ಯಾವು ಆ ಮೂರು ದಿನಗಳು! ವೈಶಾಖದ ದಿನಗಳಾ, ಆಷಾಢದಿನಗಳಾ ಅಂತ ಭಾವಿಸಿದ್ರಾ! ಅಲ್ಲ ಅಲ್ಲ. ಇಕಿ ಒಮ್ಮಿಂದೊಮ್ಮೆಲೆ ದೂರ ನಿಂತು ನೀರು ಕೋಡ್ರಿ, ಹಾಸಿಗಿ ಕೊಡ್ರಿ ಅಂತ ಸ್ಟಾರ್ಟ ಮಾಡಿದ್ರ ’ಎದಿ ಝಲ್’ ಅಂತದ. ಏನ್ರೀ ಹೊರಗಿದ್ದ ಮೂರುದಿನದ ಬಗ್ಗೆ ಸಿರಿಯಸ್ಸ ತೋಳೊದಾ! ಅಂತ ಮೂಗು ನೀವು ಮುರಿಬಹುದು. ಅದಕ್ಕಲ್ಲ ಸಂಕಟ ಪಡೋದು ಕೆಲಸ ಮಾಡಕ. ಅಯ್ಯೋ! ಇವರು ಎಂಥವರ್ರೀ ತಿಂಗಳಾನಗಟ್ಟಲೇ ಮಾಡಿ ಹಾಕೋರಿಗೆ ಕೂಡ್ರಿಸಿ ಮೂರು ದಿನ ಹಾಕಕ ಏನು ಧಾಡಿ ಅಂತ ಅಂದಕೊಂಡಿರಲೂ ಬಹುದು ತಾವು. ಅದಕ್ಕೂ ಅಲ್ಲ, ನಾನು ಚಿಂತಿ ಪಡೋದು ನಮ್ಮವ್ವಗ ಆಗುವ ತ್ರಾಸ ನೋಡಲಾರದಕ. ’ಅಲೇ ಇವನೌ! ಎಂಥವರ್ರೀ ಇವರು? ಇವರ ಪ್ರಶ್ನೆಗಾ ಉತ್ತರ ಅದ. ತಾಯಿನ ಬಿಡಿಸಿ ಕೆಲಸ ಮಾಡಿದ್ರ ಆಯ್ತಪ’ ಎಂದು ಮನದಲ್ಲಿ ಭಾವಿಸಿರಲೂ ಬಹುದು. ಅದ ಪ್ರಶ್ನೆ ಬಂದಿರೋದು. ತಾನೂ ಬಿಡಲ್ಲ, ಮಾಡೋರನ ಮಾಡಗೊಡಸಲ್ಲ, ಸತಗತಂತ ಮಾಡಿ ಎಲ್ಲರನ್ನೂ ಬೈಯೊದಕ ಮರೆಯೊಲ್ಲ. ತಾನೆ ಮಾಧ್ವ ಸಂಪ್ರದಾಯನ ಉಳಿಸಿ ಬೆಳಸಲಿಕ್ಕೆ ಗುತ್ತಿಗೆ ತೊಂಡಂಗ ’ಮಡಿ ಮಡಿ ಮಡಿ ಎಂದು ಮೂರು ಮಾರ ಹಾರತಿ, ಮಡಿಯಲ್ಲೇನೈತೋ ಪಿಕನ್ಯಾಸಿ’ ಎಂದು ದಾಸರು ಹಾಡಿರೊ ವಾಣಿಗೆ ವಿರುದ್ಧವಾಗಿ ದೊಡ್ಡ ದೊಡ್ಡ ಆಚಾರ್ಯವಂತರ ಮನೆಗೆ ಮಾಡತಾರೊ ಇಲ್ಲೊ ಅಷ್ಟ ಪರಿ ನಮ್ಮವ್ವ ಮಾಡತಾಳ ಅಲ್ಲದ ಮಾಡಸ್ತಾಳ. ಆ ವಿಷಯಗೋಸ್ಕರನಾ ನನ್ನ ಪಾಲಿಗೆ ಭಯಾನಕವಾಗಿರೊ ಆ! ಮೂರು ದಿನಗಳು ಅಂತ ಹೇಳಿದ್ದು. ಏನ್ರೀ ಈ ಕಾಲದಲ್ಲೂ ಆ ಪರಿ ನಡಸ್ತಾರಾ?’ ಅಂತ ಅಂದುಕೊಳ್ಳೊದೆ ತಪ್ಪು. ನಾನು ಆಡಿದ ಆಟ, ಮಾಡಿದ ಪ್ರಯತ್ನ, ನನ್ನ ವೈಚಾರಿಕತೆ ಅವ್ವನ ಮುಂದ ಲಗ ಹೊಡದ್ರು ಕೈಕಟ್ಟಿಕುಳಿತುಕೊಂಡಾವ.
