"ದೇವರಮನೆ ಬಾಗಿಲು ಮುಚ್ಚಿಬಿಡೇ" ಅಪರೂಪಕ್ಕೆ ಬಂದ ಗೆಳತಿ ಅಸ್ಪೃಶ್ಯಳಂತೆ ಬಾಗಿಲಲ್ಲೇ ನಿಂತು ಹೇಳುತ್ತಿದ್ದಳು. ಯಾಕೆಂದು ಕೇಳುವ ಅಗತ್ಯವಿರಲಿಲ್ಲ. ನಾನು ಹೋಗಿ ಮುಚ್ಚಿದೆ. "ಅಯ್ಯೋ ಬಿಡೇ ನೀನೊಬ್ಬಳು ಅಡಗೂಲಜ್ಜಿ ತರಹ ಆಡ್ತೀಯಮ್ಮಾ"-ಜೊತೆಯಲ್ಲಿದ್ದ ಇನ್ನೊಬ್ಬ ಗೆಳತಿಯ ಪ್ರತಿಕ್ರಿಯೆ. ಅವಳಲ್ಲಿ ಉತ್ತರವಿರಲಿಲ್ಲ, ಮುಖ ಪೆಚ್ಚಾಯಿತು. ಅದೊಂದು ನಂಬಿಕೆಯಷ್ಟೆ. ನಂಬಿಕೆಯೊಳಗೆ ಪ್ರಶ್ನೆಗಳೂ ಹುಟ್ಟುವುದಿಲ್ಲ, ಹಾಗೂ ಉತ್ತರಗಳೂ ಇರುವುದಿಲ್ಲ. ಪ್ರಶ್ನೆ ಇದ್ದರದು ನಂಬಿಕೆಯಾಗಿರುವುದಿಲ್ಲ, ಒಂದು ಸಂಶಯವಾಗಿರುತ್ತದೆ.
ಸಂಪ್ರದಾಯಸ್ಥ ಮನೆಗಳಿಂದ ಬಂದ ಇಂದಿನ ಹೆಣ್ಣುಮಕ್ಕಳೆಲ್ಲರೂ ಇದೊಂದು ಅರ್ಥವಿಲ್ಲದ ಆಚರಣೆ ಎಂದು ತಿಳಿದಿದ್ದರೂ, ಅದನ್ನೊಂದು ಸಹಜಪ್ರಕ್ರಿಯೆ ಎಂದು ಇನ್ನೆಲ್ಲಾ ಘಟ್ಟಗಳಲ್ಲಿ ಪರಿಗಣಿಸಿದರೂ, ಬಹುಶಃ ದೇವರ ಮನೆ, ದೇವಸ್ಥಾನಗಳ ಮಾತು ಬಂದಾಗ ಎಂದಿನಂತಿರಲು ಆ ದಿನಗಳಲ್ಲಿ ಮನ ಅಳುಕುತ್ತದೆ. ಇದಕ್ಕೆ ಕಾರಣವಿಲ್ಲದಿಲ್ಲ. ಜಗತ್ತನ್ನು ನಾವೆಷ್ಟೇ ತಿಳಿದುಕೊಂಡು ಬಿಟ್ಟೆವು ಅಂದುಕೊಂಡರೂ ಮರುಹೆಜ್ಜೆಯಲ್ಲೇ ಅನಿರೀಕ್ಷಿತ ಅಚ್ಚರಿಗಳನ್ನು ಎದುರಾಗಿಸಿ ನಮ್ಮನ್ನು ಭ್ರಮನಿರಸನಕ್ಕೆ ದೂಡುತ್ತಿರುತ್ತದೆ ಪ್ರಕೃತಿ. ಹಾಗಾಗಿ ಮೂಢನಂಬಿಕೆಗಳನ್ನು ಹಾಗೆಂದು ಕರೆದೂ, ಅವುಗಳ ಪ್ರಭಾವದಿಂದ ನೂರಕ್ಕೆ ನೂರು ಹೊರಬರಲಾಗದ ಪರಿಸ್ಥಿತಿ ಹಲವರದ್ದಾಗಿದೆ. ಈ ಮೂಢನಂಬಿಕೆಗಳೆಂದು ಯಾವುದನ್ನು ನಾವು ಕರೆಯುತ್ತೇವೋ ಅವು ಒಂದು ಕಾಲದ ನಂಬಿಕೆಗಳೇ ಆಗಿದ್ದವು ಮತ್ತು ಈಗಿನ ಕಾಲಧರ್ಮಕ್ಕೆ ಹೊಂದಿಕೆಯಾಗದೆ ಮೂಢವೆನಿಸಿಕೊಂಡವು. ಮನುಷ್ಯ ಹಾಗೆಯೇ ತಾನೇ? ತನಗೊಪ್ಪಿಗೆಯಾದದ್ದೇ ಅಥವಾ ತನಗನುಕೂಲವಾದದ್ದೇ ಸರಿ, ಇನ್ನುಳಿದದ್ದೆಲ್ಲಾ ತಪ್ಪು ಎನ್ನುತ್ತಲೇ ಬಾಳುತ್ತಾನೆ.
