ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರಪಂಚ ರಹಸ್ಯಗಳ, ವಿಸ್ಮಯಗಳ ಆಗರ! ಎಲ್ಲಾ ಜೀವಿಗಳಂತೆ ಮಾನವ ಭೂಮಿಯ ಮೇಲೆ ಹುಟ್ಟಿದ್ದಾನೆ. ಎಲ್ಲಾ ಜೀವಿಗಳು ಬದುಕಿನಲ್ಲಿ ಲೀನವಾಗಿ ಬದುಕುತ್ತಿವೆ. ಅವು ಬದುಕಿನ ಹೊರತು ಬೇರೇನೂ ಯೋಚಿಸವು. ಇಂದಿನ ಆಹಾರದ ಹೊರತು ನಾಳಿನ ಆಹಾರದ ಬಗ್ಗೆ ಚಿಂತಿಸವು. ಮಾನವ ಮಾತ್ರ ಈ ಎಲ್ಲಾ ಜೀವಿಗಳು, ಮಾನವರು ಯಾಕೆ ಹುಟ್ಟಬೇಕು? ಯಾಕೆ ಬದುಕಬೇಕು? ಬದುಕಿನ ಉದ್ದೇಶವೇನು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಹುಡುಕುತ್ತಿದ್ದಾನೆ! ನಾಳಿನ ಆಹಾರದ ಬಗ್ಗೆ, ಸುಂದರವಾದ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾನೆ! ಎಲ್ಲರೂ ಹುಟ್ಟಿದಂತೆ ಹುಟ್ಟುವುದು ಹುಟ್ಟಿಸುವವರನ್ನು ಹುಟ್ಟಿಸುವುದು, ಬದುಕುವವರನ್ನು ಹುಟ್ಟಿಸುವುದು, ಬದುಕಲು ಬೇಕಾದುದ ಪಡೆಯುವುದು, ತನ್ನಲ್ಲಿ ಇಲ್ಲದುದ ಪಡೆಯಲು ಪ್ರಯತ್ನಿಸುವುದು ಪಡೆದುದು ಖಾಲಿ ಮಾಡುವುದು ಖಾಲಿಯಾಯಿತಲ್ಲಾ ಎಂದು ಮತ್ತೆ ಅದ ಪಡೆಯಲು ಬೇರೆ ಬೇರೆ ರೀತಿ ಪ್ರಯತ್ನಿಸುವುದು, ಪಡೆಯಲು ಕಷ್ಟಪಡುವುದು, ನೋವನನುಭವಿಸುವುದು, ಅದ ಪಡೆಯುತ್ತಿದ್ದಂತೆ ಆನಂದ ಪಡುವುದು, ಅದರಲ್ಲಿ ಕ್ರಮೇಣ ಆನಂದ ಕಡಿಮೆಯಾಗಿ ತನ್ನಲ್ಲಿ ಇರದೇ ಇರುವ‌ ಇನ್ನೊಂದ ಪಡೆಯಲು ಪ್ರಯತ್ನಿಸುವುದು ಹೀಗೇ ಪ್ರಯತ್ನಿಸುತ ಒಂದಲ್ಲ ಒಂದುದಿನ ಇಲ್ಲವಾಗುವುದು! ಹೀಗೆ ಹುಟ್ಟಿದ ಜೀವಿಗಳೆಲ್ಲಾ ಇವೇ ಕ್ರೀಯೆಯನ್ನು ಮಾಡುತ್ತವೆ. ಹೀಗೆ ಮಾಡಿದ ಕ್ರೀಯೆಗಳನೇ ಮತ್ತೆ ಮತ್ತೆ ಮಾಡಿ ಇಲ್ಲವಾಗಲು ಜೀವಿಗಳು ಹುಟ್ಟಬೇಕೇ? ಯಾವ ಉದ್ದೇಶದಿಂದ ಈ ಜಗತ್ತು, ಜೀವಿಗಳ ಕುಲ ಸೃಷ್ಟಿಯಾಗಿದೆ? ಜೇವಿಗಳು ಏಕೆ ಹುಟ್ಟಬೇಕು? ರೋಗಗಳು, ತೊಂದರೆಗಳು ಅವನನ್ನು ಏಕೆ ಕಾಡಬೇಕು? ಮುಂತಾದ ಪ್ರಶ್ನೆಗಳು ಮಾನವನನ್ನು ಕಾಡಲಾರಂಭಿಸಿದವು. ಅವುಗಳಿಗೆ ಉತ್ತರ ಹುಡುಕಲು ಮಾನವ ಮುಂದಾದ. ಪ್ರಪಂಚದಲ್ಲಿ ಜೀವಿಸುತ್ತಿರುವ ಮಾನವರಲ್ಲಿ ಎರಡು ವಿಧ. ತಮ್ಮಲ್ಲಿ ಇರದಿರುವುದನ್ನು ಪಡೆಯಲು ಪ್ರಯತ್ನಿಸುವವರು ಒಂದು ವಿಧವಾದರೆ, ಮಾನವ ಸಮೂಹಕ್ಕೆ ಬೇಕಾಗಿರುವುದ ಹುಡುಕಿ ತಂದು ಕೊಟ್ಟು, ಅವರನ್ನು ತೃಪ್ತಿಪಡಿಸುತ್ತಾ, ಅವರ ಆನಂದದಲ್ಲೇ ತೃಪ್ತಿ ಕಂಡು ನೆಮ್ಮದಿ ಪಡೆಯುವವರು ಇನ್ನೊಂದು ವಿಧ. ಮೊದಲನೆಯವರಿಗಿಂತ ಎರಡನೆಯವರದು ವಿಶಾಲ ಮನೋಭಾವ. ಆದರೂ ಇಬ್ಬರದೂ ಕೊರತೆಯನ್ನು ತುಂಬುವ ಕಾಯಕ.

ಮನೆಯಿಲ್ಲದವರು ಮನೆಯ ಕಟ್ಟಲು, ಮಕ್ಕಳಿಲ್ಲದವರು ಮಕ್ಕಳ ಪಡೆಯಲು, ಮಕ್ಕಳಿದ್ದವರು ಅವರಿಗೆ ವಿದ್ಯಾಭ್ಯಾಸ ಮಾಡಿಸಲು, ಅವರಿಗೆ ಒಳ್ಳೆ ಉದ್ಯೋಗ ಕೊಡಿಸಲು, ಅವರಿಗೆ ಮದುವೆ ಮಾಡಲು, ವಸ್ತು, ಒಡವೆ, ಆಸ್ತಿ ಮಾಡಲು ಪ್ರಯತ್ನಿಸುತ್ತನೇ ಇರುತ್ತಾರೆ! ತಮ್ಮ ಹತ್ತಿರ ಏನೋ ಇರುವುದಿಲ್ಲ. ತಮಗೆ ಅದು ಬೇಕಾಗಿರುತ್ತದೆ. ಅದಕ್ಕಾಗಿ ಜಗತ್ತು ಸದಾ ಪ್ರಯತ್ನಿಸುತ್ತನೇ ಇರುವುದನ್ನು ಕಾಣುತ್ತೇವೆ. ಅದು ದೊರೆಯುತ್ತಿದ್ದಂತೆ ಅದನ್ನು ಪಡೆದೆನಲ್ಲಾ ಎಂದು ಸಂತೋಷಿತರಾಗುವರು. ಸ್ವಲ್ಪ ದಿನ ಅದನ್ನು ಅನುಭವಿಸಿ ಅನುಭವಿಸಿ ಅದರಲ್ಲಿ ಮೊದಲ ಖುಷಿ ಕಾಣದಾಗುವರು! ಕೊನೆ ಕೊನೆಗೆ ಪಡೆದುದರಲ್ಲಿ ಸಂತೋಷ ಇಲ್ಲವಾಗುವುದು! ಕೆಲವು ದಿನಗಳ ನಂತರ ತನ್ನಲ್ಲಿ ಮತ್ತೇನೋ ಇಲ್ಲವೆನಿಸುತ್ತದೆ. ಇರುವುದು ಕಡಿಮೆಯಾಯಿತು ಅನಿಸುತ್ತದೆ. ಕೊರತೆಯಾಗಿದೆ ಅನಿಸುತ್ತದೆ. ಮತ್ತೇನೋ ಬೇಕೆನಿಸುತ್ತದೆ ಆ ಕೊರತೆ ನೀಗಿಸಲು ಪ್ರಯತ್ನಿಸುವರು. ಅದು ನೀಗುತ್ತಿದ್ದಂತೆ ಮತ್ತನೇಕ ಕೊರತೆಗಳು ಕಾಡಲಾರಂಭಿಸುವುವು. ಹೀಗೆ ಜೀವ ಇರುವತನಕ ಒಂದಲ್ಲ ಒಂದು ಕೊರತೆ ಕಾಡುತ್ತನೇ ಇರುತ್ತದೆ. ಅದನ್ನು ತುಂಬಲು ಸದಾ ಪ್ರಯತ್ನಿಸುತ್ತಾನೆ. ಕೊರತೆ ತುಂಬುವುದೇ ಬದುಕು! ಒಂದೊಂದು ಕೊರತೆಯ ನೀಗಿಸುವಲ್ಲಿ ಒಂದೊಂದು ರೀತಿಯ ಹೋರಾಟ ನಡೆಯಿಸುತ್ತಾನೆ! ಆ ಹೋರಟ ಬದುಕನ್ನು ಜೀವಂತಿಕೆಯಿಂದ ಇಡುತ್ತದೆ! ಆಗ ಬದುಕಿನಲ್ಲಿ ಏಕತಾನತೆ ಹೊರಟು ಹೋಗಿ ಬದುಕು ಭಿನ್ನ ಅನಿಸುತ್ತದೆ. ಇರದುದ ಪಡೆಯಲು ವಿವಿಧ ರೀತಿಯ ಹೋರಾಟ ನಡೆಯಿಸುವುದೇ ಬದುಕಾಗುತ್ತದೆ! ಅದು ವೈವಿಧ್ಯಮಯವಾಗುವುದರಿಂದ ಬದುಕು ನೀರಸವೆನಿಸದು! ಏನನ್ನಾಗಲಿ ಮಾನವ ಇರದುದ ಪಡೆದಾಕ್ಷಣ ಅಮೂಲ್ಯವೆನಿಸಿದ ಅದರ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತಾವುದೋ ಇರದುದ ಪಡೆಯಲು ಪ್ರಯತ್ನಿಸುತ್ತಿರುವಾಗ ಅದು ಬಹಳ ಬೆಲೆ ಬಾಳುತ್ತದೆ ಎಂದು ಅಂದುಕೊಳ್ಳುತ್ತಾನೆ. ಅದು ಲಭಿಸುತ್ತಿದ್ದಂತೆ ಅದು ತುಂಬಾ ಆನಂದ ಕೊಎಲು ಆರಂಭಿಸುತ್ತದೆ ಅದನ್ನು ಬಳಸುತ್ತಾ ಬಳಸುತ್ತಾ ಅದು ಕೊಡುವ ಆನಂದ ಕಡಿಮೆಯಾಗುತ್ತಿದ್ದಂತೆ ಅದರ ಬೆಲೆ ಕಡಿಮೆಯಾಗುತ್ತದೆ! ಹೀಗೆ ನಿರಂತರ ಇರದುದ ಪಡೆಯುವಲ್ಲಿ ನಿರತನಾಗುವನು! ಸದು ಕ್ರಿಯಾಶೀಲ ಬದುಕೆನಿಸುವುದು. ಇರದುದ ಪಡೆಯಲು ಮಾನವ ನಿತ್ಯ ಪ್ರಯತ್ನಿಸುತ್ತನೇ ಇರುತ್ತಾನೆ! ಹಾಗೆ ಇರುವಂತೆ ಬದುಕು ಮಾಡುತ್ತದೆ! ಹೀಗೆ ಇರದುದ ಪಡೆಯಲು ಪ್ರಯತ್ನಿಸುವುದೇ ಬದುಕು ಅಥವಾ ಕೊರತೆ ನೀಗಿಸಲು ಪ್ರಯತ್ನಿಸುವುದೇ ಬದುಕೆನಿಸುತ್ತದೆ.