ಎಪ್ಪತೈದು ವರ್ಷ ಕ್ರಾಸ ಆಗ್ಯಾದ ಅವ್ವಗ ತನ್ನದೇ ತನಗ. ನಮ್ಮ ಅತ್ತೆ ’ಮಂತಕ್ಕ’ ಅಂತ ಭಾರಿ ಒಳ್ಳೆ ಜೀವಾ. ಪ್ರೀತಿ,ಅಂತಃಕರಣ, ದಾನಧರ್ಮದಾಗ ಎತ್ತಿದ ಕೈ. ಆಕೆಯ ಗರಡಿಯಲ್ಲಿ ಬೆಳದಾಕಿ. ಮಡಿಯಮ್ಮನಾಗಿದ್ದ ಆಕೆಯ ಎಲ್ಲಾ ಗುಣಗಳನ್ನು ಬಿಟ್ಟು ನಮ್ಮವ್ವ ಮಡಿ ಮಾಡೋದನ್ನ ಮಾತ್ರ ಭಟ್ಟಿ ಇಳಿಸಿದಾಕಿ. ಈಗಿಂದಲ್ಲ ಸಮಸ್ಯೆ ಮಡಿದು ಅವ್ವುಂದು. ನಮ್ಮಪ್ಪ ಹೆಂಗ ತಡಕೊಂಡನೋ ದೇವರೆಬಲ್ಲ. ಮಡಿಗೆ ನೀಡುತ್ತಿದ್ದ ಮಹತ್ವ ಇನ್ನಿತರ ವಿಷಯಕ್ಕ ನೀಡುತ್ತಿರಲಿಲ್ಲ, ಈಗಲೂ ಇಲ್ಲವೇ ಇಲ್ಲ. ನಮ್ಮ ಮದುವೆಯಾಗಿ ಒಂದು ದಶಕ ಕಳೆದರೂ ದಿನಾ ಅಡುಗೆ ಮಾಡೋಕಿ ಅವ್ವನ. ಅದೂ ಹೇಗೆ ಮಾಡಲಿ ತೆಪ್ಪಗೆ ತಿನ್ನಬೇಕು. ನಾಮಕರಣ ಆಯ್ತೋ ಈಕಿ ಮೇಲೆ ಹಿಡಿ ಶಾಪ. ಅವ್ವಂದು ಇನ್ನೊಂದು ಸಮಸ್ಯೆ ಅಂದ್ರ ಒಂದು ಬಾರಿ ಮಾಡಿದ್ದನ್ನೂ ಮೂರು ಹೊತ್ತು ತಿನ್ನಬೇಕೂ ಅನ್ನೋದು. ಉಪ್ಪಿಲ್ಲದ,ಖಾರಿಲ್ಲದ ಆ ಪಥ್ಯದ ಅಡುಗೆ! ಹೆಸರಿಟ್ಟರೆ ನಿಮ್ಮಪ್ಪ ೮೮ವರ್ಷ ಯಾವುದೇ ಬಿ.ಪಿ ಶುಗರು ಇಲ್ಲದೇ ಬದುಕಿ-ಬಾಳಬೇಕಾದ್ರೆ ಇದೆ ಕಾರಣ ರಂಡೆಗಂಡ ಅಂತ ದಬಾಯಿಸತಾಳೆ. ರಾತ್ರಿ ಆಸರಕ್ಕೆ ಬೇಸರಕ್ಕೆ ಇವಳಿಗೆ ಅನ್ನ ಮಾಡು ಅಂದ್ರೆ ಅದಕೊಂದು ರಾಮಾಯಣ ಮಹಾಭಾರತ. ಮಾಡಿದ್ರ ಇದ್ದಲಿ ಒಲೆ ಮೇಲೆ ಮಾಡಬೇಕು, ಗ್ಯಾಸ ಹಚ್ಚಂಗಿಲ್ಲ, ಹಚ್ಚಿದ್ರ ಅದಕ ಮುಸುರಿ ಆಗತಾದ. ಎರಡನೆ ದಿನ ಅದೆ ಮುಂದುವರಿತೊ ’ಛಲೋದು ಬಿಸಿ-ಬೀಸಿದೂ ಮಾಡಿಕೊಂಡು ತಿನ್ರೀ’ ಅಂತ ದಿನವೂ ಒಂದೆ ಹೊತ್ತು ಊಟ ಮಾಡುವ ಅವ್ವ ನಿತ್ಯದಂತೆ ರಾತ್ರಿ ಕಾಫಿ ಕುಡಿಯೋದು ಬಿಟ್ಟು ಶಟಗೊಂಡು ಬಿಡೋದು. ಇಂತಿಪ್ಪ ಮನೆಯ ಪರಿಸ್ಥಿಯಲಿ ಈಕೆ ಮೂರು ದಿನ ರಜಾ ಹಾಕುವುದಾದರೆ. ಬಯಲಾಟದ ಪ್ರಸಂಗ ಮನೆಲ್ಲಿ ನಡೆಯದಿರುವುದೆ? ಅಲ್ಲಿ ಮುಟ್ಟಿದ್ಲು, ಇಲ್ಲಿತಟ್ಟಿದ್ಲು, ಹುಡಗರು ಮುಟ್ಟಿದವು ಅಲ್ಲಿ ನೀರು ಚಲ್ಲಿದವು. ರಾಮ ರಾಮ ಹೇಗಾಗಬೇಡ. ವಯಸ್ಸಾಗೇದ ಕೂತಬಿಡವಾ ನಾನ ಮಾಡಿ ಹಾಕ್ತಿನಿ ಅಂತ ಕೇಳಕೊಂಡ್ರ ’ಹೂಂ ಪಾ ವಯಸ್ಸಾಗೇದಲ ನನಗೆ, ಹೆಂಗ ಮಾಡಿಹಾಕಿದ್ರೂ ಕೂಳ ತಿನ್ನು ಅಂತಿಯೇನು? ನಾನು ಉಪಾವಾಸ ಬಿದ್ದು ಸಾಯ್ತಿನೇ ಹೊರತು ನೀವು ಕುಚ್ಚಿದ ಕೂಳು ತಿನ್ನಲ್ಲ’ ಎಂದು ಫರ್ಮಾನು ಹೊಡಿಸೋಳು. ತ್ರಾಸ ನೊಡಲಾಗದೆ ಚಹಾ-ಕಾಫಿ,ನಾಷ್ಟ ಮಾಡುವ ಶ್ರಮ ತೆಗೆದುಕೊಂಡರೂ ಸೂಕ್ಷ್ಮ ದೃಷ್ಠಿನ ನೆಟ್ಟೆನಟ್ಟಿರತಾಳ. ಸ್ವಲ್ಪ ನಾಷ್ಟ ಮಾಡಕ ಇಷ್ಟೆಲ್ಲ ಚೆಲ್ಲಿದೆಲ್ಲೊ ಅಂತ ಬಯ್ಯಿಸಕೊಬೇಕು. ಅವಳ ತ್ರಾಸ ನೋಡಲಾರದ ಮುಸುರಿ ಸಾಮಾನೆಲ್ಲ ತೊಳಿದಿನಲ್ಲೊ ಅದನ್ನ ಮತ್ತೊಮ್ಮೆ ತೊಳಿಯಾಕೆ.
