ಅಂಗಡಿಯಿಂದ ತರಕಾರಿ ತರುವುದು ಬಲು ಸುಲಭ. ಕೈಯಲ್ಲಿ ದುಡ್ಡಿದ್ದರೆ ಸಾಕು. ಆದರೆ ತರಕಾರಿ ಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಹಿತ್ತಲಲ್ಲಿ ತರಕಾರಿ ಬೆಳೆಯಲು ಎಷ್ಟೋ ಸಲ ನಾನೂ ಪ್ರಯತ್ನಿಸಿದ್ದೆ. ಹಳ್ಳಿಯಿಂದ ಪೇಟೆಗೆ ಬಂದ ನಾನು ಕೆಲವಾರು ವರ್ಷ ಮಣ್ಣಿನ ನಂಟು ಬೆಳೆಸಿದ್ದೆ. ಬೀನ್ಸ್, ಬೆಂಡೆ, ಬದನೆ ಬೀಜ ಹಾಕಿ ಅದು ಸಸಿಯಾಗಿ ಅರಳಿ ನಿಂತಾಗ ಸಂಭ್ರಮಿಸಿದ್ದೆ. ಕೇವಲ ಒಂದೆರಡು ಕಾಯಿ ಬಿಟ್ಟು ಅದನ್ನೇ ಖುಷಿಯಿಂದ ಅಡುಗೆ ಮಾಡಿ ತಿಂದದ್ದು ಇತ್ತು. ನಾವೇ ಬೆಳೆದ ತರಕಾರಿ ತಿನ್ನುವಾಗ ಆಗುವ ಖುಷಿಯೇ ಬೇರೆ. ತರಕಾರಿ ಬೆಳೆಗೆ ಕಾಲಕಾಲಕ್ಕೆ ನೀರು ಗೊಬ್ಬರ ಹಾಕುತ್ತಿರಬೇಕು. ನಮ್ಮಲ್ಲಿ ತೆಂಗಿನಮರದ ನೆರಳು ಹಾಗೂ ಮಣ್ಣಿನ ಸಾರ ಯಾವ ಬೆಳೆಗೂ ಉಪಯೋಗವಿಲ್ಲದಂತಾದ ಕಾರಣ ತರಕಾರಿ ಬೀಜ ಹಾಕುವುದನ್ನು ಕ್ರಮೇಣ ನಿಲ್ಲಿಸಿದೆ. ಈಗಲೂ ಒಮ್ಮೊಮ್ಮೆ ತರಕಾರಿ ಬೀಜ ಕಂಡಕ್ಷಣ ಪ್ರಯತ್ನ ಮಾಡುತ್ತಲೇ ಇರುವೆ.
ಒಂದಾದರೂ ತರಕಾರಿ ನಮ್ಮ ಹಿತ್ತಲಲ್ಲಿ ಇರಬೇಕು ಎಂದು ಮನಗಂಡು ತವರಿನಿಂದ ಒಮ್ಮೆ ಬರುವಾಗ ತೊಂಡೆ ಬಳ್ಳಿ ತಂದು ತೆಂಗಿನ ಮರದ ಬಳಿ ಊರಿದೆ. ಅದು ಮಣ್ಣು ಸಿಕ್ಕಿದ್ದೇ ಭಾಗ್ಯವೆಂದು ಕೇವಲ ಮೂರು ತಿಂಗಳಲ್ಲಿ ಬಳುಕುವ ಹುಡುಗಿಯ ರಟ್ಟೆ ಗಾತ್ರದಲ್ಲಿ ಬೆಳೆಯಿತು! ಈಗ ವರ್ಷದ ಮೇಲೆ ನನ್ನಂಥ ಗಜಗಮನೆಯ ರಟ್ಟೆಗಾತ್ರವಾಗಿ ಬೆಳೆದಿದೆ! ದಾಳಿಂಬೆ ಮರಕ್ಕೆ, ತಾರಸಿಗೆ ಬಳ್ಳಿ ಹಬ್ಬಿ ಯಥೇಚ್ಛ ಕಾಯಿ ಬಿಡಲು