ಇಗೋ ತಗಳ್ಳಿ – ಅಳಿವಿನ ಸವಾಲಿಗೆ ಉಳಿವಿನ ಉತ್ತರ!!!: ಅಖಿಲೇಶ್ ಚಿಪ್ಪಳಿ


ಪ್ರತಿವರ್ಷ ಜೂನ್ 5ರಂದು ಪರಿಸರ ದಿನಾಚರಣೆ. ಇದನ್ನು ಕೆಲವು ಕಡೆ ವಿಜೃಂಭಣೆಯಿಂದ, ಕೆಲವೆಡೆ ಕಾಟಾಚಾರಕ್ಕಾಗಿ, ಕೆಲವೆಡೆ ನೈಜ ಕಾಳಜಿಯಿಂದ, ಹಲವೆಡೆ ಪೋಟೋ ಸೆಷನ್‍ಗಾಗಿ ಆಚರಿಸಲಾಗುತ್ತಿದೆ. ಇದು ಇಲಾಖೆಗೂ ಒಂದು ಸರ್ಕಾರಿ ಶ್ರಾದ್ಧದ ಆಚರಣೆಯಿದ್ದಂತೆ. ಆಚರಿಸದಿದ್ದರೆ ಭಾರೀ ಲೋಪ ಜೊತೆಗೆ ಉಗ್ರ ಟೀಕೆ! ಆಚರಿಸಿ ಸಾರ್ಥಕಗೊಳಿಸಿದ ನಿದರ್ಶನಗಳು ಕಡಿಮೆಯೇ. ನಾವು ಪ್ರತಿವರ್ಷ ವಿಶ್ವಪರಿಸರ ದಿನಾಚರಣೆಯನ್ನು ಒಂದೇ ಕಡೆಯಲ್ಲಿ ಆಚರಿಸುತ್ತೇವೆ. ಗುಂಡಿ-ಹೊಂಡ ತೆಗೆಯುವ ಕೆಲಸವೇ ಇಲ್ಲ. ಹೋದ ವರ್ಷ ನೆಟ್ಟ ಗುಂಡಿಯಲ್ಲೇ ಈ ವರ್ಷವೂ ಗಿಡ ನೆಟ್ಟು ಫೋಟೊ ಹೊಡೆಸಿಕೊಳ್ಳುವುದು ಎಂಬುದೊಂದು ಜೋಕಾಗಿ ಹೋಗಿದೆ.  ಕಡೇ ಪಕ್ಷ ಜನರಲ್ಲಾದರೂ ಈ ಬಗ್ಗೆ ಜಾಗೃತಿ ಮೂಡಬೇಕು. ಕನಿಷ್ಟ ನೆಟ್ಟ ಗಿಡದ ಪಾಲಿಥೀನ್ ಕೊಟ್ಟೆಯನ್ನಾದರೂ ಪರಿಸರಕ್ಕೆ ಹೊರೆಯಾಗದಂತೆ ನಿರ್ವಹಣೆ ಮಾಡುವಷ್ಟು, ನೆಟ್ಟ ಗಿಡವನ್ನು ಕನಿಷ್ಟ ಮೂರು ವರ್ಷಗಳವರೆಗಾದರೂ ಪೋಷಿಸುವುದು ಇಂತಹ ನಿಟ್ಟಿನಲ್ಲಿ ಜಾಗೃತಿ ಮೂಡಬೇಕು. ಈ ಸಂದರ್ಭದಲ್ಲಿ  ಕೊಂಚ ಗಂಭೀರ ಮತ್ತು ಕೊಂಚ ಹಾಸ್ಯಮಯವಾದ 6 ಪ್ರಶ್ನೆಗಳನ್ನು ಕನ್ನಡದ ವಿಜ್ಞಾನ-ಪರಿಸರ ಬರಹಗಾರ, ಜೀವ-ಜನಪರ ಕಾಳಜಿ ಹೊಂದಿರುವ ವಿಶೇಷ ವ್ಯಕ್ತಿ  ನಾಗೇಶ ಹೆಗಡೆಯವರಿಗೆ ಕೇಳಲಾಗಿತ್ತು. ಪ್ರಸ್ತುತ ಭೂಮಿಯ ಮೇಲಿನ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಅವರೂ ಅಷ್ಟೇ ಗಂಭೀರವಾಗಿ, ಹಾಸ್ಯವಾಗಿ, ಓದಿದವರ ಕಣ್ತೆರೆಸುವಂತೆ ಉತ್ತರಿಸಿದ್ದಾರೆ. ಓದಿ.

