ಮೂಲ ಕತೆ: ‘The Ant and the Grasshopper’
ಲೇಖಕರು: ಡಬ್ಲ್ಯು.ಸಾಮರ್‌ಸೆಟ್ ಮ್ಹಾಮ್
ಕನ್ನಡಕ್ಕೆ: ಜೆ.ವಿ.ಕಾರ್ಲೊ
ನಾನು ಸಣ್ಣವನಿದ್ದಾಗ ಫ್ರೆಂಚ್ ಲೇಖಕ ಫೊಂಟೇಯ್ನಾನ ಕೆಲವು ನೀತಿ ಕತೆಗಳನ್ನು ಉರು ಹಚ್ಚಿಕೊಳ್ಳುವುದು ಕಡ್ಡಾಯವೆಂಬಂತ್ತಿತ್ತು. ಈ ಕತೆಗಳಲ್ಲಿ ಅಡಗಿರುವ ನೀತಿಯನ್ನು ನಮ್ಮ ಮನದಟ್ಟಾಗುವಂತೆ ನಮ್ಮ ಹಿರಿಯರೂ ವಿವರಿಸುತ್ತಿದ್ದರು. ಈ ಕತೆಗಳಲ್ಲಿ ನನಗೆ ಬಹಳ ಇಷ್ಟವಾದ ಕತೆ ’ಇರುವೆ ಮತ್ತು ಮಿಡತೆ’ಯದು. ಈ ಅಸಮಾನತೆಯ ಜಗತ್ತಿನಲ್ಲಿ ಕ್ರಿಯಾಶಾಲಿಗಳಿಗೆ ಜಯ, ಸೋಮಾರಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ತುಂಬಾ ಸೊಗಸಾಗಿ ಈ ಕತೆಯಲ್ಲಿ ಚಿತ್ರಿಸಲಾಗಿದೆ. ವಸಂತ ಕಾಲದಲ್ಲಿ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೆ ಇರುವೆ ಹಗಲಿರುಳು ಬೆವರು ಸುರಿಸಿ ಚಳಿಗಾಲಕ್ಕೆಂದು ಆಹಾರವನ್ನು ಸಂಗ್ರಹಿಸುತ್ತಿದ್ದರೆ ಇತ್ತ ಮಿಡತೆ ನಾಳೆಯ ಚಿಂತೆ ಕಿಂಚಿತ್ತೂ ಇಲ್ಲದೆ ಗಾಳಿಗೆ ಹೊಯ್ದಾಡುತ್ತಿರುವ ಹುಲ್ಲು ಎಸಳಿನ ಮೇಲೆ ಕುಳಿತುಕೊಂಡು ದಿನವಿಡೀ ಸೂರ್ಯನತ್ತ ಮುಖ ಮಾಡಿ ಹಾಡುತ್ತಿರುತ್ತದೆ! ಅಷ್ಟರಲ್ಲಿ ಚಳಿಗಾಲ ಶುರುವಾಗೇ ಬಿಡುತ್ತದೆ. ಮಿಡತೆ ನೋಡುತ್ತದೆ! ಅದರ ಕಣಜ ಖಾಲಿ!! ಮಿಡತೆ ಇರುವೆಯ ಬಳಿಗೆ ಹೋಗಿ ಆಹಾರ ಬೇಡುತ್ತದೆ.
’ಇಡೀ ವಸಂತ ಕಾಲ ಏನು ಮಾಡಿದೆ ಗೆಳೆಯಾ?’ ಇರುವೆ ಕೇಳಿತು.
’ಸೂರ್ಯನನ್ನು ಹರಸುತ್ತಾ ಮನಸಾರೆ ಹಾಡಿದೆ, ಕುಣಿದೆ, ಖುಷಿಪಟ್ಟೆ…’
ಇರುವೆ ಮುಖ ಸಿಂಡರಿಸಿತು. ’ಹೋಗ್ಹೋಗು.. ಅದನ್ನೇ ಮುಂದುವರೆಸು.’ ಎಂದು ರಪ್ಪನೆ ಬಾಗಿಲು ಹಾಕಿತು.
