ಇತಿ-ಮಿತಿಗಳ ನಡುವೆ ಅಂದು-ಇಂದಿನ ಮಹಿಳೆ: ತೇಜಸ್ವಿನಿ ಹೆಗ್ಡೆ


 ಪ್ರಾಚೀನ ಕಾಲದಿಂದಲೂ (ವೇದ ಕಾಲವನ್ನು ಬಿಟ್ಟು) ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲೆಡೆಯಲ್ಲೂ ಸ್ತ್ರೀಯನ್ನು ಎರಡನೆಯ ದರ್ಜೆಯ ಪ್ರಜೆಯೆಂದೇ ಪರಿಗಣಿಸಲಾಗಿದೆ. ಆಯಾ ಕಾಲದಲ್ಲಿ ರಚಿತವಾದ ಧರ್ಮಗ್ರಂಥಗಳನ್ನು ಅನುಸರಿಸಿ ಅಥವಾ ಅವುಗಳಲ್ಲಿ ಪ್ರಸ್ತಾಪಿಸಲ್ಪಟ್ಟ ನಿಯಮಾವಳಿಗಳನ್ನು ತಮಗೆ ಮನಬಂದಂತೇ ತಿರುಪಿ, ಅವುಗಳನ್ನೆಲ್ಲಾ ಹೆಣ್ಣಿನ ಮೇಲೆ ಹೇರಿ ಪಿತೃಪ್ರಧಾನ ಸಮಾಜ ಅವಳನ್ನು ಹಲವು ರೀತಿಯಲ್ಲಿ ನಿರ್ಬಂಧಿಸಿ, ದೌರ್ಜನ್ಯವೆಸಗುತ್ತಲೇ ಬಂದಿದೆ.
 
ಆದರೆ ಸರಿ ಸುಮಾರು ೫,೦೦೦ ವರುಷಗಳ ಹಿಂದಿನ ವೇದದ ಕಾಲದಲ್ಲಿ ಮಹಿಳೆಯರ ಸ್ಥಿತಿ ಉತ್ಕೃಷ್ಟವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ವೇದಕಾಲದ ಪೂರ್ವಾರ್ಧದಲ್ಲಿ ಸ್ತ್ರೀ-ಪುರುಷರಿಗೆ ಸರಿ ಸಮಾನ ಸ್ಥಾನ-ಮಾನಗಳಿದ್ದವು. ವೈವಿಧ್ಯ ಜೀವನಕ್ಕೆ ತಕ್ಕಂತೇ ವೈವಿಧ್ಯಮಯವಾದ ರೀತಿ-ನೀತಿಗಳಿದ್ದಿದ್ದರೂ, ಏಕ ಸೂತ್ರವಾಗಿ ಹೆಣ್ಣನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಸಮಾಜದಲ್ಲಿ, ಮನೆಯೊಳಗೆ ಸ್ತ್ರೀ-ಪುರುಷನಿಗೆ ಸಮಾನವಾದ ಸ್ವಾತಂತ್ರ್ಯ ಹಾಗೂ ಅಧಿಕಾರವಿತ್ತು. ಹೆಣ್ಣು ಮಕ್ಕಳಿಗೂ ಎಲ್ಲಾ ರೀತಿಯ ಸಂಸ್ಕಾರಗಳನ್ನು ಕೊಡಲಾಗುತ್ತಿತ್ತು. 
 
ಕೆಲವು ಮೂಲಗಳ ಪ್ರಕಾರ ವೇದ ಕಾಲದ ನಂತರ ಆರಂಭವಾದ ‘ಸ್ಮೃತಿ ಹಾಗೂ ‘ಪುರಾಣಗಳ ಕಾಲದಲ್ಲಿ ಕ್ರಮೇಣ ಲಿಂಗ ಭೇದ ಶುರುವಾಗಿ, ಕಾಲ ಕಳೆದಂತೇ ಅಶಾಸ್ತ್ರೀಯವಾಗಿ ಪುರುಷ ಮೇಲು, ಸ್ತ್ರೀ ಕೀಳು, ಆಕೆ ಅವನನ್ನು ಅಂಧಳಾಗಿ ಸಹಿಸಿಕೊಂಡು ಹೋಗುವ ಅವನ ಅನುಚರಣಿ ಮಾತ್ರವಾಗಿರಬೇಕು ಎಂಬ ಅಸ್ವಾಭಾವಿಕ ನಿಯಮ ಜಾರಿಗೆ ಬಂತು. ಮನುವಿನ ಕಾಲದಲ್ಲಿ ಹಲವು ಕಾರಣಗಳಿಂದಾಗಿ ಸ್ತ್ರೀಯ ಮುಕ್ತತೆಗೆ, ಸ್ವಾತಂತ್ರ್ಯಕ್ಕೆ ಇನ್ನಿಲ್ಲದಂತೇ ಕಡಿವಾಣ ಬಿದ್ದು, ಅದೇ ಹಲವು ರೀತಿಯಲ್ಲಿ ತಿರುಚಿ, ಮುರುಟಿಕೊಂಡು ನಾನಾ ರೂಪಗಳನ್ನು ಪಡೆದು ವಿರಾಟ್ ಸ್ವರೂಪವನ್ನು ಪಡೆಯಿತು. ಹಾಗೆ ಅಂದು ಆರಂಭವಾದ ಈ ಕೆಟ್ಟ ಪದ್ಧತಿಯ ಹರಿವಿನ ಮೂಲ, ಇಂದಿನವರೆಗೂ ಅವ್ಯಾಹತವಾಗಿ ಓತಪ್ರೋತವಾಗಿ ರಭಸದಿಂದಲೇ ಮುನ್ನುಗ್ಗಿ ಬಂದಿದೆ ಎನ್ನುವುದು ತುಂಬಾ ಖೇದಕರ. 
 
