ಇಚ್ಛಾಮರಣಿಯ ತ್ಯಾಗದ ಜೀವನ, ತ್ಯಾಗದ ಮರಣ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಮಹಾಭಾರತದ ಮಹಾಪಾತ್ರಗಳಲ್ಲಿ ಭೀಷ್ಮನದು ಬಹು ಮುಖ್ಯವಾದ ಪಾತ್ರವಾಗಿದೆ! ತ್ಯಾಗವೆಂಬ ಮಹಾಮೌಲ್ಯದಿಂದ ಕೂಡಿ ಪ್ರಸಿದ್ದವಾದುದಾಗಿದೆ. ಇವ ಕೌರವ ಪಾಂಡವರಿಗೆ ಅಜ್ಜನೂ ಗುರುವೂ ಆಗಿದ್ದು ಮಹಾಪರಾಕ್ರಮಿಯಾಗಿದ್ದವ!
ಶಂತನು ಮತ್ತು ಗಂಗಾದೇವಿಯರ ಪುತ್ರನೇ ಭೀಷ್ಮ! ಒಂದು ಕಟ್ಟುಪಾಡಿನ ಮೇರೆಗೆ ಶಂತನು ಗಂಗಾದೇವಿಯನ್ನು ಮದುವೆಯಾಗಿರುತ್ತಾನೆ. ಶಂತನು ಗಂಗಾ ದೇವಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಎಂಟು ಜನ ಗಂಡು ಮಕ್ಕಳನ್ನು ಪಡೆಯುತ್ತಾನಾದರೂ ಮಗು ಹುಟ್ಟುತ್ತಿದ್ದಂತೆ ಗಂಗಾದೇವಿ ಅದನ್ನು ತೆಗೆದುಕೊಂಡು ಗಂಗಾ ನದಿಯಲ್ಲಿ ಮುಳುಗಿಸಿ ಬರುತ್ತಿರುತ್ತಾಳೆ! ಪ್ರತಿ ಮಗು ಹುಟ್ಟಿದಾಗಲೂ ಶಂತನು ಅವಳ ಹಿಂದೆ ನದಿ ತೀರದವರೆಗೆ ಹೋಗಿ ಅವಳು ಮಗುವನ್ನು ನದಿಯಲ್ಲಿ ಮುಳುಗಿಸುತ್ತಿರುವುದನ್ನು ಕಣ್ಣಾರೆ ಕಂಡು ನೊಂದರೂ ತಡೆಯಲಾರದೆ, ಅವಳಿಗೆ ಎದುರಾಡಲಾಗದೆ ಮನದಲ್ಲೇ ದುಃಖಿಸುತ್ತಿರುತ್ತಾನೆ. ಎಂಟನೆಯ ಮಗುವನ್ನು ಮುಳುಗಿಸಲು ಹೋದಾಗ ” ತಡೆ, ಪುತ್ರಘಾತಿನಿ! ಅದನ್ನು ಕೊಲ್ಲಬೇಡ  ”  ಎಂದು ತಡೆಯುತ್ತಾನೆ. ಹೀಗೆ ತಡೆದುದರಿಂದ ತನ್ನ ಮಾತಿಗೆ ಎದುರಾಡಿ ಕಟ್ಟುಪಾಡನ್ನು ಉಲ್ಲಂಘಿಸಿದ್ದರಿಂದ ತಾನು ಹೊರಟು ಹೋಗುತ್ತೇನೆಂದು ಗಂಗಾದೇವಿ ಅವನನ್ನು ಬಿಟ್ಟು ಹೊರಟು ಹೋಗುತ್ತಾಳೆ. ಗಂಗೆ ಹದಿಮೂರನೇ ವಯಸ್ಸಿನವನಾಗುವವರೆಗೂ ಮಗನನ್ನು ತನ್ನ ಬಳಿಯೇ ಇಟ್ಟುಕೊಂಡು ಸಾಕಿ, ಸಂಸ್ಕಾರ, ಬಿಲ್ವಿವಿದ್ಯೆ ಕಲಿಸಿ ನಂತರ ಶಂತನುವಿಗೆ ಒಪ್ಪಿಸುತ್ತಾಳೆ! ಇಂತಹ ದೇವಲೋಕದ ಗಂಗಾದೇವಿಯ ಪುತ್ರನೇ ‘ ದೇವವ್ರತ ‘ ಹೆಸರಿನ ‘ ಭೀಷ್ಮ ‘ !
ಶಂತನು ಗಂಗಾದೇವಿಯಿಂದ ದೂರವಾಗಿ ನಂತರ ತನ್ನಂತೆ ವೀರನೂ ಸತ್ವ ಶಾಲೆಯೂ ಆದ ದೇವವ್ರತನಿಗೆ ಯುವರಾಜ ಪಟ್ಟ ಕಟ್ಟಿ ಅನೇಕ ವರುಷ ಕಳೆದವು. ಒಂದು ದಿನ ಒಂಟಿಯಾಗಿ ಯಮುನಾ ನದಿಯ ಹತ್ತಿರ ಕಾಡಿನಲ್ಲಿ ಸಂಚರಿಸುತ್ತಿರುತ್ತಾನೆ. ಅಲ್ಲಿ ದೇವ ಸುಂದರಿಯಂತಿದ್ದ ಬೆಸ್ತರ ಹುಡುಗಿಯೊಬ್ಬಳನ್ನು ಕಂಡು ಅವಳನ್ನು ಇಷ್ಟಪಡುತ್ತಾನೆ! ಅವಳ ತಂದೆಯನ್ನು ತನಗೆ ನಿಮ್ಮ ಮಗಳನ್ನು ಕೊಡಬೇಕೆಂದು ಕೇಳುತ್ತಾನೆ. ಅವರು ಸಂತೋಷವಾಗಿ ಕೊಡಲು ಒಪ್ಪಿದರಾದರೂ ಒಂದು ಷರತ್ತನ್ನು ವಿಧಿಸುತ್ತಾರೆ.  ತನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ರಾಜಪಟ್ಟ ಕಟ್ಟುವುದಾದರೆ ಕೊಡುವುದಾಗಿ ಸಮ್ಮತಿ ಸೂಚಿಸುತ್ತಾರೆ. ಆ ಷರತ್ತನ್ನು ಮದುವೆ ವಯಸ್ಸಿನ ಮಗನಾದ ಭೀಷ್ಮ ಇರುವ ಕಾರಣ ಈಡೇರಿಸಲಾಗದು ಎಂದು ಭಾವಿಸಿ ಅರಮನೆಗೆ ಹಿಂದಿರುಗಿ ಅವಳ ಚಿಂತೆಯಲ್ಲೇ ಆಹಾರ ನಿದ್ದೆ ಬಿಟ್ಟು ಶಂತನು ಕೊರಗತೊಡಗಿದ. ಈ ವಾರ್ತೆ ತಿಳಿದು ದೇವವ್ರತ ತಂದೆಯ ಯೋಗಕ್ಷೇಮ ಕೇಳಿ ಅವನ ಮನದ ಬಯಕೆಯನ್ನು ಸರಿಯಾಗಿ ತಿಳಿಯಲಾಗದೆ ತಂದೆಯ ಚಿಂತೆಗೆ ಕಾರಣವನ್ನು ಮಂತ್ರಿ ಮುಖ್ಯರಿಂದ ತಿಳಿದು ಅವರೊಂದಿಗೆ ದಾಶರಾಜನಲ್ಲಿಗೆ ಹೋಗಿ ತನ್ನ ತಂದೆಗೆ ನಿಮ್ಮ ಮಗಳನ್ನು ಕೊಡಬೇಕೆಂದು ಕೇಳಿದನು! ತನ್ನ ಮಗಳಲ್ಲಿ ಹುಟ್ಟುವ ಪುತ್ರನಿಗೆ ರಾಜಪಟ್ಟ ದೊರೆಯುವುದಾದರೆ ಮಗಳನ್ನು ಕೊಡಲು ಸಿದ್ಧ ಎಂದು ದಾಶರಾಜ ಹೇಳಿದನು. ” ಈಕೆಯಲ್ಲಿ ಮುಂದೆ ಹುಟ್ಟುವ ಮಗನು ರಾಜನಾಗುತ್ತಾನೆ ”  ಇದು ಸತ್ಯ ಎಂದು ದೇವವ್ರತ ಮಾತು ಕೊಟ್ಟ!   ” ನೀನೇನೋ ಅಂತಹವನೇ ಆದರೆ ನಿನ್ನ ಮಗ ಬಿಡಬೇಕಲ್ಲ “? ಎಂದ ದಾಶರಾಜ! ದಾಶರಾಜನ ಈ ಮಾತು ಪರೋಕ್ಷವಾಗಿ ನೀನು ಬ್ರಹ್ಮಚಾರಿಯಾದರೆ ಮಾತ್ರ ತನ್ನ ಮಗಳನ್ನು ಕೊಡುವೆ ಎಂಬ ಇನ್ನೊಂದು ಶರತ್ತನ್ನೂ ವಿಧಿಸಿದಂತೆ ಕಾಣತ್ತಿತ್ತು!  ” ನಾನು ಬ್ರಹ್ಮಚಾರಿಯಾಗಿಯೇ ಇರುತ್ತೇನೆ ಮಕ್ಕಳಿಲ್ಲದಿದ್ದರೂ ನನಗೆ ಉತ್ತಮ ಲೋಕ ದೊರೆಯುತ್ತದೆ‌” ಎಂದು ನೆರೆದ ಪ್ರಮುಖರ ಮಧ್ಯೆ ದೇವವ್ರತ ಭೀಷಣ ಪ್ರತಿಜ್ಞೆ ಮಾಡಿದ. ಇಂಥಾ ಭೀಷಣ ಪ್ರತಿಜ್ಞೆ ಮಾಡಿದ್ದರಿಂದ ಅಂದಿನಿಂದ ದೇವವ್ರತ  ‘ ಭೀಷ್ಮ ‘ ಎಂದೇ ಪ್ರಸಿದ್ದನಾದ! ಆದು ಅನ್ವರ್ಥನಾಮವಾದರೂ ಅದೇ ಪ್ರಚಲಿತವಾಗಿ ಉಳಿದು ಅಂಕಿತ ನಾಮ ಗೌಣಯಿತು! ಆ ಭೀಷಣ ಪ್ರತಿಜ್ಞೆಯನ್ನು ಪಾಲಿಸುತ್ತಾ ಬ್ರಹ್ಮಚಾರಿಯಾಗಿಯೇ ಉಳಿಯುತ್ತಾನೆ! ಈ ಪ್ರಯುಕ್ತನೇ ಅಂಬೆಯಿಂದ ತನ್ನ ಜೀವಕ್ಕೆ ಅಪಾಯ ತರುವ ಶಾಪದ ಆವಹನೆಗೈಯ್ಯುತ್ತಾನೆಂದರೆ ತಪ್ಪಾಗದು. ಭೀಷಣ ಪ್ರತಿಜ್ಞೆ ತ್ಯಾಗದ ಪ್ರತೀಕವಾಗಿದ್ದರೂ ಭೀಷಣವಾಗಿ ಯುದ್ದಮಾಡುವ ಮಹಾರಥನೂ ಆದ ಪ್ರಯುಕ್ತ ಭೀಷ್ಮ ಎಂಬ ಹೆಸರು ಅನ್ವರ್ಥನಾಮವಾಗಿಯೂ ಪರಿಣಮಿಸಿತು!
ತಂದೆ ಮಗನಿಗೆ ಮದುವೆ ಮಾಡುವುದು ಲೋಕರೂಢಿ! ಇಲ್ಲಿ ಮಗನೇ ತಂದೆಗೆ ಮದುವೆ ಮಾಡುವ ಪ್ರಸಂಗ ವಿಚಿತ್ರ! ಕನ್ಯಾದಾನ ಮಾಡಬೇಕೆಂದು ಹಿರಿಯರು ಹೋಗಿ ಹೆಣ್ಣೆತ್ತವರನ್ನು ಕಿರಿಯರ ಪರವಾಗಿ ಕೇಳುವುದು ಲೋಕರೂಢಿ! ಆದರೆ ಅವರ ಬದಲು ಕಿರಿಯನಾದ ಮಗನೂ ಆದ ಭೀಷ್ಮ ಹಿರಿಯನಾದ ತನ್ನ ತಂದೆಗೇ ಕನ್ಯಾದಾನ ಮಾಡಬೇಕೆಂದು ಕೇಳಲು ಹೋಗುವ ಪ್ರಸಂಗ ವಿಚಿತ್ರ! ವೈರುಧ್ಯ! ಮದುವೆ ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡ ಬೇಕಾದವರು