯಾದರೂ ನನ್ನ ಮಗುವನ್ನು ಉಳಿಸು ಎಂದು ಮಂಡಿಯೂರಿ ಪ್ರಾರ್ಥಿಸುತ್ತಾ ನಾನು ಎಷ್ಟೊಂದು ಹಗಲುಗಳನ್ನು ಚರ್ಚಿನಲ್ಲಿ ಕಳೆದಿದ್ದೇನೆ ಗೊತ್ತೇ ಅಲೋಯ್ಸ್..’
‘ನನಗೆ ಗೊತ್ತು ಕ್ಲಾರಾ..’
‘ನಾನು ಈಗಾಗಲೇ ಮೂರು ಮಕ್ಕಳನ್ನು ಕಳೆದುಕೊಂಡಿದ್ದೇನೆ. ಇನ್ನಿಂದ ನನಗೆ ಸಾಧ್ಯವಿಲ್ಲ.’
‘ನಿಜ ಕ್ಲಾರಾ..’
‘ದೇವರು ಕರುಣಾಮಯಿ ಎನ್ನುವುದಾದರೆ ಈ ನನ್ನ ಮಗು ಬದುಕಲೇ ಬೇಕು ಅಲೋಯ್ಸ್..!’ ಎನ್ನುತ್ತಾ ಅವಳು ಮತ್ತೊಮ್ಮೆ ಬಿಕ್ಕಿದಳು.

****

(Translated into Kannada from the English short story GENESIS AND CATASTROPHE by Roald Dahl.)

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಇವನು ಬದುಕಲೇ ಬೇಕು: ಜೆ.ವಿ.ಕಾರ್ಲೊ, ಹಾಸನ.

Leave a Reply

Your email address will not be published.