ಇಕ್ಕೇರಿಯಲೊಂದು ಸುತ್ತು: ಪ್ರಶಸ್ತಿ ಪಿ.

'ಪಂಜು' ಬಳಗದವರು ಒಂದಂಕಣ ಬರೀತೀರಾ ಅಂದಾಗ ಒಂಥರಾ ಆಶ್ಚರ್ಯ!  ನಾನೂ ಅಂಕಣ ಬರೀಬೋದಾ ಅಂತ. ಪ್ರಯತ್ನ ಮಾಡಿ ನೋಡಿ ಅಂತ ಮತ್ತೆ ಕಾಲ್ ಮಾಡಿದ್ರು. ಸರಿ ನೋಡೋಣ ಅಂದರೂ ಮತ್ತೆ ಬಂದ ಯೋಚನೆ ಒಂದೇ, ಏನು ಬರ್ಯೋದು ?!

ಮುಂಚೆಯಿಂದಲೂ ನಮ್ಮ ಗೆಳೆಯರ ಗುಂಪಿಗೆ 'ಕಾಲಿಗೆ ಚಕ್ರ ಕಟ್ಕೊಂಡೋರಾ ನೀವು' ಅಂತನೇ ತಮಾಷೆ ಮಾಡ್ತಿದ್ರು ಉಳ್ದವ್ರು. ಹಾಗಾಗಿ ಅದ್ನೇ ಯಾಕೆ ಬರೀಬಾದ್ರು ಅನುಸ್ತು. ಇನ್ನು ಹೆಚ್ಗೆ ಮಾತಾಡೋ ಬದ್ಲು ನನ್ನ ಕಾಲಿನ ಚಕ್ರ ನಿಮ್ಗೇ ಕೊಡ್ತೀನಿ. ಬನ್ನಿ, ಸೀದಾ ನಮ್ಮೂರು ಸಾಗರದತ್ರ ಹೋಗೋಣ 🙂 

ಸಾಗರಕ್ಕೆ ಬಂದೋರಾಗಿದ್ರೆ ’ಕೆಳದಿ-ಇಕ್ಕೇರಿ’ ಅನ್ನೋ  ಹೆಸರು ಕೇಳಿರ್ಬೇಕಲ್ವಾ. ಕೇಳಿದ್ರೂ, ಕೇಳ್ದೇ ಇದ್ರೂ ಪ್ರತೀ ಬಾರಿ ಅಲ್ಲಿಗೆ ಹೋದಾಗ್ಲೂ ಒಂತರಾ ಹೊಸ ಅನುಭವ. ಹಾಗಾಗಿ ಒಂದ್ಸಲ ಅಲ್ಲಿಗೇ ಹೋಗ್ಬರೋಣ.  ಸಾಗರಕ್ಕೆ ’ಸಾಗ’ ಅಂತ ಹೆಸರು ಬಂದಿದ್ದೇ ಕೆಳದಿ ಮತ್ತು ಇಕ್ಕೇರಿ ಇಂದ ಅಂತೆ.  ಇಕ್ಕೇರಿ ೧೫೬೦ ರಿಂದ ೧೬೪೦ ರ ವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತಂತೆ. ಆ ಕಾಲದಲ್ಲಿ ಕೆಳದಿ-ಇಕ್ಕೇರಿಗಳ ಮಧ್ಯೆ ಒಂದು ಪಟ್ಟಣವನ್ನು ಕಟ್ಟಬೇಕೆಂಬ ರಾಜಾಜ್ಞೆಯಂತೆ ಸಾಗರವನ್ನು ಕಟ್ಟಲಾಯಿತಂತೆ. ಹಾಗಾಗಿ ಇವೆರಡರ ಮಧ್ಯದಲ್ಲಿರುವ ಸಾಗರದಿಂದ ಕೆಳದಿ ಇಕ್ಕೇರಿಗಳಿಗೆ ಏಳು ಕಿ.ಮೀ ದೂರ. 

      

ಸಾಗರದಿಂದ ಇಕ್ಕೇರಿಗೆ ಸಾಗ್ತಾ ಮೊದಲು ಸಿಗೋದೊಂದು ಕೆರೆ, ಬಲಗಡೆ ಅಡಕೆ ತೋಟಗಳು. ಕೆರೆ ಏರಿ ದಾಟ್ತಿದ್ದ ಹಾಗೇ ಸಿಗೋದು ಇಕ್ಕೇರಿ ಅಘೋರೇಶ್ವರ ದೇಗುಲದ ಪ್ರಾಂಗಣ. ಮೆಟ್ಟಿಲುಗಳನ್ನೇರಿ, ಗೇಟು ದಾಟೋವರೆಗೂ ಒಳಗಡೆ ಏನಿದೆ ಅನ್ನೋದು ಕಾಣದಷ್ಟು ಎತ್ತರದಲ್ಲೇ ಇದೆ ಪ್ರಾಂಗಣ. ಅಲ್ಲಿ ನಮ್ಮನ್ನ ಸ್ವಾಗತಿಸೋದೊಂದು ದೊಡ್ಡ ಮಂಟಪ. ಅದರಲ್ಲಿ ಎರಡಾಳೆತ್ತರದ ನಂದಿ ಕುಳಿತಿದ್ದಾನೆ. ಇದು ನಮ್ಮದೇ ಊರಾದ ಕಾರಣ ಸಣ್ಣವನಿದ್ದಾಗಿನಿಂದಲೂ ಆಗಾಗ ಹೋಗುತ್ತಿದ್ದೆ. ಆಗೆಲ್ಲಾ ಈ ನಂದಿಯ ಕಾಲ ಕೆಳಗೆ ನುಸುಳೋದೊಂದು ಆಟ ನಮಗೆ.ಇಲ್ಲಿ ಬರೋ ಮಕ್ಕಳಿಗೆಲ್ಲಾ ಈಗಲೂ ಒಂದು ಖುಷಿ ಅದು. 

ಹಾಗೆಯೇ ನಂದಿಗೊಂದು ಕೈ ಮುಗಿದು ಮುಂದೆ ಬರುತ್ತಿದ್ದಂತೆ ಅಘೋರೇಶ್ವರನ ದೇಗುಲ ಸಿಗುತ್ತದೆ. ಉತ್ತರ-ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಈ ದೇಗುಲದ ಶೈಲಿ ಸ್ವಲ್ಪ ವಿಶಿಷ್ಟವಾಗಿದೆ. ವಿಜಯನಗರದ ಅರಸರಿಂದ ಹಿಡಿದು, ಹೊಯ್ಸಳ-ಚಾಲುಕ್ಯ, ನಂತರ ಬಂದ ಡೆಕ್ಕನ್ ಸುಲ್ತಾನರ ಶಿಲ್ಪಕಲೆಯ ಮಿಶ್ರಣ ಇಲ್ಲಿದೆಯಂತೆ ! ಅಕ್ಕ ಪಕ್ಕ ಪರಿವಾರ ದೇವತೆಗಳ ಗುಡಿಯಿರುವ ಈ ದೇಗುಲ ಗರ್ಭಗೃಹ, ಅರ್ಧಮಂಟಪ, ಮುಖಮುಂಟಪಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಪಾಣಿಪೀಠದ ಮೇಲಿರುವ ೩೨ ಕೈಗಳ ಅಘೋರೇಶ್ವರ ಇಲ್ಲಿನ ಮುಖ್ಯ ಆಕರ್ಷಣೆ. ನಂತರ  ಅರ್ಧಮಂಟಪದಲ್ಲಿ ಬಿಳಿ ಕಲ್ಲಿನಿಂದ (ಅಮೃತ ಕಲ್ಲಿನಿಂದ) ಕೆತ್ತಿದ ಸಣ್ಣ ನಂದಿಯಿದೆ. ಅರ್ಧಮಂಟಪದ ದ್ವಾರದಲ್ಲಿ ಎರಡೂ ಬದಿಯಲ್ಲಿ ಅಘೋರೇಶ್ವರನ ಪರಿವಾರದ ಕೆತ್ತನೆಗಳಿವೆ. ಎಡಭಾಗದಲ್ಲಿ ಮಹಿಷಮರ್ಧಿನಿ, ಭೈರವನ ಕೆತ್ತನೆಗಳಿದ್ದರೆ ಬಲಭಾಗದಲ್ಲಿ ಗಣಪತಿ, ಷಣ್ಮುಖನ ಕೆತ್ತನೆಗಳಿವೆ. ಎದುರಿನ ಮುಖಮಂಟಪ ಕೆತ್ತನೆಯಿರುವ ಕಂಬಗಳ ಆಧಾರದ ಮೆಲೆ ನಿಂತಿದೆ. ದೇಗುಲವು ದ್ರಾವಿಡ ಶೈಲಿಯ ಕಳಸವನ್ನು ಹೊಂದಿದೆ. 