ಈ ಕತೆಯ ನೀತಿ ಆ ವಯಸ್ಸಿನಲ್ಲಿ ನನ್ನ ಮನಸ್ಸಿಗೆ ಅಷ್ಟು ನಾಟಿರಲಿಲ್ಲ. ತುಂಬಾ ಸಮಯ ನನ್ನ ಸಹಾನುಭೂತಿ ಮಿಡತೆಯ ಪರವಾಗಿಯೇ ಇತ್ತು. ಅಲ್ಲೀವರೆಗೆ ನನ್ನ ಕಾಲಿಗೆ ಸಿಕ್ಕ ಇರುವೆಗಳನ್ನು ಹೊಸಕಿ ಹಾಕುತ್ತಿದ್ದೆ.
ಮೊನ್ನೆ, ಇಡೀ ಪ್ರಪಂಚವೇ ತನ್ನ ತಲೆ ಮೇಲೆ ಬಿದ್ದಿದೆ ಎಂಬಂತೆ ದುಗುಡದ ಮುಖವನ್ನು ಹೊತ್ತು ಕೊಂಡು ರೆಸ್ಟುರೆಂಟಿನಲ್ಲಿ ಕುಳಿತುಕೊಂಡಿದ್ದ ಜಾರ್ಜ್ ರಾಮ್ಸೆಯನ್ನು ನೋಡಿ ನನಗೆ ತಟ್ಟನೆ ’ಇರುವೆ ಮತ್ತು ಮಿಡತೆ’ ಕತೆಯ ನೆನಪಾಯ್ತು. ಅವನ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು. ಭುಜಗಳು ಇಳಿ ಬಿದ್ದಿದ್ದವು. ಅವನನ್ನು ನೋಡಿ ನನಗೆ ಪಾಪ ಎನಿಸಿತು. ಅವನ ದುಗುಡದ ಮೂಲ ಅವನ ಒಡಹುಟ್ಟಿದ ತಮ್ಮನೇ ಎಂದು ಗೊತ್ತಾಗಲು ನನಗೆ ಸಮಯ ಹಿಡಿಯಲಿಲ್ಲ.
ಅವನು ಕುಳಿತಲ್ಲಿಗೆ ಹೋಗಿ ನಾನು ಕೈ ಚಾಚಿದೆ.
’ಹೇಗಿದಿಯಾ ಗೆಳೆಯಾ?’ ಕೇಳಿದೆ.
’ಖುಷಿಯಲ್ಲಂತೂ ಖಂಡಿತಾ ಇಲ್ಲಾ!’ ಎಂದ.
’ಮತ್ತೆ ಟಾಮಾನಿಂದ ರಗಳೆ?’
’ಹ್ಞೂ..’ ನಿಡಿದಾಗಿ ಉಸಿರು ಬಿಡುತ್ತಾ ಹೇಳಿದ ಜಾರ್ಜ್.
’ನೀನು ಮತ್ತೆ ಮತ್ತೆ ಏಕೆ ಅವನ ಹರಕತ್ತುಗಳಿಗೆ ತಲೆ ಕೊಡುತ್ತಿಯಾ ಎಂದು ನನಗೆ ಅರ್ಥವಾಗುತ್ತಿಲ್ಲ? ನೀನು ಅವನಿಗಾಗಿ ಮಾಡಲು ಮತ್ತೇನು ಉಳಿದುಕೊಂಡಿದೆ? ಅವನು ಸಾಯಲಿ ಬಿಡು. ನೀನು ಕಣ್ಮುಚ್ಕೊಂಡು ಸುಮ್ಮನೆ ಇರು.’ ನಾನೆಂದೆ.
