ದೂರದೂರಿನ ಚಿಂತೆ….
ಏನಂತರಾಳಗಳು ಏನಗ್ನಿಜ್ವಾಲೆಗಳು
ದಾಹಗಳ ಗಾಳಗಳ ನರ್ತನೋನ್ಮಾದಗಳು
ಅರ್ಧಸತ್ಯದ ಮೆಲಕು ವಿಶ್ರಾಂತಿ ಬೇಡದೆಯೆ
ಪೂರ್ಣಸತ್ಯದ ತಾಣ ಹುಡುಕುತಿಹುದು||೧||
ದೇಹಪಂಜರ ತೊರೆವ ಪ್ರಾಣಪಕ್ಷಿಯ ತವಕ
ಹುಟ್ಟುಸಾವಿನಗುಟ್ಟ ಹೊರಗೆಳೆವಯತ್ನ
ಒರೆಯಿಂದ ಹೊರಗೆಳೆದ ಕತ್ತಿಯಲಗಿನ ತೆರದಿ
ಚರ್ಮಚೀಲದ ಹಂಗು ತೊರೆದು ಹೊರಟಂತೆ||೨||
ಬದುಕು ಭಾವನೆಯೆಲ್ಲ ಕರಗಿ ಸೋರಿದೆ ಹೃದಯ
ಕಣ್ಪನಿಯು ಕಾರಣವ ಹುಡುಕ ಹೊರಟಿದೆ ಚೆಲುವ
ಸುಪ್ತ ಮನಸಿನಭಾವ ಮುಪ್ಪಾಗಿ ಹಿಂಜುತಿದೆ
ಉಪ್ಪೆಲ್ಲ ಕರಗಿ ಗಡಸು ನೀರಾದಂತೆ||೩||
ಅನುಭವದ ಜಾಳೆಲ್ಲ ಕುಸಿದು ಜಾರಿದೆ ಧರೆಗೆ
ಸುಳಿಗಾಳಿ ಸುಳಿಸುಳಿದು ಜೀವನಡುಗಿ ಕಾಡಿಸಿದೆ
ಹೇಳಕೇಳುವರಿಲ್ಲ ಮುಪ್ಪುಸೊಪ್ಪಿನ ಕಥೆಯ
ಮನದ ಮೂಲೆಯಲೊಂದು ದೂರದೂರಿನ ಚಿಂತೆ||೪||
ಬದುಕುಬಂಡಿಯಗಾಲಿ ಕಳಚಿ ಬಿದ್ದಿದೆ ದೂರ
ಜೋಡಣೆಯ ಪರಿಯಂತು ಬಲುಕಷ್ಟ ಸರಿಯೆ!
ಉಸಿರು ಉಸಿರಿನ ಲಯವು ತನ್ನ ಆಟವ ನಿಲಿಸಿ
ಹಿಂದೆ ತಿರುಗದೆ ಮತ್ತೆ ದೂರ ಹೊರಟಂತೆ||೫||
~ನರಹರಿ.ಭಟ್ಟ ಯಲ್ಲಾಪುರ
ಜಂಗಮ ರೂಪ…
ತನ್ನಷ್ಟಕ್ಕೆ ತಾನು
ಯಾವುದೂ ಸಂಭವಿಸುವುದಿಲ್ಲ…
ಹೆಪ್ಪುಗಟ್ಟಿದ ಮೋಡಕೆ
ಬೇಕು ಮಂದ ಮಾರುತ ಸ್ಪರ್ಶ…
ಬೀಜದೊಳಗಣ ವೃಕ್ಷಕೆ
ಬೇಕು ನೆಲದ ಪುಳಕ…
ಮೊಗ್ಗರಳಿ ಹೂವಾಗಲು
ಸಾಕು ನೀರು, ಗೊಬ್ಬರ ಸಖ್ಯ…
ಹೀಗೆ…ಒಂದರೊಡನೆ ಒಂದು
ಕೂಡಿ ವಿಜೃಂಭಿದ್ದರ ಫಲ
ಜಂಗಮ ರೂಪ ಜಗ ಸ್ವರೂಪ…!
ಬಹು ರೂಪ…
ಆದಿ ಅನಾದಿ
ಬ್ರಹ್ಮಾಂಡ ಮೂಲ
ಉರುಳುತಿದೆ ಜೀವ ತತ್ತಿ
ಲಿಂಗ, ಯೋನಿ ಕೂಟ…
ಸೃಷ್ಟಿ, ಸ್ಥಿತಿ, ಲಯ
ಕಾರ್ಯ, ಕಾರಣ ಹೂಡಿ
ಸಾಗುತಿದೆ ನಿರಂತರ
ಹುಟ್ಟು ಸಾವಿನ ಪಯಣ…
ಒಂದು ಎರಡಾಗಿ ಎರಡು
ನಾಲ್ಕಾಗಿ ಅಗಣಿತ ಲೆಕ್ಕ
ಸೂಕ್ಷ್ಮ, ಅತಿಸೂಕ್ಷ್ಮ
ಜಟಿಲ ಜೀವಜಾಲ…
ಒಂದಕ್ಕಿಂತ ಒಂದು ಭಿನ್ನ ವಿಭಿನ್ನ
ಬಹು ರೂಪ ಈ ಜಗ ಸ್ವರೂಪ…!
ಕರುಣೆ ಮತ್ತು ಕ್ರೌರ್ಯ…
ತನ್ನ ಸುತ್ತ
ತಣ್ಣಗೆ ಸಾವಿನಂತೆ
ಚಿರತೆ ಸುಳಿದಾಡಿದರೂ
ಜಿಂಕೆ ಜಿಗಿಯುತ್ತದೆ
ಜೀವ ಸಾವ ಗೆದ್ದಂತೆ…
ಕ್ರೌರ್ಯ ಸದಾ
ಹೊಂಚು ಹಾಕುತ್ತದೆ
ಸಾವು ಜೀವ ನುಂಗುವಂತೆ…
ಕರುಣೆ ಮತ್ತು ಕ್ರೌರ್ಯ
ಪರಸ್ಪರ ಜೊತೆಗಿದ್ದೂ ಇಲ್ಲದ
‘ಸಂತ’ ಮತ್ತು ‘ಸೈತಾನ’ನಂತೆ
ಒಂದು ಮಣಿದರೆ,
ಇನ್ನೊಂದು ಕೇಕೆ ಹಾಕುತ್ತದೆ…!
~ವೈ.ಬಿ.ಹಾಲಬಾವಿ