[ಇಂಡೊನೇಷ್ಯಾದಿಂದ ಭಾರತಕ್ಕೆ ಭೂಗತ ಪಾತಕಿ ಛೋಟಾ ರಾಜನ್‍ನ್ನು ಹಸ್ತಾಂತರಿಸಿದ ಸಚಿತ್ರ ವರದಿಗಳು ಬಹುತೇಕ ಎಲ್ಲಾ ಪ್ರಮುಖ ಪತ್ರಿಕೆಗಳ ಮುಖ್ಯಪುಟಗಳಲ್ಲಿ ರಾರಾಜಿಸುತ್ತಿದ್ದವು. ಅತ್ತ ಖುದ್ದು ಇಂಡೊನೇಷಿಯಾವು ಇತಿಹಾಸ ಕಂಡರಿಯದ ಕಾಡ್ಗಿಚ್ಚಿನಿಂದ ನಲುಗುತ್ತಿತ್ತು. ಆ ದೇಶದ ಲಕ್ಷಾಂತರ ಜನ ಈ ಕಾಡ್ಗಿಚ್ಚಿನ ಸಂತ್ರಸ್ಥರಾಗಿ ಬಳಲುತ್ತಿರುವುದನ್ನು ಪ್ರಪಂಚದ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್‍ನಂತಹ ಪ್ರಮುಖ ಪತ್ರಿಕೆಗಳು ವರದಿ ಮಾಡಿದ್ದವು. ಬಹುಷ: ಛೋಟಾ ರಾಜನ್ ಕೂಡ ಅಲ್ಲಿನ ಭೀಕರವಾದ ಕಾಡ್ಗಿಚ್ಚಿಗೆ ಬೆದರಿ ಶರಣಾದನೇ ಎಂಬುದು ಕುಹಕವೇ ತಾನೆ]
ಸಿಂಗಾಪುರ ಮತ್ತು ಮಲೇಷಿಯಾಗಳ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ. ಇಂಡೊನೇಷಿಯಾದ ರಸ್ತೆಗಳಲ್ಲಿ ಬಾಯಿ-ಮೂಗಿಗೆ ಬಟ್ಟೆ ಕಟ್ಟಿಕೊಂಡ ದ್ವಿಚಕ್ರ ಸವಾರರು ಕೆಮ್ಮುತ್ತಾ, ತೇಕುತ್ತಾ ವಾಹನ ಓಡಿಸುವ ದೃಶ್ಯ ಸಾಮಾನ್ಯವಾಗಿದೆ. ಪ್ರಪಂಚದ ಅತೀ ಅಪರೂಪದ ಇಂಡೊನೇಷಿಯಾದ ಮಳೆಕಾಡಿಗೆ ಬೆಂಕಿ ಹತ್ತಿ ಉರಿಯುತ್ತಿದೆ. ಆ ದೇಶದ 5 ಲಕ್ಷ ಜನ ಕಾಡ್ಗಿಚ್ಚಿನ ಬೆಂಕಿಯ ಹೊಗೆಯಿಂದಾಗಿ ಶ್ವಾಸಕೋಶದ ತೀವ್ರ ಕಾಯಿಲೆಗೆ ಒಳಗಾಗಿದ್ದಾರೆ. ಕಾಡ್ಗಿಚ್ಚಿನಿಂದಾದ ಈ ರಾಷ್ಟ್ರೀಯ ವಿಪತ್ತನ್ನು “ಮಾನವೀಯತೆ ಮೇಲಿನ ದೌರ್ಜನ್ಯ” ಎಂದು ಬಣ್ಣಿಸಲಾಗಿದೆ.