ಪ್ರಾಚೀನ ಸಮಾಜದಲ್ಲಿ ಮಹಿಳೆಯನ್ನು ಬೌದ್ಧಿಕವಾಗಿ, ಶಾರೀರಿಕವಾಗಿ ಪುರುಷನಿಗಿಂತ ಕೀಳು ಎಂದೇ ಪರಿಗಣಿಸಲಾಗಿತ್ತು. ಪುರಾತನ ಕಾಲದ ಗ್ರೀಸ್, ರೋಮ್, ಇಂಗ್ಲೆಂಡ್ ಮುಂತಾದ ದೇಶಗಳ ಸ್ತ್ರೀಯರು ಯಾವುದೇ ರೀತಿಯ ಹಕ್ಕಿಲ್ಲದೇ ಪಶುವಿನಂತೇ ಜೀವಿಸುತ್ತಿದ್ದರು. ಪಿತೃಪ್ರಧಾನ ಸಮಾಜ ಅವರ ಮದುವೆಯನ್ನು ನಿರ್ಧರಿಸುತ್ತಿತ್ತು. ಅವರಿಗೆ ಆಸ್ತಿಗಳಲ್ಲಿ ಯಾವುದೇ ಪಾಲುದಾರಿಕೆಯಿರಲಿಲ್ಲ. ಬೌದ್ಧಿಕ ಬೆಳವಣಿಗೆಗೆ ಸಹಾಯಕವಾದ ಯಾವುದೇ ರೀತಿಯ ಶಿಕ್ಷಣದಿಂದ ಅವರು ವಂಚಿತರಾಗಿದ್ದರು, ಅನರ್ಹರಾಗಿದ್ದರು. 
 
