ನಮ್ಮೂರಿನ ಬಳಿ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಇದೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಪುಟ್ಟ ಹಳ್ಳಿಯಲ್ಲಿ ತೆರೆದುಕೊಂಡ ಈ ಗಾರ್ಮೆಂಟ್ ಫ್ಯಾಕ್ಟರಿ ನಮ್ಮ ಕಡೆಯ ಅನೇಕ ಜನರಿಗೆ ಉದ್ಯೋಗ ಕಲ್ಪಿಸಿದೆ. ದೂರದ ಊರುಗಳಿಂದಲೂ ಸಹ ಜನ ಬಂದು ಅಲ್ಲಿ ದುಡಿಯುತ್ತಾರೆ. ಫ್ಯಾಕ್ಟರಿ ಅಕ್ಕ ಪಕ್ಕ ಸಣ್ಣಪುಟ್ಟ ಅಂಗಡಿ, ಹೋಟೆಲ್ ಗಳು ತೆರೆದುಕೊಂಡಿವೆ. ಫ್ಯಾಕ್ಟರಿ ಊಟದ ಸಮಯ ಮತ್ತು ಬಿಟ್ಟ ಸಮಯದಲ್ಲಿ ಇಲ್ಲಿನ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಯೋದು ಸಹಜ. ಸಣ್ಣಪುಟ್ಟ ವ್ಯಾಪಾರದಿಂದ ಲಾಭವಿದೆ ಎನ್ನುವುದ ಮನಗಂಡ ನಮ್ಮ ಎದುರು ಮನೆಯ ಅಣ್ಣನೊಬ್ಬ ಆ ಫ್ಯಾಕ್ಟರಿಯ ಬಳಿ ಒಂದು ಪುಟ್ಟ ತಳ್ಳುವ ಗಾಡಿಯಲ್ಲಿ ಏನಾದರೊಂದು ವ್ಯಾಪಾರ ಮಾಡುವ ಕನಸು ಕಂಡ. ಅವನ ಕನಸಿನಂತೆ ಒಂದು ದಿನ ತಳ್ಳುಗಾಡಿ ಕೊಂಢೂಕೊಂಡು ಫ್ಯಾಕ್ಟರಿಯ ಬಳಿ ಚುರುಮುರಿ ಮಾರೋಕೆ ಶುರು ಮಾಡಿದ. ವ್ಯಾಪಾರ ತುಂಬಾ ಚೆನ್ನಾಗಿ ಆಗುತ್ತಿತ್ತಂತೆ. ಅವನು ಆ ವ್ಯಾಪಾರ ಶುರು ಮಾಡಿದ ಸ್ವಲ್ಪ ದಿನಗಳಲ್ಲೇ ಆ ಪುಟ್ಟ ಹಳ್ಳಿಯ ಯಾರೋ ಒಬ್ಬನ ಕಾರಣಕ್ಕೆ ಇವನ ವ್ಯಾಪಾರ ನಿಂತು ಹೋಯಿತು ಎಂದು ಕೇಳಲ್ಪಟ್ಟೆ. ಒಮ್ಮೆ ಊರಿಗೆ ಹೋದಾಗ ಸಂಜೆ ಮಾತಿಗೆ ಸಿಕ್ಕ ಆ ಅಣ್ಣನನ್ನು ಕೇಳಿದೆ ‘ಅಣ್ಣ ಯಾಕೆ ವ್ಯಾಪಾರ ಬಿಟ್ ಬಿಟ್ಟರಂತಲ್ಲ’ ಅಂತ. ಯಾವನೋ ಒಬ್ಬ ಇವನು ಈ ಜಾತಿಯವನು ಅವನ ಹತ್ರ ಚುರು