ಅದರಾಗ ಈಕಿ ಕೂತ ಕೂಡಲೇ ಅವನ ಹದ್ದಿನ ಕಣ್ಣು ಚುರುಕಾಗತವ. ಒಮ್ಮೊಮ್ಮೆ ಯಾಕರ ಇಕಿಗೆ ಕಣ್ಣ ಆಪರೇಷನ್ ಮಾಡಿಸಿದೇನೋ ಅಂತಾನೂ ಅನಸ್ತಿರತಾದ. ಆಪರೇಷನ್ನ ಆದ ಮ್ಯಾಲೆ ಅವನ್ನ ಕಣ್ಣು ಇಷ್ಟು ಸೂಕ್ಷ್ಮ ಆಗ್ಯಾವ ಅಂದ್ರ ನಮಗ ಕಾಣ್ತಿರಲ್ಲ ಅಗಳು ಬಿದ್ದದ್ದೂ ಇಕಿಗೆ ಕಾಣತಿರತಾವ. ಒನ್ ಗೆಟ್ ಒನ್ ಫ್ರೀ ಅಂತಾರಲ್ಲ ಹಾಂಗ ಕಣ್ಣಿನ ಆಪರೆಷನ್ ಆದಕೂಡಲೇ ಕಿವಿನೂ ಫಸ್ಟ ಕ್ಲಾಸ ಕೇಳಂಗ ಆಗ್ಯಾವ. ಕಣ್ಣಿಗೂ ಕಿವಿಗೂ ಏನಾದರೂ ಲಿಂಕ್ ಅದನೂ ಅನ್ನೊ ಅನುಮಾನ ನನಗ ಸ್ಟಾರ್ಟ ಆಗ್ಯಾದ. ದಿನಾ ಏಳು ಗಂಟೆಗೆ ಏಳುವ ನಾನು ಈಕಿ ಕೂತ್ರ ದಿನಾ ಆಕಿ ಏಳೋ ಸಮಯಕ್ಕಾ ಏಳಬೇಕು. ಅವ್ವ ಎದ್ರ ಅಲ್ಲೋಲ ಕಲ್ಲೋಲ ಮಾಡಿಬಿಡತಾಳ. ನನ್ನ ಮುಖ,ಶೌಚಾದಿ ಕ್ರಿಯೆ ಮುಗಿದು ಒಂದು ಪೆಗ್ ಟೀ ಏರಿಸಿಕೊಂಡ್ರ ನನಗ ಚೈತನ್ಯ ಬರೋದು. ಅವಗಾ ಅವ್ವಗ ನೀರು ಕಾಯೋಕೆ ಇಟ್ಟು ಸುತ್ತಿಗೊಂಡು ಮಲಗುತಿರೋ ಮಕ್ಕಳನ್ನ ನನ್ನ ಕೆಲಸಕ್ಕ ಹೊತ್ತಾಗುತ್ತೆ ಅನ್ನುವ ಚಿಂತೆಯಲ್ಲಿ ಬೆಳ್ಳಿ,ಬಂಗಾರ ಅಂತ ಪಂಪ್ ಹಾಕಬೇಕು. ಸ್ವಲ್ಪ ಅಚ್ಚಾ ಮಾಡಿದು ಕೂಡಲೇ ಅದೇ ಮಾಡಿಸಿಕೊಂಡು ಬಿಡೋಣ ಅಂತಾವೆ. ಅದಕ್ಕೆ ಆಸ್ಪದ ಕೂಡದೆ ಗುಟುರಿದಾಗ ಪಟಕ್ಕನೆ ಎದ್ದು ಬಿಡತಾವೆ ಮಕ್ಕಳು. ಅವರನ್ನ ಬಚ್ಚಲ್ಕೆ ದಬ್ಬಿ ಹಾಲು ರೆಡಿ ಮಾಡಬೇಕು. ಅಲ್ಲಿವರಗೆ ಮನಿಯಾಕಿ ಮಹಾರಾಣಿ ತರಹ ಶಯನದಲ್ಲಿ ಪವಡಸಿರುತ್ತಾಳ. ಬ್ರಾಹ್ಮಣರಾಗಿ ಹುಟ್ಟಿದ ಹೆಣ್ಮಕ್ಕಳಿಗೆ ಇದೊಂದು ಸೌಭಾಗ್ಯ ಮೂರು ದಿನ ಯಾವುದೆ ಕಿರಿಕಿರಿ ಇಲ್ಲದ ಹಾಯಾಗಿ ಇರೋದು. ಈ ಸಮಯದಾಗ ಆಕಿ ನೆರಳು ಕೂಡಾ ಬಿದ್ರ ಮೈಲಿಗಿ ಅಂತ ಕರ್ಮಠ ಶಾಸ್ತ್ರಗಳು ಹೇಳ್ತಾವ. ಸಹಜಕ್ರಿಯೆ ನಡೆದ ಆ ಸಮಯದಲ್ಲಿ ಹೆಣ್ಣಿಗೆ ವಿಶ್ರಾಂತಿ ನೀಡಬೇಕೆನ್ನುವ ವ್ಯವಸ್ಥೆಯನ್ನು ಸ್ವಚ್ಛತೆಯ ದೃಷ್ಠಿಯಿಂದ ಹಿಂದಿನವರು ಮಾಡಿರಬಹುದಾದರೂ ಅದಕ್ಕೆ ರೆಕ್ಕೆ ಪುಕ್ಕ ಹಚ್ಚಿ ಏನೆಲ್ಲ ಸೇರಿಸಿ ಎಲ್ಲರಿಗೂ ತೊಂದರೆಯಾಗುವಂತಹ ನಿಯಮಗಳನ್ನು ರೂಪಿಸಿದ್ದಾರಲ್ಲ ಅವರ ಮುಂದುವರೆದ ಕುಡಿಗಳು, ಅದಕ್ಕೆ ಬೇಜಾರಾಗುತ್ತದೆ. ಅವುಗಳನ್ನು ಯಾಥಾವತ್ತಾಗಿ ಆಚರಿಸುತ್ತೇವೆ ತಮ್ಮದೊಂದಿಷ್ಟು ಸೇರಿಸಿ ಎನ್ನುವಂತಹ ನನ್ನವ್ವಳಂತಹವರ ಮುಂದೆ ಇರುವಂತಹವರೆಲ್ಲರೂ ಧರ್ಮಭ್ರಷ್ಟರೇ. ವಿಷಯಾಂತರ ಆದದ್ದಕ್ಕೆ ಕ್ಷಮೆ ಇರಲಿ.
