“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು.
ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ ಗಲೀಜಾಗಿತ್ತು. ಅದನ್ನು ಸ್ವಚ್ಛಗೊಳಿಸಲು ಮನೆಯ ಕೆಲಸದ ಮುನಿಯಮ್ಮ ಸಜ್ಜಾದಳು. ಅವಳ ಮನಸ್ಸಿನಲ್ಲಿ ಒಂಥರಾ ನೋವು. ಇಷ್ಟೆಲ್ಲಾ ಮಕ್ಕಳೆಂದರೆ ಆಸೆ ಪಡುವ ಒಡತಿಗೆ ತನ್ನದೇ ಆದ ಒಂದು ಮಗುವಿಲ್ಲವಲ್ಲ. ನಗರದ ಖ್ಯಾತ ಉದ್ಯಮಿ ರವಿಶಂಕರ್ ನನ್ನ ಆಶಾ ಮಾಡುವೆ ಆಗಿ ೯ ವರ್ಷ ಕಳೆದಿದೆ. ಮಕ್ಕಳೆಂದರೆ ಪ್ರಾಣ ಇಬ್ಬರಿಗೂ. ಆದರೆ ಅದ್ಯಾಕೋ ಇನ್ನು ಮಕ್ಕಳಾಗಿರಲಿಲ್ಲ. ಅವರು ಹರಸಿಕೊಳ್ಳದ ದೇವರಿಲ್ಲ. ದೇವಸ್ಥಾನ, ಚರ್ಚ್, ಮಸೀದಿ, ಇನ್ನೆಲ್ಲೆಲ್ಲಿ ಯಾರು ಏನು ಹೇಳಿದರು ಮಾಡಿ ಹೈರಾಣಾಗಿ ಸುಮ್ಮನಾಗಿದ್ದರು.
ಮಕ್ಕಳ ಮೇಲಿನ ಪ್ರೀತಿಗೋಸ್ಕರವೇ ತಾನು ಒಂದು ಸಣ್ಣ ಮಟ್ಟಿಗೆ ಮಕ್ಕಳ ಉಡುಪುಗಳ ವ್ಯಾಪಾರ ಶುರುಮಾಡಿಕೊಂಡಿದ್ದಳು ಆಶಾ. ಹಾಗಾದರೂ ಒಂದಷ್ಟು ಮಕ್ಕಳ ಒಡನಾಟ ಸಿಗುವುದು ಅವಳ ಉದ್ದೇಶ. ಅವಳ ವ್ಯಾಪಾರದಲ್ಲಿ ದುಡ್ಡಿನ ಲಾಭಕ್ಕಿಂತ ಅವಳಿಗೆ ಸಣ್ಣ ಮಕ್ಕಳ ನಗು, ಫೋಟೋಗಳು, ಅವರ ಒಂದಷ್ಟು ಒಡನಾಟ ಅವಳಿಗೆ ತೃಪ್ತಿ ಕೊಟ್ಟಿತ್ತು. ಎಷ್ಟೇ ಆದರೂ ಅವರು ಬೇರೆಯವರ ಮಕ್ಕಳೇ ಹೊರತು, ತನ್ನ ಮಕ್ಕಳಲ್ಲ ಎಂದು ಮನಸ್ಸು ನುಡಿಯುತ್ತಿತ್ತು. ಅನಾಥಾಶ್ರಮದಲ್ಲಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳುವಂತೆ ನಿರ್ಧಾರ ಮಾಡಿದ್ದರು. ಆದರೆ ಇಬ್ಬರ ಹಿರಿಯರು ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ.