ತೊಡಗಿತು. ವಾರದಲ್ಲಿ ಎರಡು ಸಲ ತೊಂಡೆ ಕೊಯ್ಯುವ ಕೆಲಸವನ್ನು ಖುಷಿಯಿಂದ ಮಾಡುತ್ತಲಿರುವೆ. ಒಂದೊಂದೇ ಕಾಯಿ ಕೊಯ್ಯುತ್ತ ಅದನ್ನು ಲೆಕ್ಕ ಹಾಕುವ ಖುಷಿ. ನೂರರ ಮೇಲೆಯೇ ತೊಂಡೆ ಸಿಗುತ್ತಿದೆ. ಎಳೆಯದಾಗಿ ಹಸುರಾಗಿರುವ ತೊಂಡೆಕಾಯಿಯಿಂದ ಮಜ್ಜಿಗೆಹುಳಿ, ಸಾಂಬಾರು, ಪಲ್ಯ ಮಾಡಿದರೆ ಅದರ ರುಚಿ ಬಹಳ. ದಿನ ಬಿಟ್ಟು ದಿನ ತೊಂಡೆಯಿಂದ ವಿಧ ವಿಧ ಅಡುಗೆ ತಯಾರಿಸಿದೆ. ಪ್ರಾರಂಭದಲ್ಲಿ ಅರ್ಧ ತಪಲೆ ಹೋಳೂ ರಾತ್ರಿಯಾಗುವಾಗ ಖಾಲಿಯಾಗುತ್ತಿತ್ತು. ಕ್ರಮೇಣ ‘ಇವತ್ತೂ ತೊಂಡೆಯಾಆಆ’ ಎಂಬ ಉದ್ಗಾರದೊಂದಿಗೆ ಹೋಳೆಲ್ಲ ಪಾತ್ರೆಯಲ್ಲೆ ಉಳಿದು ರಸ ಮಾತ್ರ ಖಾಲಿಯಾಗಲು ತೊಡಗಿತು! ಸುಮಾರುಸಲ ನೆಂಟರಿಷ್ಟರಿಗೆ ಹಂಚಿದೆ. ನಮ್ಮ ಬಲಗೈ ಬಂಟಿ ಸಿದ್ದಮ್ಮಳಿಗೆ ಕೊಟ್ಟರೆ ಪ್ರಾರಂಭದಲ್ಲಿ ಖುಷಿಯಿಂದ ಎರಡು ಸಲ ಕೊಂಡೋದಳು. ಮತ್ತೆ ಕೊಟ್ಟಾಗ ‘ಬೇಡ ಅವ್ವ, ಮನೆಯಲ್ಲಿ ಸಾರು ಮಾಡಿದ್ದೇ ಇದೆ. ನಾಳೆವರೆಗೂ ಅದೇ ಆಗುತ್ತೆ. ಇಲ್ಲೇ ತಿಂತೇನಲ್ಲ ದಿನಾ. ಆಪಾಟಿ ಹೋಳುಗಳಿರುತ್ತವಲ್ಲ ಅದೇ ಬೇಕಾದಷ್ಟಾಗುತ್ತೆ ಸಾಕು’ ಎಂಬ ಉತ್ತರ ಬಂತು.
ಛೇ ಛೇ ತೊಂಡೆಗೆ ಹೀಗೂ ತಿರಸ್ಕಾರವೇ ಎನ್ನುವ ವ್ಯಥೆ ನನಗಾಯಿತು. ಇವರಿಗೆಲ್ಲ ಬುದ್ಧಿ ಕಲಿಸಬೇಕೆಂದು ಅಕ್ಕಿಯೊಂದಿಗೆ ತೊಂಡೆಕಾಯಿ ಹಾಕಿ ರುಬ್ಬಿ ದೋಸೆ ಮಾಡಿದೆ. ಚಪ್ಪರಿಸಿ ತಿಂದರು. ಬಾಯಿತಪ್ಪಿಯೂ ಇದು ತೊಂಡೆಕಾಯಿ ದೋಸೆ ಎಂದು ಹೇಳಲಿಲ್ಲ! ತೊಂಡೆ ಎಲೆಯನ್ನೂ ಬಿಡಲಿಲ್ಲ. ಅದರಿಂದ ತಂಬ್ಳಿ, ಪತ್ರಡೆ ತಯಾರಿಸಿದೆ.