ಈ ಮುಟ್ಟಿನ ವಿಷಯದಲ್ಲೂ ಅಷ್ಟೆ. ವೈದ್ಯಕೀಯ ಲೇಖನವೊಂದರಲ್ಲಿ ಓದಿದ ನೆನಪು- ಆ ಸಮಯ ಹಾರ್ಮೋನುಗಳ ಏರುಪೇರಿಂದಾಗಿ ದೇಹದೊಂದಿಗೆ ಮಾನಸಿಕ ಸ್ಥಿತಿಯೂ ಕೆಳಸ್ತರದಲ್ಲಿರುತ್ತದೆ. ಇದು ಹೆಣ್ಣಾಗಿ ನಾನು ಅನುಭವಿಸಿದ ಸತ್ಯವೂ ಹೌದು. ಇನ್ನೇನು ಎರಡು ದಿನಗಳಿವೆ ಅನ್ನುವಾಗಲೇ ಅಲ್ಲಸಲ್ಲದ ವಿಷಯಕ್ಕೆ ರೇಗುವುದು, ಸಣ್ಣಪುಟ್ಟದಕ್ಕೆಲ್ಲಾ ಅಳುವಂತಾಗುವುದು-ಹೀಗೇ ಸೂಕ್ಷ್ಮ ಮನಃಸ್ಥಿತಿಯಿಂದ ನರಳುವಂತಾಗುತ್ತದೆ. ಬಹುಶಃ ದೇಹಕ್ಕೆ ವಿಶ್ರಾಂತಿ ಮತ್ತು ಮನಸಿಗೆ ಏಕಾಂತ ಇವೆರಡನ್ನು ಒದಗಿಸುವ ಸ್ಥೂಲ ಉದ್ದೇಶದಿಂದ ಎಲ್ಲ ದೈನಂದಿನ ಚಟುವಟಿಕೆಗಳಿಂದ ಅವರನ್ನು ದೂರಾಗಿಸಿ, ಮತ್ತು ಸೂಕ್ಷ್ಮಮನಃಸ್ಥಿತಿಯಿಂದ ಹೊರಪ್ರಪಂಚಕ್ಕೆ ತೆರೆದುಕೊಂಡು ಇಲ್ಲದ ವ್ಯವಹಾರಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲಿಕ್ಕಾಗಿ ಪ್ರತ್ಯೇಕ ಒಂಟಿಯಾಗಿ ಕುಳ್ಳಿರಿಸುವ ಪರಿಪಾಠ ಸುರುವಾಗಿದ್ದಿರಬಹುದು. ಅದರೊಂದಿಗೆ ಸ್ವಲ್ಪ ಮಟ್ಟಿಗೆ ರೆಕ್ಕೆಪುಕ್ಕಗಳಾಗಿ ಅಂತೆಕಂತೆಗಳೂ ಸೇರಿಕೊಂಡು ಇನ್ನಷ್ಟು ನಿರ್ಬಂಧಗಳು ಹುಟ್ಟಿಕೊಂಡಿರಬಹುದು.
