ನಟ್ಟು ಕಾಲಂ

ಇಲಿ ಪಾಶಾಣ ಮಾರುವವನ ಜೀವನ ಪ್ರೀತಿ: ನಟರಾಜು ಎಸ್. ಎಂ.


ಜಲ್ಪಾಯ್ಗುರಿಯ ಮಧ್ಯ ಭಾಗದಲ್ಲಿ ಒಂದು ಪುಟ್ಟ ನದಿ ಹರಿಯುತ್ತೆ. ಆ ನದಿಯ ಹೆಸರು ಕರೋಲ. ಬಹುಶಃ ಬೆಂಗಾಲಿಯಲ್ಲಿ ಕರೋಲ ಅಂದರೆ ಹಾಗಲಕಾಯಿ. ಈ ನದಿಗೆ ಅಲ್ಲಲ್ಲಿ ಪುಟ್ಟ ಪುಟ್ಟ ಸೇತುವೆಗಳಿವೆ. ಅಂತಹ ಒಂದು ಪುಟ್ಟ ಸೇತುವೆ ದಿನ್ ಬಜಾರ್ ಮೋಡ್ ಎನ್ನುವ ಜಾಗದ ಬಳಿ ಇದೆ. ದಿನ್ ಬಜಾರ್, ಜಲ್ಪಾಯ್ಗುರಿಯಲ್ಲಿ ವ್ಯಾಪಾರ ವಹಿವಾಟು ನಡೆಯುವ ಒಂದು ಪ್ರಮುಖ ಜಾಗ. ನಾನು ಮನೆಯಿಂದ ಆಫೀಸಿಗೆ ಹೊರಡಬೇಕಾದರೆ ಈ ದಿನ್ ಬಜಾರ್ ಅನ್ನು ದಾಟಿಯೇ ಹೋಗಬೇಕು. ನನ್ನ ಮನೆಯಿಂದ ಆಫೀಸಿಗೆ ನಡೆದು ಹೋಗಬೇಕೆಂದರೆ ಕನಿಷ್ಟ ಹದಿನೈದು ನಿಮಿಷವಾದರು ಬೇಕು. ಆಫೀಸಿನ ಟೈಮ್ ಹತ್ತು ಗಂಟೆಯಾದರೂ ನಮ್ಮ ಆಫೀಸಿನಲ್ಲಿ ಹತ್ತೂವರೆ ಹತ್ತು ಮುಕ್ಕಾಲಿನವರೆಗೂ ಆಫೀಸಿಗೆ ಬರಬಹುದಾದ ರಿಲಾಕ್ಸೇಷನ್ ಇದೆ. ಆ ರಿಲಾಕ್ಸೇಷನ್ ಅನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ಕನಿಷ್ಟ ಹತ್ತೂವರೆ ಒಳಗಾದರೂ ಆಫೀಸಿನ ಒಳಗೆ ಕಾಲಿಡಬೇಕು ಎನ್ನುವುದು ನನ್ನ ರೂಲ್ಸ್. ಮನೆಯಲ್ಲೇ ಹತ್ತು ಹದಿನೈದೋ ಹತ್ತು ಇಪ್ಪತ್ತೋ ಆಗಿದೆ ಎಂದರೆ ಸಾಮಾನ್ಯವಾಗಿ ರಿಕ್ಷಾದ ಮೊರೆ ಹೋಗುತ್ತೇನೆ. ಮೊದ ಮೊದಲಿಗೆ ವಾರಕ್ಕೆ ಒಂದೆರಡು ದಿನ ರಿಕ್ಷಾದ ಮೊರೆ ಹೋಗುತ್ತಿದ್ದವನು ಈಗ ನಿತ್ಯ ಲೇಟ್ ಆಗುವುದರಿಂದ ರಿಕ್ಷಾ ಹತ್ತು ಕುಳಿತೇ ಆಫೀಸಿಗೆ ಹೊರಡುತ್ತೇನೆ. ನಡೆದು ಹೋಗುವಾಗ ದಾರಿ ನೋಡಿಕೊಂಡು ನಡೆಯಬೇಕಾದ ಅನಿವಾರ್ಯತೆ ಇದ್ದರೆ ಕಾರಿನಲ್ಲಿ ಹೋಗುವಾಗ ಕಾರಿನ ವೇಗಕ್ಕೆ ಪ್ರಪಂಚವನ್ನು ಅಷ್ಟು ಕೂಲಂಕುಶವಾಗಿ ನೋಡಲಾಗದು. ಆದರೆ ರಿಕ್ಷಾದಲ್ಲಿ ಕುಳಿತರೆ ಹೊಸದೊಂದು ಪ್ರಪಂಚ ಕಣ್ಣ ಮುಂದೆ ನಿಂತಂತಾಗುತ್ತದೆ. ನಾನು ಪ್ರತಿ ಬಾರಿ ರಿಕ್ಷಾ ಹತ್ತಿ ಕುಳಿತಾಗಲೂ ನನ್ನ ಕಣ್ಣ ಮುಂದೆ ಚಲನಚಿತ್ರದಂತೆ ಜನರ ಬದುಕು ಕಂಡ ಅನುಭವವಾಗಿದೆ. ಅಂತಹ ಚಲನಚಿತ್ರದಂತೆ ಕಂಡ ಅನುಭವದಲ್ಲಿ ಆ ದಿನ್ ಬಜಾರ್ ನ ಸೇತುವೆ ಬಳಿಯೇ ನನ್ನ ರಿಕ್ಷಾಕ್ಕೆ ಎದುರಾಗುವ ಆ ಕನ್ನಡಕದ ಹುಡುಗಿ ಮತ್ತು "ಇದೂರ್ ಮಾರ್ ಇದೂರ್ ಮಾರ್" ಅಂತ ರಾಗವಾಗಿ ಹೇಳುತ್ತಾ ಇಲಿ ಪಾಶಾಣ ಮಾರುವ ವ್ಯಕ್ತಿ ನನ್ನನ್ನು ತುಂಬಾ ಕಾಡಿದ್ದಾರೆ. ಈಗಲೂ ಕಾಡುತ್ತಾರೆ.