ಮನುಷ್ಯ ಬೌದ್ಧಿಕವಾಗಿ ಬೆಳೆದಂತೇ ಆತನಲ್ಲಿ ವಿವೇಚನಾ ಶಕ್ತಿ ಹೆಚ್ಚಾಗಿ, ತಪ್ಪು-ಒಪ್ಪುಗಳು ಗ್ರಹಿತವಾಗಿ, ಅನ್ಯಾಯಕ್ಕೆ ಪ್ರತಿರೋಧ ಪ್ರಕಟಗೊಳ್ಳುವುದು ಸಹಜ. ಇದನ್ನು ಕಂಡುಕೊಂಡ ಪುರುಷಪ್ರಧಾನ ಸಮಾಜ ಸ್ತ್ರೀಯರಿಗೆ ಶಿಕ್ಷಣದ ಹಕ್ಕಿಲ್ಲ ಎಂದು ಘೋಷಿಸಿತು. ಆಕೆಯ ಬೌದ್ಧಿಕ ಬೆಳವಣಿಗೆಯಿಂದ ತಮ್ಮ ಅಧಿಕಾರಕ್ಕೆ, ಆಳ್ವಿಕೆಗೆ ಚ್ಯುತಿ ಬಂದು ಬಿಟ್ಟರೆ?! ಎಂಬ ಪರಮ ಸ್ವಾರ್ಥ, ದುಷ್ಟತನವೇ ಇದರ ಹಿಂದೆ ಅವಿತಿತ್ತು ಎನ್ನುವುದು ಸುಸ್ಪಷ್ಟ! ಅವಳಿಗೆ ಸ್ವಂತ ಬುದ್ಧಿಯಾಗಲೀ, ವಿವೇಚಿಸುವ ಶಕ್ತಿಯಾಗಲೀ ಇಲ್ಲವೆಂದು ಸಾರಿ ಅಧ್ಯಯನದ ಅವಶ್ಯಕತೆ, ಅನಿವಾರ್ಯತೆ ಹೆಣ್ಣಿಗಿಲ್ಲ ಎಂದು ಏಕ ಪಕ್ಷೀಯವಾಗಿ ನಿರ್ಧರಿಸಿತು ಪಿತೃ ಪ್ರಧಾನ ಸಮಾಜ. ಇದರ ಪ್ರತಿಫಲದಿಂದಲೇ ಸ್ತ್ರೀಯರು ಅನಕ್ಷರಸ್ಥರಾಗಿ ಅನೇಕ ಮೂಢನಂಬಿಕೆಗಳಿಗೆ ಸಿಲುಕಿ ಭೀತರಾಗಿ, ಪುರುಷರ ದೌರ್ಜನ್ಯಗಳಿಗೆ ಸರಿಯಾದ ಪ್ರತಿರೋಧ ತೋರಲು ತಿಳಿಯದೇ ಮೂಕವಾಗಿ ಸಹಿಸಿದರು, ನರಳಿ ಬದುಕಿದರು. ಇಂದಿಗೂ ಜಗತ್ತಿನ ಅದೆಷ್ಟೋ ಕಡೆ ಹೆಣ್ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸವನ್ನು ನಿರಾಕರಿಸಲಾಗಿದೆ. ಹೆಣ್ಣೆಂದರೆ ಹೊರುವ, ಹೆರುವ, ಪುರುಷನ ಕಾಮ ತೃಷೆಯನ್ನು ತಣಿಸುವ ಒಂದು ಸಾಧನ ಮಾತ್ರ ಎನ್ನುವ ಮನೋಧರ್ಮ ಇಂದಿಗೂ ಹಲವು ಕಡೆ ಧಾರಾಳವಾಗಿ ತುಂಬಿಕೊಂಡಿದೆ. ಇದರ ವಿರುದ್ಧ ಅಂದಿನಿಂದ ಇಂದಿನವರೆಗೂ ನಿಲ್ಲದ ಹೋರಾಟವನ್ನು ಸ್ತ್ರೀಯರು ಹಾಗೂ ಲಿಂಗ ಸಮಾನತೆಯಲ್ಲಿ ವಿಶ್ವಾಸವಿರುವ ಪುರುಷರೂ ನಡೆಸುತ್ತಲೇ ಬಂದಿದ್ದಾರೆ. 
 
ಇಂದಿನ ಯುಗದ ಮಹಿಳೆಯರ ಸ್ಥಿತಿ-ಗತಿಗಳು ಹಿಂದಿನವರಿಗೆ ಹೋಲಿಸಿದರೆ ಸಾಕಷ್ಟು ಸುಧಾರಿಸಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದು ತಕ್ಕಮಟ್ಟಿಗೆ ಹೌದೆನಿಸಿದರೂ, ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳೂ ಆಯಾ ಕಾಲದಲ್ಲಿ ರೂಪಾಂತರಗೊಂಡು, ತುಂಬಾ ನಾಜೂಕಿನ ವೇಷಧರಿಸಿರುವುದೂ ಅಷ್ಟೇ ಕಟು ಸತ್ಯ! ಇಂದು ಶಿಕ್ಷಣಕ್ಕೆ, ಉದ್ಯೋಗಕ್ಕೆ, ವಿವಿಧ ಕ್ಷೇತ್ರಗಳಿಗೆ ಸ್ತ್ರೀಗೆ ಮುಕ್ತ ಅವಕಾಶವಿದೆ, ಸಾಮಾಜಿಕವಾಗಿ ಸ್ವಾತಂತ್ರ್ಯವೂ ಇದೆ. ಆದರೆ ತಡೆಗಳು, ಪ್ರತಿರೋಧಗಳು ಹಲವು ಅಲಿಖಿತ, ಅಮೌಖಿಕ ರೂಪದಲ್ಲೇ ಗುಪ್ತಗಾಮಿನಿಯಾಗಿ ಹರಿಯುತ್ತಿವೆ.
 