ಪ್ರಶ್ನೆ 1: ಈ ಭೂಮಿಯ ಮೇಲೆ ವಾಸಿಸುತ್ತಿರುವ ಅಸಂಖ್ಯ ಪ್ರಬೇಧಗಳ ಜೀವಿಗಳಲ್ಲಿ ಮಾನವನೇ ಅತ್ಯಂತ ಬುದ್ಧಿವಂತ ಜೀವಿ ಎಂದು ತನಗೆ ತಾನೇ ಆರೋಪಿಸಿಕೊಂಡಿದ್ದಾನೆ. ಇದೆಷ್ಟು ಸರಿ?
ಒಂದು ಹುಲ್ಲು ಸಸ್ಯ ನೆಲಕ್ಕೆ ಗಾಯ ಮಾಡದೇ ರಂಧ್ರ ಕೊರೆಯುತ್ತದೆ. ಗಾಳಿಯ ತೇವಾಂಶದಿಂದಲೇ ಮುತ್ತಿನಂಥ ನೀರ ಹನಿಯನ್ನು ಸೃಷ್ಟಿಸಿ ತನ್ನ ಬೇರಿಗೆ ತಾನೇ ನೀರಾವರಿ ವ್ಯವಸ್ಥೆ ಮಾಡಿಕೊಳ್ಳುತ್ತದೆ.  ತನ್ನ ಆಹಾರವನ್ನು ತಾನೇ ಉತ್ಪಾದಿಸುತ್ತದೆ. ಅಪ್ಪಟ ಸ್ವಾವಲಂಬಿ ಅದು. ಕೆಮಿಕಲ್ ಸಂದೇಶ ಕಳಿಸಿ ಗೆಳೆಯರೊಂದಿಗೆ ಮಾತಾಡುತ್ತದೆ. ವೈರಿಗಳನ್ನು ದೂರ ಇಡುತ್ತದೆ. ನಮಗೆ ಅದಾವುದೂ ಸಾಧ್ಯವಿಲ್ಲ. ನಮಗಿಂತ ಎಷ್ಟೋ ಪಟ್ಟು ಕೌಶಲ ಇತರ ಜೀವಿಗಳಲ್ಲಿವೆ. ಏಕೆಂದರೆ ಈ ಭೂಮಿಯ ಮೇಲೆ ಅವು ನಮಗಿಂತ ಅದೆಷ್ಟೋ ಕೋಟಿ ವರ್ಷಗಳ ಮೊದಲೇ ವಿಕಾಸಗೊಂಡಿವೆ. ನಾವಾದರೋ ಪರಮೋನ್ನತ ಪರಾವಲಂಬಿಗಳು. ಪರರ ಕೌಶಲದ ಫಲವನ್ನು ನಮ್ಮದಾಗಿಸಿಕೊಳ್ಳುವಲ್ಲಿ ನಾವು ನಿಸ್ಸೀಮರು. ಜೀವಪ್ರಪಂಚದಲ್ಲಿ ಹಾಸು ಹೊಕ್ಕಾಗಿರುವ ದಗಾ, ಮೋಸ, ಸಹಕಾರ, ಸಂಘಟನೆ, ವಂಚನೆ, ಠಕ್ಕು, ಉಪಕಾರೀ ಬುದ್ಧಿ ಎಲ್ಲವನ್ನೂ ನಮ್ಮದಾಗಿಸಿಕೊಂಡವರು ನಾವು. ಇತರೆಲ್ಲ ಜೀವಿಗಳಿಂತ ನಾವು ಹೆಚ್ಚು ಶಕ್ತರಾಗಿದ್ದೇವೆ ಏಕೆಂದರೆ ನಮ್ಮ ಮಾತಿನ ಶಕ್ತಿಯಿಂದಾಗಿ ನಾವು ಅಗಾಧ ಸಂಘಟನಾ ಶಕ್ತಿಯನ್ನು ಪಡೆದಿದ್ದೇವೆ. ಎಂದೂ ನೋಡದ ಜನರಿಂದಲೂ ನಾವು ಕಲಿಯುತ್ತೇವೆ. ಹಿಂದೆ ಆಗಿಹೋದ, ಇಂದು ಬದುಕಿರುವ ಎಲ್ಲರ ಅನುಭವ ಮತ್ತು ಜ್ಞಾನ ಇಂದು ನಮ್ಮದೂ ಆಗಿರುತ್ತದೆ. ಹಾಗಾಗಿ ಇಡೀ ಮನುಕುಲವೇ ಒಂದು ದೊಡ್ಡ ಮಿದುಳಿನಂತೆ ಕೆಲಸ ಮಾಡುತ್ತಿದೆ. ಹಾಗಾಗಿ ನಾವಿಂದು ಅತ್ಯಂತ ಶಕ್ತಿಶಾಲಿ ಜೀವಿ ಎನಿಸಿದ್ದೇವೆ. 