ನೀವೇನಾದರೂ ಟಿ.ವಿಯನ್ನು ಖಾಯಂ ಆಗಿ ವೀಕ್ಷಿಸುವರಾಗಿದ್ದರೆ, ಜಾಹೀರಾತಿನ ಥಳಕನ್ನು ನೋಡಿಯೇ ಇರುತ್ತೀರಿ. ಹೆಚ್ಚಿನದಾಗಿ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾದ ತಿನಿಸುಗಳ ಜಾಹೀರಾತುಗಳು ನಿಮಿಷಕ್ಕೊಂದು ಬಾರಿ ಬಿತ್ತರವಾಗುತ್ತದೆ. ಇದರಲ್ಲಿ ಚಾಕಲೇಟಿಗೆ ಸಂಬಂಧಿಸಿದ ಜಾಹಿರಾತುಗಳದ್ದು ಸಿಂಹಪಾಲು. ಈ ತರಹದ ಚಾಕಲೇಟು ತಯಾರಿಕೆಗೆ ಬಹುಮುಖ್ಯ ಕಚ್ಛಾವಸ್ತುಗಳೆಂದರೆ, ಡೈರಿಯ ಉತ್ಪನ್ನಗಳು ಹಾಗೂ ಪಾಮ್ ಎಣ್ಣೆ. ಪ್ರಪಂಚದ ಹೆಚ್ಚಿನ ಮಳೆಕಾಡುಗಳಿರುವುದು ಹಿಂದುಳಿದ ದೇಶಗಳಲ್ಲಿ. ಹಾಗೆಯೇ ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ಸ್ವಾಭಾವಿಕವಾಗಿ ಹಿಂದುಳಿದ ದೇಶಗಳ ಮೇಲೆ ಇರುತ್ತದೆ. ನೈಸರ್ಗಿಕ ಕಾಡನ್ನು ಸವರಿ ಪಾಮ್ ಮರಗಳ ಕಾಡನ್ನು ಬೆಳೆಸುವುದು ಔಧ್ಯಮಿಕವಾಗಿ ಲಾಭದಾಯಕ ಎಂದು ಭಾವಿಸುವ ಈ ಬಹುರಾಷ್ಟ್ರೀಯ ಕಂಪನಿಗಳು, ಇಂಡೊನೇಷಿಯಾದಂತಹ ದೇಶಗಳನ್ನು ತಮ್ಮ ಔಧ್ಯಮಿಕ ವಸಾಹತುಗಳನ್ನಾಗಿ ಮಾಡಿಕೊಳ್ಳುತ್ತವೆ. ಇಲ್ಲಿರುವ ಅಪರೂಪದ ಮಳೆಕಾಡನ್ನು ನಾಶಮಾಡಲು ಇವರು ಕಂಡುಕೊಂಡ ದಾರಿಯೆಂದರೆ, ಇಡೀ ಅರಣ್ಯಕ್ಕೆ ಬೆಂಕಿ ಹಚ್ಚುವುದು. ಹೀಗೆ ಹಚ್ಚಿದ ಬೆಂಕಿಯೇ ಇದೀಗ ಕಾಡ್ಗಿಚ್ಚಾಗಿ ಆ ದೇಶಕ್ಕೆ ರಾಷ್ಟ್ರೀಯ ವಿಪತ್ತನ್ನು ತಂದೊಡ್ಡಿದೆ. ಅಲ್ಲದೇ ಈ ವರ್ಷದ ಎಲ್‍ನಿನೋ ಪರಿಣಾಮದಿಂದಾಗಿ ಅಲ್ಲಿನ ಬಹುತೇಕ ಕಾಡುಗಳು ಶುಷ್ಕವಾಗಿವೆ. ಕಾಡ್ಗಿಚ್ಚಿನ ಜ್ವಾಲೆಗಳು ಆಕಾಶದೆತ್ತರಕ್ಕೆ ಏರಿ, ಇಡೀ ದೇಶದ ವಾತಾವರಣದ ಸ್ಥಿತಿಯನ್ನೆ ಬದಲಾಯಿಸಿದೆ. ಪಕ್ಕದ ದೇಶಗಳೂ ಕೂಡ ಈ ಕಾಡ್ಗಿಚ್ಚಿನ ಸಂತ್ರಸ್ಥರು. ಐಷಾರಾಮಿ ಅಮೇರಿಕಾದ ದಿನದ ಮಾಲಿನ್ಯಕ್ಕಿಂತ ಹೆಚ್ಚು ಮಾಲಿನ್ಯ ಈ ಕಾಡ್ಗಿಚ್ಚಿನಿಂದ ಆಗುತ್ತಿದೆ. ವಾತಾವರಣದಲ್ಲಿರುವ ಮಾಲಿನ್ಯ ಪ್ರಮಾಣ 300ಕ್ಕೆ ತಲುಪಿದರೆ ಅದು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸುಮಾತ್ರ ಹಾಗೂ ಕಾಲಿಮಂಥನ್ ಪ್ರದೇಶಗಳಲ್ಲಿ ಈ ಮಾಲಿನ್ಯ ಪ್ರಮಾಣದ ಸೂಚ್ಯಂಕದ ಮಟ್ಟ 2000ಕ್ಕೆ ತಲುಪಿದೆ. ಬರೀ ಕಾಡ್ಗಿಚ್ಚಿನ ಹೊಗೆಯಿಂದ ಇಂಡೊನೇಷ್ಯಾದಲ್ಲಿ ಪ್ರತಿವರ್ಷ 1 ಲಕ್ಷದ 10 ಸಾವಿರ ಜನ ಅವಧಿಗೂ ಮುನ್ನವೇ ಸಾಯುತ್ತಿದ್ದಾರೆ. ಈ ವರ್ಷ ಈ ಪ್ರಮಾಣ ಇನ್ನೂ ಹೆಚ್ಚಾಗಬಹುದೆಂದು ಆತಂಕಿಸಲಾಗಿದೆ.
ಇಂಡೊನೇಷ್ಯಾ ಕೌನ್ಸಿಲ್ ಆಫ್ ಉಲೇಮಾವತಿಯಿಂದ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಏರ್ಪಾಡು ಮಾಡಲಾಗಿದೆ. ಮಲೇಷ್ಯಾ, ಸಿಂಗಾಪುರ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶದಿಂದ ಕಾಡ್ಗಿಚ್ಚು ನಂದಿಸಲು ನೆರವು ಹರಿದು ಬಂದಿದೆ. ವಿಮಾನಗಳಲ್ಲಿ ನೀರನ್ನು ತುಂಬಿಕೊಂಡು ಕಾಡ್ಗಿಚ್ಚಿನ ಪ್ರದೇಶದ ಮೇಲೆ ಎರಚಲಾಗುತ್ತಿದೆ. ನೆಲಮಟ್ಟದಲ್ಲಿ ಬೆಂಕಿಯನ್ನು ತಣಿಸಲು 22 ಸಾವಿರ ತುಕಡಿಗಳನ್ನು ನಿಯಮಿಸಲಾಗಿದೆ. ಆದರೆ ಇವೆಲ್ಲವೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಬೆಂಕಿ ಯಾವುದಕ್ಕೂ ಬಗ್ಗುತ್ತಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲೂ ಶ್ವಾಸಕೋಶದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳೇ ತುಂಬಿಕೊಂಡಿದ್ದಾರೆ. ಜುಲೈ 1 ತಾರೀಖಿನಿಂದ ಈಚೆಗೆ 10 ಜನ ಬಲಿಯಾಗಿದ್ದು, ತೀವ್ರವಾಗಿ ನರಳುತ್ತಿರುವವರ ಸಂಖ್ಯೆ 5 ಲಕ್ಷ ದಾಟಿದೆ. ಬಾಹ್ಯಾಕಾಶದ ಗಗನನೌಕೆಗಳು ಇದುವರೆಗೆ ಸುಮಾರು 1 ಲಕ್ಷದಷ್ಟು ಬೆಂಕಿಯ ಸೆಲೆಯನ್ನು ಗುರುತಿಸಿವೆ. ನೆಡುತೋಪುಗಳನ್ನು