ಈ ಯುಗದ ಸ್ತ್ರೀಯರಿಗೆ ಮನೆಯವರಿಂದ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವಿದೆ. ಆದರೆ ಹೆಚ್ಚಿನವರ ಉತ್ಸಾಹ ಅಡಗಿರುವುದು ಅವಳ ವೈಯಕ್ತಿಕ ಬೆಳವಣಿಗೆಗಿಂತ ಅವಳ ವೈವಾಹಿಕ ಸ್ಥಾನ-ಮಾನಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಮದುವೆ, ಸಂಸಾರ, ಮಕ್ಕಳು ಇವೆಲ್ಲಾ ಬದುಕಿನ ಒಂದು ಭಾಗ, ಅವೇ ಬದುಕಲ್ಲಾ ಎಂದು ಎಲ್ಲೆಡೆ ಸಾರುತ್ತಿದ್ದರೂ, ‘ಇಂಜಿನೀಯರಿಂಗ್/ವೈದ್ಯಕೀಯ ಕ್ಷೇತ್ರದಲ್ಲಿರುವ ವರ ಬೇಕಿದ್ದರೆ ನೀನು ಆ ಕ್ಷೇತ್ರದಲ್ಲೇ ಪರಿಣಿತಿ ಪಡೆದಿರಬೇಕು’ ಎಂಬುದು ಅವಳ ಹೆತ್ತವರ ಹಾಗೂ ಸಮಾಜದ ಅಲಿಖಿತ ಘೋಷಣೆಯಾಗಿರುತ್ತದೆ. ಅದೇ ರೀತಿ ಗಂಡಿನವರೂ ತನ್ನ ಮನೆಗೆ ಸೊಸೆಯಾಗಿ ಬರುವವಳು ಇಂತಿಷ್ಟು ಅಂಕಿಯ ಸಂಬಳವನ್ನೋ, ಇಲ್ಲಾ ಪ್ರತಿಷ್ಠೆಯ ಸಲುವಾಗಿ ಇಂತಿಷ್ಟು ಓದಿಕೊಂಡಿರಲೇ ಬೇಕೆಂಬ ಶರತ್ತನ್ನೂ ವಿಧಿಸಿರುತ್ತಾರೆ. ವರದಕ್ಷಿಣೆಯೂ ಈಗ ನವೀನ ರೂಪವನ್ನು ಧರಿಸಿಬಿಟ್ಟಿದೆ. ದುಡಿವ ಮಹಿಳೆಗೆ ಇರುವ ಪ್ರಾಮುಖ್ಯತೆ, ಗೃಹಿಣಿಗೆ ಕೊಡುತ್ತಿಲ್ಲ! ಇನ್ನು ಹೊರ ದುಡಿದು ತನ್ನ ಕಾರ್ಯಕ್ಷೇತ್ರದಲ್ಲಿ ತನ್ನದೇ ಛಾಪನ್ನು ಒತ್ತಿ, ಆಸಕ್ತಿಯಿಂದ ಮುನ್ನೆಡೆಯಲಿಚ್ಛಿಸಿದವರಿಗೆ, ಮಕ್ಕಳ ಲಾಲನೆ ಪಾಲನೆ, ಸಕಾಲಕ್ಕೆ ಪತಿಗೆ ಒದಗಿಸಬೇಕಾಗುವ ಸೇವೆಗಳು, ಅಕಾಲದಲ್ಲಿ ಮನೆಗೆ ಭೇಟಿ ನೀಡುವ ನೆಂಟರಿಷ್ಟರು – ಹೀಗೇ ಎಲ್ಲಾ ಜವಾಬ್ದಾರಿಗಳ ನಡುವೆ ಹೈರಾಣಾಗುವ ಸ್ತ್ರೀ ಹೊರ ಜಗತ್ತಿನಿಂದ ಇಷ್ಟಿಷ್ಟೇ ತನ್ನ ಎಲ್ಲೆಯನ್ನು ಕಿರಿದಾಗಿಸಿಕೊಳ್ಳುತ್ತಾ ಬಂದು ಕಡೆಗೆ ಸ್ವಯಂ ಚಿಪ್ಪೊಳಗೆ ಹುದುಗಿಬಿಡುತ್ತಾಳೆ. ಅವಳನ್ನು ಈ ರೀತಿ ಬಂಧನದೊಳಗೆ ಬಂಧಿಸುವ ಕಾರ್ಯವನ್ನು ಈ ಪುರುಷ ಪ್ರಧಾನ ಸಮಾಜ ಅದೆಷ್ಟು ನಾಜೂಕಾಗಿ ಮಾಡುತ್ತದೆಯೆಂದರೆ ಸ್ವತಃ ಆಕೆಗೂ ಹೇರಲ್ಪಟ್ಟಿರುವ ಇತಿ-ಮಿತಿಗಳ ಅರಿವಾಗುವುದೇ ಇಲ್ಲ! ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ, ಇಲ್ಲಾ ಅಸಾಹಾಯಕಳಾಗಿರುತ್ತಾಳೆ. ಕೆಲವೇ ಕೆಲವರು ಮಾತ್ರ ಒಳ-ಹೊರಗಿನ ಜಗತ್ತನ್ನು, ಎದುರಾಗುವ ಎಡರು ತೊಡರುಗಳನ್ನು ಎಚ್ಚರಿಕೆಯಿಂದ ಎದುರಿಸಿ, ನಿಭಾಯಿಸಿ ಯಶಸ್ವಿಯಾಗುತ್ತಾರೆ.
 