ಆ ಕನ್ನಡಕ ಹಾಕಿಕೊಂಡಿರುವ ಹುಡುಗಿ ಯಾವುದೋ ಆಫೀಸಿನಲ್ಲಿ ಕೆಲಸ ಮಾಡ್ತಾಳೆ ಅನಿಸುತ್ತೆ. ಸರಿಯಾಗಿ ಹತ್ತು ಹದಿನೈದಕ್ಕೆ ಆ ಸೇತುವೆಯ ಮೂಲಕವೇ ಹಾದು ಹೋಗುತ್ತಾಳೆ. ಅವಳನ್ನು ನೋಡಿದಾಗಲೆಲ್ಲಾ "ನೋಡೋ ಆ ಹುಡುಗೀನ. ಮನೆ ಎಲ್ಲೋ ಏನೋ. ದಿನಾ ನಡೆದುಕೊಂಡು ಆಫೀಸಿಗೆ ಹೋಗ್ತಾಳೆ.  ನಿನ್ನ ಮನೆ ಆಫೀಸಿನಿಂದ ಇಷ್ಟೊಂದು ಹತ್ತಿರ ಇದ್ದರೂ ನೀನು ರಾಜನ ತರಹ ರಿಕ್ಷಾದಲ್ಲಿ ಕುಳಿತು ಆಫೀಸಿಗೆ ಹೋಗ್ತೀಯ. ಮನೆ ಆಫೀಸಿನಿಂದ ದೂರ ಇಲ್ಲ ಅಲ್ವಾ? ಬೇಗ ರೆಡಿಯಾಗಿ ಆಫೀಸಿಗೆ ನಡೆದುಕೊಂಡು ಹೋಗೋಕೆ ನಿನಗೆ ಏನು ದಾಡಿ? ದಿನಾ ಒಂಚೂರು ನಡೆದ್ರೆ ಹೊಟ್ಟೆ ಆದ್ರೂ ಕಡಿಮೆ ಆಗಲ್ವಾ?" ಅಂತ ನನ್ನ ಒಂದನೇ ಸ್ವಗತ ನನ್ನನ್ನು ಬಾಯಿಗೆ ಬಂದಂತೆ ಬಯ್ದರೆ ಅದಕ್ಕೆ ಉತ್ತರವಾಗಿ ನನ್ನ ಎರಡನೇ ಸ್ವಗತ "ರಿಕ್ಷಾದವರು ಪಾಪ ವ್ಯಾಪಾರ ಇಲ್ಲದೆ ಜನ ಬಂದು ರಿಕ್ಷಾ ಹತ್ತುತ್ತಾರೆ ಅಂತ ಕಾಯ್ಕೊಂಡು ಕುಳಿತ್ತಿರುತ್ತಾರಲ್ಲ ಅದನ್ನು ನೋಡಿದ್ರೆ ಒಂತರಾ ಅನಿಸುತ್ತೆ. ಅದಕ್ಕೆ ಸಾಧ್ಯವಾದಾಗಲೆಲ್ಲಾ ರಿಕ್ಷಾದಲ್ಲಿ ಹೋಗ್ತೀನಪ್ಪ. ನಾನು ರಿಕ್ಷಾ ಹತ್ತೋದರಿಂದ ಒಬ್ಬ ರಿಕ್ಷಾದವನಿಗೆ ಒಂದೆರಡು ಕಾಸು ಸಿಗುತ್ತಲ್ವಾ?" ಅಂತ ಡೈಲಾಗ್ ಹೊಡೆದರೆ "ಈ ಡೈಲಾಗ್ ಗಳಿಗೇನು ಕಡಿಮೆ ಇಲ್ಲ." ಅಂತ ಒಂದನೇ ಸ್ವಗತ ಹೇಳುತ್ತೆ. ನನ್ನದೇ ಎರಡು ಸ್ವಗತಗಳ ನಡುವಿನ ಈ ಸಂಭಾಷಣೆಯನ್ನು ಕೇಳಿ ನಾನು ಮುಗುಳ್ನಗುತ್ತೇನೆ. 