ದಾಟಿದ ಕಾಡ್ಗಿಚ್ಚು, ಪ್ರಾಥಮಿಕ ಅರಣ್ಯಗಳನ್ನು ನುಂಗಿ, ಅಭಯಾರಣ್ಯಕ್ಕೂ ಪ್ರವೇಶಿಸಿದೆ. ಗಾಬರಿಯಾಗುವಂತೆ, ಪ್ರಪಂಚದ ಅಪರೂಪದ, ವಿನಾಶದಂಚಿನಲ್ಲಿರುವ ಒರಂಗುಟಾನ್ ವಾನರ ಪ್ರಭೇದ ವಾಸಿಸುವ ಸಬಾಂಗಾವ್ ಅರಣ್ಯ ಪ್ರದೇಶದಲ್ಲಿ 358 ಅಗ್ನಿ ಸೂಕ್ಷ್ಮ ಪ್ರದೇಶಗಳಿವೆ ಮತ್ತು ಕಾಡ್ಗಿಚ್ಚಿನ ಜ್ವಾಲೆ ಈ ಅಭಯಾರಣ್ಯದ 500 ಹೆಕ್ಟರ್ ಪ್ರದೇಶವನ್ನು ಈಗಾಗಲೇ ನುಂಗಿ ಹಾಕುತ್ತಾ ವೇಗದಲ್ಲಿ ವ್ಯಾಪಿಸುತ್ತಿದೆ. ಮೂಲತ: ಅಗ್ನಿನಿರೋಧಕ ಗುಣ ಹೊಂದಿದ್ದ ಇಂಡೊನೇಷ್ಯಾದ ಜೌಗು ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರಿಂದ, ಜೌಗು ಪ್ರದೇಶದ ತೇವಾಂಶ ಪ್ರಮಾಣ ಕಡಿಮೆಯಾಗಿದ್ದು, ಕಾಡ್ಗಿಚ್ಚಿನ ಜ್ವಾಲೆ ಆ ಪ್ರದೇಶಕ್ಕೂ ವ್ಯಾಪಿಸುತ್ತಿದೆ. ಅಲ್ಲದೆ, ಜೌಗುಪ್ರದೇಶದ ಬೆಂಕಿಯ ಇನ್ನೂ ಅಪಾಯಕಾರಿ ಅಂಶವೆಂದರೆ, ಅಲ್ಲಿ ಬೆಂಕಿ ಸುಲಭದಲ್ಲಿ ನಂದಿಹೋಗುವುದಿಲ್ಲ. ಮೇಲ್ನೋಟಕ್ಕೆ ಬೆಂಕಿ ಅಸ್ತಿತ್ವ ಕಂಡಬರದೇ ಇದ್ದರೂ, ಭೂಮಿಯ ಅಡಿಯಲ್ಲಿ ಜೊಂಡಿನಂತಹ ಕಸ ಕಡ್ಡಿಗಳಲ್ಲಿ ಬೆಂಕಿ ಇದ್ದೇ ಇರುತ್ತದೆ. ಮತ್ತೆ ಯಾವಾಗಲಾದರೂ ಹೊತ್ತಿಕೊಳ್ಳುವ ಅಪಾಯವಿರುತ್ತದೆ ಮತ್ತು ನಿರಂತರವಾಗಿ ಮಾಲಿನ್ಯವನ್ನು ಕಕ್ಕುತ್ತಲೇ ಇರುತ್ತದೆ ಎನ್ನುತ್ತಾರೆ ಲಿಲೆಸ್ಟರ್ ವಿಶ್ವವಿದ್ಯಾನಿಲಯದ ಭೂಗೋಳ ಶಾಸ್ತ್ರಜ್ಞ ಪ್ರೊಫೆಸರ್ ಸುಸಾನ್ ಪೇಜ್.ಮನುಷ್ಯರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿದ್ದಾವೆ ಸರಿ. ಸಾಕುಪ್ರಾಣಿಗಳನ್ನು ಪಶುವೈದ್ಯರಲ್ಲಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬಹುದು. ಮಾನವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಿರುಗಾಡಬಹುದು.
ವನ್ಯಜೀವಿಗಳ ಪಾಡೇನು, ಅವಕ್ಕೇನು ಭಗವಂತ ವಿಶಿಷ್ಟವಾದ ಶ್ವಾಸಕೋಶಗಳ ವ್ಯವಸ್ಥೆಯನ್ನೇನು ಕಲ್ಪಿಸಿಲ್ಲ. ತನ್ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಪಾತವಾಗುತ್ತಿರುವ ವರದಿಗಳು ಬರುತ್ತಿವೆ. ಸೂರ್ಯೋದಯವಾಗುತ್ತಿದ್ದಂತೆ, ಸೂರ್ಯಕಿರಣಗಳ ಜೊತೆ ಸೇರಿದ ಹೊಗೆಯಿಂದಾಗಿ ಅಲ್ಲಿನ ಬಿಸಿಲಿನ ಬಣ್ಣವೇ ಬೇರೆಯಾಗಿದೆ. ಹಳದಿಯಾಗಿ ತೋರುವ ಇದಕ್ಕೆ “ಹಳದಿಯ ದಿನಗಳು” ಎಂದೇ ಹೆಸರಿಡಲಾಗಿದೆ. ವಾತಾವರಣದಲ್ಲಿ 3000 ದಿಂದ 5000 ಮೀಟರ್ ಎತ್ತರಕ್ಕೂ ವ್ಯಾಪಿಸಿದ ಹೊಗೆಯಿಂದಾಗಿ ಮಧ್ಯ ಸುಮಾತ್ರದ ಕೆರಿಂಚಿಯ ಜನ ನೀಲಾಕಾಶವನ್ನು ನೋಡದೆ 2 ತಿಂಗಳಾಯಿತು. ಲಕ್ಷಾಂತರ ಮಕ್ಕಳು ಶಾಲೆಗೆ ಹೋಗುವುದರಿಂದ ವಂಚಿತವಾಗಿದ್ದರೆ, ಪ್ರವಾಸೋಧ್ಯಮವನ್ನೇ ನೆಚ್ಚಿಕೊಂಡ ಮತ್ತೂ ಲಕ್ಷಾಂತರ ಕುಟುಂಬಗಳು ಅಕ್ಷರಷ: ಬೀದಿಗೆ ಬಂದು ನಿಂತಿವೆ. ಪ್ರಪಂಚದ ಅತ್ಯಪರೂಪದ ಮಳೆಕಾಡು ಹೊಂದಿರುವ ಇಂಡೊನೇಷ್ಯಕ್ಕೆ ಕಾಡ್ಗಿಚ್ಚು ಹೊಸದೇನಲ್ಲ. ಅಲ್ಲಿಯ ಜನರು ತಕ್ಕಮಟ್ಟಿನ ಕಾಡ್ಗಿಚ್ಚಿನ ಹಾವಳಿಗೆ ಹೊಂದಿಕೊಂಡೇ ಬದುಕುತ್ತಿದ್ದಾರೆ. ಆದರೆ ಈ ಬಾರಿಯ ಕಾಡ್ಗಿಚ್ಚು ಸಹಿಷ್ಣುಗಳಾದ ನಾಗರೀಕರನ್ನು ರೊಚ್ಚಿಗೆಬ್ಬಿಸಿ ಅಸಹಿಷ್ಟುತೆಯನ್ನು ಹೊರಹಾಕುವಂತೆ ಮಾಡಿದೆ. ನೂರಾರು ಶಾಲಾ ಶಿಕ್ಷಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾಗಿ ವರದಿಯಾಗಿದೆ.
