ನನ್ನ ಕಲ್ಪನಾಲೋಕದಲ್ಲಿ ಹಬ್ಬಗಳಿಗೂ ಚಲನಚಿತ್ರಗಳಿಗೂ ಬಿಡಿಸಲಾಗದ ನಂಟಿದೆ. ಯುಗಾದಿ ಹಬ್ಬದ ದಿನ ಚಿತ್ರಮಂಜರಿಯಲ್ಲಿ ತಪ್ಪದೇ ಪ್ರತಿ ವರ್ಷ ಬರುತ್ತಿದ್ದ ಲೀಲಾವತಿ ಅಭಿನಯದ “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಹಾಡು ನೆನಪಿಗೆ ಬರುತ್ತದೆ. ಗಣಪತಿ ಹಬ್ಬ ಅಂದಾಕ್ಷಣ ಚಿತ್ರಹಾರ್ ನ “ದೇವಾದಿ ದೇವಾ ಗಣಪತಿ ದೇವ” ಹಾಡು ಜ್ಞಾಪಕಕ್ಕೆ ಬರುತ್ತದೆ. ಕ್ರಿಸ್ಮಸ್ ಬಂತೆಂದರೆ ಬಿಟ್ಟೂಬಿಡದೆ ಕಾಡುವ ಚಿತ್ರ “ಇಟ್ಸ್ ಅ ವಂಡರ್ಫುಲ್ ಲೈಫ್”! ಇದು 1946ರಲ್ಲಿ ಫ್ರಾಂಕ್ ಕ್ಯಾಪ್ರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ.
ದೇವರಿಗೆ ನೂರಾರು ಜನರಿಂದ ಒಂದೇ ಪ್ರಾರ್ಥನೆ ಸಲ್ಲುತ್ತಿದೆ. “ಜಾರ್ಜ್ ಬೆಯ್ಲೀ ತೊಂದರೆಯಲ್ಲಿದ್ದಾನೆ, ಅವನ್ನು ಕಾಪಾಡು ತಂದೆ” ಅನ್ನುವ ಮೊರೆ. ಜಾರ್ಜಿಗೆ ಸಹಾಯ ಮಾಡಲು, ದೇವರು ಒಬ್ಬ ದೇವದೂತನಿಗೆ ಬರಹೇಳುತ್ತಾನೆ. ದೇವರು ಅವನಿಗೆ ಜಾರ್ಜ್ ಕಥೆಯನ್ನು ಹೇಳುತ್ತಾನೆ. ಜಾರ್ಜ್ ತಂದೆ ಬಡಜನರಿಗೆ ಸಹಾಯವಾಗುವ ಸಹಕಾರಿ ಬ್ಯಾಂಕ್ ನಡೆಸುತ್ತಿರುತ್ತಾನೆ, ಇದರಿಂದ ಪಾಟರ್ ಅನ್ನುವ ಆ ಊರಿನ ಶ್ರೀಮಂತನ ಕೆಂಗಣ್ಣಿಗೆ ಗುರಿಯಾಗಿರುತ್ತಾನೆ. ಚಿಕ್ಕ ವಯಸ್ಸಿನಲ್ಲೇ ತಣ್ಣಗಿನ ನದಿನೀರಿನಲ್ಲಿ ಮುಳುಗುತ್ತಿರುವ ತನ್ನ ತಮ್ಮನನ್ನು ಕಾಪಾಡಲು ಹೋದಾಗ ಜಾರ್ಜ್ ತನ್ನ ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಜಾರ್ಜ್ ತನ್ನ ಓದಿನ ಜೊತೆಗೇ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು ಹಣ ಒಟ್ಟುಗೂಡಿಸುತ್ತಿರುತ್ತಾನೆ. ದೇಶವಿದೇಶಗಳನ್ನು ಸುತ್ತುವ ಮತ್ತು ಉನ್ನತ ವ್ಯಾಸಂಗ ಮಾಡಿ ದೊಡ್ಡ ಇಂಜಿನಿಯರ್ ಆಗುವ ಕನಸನ್ನು ಹೊಂದಿರುತ್ತಾನೆ.
ಜಾರ್ಜ್ ಮೊದಲ ಸಲ ಬೇರೊಂದು ದೇಶ ಸುತ್ತಲು ಹೊರಟಿರುವ ಸಮಯದಲ್ಲಿ, ಅವನ ತಂದೆಯ ಸಾಯುತ್ತಾನೆ. ಜಾರ್ಜ್ ಅನಿವಾರ್ಯವಾಗಿ ಬ್ಯಾಂಕಿನ ಜವಾಬ್ದಾರಿ ಹೊರಬೇಕಾಗುತ್ತದೆ. ತಾನು ಕಾಲೇಜಿಗೆ ಹೋಗಲಾಗದೇ, ಕೂಡಿಟ್ಟ ಹಣದಿಂದ ತನ್ನ ತಮ್ಮನನ್ನು ಮುಂದೆ ಓದಿಸುತ್ತಾನೆ. ತಮ್ಮನ ಓದು ಮುಗಿದ ಮೇಲೆ ಅವನಿಗೆ ಈ ಎಲ್ಲಾ ಜಾವಾಬ್ದಾರಿಗಳನ್ನೂ ವಹಿಸಿ, ತಾನು ತನ್ನ ಕನಸನ್ನು ಈಡೇರಿಸಿಕೊಳ್ಳಬಹುದು ಎಂದೆಣಿಸಿರುತ್ತಾನೆ. ಆದರೆ ತನ್ನ ತಮ್ಮನಿಗೆ ಬೇರೊಂದು ಊರಿನಲ್ಲಿ ಒಳ್ಳೆಯ ಉದ್ಯೋಗಾವಕಾಶ ಇದೆ ಅಂತ ಗೊತ್ತಾದಾಗ, ತಮ್ಮನ ಒಳ್ಳೆಯ ಭವಿಷ್ಯಕ್ಕೋಸ್ಕರ ತನ್ನ ಕನಸುಗಳನ್ನು ಬದಿಗಿರಿಸುತ್ತಾನೆ. ಪಾಟರ್ ಹೇಗಾದರೂ ಮಾಡಿ ಜಾರ್ಜ್ ಬ್ಯಾಂಕನ್ನು ಕಬಳಿಸಬೇಕು ಅಂತ ಸದಾಕಾಲ ಹೊಂಚು ಹಾಕುತ್ತಿರುತ್ತಾನೆ. ಮುಂದೆ ಜಾರ್ಜ್ ಮೇರಿಯನ್ನು ಮದುವೆಯಾಗುತ್ತಾನೆ. ವಿಶಾಲ ಮನಸ್ಸಿನ ಮೇರಿ ತನ್ನ ಗಂಡನ ಪರೋಪಕಾರಿ ಕೆಲಸಗಳಿಗೆಲ್ಲಾ ಬೆಂಬಲ ಕೊಡುತ್ತಾಳೆ. ತನ್ನ ಸ್ನೇಹಿತರೆಲ್ಲಾ ಬೇರೆ ಊರುಗಳಿಗೆ ಹೋಗಿ, ದೊಡ್ಡ ದೊಡ್ಡ ಕೆಲಸ ಮಾಡಿಕೊಂಡು, ತುಂಬಾ ಶ್ರೀಮಂತರಾಗುತ್ತಿರುವಾಗ ಜಾರ್ಜ್ ತನ್ನ ಬ್ಯಾಂಕಿನ ಉಳಿವಿಗಾಗಿ ಮತ್ತು ತನ್ನೂರಿನ ಬಡಜನರ ಸುಖಕ್ಕಾಗಿ ಹೋರಾಟ ನಡೆಸುತ್ತಾ, ತನ್ನೂರಲ್ಲೇ ಕೊಳೆಯುವ ಪರಿಸ್ಥಿತಿ ಉಂಟಾಗುತ್ತದೆ.
ಒಮ್ಮೆ ಬ್ಯಾಂಕ್ ದಿವಾಳಿಯಾಗುವ ಮತ್ತು ತಾನು ಬಂಧಿತನಾಗುವ ಪರಿಸ್ಥಿತಿ ಬಂದೊದಗಿ ಹತಾಶನಾಗುವ ಜಾರ್ಜ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಾನೆ. ಇಲ್ಲಿಯವರೆಗೂ ಒಂದಾದಮೇಲೊಂದು ಕಷ್ಟ ಅನುಭವಿಸುವ ನಾಯಕನ ಮಾಮೂಲಿ ಕಥೆಗಳಂತೆ ಚಿತ್ರ ಸಾಗುತ್ತಿರುತ್ತದೆ. ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರುವ ದೇವದೂತನಿಗೆ ಜಾರ್ಜನ್ನು ಕಾಪಾಡುವ ಮತ್ತು ಅವನಿಗೆ ತನ್ನ ಜೀವನದ ಮಹತ್ವ ಅರಿವಾಗುವಂತೆ ಮಾಡುವ ಹೊಣೆಯಿರುತ್ತದೆ. ಅದನ್ನು ಆ ದೇವದೂತ ಹೇಗೆ ಮಾಡುತ್ತಾನೆ ಅನ್ನುವುದೇ ಚಿತ್ರದ ಅತ್ಯಂತ ಸ್ವಾರಸ್ಯಕರ ಅಂಶ!
