ಪಂಜು-ವಿಶೇಷ

ಇದು ಜೈಲು ಹಕ್ಕಿಗಳ ಮಾದರಿ ಕಾಯಕ: ಹನಿಯೂರು ಚಂದ್ರೇಗೌಡ

ಅತಿಕಡಿಮೆ ಬಂಡವಾಳ-ಹೆಚ್ಚು ಆದಾಯದ ಉದ್ಯೋಗ; ಹಂದಿಸಾಕಾಣಿಕೆ

      ಮನಸು ಮಾಡಿದರೆ ಏನು ಬೇಕಾದರೂ ಮಾಡಿ ತೋರಿಸಬಹುದೆನ್ನುವುದಕ್ಕೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಕೆಲಸ ಮಾದರಿಯಾಗಿದೆ. ಇತರ ಉದ್ಯೋಗಕ್ಕಾಗಿ ಅಲೆಯುವ ನಿರುದ್ಯೋಗಿ ಯುವಕರ ಪಾಲಿಗೆ ಇಲ್ಲಿನ ಕೈದಿಗಳು, “ಕೆಲಸ ತಮ್ಮ ಕೈಯಲ್ಲಿಯೇ ಇದೆ; ಆದರೆ, ಮನಸು ಮಾಡಬೇಕು” ಎಂಬುದನ್ನು ಬಂದಿಖಾನೆಯಲ್ಲಿ ಬಂಧಿಯಾಗಿದ್ದರೂ ಸ್ವತಃ ಹಂದಿಸಾಕುವ ಮೂಲಕ ಇಲಾಖೆಗೆ ಆದಾಯ ತಂದುಕೊಡುತ್ತಿದ್ದಾರೆ. ಆ ಮೂಲಕ ಪರಿಸ್ಥಿತಿ, ಸನ್ನಿವೇಶಕ್ಕೆ ಬಲಿಯಾಗಿ ಒಂದಿಲ್ಲೊಂದು ಅಪರಾಧವೆಸಗಿ ಜೈಲುಪಾಲಾಗಿರುವ ಇವರು, ತಮ್ಮ ಅನ್ನದಾತ ಮತ್ತು ಆಶ್ರಯದಾತ ಎನಿಸಿದ ಇಲಾಖೆ ಮತ್ತು ಸರ್ಕಾರಕ್ಕೆ ಉತ್ತಮ ಆದಾಯದ ಮೂಲವೊಂದನ್ನು ಒದಗಿಸಿಕೊಡುತ್ತಿದ್ದಾರೆ ಎನ್ನಬಹುದು. ಜೊತೆಗೆ, ತಮಗರಿವಿಲ್ಲದಂತೆಯೇ ನಿರುದ್ಯೋಗಿ ಯುವಜನತೆಗೆ, ಉತ್ತಮ ಸ್ವಉದ್ಯೋಗದ ಮಾದರಿಯೊಂದನ್ನು ತಿಳಿಸಿಕೊಟ್ಟಿದ್ದಾರೆ. 

ಹಂದಿಸಾಕಾಣಿಕೆ ಆರಂಭವಾದ ಬಗೆ…? 