ಉನ್ನತ ಶಿಕ್ಷಣ ಪ್ರವೇಶ ಈಗ ಸ್ತ್ರೀಗೆ ಸುಲಭ ಸಾಧ್ಯವಾಗಿರಬಹುದು. ಆದರೆ ಅವರು ಉನ್ನತ ಶಿಕ್ಷಣದಲ್ಲಿ ಅರ್ಹ ಅಂಕಗಳನ್ನು ಪಡೆದು ಪದವಿ ಪಡೆಯುವುದು ಸುಲಭವಾಗುತ್ತಿಲ್ಲ. ಇದಕ್ಕೆ ಕಾರಣ ಅವರ ಮೇಲಾಗುತ್ತಿರುವ ಜಾತಿ ವೈಷಮ್ಯದ ಪ್ರಹಾರ ಹಾಗೂ ಲೈಂಗಿಕ ಶೋಷಣೆ! ಜಾತಿಯ ಪ್ರಕೋಪಕ್ಕೆ ಸ್ತ್ರೀ-ಪುರುಷಾದಿಯಾಗಿ ಎಲ್ಲರೂ ಒಳಗಾದರೂ ಮಹಿಳೆಯ ವಿಷಯದಲ್ಲಿ ಮಾತ್ರ ಈಕೆ ಇಂತಹ ಜಾತಿ ಎನ್ನುವುದರ ಜೊತೆಗೇ ‘ಸ್ತ್ರೀ’ ಎನ್ನುವ ತಿರಸ್ಕಾರವೂ ಮೆತ್ತಿಕೊಂಡಿರುತ್ತದೆ. ಅಂತೆಯೇ ಲೈಂಗಿಕ ದೌರ್ಜನ್ಯವಂತೂ ಇಂದು ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸಾಮಾನ್ಯವೆಂಬಂತೆ ಆಗಿಹೋಗಿದೆ! ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ಪ್ರತಿಭಟನೆಗೆ ಕಾರಣವಾದ ಮೈಸೂರು ವಿಶ್ವವಿದ್ಯಾನಿಲಯದ ಲೈಂಗಿಕ ಕಿರುಕುಳದ ಘಟನೆಯೇ ಇರಬಹುದು ಇಲ್ಲಾ ಸುಪ್ರೀಂ ಕೋರ್ಟ ನ್ಯಾಯಾಧೀಶರೋರ್ವನು ತನ್ನ ಕೈಕೆಳಗಿನ ಸಹೋದ್ಯೋಗಿನಿಯ ಮೇಲೆ ಯತ್ನಿಸಿದ ಲೈಂಗಿಕ ದಬ್ಬಾಳಿಕೆಯ ನಾಚಿಗೇಡಿತನವೇ ಇರಬಹುದು. ಇವೆಲ್ಲಾ ಪುರುಷ, ಸ್ತ್ರೀ ತನ್ನ ಹಕ್ಕು ಎನ್ನುವ ಮೂಢ ಬುದ್ಧಿಯಿಂದ ಇಂದೂ ಹೊರ ಬಂದಿಲ್ಲ ಎನ್ನುವುದಕ್ಕೆ ಹಸಿ ಸಾಕ್ಷಿಯಾಗಿವೆ. ಇದೇ ಕಾರಣಗಳಿಂದಾಗಿಯೇ ಇಂದು ಹೆತ್ತವರು ‘ನಿನಗೇಕೆ ಸಂಶೋಧನೆಯ ಹುಚ್ಚು? ಇಷ್ಟು ಓದಿದ್ದು ಬೇಕಷ್ಟಾಯಿತು. ಬೇಕಿದ್ದರೆ ಮನೆಯ ಹತ್ತಿರವೇ ಎಲ್ಲಾದರೂ ನೌಕರಿ ಹಿಡಿ, ಮದುವೆಗೆ ಹುಡುಕುತ್ತೇವೆ ಎಂದು ತುಸು ಅನುನಯದ ಧ್ವನಿಯಲ್ಲೇ ಎಲ್ಲಾ ರೀತಿಯ ಚೌಕಟ್ಟನ್ನೂ ಹಾಕಿ, ಬಗ್ಗದವರನ್ನು ಬೆದರಿಸಿ, ತುಸು ಮೆದುವಿದ್ದವರನ್ನು ಹೆದರಿಸಿ, ಭಯ-ಸಂಶಯಗಳನ್ನು ಬಿತ್ತಿ, ತನ್ನ ಮೇಲೇ ಅವಳಿಗೆ ಅಪನಂಬಿಕೆಗಳು ಹುಟ್ಟುವಂತೇ ಮಾಡಿ, ಅವಳು ಸಂಪೂರ್ಣ ಹಿಮ್ಮೆಟ್ಟುವಂತೆ ಮಾಡಿಬಿಡುತ್ತಾರೆ. ಹೀಗಾಗಿಯೇ ಎಷ್ಟೋ ಸಾಧನೆಯ ಚಿಗುರುಗಳು ಹೆಮ್ಮರವಾಗುವ ಮೊದಲೇ ಕರಟಿಹೋಗುತ್ತವೆ.
 