ತನ್ನ ಹುಟ್ಟಿದಹಬ್ಬದ ದಿನ ಅನ್ನದಾನ ಏರ್ಪಡಿಸಿ ದೇವಸ್ಥಾನ, ಅನಾಥಾಶ್ರಮ, ವೃದ್ಧಾಶ್ರಮ ಹೀಗೆ ಎಲ್ಲ ಕಡೆ ಮುಗಿಸಿ ಮನೆಗೆ ಬಂದಾಗ ರಾತ್ರಿ ಹತ್ತು ಗಂಟೆ. ಆಯಾಸವಾಗಿದ್ದ ಕಾರಣ ಸೋಫಾದ ಮೇಲೆ ಕುಳಿತು ಹಾಗೆ ನಿದ್ದೆ ಮಾಡಿದ್ದ ಆಶಾಳಿಗೆ ಎಚ್ಚರವೇ ಇಲ್ಲದ ಹಾಗೆ ಆಗಿತ್ತು. ಕನಸಿನಲ್ಲಿ ಒಂದು ಮುದ್ದಾದ ಮಗು ತನ್ನನ್ನು ಅಪ್ಪಿಕೊಂಡಂತೆ. ಆಹಾ! ಎಂಥ ಹಿತ. ಆದರೆ ಮೈಯೆಲ್ಲಾ ಹೇಳಲಾಗದಷ್ಟು ಭಾರ. ತಲೆ ತಿರುಗಿತ್ತಿತ್ತು. ತುಂಬ ಸುಸ್ತು,ಹಿಂಸೆ ಅನ್ನಿಸಿ ಡಾಕ್ಟರ್ ನ ಹತ್ತಿರ ಹೋದರು. ಇಂತಹ ಸಿಹಿ ಸುದ್ದಿ… ಆಶಾ ಗರ್ಭಿಣಿ! ಅವರ ಸಂತೋಷಕ್ಕೆ ಪಾರವೇ ಇಲ್ಲ!
ಪ್ರತಿದಿನ ಆಶಾಳ ಶುಶ್ರುಷೆ, ಅವಳ ಬಯಕೆಗಳೇನು ಎಂದು ಕೇಳುವುದೇ ಒಂದು ಕೆಲಸ ರವಿ ಗೆ. ಅವನು ಸಾಲದು ಎಂದು ಅವನ ಹಾಗು ಅವಳ ತಂದೆ ತಾಯಿಯರು ಅವಳ ಆರೈಕೆಗೆ ನಿಂತಿದ್ದರು. ಆಶಾ ಹಾಗು ರವಿಗೆ ಪ್ರತಿದಿನವೂ ಮಗುವಿನ ಬಗ್ಗೆಯೇ ಮಾತು. ಮಗು ಹೇಗೆ ಮಾತನಾಡುತ್ತದೆ, ಯಾರ ಹಾಗೆ ಇರುತ್ತದೆ, ಕಣ್ಣು, ಮೂಗು ಹೇಗಿರಬಹುದು. ಎಷ್ಟೋ ವೇಳೆ ಅವರ ಮಾತು ರಾತ್ರಿ ಶುರುವಾಗಿದ್ದು ಬೆಳಗಿನ ವರೆಗೂ ಸಾಗಿರುತ್ತಿತ್ತು. ಆದರೂ ಅವರಿಗೆ ತಮ್ಮ ಸಂತೋಷದ ಸಂಭ್ರಮ ಕಡಿಮೆಯೇ ಆಗುತ್ತಿರಲಿಲ್ಲ. ಅವರ ಕನಸುಗಳು ನನಸಾಗುವ ದಿನ ಹತ್ತಿರ ಬರುತ್ತಿತ್ತು.
ಆಯಾಸ ಹೆಚ್ಚಾಗುತ್ತಿತ್ತು. ಒಂದೊಂದು ಹೆಜ್ಜೆಯನ್ನು ಇಡಲು ಆಗುತ್ತಿಲ್ಲ ಆಶಾಳಿಗೆ. ತನ್ನಿಂದ ಇನ್ನು ಸಾಧ್ಯವಿಲ್ಲ. ೮ ತಿಂಗಳಿಗೆ ಆರೋಗ್ಯವಾಗಿ ಬೆಳೆದ ಮಗು. ಅವಳ ಗರ್ಭದಲ್ಲಿ ಸುಖವಾಗಿದ್ದ ಮಗುವಿಗೆ ಹೊರ ಪ್ರಪಂಚಕ್ಕೆ ಕಾಲಿಡುವ ಹೊತ್ತು. ತುಂಬ ಪ್ರಯಾಸದ ನಂತರ ಹೆರಿಗೆಯಾಯಿತು. ತುಂಬ ಮುದ್ದಾಗಿದ್ದ ಹೆಣ್ಣು ಮಗು. ಆಶಾ ಹಾಗು ರವಿ ಹಿರಿಹಿರಿ ಹಿಗ್ಗಿದರು. ಮಗುವಿನ ಅಳು ನಗು, ಕೋಪ ಮುಗುಳ್ನಗೆ, ಎಲ್ಲದನ್ನು ಕಂಡು ಅವರಿಗೆ ಬೇರೆ ಪ್ರಪಂಚವೇ ಬೇಡವೆನಿಸುತ್ತಿತ್ತು. ತನ್ನ ಪುಟ್ಟ ಕೈಗಳನ್ನು ಮುಷ್ಠಿಮಾಡಿ ಮೇಲಕ್ಕಿಟ್ಟುಕೊಂಡು ಮಲಗಿದ್ದ ಮಗುವನ್ನು ಆಶಾ ಎಷ್ಟು ಗಂಟೆಗಳಾದರೂ ಎವೆಯಿಕ್ಕದೆ ನೋಡುತ್ತಿದ್ದಳು. ಒಹ್! ಎಂಥ ಸೃಷ್ಟಿ ಅಲ್ಲವೇ ಇದು! ಸೃಷ್ಟಿಕರ್ತನಿಗೆ ಎಷ್ಟು ಸಮಾಧಾನದಿಂದ ಇಷ್ಟು ಚಂದ ಮಗುವನ್ನು ಮಾಡಿರಬಹುದು! ಮಗುವಿನ ಸೌಂದರ್ಯಕ್ಕೆ ಸಾಟಿಯೇ ಇಲ್ಲ!