      ಅದು 2005 ರ ಸಮಯ. ಆ ವರ್ಷದ ಸೆಪ್ಟೆಂಬರ್ 5 ನೇ ತಾರೀಕಿನಂದು ಆಗ ಈ ಕಾರಾಗೃಹದ ಜೈಲರ್ ಆಗಿದ್ದ (ಈಗ ದೇವನಹಳ್ಳಿಯ ಕೋರಮಂಗಲ ಬಯಲು ಬಂದೀಖಾನೆಯಲ್ಲಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಗಿದ್ದಾರೆ.) ಓಬಳೇಶಪ್ಪ ಅವರ ಕಾಳಜಿಯಿಂದ ಹೆಸರಘಟ್ಟದ ಫಾರಂನಿಂದ ವಿಶೇಷವಾದ "ಯಾರ್ಕ್"ತಳಿಯ 1 ಗಂಡು, 4 ಹೆಣ್ಣು ಸೇರಿ (3 ತಿಂಗಳಪ್ರಾಯದ) 5 ಹಂದಿಮರಿಗಳನ್ನು ತರಿಸಲಾಯಿತು. ಆ ಮರಿಗಳನ್ನು ನೋಡಿಕೊಳ್ಳುವ ಸಲುವಾಗಿ ಸ್ವಲ್ಪ ಪ್ರಾಣಿಗಳ ಬಗೆಗೆ ಆಸಕ್ತಿ ಹೊಂದಿರುವ ಮೂರು ಕೈದಿಗಳನ್ನು ನೇಮಿಸಲಾಯಿತು. ಜೈಲಿನ ಕೈದಿಗಳ ಎಂಜಲು ಹಾಗೂ ಉಳಿದು-ಬಳಿದ ಆಹಾರ ಪದಾರ್ಥವನ್ನೇ ಹಂದಿಗಳಿಗೆ ಆಹಾರವಾಗಿ ಕೊಡಲಾಯಿತು. ಜೈಲಿನ ಹೊರಾವರಣದಲ್ಲಿದ್ದ ಕೆರೆಯ ಭಾಗದಲ್ಲಿ "ವರಾಹ ಸಾಕಾಣಿಕಾ ಕೇಂದ್ರ" ಎನ್ನುವ ಹಂದಿಗೂಡೊಂದನ್ನು ನಿರ್ಮಿಸಿ, ಅವುಗಳ ಪೋಷಣೆಗೆ ಅನುವು ಮಾಡಿಕೊಡಲಾಯಿತು. 

      ಹೀಗೆ ಕೇವಲ 5 ಹಂದಿಗಳಿಂದ ಆರಂಭವಾದ ಹಂದಿಸಾಕಾಣಿಕೆ ಕಾಯಕ, 11 ದೊಡ್ಡಹಂದಿಗಳು, ಒಂದು ವರುಷದ 13 ಮರಿಗಳು, 8 ತಿಂಗಳ 18 ಮರಿಗಳು, 12 ಅರ್ಧ ವರ್ಷದ ಮರಿಗಳು, 3 ತಿಂಗಳ 10 ಮರಿಗಳು, 2 ತಿಂಗಳ 12 ಮರಿಗಳು ಹಾಗೂ ಮೂರು ವಾರದ 22 ಹಂದಿಮರಿಗಳು ಸೇರಿದಂತೆ ಇಂದು 100 ಕ್ಕೂ ಹೆಚ್ಚುಹಂದಿಗಳು ಸದ್ಯ ಗೂಡಲ್ಲಿವೆ.

ಹಂದಿಸಾಕಾಣಿಕೆಗೆ ಬೇಕಾದ ಗೂಡಿನ ನಿರ್ಮಾಣ, ಆರೈಕೆ ವಿಧಾನ

      ಹಂದಿಗಳ ಆರೈಕೆಯನ್ನು ಹೇಗೆ ಮಾಡುವಿರಿ, ಎಂದರೆ ಹಂದಿಗೂಡಿನ ಜವಾಬ್ದಾರಿ ಹೊತ್ತ ಮಂಡ್ಯದ ದೊಡ್ಡಮುಲಗೂಡಿನವರಾದ ಕೈದಿ ಶ್ರೀನಿವಾಸ್, ಹಂದಿಸಾಕಾಣಿಕೆಯ ಸಂಪೂರ್ಣ ವಿವರವನ್ನು ಹೇಳುವುದು ಹೀಗೆ, "ನೋಡಿ, ಸಾರ್. ಮದಲಿಂದ್ಲೂ ಹಂದಿ ಸಾಕೋದ್ರ ಬಗ್ಗೆ ನನಗೇನೂ ಅನುಭವ ಇರ್ಲಿಲ್ಲ. ಜೈಲಿಗೆ ಬಂದಾಗ ಅಧಿಕಾರಿಗಳು ನನ್ನ ತೋಟದಕೃಷಿ, ಹಸುಸಾಕುವ ಬಗೆಗಿನ ಆಸಕ್ತಿ ನೋಡಿ, ಇಲ್ಲಿಗೆ ಹಾಕಿದ್ರು. ಮೊದಮೊದ್ಲು ನನಗೆ ತೋಚಿದಂಗೆ, ಡಾಕ್ಟ್ರು ಹೇಳ್ದಂಗೆ ಹಂದಿ ಉಪಚಾರ ಮಾಡ್ತಿದ್ದೆ. ಅಮೇಲಾಮೇಲೆ ಹಂದಿ ಸಾಕಾಣಿಕೆಯ ಗುಟ್ಟು ತಿಳೀತಾ ಹೋಯ್ತು. ನನ್ನ ಇಸ್ಟೊರ್ಸುದ್ ಅನುಬವ್‍ದಲ್ಲಿ ಹೇಳೋದಾದ್ರೆ, ಹಂದಿಸಾಕೋದಕ್ಕೆ ಮುಖ್ಯವಾಗಿ ಶೀತವಾತಾವರಣ ಹೇಳಿ ಮಾಡ್ಸುದ್. ಬಿಸ್ಲು ಮತ್ತು ಬಿಸಿವಾತಾವರ್ಣ ಹಂದಿಗಳಿಗೆ ಒಗ್ಗದಿರೋ ಮಾತು. ಇದ್ರಿಂದ ಆದಷ್ಟು ಶೀತವಾದ, ಜೊತೆಗೆ ತೇವಾಂಶ ಇರೋ ಜಾಗ್ದಲ್ಲಿ ಹಂದಿಗೂಡು ಕಟ್ಟಿ, ಪೋಸ್ಣೆ ಮಾಡ್ಬೇಕು" ಎಂದು ಹಂದಿಸಾಕಾಣಿಕೆಯ ಒಳಹೊರಗನ್ನು ಬಹಳ ಅನುಭವಿ ತಜ್ಞರಂತೆ ವಿವರಿಸ್ತಾರೆ. 

