ಇದೇ ‘ರಮ್ಯ’ ಚೈತ್ರ ಕಾಲ: ಬೀರೇಶ್ ಎನ್. ಗುಂಡೂರ್


ಇಲ್ಲಿ ಎಲ್ಲದಕ್ಕೂ ಉತ್ತರವಿಲ್ಲ. ಪ್ರಶ್ನೆಗಳೇ ಎಲ್ಲ. ನಿನ್ನ ಒಪ್ಪಿಸುವ ಭರದಲ್ಲಿ ನಾನೆಲ್ಲೋ ಸೋತು ನಿಸ್ಸಾಯಕನಾಗಿ ನಿಂತುಬಿಟ್ಟೆ ಅನಿಸುತ್ತದೆ. ಅದೇನೋ, ಬೇರೆಯವರಲ್ಲಿ ನಿನ್ನನ್ನು ಹುಡುಕಿಕೊಳ್ಳುವುದು..ನೀರಿಲ್ಲದೆ ಮೀನು ತನ್ನ ಅಸ್ತಿತ್ವ ಹುಡುಕಿಕೊಂಡಂತೆ ಅನಿಸುತ್ತದೆ. ಈ ಜಗತ್ತಿನ ಸೊಬಗಿಗೆ, ನಾಳೆಗಳ ಆಕಾಂಕ್ಷೆಗಳಿಗೆ, ಎಲ್ಲವನ್ನು ಮೀರಿ ಬದುಕಿಬಿಡುತ್ತೇನೆ, ಗೆದ್ದುಬಿಡುತ್ತೇನೆ ಎನ್ನುವ ಈ ಮಂದಿಯ ಅದಮ್ಯ ಚೇತನಕ್ಕೆ ಅದೊಂದೇ, ‘ಪ್ರೀತಿ’ಯೇ ಕಾರಣ ಅಂತ ಅಷ್ಟು ಬಾರಿ ಓದಿಕೊಂಡಿದ್ದೇನೆ. ಅದೊಂದು ತಪಸ್ಸು. ಆರಾಧನೆ. ಎಲ್ಲವನ್ನೂ ಸಾದ್ಯವಾಗಿಸುವ, ಎಲ್ಲವನ್ನೂ ಮರೆಸುವ, ಮೆರೆಸುವ, ಇನ್ನೆಲ್ಲವನ್ನೂ ತೆಕ್ಕೆಗೆ ಬಾಚಿಕೊಳ್ಳುವ, ಎಲ್ಲವನ್ನೂ ದಾಟಿ ಜೀವನಕ್ಕೊಂದು ಅರ್ಥವೆಂದಿದ್ದರೆ ಅದು ಪ್ರೇಮದಿಂದಲೇ ಅನ್ನುವುದು ಎಲ್ಲರ ಸಮ್ಮತಿ. ಅದಕ್ಕೊಂದು ಗೌರವದ ಮುಕುತಿ. ಅಂತದ್ದೊಂದು ಅದ್ಭುತ ಫೀಲಿಂಗ್ ಅನ್ನು ನನ್ನಲ್ಲಿ ತಂದಿಟ್ಟ ನಿನಗೆ ನಾನೆಂದಿಗೂ ಋಣಿ. ಮನಸ್ಸಿಗೆ ಅತ್ಯಂತ ಇಷ್ಟವಾಗುವ ಅದಮ್ಯ ಮೌನವೇ ನೀನು. ಆ ಮೌನದಲ್ಲೇ ಪ್ರತಿ ಘಳಿಗೆ ಮಾತನಾಡುತ್ತೇನೆ. ನಿನ್ನ ಆರಾಧಿಸಿಕೊಳ್ಳುತ್ತೇನೆ. ಹಂಬಲಿಸುತ್ತೇನೆ. ಇಳಿಸಂಜೆಯ ಇಂಪಾದ ತಂಗಾಳಿಯಲ್ಲಿ, ಎಳೆ ಬಿಸಿಲ ಮಳೆಬಿಲ್ಲಿನಲ್ಲಿ, ಮುದ ನೀಡುವ ಸಂಗೀತದಲ್ಲಿ, ಓದಿಕೊಳ್ಳುವ ಪ್ರತಿ ಅಕ್ಷರಗಳಲ್ಲಿ ನಿನ್ನನ್ನು ಧ್ಯಾನಿಸುತ್ತೇನೆ. ನೀನು ಪ್ರತಿದಿನವೂ ನಿತ್ಯನೂತನ. ಹುಟ್ಟುವ ಸುಂದರ ಕವನ. ಕಾಲನ ಜೊತೆ ಎಲ್ಲವೂ ಮನಸಿನ ಪಟಲದಿಂದ ಜಾರುತ್ತದೆ ಎನ್ನುವ ಮಾತಿಗೆ ನೀನು ದೂರ ದೂರ. ನೀನು, ನಿನ್ನ ಪ್ರೀತಿ, ನೆನೆದಷ್ಟು ಮಧುರವೆನಿಸುತ್ತದೆ. ಸುಂದರ ನಿಸರ್ಗದ ಆ ಚೆಲುವು ಎಂದೆನಿಸುತ್ತದೆ. ಈ ಪ್ರೀತಿ ಎನ್ನುವ ಅಂತರಾಳದ ಭಕ್ತಿ ಒಂದಿದ್ದರೆ ಎಲ್ಲವೂ ಸಾದ್ಯವಂತೆ. ಎಂತೆಂತವರೂ ಸೋಲುತ್ತಾರಂತೆ. ಜಾತಿ, ವರ್ಣ, ಹಿರಿಯ, ಕಿರಿಯ, ಹಮ್ಮೀನವ, ಬಿಮ್ಮಿನವ, ಎಲ್ಲರೆಂದರೆ ಎಲ್ಲರೂ. ಎಲ್ಲವನ್ನೂ ದಾಟಿ. ಅದಕ್ಕಾಗಿಯೇ ಪ್ರೀತಿಯ ಬಗ್ಗೆ ಅಷ್ಟು ಅಕ್ಷರಗಳು, ಅಷ್ಟು ಕವಿತೆಗಳು, ಅಷ್ಟು ಸಿನಿಮಾಗಳು, ಅಷ್ಟು ಮಾತುಗಳು. ಆದಿಲ್ಲವೆಂದರೆ ಈ ಬದುಕಿಗೊಂದು ಗುರಿ, ಉದ್ದೇಶ, ಛಲ, ಆಸೆ, ಚೇತನ, ಹಿಂದು-ಮುಂದು ಎಂತದೂ ಇರುತ್ತಿರಲ್ಲಿಲ್ಲವೇನೋ.


ನಿನ್ನ ಜೀವನದಲ್ಲಿ ನನ್ನ ಸೇರಿಸಿಕೊ, ಜೊತೆ ಸೇರಿ ಈ ಜೀವನವ ಗೆದ್ದುಬಿಡುವ ಅನ್ನುವ ನನ್ನ ಕಣ್ಣ ಭಾಷೆ ನಿನಗೆ ಎಂದೋ ಅರ್ಥವಾಗಿದೆ. ಆ ನಿನ್ನ ಕಣ್ಣುಗಳಲ್ಲಿ ಈ ಜೀವ ಚೇತನವನ್ನು ನಾನೇ ಹುಡುಕಿಕೊಂಡಿದ್ದೇನೆ. ನೀನು ಏನೇ ಹೇಳು, ನಿನ್ನ ಕಣ್ಣುಗಳು ಹೇಳುವ ಸಮ್ಮತಿಯೇ ನನಗೆ ಆಸರೆ. ಕರುಳಿಗೆ ಅಂಟಿಕೊಂಡವರ ಮುಲಾಜಿ ತೋರಿಸಿ ಬೆನ್ನು ಮಾಡುವ ನಿನಗೆ, ನಿನ್ನ ಕಣ್ಣುಗಳು ಸಹಾಯ ಮಾಡುವುದಿಲ್ಲ. ಆ ಕಣ್ಣುಗಳು ನನ್ನ ಬೇಡುತ್ತವೆ. ಅದನ್ನು ನಿನಗೆ ಸಾವಿರ ಬಾರಿ ಅರ್ಥ ಮಾಡಿಸಿ ನಾನಂತೂ ಸೋತುಬಿಟ್ಟೆನೇನೋ! ನಿನ್ನ ಹೃದಯಕ್ಕೊಂದು ಕದ ಜಡಿದು, ಮೋಸ ಮಾಡಿಕೊಂಡು, ಎಲ್ಲವನ್ನೂ ಕಟ್ಟಿ ಹಾಕಿ, ಅವರಿಗಾಗಿ ಇವರಿಗಾಗಿ ಎನ್ನುವ ನಿನ್ನ ಗೋಳು ನನಗೇಕೋ ಸೋಜಿಗವೆನಿಸುತ್ತದೆ. ನಿಜವಾಗಲೂ ನಿನ್ನನ್ನು ಈ ಜಗತ್ತಿನಲ್ಲಿ ನೀ ಹೇಳುವ ಹಾಗೆ ಆ ಮಂದಿಯೆಲ್ಲಾ ನಿನ್ನವರಾಗಿದ್ದರೆ, ನಿನ್ನ ಸ್ವತಂತ್ರ ನಿರ್ಧಾರ ಅಪ್ಪಿಕೊಂಡು, ಒಪ್ಪಿಕೊಂಡು, ನಿನ್ನ ಮನಸಿಗೆ ಹಿಡಿಸುವ ಖುಷಿಯನ್ನು ನೀನಗೆಂದೇ ತಂದಿಡುತ್ತಾರೆ. ಇಲ್ಲಿ ಎಲ್ಲವೂ ಮೋಸವೆನಿಸುತ್ತದೆ. ಎಂತದೋ ಕ್ಯಾಲ್ಕುಲೇಷನ್ ಜನ ಅನಿಸುತ್ತದೆ. ನನಗೆ ಏನೂ ಸಿಗದಿದ್ದರೂ.., ಏನೇ ಆದರೂ ಅವರಿಗಾಗಿ ಇದೆಲ್ಲಾ ಎನ್ನುವ ನಿನ್ನ ಸಂಕಟದ ಮಾತುಗಳು ನನಗಂತೂ ಇವಳೇನಾ ನನಗೆ ಇಷ್ಟೊಂದು ಚಿಲುಮೆ ಹುಟ್ಟಿಸಿದ ಹುಡುಗಿ ಅನಿಸುತ್ತದೆ. ಮನಸಿಗೆ ಮೋಸ ಮಾಡಿಕೊಂಡು ಅದೇನೋ ಮಾಡುತ್ತೇನೆ. ಹೇಗಾದರೂ, ಹೆಂಗಾದರೂ ಎನ್ನುವ ಜಾಯಮಾನ ನನ್ನದಲ್ಲ. ನೀನೆ ನಿತ್ಯ. ಸತ್ಯ.