ಎಷ್ಟೊಂದು ಚರ್ಚೆ ಮಾಡಿ ತಮ್ಮ ಮುದ್ದು ಮಗಳಿಗೆ “ಇಳಾ” ಎಂದು ಹೆಸರಿಟ್ಟರು. ದಿನ ಕಳೆದಂತೆ ದಂಪತಿಗಳು ಮಗುವಿನ ಬೆಳವಣಿಗೆಯನ್ನು ನೋಡುತ್ತಾ ಮೈಮರೆಯುತ್ತಿದ್ದರು. ಇಳಾ ತನ್ನ ಮುದ್ದು ಹಾವ ಭಾವದಿಂದ ಅಪ್ಪ ಅಮ್ಮನ ಮನಸ್ಸನ್ನು ಸೂರೆಗೊಂಡಿದ್ದಳು. ಅಜ್ಜಿ ತಾತಂದಿರ ಪ್ರೀತಿಯಲ್ಲಿ ಮಗು ತುಂಬ ಸಂತೋಷದಿಂದ ಬೆಳೆಯುತ್ತಿತ್ತು. ಸುತ್ತ ಮುತ್ತಲಿನ ಮಕ್ಕಳನ್ನು ಆಟವಾಡಿಸಿ ಬೆಳೆಸಿದ್ದ ಆಶಾಳಿಗೆ ತನ್ನಮಗುವನ್ನು ಬೆಳೆಸುವುದೇ ಒಂದು ಹಿತವಾದ ಅನುಭವ. ಮನೆಯ ಆಳುಗಳು ಸಹ ಮಗು ಅದೃಷ್ಟ ಮಾಡಿ ಇವರ ಮನೆಯಲ್ಲಿ ಹುಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಆಶಾ ಆಂಟಿ ಮನೆಗೆ ಮಕ್ಕಳೆಲ್ಲ ಇಳಾಳನ್ನು ಆಟವಾಡಿಸಲು ಅವಳಜೊತೆ ಇರಲು ಬರುತ್ತಿದ್ದರು. ಅವರಿಗೆಲ್ಲ ತಿಂಡಿ ತಿನಿಸು ಕೊಟ್ಟು ಸಂತೋಷ ಪಡಿಸುತ್ತಿದಳು. ಹಾಗಾಗಿ ಮಕ್ಕಳ ಸಂತೆ ಯಾವಾಗಲು ಅವರ ಮನೆಯಲ್ಲಿ ಇರುತ್ತಿತ್ತು. ಇನ್ನು ಕೆಲಸದವರಿಗೆ ಬಿಡುವಿರದ ಕೆಲಸ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಸಂತೋಷ ಸಂಭ್ರಮ ಅವರ ಮನೆಯಲ್ಲಿತ್ತು.