ಹಿಂದಿನವರು ದೇವರ ವಾಸಕ್ಕೆಂದು ನಿಗದಿಸಿದ ಸ್ಥಾನವನ್ನು ತಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರ ತೋರುವ ಅತ್ಯಂತ ಪವಿತ್ರ ಹಾಗೂ ಶಕ್ತಿಯುತ ಜಾಗವೆಂದು ಪರಿಗಣಿಸಿದ್ದರು. ದೇಹದಿಂದ ಒಂದು ಅನಗತ್ಯವಿಷಯ ವಿಸರ್ಜನೆಯಾಗುವ ಸಂದರ್ಭ ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆ ತರುವ ವಿಷಯವೆಂದವರು ಭಾವಿಸಿದ್ದು ದೈವದೆಡೆಗಿನ ಅವರ ಶ್ರಧ್ಧೆಯ ಒಂದು ಭಾಗವೇ ಆಗಿತ್ತು, ಹೊರತು ಸ್ತ್ರೀಯ ಶೋಷಣೆಯ ಸಲಕರಣೆಯಲ್ಲ ಎಂದು ನನ್ನ ಭಾವನೆ. ಅಲ್ಲದೆ, ಅಲ್ಲಿ ಅವರು ಕಾಪಾಡಿಕೊಳ್ಳುತ್ತಿದ್ದ ಧನಾತ್ಮಕತೆಯ ಎತ್ತರಕ್ಕೆ ನ್ಯೇತ್ಯಾತ್ಮಕಮನಃಸ್ಥಿತಿಯೊಂದು ಸುತಾರಾಂ ಪ್ರವೇಶ ಮಾಡುವಂತಿರಲಿಲ್ಲವಾಗಿ ಮುಟ್ಟಾದವರಿಗೆ ಇಂತಿಷ್ಟು ದಿನ ಅಲ್ಲಿಗೆ ಪ್ರವೇಶವಿಲ್ಲ ಎಂದು ತಾಕೀತು ಮಾಡುತ್ತಿದ್ದರು. ಇನ್ನು ಇದಕ್ಕಿಂತ ಹೆಚ್ಚಿನ ನಿರ್ಬಂಧಗಳಲ್ಲಿ ( ಹೂ ಮುಡಿಯಬಾರದು, ಹಣೆಗಿಡಬಾರದು, ಸ್ನಾನ ಮಾಡಬಾರದು…..ಇತ್ಯಾದಿ) ಮಾತ್ರ ನನಗೆ ಯಾವುದೇ ಮುಗ್ಧಶ್ರಧ್ಧೆಯ ಅಂಶ ಕಾಣಿಸುವುದಿಲ್ಲ, ಬಹುಶಃ ಒಪ್ಪುತ್ತಾರೆ ಎಂದವರ ಕೈಯ್ಯಲ್ಲಿ ಕತ್ತೆಗಿರುವುದು ಎರಡೇ ಕಾಲೆಂದು ಒಪ್ಪಿಸುವ ರೀತಿಯಲ್ಲಿ ಸ್ತ್ರೀಯರನ್ನು ಬಲವಂತವಾಗಿ ಇನ್ನುಳಿದ ಮಾಡಲೇಬೇಕುಗಳು ಅಥವಾ ಮಾಡಲೇಬಾರದುಗಳಿಗೆ ಒಪ್ಪಿಸಿದರು ಅನ್ನಿಸುತ್ತದೆ.
