ಎರಡೂ ಕೈಯಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಹಿಡಿದು ಬ್ಯಾಲೆನ್ಸ್ ಮಾಡ್ತಾ ಕಾರು ಪಾರ್ಕ್ ಮಾಡಿದ ಜಾಗಕ್ಕೆ ನಡೆದುಕೊಂಡು ಬರ್ತಾ ಇದ್ದೆ. ಒಂದು ಕೈಯ ಅವಸ್ಥೆ ಹೇಳತೀರದಾಗಿತ್ತು.ಅದರ ಎಲ್ಲಾ ಬೆರಳುಗಳೂ ಒಂದೊಂದು ಚೀಲವನ್ನು ಹಿಡಿದುಕೊಂಡಿತ್ತು. ಕಾರು ತಲುಪುವಷ್ಟರಲ್ಲಿ ಕೈ ಬೆರಳುಗಳು ಮುರಿದೇ ಹೋಗಬಹುದೇನೋ ಎನ್ನುವ ಹೆದರಿಕೆಯಲ್ಲಿ ಹೆಜ್ಜೆಗಳು ಓಡಿದಂತೆ ಸಾಗುತ್ತಿತ್ತು. ಇನ್ನೇನು ಕಾರು ತಲುಪಲು ಒಂದು ನೂರು ಹೆಜ್ಜೆಗಳು ಇದೆ ಎನ್ನುವಾಗ ಹಿಂದಿನಿಂದ ಪರಿಚಿತ ಸ್ವರವೊಂದು ನನ್ನನ್ನು ಹಿಡಿದು ನಿಲ್ಲಿಸಿತು.
“ಹಬ್ಬದ ಶಾಪಿಂಗಾ?”
ಹೌದೆಂದು ತಲೆಯಾಡಿಸುತ್ತಾ ಅವರೊಡನೆಯೂ ಪ್ರಶ್ನೆ ಮಾಡಿದೆ.
“ನಾಳೆ ಹಬ್ಬ ಅಲ್ವಾ .. ನಿಮ್ಮಲ್ಲೇನು ಸ್ಪೆಷಲ್ ಮಾಡ್ತೀರಿ?”
“ಸ್ಪೆಷಲ್ಲಾ? ಯಾಕೆ? ನಾವು ಅದನ್ನೆಲ್ಲಾ ನಂಬೋದಿಲ್ಲ.. ಇಂತಹ ಆಚರಣೆಗಳೇ ನಮ್ಮನ್ನಿನ್ನೂ ಹಳೇ ಕಾಲದ ಪೆಟ್ಟಿಗೆಯೊಳಗೆ ಉಸಿರಾಡದಂತೆ ಬಂಧಿಸಿಟ್ಟಿರೋದು.. ಆ ಮೌಢ್ಯದಿಂದ ಹೊರ ಬಂದಾಗಲೇ ಹೊಸ ಗಾಳಿ ನಮ್ಮೊಳಗೆ ತುಂಬಿಕೊಳ್ಳೋದು” ಅಂದರು.
“ಸರಿ.. ಆ ಹೊಸ ಗಾಳಿ ಅಂದರೇನು ?”
“ಹೊಸ ಗಾಳಿ ಅಂದರೆ ಪ್ರತಿ ವಿಷಯವನ್ನು ಭಾವನಾತ್ಮಕವಾಗಿ ಯೋಚಿಸದೆ, ಪ್ರಾಕ್ಟಿಕಲ್ ಆಗಿ ಯೋಚಿಸೋದು.. ಈಗ ನೋಡಿ ನೀವು ಹಬ್ಬದ ಆಚರಣೆ ಅಂತ ಒಂದಷ್ಟು ತಿಂಡಿ ಮಾಡ್ತೀರಿ, ಪೂಜೆ ಪುನಸ್ಕಾರಕ್ಕೆ ಅಂತ ಖರ್ಚು ಮಾಡ್ತೀರಿ, ನಾಳೆಗೆ ಬಾಡಿ ಹೋಗುವ ಈ ಹೂ ಕೊಳ್ತೀರಿ.. ಅದರ ಬದಲು ಅದನ್ನೆಲ್ಲಾ ಉಳಿಸಿದರೆ ಇನ್ನು ಯಾವುದೋ ಉಪಯೋಗಕ್ಕೆ ಬರಬಹುದು. ಅಥವಾ ನೀವದನ್ನು ಯಾರಿಗಾದರೂ ದಾನ ಕೊಡಬಹುದು. ಹಸಿದವರೆಷ್ಟಿಲ್ಲ ನಮ್ಮಲ್ಲೀ.. ಮನೆ ಇಲ್ಲದ ನಿರ್ಗತಿಕರು ಹಾದಿ ಬೀದಿಯಲ್ಲಿರುತ್ತಾರೆ, ಅಸಹಾಯಕ ಮಹಿಳೆಯರಿರುತ್ತಾರೆ.. ನೀವು ನಿಮ್ಮಲ್ಲಿರುವುದನ್ನು ಹಾಳು ಮಾಡದೇ ಅವರಿಗೆ ಕೊಡುವುದರಿಂದ ಅಸಮಾನತೆ ಕಳೆದು ಸಮಾನತೆ ಮೂಡುತ್ತೆ !!”
