ಇತಿ ತಮ್ಮ ವಿಶ್ವಾಸಿ: ಪ್ರಣವ್ ಜೋಗಿ

ಬಹುಶಃ ಶಾಲೆಯ ದಿನಗಳು ಇರಬೇಕು. ಯಾವುದೋ ಒಂದು ಪರೀಕ್ಷೆಯಲ್ಲಿ ಬರೆದ ಪತ್ರ. ಅದೇ ಕೊನೆಯ ಪತ್ರವಾಗಲಿದೆ ಎಂಬ ಸುಳಿವು ಆಗಲೇ ದೊರೆತ್ತಿದ್ದಿದ್ದರೆ, ಇನ್ನೂ ಒಂದಷ್ಟು ಸಾಲುಗಳನ್ನು ಬರೆದು ಬಿಡುತ್ತಿದ್ದೆ. ಆ ನಂತರ ಎಂದೂ ಪತ್ರ ಬರೆಯಲೇ ಇಲ್ಲ. ಕ್ಷಣ ಮಾತ್ರದಲ್ಲಿ ಸಂದೇಶ ತಲುಪುವ ತಂತ್ರಜ್ಞಾನ ಇರುವಾಗ, ಪತ್ರವೇಕೆ ಬರೆಯಬೇಕು ಎಂಬ ಆಲೋಚನೆ ಇದರ ರೂವಾರಿ. ದುರಂತರವೆಂದರೆ, ಮುಂಚೆ ಬರೆದ ಪತ್ರಗಳೂ ಕೂಡ ಪರೀಕ್ಷೆಗಳಲ್ಲೇ. ನಿಜ ಜೀವನದಲ್ಲಿ, ದೂರದ ಸಂಬಂಧಿಕರೊಬ್ಬರಿಗೆ ಒಂದೆರಡು ಬಾರಿ ಪತ್ರ ಬರೆದಿರಬಹುದಷ್ಟೇ. ಇಂದಿನ ಕಾಲದಲ್ಲಿ ಕುಳಿತು, ಹಿಂದಿನ ಕಾಲದ ಆ ಅದ್ಭುತ ಸನ್ನಿವೇಶಗಳನ್ನು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ.