ದೇವರಿಗೆ  ಕೈ ಮುಗಿದು ಹಾಗೇ ತಲೆಯೆತ್ತಿ ನೋಡಿದರೆ ಮೇಲ್ಚಾವಣಿಯಲ್ಲಿರುವ ಸುಂದರ ಕೆತ್ತನೆಗಳನ್ನು, ಕಂಬದಲ್ಲಿರುವ ಕೆತ್ತನೆಗಳನ್ನು ನೋಡಬಹುದು. ಅಘೋರೇಶ್ವರನ ಎದುರಿಗೆ ಕೆಳದಿಯನ್ನಾಳಿದ ಮೂರು ಅರಸರನ್ನು  ಕೆತ್ತಲಾಗಿದೆ. ಕೆಳಗೆ ಹೆಸರು ಬರೆದಿದ್ದರೂ ಇಕ್ಕೇರಿಗೆ ಹೋಗುವ ಮುನ್ನ ಈ ಮಾಹಿತಿ ಗೊತ್ತಿರದಿದ್ದರೆ ಅಥವಾ ಅಲ್ಲಿ ಯಾರಾದರೂ ಹೇಳದಿದ್ದರೆ, ನೀವು ಆ ರಾಜರನ್ನು ನೋಡಲು ಸಾಧ್ಯವೇ ಇಲ್ಲ ! ಎಲ್ಲೆಡೆ ಎದುರಾಗೋ ಧ್ವಜ ಸ್ಥಂಬದ ಬದಲು ನಂದಿ ಮಂಟಪ, ಎಲ್ಲೆಡೆ ಇರೋ ನವರಂಗ ಇಲ್ಲಿ ಇಲ್ಲದೇ ಇರುವುದು ಇಲ್ಲಿನ ಮತ್ತೊಂದು ವಿಶೇಷತೆ ಅನಿಸುತ್ತದೆ.

 

ಅಲ್ಲಿರೋ ಕೆತ್ತನೆಗಳನ್ನು ನೋಡಿ ದೇವಸ್ಥಾನದ ಎಡಭಾಗದಲ್ಲಿರೋ ಪ್ರವೇಶ ದ್ವಾರದಿಂದ ಹೊರಬಂದರೆ ಪಾರ್ವತಿ ದೇವಸ್ಥಾನ ಸಿಗುತ್ತದೆ. ಇಲ್ಲಿನ ಪಾರ್ವತಿ ದೇವಿಗೆ ಅಖಿಲಾಂಡೇಶ್ವರಿ ಎಂಬ ಹೆಸರು. ಸಣ್ಣಗಿರೋ ಆ ದೇಗುಲದ ಎದುರೂ ಕೆತ್ತನೆಗಳಿವೆ. ಅಲ್ಲೂ ಕೈ ಮುಗಿದು ಹಾಗೇ ಅಘೋರೇಶ್ವರನ ದೇಗುಲದ ಪ್ರದಕ್ಷಿಣೆ ಹಾಕಿದರೆ ಸುಮಾರಷ್ಟು ದೇವ ದೇವತೆಗಳು ಸಿಗುತ್ತಾರೆ. ಫೋಟೋ ಪ್ರಿಯರಿಗೆ ಸಾಕಷ್ಟು ಪೋಸುಗಳೂ ಗ್ಯಾರಂಟಿ. ಹಿಂದಿನ ಬಾರಿ ಹೋದಾಗ ದೇಗುಲದ ಹೊರಗಿನ ಕೆಲ ಪಾರ್ಶ್ವ ಕಾಲನ ಹೊಡೆತಕ್ಕೆ ಸಿಕ್ಕು ಪಾಚಿಗಟ್ಟಿ, ಕಪ್ಪಾಗಿ ಹೋಗಿದ್ದು ನೋಡಿ ಬೇಸರಿಸಿದ್ದೆ. ಈಗ ಮುಜರಾಯಿ ಇಲಾಖೆಯಿಂದ ದೇವಸ್ಥಾನವನ್ನು ಚಂದಗೊಳಿಸಲಾಗಿದೆ ಎಂಬ ಸುದ್ದಿ ಕೇಳಿದ್ದೇನೆ. ಹಾಗಾಗಿ ನೀವು ಬರುವ ವೇಳೆಗೆ ಇನ್ನೊಂದಿಷ್ಟು ಚಂದದ ದೃಶ್ಯಗಳು ನಿಮಗೂ ಸಿಕ್ಕಬಹುದು 🙂

