ನಮ್ಮ ಮನೆಗೇ ಕಂಪ್ಯೂಟರ್ ಬರುವವರೆಗೆ ಕಂಪ್ಯೂಟರ್ ಎಂಬುದನ್ನು ಅತೀ ಸಮೀಪದಲ್ಲಿ ನೋಡಿಯೇ ಗೊತ್ತಿರಲಿಲ್ಲ. ಮನೆಗೆ ಕಾಲಿಟ್ಟ ಹೊಸದರಲ್ಲಿ ಅದನ್ನು ಮುಟ್ಟಿದರೆ ಎಲ್ಲಿ ಹೊಗೆ ಏಳುವುದೋ, ಎಲ್ಲಿ ಬಾಂಬ್ ಬ್ಲಾಸ್ಟ್ ಆಗುವುದೋ ಎನ್ನುವಷ್ಟು ಭಯ. ಮಗ ಅದರ ಕೀ ಪ್ಯಾಡನ್ನು ಟಕ ಟಕನೆ ಒತ್ತಿದೊಡನೆ ‘ಕುಲ್ ಜಾ ಸಿಮ್ ಸಿಮ್’ ಎಂದು ಹೇಳಿದಂತಾಗಿ ಹೊಸ ಲೋಕದ ಬಾಗಿಲು ತೆರೆದುಕೊಳ್ಳುವುದನ್ನು ಸುಮ್ಮನೆ ಕುಳಿತು ನೋಡುವುದೇ ಸಂಭ್ರಮ.
ಕೆಲವು ದಿನಗಳಲ್ಲಿ ಎದುರಿನ ಕುರ್ಚಿಯ ಮೇಲೆ ಕುಳಿತು ಮೆಲ್ಲನೆ ಅದರೊಂದಿಗೆ ಕುಶಲೋಪರಿ ನಡೆಸುವಷ್ಟು ಧೈರ್ಯ ಬಂದಿತು. ಮಗನ ಮೇಲುಸ್ತುವಾರಿಯಲ್ಲಿ ಆರ್ಕುಟ್ ನಲ್ಲಿ ಅಕೌಂಟ್ ತೆರೆದೆ. ಮತ್ತೆ ಫೇಸ್ ಬುಕ್ಕಿನಲ್ಲೂ.. ಬಹುಶಃ ಕೋಟಿಗಟ್ಟೆಲೆ ಹಣ ಹಾಕಿ ಬ್ಯಾಂಕ್ ಎಕೌಂಟ್ ತೆರೆದರೂ ಅಷ್ಟು ಸಂತಸ ಪಡುತ್ತಿರಲಿಲ್ಲವೇನೋ..ಅಪರಿಚಿತ ಊರಿನೊಳಗೆ ಅಂಜುತ್ತಾ ಕಾಲಿಟ್ಟಂತೆ..ಮೊದ ಮೊದಲು ಅವರಿವರೇನು ಮಾಡ್ತಾರೆ ಅಂತ ನೋಡುವುದು ಮಾತ್ರ .. ಹೊಸ ಎಂಟ್ರಿ ಆದ ಕಾರಣ ಎಲ್ಲರೂ ಗುರುಗಳಂತೆ ಕಾಣುತ್ತಿದ್ದರು. ನಾನು ಏಕಲವ್ಯನಂತೆ ಕಲಿಯುತ್ತಾ ಹೋದೆ.
ಬರೀ ಎಕೌಂಟ್ ತೆರೆದರಾಯಿತೇ.. ಹಣಬಲ ಅಲ್ಲಲ್ಲ..ಜನಬಲ ಬೇಡವೇ.ಅದರಲ್ಲೂ ಹೆಣ್ಣಾಗಿ ಕೇವಲ ಒಂದೆರಡು ಗೆಳೆಯ ಗೆಳತಿಯರಷ್ಟೇ ಇರುವುದು ಎಂದರೆ ಅವಮಾನದ ಪರಮಾವಧಿಯಲ್ಲವೇ?