ಅದೆಂತಹ ವಿಚಾರವಿದ್ದರೂ, ಯಾವುದೋ ಒಂದು ಮೂಲೆಯಲ್ಲಿ ಅದರ ಅರಿವೇ ಇಲ್ಲದೆ ಓಡಾಡುತ್ತಿರುವವನಿಗೆ ಅರ್ಥವಾಗುವಂತೆ ನಿಯಮಿತವಾದ ಪದಗಳಲ್ಲಿ ಬರೆಯಬೇಕು. ಬರೆದ ಮೇಲೆ ಯಾರೂ ಓದದಂತೆ ಸಂರಕ್ಷಿಸಿ, ಅದನ್ನು ಅಂಚೆ ಕಚೇರಿಗೆ ತೆಗೆದುಕೊಂಡು ಹೋಗಿ, ಅಂಚೆ ಪೆಟ್ಟಿಗೆಯಲ್ಲಿ ಹಾಕಿಬಿಡುವ ಸಾಹಸ ಇನ್ನೊಂದೆಡೆ. ಅಷ್ಟಾದ ಮೇಲೂ ಸಮಾಧಾನವಿರುವುದಿಲ್ಲ. ಆ ಪೋಸ್ಟ್ ಮ್ಯಾನ್ ಅದನ್ನು ಸರಿಯಾಗಿ ತಲುಪಿಸಿದನೋ ಇಲ್ಲವೋ ಎಂಬ ಕುತೂಹಲ. ಅದರಲ್ಲಿ ಇರುವ ವಿಚಾರ ಆ ವ್ಯಕ್ತಿಗೆ ಹಿಡಿಸಿತೋ ಇಲ್ಲವೋ ಎಂಬ ಆತಂಕ. ಅದಕ್ಕೆ ಪ್ರತ್ಯುತ್ತರ ಏನು ಬರಬಹುದು ಎಂಬ ಆಲೋಚನೆ. ಅಂದಿನಿಂದ ಹಿಡಿದು ಮುಂದಿನ ಅದೆಷ್ಟೋ ದಿನಗಳವರೆಗೆ, ಸೈಕಲಿನ ಬೆಲ್ ಶಬ್ಧ ಕೇಳಿದಾಗಲೆಲ್ಲಾ ಏನೋ ಒಂದು ರೀತಿಯ ಉತ್ಸಾಹ. ಓಡಿ ಬಂದು ನೋಡಿ ನಿರಾಶೆಗೊಂಡು, ನಂತರ ತನ್ನನ್ನು ತಾನೇ ಸಂತೈಸಿಕೊಳ್ಳುವ ವಿಚಿತ್ರವಾದ ಸಂದರ್ಭ. ಆ ಪೋಸ್ಟ್ ಮ್ಯಾನ್ ನೊಂದಿಗೆ ನಿತ್ಯವೂ ಒಂದು ಮೌನವಾದ ಕಣ್ಣಿನಲ್ಲೇ ನಡೆಯುವ ಸಂಭಾಷಣೆ. ಕೊನೆಗೂ ಒಂದು ದಿನ ಪತ್ರ ಬಂದಾಗ, ಏನನ್ನೋ ಗೆದ್ದ ಅನುಭವ. ಆ ಗೆಲುವಿನ ಸಂತಸದಲ್ಲಿ, ಪೋಸ್ಟ್ ಮ್ಯಾನ್ ಕೂಡ ಒಂದು ರೀತಿಯಲ್ಲಿ ಶಾಮೀಲಾಗಿರುತ್ತಾನೆ ಎಂಬುದು ಅದರ ವಿಶೇಷತೆ. ತನಗೂ ಪತ್ರ ಬರೆಯುವವರು ಯಾರೋ ಒಬ್ಬರಾದರೂ ಇದ್ದಾರಲ್ಲಾ ಎಂಬ ಸಮಾಧಾನ. ಆ ಪತ್ರದಲ್ಲಿ ಏನಿದೆ ಎಂದು ಓದಿ ತಿಳಿಯುವ ಆತುರ. ಓದಿದ ಮೇಲೆ ಹಲವು ದಿನಗಳವರೆಗೆ ಕಾಡುವ ಕೆಲವು ಸಾಲುಗಳು. ಇಷ್ಟೆಲ್ಲಾ ಸುಂದರವಾದ ಅನುಭವಗಳಿಂದ ನಾವಿಂದು ವಂಚಿತರಾಗಿದ್ದೇವೆ ಎಂಬ ವಿಚಾರ ವಿಷಾದನೀಯವಲ್ಲವೆ?

ತೂಕವಿಲ್ಲದ, ಅಗತ್ಯವಿಲ್ಲದ ಮಾತುಗಳಿಂದಲೇ ನಮ್ಮ ಇಂದಿನ ಸಂಭಾಷಣೆಗಳು ತುಂಬಿರುತ್ತವೆ. ಯಾವುದೇ ಉತ್ಸಾಹವಿಲ್ಲ. ಸಂಬಂಧಗಳ ಬೆಲೆ ಹಾಗು ಮಹತ್ವದ ಅರಿವಿಲ್ಲ. ಸಂದೇಶ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಪ್ರತ್ಯುತ್ತರ ದೊರಕದಿದ್ದರೆ, ಇಂದು ವಿಚಲಿತರಾಗುತ್ತೇವೆ. ಆದರೆ ಆ ಪತ್ರಗಳ ಕಾಲದಲ್ಲಿ, ಅದೆಷ್ಟೋ ದಿನಗಳವರೆಗೆ ಕಾದು ಕುಳಿತವರ ಬಗ್ಗೆ ಒಮ್ಮೆ ಆಲೋಚಿಸಿ ನೋಡಿ. ಮಾರುಕಟ್ಟೆಯಲ್ಲಿ ಯಾವುದೋ ತರಕಾರಿ ಕೊಳ್ಳುವಾಗ, ಯಾವುದೋ ಒಂದು ಸಿಹಿ ತಿನಿಸು ತಿನ್ನುವಾಗ, ಊಟ ಮಾಡುವಾಗ, ಯಾರನ್ನೋ ನೋಡಿದಾಗ, ತಾನು ಪತ್ರದಲ್ಲಿ ಉದ್ದೇಶಿಸಿ ಬರೆದ ವ್ಯಕ್ತಿಯ ನೆನಪಾಗಬಹುದು. ಆದರೆ, ಆ ನೆನಪನ್ನು, ಆ ಚಡಪಡಿಕೆಯನ್ನು ತನ್ನಲ್ಲೇ ಇಟ್ಟುಕೊಂಡು ಬದುಕಬೇಕು. ಹೇಳಿಕೊಳ್ಳಲು ಇರುವ ಆ ಏಕೈಕ ವ್ಯಕ್ತಿಗೆ ಪತ್ರಗಳ ಮೂಲಕವೇ ತನ್ನ ಎಲ್ಲಾ ನೋವುಗಳನ್ನು ತಿಳಿಸಬೇಕು. ಆತನಿಂದ ಬರುವ ಸಮಾಧಾನದ ಮಾತುಗಳು ತಲುಪುವಷ್ಟರಲ್ಲಿಈತನಿಗೆ ಆ ನೋವೇ ಮರೆತುಹೋಗಿರಬಹುದು. ಒಂದು ವೇಳೆ, ಯಾವುದೋ ಒಂದು ಸಾಲನ್ನು ಆತ ತಪ್ಪಾಗಿ ಅರ್ಥ ಮಾಡಿಕೊಂಡು, ಭಿನ್ನಾಭಿಪ್ರಾಯ ಮೂಡಿಬಿಟ್ಟರೆ ? ಅದು ಸರಿಹೋಗುವ ಅದೆಷ್ಟೋ ದಿನಗಳವರೆಗೆ ನಿದ್ರೆಯೂ ಸರಿಯಾಗಿ ಬರದಿರಬಹುದು. ಇವೆಲ್ಲವನ್ನು ಗಮನಿಸಿದಾಗ ಇಂದು ವಿನಾಕಾರಣ ಮೂಡುವ ಭಿನ್ನಾಭಿಪ್ರಾಯಗಳಿಗೆ ಏನ್ನನ್ನಬೇಕು ?

ಸಂಬಂಧಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ನಡೆಸುವ ಸಂಭಾಷಣೆಗಳು ತುಂಬಾ ಮಹತ್ವವನ್ನು ಹೊಂದಿವೆ. ಒಂದು ಅರ್ಥಪೂರ್ಣ ಸಂಭಾಷಣೆ ನಮ್ಮ ಎಲ್ಲಾ ನೋವುಗಳನ್ನು ಮರೆಸಿಬಿಡಬಹುದು. ಮಾನವರಾದ ನಮ್ಮೆಲ್ಲರನ್ನು ಒಂದಾಗಿಸಿ ಹುರಿದುಂಬಿಸುವ ಕಾಣದ ಅಂದವೇ ನಮ್ಮ ಮಾತುಗಳು. ನಮ್ಮಲ್ಲೆರ ನಡುವೆ ಇರುವಂತಹ ಸುಂದರವಾದ ಬಾಂಧವ್ಯವನ್ನು ಆಗಾಗ ನೆನಪಿಸುವ ಗೆಳೆಯರಂತೆ ನನಗೆ ಪತ್ರಗಳು ಕಾಣುತ್ತವೆ. ಮೂಕ ಪ್ರೇಕ್ಷಕನಾಗಿ, ಅಲ್ಲಿ ನಡೆಯುವ ಅಷ್ಟೂ ಸಂಭಾಷಣೆಗಳಿಗೆ ಒಂದು ಪತ್ರ ಸಾಕ್ಷಿಯಾಗಿರುತ್ತದೆ. ನಮ್ಮ ಚಡಪಡಿಕೆಯ ಜೊತೆಗೆ, ತನ್ನ ಅಭಿಪ್ರಾಯವನ್ನು ತಿಳಿಸಲು ಆ ಪತ್ರವೂ ಚಡಪಡಿಸಿರಬಹುದೇ ? ಅದು ನಿಜವಾಗಿದ್ದರೂ, ಆಲಿಸುವ ತಾಳ್ಮೆ ನಮಗಿತ್ತೆ? ನಾವೆಲ್ಲರೂ ಮರೆತು ಈಗ ಹುಡುಕಾಡುತ್ತಿರುವ ಉಲ್ಲಾಸ, ನಮ್ಮ ಮನೆಯ ಯಾವುದೋ ಮೂಲೆಯಲ್ಲಿ ಧೂಳು ಹಿಡಿದು ಬಿದ್ದಿರಬಹುದಲ್ಲವೆ? ಅಂದು ಅದೆಷ್ಟೂ ಸಂಬಂಧಗಳನ್ನು ಉಳಿಸಿ, ಬೆಳೆಸಿದ ಪತ್ರಗಳು ಇಂದು ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಏನಂದುಕೊಂಡಿರಬಹುದು? ತಿಳಿದಿದ್ದರೂ ನಿರ್ಲಕ್ಷಿಸಿ ಕುರುಡರಂತೆ ವರ್ತಿಸುತ್ತಿರುವ ನಮ್ಮ ಬಗ್ಗೆ ಯಾವ ರೀತಿಯ ಅಭಿಪ್ರಾಯವನ್ನು ಹೊಂದಿರಬಹುದು ?