ಇಂದು ಹೆಣ್ಣಿಗೆ ಸಾಫ್ಟ್‌ವೇರ್ ಕ್ಷೇತ್ರ, ಅಥವಾ ಶಿಕ್ಷಕ-ಅಧ್ಯಾಪಕ ವೃತ್ತಿಯೇ ಸರಿಯಾದದ್ದು, ರಾತ್ರಿವೇಳೆಯಲ್ಲಿ, ಹೂತ್ತಲ್ಲದ ಹೊತ್ತಲ್ಲಿ ದುಡಿವ ಕೆಲಸ ಅವಳಿಗೆ ಅಪಾಯಕ್ಕೆ ದಾರಿ ಎನ್ನುವ ಮನೋಭಾವ ತೀವ್ರವಾಗಿ ಬೆಳೆಯುತ್ತಿರುವುದು ತುಂಬಾ ಖೇದಕರ. ಅವಳನ್ನು ಹಗಲು-ಇರುಳೆನ್ನದೇ ಹಿಂಡಿ, ಬಲಾತ್ಕಾರಿಸುವ ನೀಚರು ಎಲ್ಲೆಡೆ ಹೊಂಚು ಹಾಕುತ್ತಿರುವಾಗ, ನಮ್ಮ ಪ್ರಧಾನ ಸಮಾಜ ಅಂತಹವರನ್ನು ಬಗ್ಗಿಸದೇ, ಅವರಿಗೆ ಹೆದರಿ ನಾವೇ ಬಗ್ಗುವಂತೆ ಮಾಡುತ್ತಿದೆ. ‘ನೀನು ಹೋಗಿದ್ದು ತಪ್ಪು, ಆಡಿದ್ದು ತಪ್ಪು, ಮಾಡಿದ್ದು ತಪ್ಪು, ಎಂದು ಎಲ್ಲದರಲ್ಲೂ ಅವಳದೇ ಇಲ್ಲದ ತಪ್ಪನ್ನು ಎತ್ತಿ ಆಡಿ, ಸ್ವತಃ ಅವಳೇ ಮಾನಸಿಕವಾಗಿ ಸಂಪೂರ್ಣ ಸತ್ತುಹೋಗುವ ಸ್ಥಿತಿ ನಿರ್ಮಾಣ ಮಾಡಿಬಿಡುತ್ತಾರೆ. ಅವಳ ಆಸಕ್ತಿಕರ ಕ್ಷೇತ್ರದಲ್ಲಿನ ದುಡಿಮೆ, ಶಿಕ್ಷಣ, ಹವ್ಯಾಸ, ವೃತ್ತಿ ಎಲ್ಲವೂ ಇನ್ನೂ ಅವನ ಅವಲಂಬಿತವೇ! ಎಲ್ಲಿ ಯಾವ ತೋಳ ಹೊಂಚು ಹಾಕುತ್ತಿದೆಯೋ, ಎಲ್ಲಿ ಯಾರು ಯಾವ ಜಾಲ ಹರಡಿ ಕೂತಿರುವರೋ ಎನ್ನುವ ಭೀತಿ ಕ್ಷಣ ಕ್ಷಣ ಅವಳನ್ನು ಗುರಿಯಿಂದ ದೂರವಾಗಿಸುತ್ತಿದೆ. ಇದಕ್ಕೆಲ್ಲಾ ಅದೇ ಭಯದಲ್ಲೇ ಮುಳುಗಿ, ಅದನ್ನೇ ಸಮರ್ಥಿಸುವ ಪ್ರಧಾನ ಸಮಾಜ ಹಾಗೂ ಸ್ವತಃ ಮಹಿಳೆಯರೇ ಕಾರಣ ಎನ್ನಬಹುದು. ಮಹಿಳೆಯ ಇತಿ-ಮಿತಿಗಳಿಗೆ ಇಂದು ಮಹಿಳೆಯೂ ಪ್ರಮುಖ ಕಾರಣ! ಹಿಂದೆ ಅನಕ್ಷರಸ್ಥ ಮಹಿಳೆಯ ಚಿಂತನೆಗೆ ಸಂಕುಚಿತತೆ, ಚೌಕಟ್ಟುಗಳಿದ್ದವೆಂದಾಯಿತು. ಇಂದು ಅದೆಷ್ಟೋ ಸುಶಿಕ್ಷಿತ ಮಹಿಳೆಯರೂ ದೌರ್ಜನ್ಯಗಳಿಗೆ ಪುರುಷನಿಗಿಂತ ಸ್ತ್ರೀಯೇ ಕಾರಣ, ಅವಳೇ ಹೊಂದಿಕೊಂಡು, ತಗ್ಗಿ-ಬಗ್ಗಿ ಇರಬೇಕು ಎನ್ನುವ ಧೋರಣೆ ತಾಳುತ್ತಾರೆ. ಇದು ಅತ್ಯಂತ ಮಾರಕ ಹಾಗೂ ಕರುಣಾಜನಕ ಸ್ಥಿತಿ. ಇಂದು ಆಕೆಗಾದ ಪರಿಸ್ಥಿತಿ ನಾಳೆ ತನಗೇ ಆಗಬಹುದೆಂಬ ಕಲ್ಪನೆಯೂ ಅವರಲ್ಲಿರದು. ರಾತ್ರಿ ಆಗುವಂಥದ್ದು ಹಗಲಾಗುತ್ತಿದೆ, ಹೊರಗೆ ನಡೆಯುವಂಥದ್ದು ಮನೆಯೊಳಗೇ, ಮನೆಯವರಿಂದಲೇ ಜರಗುತ್ತಿದೆ. ಸ್ವಂತ ಅಪ್ಪ, ಅಣ್ಣ, ತಮ್ಮರೇ ಇಂದು ತೋಳಗಳಾಗಿ ಕೊಲ್ಲುವ ಕಾಲದಲ್ಲಿ ತಪ್ಪು ಮಹಿಳೆಯದ್ದೇ ಎನ್ನುವ ಈ ಹುಸಿ ಜನರ ಮಾತಿಗೆ ಮನಸು ಯಾತನೆಗೊಳ್ಳುತ್ತದೆ. ಶಿಕ್ಷಣಕ್ಕೂ, ಮಾನವೀಯತೆಗೂ ಸಂಬಂಧವೇ ಇಲ್ಲ, ಮಾನವೀಯತೆಯ ಅನುಭೂತಿಗೆ, ಮನುಷ್ಯನ ಸಂಸ್ಕಾರಗಳ ಉದ್ದೀಪನೆಗೆ ಶಿಕ್ಷಣವೂ ಒಂದು ಮಾಧ್ಯಮ ಅಷ್ಟೇ ಎನ್ನುವ ವಾಸ್ತವ ಈಗ ಸ್ಪಷ್ಟವಾಗಿದೆ.
 