ಪ್ರಶ್ನೆ 2: 750 ಕೋಟಿ ಜನಸಂಖ್ಯೆಯ ಭಾರದಿಂದ ಭೂಮಿ ನಲುಗುತ್ತಿದೆ. ಇಷ್ಟು ಭಾರಿ ಸಂಖ್ಯೆಯ ಎದುರು ನಗಣ್ಯವೆನ್ನುವಷ್ಟು ಜನ ಪರಿಸರವನ್ನು ಉಳಿಸಿ-ಬೆಳೆಸಬೇಕು ಎಂದು ಹೋರಾಡುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಯಶ ಸಿಗುವ ಸಾಧ್ಯತೆ ಇದೆಯೇ?
ಎಲ್ಲ ಚಳವಳಿಗಳೂ ಬೆರಳೆಣಿಕೆಯ ಜನರಿಂದಲೇ ಮುನ್ನಡೆಯುತ್ತವೆ. ಮೇಲಾಗಿ ಪರಿಸರ ಸಂವರ್ಧನೆ ಕೇವಲ ಹೋರಾಟಗಳಿಂದಷ್ಟೇ ಆಗುವುದಲ್ಲ. ಇಂದು ಲಕ್ಷಾಂತರ ಜನರು ಸುಸ್ಥಿರ ಬದುಕಿಗೆ ಹೊಸ ಹೊಸ ಮಾರ್ಗಗಳನ್ನು ಶೋಧಿಸುತ್ತಿದ್ದಾರೆ. ವೈಜ್ಞಾನಿಕ ಸಂಶೋಧನೆಯ ದಿಕ್ಕು ಮೆಲ್ಲಗೆ ಬದಲಾಗುತ್ತಿದೆ. ಬಿಸಿಲು, ಗಾಳಿ, ಜೈವಿಕ ಸಂಪತ್ತಿನಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅವುಗಳ ದಕ್ಷತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತ್ಯಾಜ್ಯದ್ರವ್ಯಗಳನ್ನು ಮತ್ತೆ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಯತ್ನಗಳು ನಡೆಯುತ್ತಿವೆ. ಕಡಿಮೆ ವಿದ್ಯುತ್ ಚಾಲಿತ ಯಂತ್ರಗಳ ದಕ್ಷತೆ ಹೆಚ್ಚುತ್ತಿದೆ. ಒಂದು ಜೀವಪ್ರಭೇದದ ಉಳಿವಿಗಾಗಿ, ಒಂದು ಅಪ್ಪೆ ಮಿಡಿ ತಳಿಯ ಉಳಿವಿಗಾಗಿ ಏನೆಲ್ಲ ಶ್ರಮಿಸುವವರು ನಮ್ಮಲ್ಲಿದ್ದಾರೆ. ಅವರೆಲ್ಲರೂ ಪರಿಸರ ಹೋರಾಟಗಾರರು ಮತ್ತು ಅವರಿಗೆ ಸಿಕ್ಕ ಯಶಸ್ಸೆಲ್ಲವೂ ಪರಿಸರ ಹೋರಾಟದ ಪರೋಕ್ಷ ಯಶಸ್ಸು ಎಂತಲೇ ಹೇಳಬೇಕು. ಹಾಗೆಂದು ಯಾರೋ ಎಲ್ಲರ ಸಮಸ್ಯೆಗೆ ಉತ್ತರ ಕಂಡುಹಿಡಿಯುತ್ತಾರೆಂದು ನಾವು ಕೈಕಟ್ಟಿ ಕೂರುವಂತಿಲ್ಲ. ಚಳವಳಿ ನಿರಂತರವಾಗಿರಬೇಕು. ಏಕೆಂದರೆ ಪರಿಸರ ಸಮಸ್ಯೆಗಳು ಹೊಸ ಹೊಸ ರೂಪದಲ್ಲಿ ಎದುರಾಗುತ್ತಿರುತ್ತವೆ. ನಮ್ಮ ಎಳೆಯ ಪೀಳಿಗೆಗೆ ನಾವು ಪರಿಸರ ನಾಶದ ಕುರಿತು ಕಹಳೆ ಊದುತ್ತ ಅದರ ರಕ್ಷಣೆಯ ಅಗತ್ಯಗಳ ಕುರಿತು ಜಾಗೃತಿ ಮೂಡಿಸುತ್ತಲೇ ಇರಬೇಕು. ಯಾರೋ ಅಮೆರಿಕದವರೋ ಜಪಾನೀಯರೊ ಕೊರಿಯದ ತಜ್ಞರೋ ನಮ್ಮ ಸಮಸ್ಯೆಗಳಿಗೆ ಉತ್ತರ ಹುಡುಕುವ ಬದಲು ನಮ್ಮ ಯುವಜನರೇ ಸಂಶೋಧನೆಗೆ ತೊಡಗಬೇಕು. ನಮ್ಮ ಅಷ್ಟೇ ಅಲ್ಲ ಜಾಗತಿಕ ಸಮಸ್ಯೆಗಳಿಗೂ ಅವರು ಉತ್ತರ ಹುಡುಕುವಂತೆ ನಾವು ಪ್ರೇರಣೆ ನೀಡಬೇಕು.

