ಮನೆಯ ಹೊರಗಿನ ಹೂದೋಟದಲ್ಲಿ ಒಂದು ಹೆಗ್ಗಣ ಮತ್ತು ಇಲಿ ವಾಸವಾಗಿದ್ದವು. ದಿನವೂ ಮನೆಯ ಯಜಮಾನಿ ಹೊರಗೆ ಚೆಲ್ಲುವ ಮುಸುರೆಯಲ್ಲಡಗಿರುವ ಅನ್ನ, ಕಾಳು, ತರಕಾರಿಗಳನ್ನು ಆಯ್ದಾಯ್ದು ತಿಂದುಂಡು ಸಂತೋಷದಿಂದ ದಿನಗಳನ್ನು ದೂಡುತ್ತಿದ್ದವು. ಹೀಗಿರಬೇಕಾದರೆ ಒಂದು ದಿನ ಹೆಗ್ಗಣಕ್ಕೊಂದು ಕೆಟ್ಟ ಆಲೋಚನೆ ಹೊಳೆಯಿತು. ಅದು ತನ್ನ ಗೆಳೆಯನಿಗೆ, “ಏಯ್, ಗೆಳೆಯಾ. . ಎಷ್ಟು ದಿನವೆಂದು ಈ ಮುಸುರೆಯನ್ನವನ್ನು ತಿಂದುಂಡು ಜೀವಿಸುವುದು!?ಹೊಟ್ಟೆಬಿರಿಯುವ ಹಾಗೆ ತಿನ್ನಲು ಏನಾದರೂ ಹೊಸ ಉಪಾಯ ಹುಡುಕೋಣ” ಎಂದಿತು. ಇಲಿಗೆ ಆಶ್ಚರ್ಯದೊಂದಿಗೆ ಸಂದೇಹವುಂಟಾಯಿತು “ಅಲ್ಲಾ ಗೆಳೆಯ, ಹೇಗೊ ಸಿಕ್ಕಿದ್ದನ್ನು ಭರ್ಜರಿಯಾಗಿ ತಿಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ಹೊಸ ಕಷ್ಟವನ್ನು ನಮ್ಮ ತಲೆಯ ಮೇಲೆ ಏಕೆ ಎಳೆದುಕೊಳ್ಳಬೇಕು?ಇದೆಲ್ಲಾ ಬೇಕಾ ನಮಗೆ?” ಎಂದು ಗೆಳೆಯನಿಗೆ ಬಿಟ್ಟಿ ಉಪದೇಶ ನೀಡಿತು.
“ಕಣಕ್ಕಿಳಿಯದೆ. . ಕಷ್ಟವೆಂದು ಕುಳಿತರೆ, ಹೊಟ್ಟೆ ತುಂಬುವುದಾದರೂ ಹೇಗೆ?. . ದೈರ್ಯವಾಗಿ ನನ್ನ ಜೊತೆ ಕೈಜೋಡಿಸು, ಉಳಿದದ್ದು ನಾನು ನೋಡಿಕೊಳ್ಳುತ್ತೇನೆ” ಎಂದು ಹೆಗ್ಗಣ, ಇಲಿಗೆ ಸಲಹೆಯನಿತ್ತಿತು.
ಇಲಿಯು ಸಂತಸದಿಂದಲೇ, “ಆಯ್ತು ಗೆಳೆಯಾ, ನೀನು ಮುಂದೆ ಹೋಗುವುದಾದರೆ. . ನಾನು ನಿನ್ನ ಬೆನ್ನ ಹಿಂದೆ ಬರಲು ಸದಾ ತಯಾರಾಗಿರುತ್ತೇನೆ” ಎಂದು ಭರವಸೆ ನೀಡಿತು.
ಹೆಗ್ಗಣ ಮತ್ತು ಇಲಿ ಆ ದಿನವೆಲ್ಲಾ ಒಟ್ಟೊಟ್ಟಿಗೆ ಕುಳಿತು ನೂತನ ಉಪಾಯವೊಂದನ್ನು ಹೂಡಿದರು. ಆ ರಾತ್ರಿಯೇ ತಡಮಾಡದೆ ಮನೆಯೊಳಗೆ ಹೊಕ್ಕರು. ಮನೆಯ ಯಜಮಾನಿ ಮುಂಬಾಗಿಲನ್ನು ತೆರೆದಿಟ್ಟ ಸಮಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕಾರ್ಯವನ್ನು ಶುರುಮಾಡಿದರು. ಸಾಲಾಗಿ ಜೋಡಿಸಿಟ್ಟ ಅಕ್ಕಿ-ರಾಗಿಯ ಮೂಟೆಗಳಡಿಯಲ್ಲಿ ಬಚ್ಚಿಟ್ಟುಕೊಂಡವು.