ಮುರಿ ಯಾಕೆ ತಿಂತೀರಿ ಅಂತ ಹಬ್ಬಸೋಕೆ ಶುರು ಮಾಡಿದ ಅಂತ ಆ ಅಣ್ಣ ಹೇಳುವಾಗ ಮಧ್ಯೆ ನಾನು ‘ಅವನು ಹಂಗೆ ಹೇಳಿದ್ರೆ ಹೇಳ್ತಾನೆ. ನೀನು ವ್ಯಾಪಾರ ಮಾಡಬಹುದಿತ್ತಲ್ಲ’ ಅಂದೆ. ‘ಇಲ್ಲ ಮಗ. ಅವನು ಹಂಗೆ ಹಬ್ಬಿಸಿದ ಮೇಲೆ ಜನ ನನ್ನ ಗಾಡಿ ಹತ್ರ ಬರೋದು ಬಿಟ್ ಬಿಟ್ರು. ವ್ಯಾಪಾರ ನಿಂತೇ ಹೋಯಿತು. ದಿನಾ ರೆಡಿ ಮಾಡಿದ ಐಟಮ್ ನೆಲ್ಲಾ ಬಿಸಾಕ್ ಬುಟ್ಟು ಬರ್ತಿದ್ದೆ’ ಅಂದ್ರು. ಪಿಚ್ಚೆನಿಸಿತು. ಮನೆಯ ಬಳಿ ಅವನ ತಳ್ಳುಗಾಡಿ ನಿಂತಿತ್ತು. ನನ್ನ ಬಳಿ ಮಾತನಾಡಲು ಪದಗಳಿರಲಿಲ್ಲ. ಈ ಕೇಸ್ ನಲ್ಲಿ ಯಾರ ಮೇಲೆ ಹೋರಾಟ ಮಾಡ್ತೀರ?
ನಾನು ನಮ್ಮಪ್ಪ ಒಂದಿನ ಮೀನು ಹಿಡಿಯುವ ನೆಪದಲ್ಲಿ ನಮ್ಮೂರ ಹೊಸಕೆರೆ ಹತ್ತಿರ ಸುತ್ತಾಡಿಕೊಂಡು ಬರಲು ಹೋಗಿದ್ದೆವು. ಮಾರ್ಗ ಮಧ್ಯೆ ಗೌಡನೋರ ಕೆರೆ ಅಂತ ಒಂದು ಸಣ್ಣ ಕೆರೆ ಇದೆ. ಈಗ ಅಲ್ಲಿ ನೀರಿಲ್ಲ. ಒಂದು ಕಾಲದಲ್ಲಿ ಯೆತ್ತೇಚ್ಚವಾಗಿ ಗೆಂಡೆ ಸಿಗುತ್ತಿದ್ದ ಕೆರೆ ಅದು. ಆ ಕೆರೆಯ ಏರಿಯ ಮೇಲೆ ಒಬ್ಬ ಹೆಂಗಸು ಕುರಿ ಮೇಯಿಸುತ್ತಿದ್ದರು. ಅವರ ಮಗ ನನಗೆ ಪರಿಚಯ. ಅವರನ್ನು ಮಾತನಾಡಿಸಿದೆ. ಪಾಪ ತಮ್ಮ ಕಷ್ಟಸುಖ ಹೇಳಿಕೊಂಡರು. ಅವರನ್ನು ಮಾತನಾಡಿಸಿ ಬರೋವಾಗ ನಮ್ಮಪ್ಪನಿಗೆ ʼಅಪ್ಪ, ಪಾಪ ಎಷ್ಟು ಕಷ್ಟಪಡ್ತಾರೆ ಅಲ್ವಾ ಆ ಯಮ್ಮʼ ಅಂದೆ. ʼಹೂಂ ಕಷ್ಟಪಡ್ತಾರೆ. ನಿನ್ ಬಗ್ಗೆ ಒಂದು ಮಾತು ಅಂದಿದ್ರು ಅವರ ಮೇಲೆ ಒಂಚೂರು ಕ್ಯಾಪ ನಂಗೆʼ ಅಂತು ಅಪ್ಪ. ಯಾಕಪ್ಪ ಏನ್ ಅಂದಿದ್ರು ಅವ್ರು ಅಂದೆ. ʼಅವತ್ತೊಂದಿನ ಸಿಕ್ದಾಗ ಏನ್ ಮರಿಯಪ್ಪ ನಿನ್ ಮಗ ನಮ್ಮ ಜನದ್ ಹುಡ್ಗೀನ ಮದ್ವೆ ಆಗಿದ್ದನಂತೆ. ನೋಡ್ದಾ ಎಲ್ಲಿವರೆಗು ಬಂದ್ರಿ ಅಂದಿದ್ಲು.