ಬೆಳೆದ ಮಗನನ್ನು ಗೆಳೆಯನಂತೆ ನೋಡಬೇಕಂತೆ..ಅವನೇನೂ ಗೆಳೆಯನಾಗುವಷ್ಟು ಬೆಳೆದಿರದಿದ್ದರೂ ಮಗನಿಗೇ ರಿಕ್ವೆಸ್ಟ್ ಕಳ್ಸಿದೆ. ಕೆಲವು ದಿನ ಬಿಟ್ಟು ಅಕ್ಸೆಪ್ಟ್ ಮಾಡ್ತೀನಿ ಅಂತ ಪೆಂಡಿಂಗಿನಲ್ಲಿಟ್ಟ. ಮತ್ತುಳಿದಿದ್ದು ಪತಿರಾಯರು. ಅವರೂ ಗೆಳೆತನದ ಪರಿಧಿಗೆ ಸೇರಿದರು. ನಂತರ ಅಲ್ಲಿ ಕಾಣಿಸಿಕೊಳ್ಳುತ್ತಿದ್ದ ಅತ್ತಿಗೆ ನಾಧಿನಿ, ಅಕ್ಕ ತಂಗಿ, ಸೊಸೆ ಅಳಿಯ ಮಾವ ಮೈದುನ ಅಣ್ಣ ತಮ್ಮ ಅತ್ತೆ ಎಂಬ ಹತ್ತಿರದ, ದೂರದೂರದ ನೆಂಟರಿಷ್ಟರನ್ನು ಫ್ರೆಂಡ್ಸ್ ಅನ್ನುವ ಒಂದೇ ಡಬ್ಬಿಯೊಳಗೆ ತುಂಬಿಟ್ಟೆ.
ಹತ್ತಿರ ಹತ್ತಿರ ಸಾವಿರದಂಚಿಗೆ ಗೆಳೆಯರ ಗುಂಪು ಬೆಳೆದು ನಿಂತಾಗ ಮನಸ್ಸಿಗೆ ನೆಮ್ಮದಿ.
ಇಷ್ಟಾದರೆ ಸಾಕೆ.. ನಮ್ಮನೆಲೇನಾಗಿದೆ ನಿಮ್ಮನೇಲೇನಾಗ್ತಿದೆ ಅಂತ ತಿಳಿದುಕೊಳ್ಳೋಕೆ ಫೋಟೋ ಗಳು ಬೇಡ್ವಾ.. ಅದಕ್ಕೆ ಕಮೆಂಟುಗಳು ಲೈಕ್ ಗಳ ಸಂಖ್ಯೆ ಹೆಚ್ಚಾದಷ್ಟು ಎವರೆಸ್ಟ್ (ಕಾಲಳತೆಯೂ ಆಗಬಹುದು) ಕೈಯಳೆಗೆ ಸಿಕ್ಕಿದ ಸಂಭ್ರಮ.
ಗೆಳೆಯ ಗೆಳತಿಯರ ಹತ್ತಿರ ಮಾತನಾಡುವಾಗಲೂ ಎಫ್ ಬಿ, ಆರ್ಕುಟ್ ಗಳ ಸುದ್ಧಿಯೇ.. ಒಮ್ಮೆ ಅದು ಹೇಗೋ ಎಲ್ಲಾ ಆರ್ಕುಟ್ ಅಕೌಂಟ್ ಗೆ ಒಂದು ಬಾಮ್ ಸಬಾಡೋ ಅನ್ನುವ ವೈರಸ್ ದಾಳಿ ಮಾಡಿತ್ತು. ಆಗಂತೂ ಇದ್ದವರಿಗೆಲ್ಲಾ ಫೋನ್ ಮಾಡಿ ಮಾಡಿ ನಿಮ್ಮ ಮನೆಯಲ್ಲೆಲ್ಲಾ ಕ್ಷೇಮವೇ ಅಂತ ಕೇಳುವ ಹಾಗೆ ನಿನ್ನ ಆರ್ಕುಟ್ ಎಕೌಂಟ್ ಕ್ಷೇಮವೇ? ಅಂತ ಕೇಳಿದ್ದೇ ಕೇಳಿದ್ದು.