“ಮನುಷ್ಯ ಕೇವಲ ತನಗಾಗಿ ಜೀವಿಸದೆ ಪರರಿಗಾಗಿಯೂ ಮಿಡಿಯಬೇಕು ಎನ್ನುವ ನಿಮ್ಮ ಮಾತುಗಳನ್ನು ಒಪ್ಪಿದೆ. ಆದರೆ ಇದರಿಂದ ನನಗೆ ಏನು ಲಾಭ?”
“ಇದರಿಂದ ನಿಮಗೆ ಸಂತೋಷ ಸಿಗುತ್ತೆ..”
“ನನಗೆ ಹಬ್ಬಗಳ ಆಚರಣೆಯಿಂದಲೂ ಸಂತೋಷ ಸಿಗುತ್ತೆ.”
“ಆದ್ರೆ ನೀವು ಮಾಡೋ ಆಚರಣೆಯಿಂದ ಯಾರಿಗೆ ಪ್ರಯೋಜನ ಇದೆ. ?”
“ನಾನು ಇದಕ್ಕಾಗಿ ಖರೀದಿ ಮಾಡುವ ಹೂವು ಹಣ್ಣುಗಳ ವ್ಯಾಪಾರ ಅದನ್ನು ಬೆಳೆದ ಬೆಳೆಗಾರರ ಮುಖದಲ್ಲಿ ನಗು ತರಿಸಬಹುದು. ಎಲ್ಲರೂ ನಿಮ್ಮಂತೆ ಯೋಚಿಸಿದರೆ ಅವರು ಹಬ್ಬಗಳಿಗೆಂದೇ ಬೆಳೆಯುವ ಹೂವುಗಳನ್ನು ನಡು ರಸ್ತೆಯಲ್ಲಿ ಚೆಲ್ಲಿ ಹತಾಶರಾಗಬಹುದು. ಈಗ ನೋಡಿ ನಾಗರ ಪಂಚಮಿ ಹಬ್ಬಕ್ಕೆ ಅಂತಲೇ ಅರಸಿನದ ಎಲೆಗಳನ್ನು ಮಾರಾಟಕ್ಕಿಡುತ್ತಾರೆ. ಯಾರೂ ಆಚರಣೆ ಮಾಡದೇ ಅದು ಮಾರಾಟವಾಗೋದು ಹೇಗೆ? ಅದು ಬೇಡ.. ಸ್ವಾತಂತ್ರ್ಯೋತ್ಸವಕ್ಕೆಂದೇ ಪುಟ್ಟ ಪುಟ್ಟ ಧ್ವಜಗಳನ್ನು ಹೊಲಿದು ಮಾರುವವರಿರುತ್ತಾರೆ. ಅದಕ್ಕೆಂದೇ ಮೂರು ಬಣ್ಣಗಳನ್ನು ಸಮೀಕರಿಸಿ ತಯಾರಿಸಿದ ಹಲವು ಕರಕುಶಲ ವಸ್ತುಗಳು ಮಾರುಕಟ್ಟೆಯಲ್ಲಿರುತ್ತದೆ ಅದನ್ನು ಕೊಳ್ಳುವವರಿಲ್ಲದೇ ಹೋದಲ್ಲಿ ಅವರ ತಯಾರಿಗೆ ಅರ್ಥ ಏನಿದೆ? ಅವರ ಬೆವರ ಶ್ರಮಕ್ಕೆ ಬೆಲೆ ಎಲ್ಲಿ ದೊರೆಯುತ್ತದೆ?”
“.. ನೋಡಿ ಇಂತಹ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಬುದ್ಧಿಮಟ್ಟ ಹೆಚ್ಚಿರಬೇಕು. ನಮ್ಮದೆಲ್ಲಾ ಉಚ್ಚ ಮಟ್ಟದ ಚಿಂತನೆಗಳು ನಿಮ್ಮಂತವರ ತಲೆಗೆ ಹೋಗದು.. ಸರಿ ಬರ್ತೀನಿ..”
“ಆಯ್ತು ಹೋಗಿ ಬನ್ನಿ..”
ಹಿಂದಿನಿಂದ ಒಂದು ಸ್ವರ ಅವರನ್ನು ಕೂಗಿ ಕರೆಯಿತು..