ಅವ್ವಂದು ಸ್ನಾನ ಆದ ಮೇಲೆ ದೇವರ ಕಟ್ಟೆ ನಂತರ ವೃಂದಾವನ ಅದು ಹತ್ತಾರು ತುಳಸಿ ಬೆಳೆಸಿರುವ ಸ್ಥಳದಲ್ಲೆಲ್ಲಾ ಪ್ರದಕ್ಷಿಣೆ, ನಂತರ ಬಾರಕೇರ ಹನುಮಪ್ಪ, ತದನಂತರ ಯಂಕಪ್ಪನ ದೇವಸ್ಥಾನಕ್ಕೆ, ಅಲ್ಲಿರುವ ಗಣಪ್ಪ, ನವಗ್ರಹ, ಮತ್ತೊಬ್ಬ ಹನುಮಪ್ಪನವರನ್ನೆಲ್ಲ ಸುತ್ತಿ ಭಕ್ತಿಭಾವಾವೇಶದಲ್ಲಿ ಬರತಾಳ. ನನಗ, ಮಕ್ಕಳಿಗೆ ಹೊತ್ತಾತು ಅಂತ ಸಂಕಟ ಪಡತಿದ್ರ ಆಕಿ ನಿರಾಳಾಗಿ ಬರಾಬ್ಬರಿ ೮.೦೦ಗಂಟೆಗೆ ಮನೆಯೊಳಗೆ ಪ್ರವೇಶ ಮಾಡತಾಳ. ಅಷ್ಟರೊಳಗಾಗಿ ಈಕಿ ಎದ್ದು ಮುಖಮಾರ್ಜನ ಮಾಡಿಕೊಳ್ಳದಿದ್ದರ, ಮಗನನ್ನ ಹಿಡಕೊಳ್ಳದಿದ್ರ ಮಂತ್ರಪುಷ್ಪ ಆರಂಭವಾಗತಾವ. ಮಾಡಿದ ಕೆಲಸದ ಭಾರವೆಲ್ಲ ಬೈಗಳ ರೂಪದಲ್ಲಿ ವರ್ಗಾವಣೆಯಾಗಿ ಇಕಿ ತಡಕಳಾರದ ಪ್ರಾಣಿ, ಸಣ್ಣಾಗಿ ಒದರಾಕ ಸ್ಟಾರ್ಟ ಮಾಡಿದಾಗ ಅದರಾಗ ಒಂದು ಖುಷಿಯಲ್ಲಿ ಇಬ್ಬರ ನಡುವ ಜಗಳದ ಸ್ಪರ್ಧೆ ಏರ್ಪಟ್ಟು ಕಣ್ಣಿರಿನ ಧಾರೆ ಒಬ್ಬರಿಂದಾದರೂ ಬರುವುದರೊಳಗಾಗಿ ಕೊನೆಯಾಗಿರುತದ. ಆ ಜಗಳದ ಖುಷಿಯೊಳಗ ಇವರಗೆ ಮನೆಯಲ್ಲಿರುವವರ ಪರಿವೆ ಇರುವುದಿಲ್ಲ. ಅವ್ವನ ಸ್ವಭಾವ ಗೊತ್ತಾಗಿ ಇಕಿ ಈಗಿಗ ಸುಧಾರಿಸ್ಯಾಳ. ಆದ್ರೂ ಒಮ್ಮೊಮ್ಮೆ………..! ಅದಕ್ಕಾಗಿ ಮೊದಲೆ ಎಬ್ಬಿಸಿ ಇಕಿಗೂ ಹಾಲ ರೆಡಿ ಮಾಡಿರುತ್ತೇನೆ. ಅಮ್ಮನ ಗೃಹ ಪ್ರವೇಶ ಆದ ಮೇಲೆ ನೀರು ತುಂಬುವ ಕಾರ್ಯ ನಡಿತಾದ. ನಿತ್ಯ ಫ್ರೇಶಾಗಿರೋ, ತಾನೆ ತುಂಬಿದ ನೀರು ಬೇಕು. ಒಂದು ದಿನ ಕಳೆದರೂ ಆ ನೀರು ಬಳಸೋದಕೆ ನಾಲಾಯಕು. ’ಅವ್ವಾ ಸಿಟಿಯಾಗ ವಾರಕ್ಕೊಮ್ಮ ನೀರಬರತಾವ, ಅವರೆಂಗ ಮಾಡತಾರ, ಅಷ್ಟ ಯಾಕವ ಊರಾಗ ನರಸಕ್ಕ, ಅನಸಕ್ಕ ಇದ್ದಾರಲ್ಲ ಮಡಿಯಮ್ಮನವರು ಅವರು ವಾರಗಟ್ಟಲೆ ನೀರು ಬಳಸ್ತಾರ, ಅಷ್ಟು ಬ್ಯಾಡ ಎರಡು ಮೂರು ದಿನಕ್ಕೊಮ್ಮೆಯಾದ್ರೂ ತುಂಬು ಅಂದ್ರ’ ಸುತಾರಾಂ ಒಪ್ಪಂಗಿಲ್ಲ. ೮.