ಪ್ರತಿಯೊಂದು ಕುಟುಂಬದಲ್ಲೂ ಒಂದೊಂದು ಕಪ್ಪು ಕುರಿ ಇರುವುದೆಂಬ ನಾಣ್ಣುಡಿಯಂತೆ ಜಾರ್ಜನ ಕುಟುಂಬದಲ್ಲಿ ಅವನ ತಮ್ಮ ಟಾಮ್ ಕಪ್ಪು ಕುರಿಯಾಗಿದ್ದ. ಶುರುವಿನಲ್ಲಿ ಹೀಗಿರಲಿಲ್ಲ. ಅವನು ಚೆನ್ನಾಗಿಯೇ ಬದುಕನ್ನು ಕಟ್ಟಿಕೊಂಡಿದ್ದ. ವ್ಯವಹಾರ ಚೆನ್ನಾಗಿತ್ತು. ಸುಂದರವಾದ ಹೆಂಡತಿ. ಮುದ್ದಾದ ಇಬ್ಬರು ಮಕ್ಕಳು. ಸಮಾಜದಲ್ಲಿ ರಾಮ್ಸೆ ಕುಟುಂಬಕ್ಕೆ ಒಳ್ಳೆ ಹೆಸರಿತ್ತು. ಹಟಾತ್ತನೆ ಟಾಮನಿಗೆ ವ್ಯವಹಾರದಲ್ಲಿ ಆಸಕ್ತಿ ಕುಂದಿ ಹೋಯಿತು. ಮದುವೆ, ಹೆಂಡತಿ, ಮಕ್ಕಳು ತನಗಲ್ಲವೆಂದು ಅನಿಸತೊಡಗಿತು. ವಯುಕ್ತಿಕ ಮೋಜು, ಖುಷಿಗಳೇ ಬದುಕಿನ ಗುರಿ ಎಂದು ಭಾವಿಸಿದ. ಯಾರ ಬುದ್ದಿಮಾತುಗಳೂ ಅವನಿಗೆ ಪಥ್ಯವಾಗಲಿಲ್ಲ. ಅವನ ಬಳಿ ಸ್ವಲ್ಪ ಹಣವಿತ್ತು. ಎರಡು ವರ್ಷಗಳ ಕಾಲ ಯೂರೋಪಿನ ವಿವಿಧ ನಗರಗಳಲ್ಲಿ ಅವನು ಮೋಜು ಮಾಡಿದ. ಅವನ ಸಾಹಸಕತೆಗಳು ಆಗಿಂದಾಗ್ಗೆ ಅವನ ಕುಟುಂಬದ ಕಿವಿಗಳಿಗೆ ಮುಟ್ಟುತ್ತಿತ್ತು. ಅವುಗಳು ಅಷ್ಟೊಂದು ಹಿತವಾಗಿರಲಿಲ್ಲ. ಕೈಯಲ್ಲಿದ್ದ ಗಂಟು ಕರಗುತ್ತಲೇ ಟಾಮ್ ಏನು ಮಾಡಬಹುದೆಂದು ತಿಳಿದುಕೊಳ್ಳಲು ಅವನ ಕುಟುಂಬದವರು ಆಸಕ್ತರಾಗಿದ್ದರು. ಗಂಟು ಕರಗುತ್ತಿದ್ದಂತೆ ಟಾಮ್ ಸಾಲ ಪಡೆಯಲು ಶುರುವಿಟ್ಟುಕೊಂಡಿದ್ದಾನೆಂದು ತಿಳಿಯಲು ಸಮಯ ಹಿಡಿಯಲಿಲ್ಲ. ಟಾಮ್ ತುಂಬಾ ಆಕರ್ಷಿಕ ವೆಕ್ತಿತ್ವ ಉಳ್ಳವನಾಗಿದ್ದ. ಅವನು ಸಾಲ ಕೇಳಿದರೆ ಯಾರಿಗೂ ಇಲ್ಲವೆನ್ನಲಾಗುತ್ತಿರಲಿಲ್ಲ. ಟಾಮನಿಗೆ ಹೊಸ ಹೊಸ ಸ್ನೇಹಿತರನ್ನು ಮಾಡುವ ಕಲೆ ಕರಗತವಾಗಿತ್ತು. ಮಾತಿನಲ್ಲೇ ಅವರನ್ನು ಮರುಳು ಮಾಡಿ ದುಡ್ಡು ಪೀಕಿಸುವ ಕಲೆ ಅವನಿಗೆ ಚೆನ್ನಾಗಿ ಕರಗತವಾಗಿತ್ತು.