ಮಗು ಒಂದು ವರ್ಷವಾಗುತ್ತಿದ್ದಂತೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆದಾಡುವುದು, ಬೀಳುವುದು, ಇದನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಆಶಾಳ ಪ್ರತಿನಿತ್ಯದ ಕೆಲಸವಾಗಿತ್ತು. ಮಗುವಿನ ಫೋಟೋಗಳನ್ನು ಮನೆಯ ತುಂಬೆಲ್ಲ ಹಾಕಿದ್ದರು. ಅಷ್ಟಾದರೂ ಪ್ರತಿದಿನ ಇಳಾ ತನ್ನ ಹೊಸ ಹೊಸ ಮಾತು, ಹೊಸ ಪ್ರತಿಕ್ರಿಯೆ, ಹೊಸ ಆಟದಲ್ಲಿ ಎಲ್ಲರನ್ನು ಬೆರಗು ಗೊಳಿಸುತ್ತಿದ್ದಳು. ಬೊಂಬೆಯೇ ನಾಚುವಷ್ಟು ಚಂದ. ಅವಳ ಮಾತಿಗೆ ಮಾರುಹೋಗದವರೇ ಇಲ್ಲ. ಅವಳು ನಕ್ಕರೆ ಜೀವನವೇ ಸಾರ್ಥಕ ಏನುಸುತ್ತಿತ್ತು ಆಶಾ ಹಾಗು ರವಿಗೆ. ಸ್ವರ್ಗವೆಂದರೆ ಬೇರೆ ಇನ್ನೇನಿರಲು ಸಾಧ್ಯ ಎಂದು ಮೂಗು ಮುರಿಯುವಷ್ಟುಸಂತೋಷದ ವಾತಾವರಣ. ಹರಕೆ ಹೊತ್ತಿದ್ದ ಎಲ್ಲ ದೇವಸ್ಥಾನಗಳಿಗೂ ಹರಕೆ ತೀರಿಸಿದ್ದಾಗಿತ್ತು. ಕಾಣಿಕೆಗಳನ್ನೆಲ್ಲ ಕೊಟ್ಟಿದ್ದಾಗಿತ್ತು.
ಮಗುವಿನ ಜೊತೆ ಸಮಯಕಳೆಯಲು ಆಶಾ ತನ್ನ ಸಣ್ಣ ವ್ಯಾಪಾರವನ್ನು ನಿಲ್ಲಿಸಿದ್ದಳು. ಅವಳ ಪೂರಾ ಸಮಯ ಬರಿ ಇಳಾಳ ಆರೈಕೆ, ಪ್ರೀತಿ ಸಂತೋಷದಲ್ಲಿ ಮುಳುಗಿರುತ್ತಿತ್ತು. ಮಗುವಿಗೆ ೨ ವರ್ಷದ ಹುಟ್ಟುಹಬ್ಬಕ್ಕೆ ಇಡೀ ಊರಿಗೆ ಔತಣ ಏರ್ಪಡಿಸಿದ್ದರು. ದೇವಸ್ಥಾನಗಳಲ್ಲಿ ಪೂಜೆ ಅರ್ಚನೆ ಎಲ್ಲವು ಇಳಾಳ ಹೆಸರಿನಲ್ಲಿ ನಡೆದಿತ್ತು. ಕೈತುಂಬ ದಾನ ಧರ್ಮ ಮಾಡಿ ಮಗುವಿನ ಒಳಿತಿಗಾಗಿ ಬೇಡಿದ್ದರು. ಎಲ್ಲರ ಆಶೀರ್ವಾದ ಮಗುವಿನ ಮೇಲಿಟ್ಟು. ೧೦ ವರ್ಷವಾದ ಮೇಲೆ ಹುಟ್ಟಿದ ಮಗು ಅದಕ್ಕೆ ಐತ್ತೊಂದು ಪ್ರೀತಿ ಎಂದು ಜನ ಹಿಂದೆ ಮಾತನಾಡುವುದು ಆಶಾಳ ಕಿವಿಗೆ ಬಿದ್ದಿದ್ದರು, ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.
ಎರಡು ವರ್ಷದ ಇಳಾ ತನ್ನ ಮುದ್ದು ಮಾತಿಂದ ಅಪ್ಪ ಅಮ್ಮನನ್ನ ಮೋಡಿ ಮಾಡಿದ್ದಳು. “ನಂಗೆ ಆಕಾಶ ಬೇಕು” ಎಂದಾಗ ಇಬ್ಬರು ಬೆಪ್ಪಾಗಿ ಮುಖ ಮುಖ ನೋಡಿಕೊಳ್ಳುತ್ತಿದ್ದರು. ತಕ್ಷಣ ತಮ್ಮ ಮಗುವಿನ ಯೋಚನೆಗೆ ನಗುತ್ತಿದ್ದರು. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಇಳಾ ಎಂದರೆ ಎಲ್ಲರಿಗು ಅಚ್ಚುಮೆಚ್ಚು. ಬಟ್ಟಲುಗಣ್ಣು, ತುಂಬಿದ ಕೆನ್ನೆಗಳು, ಪುಟ್ಟ ಪುಟ್ಟ ಹಲ್ಲುಗಳನ್ನು ಬಿಟ್ಟು ಮುಗುಳ್ನಕ್ಕರೆ ಎಂಥ ಕೋಪಿಷ್ಠ ಮನಸ್ಸಿನವರೂ ಸಹ ಕರಗುತ್ತಿದ್ದರು.