ಗರ್ಭಧರಿಸುವಿಕೆ, ಆರೈಕೆ ಕ್ರಮ

      ಒಂದು ಹಂದಿಯು ಸರಾಸರಿಯಾಗಿ ತಾನು ಹುಟ್ಟಿದ 12 ರಿಂದ 14 ತಿಂಗಳಲ್ಲಿ ಗರ್ಭಧರಿಸುವ ಸಾಮಥ್ರ್ಯ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ, ಒಂದು ಹಂದಿಯು ಸರಾಸರಿಯಾಗಿ 8 ರಿಂದ 10 ಮರಿಗಳನ್ನು ಹಾಕುತ್ತದೆ. ಒಂದುವೇಳೆ ಆಹಾರವನ್ನು ಅತಿಯಾಗಿ ನೀಡಿದರೆ ಹಂದಿಗಳು ಕೊಬ್ಬುವ ಸಂಭವವಿರುವುದರಿಂದ, ಅಂತಹ ಹಂದಿಗಳು ಕೇವಲ 4 ರಿಂದ 5 ಮರಿಗಳಿಗಷ್ಟೆ ಜನ್ಮ ನೀಡಬಲ್ಲವು. ಆದುದರಿಂದ ಮಿತವಾದ ಆಹಾರ ನೀಡುವುದು ಒಳ್ಳೆಯದು. 

ಇದರಿಂದ ಹಂದಿಗಳು ಕೊಬ್ಬಿ ಹೆಚ್ಚು ತೂಗುವ ಮೂಲಕ ಲಾಭ ಸಿಗುತ್ತದೆ ಎನ್ನಿಸಿದರೂ ಅದು ಗರ್ಭಾವಸ್ಥೆಗೆ ಬಂದರೆ ಮರಿಗಳನ್ನು ಕಡಿಮೆ ಹಾಕುತ್ತದೆ. ಹೀಗಾಗಿ ಆದಷ್ಟು ಮಿತಾಹಾರ ನೀಡಿಕೆ ಅವಶ್ಯಕ ಎನ್ನುತ್ತಾರೆ ಕೈದಿ ಶ್ರೀನಿವಾಸ್.

ಅತಿ ಕಡಿಮೆ ಅವಧಿ-ಅತ್ಯಂತ ಲಾಭದಾಯಕ- ಝಣಝಣ ಹಣ:

      ಅತ್ಯಂತ ಲಾಭದಾಯಕವೆನಿಸಿರುವ ಹಂದಿಸಾಕಾಣಿಕೆ ಕಸುಬು ಅತಿ ಕಡಿಮೆ ಅವಧಿ ಯಲ್ಲಿ ಉತ್ತಮ ಆದಾಯ ತಂದುಕೊಡುವ ಕಸುಬಾಗಿದೆ. ವರ್ಷದಲ್ಲಿ ನಾಲ್ಕುಬಾರಿ ಮರಿಹಾಕುವ ಸಾಮಥ್ರ್ಯವುಳ್ಳ ಹಂದಿ ಸಾಕಾಣೆ ಒಂದು ಲಾಭದಾಯಕ ಕಸುಬಾಗಿದ್ದು, ಕಡಿಮೆ ಶ್ರಮ ಮತ್ತು ಕಡಿಮೆ ಖರ್ಚಿನ ಬಾಬತ್ತಾಗಿದೆ. ಏನಿಲ್ಲವೆಂದರೂ ಆರಂಭಿಸಿದ ಮೊದಲ ಒಂದು ವರ್ಷವನ್ನು ಹೊರತು ಪಡಿಸಿ, ಮುಂದಿನ 3 ತಿಂಗಳಲ್ಲಿ ಝಣಝಣ ಹಣವನ್ನೆಣಿಸಬಹುದು. ಇದಕ್ಕೆ ಬ್ಯಾಂಕುಗಳೂ ಸಹ ಹಣಕಾಸಿನ ನೆರವನ್ನು ಒದಗಿಸಿಕೊಡುವಲ್ಲಿ ಮುಂದೆ ಬರುತ್ತಿವೆ. 

ಆಹಾರಕ್ರಮ ಹೇಗೆ… ಎಂತು…..?

      ಸಾಮಾನ್ಯವಾಗಿ ಹಂದಿಸಾಕಾಣಿಕೆಗೆ ಬೇಕಾಗಿರೋದು ಸೂಕ್ತವಾದ ಆಹಾರ. ಅದರಲ್ಲೂ ಹೋಟೆಲ್ಲು, ಛತ್ರ, ಮನೆಯ ಉಳಿದು-ಬಳಿದ ಆಹಾರವು ಅವುಗಳ ಪಾಲಿಗೆ ಮೃಷ್ಟಾನ್ನ ಭೋಜನದಂತೆ. ಇಲ್ಲಿನ ಜೈಲಿನಲ್ಲಿ ತಿಂದುಂಡು ಉಳಿದ ಆಹಾರವೇ ರಾಶಿ-ರಾಶಿ ಸಿಗುವುದರಿಂದ ಇವುಗಳಿಗೆ ಆಹಾರದ ಕೊರತೆಯಿಲ್ಲ. ಬೇಕಾದಲ್ಲಿ ಹೋಟೆಲ್ಲುಗಳ ಟೀ/ಕಾಫಿ ಪುಡಿಯ ಗಷ್ಟ, ಅಳಿದುಳಿದ ಅನ್ನ-ಸಾಂಬಾರನ್ನು ತಂದು ಹಾಕಬಹುದು. ಇದನ್ನು ಹಂದಿಗಳು ಚಪ್ಪರಿಸಿ ತಿನ್ನುತ್ತವೆಯಾದ್ದರಿಂದ ಹಂದಿಪೋಷಣೆಗೆ ಹೇಳಿಮಾಡಿಸಿದ ಆಹಾರವಾಗಿದೆ. ಅದರ ಜೊತೆಗೆ ಇಂಡಿ ಮತ್ತು ಬೂಸ ಕೊಡಲಾಗುತ್ತದೆ. 

ಆಗತಾನೆ ಹಾಲುಬಿಡಿಸಿದ ಮರಿಗಳಿಗೆ ಮಾತ್ರ ಮುಸುಕಿನ ಜೋಳದ ಹಸಿರು ಹುಲ್ಲುಕಡ್ಡಿ, ಸೀಮೆಹುಲ್ಲು ಮುಖ್ಯವಾಗಿ ಬೇಕು. ತಾಯಿಹಂದಿಯ ದೇಹ ಮತ್ತು ಅದರ ಸದೃಢತೆಯ ಆಧಾರದ ಮೇಲೆ ಮರಿಗಳು ಹಾಲು ಕುಡಿಯುವುದನ್ನು ಬಿಡಿಸಲಾಗುತ್ತದೆ. ಅಂದರೆ, ಇದನ್ನು ತಾಯಿಹಂದಿಯು ಎಷ್ಟು ಪುಷ್ಟಿಯಿಂದಿದೆ ಎಂಬುದರ ಮೇಲೆ ನಿರ್ಧಾರ ಮಾಡಲಾಗುತ್ತದಂತೆ.