ಆ ಸೈಕಲ್ ರಿಕ್ಷಾದವರ ಕತೆಯೇನೋ ಓಕೆ. ಜನರಿಗೆ ರಿಕ್ಷಾದ ಅವಶ್ಯಕತೆ ಇದ್ದೇ ಇರುತ್ತೆ. ರಿಕ್ಷಾದವರಿಗೆ ಇವತ್ತು ಬ್ಯುಸಿನೆಸ್ ಆಗಿಲ್ಲ ಅಂದ್ರೆ ನಾಳೆ ಆಗೇ ಆಗುತ್ತೆ. ಆದರೆ "ಇದೂರ್ ಮಾರ್ ಇದೂರ್ ಮಾರ್" ಅಂತ ಇಲಿ ಪಾಶಾಣ ಮಾರೋ ಆ ಮನುಷ್ಯನ ಜೀವನ ಹೆಂಗೆ ನಡೆಯುತ್ತೆ? ಅವನಿಗೆ ದಿನಾ ಒಳ್ಳೆ ಬ್ಯುಸಿನೆಸ್ ನಡೆಯುತ್ತಾ? ಜನ ಇಲಿಗಳನ್ನು ಕೊಲ್ಲೋಕೆ ಇಲಿ ಪಾಶಾಣ ಕೊಂಡುಕೊಳ್ಳುತ್ತಾರ? ಈ ಊರಿನಲ್ಲಿ ಅಷ್ಟೊಂದು ಇಲಿಗಳಿವೆಯಾ? ನಿತ್ಯ ಎಷ್ಟು ಜನ ತಾನೇ ಇಲಿ ಪಾಶಾಣ ಕೊಳ್ಳೋಕೆ ಸಾಧ್ಯ? ಇಲಿ ಪಾಶಾಣವನ್ನು ನಮ್ಮ ಕಡೆಯ ಅಂಗಡಿಗಳಲ್ಲಿ ಕೆಲವೇ ಕೆಲ ಜನ ಕೊಳ್ಳುತ್ತಾರೆ. ಇಲಿ ಪಾಶಾಣಕ್ಕೆ ಅಷ್ಟೊಂದು ಬೇಡಿಕೆ ಇದೆಯಾ? ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಕಾಡಿದುಂಟು. ನಾನು ಆಫೀಸಿಗೆ ಹೋಗೋಕ್ಕಿಂತ ಮುಂಚೆ ಆ ಸೇತುವೆಯ ಒಂದು ಬದಿಗೆ ನಿಂತು ವ್ಯಾಪಾರ ಶುರು ಮಾಡುವ ಆತ ನಾನು ಆಫೀಸಿನಿಂದ ಸಂಜೆ ಮನೆಗೆ ಹೋಗುವಾಗಲೂ ಅಲ್ಲೇ ನಿಂತಿರುತ್ತಾನೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲಿ ನಿಲ್ಲುವ ಆತನ ಜೀವನ ಪ್ರೀತಿ ಯಾಕೋ ನನ್ನನ್ನು ತುಂಬಾ ಕಾಡಿದ್ದಿದೆ. ಎಷ್ಟೋ ಸಾರಿ ಆಫೀಸಿಗೆ ಹೋಗೋ ಗಡಿಬಿಡಿಯಲ್ಲಿ ನನಗೆ ಕೇಳುವ ಅವನ ಸಂಗೀತಮಯವಾದ "ಹೇ.. ಇದೂರ್ ಮಾರ್ ಇದೂರ್ ಮಾರ್" ಎಂಬ ದನಿ ನಮ್ಮ ಕಡೆಯ "ಸೌತೇಕಾಯ್ ಸೌತೇಕಾಯ್ ಸೌತೇಕಾಯ್ ಎಳೇ ಸೌತೇಕಾಯ್ ದಾವ್ಗೊಳ್ಳೋದು ಸೌತೇಕಾಯಿ" ಅಂತ ಬಸ್ ಗಳಲ್ಲಿ ಸೌತೇಕಾಯಿ ಮಾರುವವರ, "ಕಡ್ಲೇಕಾಯ್ ಕಡ್ಲೇಕಾಯ್ ಕಡ್ಲೇಕಾಯ್ ಟೈಮ್ ಪಾಸ್ ಕಡ್ಲೇಕಾಯ್ ಬಡವರ ಬಾದಾಮಿ ಕಡ್ಲೇಕಾಯ್" ಎಂದು ಟೆಂಟ್, ಥಿಯೇಟರ್ ಗಳಲ್ಲಿ ಕಡ್ಲೇ ಕಾಯಿ ಮಾರುವವರ, "ಇಡ್ಲೀ ಇಡ್ಲೀ ಒಂದ್ ರೂಪಾಯಿಗೊಂದು ಇಡ್ಲೀ ಎಂದು ಇಡ್ಲೀ" ಎಂದು ಇಡ್ಲೀ ಮಾರುವ ಮಾರುತ್ತಿದ್ದ ಹುಡುಗರೆಲ್ಲಾ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ.

