"ಕಾಡು” ಎಷ್ಟೊಂದು ಸ್ವಾತಂತ್ರ್ಯ..!!
ಎಲ್ಲಿ ನೋಡಿದರಲ್ಲಿ
ಕಣ್ಣು ಬಿಟ್ಟಲ್ಲಿ
ಜೀವಂತ ಸೊಗಡು
ಕಾಡು…!
ಇಲ್ಲಿ ಎಲ್ಲವೂ
ಪರಿಶುದ್ಧ
ನಿಷ್ಕಲ್ಮಶ
ನಿಸ್ವಾರ್ಥ!
ಅಷ್ಟೇ ಸ್ವಾಭಾವಿಕ..!;
ಹಸಿವು
ಆಹಾರದ ಸರಪಳಿ ನಡುವೆ
ಎಷ್ಟೊಂದು ಸ್ವಾತಂತ್ರ..!
ಮೋಡ ಕರಗಲಿಲ್ಲವೆಂದು
ಮರ ಮುನಿಸಿಕೊಳ್ಳುವುದಿಲ್ಲ!
ಬಿಸಿಲು ನೋಯಿಸುತ್ತಿದೆಯೆಂದು
ಹೂಗಳು ಬಯ್ಯುವುದಿಲ್ಲ!
ಉಕ್ಕಿ ಹರಿವ ಹಳ್ಳವು
ನನ್ನನು ನುಂಗಿಬಿಟ್ಟಿದೆಯೆಂಬ ಭ್ರಮೆ
ಇಲ್ಯಾವ ಬಂಡೆಗೂ ಇಲ್ಲ!
ಹಣ್ಣಾಗಿ
ನೆಲಸೇರಿ ಗೊಬ್ಬರವಾಗುವುದ
ಇಲ್ಯಾವ ಎಲೆಯೂ ಮರೆತಿಲ್ಲ!
ಹೊಟ್ಟೆ ತುಂಬಿದ ಹುಲಿಯ ಮುಂದೆ
ಜಿಂಕೆ ಹಿಂಡು ನರ್ತಿಸಿದರೂ ಹುಲಿ‘ಕ್ಯಾರೆ’ ಎನ್ನುವುದಿಲ್ಲ!
ಸಂಚು..
ಮೋಸಾ..
ಎಲ್ಲಾ ತನ್ನದಾಗಬೇಕೆಂಬ ಸ್ವಾರ್ಥ
ಕಾಡಿಗೆ ಗೊತ್ತೇಇಲ್ಲಾ..!
ಯಾರ ಅಪ್ಪಣೆಗೂ ಕಾಯದೆ
ನೆತ್ತಿ ಮೇಲತ್ತಿ
ದುಮುಕುವ ಝರಿ..!
ಗಡಿಯ ಹಂಗಿಲ್ಲದೆ
ಸುವಾಸನೆ ಬೀರುವ ತಂಗಾಳಿ..
ಅಪ್ಪಿಕೊಂಡ ಬಳ್ಳಿಗಳ
ಬೆಸೆದುಕೊಂಡ ಬೇರುಗಳ
ಬಾಹುಬಂಧನದಲೇ ಪುನೀತವಾಗುವ
ಒಂಟಿ ಮರ..!
‘ಕಾಡು’ಎಷ್ಟೊಂದು ಆನಂದ..
‘ಕಾಡು’ ಎಷ್ಟೊಂದು ಸ್ವಾತಂತ್ರ್ಯ-ಸಹನೀಯ..
ಹೌದಲ್ಲವೆ..ಮೌನ ಎಷ್ಟೊಂದು ಸುಂದರ..
ಮಾತುಗಳಿರುವ ಜಗತ್ತು ಏಕಿಷ್ಟು ಕ್ರೂರ..!??
-ಪರಶಿವ ಧನಗೂರು.
ಸಾವು
ಉರಿಯುತ್ತಿದೆ ಅಲ್ಲಿ
ಸಾಗರದೊಳಗೇ ಬೆಂಕಿ
ಅದು ಸಿಡಿದು , ಬದುಕು ಕರಗಿ
ಕರಿ ನೀರಾಗಿ ಹರಿದದ್ದು,
ರಕ್ತ ತರ್ಪಣವಾದದ್ದು
ಕಡಲ ಕಾಣದಿದ್ದ ನನಗೆ
ಕಡಲ ಕಡೆಯ ಜನರಂತೆ
ಕಣ್ಣಿಗೆ ಕಡಲ ಕಟ್ಟಿಕೊಂಡು
ಕಿನಾರೆಗುಂಟ ಆಡಿಕೊಂಡು
ಕಾಲ ಕಳೆವ ಆಸೆಯ ಲಾಲಾರಸ
ಲಾವಾರಸವಾಗಿ ಪುಟಿಯುತ್ತಿತ್ತು.
ಕಡಲ ಕಂಡಂದಿನಿಂದ
ಕಡಲಿನ ಕನ್ಯೆಯ ನೀಲಿ ಪತ್ತಲು
ನೆರಿಗೆಯ ಅಲೆ ಅಲೆಯು
ತಬ್ಬಿಕೊಳ್ಳುವ ಕನಸು
ಒಡಲ ಹಸಿವಾಗಿ ಕಾಡುತ್ತಿತ್ತು.
ಮೊನ್ನೆ ಕಾಣದ ಕೈಯೊಂದು
ಕಡಲೊಡಲ ಗುಂಡಿಯೊಳಗೆ ಕಡೆಗೋಲನಿರಿಸಿ
ಬರಬರನೆ ಎಳೆದಾಗ
ಹುಚ್ಚೆದ್ದು ಕುಣಿದ ಕಡಲ ಕನ್ಯೆಯ
ನೀಲಿ ಪತ್ತಲ ನೆರಿಗೆಯ
ಅಲೆಯು ಬಲೆಯಾಗಿ
ಎತ್ತಬೇಕತ್ತ ಚಿಮ್ಮಿ
ಉರುಳಾಗಿ ಹೋಯಿತು.
-ಪ್ರಭಾಕರ ತಾಮ್ರಗೌರಿ
ಚೆನ್ನಾಗಿದೆ 🙂
thank u sir