ಇನ್ನು ಹಂದಿಗಳಿಗೆ ಚಿಕಿತ್ಸೆ, ಔಷಧೋಪಚಾರದ ಮಾತು

      ಸಾಮಾನ್ಯವಾಗಿ ಹಂದಿಗಳಲ್ಲಿ ಅವು ಹುಟ್ಟಿದ ಸಂದರ್ಭ ಮತ್ತು ಸಣ್ಣಮರಿಗಳಿದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧೋಪಚಾರ ಮಾಡಿದರೆ ಅವು ಬೆಳೆದಂತೆ ಯಾವುದೇ ಕಾಯಿಲೆಗೆ ಈಡಾಗದೆ ಸ್ವಸ್ಥವಾಗಿರುತ್ತವೆ. ಇದರಿಂದ ಮತ್ತೆ ಅವು ಕಾಯಿಲೆಬೀಳದಂತೆ ತಡೆಯಬಹುದಲ್ಲದೆ ಮಾಡಲಾಗುವ ಚಿಕಿತ್ಸಾವೆಚ್ಚವೂ ಉಳಿಯುತ್ತದೆ ಮತ್ತು ಶ್ರಮವೂ, ಆಗುವ ನಷ್ಟವೂ ತಪ್ಪುತ್ತದೆ" ಎನ್ನುತ್ತಾರೆ ಮತ್ತೊಬ್ಬ ಖೈದಿ ತುಮಕೂರಿನ ವೆಂಕಟೇಶ್.

      ಇನ್ನು ಔಷಧೋಪಚಾರದ ವಿಚಾರಕ್ಕೆ ಬಂದರೆ, ಮರಿಗಳು ಜನಿಸಿದ ತಕ್ಷಣವೇ ಅಂದರೆ, ಹುಟ್ಟಿದ 21 ನೇ ದಿನಕ್ಕೆ ಜಂತುಹುಳು ನಿವಾರಕವೆನಿಸಿದ ಆಲ್ಬೆಂಡೋಜೆಲ್ ನೀಡಬೇಕು.ಅದರ ಜೊತೆಗೆ ಆಸ್ಟೋವೆಟ್ ಟಾನಿಕ್ ಕುಡಿಸಬೇಕು. ಹಂದಿಗಳನ್ನು ಹೆಚ್ಚು ಕಾಡುವ ಸಮಸ್ಯೆ ಎಂದರೆ, ಜ್ವರ. ಅದರ ಕುರಿತು ಸ್ವಲ್ಪ ಕಾಳಜಿ ವಹಿಸಿಬೇಕಾದುದರಿಂದ ಜ್ವರ ಬಂದಲ್ಲಿ ಪಶುವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಬೇಕು. ಇನ್ನುಳಿದಂತೆ ಎಲ್ಲಾ ಚಿಕಿತ್ಸೆಯು ನಮ್ಮದೇ ಅನುಭವದ ಮೇಲೆ ಕೊಡುತ್ತೇವೆ ಎನ್ನುತ್ತಾರೆ, ಸಾಕಾಣಿಕೆಯ ಜವಾಬ್ದಾರಿಯಲ್ಲಿ ಪಾಲುಹೊತ್ತ ವೃದ್ಧ ಕೈದಿ ವೆಂಕಟೇಗೌಡ.

ಹಂದಿಗಳು ಮತ್ತು ಗೂಡಿನ ಸ್ವಚ್ಛತೆ

      ಹಂದಿಸಾಕಾಣಿಕೆಯಲ್ಲಿ ಸ್ವಚ್ಛತೆ ಎಂಬುದು ಅತ್ಯಂತ ಮುಖ್ಯ ಅಂಶವಾಗಿದೆ. ಹಂದಿಗಳು ಸಾಮಾನ್ಯವಾಗಿ ಕೊಳಕಿನ ಮೇಲೆ ಬಿದ್ದು ಹೊದ್ದಾಡುವ ಗುಣಸ್ವಭಾವದವುಗಳಾದುದರಿಂದ ಅವುಗಳನ್ನು ದಿನಕ್ಕೆ ಮೂರು ಬಾರಿಯಾದರೂ ಸ್ವಚ್ಛಗೊಳಿಸಬೇಕು. ಅಂದರೆ, ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹಂದಿಗಳನ್ನು ಮತ್ತು ಗೂಡನ್ನು ನೀರಿನಿಂದ ತೊಳೆಯಬೇಕು. ಇದನ್ನು ಚಾಚೂ ತಪ್ಪದೆ ನಡೆಸಬೇಕು. ಹಾಗಿದ್ದಾಗ ಮಾತ್ರ ಹಂದಿಗಳ ಆರೋಗ್ಯ ಚೆನ್ನಾಗಿರುತ್ತದೆ.