೩೦ಕ್ಕೆ ತನ್ನ ಕಾಫಿ ಹೀರುವುದಾದ ಮೇಲೆ ಅಡುಗೆಗೆ ಕುಳಿತು ೯.೩೦ ಅನ್ನುವಷ್ಟರಟ್ಟಿಗೆ ಅಡುಗೆ ಮುಗಿಸಿ ಊಟಕ್ಕ ಹಾಕಿ ೧೦.೩೦ ಅನ್ನುವುದರೊಳಗಾಗಿ ಅಡುಗೆ ಮನೆ ಶುದ್ಧಮಾಡುವುದು ನನ್ನವ್ವನ ಚಾಳಿ. ಗ್ಯಾಸು ಇಡಿ ಲೋಕನಾ ನಡುಗಿಸಿದರ, ಅದನ್ನ ನಮ್ಮವ್ವನ ನಡುಗಿಸಿ ಬಿಡತಾಳ. ಅವಳು ತೊಳೆಯುವಾಗ ಬಂದು ನೋಡಬೇಕು. ಇಡಿ ಒಲೆಯನ್ನ ಬೊರಲಾಕಿ, ಉಳ್ಳಾಡಿಸಿ ಕೊಡಗಟ್ಟಲೆ ನೀರು ಸುರಿದು, ಆ ಗ್ಯಾಸ ಪೈಪನ್ನು ತಿರುವ್ಯಾಡಿ, ಸಿಲಿಂಡರನ್ನು ಅಡ್ಡಕೆಡವಿ ತೊಳೆದನ್ನು ನೋಡಿಯೆ ಗ್ಯಾಸ ನಮ್ಮ ಮನೆಯಲ್ಲಿ ಸಾಕಿದ ನಾಯಿ ಆಗಿದೆ. ಇರಲಿ, ತಾಸಿನಲ್ಲಿ ಅಡುಗೆ ಮಾಡುವುದಾದರೆ ಅದು ರುಚಿಯಾಗಿರುವುದಾದರೂ ಹೇಗೆ?
ನಾನು ಪಕ್ಕದ ಊರಿಗೆ ನೌಕರಿಗೆ ಹೋಗುವಾಗ ನಿತ್ಯ ಅರ್ಧ ತಾಸಿನಲ್ಲಿಯೇ ಸಿದ್ಧಪಡಿಸಿದ ಅವ್ವ ಮಾಡಿದ ಅಡುಗೆಯನ್ನು ಒಯ್ಯತ್ತಿದ್ದೆ. ಉಪ್ಪಿಲ್ಲಿದ, ಖಾರವಿಲ್ಲದ, ಹುಳಿಯಿಲ್ಲದ, ಎಣ್ಣೆಯಿಲ್ಲದ, ಸುಹಾಸನೆಯಿಲ್ಲದ ಒಟ್ಟಾರೆ ರುಚಿಯಿಲ್ಲದ ಊಟವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದಕ್ಕೆ ಅಂದು ಅಡುಗೆ ರುಚಿಯಾಗಿದ್ದರೆ ಅವ್ವ ಮಾಡಿದ್ದಂದು ರುಚಿಯಾಗಿರದ್ದರೆ ನಾನೇ ಮಾಡಿದ್ದೆಂದು ಪುಸಲಾಯಿಸುತ್ತಿದ್ದೆ. ಸಾಂಬರು ಮೇಲಿನ ಸ್ಥಿತಿಯಲ್ಲಿ ವಿಶೇಷ ಸಾಮಗ್ರಿಗಳಿಲ್ಲದೆ ಬಣಗುಟ್ಟಿ, ಬೇಳೆ ಕುದ್ದಿರದೆ ನಮ್ಮ ಶಾಲೆಯಲ್ಲಿ ಮಾಡುತ್ತಿದ್ದ ಸಾಂಬರಿಗಿಂತಲೂ ಸ್ವಾದರಹಿತವಾಗಿರುತ್ತಿದ್ದರಿಂದ ಚಿತ್ರಾನ್ನಕ್ಕೆ ಬಂದಿಳಿದೆ. ಅದು ಬರಬರುತ್ತಾ ಒಗ್ಗರಣೆ ಹೊತ್ತಿ ಅನ್ನ ಚಿತ್ರವಿಚಿತ್ರವಾಗಿರುತ್ತಿತ್ತು. ಮನೆಯಲ್ಲಿ ಅವ್ವನ ಮೇಲೆ ಸಿಟ್ಟು ಮಾಡಿದರೂ ಪ್ರಯೋಜನವಿರಲಿಲ್ಲ. ’ನಿನ್ನ ಹೆಂಡ್ತಿಗೆ ಮಾಡಕ ಹೇಳಲೇ ಸನ್ಯಾಸಿ’ ಅಂತ ಅನಿಸಿಕೊಬೇಕು. ಇಕಿಗೆ ಹೇಳಿದ್ರೂ ಪ್ರಯೋಜನ ಇರಲಿಲ್ಲ. ಇಕಿ ಮಾಡಿದ ಅಡುಗಿ ಅವ್ವ ತಿನ್ನಂಗಿಲ್ಲ. ಇದು ದೊಡ್ಡ ಸಮಸ್ಯೆ. ಸಮಸ್ಯೆ ಬಗೆ ಹರಿಯುವಂತದ್ದೂ ಅಲ್ಲ. ಅನಿವಾರ್ಯ ವಯಸ್ಸಾದೋರ ಜೊತೆ ಅನುಸರಿಸಿಕೊಂಡು ಹೋಗೋದು. ಮತ್ತೊಮ್ಮೆ ವಿಷಯ ಬಿಟ್ಟು ಮಾಡಿದ್ದಕ್ಕೆ ಕ್ಷಮೆ ಇರಲಿ. ತಾಸಿನೊಳಗೆ ಅಡುಗೆ ಮಾಡಿದರೆ ಹೇಗಾಗಿರಬೇಡ. ಹೊತ್ತಾಯ್ತು ಅಂತ ಹೊರಗಿನಿಂದ ತಿಂಡಿ ಮಕ್ಕಳಿಗೆ ತಿನ್ನಿಸೊ ಹಾಂಗಿಲ್ಲ. ಶನಿವಾರಕ್ಕೋಮ್ಮ ಶಾಲೆ ಬೇಗ ಇರುವುದರಿಂದ ಅಪ್ಪಿ-ತಪ್ಪಿ ಹೊರಗಿನಿಂದ ಇಡ್ಲಿ ಏನಾದರೂ ತಂದು ಕೊಟ್ರಂತೂ ಮುಗಿದು ಹೋಯ್ತು. ಆಗುವ ಅವಾಂತರವೇ ಬೇರೆ. ಮಕ್ಕಳಿಗೆ ಸ್ನಾನ ಮಾಡಿಸಿ, ಊಟಕ್ಕೆ ಹಾಕಿ ರೆಡಿ ಮಾಡಿ ಕಳಿಸುವುದರೊಳಗೆ ನಾನು ಹೋಗುವ ಸಮಯವಾಗಿರುವುದು. ಅಷ್ಟರೊಳಗೆ ಇಕಿದು ಮಗಸಬೇಕಲ್ಲ. ಇಲ್ಲಂದ್ರ ಪರಿಸ್ಥಿತಿ ಅರ್ಥೈಸಿಕೊಳ್ಳದೆ ಇರದ ಎರಡು ಜಗಳಾಡೋದಕ್ಕೆ ಸುರು ಹಚ್ಚಿಕೊಳ್ಳೊರು. ಇಷ್ಟು ಮಾಡುವದರೊಳಗೆ ಹೊಟ್ಟೆ ತುಂಬಿರುವುದರಿಂದ ಊಟ ಮಾಡದೆ ಕೆಲಸಕ್ಕೆ ಹೋಗಲು ಅಣಿಯಾದರೆ ಅವ್ವನ ಪ್ರೀತಿ ಸ್ಟಾರ್ಟ ಆಗುತ್ತೆ. ಆಗಲ್ಲ ಅಂದ್ರೆ ಪ್ರೀತಿಗೆ ಪ್ರಶ್ನೆ ಹಾಕಿದಾಂಗಾಗುತ್ತೆ. ನಾನು ಒಲ್ಲೆ ಅನ್ನಬೇಕು ’ಹ್ಞೂಂ, ಹೋಗಪ ಮಾವನ ಮನಿ ಹೋಟಲ್‌ನ್ಯಾಗ ತಿನ್ನೋರಿಗೆ ಮನಿ ಊಟ ಹ್ಯಾಂಗ ರುಚಸ್ತದ’ ಅಂತ ಆರೋಪ ಮಾಡಿದ ಮೇಲೆ, ಹೊತ್ತಾದ್ರೂ ಅನಿವಾರ್ಯವೆ. ಕೆಲಸಕ್ಕೆ ಹೋದಮೇಲೆ ಹುಡುಗರು ಬರುವುದರೊಳಗಾಗಿ ಬಂದಿರಬೇಕು. ಹುಡುಗರ ಹಾರಟಕ್ಕೆ ಅಜ್ಜಿಯಿಂದ ಬಾಸುಂಡೆಗಳು ಬಿದ್ದು ಮಿನಿ ರಣರಂಗ ಸೃಷ್ಠಿಯಾಗಿರುತ್ತೆ. ಅಜ್ಜಿನ ಮೊಮ್ಮಕ್ಕಳು ಅವ್ವನ ಮುಟ್ಟತಿ ಮುಟ್ಟುತಿನಿ ಎಂದು ಹೆದರಿಸಿ ಗೋಳಾಡಿಸುತ್ತಿರುತ್ತವೆ ಕೊಟ್ಟ ಏಟಿಗೆ. ಮನೆಯ ಚೀರಾಟವೆಲ್ಲ ಹೊರಬಂದು ಒಳ ಪ್ರವೇಶಿಸುತ್ತರುವ ನನ್ನನ್ನು ಹೊಗಿನವರ ನೋಟ ಕೆಣುಕುತ್ತಿರುತ್ತದೆ.