ಆ ದಿನ ಎಂದಿನಂತೆ ಕಾವಲಿ ಇಟ್ಟು ಚುಂಯ್ ಎಂದು ನೀರು ದೋಸೆ ಹುಯ್ದಿದ್ದೆ.. ತಿನ್ನುವ ಮೊದಲೊಮ್ಮೆ ಫೋಟೋ ತೆಗೆದು ಗೋಡೆಗಂಟಿಸಿದೆ. ಅರ್ರೇ.. ಸ್ವಲ್ಪ ಹೊತ್ತು ಬಿಟ್ಟು ನೋಡ್ತೀನಿ ಎಲ್ಲರ ಬಾಯಲ್ಲೂ ನೀರು..ಎಲ್ಲಾ ಕಡೆಯಿಂದ ಜಯಘೋಷ ಮೊಳಗುತ್ತಿತ್ತು. ಅರ್ರೇ.. ಇಷ್ಟು ವರ್ಷದಿಂದ ಮನೆ ಮಂದಿಗೆಲ್ಲಾ ನೀರು ದೋಸೆ ಮಾಡಿ ಹಾಕ್ತಿದ್ದೀನಿ ಒಂದು ದಿನಾ ಆದ್ರೂ ಒಬ್ರು ಹೊಗಳಿದ್ರೆ ಕೇಳಿ. ಮನೆ ಕೆಲಸ ಎಲ್ಲಾ ಅರ್ಧಂಬರ್ಧ ಮುಗಿಸಿ ಎಫ್ ತೆರೆದಿಟ್ಟು ಹೊಗಳಿಕೆಗಲನ್ನು ಅಸ್ವಾದಿಸುತ್ತಾ ಕುಳಿತೆ. ಅದರಲ್ಲಿ ನೀರು ದೋಸೆ ತಿನ್ನಲಿಕ್ಕೆ ನಿಮ್ಮಮನೆಗೆ ಬರ್ತೀವಿ ಅಂದೋರ ಸಂಖ್ಯೆ ಕಡೆ ಗಮನ ಕೊಟ್ಟಾಗ ತಲೆ ತಿರುಗಿತು. ಬರೋಬ್ಬರಿ ಮುನ್ನೂರು ಜನ ನಮ್ಮನೆಗೆ ಬರುವವರಿದ್ದರು.. ಅಯ್ಯೋ ಇಷ್ಟೆಲ್ಲಾ ಜನ ಬಂದ್ರೆ ಎಷ್ಟು ಸೇರು ಅಕ್ಕಿ ಹಾಕಬೇಕಪ್ಪಾ ಎಂಬ ಭಯದಲ್ಲಿ ಕೈ ಕಾಲು ಜಲಧರಿಸಿತು.
ಮತ್ತೊಮ್ಮೆ ಮೈಸೂರ್ ಪಾಕ್ ಮಾಡಿದ್ದೆ. ತುಂಬಾ ರುಚಿಯಾಗಿತ್ತು. ಅದು ನನಗೆ ಮಾತ್ರ ಗೊತ್ತಾದರೆ ಸಾಲದು ಅಂತ ಫೋಟೋ ತೆಗೆದು ಫೇಸ್ ಬುಕ್ಕಿಗೆ ಹಾಕಿದ್ದೆ. ಅದಾಗಿ ಒಂದೋ ಒಂದೂವರೆಯೋ ತಿಂಗಳು ಕಳೆದ ನಂತರ ನನ್ನ ಗೆಳತಿಯೊಬ್ಬಳು ಮನೆಗೆ ಬಂದಿದ್ದಳು. ಅವಳಿಗೆ ತಟ್ಟೆಯಲ್ಲಿ ಮುನ್ನಾದಿನ ಮಾಡಿದ್ದ ಮೈಸೂರ್ ಪಾಕ್ ಕೊಟ್ಟು ಉಪಚರಿಸಿದೆ. ಯಾಕೋ ಅದನ್ನು ತಿನ್ನಲು ಹಿಂದೇಟು ಹಾಕಿದವಳಂತೆ ಕಂಡಳು. ನಾನು ಬಿಡಬೇಕಲ್ಲ.. ಒತ್ತಾಯ ಮಾಡಿ ಒಂದು ತುಂಡಾದ್ರು ತಿನ್ನು ಮಾರಾಯ್ತಿ. ನಾನು ಎಫ್ ಬಿ ಗೆ ಇದರ ಫೋಟೋ ಹಾಕಿದಾಗ ಎಷ್ಟು ಕಮೆಂಟ್ ಲೈಕ್ ಗಳು ಬರುತ್ತೆ ಗೊತ್ತಾ ಎಂಬ ಕೊಚ್ಚಿಕೊಂಡೆ. ಅದಕ್ಕವಳು ನೋಡೇ ನಿನಗೇನೋ ಲೈಕ್ ಕಮೆಂಟ್ ಹೆಚ್ಚು ಬಂದಿದೆ ಅಂತ ಒಂದು ತಿಂಗಳಿಗೂ ಮೊದಲು ಮಾಡಿದ್ದ ತಿಂಡಿಯನ್ನು ನಾನೀಗ ತಿನ್ನೋಕ್ಕಾಗುತ್ತೇನೇ ಎಂದು ಕಣ್ಣು ದೊಡ್ಡದು ಮಾಡಿದಳು. ಕೊನೆಗೆ ನಾನೇ ಒಂದು ತುಂಡು ಅವಳೆದುರು ತಿಂದು ಇದು ನಿನ್ನೆ ಮಾಡಿದ್ದು ಎಂಬುದನ್ನು ಒತ್ತಿ ಒತ್ತಿ ಹೇಳಿ ಅವಳೂ ಅದನ್ನು ಬಾಯಿಗಿಟ್ಟು ನಾವಿಬ್ಬರೂ ಸೇರಿ ಸೆಲ್ಫಿ ತೆಗೆದು ಎಫ್ ಬಿ ಗೆ ಏರಿಸುವಲ್ಲಿಗೆ ಪ್ರಕರಣ ಮುಕ್ತಾಯವಾಯಿತು.