ಇಂಡೊನೇಷ್ಯಾದ ಕಾಡು ಹಾಗೂ ಜೌಗುಪ್ರದೇಶಗಳ ಕಾಡ್ಗಿಚ್ಚಿನಿಂದ ಹೊರಹೊಮ್ಮುತ್ತಿರುವ ಸಿತ್ಯಾಜ್ಯದ ಪ್ರಮಾಣ ಯು.ಕೆಯ ವಾರ್ಷಿಕ ಸಿತ್ಯಾಜ್ಯದ ಪ್ರಮಾಣಕ್ಕಿಂತ ಹೆಚ್ಚು ಎಂದು ಗ್ರೀನ್‍ಪೀಸ್ ಎಚ್ಚರಿಕೆ ನೀಡಿದೆ. ಆಧುನಿಕ ತಂತ್ರಜ್ಞಾನವಾದ ಡ್ರೋನ್‍ಗಳನ್ನು ಬಳಸಿ, ಪೋಟೊ, ವಿಡಿಯೋಗಳನ್ನು ಆಧರಿಸಿ, ಇದುವರೆಗೂ 1 ಲಕ್ಷಕ್ಕೂ ಅಧಿಕ ಜನರು ಶ್ವಾಸಕೋಶದ ರೋಗಕ್ಕೆ ತುತ್ತಾಗಿ ಅಕಾಲಿಕ ಮರಣ ಹೊಂದಿದ್ದಾರೆ ಎಂದು ಗ್ರೀನ್‍ಪೀಸ್ ಎಚ್ಚರಿಸಿದೆ. ಅಲ್ಲಿನ ಸರ್ಕಾರದ ಪ್ರಕಾರ 63% ಭಾಗ ಸಿತ್ಯಾಜ್ಯ ಅಲ್ಲಿನ ಕಾಡ್ಗಿಚ್ಚಿನಿಂದಾಗಿಯೇ ವಾತಾವರಣಕ್ಕೆ ಸೇರುತ್ತಿದೆ. ಆದರೆ ವಾಸ್ತವ ಬೇರೆಯೇ ಇದೆ ಎಂದು ಖಾಸಗಿ ಅಂಕಿ-ಅಂಶಗಳು ಹೇಳುತ್ತವೆ. ಇವರ ಪ್ರಕಾರ ದೇಶದ ಒಟ್ಟೂ ಇಂಗಾಲಾಮ್ಲದ ತ್ಯಾಜ್ಯದ ಪ್ರಮಾಣದಲ್ಲಿ ಕಾಡ್ಗಿಚ್ಚಿನದೇ 80%ಕ್ಕಿಂತ ಹೆಚ್ಚು. ಎಚ್ಚೆತ್ತುಕೊಂಡ ಅಲ್ಲಿನ ಅಧ್ಯಕ್ಷ ಕಳೆದ ಮೇ ತಿಂಗಳಿಂದ ಜಾರಿಗೆ ಬರುವಂತೆ ಅರಣ್ಯನಾಶವನ್ನು ನಿರ್ಭಂದಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಕಡಿತಲೆಯಾಗಲಿರುವ ಎರಡನೇ ದರ್ಜೆಯ ಅರಣ್ಯಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲವಂತೆ.
2011 ರಿಂದ 2013ರವರೆಗೆ ರಷ್ಯಾ ಹಾಗೂ ಕೆನಡಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ಪ್ರಪಂಚದ ಕಾಲುಭಾಗ ಅರಣ್ಯ ನಾಶವಾಗಿದೆ. ಗ್ಲೋಬಲ್ ಫಾರೆಸ್ಟ್ ವಾಚ್ ಸಂಸ್ಥೆಯು ಸುಮಾರು 4 ಲಕ್ಷ ಸೆಟಲೈಟ್ ಛಾಯಚಿತ್ರಗಳನ್ನು ಆಧರಿಸಿ 2013 ಇಸವಿಯೊಂದರಲ್ಲೇ ಪ್ರಪಂಚದ 18 ದಶಲಕ್ಷ ಹೆಕ್ಟರ್ ಅರಣ್ಯ ನಾಶವಾಗಿದೆ ಎಂದು ವರದಿ ನೀಡಿದೆ. ಇದಕ್ಕೆ ಹೊಸ ಸೇರ್ಪಡೆಯೇ ಈಗಿನ ಇಂಡೊನೇಷಿಯಾದ ಕಾಡ್ಗಿಚ್ಚಿನ ಅವಾಂತರ.