ನಮ್ಮ ವಿಚಿತ್ರ ಸಂಪ್ರದಾಯದಲ್ಲಿ ಹೊರಗಿದ್ದವರಿಗೆ ಒಳಪ್ರವೇಶವಿಲ್ಲವೆಂದ ಮೇಲೆ ಎಲ್ಲಾನೂ ಹೊರಗನೆ. ಮೈಲಿಗೆ ಬಂದಾಗಿನ ಪರಸ್ಥಿತಿ ಅವರಿಗೆ. ಎಲ್ಲೆಡೆ ಸ್ವಲ್ಪ ಬದಲಾವಣೆ ಆಗಿವೆ. ನಮ್ಮ ಅವ್ವನಂತವರು ಇರುವ ಮನೆಯಲ್ಲಿ ಜೀವಂತವಾಗಿವೆ. ಸಣ್ಣ ಮನಿಯಲ್ಲಿ ಬಾಡಿಗೆ ಇರುವಾಗ ಮನೆಗೆ ಯಾರರ ಬಂದರೆ ಫಜೀತಿ, ಹೊರಗೆ ತಿರುಗಾಡಿ ಸಮಯ ಕಳಿಬೇಕಾದ ಪರಿಸ್ಥಿತಿ. ಈಗನೂ ಅಷ್ಟೆ ಇಕಿ ಹೊರಗಿದ್ರ ಯಾರಾದ್ರೂ ಮನಿಗೆ ದಯಮಾಡಿಸಿದ್ರ ಕಸಿವಿಸಿಗೆ ಬಿದ್ದಾಂಗ ಆಗುತ್ತ. ಮಕ್ಕಳು ಚಿಕ್ಕೊರಿರುವಾಗ ಆ ಮೂರುದಿನಗಳನ್ನೂ ಬತ್ತಲೆಯಾಗಿ ಕಳಿದಿವೆ. ಅದು ಛಳಿ,ಬೇಸಿಗೆ,ಮಳೆಗಾಲವೆ ಇರಲಿ. ಅವುಗಳಿಗೆ ಬಟ್ಟೆ ತೋಡಿಸಿ ಅವು ಮುಟ್ಟಿದರೆ! ನಾನು ಅವಗಳು ಕಷ್ಟ ಪಡೋದನ್ನ ನೋಡಕಾಗದೆ ನನ್ನ ಬಳಿಯಲ್ಲೆ ಮಲಗಿಸಿಕೊಳ್ಳುವ ರೂಢಿ ಮಾಡಿದ್ದೆ. ಆದರೆ ಈಗ ಹುಟ್ಟಿರುವ ಮಗರಾಮ ಇಬ್ಬರಂಗಿಲ್ಲ. ನನ್ನತ್ರ ಸುಳಿಯಾಂಗಿಲ್ಲ. ಛಳಿಯಲ್ಲಿ ಗಡಗಡ ನಡುಗಿಕೋತ ಇರತಾನ ಹೊರತು ಹತ್ರ ಬರಲ್ಲ. ಅವ್ವಗ ವಿನಂತಿಸಿಕೊಂಡಾಗ ಏನೋ ಗಂಡುಹುಡುಗನ ಕೆಲಸದ ಹೊಸ ಬಟ್ಟಿ ಹಾಕಿದ್ರ ನಡಸಬಹುದು ಮೂರುದಿನ ಅಂತ ಅಪ್ಪಣೆ ಕೊಟ್ಟಾಳ. ಆ ಮಾತು ಎಷ್ಟು ದಿನ ಗಟ್ಟಿಯಾಗಿರುವುದು ದೇವರೆ ಬಲ್ಲ. ಈ ಮೂರುದಿನ ಖಾಲಿಕೂತ ಈಕಿಗೂ ಸುಖ ಇಲ್ಲ. ಮಲಕಂಡ್ರ ಬಿದ್ದಕೊಂಡದ ಖೊಡಿ ಅಂತ ಬಯ್ಯದು, ಸುಮ್ಮನೆ ಕೂತ್ರ ತ್ರಾಸು. ಅವ್ವ ಪಡುವ ತ್ರಾಸು ನೋಡಂಗಿರೊದಿಲ್ಲ. ಏಟುಝೆಡ್ ಕೆಲಸ ಆಕಿನ ಮಾಡಬೇಕಲ್ಲ. ಬಟ್ಟೆ ಒಗಿಲಿಕ್ಕೆ, ಮುಸುರಿ ತಿಕ್ಕಾಕ ಹಚ್ಚಿದರ ಆಗಲ್ವೇನು ಅಂತ ತಾವು ಕೇಳಬಹುದು. ಬಟ್ಟಿ ಒಗಿಲಿಕ್ಕೆ ಅಗಸರಾಕಿ ಬರತಾಳ, ಆಕಿಗೆ ಅವ್ವ ತನ್ನ ಬಟ್ಟೆ ಹಾಕಂಗಿಲ್ಲ, ಮೊನ್ನೆ ಮಗನ ಜವಳ ಇದ್ದಾಗ ಮುಸುರಿ ತಿಕ್ಕೊದಕ್ಕ ಒಬ್ಬರನ್ನ ಗೊತ್ತು ಮಾಡಿದ್ದೆ. ಮುಸುರಿ ತಿಕ್ಕಿ ಒರಿಸಿದ ಮ್ಯಾಲೆ ಎಲ್ಲವನ್ನು ತೊಳುದು ಮತ್ತೊಮ್ಮೆ ಒರಸಾಕಿ, ಜವಳಾ ಎಲ್ಲ ಮುಗಿತು, ಹೋಗೋರೆಲ್ಲ ಹೋದ್ರು. ಅವ್ವಂದು ಮುಸುರಿ ಒಂದು ಕಡಿ ಜಮಾ ಮಾಡೋ ಸ್ವಭಾವ ಅಲ್ಲ. ಆಗಿಂದಾಗಲೆ ತೊಳಿದಿರಬೇಕೆನ್ನುವ ಮನೋಭಾವದವಳು. ಮುಸುರಿ ತಿಕ್ಕುವವಳು ಒಂದು ದಿನಾ ನನಗ ’ನಾಳಿನಿಂದ ಬರಾಕ ಆಗಲ್ಲ’ ಅಂತ ಅಂದ್ಲು. ನಾನು ’ಯಾಕಬೇ?’ ಎಂದೆ. ’ಇಲ್ರಿ ಅಣ್ಣೋರ ನಮಗೂ ಒಂದು ಮಿತಿ ಅದರಿ ಎಲ್ಲಾರಮನ್ಯಾಗ ಸಿಕ್ಕಂಗ ಸಾಮಾನ ಹಾಕಿದ್ರ, ನಿಮ್ಮನೆಲಿ……’ ಅಂತ ಹೇಳ್ತಿರಬೇಕಾದ್ರೆ ನಾನು ಅಡ್ಡ ಬಾಯಿ ಹಾಕಿ ’ಹಾಂಗಲ್ಲಮ, ನಮ್ಮನೆಗ ಎಲ್ಲಿ ಸಾಮಾನೂ ಬಾಳ ಇರತಾವ, ಜಾಸ್ತಿ ಆದ್ರ ರೊಕ್ಕ ಜಾಸ್ತ ಕೊಡಾಮೇಳು’ ಎಂದೆ. ’ಅದಕ್ಕಲ್ರಿ ಅಣ್ಣೋರ ಎಲ್ಲಾ ಸಾಮಾನು ಅಮ್ಮೋರ ತೊಳದು ಬಿಡತಾರ. ನನಗ ಮಾಡಕ ಕೆಲಸ ಬೇಕಲ್ರಿ. ಕೆಲಸ ಮಾಡದ ದುಡ್ಡು ತೋಳಾಕ ನಮಗೂ ಮನಸ್ಸು ಒಪ್ಪಲ್ರಿ’ ಅಂದ್ಲು. ಹೆಂಗದ ನೋಡ್ರಿ ಈಕಿ ಮೂರು ದಿನ ಹೊರಗಿದ್ದಾಗರ ಅನೂಕಾಲಗತ್ತಂತ ಅನಕೊಂಡು ಮುಂದುವರೆಸಿದ್ದೆ ಹೊಳ್ಯಾಗ ಹುಣಿಸಿಹಣ್ಣು ತೊಳದಂಗ ಆಗಿತ್ತು.