ಒಂದು ಚಿತ್ರವನ್ನು ಸಂಕೀರ್ಣವಾಗಿ, ಕ್ಲಿಷ್ಟಕರವಾಗಿ ತೆಗೆದು ನೋಡುಗರನ್ನು ಬೆರಗುಗೊಳಿಸುವುದು ಅಂತ ಕಷ್ಟವೇನಲ್ಲ. ಅದೇ ಒಂದು ಕಥೆಯನ್ನು ಸರಳವಾಗಿ ಸುಂದರವಾಗಿ ಮನಸ್ಸಿಗೆ ತಾಕುವಂತೆ ಹೇಳುವುದು ಅತ್ಯಂತ ಕಷ್ಟದ ಕೆಲಸ. ಆ ದೃಷ್ಟಿಯಿಂದ ನೋಡಿದಾಗ ನಮಗೆ ಈ ಚಿತ್ರದ ದೊಡ್ಡತನ ಮನದಟ್ಟಾಗುತ್ತದೆ. ಕೇವಲ ಬೌದ್ಧಿಕವಾಗಿ ನಮ್ಮನ್ನು ಸೆಳೆಯುವ ನಿರ್ದೇಶಕ, ಮುಂದೇನು ಹೇಳಬಹುದು ಅಂತ ಸದಾ ಡಬಲ್ ಗೆಸ್ ಮಾಡುವ ಮನಸ್ಸು, ಈ ಥರದ ಚಿತ್ರಗಳನ್ನು ನೋಡುವಾಗ ಯಾಕೋ ಅಜ್ಜಿಯ ಕಥೆ ಕೇಳುವ ಪುಟ್ಟ ಮಗುವಿನಂತೆ ಆಗಿಬಿಡುತ್ತದೆ.
ಈ ಚಿತ್ರ ಆ ಮಟ್ಟಕ್ಕೆ ಪರಿಣಾಮಕಾರಿಯಾಗಲು ಕಾರಣ ಇದರ ನಾಯಕನಟ ಜಿಮ್ಮಿ ಸ್ಟೀವರ್ಟ್. ಜಿಮ್ಮಿ ಅತ್ಯಂತ ಸ್ಫುರದ್ರೂಪಿಯಲ್ಲ, ಬಹಳ ಪ್ರತಿಭಾನ್ವಿತ ನಟನೂ ಅಲ್ಲ. ಆದರೆ ಜಿಮ್ಮಿ ನೋಡಿದಾಕ್ಷಣ ಉಂಟಾಗುವ ಭಾವನೆ ಸಂಪೂರ್ಣ ನಂಬಿಕೆ ಮತ್ತು ಅಪರಿಮಿತ ಗೌರವ. ನನಗೆ ಜಿಮ್ಮಿಯನ್ನು ನೋಡಿದಾಗಲೆಲ್ಲಾ, ಇವನು ಥೇಟ್ ನಮ್ಮ ರಾಜಕುಮಾರ್ ಥರ ಅನ್ನಿಸುತ್ತಾನೆ. ಸರಳ, ಸಜ್ಜನ, ನೀತಿವಂತ, ಉಪಕಾರಿ – ಈ ಗುಣಗಳೆಲ್ಲಾ ನೈಜವಾಗಿ ತೆರೆಯ ಮೇಲೆ ಮೂಡಿಬರಬೇಕಾದರೆ ಒಬ್ಬ ರಾಜಕುಮಾರ್ ಅಥವಾ ಒಬ್ಬ ಜಿಮ್ಮಿ ಸ್ಟೀವರ್ಟ್ ಬೇಕೇ ಬೇಕು! ಅತಿಸರಳ ಅನ್ನಿಸುವ ಆ ಕಾಲದ ಎಷ್ಟೋ ಚಿತ್ರಗಳು ಈಗಲೂ ಸರಾಗವಾಗಿ ಪದೇಪದೇ ನೋಡಿಸಿಕೊಳ್ಳುತ್ತವೆ. ಕೇವಲ ತಮ್ಮಲ್ಲಿರುವ ಪ್ರಾಮಾಣಿಕತೆಯಿಂದ, ಒಳ್ಳೆಯತನದಿಂದ, ಡಿಗ್ನಿಟಿ ಇಂದ!
ಖಿನ್ನನಾದಾಗ, “ಥೂ ದರಿದ್ರ ಜೀವನವೇ” ಅನ್ನಿಸಿದಾಗ ಈ ಚಿತ್ರವನ್ನು ಅದೆಷ್ಟು ಸಲ ನೋಡಿದ್ದೀನೋ! ಮೊನ್ನೆ ಕ್ರಿಸ್ಮಸ್ ದಿನ ಮತ್ತೊಮ್ಮೆ ಈ ಚಿತ್ರವನ್ನು ನೋಡಿದೆ. ಈ ಸಲ ನೋಡುವಾಗ ಅಷ್ಟೇ ಭಾವುಕನಾಗುತ್ತೀನಾ ಅಂತ ಅನುಮಾನ ಕಾಡುತ್ತಿತ್ತು. ಆದರೆ ನನ್ನ ಅನುಮಾನ ಸುಳ್ಳಾಯಿತು. “ದಿ ಎಂಡ್” ಬರುವಷ್ಟರಲ್ಲಿ ಜೀವನ ನಿಜಕ್ಕೂ ಸುಂದರವಾಗಿದೆ ಅನ್ನಿಸುತ್ತಿತ್ತು. ಎದೆ ಭಾರವಾಗಿತ್ತು, ಕಣ್ಣು ಮಂಜಾಗಿತ್ತು, ಆದರೆ ಮುಖದ ಮೇಲೆ ಇಷ್ಟಗಲ ನಗುವಿತ್ತು!
******