ನಮ್ಮ ಮಕ್ಕಳ ಹುಟ್ಟಿದ ಹಬ್ಬಕ್ಕೆ ಚಾಕಲೇಟ್ ಹಾಗೂ ಕೇಕ್ ಬೇಕು. ದಸರಾ-ದೀಪಾವಳಿಗಂತೂ ಉಡುಗೊರೆಯಾಗಿ ಕೊಡಮಾಡುವ ಚಾಕಲೇಟ್ ಡಬ್ಬಿಗಳ ಲೆಕ್ಕವಿಲ್ಲ. ಇದಕ್ಕೆಲ್ಲಾ ಪಾಮ್ ಎಣ್ಣೆ ಬೇಕು ಮತ್ತು ಈ ಪಾಮ್ ಎಣ್ಣೆಯನ್ನು ಬಹುರಾಷ್ಟ್ರೀಯ ಕಂಪನಿಗಳು ಇಂಡೊನೇಷ್ಯಾದ ಮಳೆಕಾಡನ್ನು ಸುಟ್ಟೇ ತರುತ್ತಾರೆ. ಇಂಡೊನೇಷಿಯಾದ ಈ ಅನಾಹುತದಿಂದ ನಮಗೇನು ಹಾನಿಯಿಲ್ಲ ಎಂಬ ಉತ್ಪ್ರೇಕ್ಷೆಯಿಂದ ನಾವಿಲ್ಲಿ ಮೈಮರೆಯುವ ಹಾಗಿಲ್ಲ. ಈಗ ಉರಿಯುತ್ತಿರುವ ಕಾಡ್ಗಿಚ್ಚು ಇಡೀ ಪ್ರಪಂಚದ ವಾತಾವರಣದ ಬಿಸಿಯೇರಿಕೆಗೆ ಕಾರಣವಾಗುತ್ತಿದೆ. ಈ ಬೆಂಕಿಯ ಅವಘಡ ಇಂಡೊನೇಷ್ಯಾದ ರಾಷ್ಟ್ರೀಯ ವಿಪತ್ತು ಮಾತ್ರವಲ್ಲ, ಇದೊಂದು ಅಂತಾರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕಾದ ತುರ್ತು ಇದೆ. ಎಲ್ಲಾ ದೇಶಗಳೂ ಒಟ್ಟಾಗಿ ಅಲ್ಲಿನ ಕಾಡ್ಗಿಚ್ಚನ್ನು ಹತೋಟಿಗೆ ತರುವ ಒಗ್ಗಟ್ಟಿನ ಪ್ರಯತ್ನ ಮಾಡುವುದು ಇಡೀ ಪ್ರಪಂಚದ ಆರೋಗ್ಯದ ದೃಷ್ಟಿಯಿಂದ ಒಳಿತಾಗಬಲ್ಲದು.
ದೇಶ ಹತ್ತಿ ಉರಿಯುತ್ತಿದ್ದರು ವಿದೇಶಿ ಶಕ್ತಿಗಳಿಗೆ ಮಣಿಯುವುದು ಈಗಿನ ಪ್ರಪಂಚದ ಎಲ್ಲ ಬಡ ಹಾಗು ಮಧ್ಯಮ ದೇಶಗಳ ಸರ್ಕಾರಗಳ ಹಣೆ ಬರಹ 🙁
ಎಚ್ಚರಿಸುವ ಲೇಖನ. ನಮ್ಮ ದಿನಪತ್ರಿಕೆಗಳಲ್ಲಿ ಇಂಥ ಸುಧ್ದಿಗಳಿಗೆ ಮಹತ್ವ ಇಲ್ಲವಾಗಿದೆ. ಬೆಳಕು ಚೆಲ್ಲಿದ ಲೇಖಕರಿಗೆ ಧನ್ಯವಾದಗಳು.
ಧನ್ಯವಾದಗಳು ಅನಂತ ರಮೇಶ್ ಜೀ.