ಪ್ರಶ್ನೆ 3: ಅಂಧ್ರ ಮತ್ತು ತೆಲಂಗಾಣದಲ್ಲಿ ಬಿಸಿಗಾಳಿಗೆ ಬಡಜನರು ಪುತು-ಪುತನೆ ಉದುರಿ ಪ್ರಾಣ ಕಳೆದುಕೊಂಡರು, ಜೊತೆಗೆ ಲೆಕ್ಕವಿಲ್ಲದಷ್ಟು ಪಶು-ಪಕ್ಷಿ, ಸ್ತನಿ-ಸರಿಸೃಪ, ಉಭಯವಾಸಿ ಹೀಗೆ ಸಕಲ ಚರಾಚರಗಳಿಗೂ ಹಾನಿಯಾಯಿತು. ಹವಾಮಾನ ವೈಪರೀತ್ಯಕ್ಕೂ, ಬಿಸಿಗಾಳಿಗೂ ನೇರ ಸಂಬಂಧವಿದೆಯೇ?
ನೇರ ಸಂಬಂಧವಿದೆ. ಗಾಳಿ, ಮಳೆ, ಹಿಮಪಾತ, ಶುಷ್ಕತೆ ಹೀಗೆ ವಾತಾವರಣಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಏರುಪೇರುಗಳೂ ಈಗ ತೀವ್ರ ಸ್ವರೂಪ ಪಡೆಯುತ್ತಿವೆ. ಪ್ರತಿ 10-12 ವರ್ಷಗಳಿಗೊಮ್ಮೆ ಎಲ್ ನೈನೊ ಪರಿಣಾಮದಿಂದ ವಾತಾವರಣದಲ್ಲಿ ವೈಪರೀತ್ಯಗಳಾಗುತ್ತವೆ. ಅದರ ಪರಿಣಾಮವೇ ಈಗಿನ ಅತಿ ಸೆಕೆಗೆ ಕಾರಣವೆಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಆದರೆ ಎಲ್‍ನೈನೊ ಹಿಂದೆಯೂ ಬರುತ್ತಿತ್ತು. ಆದರೆ ಈ ಬಗೆಯ ಉತ್ಪಾತಗಳನ್ನು ಸೃಷ್ಟಿ ಮಾಡುತ್ತಿರಲಿಲ್ಲ. ಬಿಸಿ ಪ್ರಳಯದ ಕಾರಣದಿಂದಾಗಿಯೇ ಅಂಥವು ಇನ್ನೂ ಉಗ್ರರೂಪ ಪಡೆಯುತ್ತಿವೆ. 

ಪ್ರಶ್ನೆ 4: ಪ್ರಪಂಚದ ಈಗಿನ ಅತಿದೊಡ್ಡ ಸಮಸ್ಯೆ ಎಂದರೆ ಹವಾಮಾನ ವೈಪರೀತ್ಯ ಎಂದು ಎಲ್ಲರೂ ಹೇಳುತ್ತಾರೆ. ಆದರೂ ಸಮೂಹ ಮಾಧ್ಯಮಗಳು ಈ ಕುರಿತು ವ್ಯಾಪಕವಾಗಿ ಇನ್ನೂ ಕಣ್ಣು ತೆರೆದಿಲ್ಲ ಏಕೆ?