ʼ ಅಂತು ಅಪ್ಪ. ನಂಗೆ ನಗು ತಡೆಯೋಕೆ ಆಗದೆ ಅದಕ್ಕೆ ನೀನೇನ್ ಅಂದೆ ಅಂದಾಗ ʼಹಂಗತ್ತಾ ನಮ್ ಭಾಗ್ಯನತ್ರ ಬಂದು ಹೇಳು. ನಿಂಗೆ ಚೆನ್ನಾಗ್ ಉತ್ರ ಕೊಡ್ತಾಳೆ ಅಂತ ಅಂದೆ. ಏನು ಮಾತನಾಡದೆ ಸುಮ್ಮನಾದ್ಲುʼ ಅಂತು ನಗುತ್ತಾ. ಭಾಗ್ಯಮ್ಮ ನಮ್ಮ ಅತ್ತಿಗೆ. ಬಾಯಿ ಜೋರು. ಅವರ ಹತ್ರ ಬಾಯಿ ಕೊಟ್ಟು ಜಗಳ ಆಡಿ ಗೆದ್ದವರ ಉದಾಹರಣೆ ಇಲ್ಲ. ಅಂತರ್ಜಾತಿ ವಿವಾಹ ತಪ್ಪು ಅಂತೀರ!!
ಹಿಂಗೆ ನಂಗೊಬ್ಬ ಗೆಳೆಯನಿದ್ದ. ಈಗ್ಲೂ ಇದ್ದಾನೆ. ಒಳ್ಳೆಯ ಹುಡುಗ. ಈಗ್ಲೂ ಗೆಳೆಯಾನೆ. ಅವನು ಬೆಂಗಳೂರಿಗೆ ಬಂದ ಹೊಸತರಲ್ಲಿ ಪರಿಚಯವಾಗಿದ್ದ. ನಾನು ಸಹ ಬೆಂಗಳೂರಿನಲ್ಲಿ ಇದ್ದ ದಿನಗಳಲ್ಲಿ ಪ್ರತೀವಾರ ಎಲ್ಲೇ ಇದ್ದರೂ ಸಿಗುತ್ತಿದ್ದ. ಸಿಕ್ಕಾಗ ಅಲ್ಲಿ ಇಲ್ಲಿ ಸುತ್ತಾಡಿ ತಿಂಡಿ ತಿನಿಸು ತಿನ್ನೋದು ನಮ್ಮ ಅಭ್ಯಾಸ ಆಗಿತ್ತು. ಹೀಗೆ ಒಂದು ಬಾರಿ ವೀಕೆಂಡ್ ನಲ್ಲಿ ಮೀಟ್ ಆಗಿದ್ದೆವು. ಮೆಜೆಸ್ಟಿಕ್ ಬಳಿ ನಡೆದುಕೊಂಡು ಅವನು ಮತ್ತು ನಾನು ಬರ್ತಾ ಇದ್ದೆವು. ಆಗ ಅವನ ಗೆಳೆಯನೊಬ್ಬ ಸಿಕ್ಕಿದ. ಅವನನ್ನು ನನ್ನ ಗೆಳೆಯ ಪರಿಚಯ ಮಾಡಿಸಿದ. ಮೂವರು ಮೈಸೂರು ಬ್ಯಾಂಕ್ ಸರ್ಕಲ್ ಕಡೆ ನಡೆದು ಹೋಗ್ತಾ ಇದ್ದೆವು. ಮಾತನಾಡ್ತಾ ಆಡ್ತಾ ನನ್ನ ಗೆಳೆಯ ಅವನ ಗೆಳೆಯನಿಗೆ “ಇವನು ನಮ್ಮವನಲ್ಲಾ ಲೇ” ಅಂದ. ನಂಗೆ ಆಶ್ಚರ್ಯ ಆಯಿತು. ಫ್ರೆಂಡ್ ಅಲ್ವಾ ಅಂದುಕೊಂಡು “ಯಾಕೋ ಏನ್ ಹಂಗದ್ರೆ” ಅಂದೆ ನಗುತ್ತಾ. ತನ್ನ ಗೆಳೆಯನಿಗೆ ನನ್ನ ಬಗ್ಗೆ ಹೇಳುತ್ತಾ “ಗೌವರ್ನಮೆಂಟ್ ನಿಂದ ಅದೂ ಇದೂ ಫೆಸಿಲಿಟಿ ತೆಗೆದುಕೊಂಡು ಪಿಜಿ, ಪಿ ಎಚ್ ಡಿ ಎಲ್ಲಾ ಮುಗಿಸ್ಕೊಂಡು ಬಿಟ್ಟಿದ್ದಾನೆ ಲೇ” ಅಂದ. ಅವನ ಮೆಂಟಾಲಿಟಿ ಬಗ್ಗೆ ಒಂತರಾ ಅನಿಸಿ “ಏನ್ ಗೊತ್ತು ನನ್ ಬಗ್ಗೆ ನಿಂಗೆ” ಅಂದೆ. “ನಿನ್ ಪಿಯುಸಿ ಮಾರ್ಕ್ಸ್ ಎಷ್ಟು ಹೇಳಪ್ಪಾ ನೋಡೋಣ” ಅಂದ. ನಾನು ನನ್ನ ಮಾರ್ಕ್ಸ್ ಹೇಳಿದೆ. “ಅಷ್ಟೊಂದು ತೆಗೆದಿದ್ದೇಯೇನಲೇ?” ಅಂದ ಆಶ್ಚರ್ಯಚಕಿತನಾಗಿ. ಇವನ ತರಹನೇ ನಾನು ಡಿಗ್ರಿ ಸೇರಿದಾಗ ನಮ್ಮ ಸಮುದಾಯದವರೇ ಆದ ಟೀಚರ್ ಒಬ್ಬರು ನನ್ನ ಮಾರ್ಕ್ಸ್ ಕೇಳಿ “ಕಾಲೇಜ್ ಗಳಲ್ಲಿ ಅಲ್ಲಿ ಇಲ್ಲಿ ಕಾಪಿ ಹೊಡಿಸಿ ಮಾರ್ಕ್ಸ್ ಕೊಟ್ಟಿರುತ್ತಾರೆ” ಅಂತ ವ್ಯಂಗ್ಯವಾಗಿ ನಕ್ಕಿದ್ದರು. ಅಂತಹ ನಮ್ಮ ಸಮುದಾಯದ ನಮ್ಮದೇ ಟೀಚರ್ ತಮ್ಮ ಸಮುದಾಯದ ಹುಡುಗನೊಬ್ಬನ ಮೆರಿಟ್ ಬಗ್ಗೆ ಡೌಟ್ ಪಡ್ತಾರೆ ಅಂದ್ರೆ ಇನ್ನೂ ನನ್ನ ಸ್ನೇಹಿತ ಡೌಟ್ ಪಡೋದರಲ್ಲಿ ತಪ್ಪೇನಿಲ್ಲ ಅನಿಸಿ ನನ್ನ ಪಿಜಿ, ಪಿ ಎಚ್ ಡಿ, ಫೆಲೋಷಿಪ್ ಗಳ ಬಗ್ಗೆ ಹೇಳಿದೆ. “ನೀನ್ ಬಿಡಪ್ಪ ಜಗ್ಗಿ ಇದ್ದೀಯ” ಅಂತ ಮಾತು ಬದಲಿಸಿದ. ಇವತ್ತು ನಮ್ಮವನಲ್ಲ ಅಂತ ಅಂಧ ಅಂತ ನನ್ನ ಗೆಳೆಯನನ್ನು ಇವತ್ತಿಗೂ ದ್ವೇಷಿಸೋದಿಲ್ಲ. ಅವನೂ ಅಷ್ಟೆ ಮೊದಲಿನಷ್ಟು ಆತ್ಮೀಯತೆ ಇಲ್ಲದಿದ್ದರೂ ಇಂದಿಗೂ ಗೆಳೆಯನಾಗಿಯೇ ಉಳಿದಿದ್ದಾನೆ. ದಲಿತ ಹುಡುಗರೆಲ್ಲಾ ಮೆರಿಟ್ ಇಲ್ಲದ ದಡ್ಡರು ಅಂತೀರ?