ಹಾಂಗಂದ ಮಾತ್ರಕ್ಕೆ ಅವ್ವ ನಿಷ್ಕರುಣಿ ಅಲ್ಲ. ಆ ಆಡ್ ಅವರ್ ಇದೆಲ್ಲ ಬೆಳಿಗ್ಗೆಯಿಂದ ಮಧ್ಯಾಹ್ನ ಊಟಮಾಡುವವರೆಗಿನ ಸಮಯ, ಅವಳ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಾರದು. ನಂತರ ಅವಳಷ್ಟು ಕರುಣಾಮಯಿ, ಕಕಲಾತಿಯುಳ್ಳವರೂ ಯಾರು ಇಲ್ಲ ಎನಿಸಿಬಿಡುತ್ತದೆ. ಮಡಿ-ಹುಡಿ, ಅಡಿಗೆ-ಪಡಿಗೆ, ಮುಸುರಿ-ಎಂಜಲು ವಿಷಯ ಬಂದಾಗ ಪರಕಾಯ ಪ್ರವೇಶ ಅವ್ವನಲ್ಲಾಗುತ್ತದೆ. ತೆಪ್ಪಗಿದ್ದರೆ ಎಲ್ಲ ಸೂಸೂತ್ರ, ಇಲ್ಲದಿದ್ದರೆ ಹಾರಾಟ-ಕಿರುಚಾಟ.
ಮತ್ತದೆ ವಿಷಯಕ್ಕೆ ಬರತೇನೆ. ಮೂರುದಿನ ಕಳೆಯೋದೊರೊಳಗೆ ಮೆತ್ತಗಾಗಿದ್ದ ನನಗೆ ಮುಂದಿನ ಆ ಮೂರು ದಿನಗಳ ಚಿಂತೆ ಕಾಡುತ್ತೆ. ಇವಳು ನಿರಮ್ಮಳಾದರೂ ನನಗೆ ಅವು ಸಂಕಟದ ದಿನಗಳು. ಹೆಣ್ಣಿಗೆ ಮನೆಯ ಕೆಲಸದ ಭಾರ ಎಷ್ಟಿರುತ್ತದೆ ಎಂದು ಅರಿವಿಗೆ ಬರುವುದೆ ಆಗಲೇ. ನನಗೆ ಇತ್ತಿಚೀಗೆ ತಾಳ್ಮೆನೂ ಮೀರುತ್ತಿದೆ ಆದರೆ ಅವ್ವ ತನ್ನ ವರ್ತನೆಯಲ್ಲಿ ಬದಲಾವಣೆಯನ್ನೆನೂ ಮಾಡಿಕೊಳ್ಳುತ್ತಿಲ್ಲ. ಕೊನಿಗೆ ಇಕಿಗೆ ’ಈ ಸಹಜ ಕ್ರಿಯೆಗೆ ಕೊನೆ ಹಾಡಲೂ ಉಪಾಯವಿಲ್ಲವೇ?’ ಅಂತ ಕೇಳಿದ್ರೆ ’ವಯಸ್ಸಾಗುವವರೆಗೂ ಕಾಯಬೇಕು ಇಲ್ಲ ಆಪರೇಶನ್ ಮಾಡಿಸಬೇಕು’ ಎನ್ನುತ್ತಾಳೆ. ’ಎಷ್ಟೆ ಖರ್ಚಾಗಲಿ ಆ ಎರಡನೆ ಕಾರ್ಯ ಮುಗಿಸು’ ಎಂದೆ. ’ಮಾಡಿಸಬಹುದು ಖರೆ ಆದರೆ ಆಪರೇಷನ್ ಆದ್ರೆ ಯಾವುದೆ ಕೆಲಸ ಮಾಡಲಿಕ್ಕೆ ಆಗಲ್ಲ’ ಎಂದು ಯಾವ ಲೆಕ್ಕದಲ್ಲಿ ಹೇಳಿದಳೊ ನಾನು ಮೌನಿಯಾದೆ. ಈ ಮೂರುದಿನ ಒದ್ದಾಡದ್ರೂ ಚಿಂತೆ ಇಲ್ಲ ಕೊನಿತನ ಒದ್ದಾಡೋದು ಯಾರಿಗೆ ಬೇಕಾಗೇದ ಎಂದು!
*****