ಈ ಕಡ್ಲೇ ಕಾಯಿ, ಸೌತೇಕಾಯಿ, ಇಡ್ಲಿ ಇವೆಲ್ಲಾ ತಿನ್ನೋ ವಸ್ತುಗಳು ಹಾಗಾಗಿ ಅವುಗಳನ್ನು ಮಾರೋರಿಗೆ ವ್ಯಾಪಾರ ಚೆನ್ನಾಗಿ ಆಗುತ್ತೆ. ಆದರೆ ಈ ಪಾರ್ಟಿ ಇಲಿ ಪಾಶಾಣ ಮಾರೋದನ್ನೇ ತನ್ನ ಬ್ಯುಸಿನೆಸ್ ಅಂದುಕೊಂಡು ಇಲಿ ಪಾಶಾಣ ಮಾರ್ತಾ ಇರೋದು ನನ್ನ ಜೀವನದಲ್ಲಿ ಕಂಡ ಒಂದು ಅಧ್ಬುತ ಎಂದರೆ ತಪ್ಪಾಗಲಾರದು. ಯಾಕೋ ಪ್ರತಿ ಬಾರಿ "ಹಾ.. ಇದೂರ್ ಮಾರ್ ಇದೂರ್ ಮಾರ್" ಎಂಬ ಅವನ ದನಿ ಕೇಳಿದಾಗಲೆಲ್ಲಾ ಆಯಪ್ಪನನ್ನು ಒಂದಿನ ಸುಮ್ಮನೆ ಮಾತನಾಡಿಬೇಕು ಎಂದು ದೃಢ ನಿಶ್ಚಯ ಮಾಡಿದ್ದೆ. ಆಫೀಸಿನ ಗಡಿಬಿಡಿ ಕೆಲಸಗಳ ನಡುವೆ ಯಾಕೋ ಅವನ ಜೊತೆ ಮಾತನಾಡಬೇಕೆನ್ನುವ ಮನಸ್ಸು ಮತ್ತು ಕಾಲ ಮೊನ್ನೆಯವರೆಗೂ ಬಂದಿರಲಿಲ್ಲ. ಹೀಗೆ ಆಫೀಸಿನಿಂದ ಮೊನ್ನೆ ಬರುವಾಗ ಅದೇ ಕರೋಲ ನದಿಯ ಸೇತುವೆಯ ಒಂದು ಬದಿಗೆ ನಿಂತು ಲೈಟ್ ಬೆಳಕಿನ ಅಡಿಯಲ್ಲಿ ನಿಂತು ಇಲಿ ಪಾಶಾಣ ಮಾರುತ್ತಿದ್ದನನ್ನು ಮಾತನಾಡಿಸಬೇಕು ಎಂದು ಆ ದಿನ ಮನಸಿಗೆ ಬಂದರೂ "ಲೋ ಮಗ ಮಾಡೋಕೆ ಕೆಲಸ ಇಲ್ವೇನಪ್ಪ? ಹೋಗು ಮನೆಗೆ ಹೋಗಿ ಹಿಟ್ ಉಂಡುಕೊಂಡು ಮಲಿಕೋ. ಇಲಿ ಪಾಶಾಣ ಮಾರೋದು ಅವನ ಕಸುಬು. ಅದನ್ನ ಡಿಟೈಲ್ ಆಗಿ ತಿಳಕೊಂಡು ಏನು ಮಾಡ್ತೀಯ" ಅಂತ ನನ್ನ ಸ್ವಗತ ಒಂದು ಹೇಳಿತ್ತು. ಸ್ವಗತ ಒಂದು ಹೇಳೋದು ಸರಿ ಅಂದುಕೊಂಡು ಅದರ ಮಾತನ್ನು ಕೇಳಿ ಸುಮ್ಮನೆ ಸೇತುವೆ ಮೇಲೆ ನಡೆದು ಹೋಗುತ್ತಿದ್ದವನು ಆ ಇಲಿ ಪಾಶಾಣವನ್ನು ಮಾರೋವವನ ಕಡೆ ಒಮ್ಮೆ ತಿರುಗಿ ನೋಡಿ ನನ್ನ ಪಾಡಿಗೆ ನನ್ನ ಮನೆ ಕಡೆಗೆ ನಡೆದಿದ್ದೆ. ನಾನು ಆಯಪ್ಪನಿಂದ ಹತ್ತು ಹೆಜ್ಜೆ ದೂರ ಹೋಗಿದ್ದೆ ಅಷ್ಟೆ. "ಇದೂರ್ ಮಾರ್ ಇದೂರ್ ಮಾರ್" ಅನ್ನೋ ಅವನ ಸಂಗೀತಮಯ ದನಿ ನನಗೆ ಕೇಳಿಸಿತು. ಮನೆಯ ಕಡೆ ಹೊರಟಿದ್ದ ನನ್ನ ಕಾಲುಗಳು ಇದ್ದಕ್ಕಿದ್ದಂತೆ ರೈಟ್ ಎಬೌಟ್ ಟರ್ನ್ ಆಗಿ ಅವನ ಪುಟ್ಟ ದುಖಾನಿನ ಮುಂದೆ ಬಂದು ನಿಂತಿದ್ದವು. 