ಅದರರ್ಥ ಅವಕ್ಕೆ ಇನ್ನೂ ಬಿಸಿ ತಟ್ಟಿಲ್ಲ! ನಮ್ಮ ಸಮೂಹ ಮಾಧ್ಯಮಗಳೆಲ್ಲ ನಗರಕೇಂದ್ರಿತವೇ ಆಗಿರುವುದರಿಂದ ಅವಕ್ಕೆ ಗ್ರಾಮೀಣ ಭಾಗದ ಅಥವಾ ದೂರದ ದ್ವೀಪಗಳ ಜನರ ಬದುಕಿನ ಸಂಕಷ್ಟಗಳ ಗಮನ ಕಡಿಮೆ. ಕ್ರಮೇಣ ಅವೂ ಗಮನ ಹರಿಸಲೇಬೇಕಾಗುತ್ತದೆ. ಸದ್ಯ ಕ್ಯಾಲಿಫೋರ್ನಿಯಾ ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಬೀಳುತ್ತಿದ್ದು ಈ ಕುರಿತು ಅಲ್ಲಿನ ಮಾಧ್ಯಮಗಳಲ್ಲಿ ಅಹೋರಾತ್ರಿ ಅದರದ್ದೇ ಸುದ್ದಿ ಚರ್ಚೆಯಾಗುತ್ತಿದೆ. ನಾವು ದೂರದಲ್ಲಿದ್ದೇವೆ, ಬಿಸಿ ತಟ್ಟುತ್ತಿಲ್ಲ. ಸಮಸ್ಯೆ ನಮ್ಮ ಕಾಲಬಳಿ ಬಂದಾ ಮಾಧ್ಯಮಗಳು ಎಚ್ಚೆತ್ತುಕೊಳ್ಳುತ್ತವೆ. ಬೆಂಗಳೂರಿನಲ್ಲಿ ಜಡಿಮಳೆ, ಬಿಸಿಲ ಬೇಗೆ ಹೆಚ್ಚಾದಾಗಲೆಲ್ಲ ಇಲ್ಲೂ ಒಂದೆರಡು ದಿನ ಚರ್ಚೆ ನಡೆಯುತ್ತದಲ್ಲ! 

ಪ್ರಶ್ನೆ 5: ಹಠಾತ್ ಆಗಿ ಬಿಸಿ ಪ್ರಳಯವೇನಾದರೂ ಏಕಕಾಲಕ್ಕೆ ರಾಜಕೀಯ ಶಕ್ತಿಕೇಂದ್ರಗಳಲ್ಲೇ ಉಂಟಾದರೆ? ಅಂತಾರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯ ನಾಯಕರೇನು ಮಾಡುವರು?
ಇದು ಅಪ್ಪಟ ಕಾಲ್ಪನಿಕ ಸಾಧ್ಯತೆ! ಬಿಸಿ ಪ್ರಳಯ ಹಠಾತ್ತಾಗಿ ಬರುವುದಿಲ್ಲ. ರಾಜಕೀಯ ಶಕ್ತಿಕೇಂದ್ರಗಳಂತೂ ಸಂಪತ್ತು ಮತ್ತು ಅಧಿಕಾರದ ದೃಷ್ಟಿಯಿಂದಲೂ ಶಕ್ತಿಯುತವಾಗಿಯೇ ಇರುವುದರಿಂದ ಜಗತ್ತಿನ ಎಲ್ಲ ಶಕ್ತಿಗಳನ್ನೂ ಯುಕ್ತಿಗಳನ್ನೂ ತಮ್ಮಲ್ಲಿಗೇ ಹರಿಸಿಕೊಳ್ಳುತ್ತವೆ. ‘ನೀರಿನ ಅಭಾವದಿಂದಾಗಿ ಬೆಂಗಳೂರಿನ ಜನರು 2025ರ ವೇಳೆಗೆ ಗುಳೆ ಹೋಗಬೇಕಾಗಿ ಬರಬಹುದು’ ಎಂದು ವಿ.ಬಾಲಸುಬ್ರಹ್ಮಣ್ಯಂ ಹೇಳಿದ್ದು ನಿಜವೇ ಆಗುವುದಾದರೂ ದುರ್ಬಲರು ಮಾತ್ರ ಗುಳೆ ಹೋಗುತ್ತಾರೆ. ಅರ್ಧದಷ್ಟು ಜನರು ಖಾಲಿಯಾದರೂ ಇನ್ನುಳಿದವರು ಹಾಯಾಗಿಯೇ ಇರುತ್ತಾರೆ ತಾನೆ? 