ಒಂದು ದಿನ ನಮ್ಮ ಸ್ನೇಹಿತರೊಬ್ಬರು ತೊಂಡೆ ಮುಗಿಯಿತೆ ನಿಮ್ಮಲ್ಲಿ ಎಂದು ಕೇಳಿದರು. ಅವರ ಆ ಮಾತು ಕೇಳಿದ್ದೇ ಸಂಭ್ರಮಪಟ್ಟು ‘ಮುಗಿದಿಲ್ಲ ಇವತ್ತು ಇದೀಗ ೨೦೦ ತೊಂಡೆ ಕೊಯಿದು ಮನೆ ಒಳಗೆ ಬಂದೆ. ಆಗ ನಿಮ್ಮ ಫೋನ್ ಬಂತು. ಸರಿಯಾದ ಸಮಯಕ್ಕೆ ಕರೆ ಮಾಡಿದ್ದೀರಿ. ನಿಮಗೆ.. .. ಎಂದು ಮುಂದೆ ನಾನು ಹೇಳುತ್ತಿರಬೇಕಾದರೆ ನನಗೆ ಮಾತಿಗೆ ಅವಕಾಶವೀಯದೆ ಅತ್ತಕಡೆಯಿಂದ ತೊಂಡೆ ಮುಗಿದಾಗುವಾಗ ಹೇಳು ಆಗ ನಿಮ್ಮಲ್ಲಿಗೆ ಬರುವೆ ಎಂಬ ಉತ್ತರ ಬಂತು!
ನಿಜಕ್ಕೂ ತೊಂಡೆ ಉತ್ತಮ ತರಕಾರಿ. ಅದಕ್ಕೆ ಯಾವ ಆರೈಕೆಯೂ ಬೇಡ. ನನಗಂತೂ ತೊಂಡೆ ದಿನಾ ತಿಂದರೂ ಸಾಕು ಎನಿಸಿಲ್ಲ. ಬಳ್ಳಿಗೆ ಒಂದಷ್ಟು ನೀರು (ಅದೂ ಫಿಲ್ಟರ್ ನೀರು ಬೇಕು ಅನ್ನುವುದಿಲ್ಲ! ಬಟ್ಟೆ ಒಗೆದಾದ ನೀರೂ ಅಡ್ಡಿಯಿಲ್ಲ) ಮತ್ತು ಕಾಫಿ ಚಹಾ ಚರಟ ಹಾಕಿದರೆ ಸಾಕು. ಮತ್ತೇನೂ ಬೇಡುವುದಿಲ್ಲ. ಅದಕ್ಕೆ ಪ್ರತಿಯಾಗಿ ನಮಗೆ ಯಥೇಚ್ಛ ತೊಂಡೆಕಾಯಿ ನೀಡುತ್ತದೆ. ಕೆಲವು ತೊಂಡೆ ಕೊಯ್ಯಲು ಆಗದೆ ಗಿಡದಲ್ಲೇ ಹಣ್ಣಾಗುತ್ತವೆ. ಅದಕ್ಕೇನೂ ಬೇಸರವಿಲ್ಲ. ತೊಂಡೆ ಹಣ್ಣು ಪಕ್ಷಿಗಳಿಗೆ ಬಲು ಇಷ್ಟ. ತೊಂಡೆಹಣ್ಣು ತಿನ್ನಲು ಬುಲ್ ಬುಲ್ (ಪಿಕಳಾರ) ಹಕ್ಕಿ ಖಾಯಂ ಗಿರಾಕಿ. ಸುಮಾರು ಹಕ್ಕಿಗಳು ಬೆಳಗ್ಗೆ ಹುಳಹುಪ್ಪಟೆ, ತೊಂಡೆ ಹಣ್ಣು ತಿನ್ನಲು ಬರುತ್ತವೆ. ಪಕ್ಷಿಗಳ ಚಿಲಿಪಿಲಿ ನಾದ ಕೇಳುವುದೇ ನಮ್ಮ ಕಿವಿಗೆ ಇಂಪು. ಕೆಲವೊಮ್ಮೆ ಅಳಿಲು ಹಾಗೂ ಪಿಕಳಾರ ಪಕ್ಷಿಗಳಿಗೆ ಜಗಳವಾಗುತ್ತದೆ. ಆಗ ಅವುಗಳನ್ನು ನೋಡುವುದೇ ಕಣ್ಣಿಗೆ ಆನಂದ.