ಇಷ್ಟು ದಿನ ಬರೀ ದೂರದಿಂದಲೇ ಅವನ ದನಿಯನ್ನು ಕೇಳಿದ್ದ ನಾನು ಅಂದು ಅವನ ಮುಂದೆ ನಿಂತಿದ್ದೆ. ಅಂಗಡಿ ಎಂದರೆ ಖೈನಿ ಪಾಕೆಟ್ ಗಳ ಸರಗಳಂತೆ ಕೆಲವು ಸಣ್ಣ ಸಣ್ಣ ಪೊಟ್ಟಣಗಳನ್ನು ತಂತಿಗಳ ಸಹಾಯದಿಂದ ಒಂದು ಗಳದ ತುಂಡಿಗೆ ನೇತು ಹಾಕಿದ್ದ. ಅದೇ ಅವನ ಅಂಗಡಿ, ದುಖಾನು. ಅವನ ಅಂಗಡಿಯಲ್ಲಿ ಏನೇನಿದೆ ಅಂತ ಅವನು ನೇತು ಹಾಕಿದ್ದ ಪೊಟ್ಟಣಗಳ ಕಡೆ ದೃಷ್ಟಿ ಹಾಯಿಸಿದಾಗ  ಎಲ್ಲಾ ಪೊಟ್ಟಣಗಳ ಮೇಲೆ ಚಿಕ್ಕ ಚಿಕ್ಕದಾಗಿ ಏನನ್ನೋ ಬೆಂಗಾಲಿಯಲ್ಲಿ ಬರೆದಿತ್ತು. ಎಲ್ಲಾ ಪೊಟ್ಟಣಗಳ ಮೇಲೂ ಪೊಟ್ಟಣಗಳ ಒಳಗಿರುವ ಔಷಧಿಗಳಿಗನುಗುಣವಾಗಿ ಇಲಿ, ಜಿರಲೆ, ಹೇನು ಮತ್ತು ತಿಗಣೆಗಳ ಚಿತ್ರಗಳಿದ್ದವು. ಇವು ಏನು ಎಂದು ನಾನು ಕೇಳಿದ ಪ್ರಶ್ನೆಗೆ ತಲೆ ಹೇನಿನ ಔಷಧಿ, ಇಲಿ ಪಾಶಾಣ, ಲಕ್ಷಣ ರೇಖೆಯಂತೆ ಕಾಣುವ ಲೋಕಲ್ ಜಿರಲೆ ಔಷಧಿ, ತಿಗಣೆ ಔಷಧಿ, ಇಲಿ ರಿಫಲೆಂಟ್, ಹೀಗೆ ನಾಲ್ಕೈದು ತರಹದ ಔಷಧಿಗಳು ಅವನ ಅಂಗಡಿಯಲ್ಲಿ ಲಭ್ಯವಿದ್ದುದು ತಿಳಿಯಿತು. ಯಾವುದೇ ಮೂರು ಪಾಕೆಟ್ ತೆಗೆದುಕೊಂಡರೂ ಕೇವಲ ಹತ್ತು ರೂಪಾಯಿಗಳು ಎನ್ನುತ್ತಾ "ಯಾವ ಔಷಧಿ ಬೇಕು? ಎಷ್ಟು ಬೇಕು ಸರ್" ಎನ್ನುವಂತೆ ಆತ ನನ್ನನ್ನು ಕೇಳಿದ್ದ. ಮನೆಯಲ್ಲಿ ಸೊಳ್ಳೆಗಳ ಕಾಟ ಬಿಟ್ಟು ಇಲಿ, ಹೇನು, ತಿಗಣೆ, ಮತ್ತು ಜಿರಲೆಗಳ ಕಾಟವಿಲ್ಲದ ಕಾರಣ ಆ ಔಷಧಿಗಳನ್ನು ತೆಗೆದುಕೊಂಡು ನಾನು ಮಾಡೋದಾದರೂ ಏನು ಅಂದುಕೊಳ್ಳುತ್ತಾ ನಗುತ್ತಾ "ಇಲ್ಲ ನಂಗೇನು ಬೇಡ. ನಮ್ಮದೊಂದು ಪುಟ್ಟ ಪತ್ರಿಕೆ ಇದೆ. ಅದರಲ್ಲಿ ನಿಮ್ಮ ಬಗ್ಗೆ ಬರೀಬೇಕು ಅಂತ ಇದ್ದೇನೆ. ನಿಮ್ಮದೊಂದು ಫೋಟೋ ತೆಗೀಲ ಅಂದೆ. "ಬೆಂಗಾಲಿ ಪೇಪರ್ ಆ?" ಎಂದ. "ಇಲ್ಲ ಕನ್ನಡ." ಎಂದು ನಕ್ಕೆ. ಅವನು "ಓ ಹಂಗಾ.. ಹೂಂ ಎಷ್ಟು ಫೋಟೋ ತೆಗಿತೀರ ತೆಗೀರಿ. ಫೋಟೋ ತೆಗೆಸಿಕೊಳ್ಳೋಕೆ ಕಾಸು ಕೊಡಬೇಕಾ" ಎನ್ನುವಂತೆ ತನ್ನ ಪುಟ್ಟ ಅಂಗಡಿಯ ಎದುರು ನಿಂತ. 