ಇಂದಿನ ಮಹಿಳೆ ಅಷ್ಟು ಸುಲಭವಾಗಿ ಅವೆಲ್ಲವನ್ನು ಒಪ್ಪದಿದ್ದರೂ ಹೆಚ್ಚಿನಸಲ ಈ ದೇವರಮನೆಯ ವಿಷಯಗಳಲ್ಲಿ ಭಾಗವಹಿಸುವಿಕೆಯ ಮಾತು ಬಂದಾಗ ಮೌನವಾಗಿ ಬಿಡುತ್ತಾಳೆ. ಇದು ಮನಸ್ಸಿನ ಅತ್ಯಂತ ಪ್ರಾಮಾಣಿಕ ಸ್ಥಿತಿ ಅನಿಸುತ್ತದೆ ನನಗೆ. ಒಂದು ವ್ಯವಸ್ಠೆಯ ಮೂಲೋದ್ದೇಶವನ್ನು ಕಾಪಾಡಿಕೊಂಡು ಬರಬೇಕಾದಾಗ ಕೆಲಮಟ್ಟಿನ ನೋವು, ಸಹಿಸಿಕೊಳ್ಳುವುದು… ಹೀಗೆ ಒಟ್ಟಿನಲ್ಲಿ ತ್ಯಾಗಗಳು ಅನಿವಾರ್ಯ. ಇಲ್ಲಿ ಪ್ರಶ್ನೆಗಳೆದ್ದರೆ ಆ ಕಾಪಾಡಿಕೊಂಡು ಬರುವ ಉದ್ದೇಶ ನೆಲೆಗಾಣಲಿಕ್ಕಿಲ್ಲ. ದೇವರ ಪರಿಕಲ್ಪನೆ ನಮಗೆ ತುಂಬ ಅಸ್ಪಷ್ಟವಾಗಿದ್ದರೂ, ಅದು ನೂರರಲ್ಲಿ ತೊಂಬತ್ತು ಜನರಿಗೆ ಬಾಳಿನ ಅನಿವಾರ್ಯ ಅಗತ್ಯ. ದುಖಃ ಕ್ಕೆ ಓಡಿಹೋಗಿ ಅವನ ಮುಂದೆ ಬೊಬ್ಬಿಟ್ಟು ಅಳುವುದನ್ನೂ, ಸುಖ ಬಂದಾಗ ಎಲ್ಲ ಮರೆತು ಅನುಭವಿಸುವುದನ್ನೂ ಸುಮ್ಮನೆ ಕೂತು ಕೇಳುವ ಗೆಳೆಯನೇ ಈ ದೇವರೆಂಬ ಅಸ್ತಿತ್ವ, ಅಲ್ಲವೇ?
ಲೌಕಿಕ ಗೆಳೆಯರಾರೂ ಆ ಮಟ್ಟಿಗೆ ಮೂಕಕಿವಿಗಳಾಗುವುದಿಲ್ಲ ಮತ್ತು ನಾವು ಆ ಮೂಕಕಿವಿಯನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದೇವೆ. ಹಾಗಾಗಿ ಆ ಅಸ್ತಿತ್ವಕ್ಕೆ ಈ ಜಗತ್ತಿನದಕ್ಕಿಂತ ಮೀರಿದ ಸ್ಥಾನವೊಂದಿದ್ದರೇನೇ ಅದು ನಮ್ಮ ಕಲ್ಪನೆಯಲ್ಲಿ ಜೀವಂತವಾಗಿರಬಲ್ಲುದು. ಆ ಸ್ಥಾನವೊಂದಿದೆ ಎಂದೆನ್ನಬೇಕಾದರೆ ಅಲ್ಲಿ ನಮ್ಮ ಅಪರಿಮಿತ ಶ್ರಧ್ಧೆ ಮಾತ್ರ ಆ ನಂಬಿಕೆಯನ್ನು ಜೀವಂತವಾಗಿರಿಸಬಲ್ಲುದು. ಆ ಶ್ರಧ್ಧೆಯ ಅಂಗಗಳೇ ಈ ಕೆಲವು ನಂಬಿಕೆಗಳು. ಯಾವುವು ನಮ್ಮ ಆತ್ಮಗೌರವಕ್ಕೆ ಧಕ್ಕೆ ತರದವುಗಳೋ ಅಂಥಹ ನಂಬಿಕೆಗಳನ್ನು ಗೌರವಿಸಬಹುದಲ್ಲವೆ? ಆ ಮೂಲಕ ನಮ್ಮ ಶ್ರಧ್ಧೆ ಗಟ್ಟಿಯಾಗಿ, ಅದರಿಂದ ನಮ್ಮ ಕಲ್ಪನೆ ದೃಢವಾಗಿ ಮತ್ತು ಆ ಕಲ್ಪನೆಯ ನಂಬಿಕೆಯ ಆಧಾರದ ಮೇಲೆ ಬದುಕು ಸುಲಭವಾಗುವುದಾದರೆ ಅಲ್ಲಿ ನಾವು ಆಧುನಿಕರು ಎಂದು ತೋರಿಸಿಕೊಳ್ಳಲಷ್ಟೇ ಬೇಕಾಗುವ ಪ್ರಶ್ನೆಗಳು ಬೇಕೆ?