ಮಗು ಇಷ್ಟಪಟ್ಟುದ ಕೊಡಿಸಿ ಕೆಲವುದಿನಗಳ ನಂತರ ಅದು ತನ್ನ ಪಕ್ಕದಲ್ಲೇ ಇದ್ದರೂ ಅದನ್ನು ಮುಟ್ಟುವಗೋಜಿಗೆ ಹೋಗದೆ, ಕಣ್ಣೆತ್ತಿಯೂ ನೋಡದೆ ಅದರಲ್ಲಿ ಆಡುವ ಸುಖ ಕಳೆದುಕೊಳ್ಳುವುದು. ಮಾರುಕಟ್ಟೆಯನ್ನು ಆಗತಾನೆ ಪ್ರವೇಷಿಸಿದ ಮತ್ತೊಂದು ಆಟಿಗೆಯ ಬಯಸುವುದು ಸಾಮಾನ್ಯ! ಅದು ಹಳತಾಗುತ್ತಿದ್ದಂತೆ ಹೊಸದು ಕೊಡಿಸುವಂತೆ ಕಾಡುತ್ತವೆ ಕೊಡಿಸುತ್ತೇವೆ! ಮಗು ಇದ್ದಾಗ ಆರಂಭವಾದ ಈ ಗುಣ ಕೊನೆಯವರೆಗೂ ಇರುತ್ತದೆ.

ಬಡವರಿಗೆ ಬೇಕಾದಷ್ಟು ಬಡತನವಿರುತ್ತದೆ. ಅವರು ನಿರಂತರ ಸಿರಿತನ ಅರಸುತ್ತಿರುತ್ತಾರೆ. ಸಿರಿತನಕ್ಕಾಗಿ ನಿರಂತರ ಶ್ರಮಿಸುತ್ತಾರೆ. ಸಿರಿತನ ಬರಲು ಜವಾಬ್ದಾರಿ ಹೆಚ್ಚುತ್ತದೆ. ನೆಮ್ಮದಿ ಕೆಡುತ್ತದೆ. ವಸ್ತು, ಒಡವೆ, ಆಸ್ತಿಗಾಗಿ ದಾಯಾದಿಗಳ ಕಲಹ ನೆಮ್ಮದಿ ಕೆಡಿಸುತ್ತದೆ. ಜತೆಗೆ ಆ ವಸ್ತು, ಒಡವೆಗಳ ರಕ್ಷಣೆ, ಕಳ್ಳಕಾಕರ ಭಯದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಾರೆ! ಈ ಸಿರಿತನಕ್ಕಿಂತ ಬಡತನದಲ್ಲಿ ನೆಮ್ಮದಿಯಿತ್ತೆಂದು ನೆಮ್ಮದಿಗಾಗಿ ತಹತಹಿಸುತ್ತಾರೆ. ಇಷ್ಟೆಲ್ಲ ಒಡವೆ, ಆಸ್ತಿ ಇರಲು ನೆಮ್ಮದಿ ಹೇಗೆ ಬರಲು ಸಾಧ್ಯ? ಈ ಆಸ್ತಿಯೇ ನೆಮ್ಮದಿ ನಾಶಕ್ಕೆ ಮೂಲ ಎಂದು ಕೆಲವರು ಭಾವಿಸುತ್ತಾರೆ! ಎಲ್ಲಾ ದಾನ ಮಾಡಿ ಕಾಡಿಗೆ ಹೋಗಿ ನೆಮ್ಮದಿ ಅರಸಿ ತಪಸ್ಸಿಗೆ ಕೂಡುತ್ತಾರೆ! ಎಲ್ಲಾ ದಾನ ಮಾಡಿದ ಮೇಲೆ ಜವಾಬ್ದಾರಿ ಕಳೆದು ಹೋಗುತ್ತದೆ, ಮೈ ಮನಸು ಹಗುರವಾಗುತ್ತದೆ ಮನಸು ಶಾಂತಿಯತ್ತ ವಾಲುತ್ತದೆ. ಕಳೆದುಕೊಳ್ಳಲು ಏನೂ ಇಲ್ಲದಿರುವುದರಿಂದ ಉಳಿಸಿಕೊಳ್ಳುವ ಜವಾಬ್ದಾರಿ ಇರದುದರಿಂದ ಮನಸ್ಸು ಹಗುರವಾಗುತ್ತದೆ. ಭಗವಂತನಲ್ಲಿ ಮನ ಏಕಾಗ್ರವಾಗುತ್ತದೆ. ಹೀಗೆ ತಮ್ಮಲ್ಲಿ ಇರದುದನ್ನು ಪ್ರತಿಯೊಬ್ಬರೂ ಹುಡುಕಿ ಪಡೆಯುವುದರಲ್ಲಿ ನಿರತರಾಗುತ್ತಾರೆ. ಭಾರತವು ಋಷಿ ಮುನಿಗಳ ಪರಂಪರೆ ಹೊಂದಿದ ದೇಶ. ಅವರೆಲ್ಲಾ ತಮಗೆ ಕಾಣಿಸದ ಭಗವಂತನ ಸಾಕ್ಷಾತ್ಕಾರಕ್ಕಾಗಿ ತಪಸ್ಸಿನಲ್ಲಿ ನಿರತರಾಗಿರುವುದು ಕಾಣುತ್ತೇವೆ. ಶಿಕ್ಷಕರು ಹೇಗೆ ಉತ್ತಮವಾಗಿ ಕಲಿಸಬೇಕೆಂದು ಹೊಸ ಹೊಸ ವಿಧಾನ, ತಂತ್ರಗಳ ಹುಡುಕುತ್ತಿದ್ದರೋ ಹಾಗೇ ವೈದ್ಯರು ಈ ರೋಗಿಯ ರೋಗ ಹೇಗೆ ಬೇಗ ವಾಸಿಮಾಡುವುದು ಅಂತ ಹೊಸ ಚಿಕಿತ್ಸೆಗಾಗಿ ತಹತಹಿಸುತ್ತಿದ್ದಾರೆ. ಇಂಜಿನಿಯರುಗಳು ಪರಿಸರ ಮಾಲಿನ್ಯರಹಿತ ಕಟ್ಟಡ ಕಟ್ಟುವುದು, ಭೂಕಂಪ ನಿರೋಧದ ಕಟ್ಟಡ ಕಟ್ಟುವುದು ಹೇಗೆಂದು ಪ್ರತಿಯೊಬ್ಬರೂ ಇರದುದ ಹುಡುಕಲು ಪ್ರಯತ್ನಿಸುತ್ತನೇ ಇರುತ್ತಾರೆ! ಹಾಗೇ ವಿಜ್ಞಾನಿಗಳು ನಿತ್ಯ ಇರದೆ ಇರುವುದರ, ಹೊಸದರ ಹುಡುಕುವುದರಲ್ಲಿ ನಿರತರಾಗಿರುತ್ತಾರೆ. ಅದನ್ನೇ ಸಂಶೋದನೆ ಅನ್ನುತ್ತಾರೆ. ಮಾನವನ ಕ್ಲಿಷ್ಟಕರವೆನಿಸುವ ಕಾರ್ಯವನ್ನು ಸುಲಭೀಕರಿಸಲು ಸಂಶೋಧನೆ ಮಾಡುತ್ತಾರೆ. ಕುಕ್ಕರ್, ವಾಷಿಂಗ್ ಮೆಷಿನ್, ವಿಮಾನ, ಮಿಕ್ಸಿ, ಜೆಸಿಬಿ ಮುಂತಾದವು ಪ್ರತಿಫಲಗಳಾಗಿವೆ! ಅದು ದೊರೆಯುವವರೆಗೂ ಅದನ್ನು ಪಡೆಯುವಲ್ಲಿ ನಿರತರಾಗಿರುತ್ತಾರೆ. ಇರುವುದು ಎಷ್ಟು ಸಾಧ್ಯವೋ ಅಷ್ಟು ಆನಂದ ಕೊಟ್ಟುಬಿಟ್ಟಿರುತ್ತದೆ. ಅನಂತರ ಅದು ಸುಖ ಕೊಡದಾಗುತ್ತದೆ. ಆಗ ಬದುಕು ನೀರಸವಾಗುತ್ತದೆ. ಅದಕ್ಕೆ ಇರದೆ ಇರುವುದರ ಪಡೆಯುವಲ್ಲಿ ನಿರತರಾಗಿರುತ್ತಾರೆ. ಹೀಗೆ ನಿರತರಾಗುವಲ್ಲಿ ವ್ಯಕ್ತಿ ತನ್ನನ್ನು ತಾನು ಆಸಕ್ತಿಯಿಂದ ತೊಡಗಿಸಿಕೊಳ್ಲುವುದರಿಂದ ಬದುಕು ನಿತ್ಯ ನೂತನವಾಗಿ ಚೈತನ್ಯದಾಯಕವಾಗುತ್ತದೆ! ಮಗು ಹೊಸ ಆಟಿಗೆಯ ತಂದಾಕ್ಷಣ ಹಳೆಯದನ್ನು ಮುಟ್ಟದೆ ಹೊಸದರಲ್ಲೆ ಆಡುತ್ತಿರುತ್ತದೆ. ಅದು ಹಳತಾಗುತ್ತಿದ್ದಂತೆ ಅದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ. ಮತ್ತೊಂದು ಹೊಸದರ ಕಡೆ ತುಡಿಯುತ್ತದೆ. ಹೀಗೆ ಇರದುದರೆಡೆಗೆ ತುಡಿವುದೆ ಜೀವನ ಅಲ್ಲವೆ?