ಅಂದು ಸಂಜೆ ಹಾಗೆ ಸುತ್ತಾಡಿ ಬರೋಣ ಎಂದು ಹೊರಟ ಕುಟುಂಬಕ್ಕೆ ಆಘಾತವೊಂದು ಕಾದಿತ್ತು. ಅವರ ಕಾರ್ ಗೆ ಒಂದು ಲಾರಿ ನಿಯಂತ್ರಣ ತಪ್ಪಿ ಗುದ್ದಿ ಅಪಘಾತವಾಗಿತ್ತು. ತುಂಬ ಜೋರಾಗಿ ಗುದ್ದಿದ್ದರಿಂದ ಕಾರು ಜಖಂ ಆಗಿತ್ತು. ರವಿ ಹಾಗು ಆಶಾಳಿಗೆ ಮೂಗೇಟುಗಳಾಗಿತ್ತು. ಆದರೆ ಇಳಾ ಪ್ರಾಣಪಕ್ಷಿ ಹಾರಿಹೋಗಿತ್ತು. ಮಗುವನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅವರಿಗೆ ದಿಕ್ಕು ತೋಚಲೇ ಇಲ್ಲ. ಇಬ್ಬರು ದಿಗ್ಬ್ರಾಂತರಾಗಿದ್ದರು. ಸುತ್ತಮುತ್ತಲಿದ್ದ ಜನರೆಲ್ಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಅವರಿಗೆ ಚಿಕಿತ್ಸೆ ಕೊಡಿಸಿದರು. ಆಶಾಳಿಗಂತೂ ಮಂಕು ಬಡಿದಂತೆ ಆಗಿತ್ತು. ಏನು ನಡೆಯುತ್ತಿದೆ ಎನ್ನುವ ಅರಿವೇ ಇಲ್ಲ. ತನ್ನ ಮಗುವೇ ಇಲ್ಲ, ಇನ್ನು ಜೀವನದಲ್ಲೇ ಏನು ಉಳಿದಿದೆ! ಎಂದು ಕಳೆದುಹೋಗಿದ್ದಳು. ಒಂದು ಕ್ಷಣ ಅವಳಿಗೆ ತನ್ನ ಮಗುವಿಲ್ಲವೆಂದು ಒಪ್ಪಲು ಮನಸ್ಸು ತಯಾರಿಲ್ಲ. ಅವಳಿಗೆ ಇಳಾಳ ಮಾತು ಕೇಳಿಸುತ್ತಿತ್ತು. “ಅಮ್ಮ ಬಾ…” ಎಂದು ಹೇಳಿದಂತೆ ಆಗುತ್ತಿತ್ತು.
ಸುಮಾರು ೨ ತಿಂಗಳುಗಳಾಗಿವೆ. ನಂದಗೋಕುಲದಂತಿದ್ದ ಮನೆ ಸ್ಮಶಾನದಂತಾಗಿದೆ. ಕೆಲಸದವರು ಬಂದು ಕೆಲಸ ಮಾಡಿ ಹೋಗುತ್ತಿದ್ದಾರೆ. ಒಂದು ನಗುವಿಲ್ಲ. ಒಂದು ಮಾತು ಸಹ ಕೇಳಿಸುತ್ತಿಲ್ಲ. ಆಶಾಳಿಗೆ ಬಲವಂತ ಮಾಡಿ ಹೊತ್ತು ಹೊತ್ತಿಗೆ ಒಂದಷ್ಟು ಊಟ ತಿಂಡಿ ಮಾಡಿಸಿದರೆ ಮಾತ್ರ ಮಾಡುತ್ತಿದ್ದಳು. ಇಲ್ಲವಾದರೆ ಕೂತಲ್ಲಿಯೇ ಎಷ್ಟು ಹೊತ್ತಾದರೂ ಹಾಗೆಯೇ ಕೂತಿರುತ್ತಿದ್ದಳು. ದೃಷ್ಟಿ ಶೂನ್ಯದ ಕಡೆ. ಆಗಾಗ ಅವಳ ಕಿವಿಗೆ “ಅಮ್ಮ… ಬಾ” ಅನ್ನೋ ಮಾತು ಮಾತ್ರ ಕೇಳಿಸುತ್ತಿತ್ತು. ಅವಳು ನಿದ್ರೆಯನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಕಣ್ಣಸುತ್ತಲೂ ಕಪ್ಪುಗಟ್ಟಿತ್ತು. ಅವಳ ತಂದೆ ತಾಯಿಯರಿಗೆ ಅವಳನ್ನು ನೋಡಿ ಕರುಳು ಕಿವುಚಿದಂತಾಗುತ್ತಿತ್ತು. ಆದರೆ ಅವಳ ಕರುಳಿನ ಕುಡಿ ಇಲ್ಲದಂತಾಗಿದೆ. ಅವಳಿಗೆ ಸಮಾಧಾನ ಎಷ್ಟು ಮಾಡಿದರು ಅವಳು ಸಮಾಧಾನ ಆಗುತ್ತಿರಲಿಲ್ಲ.