ಪ್ರಳಯದ ಭವಿಷ್ಯ: ಇಲ್ಲಿನ ದೇವಸ್ಥಾನದಲ್ಲಿ ಒಂದು ಗೆರೆಯಿಂದ ಬೇರ್ಪಟ್ಟಿರುವ ಎರಡು ಹಲ್ಲಿಗಳನ್ನು ಕೆತ್ತಲಾಗಿದ್ದು ಆ ಹಲ್ಲಿಗಳು ಗೆರೆಯನ್ನು ದಾಟಿ ಮುಂದೆ ಬಂದು ಒಂದಕ್ಕೊಂದು ಮುಟ್ಟಿದಾಗ ಪ್ರಳಯವಾಗುತ್ತದೆ ಎಂಬ ನಂಬಿಕೆಯಿದೆ.

ದೇಗುಲದ ಹೊರಬಂದು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆಯೇ ಬಲಭಾಗದಲ್ಲಿ ಎತ್ತರದ್ದೇನೋ ಕಂಡಂತೆ ಆಗುತ್ತದೆ. ಹುಲ್ಲು ಬೆಳೆದಿರುವ ಇದನ್ನು ಸ್ವಲ್ಪ ಗಮನಿಸಿ ನೋಡಿದರೆ ಇದು ಸಭಾವೇದಿಕೆ ಆಗಿರಬಹುದಾದ ಅಥವಾ ಜಾತ್ರೆ ಸಮಯದಲ್ಲಿ ಉತ್ಸವಮೂರ್ತಿಯನ್ನು ಇಟ್ಟು ಪೂಜಿಸುವ ಸ್ಥಳದಂತೆ ಕಾಡುತ್ತದೆ. ಹಾಗೇ ಎಡಕ್ಕೆ ಬಂದರೆ ಒಂದು ಗಣಪತಿ ದೇವಸ್ಥಾನ. ಅಲ್ಲೂ ಕೈ ಮುಗಿದು ಮತ್ತೆ  ಮನೆಯತ್ತ ಮುಖ ಮಾಡಿದಾಗ ಇನ್ನೊಮ್ಮೆ ಇಕ್ಕೇರಿಗೆ ಬಂದು ಬಿಡೋಣವಾ ಅನ್ನೋ ಭಾವ. 

ಮುಂದೆ..