"ನಿಮಗೆ ಏನಾದರೂ ಮಾಡಲೇಬೇಕು ಎಂಬ ಉತ್ಕಟ ಇಚ್ಛೆ ಇತ್ತೆಂದರೆ ನೀವು ಎಲ್ಲವನ್ನೂ ಸಂಭಾಳಿಸುತ್ತೀರ. ಅರೆಮನಸ್ಸಿನಲ್ಲಿ ತೊಡಗಿದ್ದಾಗ ಮಾತ್ರ ನೆಪಗಳನ್ನು ಹುಡುಕುತ್ತೀರ" ಎಂದಿದ್ದಾರೆ ವೈಮಾನಿಕ ವೈದ್ಯಕೀಯದಲ್ಲಿ ಎಂ.ಡಿ.ಮಾಡಿರುವ ಏಷಿಯಾದ ಮೊಟ್ಟ ಮೊದಲ ಮಹಿಳೆ ಡಾ.ಪಾರ್ವತಿ ಗೋಪಾಲ್. ಕಠಿಣ ಶ್ರಮ ನಿಮ್ಮನ್ನು ಮೇಲೇರಿಸುತ್ತದೆ, ನಿಮ್ಮನ್ನು ಯಾರೂ ಉಪೇಕ್ಷಿಸದಂತೇ ಮಾಡುತ್ತದೆ. "ನಾವು ಬಯಸಿದರೆ ಯಾವುದೇ ರಂಗದಲ್ಲೂ ಯಶಸ್ಸು ಕಾಣಬಲ್ಲೆವು, ಏನನ್ನೂ ಸಾಧಿಸಬಲ್ಲೆವು. ಮಹಿಳೆ ಸುಖೀ ಸಂಸಾರ, ಉತ್ಕಟ ಹವ್ಯಾಸ ಎಲ್ಲವನ್ನೂ ಉಳಿಸಿಕೊಂಡು, ಸಂಶೋಧನಾ ರಂಗದಲ್ಲೂ ಸಾಧಿಸಬಲ್ಲಳು" ಎಂದು ಹೇಳಿದ್ದಲ್ಲದೇ, ಅಂತೆಯೇ ಬದುಕಿ ಮಾದರಿಯಾಗಿದ್ದಾರೆ ಡಾ.ಪಾರ್ವತಿ.
 