ಉತ್ತಮ ಗೊಬ್ಬರದ ಮೂಲ

      ಹಂದಿಗಳ ಮಲ ಮತ್ತು ಮೂತ್ರವು ಉತ್ತಮ ಗೊಬ್ಬರವಾಗಿದ್ದು, ಅಲ್ಲದೆ ಪೌಷ್ಟಿಕಾಂಶಗಳ ಆಗರವಾಗಿರುವ ಕಾರಣ, ಅದಕ್ಕೆ ಭಾರಿ ಬೇಡಿಕೆಯಿದೆ. ಆದರೆ, ಜೈಲು ಸರ್ಕಾರದ ಅಧೀನ ಸಂಸ್ಥೆಯಾದ ಕಾರಣ, ಎಲ್ಲವೂ ಟೆಂಡರ್‍ನ್ನು ಆಧರಿಸಿರುವ ಕಾರಣಕ್ಕೆ ಆ ಗೊಬ್ಬರದ ಸಂಗ್ರಹಣೆಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಇದನ್ನು ತಮ್ಮ ಜೈಲಿನ ಆವರಣದಲ್ಲಿರುವ ತೋಟದ ಗಿಡಗಳಿಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ, ಹಂದಿಗೂಡು ಮತ್ತು ತೋಟದ ಉಸ್ತುವಾರಿ ಹೊತ್ತಿರುವ ಜೈಲಿನ ವಾರ್ಡನ್ ಸಂಗಮನಾಥ ಬಾಳಿಗಟ್ಟಿ. 

ಇಲಾಖೆಗೆ ಉತ್ತಮ ಆದಾಯದ ಮೂಲ; ಅಲ್ಲದೆ, ಇತರರಿಗೆ ಮಾದರಿ

      ಜೈಲಿನ ಕೈದಿಗಳಿಗೆ ಇದೊಂದು ಕಾಯಕವಾದರೆ ನಮ್ಮ ಇಲಾಖೆಗೊಂದು ಉತ್ತಮ ಆದಾಯದ ಮೂಲವಾಗಿದೆ ಎನ್ನುತ್ತಾರೆ ಜೈಲಿನ ಮುಖ್ಯ ಅಧೀಕ್ಷಕರಾದ ಎಚ್.ವಿ.ವೀರೇಂದ್ರ ಸಿಂಹ ಅವರು. "ನಮ್ಮ ಇಲಾಖೆಯ ಎಡಿಜಿಪಿ ಕೆ.ವಿ.ಗಗನ್‍ದೀಪ್ ಸಾಹೇಬರ ಸಲಹೆ ಮೇರೆಗೆ ನಮ್ಮಲ್ಲಿನ ಕೈದಿಗಳಿಗೆ ಉತ್ತಮ ಜೀವನ ಕೌಶಲಗಳನ್ನು ಕಲಿಸಿಕೊಡುವ ಕೆಲಸವಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಅದರಲ್ಲಿ ಈ ಹಂದಿಸಾಕಾಣಿಕೆಯೂ ಒಂದು. ಇದರಿಂದ ಈಗಿನ ಕೈದಿಗಳು ಶಿಕ್ಷೆಯಿಂದ ಮುಕ್ತರಾಗಿ ಹೊರಹೋದಮೇಲೆ ಮತ್ತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲೆಂಬ ಉದ್ದೇಶದಿಂದ ಇಂತಹ ಜೀವನ್ಮುಖಿ ಕಸುಬುಗಳನ್ನು ರೂಪಿಸಲಾಗಿದೆ. ಇದು ಅವರಿಗೆ ಅಷ್ಟೆ ಅಲ್ಲದೆ ನಮ್ಮ ಇಲಾಖೆಗೂ ಲಾಭದಾಯಕವಾಗಿದೆ.

