ಅನಿ ಹನಿ

ಇದೀಗ ನಮ್ಮದೇ ಕಥೆ .. : ಅನಿತಾ ನರೇಶ್ ಮಂಚಿ


                                  

ಒಲೆಯ ಮೇಲೆ ಹಾಲು ಬಿಸಿಯಾಗುತ್ತಿತ್ತು.

ಪಕ್ಕದ ಒಲೆಯಲ್ಲಿ ಸಿಡಿಯುತ್ತಿದ್ದ ಒಗ್ಗರಣೆಯಿಂದ  ಸಾಸಿವೆ ಕಾಳೊಂದು ಟಪ್ಪನೆ  ಸಿಡಿದು  ಹಾಲಿನ ಪಾತ್ರೆಯೊಳಗೆ ಬಿದ್ದಿತು.. 
ನೆಂಟರು ಬರುತ್ತಾರೆಂದೇ ಹೆಚ್ಚು ಹಾಲು ತರಿಸಿದ್ದೆ. ಒಗ್ಗರಣೆಯ ಸಾಸಿವೆಯಿಂದಾಗಿ ಬಿಸಿ ಹಾಲು ಒಡೆದರೆ.. 

ಚಮಚದಿಂದ ಮೆಲ್ಲನೆ ತೆಗೆಯೋಣ ಎಂದುಕೊಂಡೆ. ಸ್ವಲ್ಪ ಮೊದಲಷ್ಟೇ ಅದೇ ಚಮಚದಲ್ಲಿ ನಿಂಬೆಹಣ್ಣಿನ ಶರಬತ್ತಿನಲ್ಲಿದ್ದ ಬೀಜಗಳನ್ನು ಎತ್ತಿ ಬಿಸುಡಿದ್ದೆ. 
ಹೇಗೆ ಹೇಳುವುದು ಸ್ವಲ್ಪ  ಹುಳಿ ಅಂಶ ಉಳಿದಿದ್ದರೂ ಸಾಕಲ್ಲ..ಹಾಲು ಹಾಳಾಗಲು..

ಅಯ್ಯೋ.. ಹುಳಿ ಅಂಶ ಎಂದೊಡನೆಯೇ ನೆನಪಾಯಿತು. ಈ ಸಾಸಿವೆಯಲ್ಲೂ ಅದಿದ್ದರೆ.. ಸಾಸಿವೆಯೇನೂ ಹುಳಿ ಇರುವುದಿಲ್ಲ ನನಗೂ ಗೊತ್ತು.. ಆದರೂ.. ಅದರ ಹಿನ್ನೆಲೆ ಅದು ಬೆಳೆದ ಪರಿಸರ ಎಲ್ಲಾ ಹೇಗಿರುತ್ತದೆಯೇನೋ.. 

 ರೂಮು ಸೇರಿ ಕಂಪ್ಯೂಟರ್  ಆನ್ ಮಾಡಿ ಗೂಗಲಿಸಿದೆ. ಸಾಸಿವೆ ಬೆಳೆಯುವುದು ಪಂಜಾಬಿನಲ್ಲಂತೆ.. ಹಾಗಿದ್ದರೆ ನನ್ನ ಇಷ್ಟೂ ಹಾಲು ಹಾಳಾದಂತೆ.. ಪಂಜಾಬಿನವರು ಲಸ್ಸಿ ಕುಡಿಯುವುದರಲ್ಲಿ ಎತ್ತಿದ ಕೈ ಎಂದು ಕೇಳಿ ಬಲ್ಲೆ..ಅಲ್ಲಿ ಯಾರೋ  ಆಗಷ್ಟೇ ಲಸ್ಸಿ ಕುಡಿದು ಮೀಸೆಯೊರಸಿಕೊಂಡು ಸಾಸಿವೆಯನ್ನು ಗೋಣಿಗೆ ತುಂಬಿದ್ದರೆ.. ಹೋಯಿತಲ್ಲಾ.. ಇಷ್ಟು ಹಾಲು ಹಾಳಾಗಿಬಿಟ್ಟಿತಿನ್ನು..ನೆಂಟರು ಬಂದಾಗ ಕಾಫಿ ಮಾಡೋದು ಹೇಗಿನ್ನು.. 