ಜಾತೀಯತೆ ಒಳ ಹೊರವುಗಳನ್ನು ಕುರಿತು ಬರೆದರೆ ಮಾತನಾಡಿದರೆ ವಿಷಯಗಳು ಹೀಗೆ ಸಿಗುತ್ತಲೇ ಹೋಗುತ್ತವೆ. ಪ್ರತಿ ವಿಷಯಗಳಿಗೂ ಪರ ವಿರೋಧ ನಿಮ್ಮೊಳಗೆ ನಿಮಗೆ ಗೊತ್ತಿಲ್ಲದೆ ಹುಟ್ಟುಕೊಳ್ಳುತ್ತದೆ. ಜಾತಿಯ ಕಾರಣಕ್ಕೆ ಆಗೋ ಮರ್ಯಾದೆ ಹತ್ಯೆಗಳು, ಜಾತಿಯ ಕಾರಣಕ್ಕೆ ಸಿಗದ ಬಾಡಿಗೆ ಮನೆಗಳು, ಜಾತಿಯ ಕಾರಣಕ್ಕೆ ದಲಿತರು ಮೆರಿಟ್ ನಿಂದ ಬಂದವರಲ್ಲ ಎನ್ನುವ ಪೂರ್ವಾಗ್ರಹ ಪೀಡಿತ ಉದಾಹರಣೆಗಳು ನಮ್ಮ ನಡುವೆ ಸಾಕಷ್ಟು ಸಿಗುತ್ತವೆ. ಮೀಸಲಾತಿ ನೀಡಬೇಕಾ ಅಂತ ವಾದಿಸೋ ಜಗಳಕ್ಕೆ ನಿಲ್ಲೋ ಜನ ನಮ್ಮ ನಡುವೆ ಕಡಿಮೆ ಇಲ್ಲ. ಸಾಮಾಜಿಕ ತಾಣಗಳಲ್ಲಿ ವಿಧವಿಧದ ಚಿತ್ರಗಳನ್ನು ವಾಕ್ಯಗಳನ್ನು ಬರೆದು ದಲಿತರನ್ನು ಅವಮಾನಿಸುವ ಜನರು ನಮ್ಮ ಕಣ್ಣಿಗೆ ಆಗಾಗ ಕಾಣಿಸುತ್ತಲೇ ಇರುತ್ತಾರೆ. ಫೇಸ್ ಬುಕ್ ಗೆ ಬಂದ ಮೇಲೆ ಕೇವಲ ಹೆಸರುಗಳಿದ್ದವರು ತಮ್ಮ ಜಾತಿ ಸೂಚಕಗಳನ್ನಾಗಿ ಸರ್ ನೇಮ್ ಗಳನ್ನಿಟ್ಟುಕೊಂಡವರನ್ನು, ಮೊದಲೆಲ್ಲಾ ಸರ್ ನೇಮ್ ಇಟ್ಟುಕೊಂಡು ನಂತರ ಊರಿನ ಹೆಸರುಗಳನ್ನು ಇಟ್ಟುಕೊಂಡವರನ್ನು ಸಹ ನೋಡಿದ್ದೇನೆ. ಕೇವಲ ತಮ್ಮ ತಮ್ಮ ವೈಯಕ್ತಿಕ ಲಾಭಕ್ಕಾಗಿ ಜಾತ್ಯಾತೀತರು ಪ್ರಗತಿಪರರು ಎನ್ನುವ ಸೋಗುಹಾಕಿಕೊಂಡವರು ನಮ್ಮ ನಡುವೆ ಕಡಿಮೆ ಏನಿಲ್ಲ. ಇವತ್ತು ಜಾತಿಯ ಕಾರಣ ತೆಗೆದುಕೊಂಡು ನನ್ನ ಜೊತೆ ಮಾತನಾಡದ, ಮಾತನಾಡಿದರೂ ಮನಸ್ಸಿನಿಂದ ದೂರವೇ ನಿಂತಿರುವ ಅದೆಷ್ಟೋ ಗೆಳೆಯರಿದ್ದಾರೆ. ಇಂತಹುದರ ನಡುವೆಯೂ ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಬಂದಾಗ ದಲಿತರಲ್ಲದವರೂ ಕೂಡ ಶುಭಾಶಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋದನ್ನ ನೋಡಿದ್ದೇನೆ. ನೋಡುತ್ತಲೇ ಇದ್ದೇನೆ. ಬರೀ ಅಂಬೇಡ್ಕರ್ ಜಯಂತಿಯ ದಿನದಲ್ಲಷ್ಟೇ ಅಲ್ಲದೆ ಅಂಬೇಡ್ಕರ್ ರವರ ವಿಚಾರಗಳನ್ನು ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಹಂಚುವ ಎಷ್ಟೋ ಹುಡುಗರು ಹೆಚ್ಚು ಓದಿಕೊಂಡಿರದಿದ್ದರೂ ಅವರ ಬಗೆಗೆ ಅಗಾಧ ಅಭಿಮಾನ ಇಟ್ಟುಕೊಂಡಿರುವವರು ನಮ್ಮ ನಡುವೆ ಬೇಕಾದಷ್ಟಿದ್ದಾರೆ.
ಇವತ್ತು ರಸ್ತೆ, ಬಿಲ್ಡಿಂಗ್, ವಿಮಾನ ನಿಲ್ದಾಣ, ವಿದ್ಯಾ ಸಂಸ್ಥೆಗಳಿಗೆ ಅಂಬೇಡ್ಕರ್ ಹೆಸರಿನಿಂದ ಕರೆಯುವುದನ್ನು ನೋಡಿದ್ದೇವೆಯೇ ಹೊರತು ಅಂಬೇಡ್ಕರ್ ಹೋಟೆಲ್ ಅನ್ನೋ ಬೋರ್ಡ್ ಯಾವತ್ತಿಗೂ ನೋಡಿರಲಾರಿರಿ. ಬೇಕಿದ್ದರೆ ಅಂಬೇಡ್ಕರ್ ಹೋಟೆಲ್ ಅಂತ ಗೂಗಲ್ ಸರ್ಚ್ ಕೊಟ್ಟು ನೋಡಿ ಅಂಬೇಡ್ಕರ್ ಹೆಸರಿನ ಯಾವ ಹೋಟೆಲ್ ಗಳು ಕೂಡ ನಿಮಗೆ ಕಾಣಸಿಗುವುದಿಲ್ಲ. ಯಾಕೆಂದರೆ ನಮ್ಮೂರಿನ ಚುರಿಮುರಿ ಅಣ್ಣನ ಕತೆಯಂತೆ ಒಬ್ಬ ದಲಿತ ಸಮುದಾಯದಿಂದ ಬಂದವನು ಆಹಾರ ಉದ್ಯಮದಲ್ಲಿ ಪ್ರವೇಶಿಸಕೂಡದು ಎಂಬುದು ಎಷ್ಟೋ ಜನರ ನಂಬಿಕೆ. ಆದರೆ ನಿಮಗೆ ಗೊತ್ತಿದೆಯೋ ಏನೋ ನನಗೆ ಪರಿಚಯವಿರೋ ನನ್ನದೇ ಸಮುದಾಯದ ಎಷ್ಟೋ ಗೆಳೆಯರು ಹುಡುಗರು ಒಳ್ಳೊಳ್ಳೆ ಹೋಟೆಲ್ ಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಅತ್ಯಧ್ಬುತವಾದ ಕುಕ್ ಗಳಾಗಿದ್ದಾರೆ. ಸರ್ವರ್ ಗಳಾಗಿದ್ದಾರೆ. ರಸ್ತೆ ಬದಿ ಕಬಾಬ್, ಬೊಂಡಾ ಬಜ್ಜಿ ಹಾಕೋ ಜನಗಳಲ್ಲಿ ದಲಿತರು ಕೂಡ ಇದ್ದಾರೆ ಅಂದರೆ ಆಶ್ಚರ್ಯಪಡಬೇಡಿ. ಬೆಂಗಳೂರು ಮೈಸೂರುಗಳಂತ ಮಹಾನಗರಗಳಲ್ಲಿ ಅವರುಗಳ ಜಾತಿಗಳು ಗೊತ್ತಾಗದ ಕಾರಣಕ್ಕೆ ಇವತ್ತಿಗೂ ಶ್ರದ್ಧೆಯಿಂದ ತಮ್ಮ ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗ್ತಾ ಇದ್ದಾರೆ. ಇದು ನಮ್ಮ ದೇಶದ ಜಾತಿ ವ್ಯವಸ್ಥೆ. ಈ ಕೆಟ್ಟ ಜಾತಿ ವ್ಯವಸ್ಥೆಗಳಿಂದ ಹೇಗೆ ಹೊರಬರಬೇಕೆಂದು ಅಥವಾ ಅಂಬೇಡ್ಕರ್ ರವರನ್ನು ಕುರಿತು ನಮ್ಮ ಟೀಚರ್ ಗಳು ಯಾವತ್ತಿಗೂ ನಮಗೆ ಪಾಠ ಮಾಡಲಿಲ್ಲ. ನಮ್ಮ ಮಕ್ಕಳು ಚೆನ್ನಾಗಿ ಓದಬೇಕು ಅಂತ ನಮ್ಮ ಅಪ್ಪ ಅಮ್ಮ ಸ್ಕೂಲಿಗೆ ಕಳಿಸಿದ್ದೇ ನಮಗೆ ದೊಡ್ಡ ಪಾಠ. ಆ ಕಾರಣಕ್ಕೆ ನನಗೆ ಸಿಕ್ಕೋ ಹುಡುಗರಿಗೆ ಚೆನ್ನಾಗಿ ಓದ್ಕೋಳ್ಳಿ ಅಂತ ಹೇಳುತ್ತೇನ ಹೊರತು ಅಂಬೇಡ್ಕರ್ ಅವರನ್ನು ಓದಿಕೊಳ್ಳಿ, ಸಂವಿಧಾನ ಓದಿಕೊಳ್ಳಿ ಅಂತ ಸಲಹೆ ನೀಡಲ್ಲ. ಅವರ ವಿದ್ಯೆ ಅವರಿಗೆ ಏನು ಬೇಕೋ ಅದನ್ನು ಓದಿಸುತ್ತೆ.