ಇಕ್ಕೇರಿಯನ್ನು ದಾಟಿ ಹಾಗೇ ಮುಂದೆ ಹೋದರೆ ಹಳೆ ಇಕ್ಕೇರಿ ಕೋಟೆ ಸಿಗುತ್ತದೆ. ಅದು ಈಗ ಪೂರ್ತಿ ಹುಲ್ಲಲ್ಲಿ ಮುಚ್ಚಿ ಹೋಗಿದೆಯಂತೆ. ಹಾಗಾಗಿ ಅಲ್ಲಿಗೂ ಹೋಗಬೇಕೆಂಬ ಆಸೆ ಮುಂದೆ ಹಾಕುತ್ತಲೇ ಬಂದಿದ್ದೇನೆ. ಇನ್ನೊಮ್ಮೆ ಸಾಗರಕ್ಕೆ ತೀರಾ ಸಮೀಪದ ಹಳೆ ಇಕ್ಕೇರಿ ಮತ್ತು ಹೊಸನಗರ ಕೋಟೆಗಳಿಗೆ ಹೋಗಬೇಕೆಂಬ ಆಸೆಯಿದೆ.. ನೋಡಬೇಕು ಕಾಲ ಚಕ್ರ ಕಾಲಿಗೆ ಚಕ್ರ ಕಟ್ಟಿ ಯಾವಾಗ ಕರೆಸುತ್ತದೋ ಎಂದು 🙂 

ಹೋಗುವ ಬಗೆ: 

ಸಾಗರದಿಂದ-ಇಕ್ಕೇರಿ- ೭ ಕಿ.ಮೀ

ಹೊಸನಗರ, ಸಿಗಂದೂರು ಹೋಗೋ ಬಸ್ಸಿನಲ್ಲಿ ಇಕ್ಕೇರಿ ಕ್ರಾಸಿನಲ್ಲಿ ಇಳಿದು ಸುಮಾರು ೨ ಕಿ.ಮೀ ನಡೆದರೆ ಇಕ್ಕೇರಿ. ಇಲ್ಲ ಸಾಗರದಿಂದಲೇ ಆಟೋದಲ್ಲಿ , ಸ್ವಂತ ವಾಹನದಲ್ಲಿ ಹೋಗಬಹುದು. ಇಕ್ಕೇರಿಯ ಮೇಲೆ ಹೋಗುವ ಬಸ್ಸುಗಳು ಅಪರೂಪ.

ಶಿವಮೊಗ್ಗದಿಂದ – ಸಾಗರ – ೭೩ ಕಿ.ಮೀ

ಬೆಂಗಳೂರಿನಿಂದ ಸಾಗರ- ೩೫೦ ಕಿ.ಮೀ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
hipparagi Siddaram
hipparagi Siddaram
11 years ago

ಮಾಹಿತಿಪೂರ್ಣ ಬರಹ…..ಧನ್ಯವಾದಗಳು !

prashasti
11 years ago

ಧನ್ಯವಾದಗಳು ಹಿಪ್ಪರಗಿ ಸಿದ್ದರಾಂ ಅವರೇ 🙂

Girish.S
11 years ago

i had been to sigandhur,but couldnt go to Ikkeri..Shortly goimg to Sagara,that time for sure eill visit Ikkeri.Thanks for this wonderful information Prashasthi..

prashasti
11 years ago
Reply to  Girish.S

Thank You Girish. Yes, You can visit ikkeri when u come to sagar next time 🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

  ನಾವೂ ಒಮ್ಮೆ ಇಕ್ಕೇರಿಯನ್ನು ಸುತ್ತಿ ಬರೋಣವೇ ಅನ್ನಿಸಿತು. ಚಿತ್ರ ಸಮೇತ ಮಾಹಿತಿ ಲೇಖನಕ್ಕಾಗಿ ಧನ್ಯವಾದಗಳು.

prashasti
11 years ago

ಧನ್ಯವಾದಗಳು ದಿವ್ಯ ಅಂಜನಪ್ಪ ಅವರೇ 🙂

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ಸುಂದರ ಬರಹ ಗೆಳೆಯಾ ………. ಮುಂದುವರೆಸಿ ನಮ್ಮ ಪಂಜುನಲ್ಲಿ……….

ಸುಮತಿ ದೀಪ ಹೆಗ್ಡೆ

nice pics prashasti… like them…

Bhanumathi
Bhanumathi
9 years ago

ತುಂಬಾ ಚೆನ್ನಾಗಿದೆ.

ಸುಜಯ
ಸುಜಯ
9 years ago

Very Beatifull Ikkeri

10
0
Would love your thoughts, please comment.x
()
x