ಆಪತ್ಕಾಲಕ್ಕೆ ಸ್ನೇಹಿತರೇ ನೆನಪಾಗುವುದು . ಗೆಳತಿಗೆ  ಫೋನ್ ಮಾಡಿದೆ .. ಇನ್ನಷ್ಟು ಗಾಭರಿಗೊಳಿಸಿದಳು. ಸಾಸಿವೆಯಿಂದಾಗಿ  ಹಾಲಿನ ಗುಣ ಲಕ್ಷಣಗಳು ಮರೆಯಾಗುವುದಂತೆ..
 ಅಂದರೆ ಕಾಫಿಯೋ ಚಹಾವೋ ಮಾಡಿದರೂ ಒಗ್ಗರಣೆ ಹಾಕಿದ ರುಚಿ ಬಂದರೆ.. 
ನೆಂಟರೆಲ್ಲಾ ನನಗೆ ಏನೂ ಮಾಡಲು ಬರುವುದಿಲ್ಲ ಎಂದು ಆಡಿಕೊಳ್ಳಲಾರರೇ..
 ಫೇಸ್ ಬುಕ್ಕಿನಲ್ಲಿ ನನ್ನ ಸಮಸ್ಯೆ ತಿಳಿಸಿದೆ.ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಸಾಸಿವೆಯ ಹೂವಿಗೆ ಬಿಡುವ ರಾಸಾಯನಿಕ ಔಷಧಿ ಹಾಲಿನೊಳಗೆ ಸೇರಿದರೆ ಹಾಲಾಹಲವಾಗುವುದಂತೆ.
 
ಇನ್ನೇನು ಮಾಡೋದಪ್ಪಾ.. ಬೇರೆ ಹಾಲು ತರಿಸಬೇಕಷ್ಟೇ.. ಹಾಲಿನ ರೇಟ್ ಏರಿಕೆಯಾದ ತಲೆ ಬಿಸಿಯೊಡನೆ ಇದು ಬೇರೆ.. ಇಷ್ಟು ಹಾಲನ್ನು ನಾನೆಲ್ಲಿಯಾದರೂ ಚೆಲ್ಲಿದ್ದು ಗೊತ್ತಾದರೆ ಟಿ ವಿ ಚ್ಯಾನೆಲ್ಲಿನವರು ನನ್ನನ್ನು ಇಂಟವ್ಯೂ ಮಾಡಲು ಬಂದಾರೇನೋ.. ಪ್ರಪಂಚದ ಸಿರಿವಂತ ಮಹಿಳೆ ಅಂತ.. 

ಆದರೆ ಈ ಫೇಸ್ ಬುಕ್ ಸ್ಟೇಟಸ್ ಒಂದು ಉಪಕಾರ ಮಾಡಿತು.ಅದನ್ನು ಓದಿದ  ನಮ್ಮ ಮನೆಗೆ ಬರುತ್ತೇನೆಂದಿದ್ದ ನೆಂಟರು ಅದನ್ನು ತಮ್ಮ ವಾಲಿನಲ್ಲಿ ಶೇರ್ ಮಾಡಿ ಅವರಿಗೆ ಬಂದ ಕಮೆಂಟು ಲೈಕುಗಳ ಆಧಾರದ ಮೇಲೆ ನಮ್ಮಲ್ಲಿಗೆ  ಇಂದು ಬರುವುದಿಲ್ಲ ಎಂದು ಟ್ವೀಟ್ ಮಾಡಿದರು.. ಅವರು ಬರದಿದ್ದರೂ ಹಾಲು ತಂದಾಗಿದೆಯಲ್ಲ.. ಇದನ್ನೇನು ಮಾಡುವುದಿನ್ನು..  