ನಾನು ಇಲಿ ಪಾಶಾಣ ಮಾರುವವನ ಫೋಟೋ ತೆಗೆಯುತ್ತಿದ್ದುದ್ದನ್ನು ಆ ಸೇತುವೆ ಮೇಲೆ ನಡೆದು ಹೋಗುತ್ತಿದ್ದ ನಮ್ಮ ಸ್ಟಾಫ್ ಒಬ್ಬರು ನೋಡಿ ಹತ್ತಿರ ಬಂದು "ಏನು ಸರ್ ಏನ್ ತಗೊಳ್ತಾ ಇದ್ದೀರ. ಮನೇಲಿ ಇಲಿ ಕಾಟಾನ?" ಎಂದು ನಗುತ್ತಾ ಕೇಳಿದ್ದರು. "ಇಲೀನು ಇಲ್ಲ ಎಂತದ್ದೂ ಇಲ್ಲ. ನಾನು ದಿನಾ ಆಫೀಸಿಗೆ ಹೋಗುವಾಗ ಈಯಪ್ಪ ಇಲಿ ಔಷಧಿ ಮಾರೋದನ್ನು ನೋಡಿದ್ದೆ. ನಾನು ಇಲಿ ಔಷಧಿ ಮಾರೋದನ್ನೇ ಕಸುಬಿನ ಹಾಗೆ ನೋಡ್ತಾ ಇರೋದು ಇದೇ ಮೊದಲು. ಅದಕ್ಕೆ ಈಯಪ್ಪನ ಜೊತೆ ಸುಮ್ಮನೆ ಒಂದೆರಡು ಮಾತನಾಡಿಸೋಣ ಅಂತ ಮಾತನಾಡಿಸ್ತಾ ಇದ್ದೆ." ಅಂದೆ. ಅದಕ್ಕೆ ನಮ್ಮ ಸ್ಟಾಫ್ "ಒಳ್ಳೆ ಔಷಧಿ ಸರ್. ಚೆನ್ನಾಗಿ ಕೆಲಸ ಸಹ ಮಾಡುತ್ತೆ. ಈಯಪ್ಪ ತುಂಬಾ ವರ್ಷದಿಂದ ಇದೇ ಜಾಗದಲ್ಲಿ ಈ ವ್ಯಾಪಾರ ಮಾಡಿಕೊಂಡಿದ್ದಾನೆ." ಎಂದರು. 