ಕೇವಲ ಬದುಕುಳಿಯುವುದಕ್ಕಗಿಯೇ ದುಡ್ಡು ಮಾಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಿದ್ದ ಟಾಮ್. ಬದುಕಿದರೆ ರಾಜನಂತೆ ಬದುಕಬೇಕು, ಮೆರೆಯಬೇಕು ಎನ್ನುತ್ತಿದ್ದ. ಸ್ನೇಹಿತರ ಬಳಿ ಹೆಸರು ಕೆಡಿಸಿಕೊಂಡಿದ್ದ ಟಾಮ್ ಈಗ ಅಣ್ಣ ಜಾರ್ಜನ ಮೇಲೆ ಅವಲಂಬಿತನಾಗಿದ್ದ! ಜಾರ್ಜ್‌ನಾದರೋ, ದೈವಭೀರು ಮನುಷ್ಯ. ಬೇರೆಯವರ ಮೇಲೆ ಉಪಯೋಗಿಸಿದ ಜಾದೂ, ಚಮತ್ಕಾರಗಳು ಜಾರ್ಜನ ಮೇಲೆ ಉಪಯೋಗಿಸುವ ಹಾಗಿರಲಿಲ್ಲ. ತಾನು ಮತ್ತೆ ಹೊಸದಾಗಿ ಮರ್ಯಾದೆಯ ಜೀವನ ಶುರು ಮಾಡುತ್ತೇನೆಂದು ಹೇಳಿ ಅವನಿಂದ ಸುಮಾರು ಹಣವನ್ನು ಪೀಕಿಸಿಕೊಂಡ. ಈ ದುಡ್ಡಿನಲ್ಲಿ ಟಾಮ್ ಒಂದು ಕಾರನ್ನು ಕೊಂಡ. ಮತ್ತೊಮ್ಮೆ ಅವನ ಹೊಸ ಸ್ನೇಹಿತೆಗೆ ಆಭರಣ! ತನ್ನ ತಮ್ಮ ಸುಧಾರಣೆಗೊಳ್ಳುವ ಹಂತ ಮೀರಿದ್ದಾನೆ ಎಂದು ಅರಿವಾಗುತ್ತಿದ್ದಂತೆ ಜಾರ್ಜ್ ವಿವಶನಾದ. ಆದರೂ ಅವನಿಂದ ಹಣ ಪೀಕಿಸಲು ಟಾಮ್ ಬೇರೆ ಬೇರೆ ವಿಧಾನಗಳನ್ನು ಕಂಡುಕೊಂಡ. ವೃತ್ತಿಯಲ್ಲಿ ವಕೀಲನಾದ ಜಾರ್ಜಿಗೆ ಸಮಾಜದಲ್ಲಿ ಹೆಸರಿತ್ತು. ಅವನು ಭೇಟಿ ಕೊಡುವ ರೆಸ್ಟೊರೆಂಟಿನಲ್ಲಿ ಮದ್ಯದ ಗ್ಲಾಸುಗಳನ್ನು ತುಂಬಿಸಿ ತಂದು ಕೊಡುವ ಕೆಲಸಕ್ಕೆ ಸೇರಿಕೊಂಡ ಟಾಮ್! ಅಷ್ಟೇ ಅಲ್ಲ, ಅವನ ಕ್ಲಬ್ಬಿನ ಹೊರಗೆ ಅತಿಥಿಗಳಿಗೆ ಟ್ಯಾಕ್ಸಿಗಳನ್ನು ಕರೆದು ತರುವ ಕೆಲಸವನ್ನೂ ಮಾಡತೊಡಗಿದ. ಯಾವುದೇ ಕೆಲಸ ಕೀಳಲ್ಲ ಎಂದು ಜಾರ್ಜಿಯ ಜೊತೆ ವಾದಕ್ಕಿಳಿದ ಮತ್ತು ನಿನಗೆ ಹಾಗೆನಿಸಿದರೆ ನನ್ನ ಸಾಲ ತೀರಿಸಲು ಹಣ ಸಹಾಯ ಮಾಡು ಈ ಕೆಲಸಗಳನ್ನು ಬಿಡುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಹಣ ಕೀಳುತ್ತಿದ್ದ.
ಒಮ್ಮೆ ಜೇಲಿಗೆ ಹೋಗಲಿದ್ದ ಟಾಮನನ್ನು ಜಾರ್ಜ್ ತನ್ನ ವಶೀಲಿಯಿಂದ ಪಾರು ಮಾಡಿದ್ದ. ಅವನ ಅಟ್ಟಹಾಸ ಮೇರೆ ಮೀರಿತ್ತು. ಇದುವರೆಗೆ ಜಾರ್ಜ್ ಕಾನೂನು ವಿರುದ್ಧವಾಗಿ ಯಾವುದೇ ಕೆಲಸಗಳನ್ನು ಮಾಡಿರಲಿಲ್ಲ. ಟಾಮನ ವಿಚಾರಣೆ ನಡೆಸಿದ್ದೇ ಆದರೆ ಅವನು ಜೈಲಿಗೆ ಹೋಗುವುದು ಖಾತ್ರಿಯಾಗಿತ್ತು. ಒಡಹುಟ್ಟಿದ ತಮ್ಮ ಜೈಲಿಗೆ ಹೋಗುವುದನ್ನು ಜಾರ್ಜ್ ಹೇಗೆ ಸಹಿಸಿಯಾನು? ಟಾಮ್ ಮೋಸಮಾಡಿದ ವ್ಯಕ್ತಿಯ ಹೆಸರು ಕ್ರೊನ್‌ಶಾ. ಟಾಮ್‌ನಂತ ದಗಾಕೋರನನ್ನು ಜೈಲಿಗಟ್ಟದೆ ಬಿಡುವುದಿಲ್ಲ ಎಂದು ಆವೇಶಭರಿತನಾಗಿ ಕೂಗಾಡುತ್ತಿದ್ದ. ಅವನ ಬಾಯಿ ಮುಚ್ಚಲು ಜಾರ್ಜ್ ತನ್ನ ಮಾನವನ್ನಷ್ಟೇ ಅಲ್ಲದೆ ಐನೂರು ಪೌಂಡುಗಳನ್ನೂ ಪೀಕಬೇಕಾಯ್ತು. ಜಾರ್ಜ್ ದಂಡ ತೆತ್ತ ನಂತರ ಕ್ರೊನ್‌ಶಾ ಮತ್ತು ಟಾಮ್ ಇಬ್ಬರೂ ಜತೆಗೂಡಿ ಜೂಜು ಅಡ್ಡೆ ಮಾಂಟೆಕಾರ್ಲೊಗೆ ಹೋಗಿದ್ದಾರೆಂದು ತಡವಾಗಿ ತಿಳಿದು ಬಂತು! ಜಾರ್ಜಿಗೆ ತೌಡು ತಿಂದಂತಾಯ್ತು. ಇದಾದ ಬಹಳ ದಿನಗಳವರೆಗೂ ಜಾರ್ಜ್ ತಮ್ಮನ ಮೇಲೆ ಹೊಗೆಯಾಡುತ್ತಲೇ ಇದ್ದ.
ಹೀಗೆ ಟಾಮ್ ಇಪ್ಪತ್ತು ವರ್ಷಗಳನ್ನು ಕಳೆದ. ರೇಸುಗಳಲ್ಲಿ, ವಿಲಾಸಿ ಹೋಟೆಲುಗಳಲ್ಲಿ, ಬೆಡಗಿಯರ ತೆಕ್ಕೆಯಲ್ಲಿ.. ಎಲ್ಲಿ ನೋಡಿದರಲ್ಲಿ ಟಾಮ್ ಕಾಣ ತೊಡಗಿದ. ಅವನಿಗೆ ನಲ್ವತ್ತಾರು ವರ್ಷಗಳಾಗಿದ್ದರೂ ಮುವ್ವತ್ತೈದರ ಯುವಕನಂತೆ ಕಾಣುತ್ತಿದ್ದ. ಬೆಲೆಬಾಳುವ ವಸ್ತ್ರಗಳನ್ನು ಧರಿಸುತ್ತಿದ್ದ. ಕಾಸಿಗೆ ಪ್ರಯೋಜನವಿಲ್ಲದಿದ್ದರೂ ಅವನ ಒಡನಾಟಕ್ಕೆ ಬಹಳಷ್ಟು ಜನ ಮುಗಿಬೀಳುತ್ತಿದ್ದರು. ಅವನ ವ್ಯಕ್ತಿತ್ವದ ಆಕರ್ಷಣೆ ಇನ್ನೂ ಮಾಸಿರಲಿಲ್ಲ. ನಗುನಗುತ್ತಾ ಯಾವಾಗಲೂ ಉತ್ಸಾಹದ ಚಿಲುಮೆಯಾಗಿರುತ್ತಿದ್ದ. ಅವನು ನನ್ನಿಂದಲೂ ಆಗಾಗ್ಗೆ ಹಣ ಪಡೆದುಕೊಂಡಿದ್ದನಾದರೂ ಅವನು ನನ್ನ ಋಣದಲ್ಲಿದ್ದಾನೆಂದು ನನಗೆಂದೂ ಅನ್ನಿಸಿರಲಿಲ್ಲ. ಟಾಮ್ ರಾಮ್ಸೆ ಎಲ್ಲರಿಗೂ ಪರಿಚಿತನಾಗಿದ್ದ ಹಾಗೆಯೇ ಟಾಮ್‌ನಿಗೆ ಕೂಡ ಎಲ್ಲರೂ ಪರಿಚಿತರೇ. ಜನ ಅವನನ್ನು ಒಪ್ಪುತ್ತಿರಲಿಲ್ಲವಾದರೂ ದ್ವೇಷಿಸುತ್ತಿರಲಿಲ್ಲ.