ಛೇ..  ಇವರಿಂದಾಗಿಯಲ್ಲವೇ ನಾನು ಹೆಚ್ಚು ಹಾಲು ತೆಗೆದುಕೊಂಡದ್ದು .. ಇವರಿಂದಾಗಿಯಲ್ಲವೇ  ಹೆಚ್ಚು ಹಾಲು ಹಾಳಾಗುವಂತಾಗಿದ್ದು. ಈ ದುಃಖ ತಡೆಯಲಾರದೇ  ವಾಟ್ಸಪ್ಪಿನಲ್ಲಿದ್ದ  ಗ್ರೂಪುಗಳಿಗೆ ವಿಷಯ  ಶೇರ್ ಮಾಡಿದೆ.  ಅವರ ಪ್ರಶ್ನೆಗಳಿಗೆ ನನ್ನ ಉತ್ತರ.. ನನ್ನ ಉತ್ತರಗಳಿಗೆ ಅವರ ಪ್ರಶ್ನೆ..ಕೆಲವರ ಸಾಂತ್ವನ..ಇನ್ನು ಕೆಲವರ ಬಯ್ಗುಳ.. ಓಹ್ ತಲೆ ಬಿಸಿಯೇರಿದ ಕಾವಲಿಯಂತಾಗಿತ್ತು. ಒಂದು ಲೋಟ ಬಿಸಿ ಬಿಸಿ ಕಾಫಿಯೊಂದೇ ಇದಕ್ಕೆ ಮೋಕ್ಷ ಕಾಣಿಸುತ್ತಿದ್ದುದು.. ಈ ತಲೆ ನೋವಿನಿಂದ ಒದ್ದಾಡುವ ಬದಲು ಸಾಸಿವೆ ಬಿದ್ದ ಹಾಲು ಕುಡಿದು ಸತ್ತರೆ ಸಾಯಲಿ ಎಂದುಕೊಂಡು ಅಡುಗೆ ಮನೆಯೊಳಗೆ ನಡೆದೆ. 
 ಅಲ್ಲೇ ಹಾಲಿನ ಪಾತ್ರೆಯ ಬಳಿ ನಿಂತಿದ್ದ ನನ್ನ ಅತ್ತೆ ಕೈಗೊಂದಿಷ್ಟು ನೀರು ಮುಟ್ಟಿಕೊಂಡು ಬೆರಳಿನಿಂದ ಸಾಸಿವೆ ತೆಗೆದು ಸಿಂಕಿನೊಳಕ್ಕೆ ಸಿಡಿದು ಫಿಲ್ಟರಿನ ಡಿಕಾಕ್ಷನ್ನಿಗೆ ಹಾಲು ಬೆರೆಸಿ ಸೊರ್ ಸೊರ್ ಎಂದು ಸದ್ದಿನೊಡನೆ ಹೀರುತ್ತಾ ‘ನಿಂಗೂ ಬೇಕಾ ಕಾಫಿ’ ಎಂದು ಇನ್ನೊಂದು ಲೋಟಕ್ಕು ಬೆರೆಸಿ ನನ್ನ ಕೈಯಲ್ಲಿಟ್ಟು ಹೊರನಡೆದರು. ಅರ್ರೇ.. ಈ ಹಿಂದಿನ ಕಾಲದವರಿಗೆ ಬದುಕೋದು ಎಷ್ಟು ಸುಲಭ ಅಲ್ವಾ.. ತಮ್ಮ ತೀರ್ಮಾನ ತಾವೇ ಮಾಡಿದರಾಯ್ತು.. ಆಹಾ ಎಷ್ಟೊಳ್ಳೇದು.. ಎಂದುಕೊಂಡು ಲೋಟ ಎತ್ತಿದೆ. 

ಇದನ್ನೇನೀಗಾ.. ಕುಡಿಯೋದಾ.. ಬೇಡ್ವಾ.. ಆಗ  ಇದ್ದ ಧೈರ್ಯ ಈಗಿರಲಿಲ್ಲ.. 
 ನಿಲ್ಲಿ ಫ್ರೆಂಡ್ಸ್ ಗೆ ಫೋನ್ ಮಾಡಿ, ಫೇಸ್ ಬುಕ್ಕಿಗೆ ಸ್ಟೇಟಸ್ ಹಾಕಿ, ವಾಟ್ಸಪ್ಪಿಗೂ ವಿಷಯ ಹರಡಿ ಬರ್ತೀನಿ..  

ಅನಿತಾ ನರೇಶ್ ಮಂಚಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಇದೀಗ ನಮ್ಮದೇ ಕಥೆ .. : ಅನಿತಾ ನರೇಶ್ ಮಂಚಿ

  1. ಕೈಯಲ್ಲೇ ಬೆಣ್ಣೆ ಹಿಡಿದು ಫೇಸ್ ಬುಕ್,ವಾಟ್ಸ್ ಆಪ್ಗಳಂತಹ ವಿಶಾಲ ವಿಶ್ವದಲ್ಲಿ ತುಪ್ಪಕ್ಕಾಗಿ ಅಲೆದಂತಿದೆ ಮೇಡಂ. …..ಆದರು ನಿರೂಪಣೆ

  2. ವಂದನೆಗಳು ಪುನೀತ್ ಕುಮಾರ್ ಮತ್ತು ಚೈತ್ರಾ 🙂 

  3. Ha ha :p 🙂 Enthaa vishayavannu laghuvaagi baredu, odugarige nageya bugge koduva Anitha, naanu nimma beesanige ha ha 🙂 great going, superb…. 

Leave a Reply

Your email address will not be published. Required fields are marked *