“ಸಾರ್.. ನೀವು ಬರ್ತ್ ಡೇಗೆ ಆರ್ಡರ್ ಮಾಡಿದ ಕೇಕ್ ಮೇಲೆ ಚಾಕೋಲೇಟ್ ಟಾಪಿಂಗ್ ಮಾಡ್ಬೇಕಾ ಅಥ್ವಾ ಐಸಿಂಗ್ ಸಾಕಾ? ಮೇಲ್ಗಡೆ ಹೇಗೆ ಬರೀಬೇಕು ಅಂತ ಚೀಟಿಯಲ್ಲಿ ಬರ್ದು ಕೊಡಿ..”
“ಓಹ್.. ಯಾರದ್ದು ಬರ್ಥ್ ಡೇ..”
“ನನ್ನದೇ.. ಸಂಜೆ ಪಾರ್ಟಿ ಇದೆ .. ಆದ್ರೆ ನಿಮ್ಮಂತವರನ್ನು ಕರೆಯೋ ಹಾಗಿಲ್ಲ.. ಹ್ಹ ಹ್ಹ ಗೊತ್ತಲ್ಲಾ ನಮ್ಮ ಪಾರ್ಟಿ.. !!”
ಹತ್ತಿರದ ಅಂಗಡಿಯ ಮ್ಯೂಸಿಕ್ ಪ್ಲೇಯರಿನಲ್ಲಿ ‘ಪ್ರಪಂಚವೇ ದೇವರು ಮಾಡಿರೋ ಬಾರು ನಾವೆಲ್ಲರೂ ಇಲ್ಲಿ ಬಂಧು ಮಿತ್ರರು .. … .. … ಜಾತಿ ಮತಾ ಇಲ್ಲ ನಾವಿಲ್ಲಿ ಒಂದೇ ಎಲ್ಲರೂ..’ ಎಂಬ ಹಾಡು ಕಿವಿಗೆ ಬಡಿಯಿತು.
“ಆದ್ರೆ ನೀವು ಹಬ್ಬಗಳ ಆಚರಣೆಯ ವಿರೋಧಿ ಅಲ್ವಾ.. ಮತ್ತೆ ನಿಮ್ಮ ಹುಟ್ಟುಹಬ್ಬದ ಆಚರಣೆ .. ನೀವು ಮಾಡೋ ಖರ್ಚಿನಲ್ಲಿ ಕಡಿಮೆ ಎಂದರೂ ನೂರು ಜನರ ಒಂದು ದಿನದ ಹೊಟ್ಟೆಯ ಚಿಂತೆ ಕಳೆಯಬಹುದು.. ಅಲ್ವಾ..ಮತ್ತೇ.. “ ನನ್ನ ಮಾತು ಮುಗಿಯುವುದರೊಳಗೆ ಅವರು ಕೊಂಚ ಸಿಟ್ಟಿನ ಮುಖ ಹೊತ್ತು ಅಲ್ಲಿಂದ ಮರೆಯಾದರು.. ನಾನು ಕೈಗಳಲ್ಲಿದ್ದ ಭಾರವನ್ನು ಮತ್ತೊಮ್ಮೆ ಸಮತೋಲನಗೊಳಿಸುತ್ತಾ ಹೊರಟೆ.
ಬದನೆಕಾಯಿ ತಿನ್ನಲಿಕ್ಕೆ ಇರುವುದು ಎಂದು ನನಗೂ ತಿಳಿದಿತ್ತು.
-ಅನಿತಾ ನರೇಶ್ ಮಂಚಿ
*****
Superb! (Y)
ಹ ಹ.. ಇಂತಾ ಬುದ್ದಿಮಂಕರಿಂದನೇ ಪ್ರಪಂಚ ಇಂತಹಾ ಸ್ಥಿತಿಗೆ ಬಂದಿರೋದು !!
ಸರಿಯಾಗಿ ಉತ್ತರಿಸಿದ್ದೀರಿ ಮೇಡಂ……. ನಾಲ್ಕು ಜನರ ಹೊಟ್ಟೆ ಹೊರೆಯುತ್ತಿರುವ ಆಚರಣೆಗಳಲ್ಲಿ ಮಾರಾಟವಾಗುವ ವಸ್ತುಗಳು ಇಂಥ ಜನರನ್ನು ಅದ್ಹೇಗೆ ತಲುಪುತ್ತವೋ.. ಅವರ ಆರ್ಥಿಕ ಸ್ಥಿತಿ ಅನಾನುಕೂಲವಿದ್ದಲ್ಲಿ ಆಗ ಅವರಿಗೆ ಇಂಥ ವಿಚಾರಗಳು ಗೊತ್ತಾಗಿರುತ್ತಿದ್ದವು…..