ಎಲ್ಲರಿಗಾಗಿ ಅಥವಾ ಎಲ್ಲದಕ್ಕೂ ಉತ್ತರ ಜೋಡಿಸುವ ಬದಲು ನಿನ್ನಂತರಂಗವನ್ನೊಮ್ಮೆ ಕೇಳಿಕೊ, ಅಲ್ಲಿ ನನ್ನದೇ ಹೆಸರು ಬರೆದಿರುವುದು ನಾನು ಬದುಕಿರುವಷ್ಟೆ ಸತ್ಯ. ಎಂತದೋ ಗೋಜಿಗೆ ಬಿದ್ದು ಕಟ್ಟಿದ ಕನಸನು ಒಡೆಯಬೇಡ. ನಿನ್ನ ಮಂಗನ ಚೇಷ್ಟೆ ಸಹಿಸಿಕೊಳ್ಳಬೇಕು. ನನ್ನಿಷ್ಟದ ರೊಟ್ಟಿಯನ್ನು ನೀ ಮಾಡುವಾಗ ಮುಂದೂಡಿ ರೇಗಿಸಬೇಕು. ನೀನು ನನ್ನದೇ ಅಕ್ಷರಗಳನ್ನು ಓದಿ ಮುನಿಸಿಕೊಂಡಾಗ ನಿನ್ನನ್ನು ಇನ್ನಷ್ಟು ಕಾಡಿಸಬೇಕು. ನಿನ್ನಮ್ಮನನ್ನು ನಾನೇ ಒಲಿಸಿಕೊಂಡು ನಿನ್ನ ದಿನವೂ ರೇಗಿಸಬೇಕು. ರೇಗಿಸಿದಾಗ ನೀನು ಸುಂದರವಾಗಿ ಕಾಣಿಸುತ್ತೀಯ ಅಂತ ನಿನಗೆ ಕನ್ನಡಿ ಹಿಡಿದು ತೋರಿಸಬೇಕು. ನೋಡು, ಎಷ್ಟೆಲ್ಲಾ ಇದೆ ಜತನ ಮಾಡಿಕೊಳ್ಳಲು. ಈ ಬದುಕನ್ನು ಸಿಂಗರಿಸಿಕೊಳ್ಳಲು. ಅಲ್ಲಿ ನೀನಿರಲೇ ಬೇಕು. ನಾವಿಬ್ಬರೇ ಜೊತೆಯಾಗಬೇಕು. ಇರುವ ನಾಲ್ಕು ದಿನಗಳಲ್ಲಿ ಉಳಿದಿರುವುದು ಮೂರೇ ದಿನ. ಕಣ್ಣು ಮುಚ್ಚಿ ಒಮ್ಮೆ ಧ್ಯಾನಿಸಿ ನೋಡು. ಅಲ್ಲಿ ನಾವಿಬ್ಬರೇ ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುತ್ತೇವೆ. ಅದನ್ನೇ ನನಸು ಮಾಡು. ಈ ಬಾರಿ ಕಣ್ಣು ದೂರ ಸರಿಸಬೇಡ. ಏನೇನೂ ಹೇಳಬೇಡ. ಮುಂದೆ ಬಂದು ನಿಲ್ಲು ಸಾಕು. ಆ ಮೌನದಲ್ಲೇ ನಿನ್ನನ್ನು ಓದಿಕೊಳ್ಳುತ್ತೇನೆ. ಕೈ ಹಿಡಿ ಸಾಕು, ಈ ಉಸಿರಿರೋವರೆಗೂ ನಿನ್ನನ್ನೆ ಜೀವಿಸಿಬಿಡುತ್ತೇನೆ. ಕೋಗಿಲೆ ಹಾಡುತ್ತಿದೆ. ನಮ್ಮನ್ನೆ ಹರಸುತ್ತಿದೆ. ಧನಿಗೂಡಿಸು. ನಮ್ಮನೆ ದೇವರ ದೀಪದ ಬೆಳಕಾಗಿ ಬಂದುಬಿಡು. ಇದೇ ರಮ್ಯ ಚೈತ್ರ ಕಾಲ.

ಇಂತಿ ನಿನ್ನವ,
ಬೀರೇಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x