ತಿಂಗಳ ಸಂಬಳಗಳನ್ನು ನಂಬಿಕೊಂಡು ಇದ್ದವರು, ಪಿರ್ತಾರ್ಜಿತ ಆಸ್ತಿಗಳಿಲ್ಲದವರು, ಅವತ್ತಿನ ದುಡಿಮೆಯಲ್ಲಿ ಬದುಕು ಕಟ್ಟಿಕೊಂಡಿದ್ದವರೆಲ್ಲರಿಗೂ ಈ ಲಾಕ್ ಡೌನ್ ಒಂದು ಸಂಕಷ್ಟದ ಕಾಲ. ಈ ಕೊರೋನ ಎಂಬ ಕಂಟಕ ಕಳೆದು ಎಲ್ಲರ ಬದುಕು ಸುಂದರವಾಗಲಿ ಎಂದು ಹಾರೈಸುತ್ತಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳೊಂದಿಗೆ..
ನಿಮ್ಮ
ನಟರಾಜು
ಕೊನೆಯ ಪಂಚ್: ಹಿಂದೊಮ್ಮೆ ಪಶ್ಚಿಮ ಬಂಗಾಳದ ಜಲ್ಪಾಯ್ಗುರಿಯಲ್ಲಿ ಕೆಲಸ ಮಾಡುವಾಗ ಜಲ್ಪಾಯ್ಗುರಿ ಆಲಿಪುರ್ ದುವಾರ್ ನಡುವೆ ಒಂದು ಜಾಗದಲ್ಲಿ ಅಂಬೇಡ್ಕರ್ ಹೋಟೆಲ್ ಅನ್ನೋ ಒಂದು ಪುಟ್ಟ ಬೋರ್ಡ್ ನೋಡಿ ಆಶ್ಚರ್ಯಪಟ್ಟಿದ್ದೆ. ಅದೊಂದು ಮುರುಕಲು ಶೆಡ್ ನಂತಹ ಮುಚ್ಚಿದ ಹೋಟೆಲ್ ಆಗಿತ್ತು. ಅದರ ಫೋಟೋ ತೆಗೆದುಕೊಳ್ಳಬೇಕಿತ್ತು ಅಂತ ಇವತ್ತಿಗೂ ಅನಿಸುತ್ತೆ. ಆ ಬೋರ್ಡ್ ನಂತೆಯೆ ಇವತ್ತು ಕರ್ನಾಟಕ ಸರ್ಕಾರದ ವತಿಯಿಂದ ತೆರೆದಿರೋ ಇಂದಿರಾ ಕ್ಯಾಂಟೀನ್ ಹೆಸರನ್ನು ಅಂಬೇಡ್ಕರ್ ಕ್ಯಾಂಟೀನ್ ಅಂತ ಯಾರಾದರು ಮರುನಾಮಕರಣ ಮಾಡುವ ಸಾಹಸಕ್ಕೆ ಕೈ ಹಾಕುತ್ತಾರ ಅಂತ ಸುಮ್ಮನೆ ಅಂದುಕೊಳ್ಳುತ್ತೇನೆ.
ಚೆನ್ನಾಗಿದೆ
ಇಂದಿರಾ ಕ್ಯಾಂಟೀನ್ ಬದಲು ಅಂಬೇಡ್ಕರ್ ಕ್ಯಾಂಟೀನ್ ಹೆಚ್ಚು ಅರ್ಥವತ್ತಾಗಿದೆ.
ನಿಮ್ಮೀ ಪ್ರಶ್ನೆಗಳು ಇವತ್ತಿಗೆ ಬಹಳ ಪ್ರಸ್ತುತ ನಟರಾಜ್. ಬಹಳ ಚಂದ ಬರೆದಿದ್ದಿರಿ. ಬಹಳ ದಿನಗಳ ನಂತರ ನಿಮ್ಮ ಗದ್ಯ ಓದಿದಂಗಾಯಿತು.
ಬಹು ದಿನಗಳ ನಂತರ ತುಂಬಾ ಚೆನ್ನಾಗಿ ಬರ್ದಿದಿರಾ ನಟಣ್ಣ
ಲವ್ಲಿ ಬಾಸ್
ಬರಹ ಮತ್ತು ವಿಷಯ ಅತೀ ಸೂಕ್ತವಾದದು ಸರ್