ನಾನು ಆ ಅಂಗಡಿಯವನಿಗೆ ಎಷ್ಟು ವರ್ಷದಿಂದ ಈ ಕೆಲಸ ಮಾಡಿಕೊಂಡಿದ್ದೀರ" ಅಂದೆ. "25 ವರ್ಷದಿಂದ ಸರ್" ಅಂದ. ನಾನು ಅಚ್ಚರಿಯಿಂದ "25 ವರ್ಷದಿಂದ ಇಲಿ ಔಷಧಿ ಮಾರ್ತಾ ಇದ್ದೀರ" ಅಂದೆ. ಅದಕ್ಕೆ ಅವನು "ಹೂಂ ಸರ್" ಅಂದ. ನನಗೆ ಅಚ್ಚರಿಯಾಯಿತು. ಮಾತು ಹೊರಡಲಿಲ್ಲ. "ಎಲ್ಲಿಂದ ತರ್ತೀರ ಈ ಔಷಧಿಗಳನ್ನು?" ಅಂದೆ. "ಕೋಲ್ಕತ್ತಾ ದಿಂದ ಸರ್." ಅಂದ. ಅಲ್ಲಿದ್ದ ಎಲ್ಲಾ ಔಷಧಿಗಳನ್ನು ಹೇಗೆ ಉಪಯೋಗಿಸಬೇಕು ಅಂತ ಗೊತ್ತಿದ್ದರೂ ಇಲ್ಲಿಯ ಜನ ಏನಾದರೂ ಬೇರೆ ತರಹ ಉಪಯೋಗಿಸುತ್ತಾರ ಅನ್ನೋ ಕುತೂಹಲದಿಂದ "ಈ ಔಷಧಿಗಳನ್ನು ಹೇಗೆ ಉಪಯೋಗಿಸಬೇಕು" ಅಂತ ಕೇಳಿದೆ. ಹೇನಿನ ಔಷಧಿಯನ್ನು ತಲೆಗೆ ಶಾಂಪೂ ತರಹ ಹಚ್ಚಿದ ನಂತರ ಕಾಲು ಗಂಟೆ ಆದ ಮೇಲೆ ತಲೆ ತೊಳೆಯಬೇಕು ಅಂದ. ಇಲಿ ಔಷಧಿಯನ್ನು ಯಾವುದಾದರು ತಿಂಡಿಗಳಲ್ಲಿ, ಅನ್ನದಲ್ಲಿ, ಬಾಳೆ ಹಣ್ಣಿನಲ್ಲಿ, ಅಥವಾ ಗೋಧಿ ಹಿಟ್ಟಿನಲ್ಲಿ ಬೆರೆಸಿ ಇಟ್ಟರೆ ವಿಷಮಿಶ್ರಿತವಾದ ಔಷಧಿ ತಿಂದು ಇಲಿಗಳು ಸಾಯುತ್ತವೆ ಅಂದ. ತಿಗಣೆ ಔಷಧಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ಒಂದು ಬಟ್ಟೆಯನ್ನು ಅದ್ದಿ ಆ ತೇವಗೊಂಡ ಔಷಧಿ ಮಿಶ್ರಿತ ಬಟ್ಟೆಯನ್ನು ತಿಗಣೆಗಳು ಇರೋ ಜಾಗಗಳಾದ ಹಾಸಿಗೆ, ಮಂಚ ಇಂತಹ ಜಾಗಗಳಿಗೆ ಒತ್ತಿದ್ದರೆ ತಿಗಣೆ ಸಾಯುತ್ತವೆ ಅಂದ. ಜಿರಲೆ ಕೊಲ್ಲುವ ಲಕ್ಷಣ ರೇಖೆಯಂತೆ ಕಾಣುವ ಔಷಧಿಯ ಬಗ್ಗೆ ವಿವರಣೆ ಬೇಡ ಅನಿಸಿತು. ಮತ್ತೆ ಈ ಇಲಿ ರಿಫಲೆಂಟ್ ಹೇಗೆ ಕೆಲಸ ಮಾಡುತ್ತೆ ಅಂದೆ. ಗೋಧಿ ಹಿಟ್ಟಿನಲ್ಲಿ ಈ ಔಷಧಿ ಮಿಕ್ಸ್ ಮಾಡಿ ಇಲಿಗಳು ಓಡಾಡೋ ಜಾಗದಲ್ಲಿ ಇಟ್ಟರೆ ಆ ಕಡೆ ಆ ಇಲಿಗಳು ತಲೆ ಹಾಕಲ್ಲ ಅಂದ. ಅವನ ಜೊತೆ ಮಾತನಾಡಿ ಇನ್ನೇನು ಹೊರಡಬೇಕು ಎನ್ನುವಾಗ "ತಪ್ಪಾಗಿ ತಿಳೀಬೇಡಿ ಎಷ್ಟು ಸಂಪಾದನೆ ಮಾಡ್ತೀರ ದಿನ" ಅಂದೆ. ಅವನು ಅವನ ಸಂಪಾದನೆಯನ್ನು ಹೇಳಿದ. "ಗುಡ್" ಅಂದುಕೊಂಡು ನನಗಾಗಿ ಕಾಯುತ್ತಿದ್ದ ಸ್ಟಾಫ್ ಅನ್ನು ಹೆಚ್ಚು ಕಾಯಿಸುವುದು ಬೇಡ ಎಂದುಕೊಂಡು ಇಲಿ ಪಾಶಾಣ ಮಾರುವವನಿಗೆ "ಥ್ಯಾಂಕ್ ಯೂ" ಅಂತ ಹೇಳಿ ಮನೆ ಕಡೆಗೆ ಹೆಜ್ಜೆ ಇಟ್ಟಿದ್ದೆ. 