ರಾತ್ರಿ ೨ ಗಂಟೆಯ ಸಮಯ. “ಅಮ್ಮ… ನಂಗೆ ಭಯ. ಇಲ್ಲಿ ತುಂಬ ಕತ್ತಲು.. ಬಾಮ್ಮ ನನ್ನ ಹತ್ರ” ಎಂದು ಇಳಾ ಕರೆಯುತ್ತಿದ್ದಾಳೆ. ಆಶಾ ಥಟ್ಟನೆ ಎದ್ದು ನೋಡಿದಳು. ಮಗುವಂತೆ ಕಾಣುವ ಒಂದು ನೆರಳು. “ಒಹ್ ಇಳಾ! ಯಾಕೆ ಮಗು ಹೆದರಿದ್ದಿ! ನಾನಿದ್ದೀನಲ್ಲ, ಇರು ಬಂದೆ ಎಂದು ನೆರಳಿನ ಹಿಂದೆಯೇ ಹೊರಟಳು. ಮಗುವಿನ ನೆರಳು ಅವಳನ್ನು ತನ್ನ ಬಾಲ್ಕನಿ ಕಡೆಗೆ ಕರೆದುಕೊಂಡು ಹೋಯಿತು. “ಬಾಮ್ಮ ಬಾ.. ನನಗೆ ಭಯ ಆಗ್ತಿದೆ, ನನ್ ಹತ್ರ ಬಾ” ಅಂತ ಕರೆದುಕೊಂಡು ಹೋಗುತ್ತಿದೆ. “ಬಂದೆ ಮಗು, ಹೆದರಬೇಡ. ನಾನಿದೀನಿ” ಎಂದು ಆಶಾ ಮೂರನೇ ಮಹಡಿ ಬಾಲ್ಕನಿ ಇಂದ ಹೊರಗೆ ಬಂದಳು. ಮಗುವಿನ ನೆರಳು ಹಾಗೆಯೇ ಗಾಳಿಯಲ್ಲಿ ಹೋಗುತ್ತಿತ್ತು. ಆಶಾ ಅವಳಿಗೆ ಅರಿವಿರದಂತೆ ಮುಂದೆ ಮುಂದೆ ಹೋದಳು.
“ಅಯ್ಯೋ! ಎಂಥ ಅನಾಹುತ! ಮಗು ಸತ್ತು ಇನ್ನು ಮೂರು ತಿಂಗಳು ಸಹ ಆಗಿಲ್ಲ. ಅದೇ ಯೋಚನೆಯಲ್ಲಿ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಾಪ ತುಂಬ ಒಳ್ಳೆ ಹೆಂಗಸು ರೀ. ಅಪಾರ್ಟ್ಮೆಂಟ್ ನ ಎಲ್ಲ ಮಕ್ಕಳಿಗೆ ತಿಂಡಿ ತಿನಿಸು ಕೊಟ್ಟಿಕೊಂಡು ತುಂಬ ಪ್ರೀತಿಯಿಂದ ಇದ್ದವರು. ಹೀಗಾಗಬಾರದಿತ್ತು. ಛೆ! ನಮಗೆ ಇಷ್ಟು ನೋವಾಗುತ್ತಿದೆ, ಇನ್ನು ರವಿ ಹೇಗೆ ಇದನ್ನು ಸಹಿಸಿಕೊಂಡಾರು ಪಾಪ! ಸುತ್ತಮುತ್ತಲಿನವರು ಮಾತನಾಡಿಕೊಳ್ಳುತ್ತಿದ್ದರು. ವಿಧಿ ತನ್ನ ಆಟ ತೋರಿತ್ತು.
–ಗಿರಿಜಾ ಜ್ಞಾನಸುಂದರ್