ಜಾರ್ಜ್ ವಯಸ್ಸಿನಲ್ಲಿ ಟಾಮ್‌ಗಿಂತ ಒಂದು ವರ್ಷ ಹಿರಿಯವನಾಗಿದ್ದರೂ, ಅರವತ್ತು ವರ್ಷದ ಮುದುಕನಂತೆ ಕಾಣುತ್ತಿದ್ದ. ತನ್ನ ಇಪ್ಪತೈದು ವರ್ಷಗಳ ವೃತ್ತಿ ಜೀವನದಲ್ಲಿ ಜಾರ್ಜ್ ವರ್ಷಕ್ಕೆ ಹದಿನೈದು ದಿನಗಳಿಗಿಂತಲೂ ಹೆಚ್ಚು ರಜಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ಒಂಭತ್ತುವರೆಗೆ ಕಛೇರಿ ಹೊಕ್ಕಿದರೆ ಸಂಜೆ ಆರು ಗಂಟೆಯ ಮೊದಲು ಹೊರಡುತ್ತಿರಲಿಲ್ಲ. ಕೆಲಸದಲ್ಲಿ ಪ್ರಾಮಾಣಿಕ. ನಡೆಯಲ್ಲಿ ಶಿಸ್ತಿನ ಮನುಷ್ಯ. ಅವನ ಸ್ವಭಾವಕ್ಕೆ ತಕ್ಕಂತೆ ಹೆಂಡತಿಯೂ ಸಿಕ್ಕಿದ್ದಳು. ಅವನೂ ಕೂಡ ಅವಳಲ್ಲಿ ಎಂದೂ ಅಪ್ರಮಾಣಿಕನಾಗಿ ನಡೆದುಕೊಂಡಿರಲಿಲ್ಲ. ಅವನ ನಾಲ್ಕು ಹೆಣ್ಮಕ್ಕಳೂ ಅವನನ್ನೂ ಬಹಳವಾಗಿ ಹಚ್ಚಿಕೊಂಡಿದ್ದರು. ಜಾರ್ಜ್ ತನ್ನ ದುಡಿಮೆಯ ಮೂರನೇ ಒಂದು ಭಾಗ ಕೂಡಿಡುತ್ತಿದ್ದ. ಐವತ್ತೈದನೇ ವಯಸ್ಸಿನಲ್ಲಿ ನಿವೃತ್ತಿಯಾಗಿ ತನ್ನ ಹಳ್ಳಿ ಮನೆಯಲ್ಲಿ ಹೂ ತೋಟವನ್ನು ನೋಡಿಕೊಳ್ಳುತ್ತಾ, ಗಾಲ್ಫ್ ಆಡುತ್ತಾ ಉಳಿದ ಜೀವನ ಕಳೆಯಬೇಕೆಂದು ಅವನು ಯೋಜನೆಗಳನ್ನು ಹಾಕಿಕೊಂಡಿದ್ದ. ಅವನು ಈವರೆಗೆ ನಡೆದು ಬಂದ ಹಾದಿಯಲ್ಲೊಮ್ಮೆ ಹೊರಳಿ ನೋಡಿದರೆ ಒಂದೂ ತಪ್ಪು ನಡೆ ಕಾಣಲು ಸಾಧ್ಯವಿರಲಿಲ್ಲ. ತನಗೆ ವಯಸ್ಸಾಗುತ್ತಿರುವುದು ಅವನಿಗೆ ಸಮಾಧಾನ ತಂದಿತ್ತು. ಏಕೆಂದರೆ ಅವನ ಜೊತೆ ಟಾಮ್‌ನಿಗೆ ಕೂಡ ವಯಸ್ಸಾಗುತ್ತಿತ್ತು. ವಯಸ್ಸಿಗೆ ತಲೆಬಾಗಿ ಅವನು ಕೊನೆಗೂ ಹುಚ್ಚಾಟಗಳಿಗೆ ತಿಲಾಂಜಲಿ ಹೇಳಬೇಕಿತ್ತು!