ಇವೆಲ್ಲದರ ನಡುವೆ ಮರೆಯಾಗಿ, ಸದ್ದಿಲ್ಲದೆ ಇಂದಿಗೂ ಸೈಕಲ್ ತುಳಿಯುತ್ತಾ, ಅಪರೂಪಕೊಮ್ಮೆ ಬೆಲ್ ಬಾರಿಸುವ ಅವಕಾಶ ಹೊಂದಿರುವ ಪೋಸ್ಟ್ ಮ್ಯಾನ್ ಕುರಿತು ಒಮ್ಮೆ ಆಲೋಚಿಸಿ ನೋಡಿ. ತುಂಬಿ ತುಳುಕುತ್ತಿದ್ದ ಆತನ ಜೋಳಿಗೆಯಲ್ಲಿ, ಸುಲಭವಾಗಿ ಲೆಕ್ಕಮಾಡುವಷ್ಟು ಪತ್ರಗಳು ಉಳಿದು ಹೋಗಿವೆ ಎಂಬ ವಿಜಾರಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕಾಡುಬ ವಿಚಾರವೆಂದರೆ, ನಮ್ಮಲ್ಲಿ ಮಾತನಾಡಲು ಉಳಿದಿರುವ ಅರ್ಥಪೂರ್ಣ ಮಾತುಗಳು ಹಾಗು ಸಂಬಂಧಿಕರ ಸುಖದುಖಗಳನ್ನು ವಿಚಾರಿಸಲು ನಮ್ಮಲ್ಲಿ ಇರುವ ಸಮಯ ಆ ಪತ್ರಗಳಿಗಿಂತಲೂ ಕಡಿಮೆ ಎಂಬುದು. ಯಾವುದೋ ಒಂದು ಮೂಲೆಯಲ್ಲಿ, ತನ್ನ ನಿತ್ಯದ ಬದುಕಿನಿಂದ ಬೇಸತ್ತು ಬದುಕುತ್ತಿರುವ ಜೀವವೊಂದು, ನಿಮ್ಮ ಆ ಒಂದು ಪತ್ರವನ್ನು ಕಂಡು ಸಂತಸಗೊಳ್ಳಬಹುದಲ್ಲವೆ ? ತುಕ್ಕುಹಿಡಿದಿರುವ ಯಾವುದೋ ಒಂದು ಸಂಬಂಧ ಪುನರ್ಜೀವ ಪಡೆಯಬಹುದಲ್ಲವೆ ? ಕಳೆದುಹೋಗಿರುವ ಮಾನವ ಸಂಬಂಧದ ಸುಂದರವಾದ ಅರ್ಥವು ನಿಮ್ಮನ್ನು ಮತ್ತೆ ಅರಸಿ ಬಂದು ತಲುಪಬಹುದು. ಧೂಳು ಹಿಡಿದಿರುವ ಅನುಬಂಧದ ಮೇಲೆ ನೀರು ಸುರಿದು, ಅದು ಮತ್ತೆ ಚಿಗುರಬಹುದು. ನಿಮ್ಮ ಊರಿನ ಪೋಸ್ಟ್ ಮ್ಯಾನ್ ಮತ್ತೆ ನಿಮ್ಮ ಮುಖದಲ್ಲೊಂದು ನಗುವನ್ನು ಕಂಡು ತಾನೂ ಆನಂದಿಸಬಹುದು. ಪತ್ರಗಳನ್ನು ಮರೆಯದೆ, ಮಾನವ ಸಂಬಂಧದ ಅಂದವನ್ನು ಉಳಿಸುವತ್ತ ಹೆಜ್ಜೆಯಿಡುತ್ತೀರಿ ಎಂದು ನಾನು ಭಾವಿಸುತ್ತೇನೆ.

ಇತಿ ತಮ್ಮ ವಿಶ್ವಾಸಿ,
-ಪ್ರಣವ್ ಜೋಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Prakash
Prakash
4 years ago

Reality reflected…so nicely.. Touching

1
0
Would love your thoughts, please comment.x
()
x