ಅದೇನೋ ಮಹಾತ್ಮೆಯೋ ಗೊತ್ತಿಲ್ಲ. ಬೆಳಗ್ಗೆದ್ದು ಹಲ್ಲುಜ್ಜುವಾಗ ಪೇಸ್ಟ್ ಖಾಲಿಯಾದ ಸುದ್ಧಿಯಿಂದ ಹಿಡಿದು ರಾತ್ರೆ ಊಟ ಮುಗಿಸಿ ಮಲಗುವಾಗ ಗೋಡೆಯಲ್ಲಿ ಹಲ್ಲಿ ಲೊಚಗುಟ್ಟುವ ಸುದ್ದಿಯವರೆಗಿನ ಎಲ್ಲವನ್ನೂ ಎಫ್ ಬಿ ಗೆ ಹಾಕಿ ಅವರಿವರ ಸಾಂತ್ವನವನ್ನು ನೋಡಿದರಷ್ಟೇ ಬಾಳು ಸುಗಮ ಎನ್ನಿಸತೊಡಗಿದಾಗ ಸ್ವಲ್ಪ ಕಂಟ್ರೋಲ್ ಮಾಡ್ಬೇಕು ಅಂತ ಕೆಲ ದಿನ ಏನೂ ಪೋಸ್ಟುಗಳನ್ನು ಹಾಕದೆ ಸುಮ್ಮನೇ ಉಳಿದಿದ್ದೆ.
ಆ ದಿನ ಬೆಳಗ್ಗೆ ಬೆಳಗ್ಗೆಯೇ ಸ್ವಲ್ಪ ದೂರದ ನೆಂಟರೊಬ್ಬರ ಫೋನ್ ಬಂದಿತ್ತು. ನಿಮ್ಮೂರಿನ ಕಡೆ ಬರ್ತಾ ಇದ್ದೇವೆ. ನಿಮ್ಮ ಮನೆಗೂ ಒಂದು ಸಣ್ಣ ಭೇಟಿ ನೀಡುವ ಆಲೋಚನೆ.. ಇರ್ತೀರಲ್ವಾ ಎಂದು ಕೇಳಿದ್ದರು. ಅವರಿಗೆ ಬರುವಂತೆ ಆಹ್ವಾನ ನೀಡಿ ತಿಂಡಿ ತೀರ್ಥಾದಿಯಗಳ ತಯಾರಿ ನಡೆಸಿದ್ದೆ. ಬಂದಾಯ್ತು ಸುಖ ದುಃಖದ ಮಾತುಕತೆಗಳಾಯ್ತು. ಈಗ ಕಾಫೀ ಹೀರುವ ಸಮಯ ಎಂದು ಅವರನ್ನು ಕರೆತಂದು ತಟ್ಟೆಯೆದುರು ಕೂರಿಸಿದೆ. ಕೊಟ್ಟಿದ್ದನ್ನೆಲ್ಲಾ ತಿಂದರು. ಎಲ್ಲವೂ ರುಚಿಕರವಾಗಿತ್ತೆಂದು ಅವರ ಮುಖಭಾವ ಹೇಳಿದರೂ ಬಾಯಲ್ಲಿ ಒಂದೂ ಮೆಚ್ಚಿಗೆಯ ಮಾತಿಲ್ಲ.. ಇದು ನಮ್ಮ ಪ್ರಚಾರ ನಾವೇ ಮಾಡಿಕೊಳ್ಳುವ ಯುಗ ತಾನೇ.. ಹಾಗಾಗಿ ನಾನೇ ಬಾಯಿಬಿಟ್ಟು “ ಎಲ್ಲಾ ಹೇಗಾಗಿದೆಯೋ ಗೊತ್ತಿಲ್ಲ.. ನಿಮಗೆ ಹಿಡಿಸಿತು ಅಂದ್ಕೊಳ್ತೇನೆ” ಎಂದೆ.
“ ಅಯ್ಯೋ.. ಪೇಟೆ ತಿಂಡಿಗಳೆಲ್ಲಾ ಯಾರು ಮಾಡಿದ್ದೋ ಏನೋ ರುಚಿ ಚೆನ್ನಾಗಿರುತ್ತೆ.. ತರುವಾಗ ಫ್ರೆಶ್ ಆಗಿರೋದನ್ನು ಆಯ್ಕೆ ಮಾಡೋದೆ ಕಷ್ಟ ಅಷ್ಟೇ.. ಇದೆಲ್ಲಾ ಚೆನ್ನಾಗಿತ್ತು. ಮನೇಲೇ ಮಾಡಿದಷ್ಟು ರುಚಿಯಾಗಿತ್ತು. ಏನು ಇಲ್ಲೇ ಎಲ್ಲಾದ್ರೂ ಹತ್ತಿರದಲ್ಲಿ ಮನೆಯಲ್ಲಿ ಮಾಡಿ ಮಾರಾಟ ಮಾಡುವವರು ಇದ್ದಾರಾ ಹೇಗೆ ? ಎಲ್ಲವೂ ಫ್ರೆಶ್ ಆಗಿತ್ತು” ಅಂದ್ರು.
ನಾವು ಹೊರಗಡೆಯಿಮ್ದ ತಿಂಡಿಗಳನ್ನು ತರೋದು ಕಡಿಮೆ. ಹೆಚ್ಚಾಗಿ ಮನೆಯಲ್ಲೇ ತಯಾರು ಮಾಡ್ತೇವೆ. ಇವ್ಳು ಎಲ್ಲಾ ಹೊಸ ಹಳೇ ರುಚಿಗಳನ್ನು ಮಾಡ್ತಾಳೆ ಎಂದು ನನ್ನತ್ತೆ ನನಗೆ ಸಾಥ್ ನೀಡಿದರು. ಅವರು ಅಚ್ಚರಿಯಿಂದ ಕಣ್ಣುಗಳನ್ನು ಮೇಲೆತ್ತಿ “ಇದೆಲ್ಲಾ ನೀವೇ ಮಾಡಿದ್ದಾ.. ನಂಬೋದು ಕಷ್ಟ.. ಯಾಕಂದ್ರೆ ಎಫ್ ಬಿ ಯಲ್ಲಿ ನೀವು ಫೋಟೋ ಹಾಕೇ ಇಲ್ಲ..”ಎನ್ನಬೇಕೆ?
ಇದೀಗ ನನ್ನ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಫೋಟೋ ಹಾಕಿ ಪ್ರಚಾರ ಮಾಡಿದರೂ ಕಷ್ಟ ಮಾಡದಿದ್ದರೂ ನಷ್ಟ ..
ಈ ಸಮಸ್ಯೆಗೆ ಪರಿಹಾರವನ್ನು ಬಲ್ಲವರಿಂದ ಅಪೇಕ್ಷಿಸುತ್ತಾ ಇದನ್ನೂ ಎಫ್ ಬಿಯಲ್ಲಿ ಅಪ್ ಲೋಡಿಸುತ್ತೇನೆ
ಅನಿತಾ ನರೇಶ್ ಮಂಚಿ
*****
ಏನೇ ಹೇಳಿ FB ಯಲ್ಲಿರುವ ಕೆಲವು ಋಣಾತ್ಮಕ ಅಂಶಗಳಲ್ಲಿ ಇದೂ ಒಂದು. ಏಕತಾನತೆಯ ಜೀವನದಿಂದ ಕೊಂಚ ವಿರಾಮ. FB ಯನ್ನು ಮಿತವಾಗಿ , ಕ್ರಮಬದ್ಧವಾಗಿ ಬಳಸಿದರೆ ನಮಗೆ ಹೆಚ್ಚು ಹೆಚ್ಚು ಅನುಕೂಲ. ಒಳ್ಳೆಯ ಬರಹ.