’ತಾರುಣ್ಯ ಎಷ್ಟು ವರ್ಷವಿರುತ್ತೆ? ಇನ್ನು ನಾಲ್ಕು ವರ್ಷಗಳಲ್ಲಿ ಟಾಮನಿಗೆ ಐವತ್ತು ತುಂಬುತ್ತದೆ. ಜೀವನ ಹೀಗೇ ಇರುವುದಿಲ್ಲ. ಎಲ್ಲಾ ಬದಲಾಗುತ್ತದೆ. ಐವತ್ತು ವರ್ಷಕ್ಕೆ ನನ್ನ ಖಾತೆಯಲ್ಲಿ ಏಳು ಸಾವಿರ ಪೌಂಡುಗಳಷ್ಟು ಹಣ ಜಮೆಯಾಗಿರುತ್ತದೆ. ಟಾಮನಲ್ಲಿ ಏನುಂಟು? ಕೊನೆಗೆ ನಿನಗೆ ಭಿಕ್ಷೆಯೇ ಗತಿ ಎಂದು ಇಪ್ಪತ್ತೈದು ವರ್ಷಗಳಿಂದ ನಾನು ಹೇಳುತ್ತಲೇ ಬಂದಿದ್ದೇನೆ. ಆಗಲಾದರೂ ಟಾಮನಿಗೆ ಬುದ್ಧಿ ಬಂದೀತೋ ನೋಡಬೇಕು.’ ಎರಡೂ ಕೈಗಳನ್ನು ಉಜ್ಜುತ್ತಾ ಜಾರ್ಜ್, ಟಾಮ್ ಭಿಕಾರಿಯಾಗುವುದನ್ನೇ ಎದುರು ನೋಡುತ್ತಿದ್ದೇನೆ ಎಂಬಂತೆ ಹೇಳಿದ.
… ಆದರೆ, ಈಗ ಜಾರ್ಜ್ ಹಲ್ಲು ಮಸೆಯುತ್ತಾ ಕೈ ಕೈ ಹಿಸುಕುತ್ತಾ ಕುಳಿತು ಕೊಂಡಿದ್ದಾನೆ. ನನಗೆ ಅವನ ಬಗ್ಗೆ ಅನುಕಂಪ ಮೂಡಿತು. ಟಾಮ್ ಬೇರ್‍ಯಾವುದೋ ಕಿತಾಪತಿ ಎಸಗಿರಬೇಕು. ಜಾರ್ಜ್ ಅಷ್ಟೊಂದು ಹತಾಶನಾಗಿದ್ದ.
’ಕೊನೆಗೂ ಏನಾಯ್ತು ಗೊತ್ತಾ?’ ಜಾರ್ಜ್ ಕೇಳಿದ.
ಟಾಮ್ ಪೋಲಿಸರಿಗೆ ಸಿಕ್ಕಿ ಬಿದ್ದಿರಬೇಕು ಎಂದು ನಾನು ಅಂದುಕೊಂಡೆ.
’ನಾನು ಇದುವರೆಗೆ ಹೇಗೆ ಬದುಕಿದೆ ಎಂದು ನಿನಗೇ ಗೊತ್ತು. ನಾನು ಯಾರಿಗೂ ನೋಯಿಸಿಲ್ಲ, ಲೂಟಿ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ಇಷ್ಟು ವರ್ಷ ಪ್ರಾಮಾಣಿಕತೆಯಿಂದ ದುಡಿದಿದ್ದೇನೆ. ನಿವೃತ್ತ ಜೀವನಕ್ಕೆಂದು ಸ್ವಲ್ಪ ಕೂಡಿಸಿಟ್ಟಿದ್ದೇನೆ..’ ಅವನು ಗದ್ಗದಿತನಾದ.
’ಖಂಡಿತಾ, ಖಂಡಿತಾ..’ ನಾನಂದೆ.
’… ನೀನು ಟಾಮನನ್ನೂ ನೋಡಿದ್ದೀಯಾ. ಇಷ್ಟು ವರ್ಷಗಳನ್ನು ಹಾಳುಗೆಡವಿದ. ಅನ್ಯಾಯ, ಮೋಸ, ಅನೀತಿ… ಅವನು ಮಾಡದ ಪಾಪಗಳೇ ಇಲ್ಲ. ನಾನು ಇಲ್ಲದಿದ್ದಲ್ಲಿ ಟಾಮ್ ಇನ್ನೂ ಜೈಲಿನಲ್ಲಿರುತ್ತಿದ್ದ.’