ಪ್ರಶ್ನೆ 6: ಸಾಪೇಕ್ಷ ದೃಷ್ಟಿಕೋನದಲ್ಲಿ ಈಗಿನ ಪರಿಸರ ನಾಶದ ಪ್ರಮಾಣವನ್ನು ತುಲನೆ ಮಾಡಿದರೆ, ಇಡೀ ಮನುಕುಲದ ಆಯಸ್ಸು ಎಷ್ಟಿರಬಹುದು?
ತನ್ನ ವಿಕಾಸದ ಇಪ್ಪತ್ತು ಲಕ್ಷ ವರ್ಷಗಳ ದೀರ್ಘ ಇತಿಹಾಸದಲ್ಲಿ ಮನುಷ್ಯ ಜೀವಿ ಅದೆಷ್ಟೋ ಬಗೆಯ ಪ್ರಳಯಗಳನ್ನು ದಾಟಿ ಬಂದಿದ್ದಾನೆ. ಈಗಲೂ ನಮೀಬಿಯಾದ ಘೋರ ಮರುಭೂಮಿಯಲ್ಲೂ ಉತ್ತರ ಧ್ರುವದ ಬಳಿಯ ಮಹಾಚಳಿಯಲ್ಲೂ ಮನುಷ್ಯರು ವಾಸವಾಗಿದ್ದಾರೆ. ಮನುಷ್ಯ ಪ್ರಕೃತಿಯ ಶಿಶುವೇ ಆಗಿರುವುದರಿಂದ ಅವನನ್ನು ಮಾತ್ರ ಹೊಸಕಿ ಹಾಕಬಲ್ಲ ನೈಸರ್ಗಿಕ ವಿದ್ಯಮಾನಗಳು ಘಟಿಸುವ ಸಂಭವ ತೀರಾ ಕಡಿಮೆ. ಆದರೆ ಭೂಮಿ ಬಿಸಿಯಾಗುತ್ತ ಹೋದಂತೆ ಪರಿಸರ ರಕ್ಷಣೆಯ ಜೊತೆಜೊತೆಗೇ ಜಾಗತಿಕ ಶಾಂತಿಯನ್ನೂ ಕಾಪಾಡಿಕೊಳ್ಳುವ ಸವಾಲು ಎದುರಾಗುತ್ತದೆ. ಹೇಗಾದರೂ ಬದುಕುಳಿಯುವ ಯತ್ನದಲ್ಲಿ ದೇಶದೇಶಗಳ ಮಧ್ಯೆ ನೀರಿಗಾಗಿ, ಆಸರೆಗಾಗಿ ಯುದ್ಧಗಳೇನಾದರೂ ನಡೆದರೆ, ಅದು ಇನ್ನೊಂದು ವಿಶ್ವಯುದ್ಧವಾಗಿ ಹೊತ್ತಿ ಉರಿದರೆ, ಪರಿಸ್ಥಿತಿ ಭಿನ್ನವಾಗುತ್ತದೆ. ಈಗಿರುವ  ಪರಮಾಣು ಬಾಂಬ್‍ಗಳಲ್ಲಿ  ಶೇ. 20ರಷ್ಟು ಸ್ಫೋಟಗೊಂಡರೂ (ಈಗಿರುವ ತೈಲ ದಾಸ್ತಾನುಗಳೆಲ್ಲ ಸ್ಫೋಟಿಸಿ) ಆಕಾಶಕ್ಕೆ ಕಪ್ಪುಮೋಡ ಕವಿದು ನಾಲ್ಕಾರು ವರ್ಷ ಸೂರ್ಯನ ಬೆಳಕೇ ಬೀಳದಂತಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಬದುಕಿದವರೆಲ್ಲರೂ ಆಗ ಆಹಾರಕ್ಕಾಗಿ ಬಡಿದಾಡಿಯೇ ಸಾಯಬಹುದು. ಇಂದಿನ ಪರಿಭಾಷೆಯಲ್ಲಿ ತೀರ ಅನಾಗರಿಕ ಬದುಕು ನಡೆಸುತ್ತಿರುವ ಮೂಲ ನಿವಾಸಿಗಳು ಆಗಲೂ ಕೆಲಕಾಲ ಬದುಕುಳಿಯಬಹುದು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x