ಈ ದಿಸೆಯಲ್ಲಿ ನಮ್ಮ ಈ ಹಂದಿಸಾಕಾಣಿಕೆಯಿಂದ ವರ್ಷಕ್ಕೆ ಏನಿಲ್ಲವೆಂದರೂ 3 ರಿಂದ 4 ಸಲ ಕೊಟೇಷನ್ ಪಡೆದು ಹರಾಜು ಪ್ರಕ್ರಿಯೆ ಮೂಲಕ ಲಕ್ಷಗಟ್ಟಳೆ ಆದಾಯ ಸಿಗುತ್ತಿದೆ. ಇದಕ್ಕೆ ಕಾರಣರಾದ ಹಂದಿಸಾಕಾಣಿಕೆಯ ಜವಾಬ್ದಾರಿ ಹೊತ್ತ ನಮ್ಮ ಕೈದಿಗಳಾದ ಶ್ರೀನಿವಾಸ್, ವೆಂಕಟೇಶ್, ವೆಂಕಟೇಗೌಡ ಮತ್ತಿತರ ಕೈದಿಗಳು ಹಾಗೂ ಜೈಲಿನ ಸಹಾಯಕ ಅಧೀಕ್ಷಕ ಐ.ಎಸ್.ಸೀಮಿಮಠ್ ಮತ್ತಿತರೆ ಅಧಿಕಾರಿಗಳ ಸೇವೆ ಶ್ಲಾಘನೀಯವಾಗಿದೆ. ಅಲ್ಲದೆ, ಇಂತಹ ಪ್ರಯತ್ನಗಳು ಇತರೆ ನಿರುದ್ಯೋಗಿ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಲು ಮಾದರಿಯಾಗಿವೆ" ಎನ್ನುತ್ತಾರೆ ವೀರೇಂದ್ರ ಸಿಂಹ. 

         ಒಟ್ಟಿನಲ್ಲಿ ಜೈಲಿನ ಬಂಧಿಗಳಾಗಿದ್ದರೂ ಉತ್ತಮ ನಡತೆ ಹಾಗೂ ಸ್ವಭಾವಗಳಿಂದ ಜೈಲಿನ ಅಧಿಕಾರಿಗಳಿಂದ ಒಳ್ಖೆಯ ಹೆಸರನ್ನು ಪಡೆದುಕೊಂಡಿರುವ ಈ ಮೂವರ ಕೈದಿಗಳ ಹಂದಿಸಾಕಾಣಿಕೆ ಕಾರ್ಯ ಇತರರಿಗೂ ಮಾದರಿಯಾಗಿದೆ. ಇನ್ನೇನು ಜೈಲಿನಿಂದ ಸನ್ನಡತೆಯ ಆಧಾರದಲ್ಲಿ ಬಂಧಮುಕ್ತಗೊಳ್ಳುವ ನಿರೀಕ್ಷೆಯಲ್ಲಿರುವ ಇವರು, ಹೊರಬಂದ ಮೇಲೆ ಈಗಿರುವ ಅನುಭವವನ್ನು ಹಂದಿಸಾಕಾಣಿಕೆ ಮಾಡುವುದಕ್ಕೆ ಮೀಸಲಿಟ್ಟು, ತಮ್ಮ ಜೀವನ ರೂಪಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಅದೇನೆ ಇರಲಿ, ಅತಿ ಕಡಿಮೆ ಬಂಡವಾಳ, ಶ್ರಮ, ಖರ್ಚನ್ನು ಬಯಸುವ ಈ ಕಸುಬು, ಉತ್ತಮ ಆದಾಯ ತಂದುಕೊಡುವ ಉದ್ಯೋಗವೇ ಸರಿ. ಇದು ಉದ್ಯೋಗಕ್ಕೆ ಕೃಷಿಭೂಮಿಗಳನ್ನು ಹಾಳುಹಂಪೆಯನ್ನಾಗಿಸಿ, ನಗರದತ್ತ ಮುಖಮಾಡುತ್ತಿರುವ ನಿರುದ್ಯೋಗಿ ಯುವಕರ ಪಾಲಿಗೆ ಸಂಜೀವಿನಿಯಾಗಿದೆ.  

     *****

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಇದು ಜೈಲು ಹಕ್ಕಿಗಳ ಮಾದರಿ ಕಾಯಕ: ಹನಿಯೂರು ಚಂದ್ರೇಗೌಡ

Leave a Reply

Your email address will not be published. Required fields are marked *