ಕೆಲವೊಮ್ಮೆ ನಾನು ಕೊಯಿದುದರಲ್ಲಿ ತೊಂಡೆ ಹಣ್ಣು ಸಿಕ್ಕುತ್ತದೆ. ಅದನ್ನೇನು ಮಾಡುವುದು? ಎಂಬ ಪ್ರಶ್ನೆ ಕಾಡಿತು. ಬೀಸಾಕಲು ಮನ ಒಪ್ಪಬೇಕಲ್ಲ. ಅದಕ್ಕೂ ಒಂದು ಗತಿ ಕಾಣಿಸಿದೆ. ತೊಂಡೆಹಣ್ಣನ್ನು ಬೇಯಿಸಿ ಮಿಕ್ಸಿಗೆ ಹಾಕಿದೆ. ಜೊತೆಗೆ ಬೆಳ್ಳುಳ್ಳಿ, ಕರಿಮೆಣಸು, ಜೀರಿಗೆ, ಸಾರಿನಪುಡಿ ಹಾಕಿ ತಿರುಗಿಸಿದೆ. ಅದಕ್ಕೆ ಬೇಕಷ್ಟು ನೀರು, ಉಪ್ಪು ಹಾಕಿ ಕುದಿಸಿ ಸಾಸುವೆ, ಜೀರಿಗೆ, ಇಂಗು, ಕರಿಬೇವು ಒಗ್ಗರಣೆ ಕೊಟ್ಟೆ. ಅದ್ಭುತ ರುಚಿಯ ಸಾರು ತಯಾರಾಯಿತು. ಆಹಾ ಯಾರಿಗಾದರೂ ಗೊತ್ತಾದರೆ ತಾನೆ ಇದು ತೊಂಡೆಹಣ್ಣಿನ ಸಾರು ಎಂದು! ಎಲ್ಲರೂ ಚಪ್ಪರಿಸಿ ಸುರಿದರು ಈ ಸಾರನ್ನು. ತೊಂಡೆಕಾಯಿಯಿಂದ ಮೆಣಸುಕಾಯಿ ತಯಾರಿಸಿದೆ. ವಾಂಗಿ ಹಾಕುವ ಬದಲು ತೊಂಡೆಕಾಯಿ ಹಾಕಿ ಭಾತು ಮಾಡಿದೆ. ತೊಂಡೆ ಮುಗಿಯುವವರೆಗೆ ಹೀಗೆ ತೊಂಡೆಯಿಂದ ಹೊಸರುಚಿ ತಯಾರಿಯಲ್ಲಿ ತೊಡಗುವ ಮನಸ್ಸು ಮಾಡಿದ್ದೇನೆ. ತೆಂಗು ಇಂಗು ಇದ್ದರೆ ಮಂಗು ಅಡುಗೆ ಮಾಡುತ್ತೆ ಎಂಬುದು ಹಳೆ ಗಾದೆ. ತೆಂಗಿನ ಬದಲಾಗಿ ತೊಂಡೆಹಣ್ಣು ಇಂಗು ಇದ್ದರೆ ಅಡುಗೆ ಮಾಡುತ್ತಾಳೆ ಮಾಲಾ! ಇದು ಹೊಸ ಗಾದೆ!
*****
ಹ ಹ.. ತೊಂಡೆಯ ಕಥೆ.. ಚೆನ್ನಾಗಿದೆ. ಚಿಕ್ಕಂದಿನಲ್ಲಿ ಅಮ್ಮ ಮಾಡುತ್ತಿದ್ದ ತೊಂಡೇಕಾಯಿ ಪಲ್ಯ ನೆನ್ಪಾಗಿ ಬಾಯಲ್ಲಿ ನೀರೂರಿತು 🙂
ಧನ್ಯವಾದ ಪ್ರಶಸ್ತಿ