ಸುಮಾರು ಮೂರ್ನಾಲ್ಕು ದಿನಗಳ ಕಾಲ ಹೆಗ್ಗಣ-ಇಲಿಗಳೆರಡೂ ಹೊಟ್ಟೆಬಿರಿಯುವ ಹಾಗೆ ತಿಂದು, ಎಲ್ಲೆಂದರಲ್ಲಿ ಪಿಚಕಿಯನ್ನ ಉದುರಿಸಿದ್ದವು. ಮನೆಯ ಯಜಮಾನಿ ಮೊದಲೇ ಸೂಕ್ಷ್ಮಮತಿ! ಕೇಳಬೇಕೆ?. ಅವುಗಳ ವಿಚಿತ್ರ ವಾಸನೆ ಮೂಗಿಗೆ ಪಸರಿಸಿದಾಗಲೇ ಅನುಮಾನದಿಂದ ಇಲಿ ಬೋನನ್ನು ತಂದು, ಮೂಟೆಗಳತ್ತಿರ ಇಟ್ಟಿದ್ದಳು.
ಬೇರೆ ಇಲಿಗಳೂ ಬೋನಿನೊಳಗೆ ಸಿಕ್ಕಿಹಾಕಿಕೊಂಡರೂ ಆತ್ಮೀಯ ಗೆಳೆಯರಾದ ಹೆಗ್ಗಣ-ಇಲಿ, ಒಂದು ವಾರವಾದರೂ
ಈ ಜಾಲಕ್ಕೆ ಸಿಕ್ಕಿಹಾಕಿಕೊಳ್ಳಲಿಲ್ಲ. ಸತತವಾಗಿ ಸತ್ತ ಇಲಿಗಳ ಸಂಖ್ಯೆ ಏರುತ್ತಿದ್ದನ್ನು ಕಂಡ ಇಲಿಯ ಮೊಗದಲ್ಲಿ ಭಯದ ಛಾಯೆ ಆವರಿಸಿತು. “ಗೆಳೆಯಾ, ಭರ್ಜರಿಯಾಗಿ ತಿಂದಿದ್ದು ಸಾಕು. ಹೊರಗಡೆ ಹೋಗಿಬಿಡೋಣ ನಡೆ”. ಎಂದು ತನ್ನ ದುಗುಡವನ್ನು ಹೊರಗಾಕಿತು.
ಹೆಗ್ಗಣ ಗೆಳೆಯನ ಮಾತನ್ನು ದಿಕ್ಕರಿಸಿ, “ಚಿಣ್ಣಾರಿ ಗೆಳೆಯ, ಪ್ರತಿನಿತ್ಯವೂ ಇಲ್ಲಿ ಹಬ್ಬದೂಟ. ಈ ಸುಖವನ್ನು ಬಿಟ್ಟು ಹೊರಗಡೆ ಮುಸುರೆಯನ್ನ ತಿನ್ನಲು ಹೋಗುವೆ ಎನ್ನುವಿಯಲ್ಲಾ! ಬುದ್ಧಿ ಇದೆಯಾ ನಿನಗೆ. ನೀನು ಸುಮ್ಮನಿರು, ನಾನು ಎಲ್ಲವನ್ನೂ ನೋಡಿಕೊಳ್ತೇನೆ” ಎಂದು ಸಮಾಧಾನ ಮಾಡಿತು.
ಇಲಿರಾಯನಿಗೆ ಗೆಳೆಯನ ಸಮಾಧಾನದ ನುಡಿಗಳು ರುಚಿಸಲಿಲ್ಲ. . “ಗೆಳೆಯಾ ನನ್ನನ್ನು ಕ್ಷಮಿಸು ಬಿಡು. ಅಪಾಯವಿದೆಯೆಂಬ ಅರಿವಿದ್ದರೂ ಇಂತಹ ಸ್ಥಳದಲ್ಲಿ ನಾನಿರಲಾರೆ. ಭಯದಿಂದ ತಿನ್ನುವ ಈ ಮೃಷ್ಟಾನ ಭೋಜನಕ್ಕಿಂತ, ಸ್ವಾತಂತ್ರ್ಯವಾಗಿ, ಭಯರಹಿತವಾಗಿ ತಿನ್ನುವ ಆ ಮುಸುರೆಯನ್ನವೇ ಲೇಸು. ದಯವಿಟ್ಟು ನನಗೆ ಹೊರಗೋಗಲು ಅಪ್ಪಣೆ ಕೊಡು. ನನ್ನೊಂದಿಗೆ ನೀನೂ ಬಂದು ಬಿಡು”ಎಂದು ಅಂಗಲಾಚಿತು.