ಬುದ್ದ ಯುವರಾಜನಾಗಿದ್ದ. ಅವನಿಗೆ ಅರಮನೆಯಲ್ಲಿ ಏನೂ ಕೊರತೆ ಇರಲಿಲ್ಲ! ಅರಮನೆಯಲ್ಲಿ ಕೊರತೆ ಇರಲಿಕ್ಕೆ ಹೇಗೆ ಸಾಧ್ಯ? ಆದರೂ ತನಗೆ ಬೇಕಾದುದು ಈ ಅರಮನೆಯಲ್ಲಿ ಇಲ್ಲ ಎಂದು ತೊಳಲಾಡುತ್ತಿದ್ದ! ಹುಡುಕುತ್ತಾ ಕಾಡಿಗೆ ಹೋದ! ಅನೇಕರು ಹೀಗೇ ತಮಗೆ ಬೇಕಾದುದ ಕಾಡಿನಲ್ಲಿ ಸಂಪಾದಿಸಿ, ಸಂಪಾದಿಸಿದುದ ಸವಿದು ಭೂಮಿಯನ್ನು ತೊರೆದಿದ್ದಾರೆ. ಸಂಪಾದಿಸಿದುದ ಸ್ವಂತಕ್ಕೆ ಉಪಯೋಗಿಸಿ ಮುಕ್ತಿ ಹೊಂದುತ್ತಾರೆ. ಆದರೆ ಬುದ್ದ ಕಾಡಿನಲ್ಲಿ ಸಂಪಾದಿಸಿದುದನ್ನು ನಾಡಿನ ಮಾನವ ಜನಾಂಗದ ನೋವನ್ನು ನೀಗಿಸಲು ಉಪಯೋಗಿಸಿ ಪ್ರಸಿದ್ದನೂ ಮಾನವ ಕುಲದ ನೋವು ನಿವಾರಕನೂ ಆದ!