ತನಗೇ ಮದುವೆ ಮಾಡಿಕೊಳ್ಳಲು ಮುಂದಾಗುವುದು ಇನ್ನೂ ವಿಚಿತ್ರ. ಈ ಥರದ ಮದುವೆಯಾಗುವುದು ಲೋಕ ರೂಢಿಯಲ್ಲಿ ಅಪರೂಪ! ಆದರೂ ಸತ್ಯ! ಈ ಸಂದರ್ಭ ದೇವವ್ರತನು ನಡೆ ನುಡಿಗಳಲಿ ತಂದೆ ಸ್ಥಾನದಲ್ಲಿದ್ದಂತೆಯೂ, ಶಂತನು ಮಗನ ಸ್ಥಾನದಲ್ಲಿದ್ದಂತೆಯೂ ಆಗಿದೆ. ಇದರಲ್ಲಿ ದೇವವ್ರತ ಕಿರಿಯ ವಯಸ್ಸಿಗೇ ಹಿರಿಯ ಸ್ಥಾನ ಹೊಂದಿ ಮೌಲ್ಯಯುತವಾಗಿ ನಡೆದು ಗೌರವ ಸಂಪಾದಿಸುತ್ತಾನೆ! ದೇವವ್ರತ ತಾನು ಕನ್ಯಾರ್ಥಿಯಾಗಿ ಕನ್ಯಾ ಮಣಿಯರ ಮನ ಕದ್ದು ಮದುವೆಯಾಗುವುದು ಬಿಟ್ಟು ತಂದೆಯ ಮನದರಸಿಯ ಅರಸಿ ಅವಳು ತಂದೆಯ ಪಟ್ಟದರಸಿಯಾಗಲು ಅನುಕೂಲವಾಗುವಂತೆ ರಾಜನಾಗುವ ಪಟ್ಟವನ್ನೇ ತ್ಯಾಗ ಮಾಡುವ ನಿರ್ಧಾರದ ಜೊತೆಗೆ ಆಜೀವ ಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದು ಸಂಸಾರ ಸುಖ ತ್ಯಾಗ ಮಾಡುವ ನಿರ್ಧಾರ ಮಾಡಿ ಮಹಾತ್ಯಾಗಿಯಾಗುವುದನ್ನು ನೋಡುತ್ತೇವೆ! ತಂದೆಯಾದವ ಮಗನ ಶ್ರೇಯಸ್ಸನ್ನು ಚಿಂತಿಸಬೇಕು. ಇಲ್ಲಿ ಭೀಷ್ಮನ ತಂದೆಯಾದ ಶಂತನು ತನ್ನ ಆಸೆ ಈಡೇರಿಸಿಕೊಳ್ಳಲು ಮಗನ ಆಸೆ ಆಕಾಂಕ್ಷೆಗಳಿಗೆ ಮಹತ್ವ ಕೊಡದಿರುವುದು ಕಾಣುತ್ತೇವೆ. ತಂದೆಗೆ ಮದುವೆ ಮಾಡಿ ತಾನು ಬ್ರಹ್ಮಚಾರಿಯಾಗಿಯೇ ಉಳಿದು ಸತ್ಯವತಿಗೆ, ಚಿತ್ರ ವೀರ್ಯನಿಗೆ ಆಸರೆಯಾಗಿದ್ದುದು, ದೃತರಾಷ್ಟ್ರ, ಪಾಂಡುರಾಯ, ವಿಧುರ ಇವರಿಗೆ ಮತ್ತು ಮೊಮ್ಮಕ್ಕಳಾದ ಕೌರವರು ಪಾಂಡವರಿಗೆ ಸಂಸ್ಕಾರ, ವಿದ್ಯೆ, ಬುದ್ದಿ, ಪಾಲನೆ, ಪೋಷಣೆ, ಮದುವೆ, ಮಾರ್ಗದರ್ಶನ ಮಾಡುತ್ತಾ, ಅವರ ಏಳ್ಗೆಗಾಗಿ ಜೀವ ಸವೆಸುತ್ತಾನೆ!
ಹದಿನೆಂಟು ದಿನಗಳ ಮಹಾಭಾರತದ ಯುದ್ಧ ಆರಂಭವಾಗುತ್ತದೆ. ಭೀಷ್ಮ ಅನಿವಾರ್ಯವಾಗಿ ಕೌರವರ ಪಕ್ಷದಲ್ಲಿ ಇರಬೇಕಾಗಿ ಬರುತ್ತದೆ.  ಭೀಷ್ಮ ಕೌರವರ ಪರವಾಗಿ ಆ ಸೈನ್ಯಕ್ಕೆ ಸೇನಾಧಿಪತಿಯಾಗಿ ಒಂಬತ್ತು ದಿನಗಳ ಕಾಲ ಶಕ್ತಿ ಕುಂದದೆ ಯುದ್ಧ ಮಾಡುತ್ತಾನೆ! ಇವನು ಯುದ್ಧ ಮಾಡುವ ಪರಿಗೆ ಧರ್ಮರಾಯ ಬೆದರಿ ಹೋಗಿರುತ್ತಾನೆ. ಅಂತಹ ಭೀಷಣ ಯುದ್ದ ಇವನದಾಗಿರುತ್ತದೆ. ಒಂಬತ್ತನೇ ದಿನ ರಾತ್ರಿ ಭೀಷ್ಮನನ್ನು ಸೋಲಿಸುವುದು ಹೇಗೆ ಎಂಬ ಚಿಂತನ ಮಂಥನ  ಪಾಂಡವರ ಪಾಳಯದಲ್ಲಿ ನಡೆಯುತ್ತಿರುತ್ತದೆ. ” ನೋಡು ಕೃಷ್ಣ! ಭೀಷ್ಮನ ಪರಾಕ್ರಮ ಭಯಂಕರವಾಗಿದೆ. ಅವನ ಮೇಲೆ ಯುದ್ದ ಮಾಡುವುದು ಪತಂಗದ ಹುಳು ಜ್ವಾಲೆಯನ್ನು ನಂದಿಸ ಹೋಗಿ ತನ್ನ ತಾ ಸುಟ್ಟುಕೊಂಡಂತೆ! … ಎಂದು ಭೀಷ್ಮನ ಯುದ್ದದ ಭೀಷಣತೆಯನ್ನು ವರ್ಣಿಸಿದುದಲ್ಲದೆ ಭೀಷ್ಮನನ್ನು ಸೋಲಿಸುವುದು ಸುಲಭವಲ್ಲ. ಇದು ನನಗೆ ಸಾಕಾಗಿದೆ: ಉಳಿದ ಜೀವಿತವನ್ನು ಉತ್ತಮ ಧರ್ಮವಾವುದೋ ಅದರಲ್ಲಿ ಕಳೆಯೋಣವೆನ್ನಿಸಿದೆ. ಕ್ಷತ್ರಿಯರ ಧರ್ಮಕ್ಕೆ ವಿರುದ್ದವಾಗದ ಅಂಥಾ ಧರ್ಮವಾವುದು ಹೇಳು!” ಎಂದು ಧರ್ಮರಾಯ ಕೃಷ್ಣನನ್ನು ಕೇಳುವಂತೆ ಮಾಡುತ್ತದೆ ಭೀಷ್ಮನ ಭೀಕರ ಸಮರದ ಪರಿ! ಹೀಗೇ ಭಿಷ್ಮನ ಭೀಕರ ಯುದ್ದದ ಬಗ್ಗೆ ಪ್ರಶ್ನಿಸುವುದು ಉತ್ತರಿಸುವುದು ನಡೆದೇ ಇರುತ್ತದೆ. ಚರ್ಚೆಯ ಕೊನೆಯಲ್ಲಿ ಭೀಷ್ಮನನ್ನು ಕೊಲ್ಲುವುದು ಹೇಗೆಂದು ಭೀಷ್ಮನನ್ನೇ ಕೇಳಲು ಹೋಗಬೇಕೆಂದು ತೀರ್ಮಾನಿಸಿ ಅವನ ಬಳಿಗೆ ಹೋಗಿ ಕೌರವರನ್ನು ಸೋಲಿಸುವುದು ಹೇಗೆಂದು ಕೇಳಿದಾಗ ” ನಿಮಗೆ ಗೆಲುವು ಬೇಕಾದರೆ ನನ್ನನ್ನು ಬೇಗ ಕೊಂದುಬಿಡಿ ಎನ್ನುತ್ತಾನೆ .” ನನ್ನನ್ನು ಕೊಲ್ಲದೆ ಕೌರವರನ್ನು ಸೋಲಿಸುವುದು ಅಸಾಧ್ಯ ಎಂಬ ಅರ್ಥ ಆ ಮಾತಲ್ಲಿ ಕಾಣಬಹುದು! ಹಾಗೂ ತಾನು ಧರ್ಮಕ್ಕಾಗಿ ತನ್ನ ಪ್ರಾಣ ಅರ್ಪಿಸಲು ಸಿದ್ದ ಎಂಬ ಧ್ವನಿಯನ್ನು ಆ ಮಾತು ಒಳಗೊಂಡಿದೆ! ಹಾಗೆ ಶಿಖಂಡಿಯನ್ನು ಮುಂದಿಟ್ಟುಕೊಂಡು ಯುದ್ದಮಾಡಿದರೆ ತನ್ನನ್ನು ನೆಲಕ್ಕುರುಳಿಸುವುದು ಸುಲುಭ ಎಂದು ತನ್ನ ಜೀವಕ್ಕೆ ಅಪಾಯವಾಗುವ ಉಪಾಯವನ್ನು ಹೇಳಿಕೊಡುತ್ತಾನೆ! ಈ ಮೂಲಕ ಧಾರ್ಮಿಕ ನಡೆ ಪ್ರದರ್ಶಿಸುತ್ತಾ ಧರ್ಮವನ್ನು ಗೆಲ್ಲಿಸಲು ತಾನು ಸೋತು ತನ್ನ ಜೀವವನ್ನು ತ್ಯಾಗ ಮಾಡುವ ಚಿಂತನೆ ಮಾಡುತ್ತಾನೆ! ಪಾಂಡವರು‌ ಭೀಷ್ಮನನ್ನು ನೆಲಕ್ಕುರುಳಿಸುವುದು ಹೇಗೆಂದು ಅವನಿಂದಲೇ ಸಲಹೆ ಪಡೆದುದು ವಿಪರ್ಯಾಸ! ಆದರೂ ಸತ್ಯ! ಭೀಷ್ಮನನ್ನು ನೆಲಕ್ಕುರುಳಿಸಲು ಅಂಬೆಯ ಶಾಪವೂ ಪೂರಕವಾಗುತ್ತದೆ! ಇಚ್ಛಾಮರಣಿಯಾದ ಭೀಷ್ಮ ಸಾಯದಂತಿರಬಹುದಿತ್ತು!  ಆದರೆ ಧರ್ಮಕ್ಕೆ ಜಯವಾಗಬೇಕೆಂದು ಭಾವಿಸಿ ತಮ್ಮನ್ನು ಹೇಗೆ ನೆಲಕುರುಳಿಸಬೇಕೆಂದು ಸಲಹೆ ಕೊಟ್ಟು ಶರಶಯೆ ಮೇಲೆ ಮಲಗಿ ಯಾತನೆಯಿಂದ ಉತ್ತರಾಯಣ ಪುಣ್ಯ ಕಾಲ ಬರುವವರೆಗೂ ಕಾದು ಜೀವಬಿಡಬೇಕಾಯಿತು! ತಂದೆಯ ಸಂಸಾರದ ಸುಖಕ್ಕಾಗಿ ಬ್ರಹ್ಮಚಾರಿಯಾಗಿ ತನ್ನ ಸಂಸಾರದ ಜೀವನ ಆರಂಭಿಸಲೇ ಇಲ್ಲ! ಮಕ್ಕಳು, ಮೊಮ್ಮಕ್ಕಳ ಏಳಿಗೆ, ಮಾರ್ಗದರ್ಶನದಲ್ಲಿ ಬದುಕ ತ್ಯಾಗ ಮಾಡಿದ! ಧರ್ಮಕ್ಕೆ ಜಯವಾಗಲೆಂದು ಸೋಲರಿಯದ ಪರಾಕ್ರಮಿ ಶಸ್ತ್ರತ್ಯಜಿಸಿ ಸೋತು, ಶರಶಯೆಯಲ್ಲಿ ಮಲಗಿ ಪ್ರಾಣವನ್ನೂ ತ್ಯಾಗ ಮಾಡಿ ತ್ಯಾಗಮೂರ್ತಿಯಾದ ಇಚ್ಛಾಮರಣಿ!
ವಸ್ತು, ಒಡವೆ, ಆಸ್ತಿ, ಸಿರಿ, ಸಂಪತ್ತು, ಅಧಿಕಾರ ಗಳಿಸುವುದರಲ್ಲಿ ಅದನ್ನು ಪಡೆದು ಅನುಭವಿಸುವುದರಲ್ಲಿ ಸುಖ ಇದೆ ಎಂದು ಜನ ಭಾವಿಸಿದ್ದಾರೆ! ತ್ಯಾಗದಲ್ಲೂ ಪರಮ ಸುಖವಿದೆ ಎಂಬುದು ಅನೇಕರು ತಿಳಿದಿಲ್ಲ! ತ್ಯಾಗ ಮಾನವೀಯ ಮೌಲ್ಯಗಳಲ್ಲಿ ಶ್ರೇಷ್ಠವಾದುದು! ಹಾಗೇ ಭಿಷ್ಮನ ಬದುಕು!
ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x