ಹೆಗ್ಗಣ ಜಂಭದಿಂದ, “ನಾನು ಈ ಮನೆಯಲ್ಲೇ ಇರುವೆ. ನೀನು ಹೊರಡು. . ನಾನು ಈ ಸುಖವನ್ನು ಬಿಟ್ಟು ಬರಲಾರೆ”ಎಂದು ದೃಡವಾಗಿ ಹೇಳಿ, ಗೆಳೆಯನಿಗೆ ಅಂತಿಮ ವಿದಾಯ ಹೇಳಿತು.
ಇಲಿ ಮುಂಬಾಗಿಲು ತೆರೆದ ಸಮಯ ನೋಡಿಕೊಂಡು ಮನೆಯಿಂದ ಹೊರಗೋಡಿ ಹೋಯಿತು.
ಹೆಗ್ಗಣ ಅದರ ಪುಕ್ಕುಲು ತನವನ್ನು ನೋಡಿ ಗಹಗಹಿಸಿ ನಕ್ಕಿತು.
ಮಾರನೇ ದಿನ ಮನೆಯ ಯಜಮಾನ ಇಲಿಗಳ ಬೋನಿನ ಜೊತೆಗೆ, ಹೆಗ್ಗಣಕ್ಕೆಂದು ಬೇರೆಯ ಬೋನನ್ನು ತಂದಿರಿಸಿದ. ಆ ರಾತ್ರಿ ಹೊಟ್ಟೆಯ ತುಂಬ ತಿಂದ ಹೆಗ್ಗಣ ಸರಿರಾತ್ರಿಯಲ್ಲಿ ಬೋನಿನೊಳಗೆ ಬಂಧಿಯಾಯಿತು. ಗೆಳೆಯನ ಸಲಹೆಯನ್ನು ನೆನೆ ನೆನೆದು ಗೋಳಿಟ್ಟಿತು. “ಅತಿಯಾಸೆ ಗತಿಕೇಡು” ಎಂದು ಹೊರಳಾಡಿ ದುಃಖಿಸಿತು. ಅಂದೇ ಹೆಗ್ಗಣದ ಜೀವನದ ಕೊನೆ ರಾತ್ರಿಯಾಯಿತು.
ಮಾರನೇ ದಿನ ಬೆಳಗ್ಗೆ, ಮನೆಯ ಯಜಮಾನ ಸತ್ತ ಹೆಗ್ಗಣವನ್ನು ಹೂದೋಟದಿಂದಾಚೆ ದೂರದ ಪ್ರದೇಶಕ್ಕೆ ಎಸೆದನು.
ಅಲ್ಲಿಯೇ ಅಡ್ಡಾಡುತ್ತಿದ್ದ ಇಲಿಯು ತನ್ನ ಗೆಳೆಯನ ಕಳೆಬರಹವನ್ನು ನೋಡಿ, “ಗೆಳೆಯ ನನ್ನನ್ನು ಬಿಟ್ಟು ಹೋಗಿಬಿಟ್ಯಾ?. . ಅಂದೇ ನೀನು ನನ್ನ ಜೊತೆ ಹೊರಗಡೆ ಬಂದಿದ್ದರೆ, ಇಂದು ನೀನು ಜೀವಂತವಾಗಿರುತ್ತಿದ್ದೆ. “ಎಂದು ಕಣ್ಣೀರರಿಸಿ ದುಃಖಿಸಿತು.
ಮಕ್ಕಳೇ, , ಇದ್ದುದರಲ್ಲೇ ತೃಪ್ತಿ ಪಟ್ಟು ಜೀವನ ನಡೆಸುವುದು ಬುದ್ಧಿವಂತರ ಲಕ್ಷಣ. ಅಪಾಯವಿದೆಯೆಂದು ತಿಳಿದಾದ ಮೇಲೂ ಅದೇ ಸ್ಥಳದಲ್ಲಿದ್ದರೆ, ತೊಂದರೆ ಕಟ್ಟಿಟ್ಟ ಬುತ್ತಿ.
ಅತಿಯಾಸೆಗೆ ಬಲಿಯಾಗಿ, ಸಂಕಷ್ಟಕ್ಕೆ ಸಿಲುಕಿ ಜೀವನವನ್ನು ಕೊನೆಗಾಣಿಸಿಕೊಳ್ಳುವುದು ಯಾವ ನ್ಯಾಯ?. ಅತಿಯಾಸೆ ಗತಿಕೇಡು.
–ಆಶಾರಾಣಿ
It’s good keep goingon
Really nice moral