ಈ ದೃಷ್ಟಿಕೋನವನ್ನು ಭ್ರಮೆಯಲ್ಲಿ ಬದುಕುವುದು ಎನ್ನುವವರಿದ್ದಾರೆ. ಅವರನ್ನು ನಾನೂ ಕೇಳುತ್ತೇನೆ- ಜಗತ್ತಿನಲ್ಲಿ ಈ ಭ್ರಮೆಯನ್ನುಳಿದು ಬೇರ್ಯಾವುವೂ ನಿಮಗೆದುರಾಗಿಲ್ಲವೆ? ಅಥವಾ ಎದುರಾದದ್ದೆಲ್ಲವನ್ನೂ ಪರಿಹರಿಸಿಕೊಂಡಿರುವಿರಾ? ಇದಲ್ಲದಿದ್ದರೆ ಅದು, ಅದಲ್ಲದಿದ್ದರೆ ಇನ್ನೊಂದು- ಹೀಗೆ ಹೆಜ್ಜೆ ಹೆಜ್ಜೆಗೂ ಕಂಡಿರದ ವಿಸ್ಮಯಗಳನ್ನು ನಮ್ಮೆದುರು ಪ್ರಸ್ತುತ ಪಡಿಸುವ ಪ್ರಕೃತಿಯಲ್ಲಿ ಒಂದು ಭ್ರಮೆ ಹರಿಯಿತೆನಿಸುವಷ್ಟರಲ್ಲಿ ಇನ್ನೂ ಹಲವು ಮುಂದೆ ಬಂದು ಕೂತಿರುತ್ತವೆ. ಹಾಗಾಗಿ ಇನ್ನಷ್ಟು ಗೋಜಲುಗಳನ್ನು ಸೃಷ್ಟಿಸುವ ಭ್ರಮೆಗಿಂತ ತಪ್ಪುಮಾಡಿಲ್ಲವೆಂಬ ಆತ್ಮವಿಶ್ವಾಸದತ್ತ ಕೊಂಡೊಯ್ಯುವ ಭ್ರಮೆಗಳು ಮೇಲಲ್ಲವೇ?
-ಅನುರಾಧ ಪಿ ಸಾಮಗ
ಆಪ್ತವಾಯ್ತು ಬರಹ.
ಯೋಚನೆಗೆ ಹಚ್ಚಬಹುದಾದ ವಿಚಾರಧಾರೆ ಅನಕ್ಕ. ಮನಸ್ಸಿಗೆ ಶಾಂತಿ ನೀಡಬಹುದಾದ, ಧನಾತ್ಮಕತೆಯನ್ನು ತುಂಬಬಹುದಾದ ನಂಬಿಕೆಗಳಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬ ತೀರ್ಮಾನ ಅಷ್ಟು ಸುಲಭವಲ್ಲದಿದ್ದರೂ ಪಾಲಿಸುವುದರಲ್ಲಿ ತಪ್ಪಿಲ್ಲ ಎಂಬ ನಿಮ್ಮ ವಿಚಾರಧಾರೆ ಒಪ್ಪಿತವೇ. ಆದರೆ ವೈಜ್ಞಾನಿಕ ನೆಲೆಗಟ್ಟುಗಳನ್ನು ನೆಚ್ಚಿಕೊಂಡು ಬೆಳೆದುಬಂದ ನನಗೆ ಅದು ಧನಾತ್ಮಕತೆಯನ್ನು ತುಂಬುತ್ತದೆ ಎಂದರೂ ಅರಗಿಸಿಕೊಳ್ಳುವುದು ಕಷ್ಟ. ಈ ವೈಜ್ಞಾನಿಕತೆ ನನ್ನಲ್ಲಿ ಅಂತಹ ಖಾಲಿತನವನ್ನು ತುಂಬಿದೆಯೋ ಏನೋ! ದೇವರ ಇರುವನ್ನೂ ಹಿಂದೊಮ್ಮೆ ಪ್ರಶ್ನಿಸಿದ್ದವನು ನಾನು! ಆಗಾಗ ಅಲ್ಲಾಡಲಿಲ್ಲ ಎಂದರೆ ಆ ತುಂಬದ ಕೊಡಕ್ಕೆ ಸಮಾಧಾನವಿಲ್ಲವೇನೋ! ನಮ್ಮಮ್ಮ ಈಗಲೂ ಎಲ್ಲಾ ಭಾರವನ್ನೂ ದೇವರ ಮೇಲೆ ಹಾಕುವಾಗ, 'ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಅಮ್ಮಾ, ನೀನು ಪ್ರಯತ್ನಿಸದ ಹೊರತು ಯಾವುದೂ ನಿನಗೆ ದೊರಕದು' ಎಂದು ಭಾಷಣ ಬಿಗಿಯುತ್ತೇನೆ. ಅದು ನನ್ನ ಯೋಚನಾಧಾಟಿಯ ನೆಲೆಗಟ್ಟು. ನಿಮ್ಮ ಲೇಖನ ಧನಾತ್ಮಕತೆಯನ್ನು ಪ್ರತಿಪಾದಿಸಿ ಮನಸ್ಸಿಗೆ ಆಪ್ತವೆನಿಸಿತು.
ಉತ್ತಮವಾದ ಬರಹ… ಅನುರಾಧ….
ಸುಖಾ ಸುಮ್ಮನೆ ಈ ಪ್ರಕೃತಿ ಕ್ರಿಯೆ ಬಗ್ಗೆ ಏನೆನೋ ಅಂದುಕೊಂಡಿರುವ ಇವತ್ತಿನ ನಮ್ಮ ಹಳ್ಳಿಗ ಮಹಿಳೆಯರಿಗೆ ನಿಮ್ಮ ಈ ಬರಹ ದಾರಿ ದೀಪವಾಗಲಿ. ಇವತ್ತಿಗೂ ನಮ್ಮ ಗ್ರಾಮೀಣ ಮಹಿಳೆಯರಲ್ಲಿ ಹಲವಾರು ತಪ್ಪು ಕಲ್ಪನೆಗಳು ಈ ಒಂದು ನೈಸರ್ಗಿಕ ಕ್ರಿಯೆಯ ಬಗ್ಗೆ ಉಂಟು. ನಾನು ವೈದ್ಯಕೀಯ ಜ್ಞಾನವನ್ನು ಉಪಯೋಗಿಸಿಕೊಂಡು ಚೂರು ಏನಾದರು ಬರೆಯಬೇಕೆಂದಿದ್ದೆ . ಆದರೆ, ನಿಮ್ಮ ಬರಹ ಆ ಕಾರ್ಯವನ್ನು ನೀಟಾಗಿ ನಿಭಾಯಿಸಿದೆ. ಚೆಂದದ ಬರಹ ಅಕ್ಕ…!!!
ಇಷ್ಟವಾಯ್ತು ಬರಹ!!
ಸೂಕ್ಷ್ಮ ವಿಚಾರಗಳು ಎನಿಸಿಕೊಂಡವನ್ನು ಮುಕ್ತವಾಗಿ ಚರ್ಚಿಸಿದ್ದೀರಿ. ಮಡಿತ್ವ ಮುಜುಗರಗಳಿಂದ ಇನ್ನಾದರೂ ದೂರವಾಗಿ ವೈಜ್ಞಾನಿಕ ದೃಷ್ಟಿಕೊನವನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶದ ನಿಮ್ಮ ಲೇಖನ ಚೆನ್ನಾಗಿದೆ. ಧನ್ಯವಾದಗಳು.