’ಸರಿಯಾಗೇ ಹೇಳಿದೆ.’
ಜಾರ್ಜ್ ರಾಮ್ಸೆ ಈಗ ಸ್ವಲ್ಪ ಕೆಂಪಗಾದ. ’ಕೆಲವು ವಾರಗಳ ಹಿಂದೆ ಟಾಮನ ನಿಶ್ಚಿತಾರ್ಥವಾಯ್ತು! ಹುಡುಗಿ ನಮ್ಮ ಅಮ್ಮನ ಪ್ರಾಯದವಳು! ಅವಳು ಇಂದು ಬೆಳಿಗ್ಗೆ ಸತ್ತಳಂತೆ! ಟಾಮ್ ಅವಳ ಮೇಲೆ ಎಂತಾ ಮೋಡಿ ಮಾಡಿದ್ದನೋ! ಅವಳ ಪೂರ್ತಾ ಆಸ್ತಿ, ಅಂದರೆ ಅರ್ಧ ಮಿಲಿಯನ್ ಪೌಂಡು ನಗದು, ಒಂದು ವಿಲಾಸಿ ಜಹಜು, ಲಂಡನ್ ಮತ್ತು ಹಳ್ಳಿಯಲ್ಲಿ ಒಂದೊಂದು ಬಂಗಲೆ ಅವಳು ಟಾಮನ ಹೆಸರಿಗೆ ಬರೆದಿಟ್ಟಿದ್ದಾಳಂತೆ!’
ಅವನ ದನಿಯಲ್ಲಿ ದುಃಖ, ಆಕ್ರೋಶ ಎರಡೂ ತುಂಬಿತ್ತು. ಮೇಜನ್ನು ಗುದ್ದುತ್ತಾ, ದೊಡ್ಡ ದನಿಯಲ್ಲಿ, ’ಇದು ಘೋರ ಅನ್ಯಾಯ.. ಘನಘೋರ ಅನ್ಯಾಯ!!’ ಎಂದು ಚೀರಿದ.
ನನಗೆ ತಡೆದುಕೊಳ್ಳಲಾಗಲಿಲ್ಲ. ಕುರ್ಚಿಯನ್ನು ಎಳೆದುಕೊಂಡು ಕುಳಿತು ಕೊಳ್ಳುತ್ತಾ ಹೊಟ್ಟೆ ಹುಣ್ಣಾಗುವಂತೆ ಜೋರಾಗಿ ನಗೆಯಾಡಿದೆ. ನನ್ನ ಪ್ರತಿಕ್ರಿಯೆ ಜಾರ್ಜಿಗೆ ಹಿಡಿಸಲಿಲ್ಲ. ಈ ಕಾರಣಕ್ಕಾಗಿ ಅವನೆಂದೂ ನನ್ನನ್ನು ಕ್ಷಮಿಸುವುದಿಲ್ಲವೆಂದು ತೋರುತ್ತದೆ.
ಇದಾದ ನಂತರ ನಾನು ಹಲವು ಭಾರಿ ಟಾಮನನ್ನು ಭೇಟಿಯಾಗಿದ್ದೇನೆ. ಅವನ ಲಂಡನ್ ಬಂಗಲೆಯಲ್ಲಿ ಹಲವಾರು ಭಾರಿ ಉಳಿದುಕೊಂಡಿದ್ದೇನೆ. ವಿಶೇಷ ಸಂಗತಿ ಏನೆಂದರೆ, ಇದಾದ ಬಳಿಕವೂ ಟಾಮ್ ಹಲವು ಭಾರಿ ನನ್ನಿಂದ ಹಣವನ್ನು ಪಡೆದುಕೊಂಡಿದ್ದಾನೆ! ಭಾರಿ ಮೊತ್ತವೇನಲ್ಲ ಬಿಡಿ. ಹಳೆ ಚಾಳಿ ಬಿಡುವುದು ಅಷ್ಟು ಸುಲಭವಲ್ಲವೆಂದು ಕಾಣುತ್ತದೆ!
****
ಕತೆ ಅದ್ಭುತವಾಗಿದೆ!