ತಿಂಗಳಿಗೊಮ್ಮೆ ತಪ್ಪದೇ ಸಂಬಳ ತೆಗೆದುಕೊಳ್ಳುವ ವೃತ್ತಿ ಜೀವನದಲ್ಲಿ ನಾನಾ ಕಾರಣಗಳಿಗೆ ಆಗಾಗ ಒದ್ದಾಡುವ ನನ್ನದೇ ಜೀವನವನ್ನು ಒಮ್ಮೆ ಅವಲೋಕಿಸಿ ನೋಡಿದಾಗ ಈಗಲೂ "ಹಾ.. ಇದೂರ್ ಮಾರ್ ಇದೂರ್ ಮಾರ್" ಎಂಬ ಆ ಇಲಿ ಪಾಶಾಣ ಮಾರುವವನ ದನಿ ನನ್ನೊಳಗೆ ಗುಂಯ್ ಗುಟ್ಟಿದ ಹಾಗೆ ಅನುಭವವಾಗುತ್ತದೆ. ಆ ದನಿಯಲ್ಲಿ ಆತನ ಪುಟ್ಟ ಬದುಕು, ಜೀವನ ಪ್ರೀತಿ, ಅವನ ಕಸುಬಿನ ಮೇಲಿರುವ ಆತನ ದೀರ್ಘಕಾಲದ ನಂಟು, ಅಡಗಿಕೊಂಡಿರುವುದು ನನಗೆ ಕಂಡಂತಾಗುತ್ತದೆ. ಯಾಕೋ ಆ ದನಿ ಕೇಳಿದಾಗಲೆಲ್ಲಾ ನನ್ನೊಳಗೆ ಹೊಸ ಜೀವನೋತ್ಸಾಹ ಪುಟಿದೇಳಿದಂತೆ ಭಾಸವಾಗುತ್ತದೆ.

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು

******

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಇಲಿ ಪಾಶಾಣ ಮಾರುವವನ ಜೀವನ ಪ್ರೀತಿ: ನಟರಾಜು ಎಸ್. ಎಂ.

 1. ನಮ್ಮಲ್ಲೂ ಸಂತೆ ದಿನ ಇಲಿ ಪಾಷಾಣ ಮಾರುವವರು ಇರುತ್ತಾರೆ
   
  ಅವರೆ ಒಂದು ಅಂಗಡಿಯಂತೆ ತೋರುತ್ತಾರೆ.
  ಕೊರಳಲ್ಲಿ ಪಾಕೀಟ್ ಗಳನ್ನು ತೂಗಿ ಹಾಕಿಕೊಂಡು 
  ಓಡಾಡುತ್ತಾರೆ. ಉದರ ನಿಮಿತ್ತಂ . . .
   
  ಲೇಖನ ಚೆನ್ನಾಗಿದೆ.

 2. ಚೆನ್ನಾಗಿದೆ ನಟ್ಟು ಭಾಯಿ! ೨೫ ವರ್ಷಗಳಿಂದ ಪಾಶಾಣ ಮಾರುತ್ತಿದ್ದಾನೆಂದರೆ ಅವನು ಸಾಮಾನ್ಯರಲ್ಲಿ ಅಸಾಮಾನ್ಯನೇ ಸರಿ. ಅಂಥವರಿಂದ ಕಲಿಯುವುದು ಸಾಕಷ್ಟಿರುತ್ತದೆ.

Leave a Reply

Your email address will not be published. Required fields are marked *