ಹೀಗೇ ಎಲ್ಲಾ ರೀತಿಯಲ್ಲೂ ಪುರುಷನಿಗೆ ಸರಿಸಮಾನವಾಗಿ ಬದುಕಿ, ಸಾಧಿಸಿದ ಅನೇಕಾನೇಕ ಮಹಿಳೆಯರ ಉದಾರಣೆಗಳು ಜಗತ್ತಿನೆಲ್ಲೆಡೆಯಲ್ಲಿ ನಮಗೆ ಕಾಣಸಿಗುತ್ತವೆ. ಇಂತಹ ಅಪೂರ್ವ ಮಹಿಳೆಯ ಯಶೋಗಾಥೆಗಳು ಇಂದಿನ ನಾರಿಯ ಸಂಕಲ್ಪಗಳಿಗೆ ಪ್ರೇರಣೆಯಾಗಿವೆ. ಇಂದು ಸ್ತ್ರೀಯ ಮೇಲಾಗುತ್ತಿರುವ ಅನೇಕ ದೌರ್ಜನ್ಯಗಳಿಗೆ ಸಹೃದಯ, ಮಾನವೀಯ ತುಡಿತಗಳುಳ್ಳ ಪುರುಷರೆಲ್ಲರೂ ಕೈಜೋಡಿಸುತ್ತಿದ್ದಾರೆ. ಹೋರಾಟದಲ್ಲಿ ಒಗ್ಗಟ್ಟಿದ್ದರೆ ಯಶಸ್ಸು ಬಹು ಬೇಗ ಸಾಧ್ಯ. ಮೊತ್ತ ಮೊದಲು ಮಹಿಳೆಯರಲ್ಲಿ ಒಗ್ಗಟ್ಟು ಮೂಡಬೇಕು. ದೌರ್ಜನ್ಯಕ್ಕೆ ಒಕ್ಕೂರಲಿನ ಪ್ರತಿರೋಧ ವ್ಯಕ್ತವಾದಾಗ ಮತ್ತೂ ಅನೇಕ ಕೈಗಳು ಜೊತೆ ಸೇರಿ ಅನ್ಯಾಯವನ್ನು ಬಗ್ಗು ಬಡಿಯಬಲ್ಲೆವು. ನಾರಿ ಶಕ್ತಿ, ಸ್ತ್ರೀ ದೇವತೆ, ನಾರಿ ಮುನಿದರೆ ಮಾರಿ ಮುಂತಾದ ಮಾತುಗಳ ವೈಭವೀಕರಣದ ಬದಲಾಗಿ ಅವಳಿಡುವ ದಿಟ್ಟ ಹೆಜ್ಜೆಗೆ ಜೊತೆಯಾದರೆ ಸಾಕು, ಎಷ್ಟೋ ಬದುಕುಗಳು ಬದಲಾಗುತ್ತವೆ.

*****
 
 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Vani Sundeep
Vani Sundeep
10 years ago

Good Article.

amardeep.ps
amardeep.ps
10 years ago

ಲೇಖನ ಚೆನ್ನಾಗಿದೆ….ಅಭಿನಂದನೆಗಳು…

Roopa Satish
Roopa Satish
10 years ago

Hi Tejaswini,
ಬಹಳ ಇಷ್ಟವಾಯ್ತು ನಿಮ್ಮ ಬರಹ, ಲೇಖನ…..
ಸ೦ಗ್ರಹಯೋಗ್ಯ 🙂 Thank you for this one ……….
 

Veena Bhat
Veena Bhat
10 years ago

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಮ್ಮತವಿದೆ…. ಚೆನ್ನಾಗಿ ಬರೆದಿದ್ದೀರಿ…. 

Tejaswini Hegde
10 years ago

ಮೆಚ್ಚಿದ, ಅಭಿಪ್ರಾಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು 🙂

5
0
Would love your thoughts, please comment.x
()
x