ಅರಮನೆ, ರೂಪವಂತ ಹೆಂಡತಿ, ಮುದ್ದಾದ ಮಗು, ಬಯಸಿದುದ ಅತಿ ಶೀಘ್ರವಾಗಿ ತಂದುಕೊಡುವ ತಂದೆ. ಇಷ್ಟೆಲ್ಲ ಇದ್ದರೂ ಅಯೋಧ್ಯಾ ನಗರವನ್ನು ಕಣ್ಣಾರೆ ನೋಡಲಾಗದ ಸ್ಥಿತಿ. ಅದೂ ಒಂದು ಕೊರತೆ. ನೋಡಲು ಸ್ವತಂತ್ರವಿಲ್ಲದ ಪರಿಸ್ಥಿತಿ. ನೋಡಲಾಗದ್ದರ ನೋಡುವ ಬಯಕೆ, ಬಹಳ ಪ್ರಯತ್ನಿಸಿದ. ತಂದೆಯ ಇಚ್ಛಾನುಸಾರ ಮದುವೆಯಾಗಿ ಒಂದು ಮಗುವಾದ ಮೇಲೆ ನಗರ ನೋಡುವ ಅವಕಾಶ ಪಡೆದು ನಗರ ದರ್ಶನಕ್ಕೆ ಹೊರಟ. ರೋಗಿ, ಮುದುಕ, ಹೆಣ, ಸನ್ಯಾಸಿ ಒಂದೊಂದು ದಿನ ಒಂದೊಂದರ ದರ್ಶನ ಪಡೆದು, ಆ ಸ್ಥಿತಿಗಳಿಗೆ ಕಾರಣ ತಿಳಿದು ಮನುಷ್ಯನ ಅಸಹಾಯಕತೆಗೆ ಮರುಗಿ, ಆ ನೋವುಗಳಿಂದ ಮುಕ್ತರಾಗಲು ಬೇಕಾದ ಉತ್ತರ ಹುಡುಕಿ ಅಂದರೆ ಇರುವುದೆಲ್ಲವ ಬಿಟ್ಟು ಇರದುದ ಹುಡುಕಿ ಕಾಡಿಗೆ ಹೊರಟ! ಬಹಳ ವರ್ಷ ನಿದ್ದೆ ಮುದ್ದೆ ತೊರೆದು ಜಪ ತಪ ಮಾಡಿ ಉತ್ತರಕ್ಕಾಗಿ ಪ್ರಯತ್ನಿಸಿದ, ಅವಶ್ಯಕವಾದುದ ಪಡೆದು ನಾಡಿಗೆ ಮರಳಿದ. ತನ್ನನ್ನು ಹುಡುಕಿ ಬರುವ ಜನರ ಸಮಸ್ಯೆಗಳಿಗೆ ಉತ್ತರ ಕೊಡತೊಡಗಿದ. ತನ್ನಲ್ಲಿ ಇರದುದ, ಜನರಿಗೆ ಬೇಕಾದುದ ಹುಡುಕುವುದನೇ ಜೀವನವಾಗಿಸಿಕೊಂಡ! ನೊಂದ ಜನರ ನೋವನ್ನು ದೂರ ಮಾಡುವುದನ್ನೇ ಬದುಕು ಮಾಡಿಕೊಂಡ! ಒಬ್ಬೊಬ್ಬರ ನೋವುಗಳು ಒಂದೊಂದು ಥರ! ಬೇರೆ ಬೇರೆ ಥರ ಬಗೆಹರಿಸಲು ಪ್ರಯತ್ನಿಸಿದ. ಹೊಸ ಹೊಸ ಉತ್ತರಗಳ ಹುಡುಕಿ ಕೊಟ್ಟು ಅವರ ದು:ಖ ದೂರ ಮಾಡುವುದರಲ್ಲೇ ಪರಮಾನಂದ ಕಾಣತೊಡಗಿದ! ಬೇರೆಯವರ ದುಃಖ ದೂರವಾಗಿಸಿದಾಗಿನ ಆನಂದ ಅಪಾರವೂ ಅಮೂಲ್ಯವೂ ಆದುದು! ಒಬ್ಬ ರಾಜನಾಗಿ ಸಾಧಿಸಲು ಸಾಧ್ಯವಾಗದ ಸಾಧನೆ ಮಾಡಿ, ಅಪಾರ ಕೀರ್ತಿ, ಆನಂದ, ನೆಮ್ಮದಿ ಗಳಿಸಿ ಪ್ರಖ್ಯಾತನಾದ! ಆದರೂ ಹೊಸ ಹೊಸ ಸಮಸ್ಯೆಗಳು ಎದುರಾದಾಗ ಅದಕ್ಕೆ ಪರಿಹಾರ ಹುಡುಕುವ ಚಿಂತನೆಯಲೇ ಕಾಲಕಳೆದ! ತನ್ನಲ್ಲಿ ಇರದುದ ಹುಡುಕುವುದೇ ಜೀವನವಲ್ಲವೆ? ಕೊರತೆಗಳ ತುಂಬಿಕೊಳ್ಳುವುದೇ ಬದುಕೆನಿಸುತ್ತದಲ್ಲವೆ?

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
venkatesh
5 years ago

Nice article. I look forward some articles on Halrameshwar, and Talyada Anjaneya temle. etc.

-venkatsh

1
0
Would love your thoughts, please comment.x
()
x