ಆ ದೀಪಾವಳಿ: ದಿವ್ಯಾಧರ ಶೆಟ್ಟಿ ಕೆರಾಡಿ

Divyadhara Shetty

ದೀಪಾವಳಿ ಮತ್ತೆ ಬಂದಿದೆ ಇಡೀ ಜಗತ್ತೇ ಸಂಭ್ರಮ ದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ಬೇರೆ ತರಹದ್ದು. ಇಂದಿನ ಅಬ್ಬರದ ದೀಪಾವಳಿಯ ಜೋರು ಶಬ್ದಗಳ ನಡುವೆ ಚೈನಾಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಕೇಳಿಸುತ್ತಿಲ್ಲ ಈಗ.. ಏಲ್ಲೋ ಮರೆಯಾಗಿ ಹೋದ ಹಳೆಯ ನೆನಪುಗಳ ಹಣತೆಯನ್ನು ಒಂದಿಷ್ಟು ಸಾಲಾಗಿ ಜೋಡಿಸುವ ಆಸೆಯಾಗಿದೆ. ಒಮ್ಮೆ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿ ಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ  ಹೋಗಿ ಹಣತೆ ಹಚ್ಚಿಟ್ಟು ಬರೋಣವೇ???

ಅಪ್ಪ ನಂಗೆ ನೆಲ್ಚಕ್ರ ಬೇಕು, ಅಮ್ಮಾನಂಗ್ ಸುರ್ ಸುರ್ ಕಡ್ಡಿ ಬೇಕು ನಂಗ್ ಎಲ್ ಕೇಪ್, ನಂಗ್ ರೀಲ್ ಕೇಪ್, ಒಂದೇ ಎರಡೇ ದೀಪಾವಳಿ ಬಂತೆಂದರೆ ಅದೆಂತಾ ಸಂಭ್ರಮ. ಊರಹಬ್ಬಕ್ಕಿಂತಾ ಗಮ್ಮತ್ತು. ದೊಡ್ಡ ದೊಡ್ಡ ಪಟಾಕಿ,ಹೊಸ ಹೊಸ ಬಟ್ಟೆಯ ಇಂದಿನ ಈ ಸಂಭ್ರಮ ಇದೆಲ್ಲ ನಾವು ನೋಡಿದ್ದೆ ನೆನಪಿಲ್ಲ.
ಬಾಲ್ಯದ ದೀಪಾವಳಿ ಬಡತನದಲ್ಲೆ ಕಳೆದರೂ ಇದ್ದುದರಲ್ಲೆ ಅದೆಷ್ಟು ಶ್ರೀಮಂತ ಸಂಭ್ರಮ ನಮ್ಮದು.

ಆ ದಿನ ದೀಪಾವಳಿ ಮುಂಜಾನೆ ಮುಂಜಾನೆ ಎದ್ದ ಮಕ್ಕಳ ಮೈಗೆಲ್ಲ ಎಣ್ಣೆ ಎರೆದು ಉಜ್ಜಿ ತಪ್ಪಿಸಿಕೊಂಡು ಓಡುವವರನ್ನ ಹಿಡಿದು ಬಚ್ಚಲುಮನೆಯಲ್ಲಿ ಹಿಂದಿನ ದಿನ ರಾತ್ರಿ ಬೂದ್ ನೀರ ಹಬ್ಬ ಮಾಡಿ ನೀರು ತುಂಬಿಸಿದ್ದ ಹರಿಯಲ್ಲಿ ಕಾಯಿಸಿಟ್ಟ ಬಿಸಿ ಬಿಸಿ ನೀರನ್ನು ಎರೆದು ಸ್ನಾನ ಮಾಡಿಸಿದಾಗ ಮೈ ಮನಸ್ಸೆಲ್ಲಾ ಹೊಸ ಉಲ್ಲಾಸ ಅದೇ ದೀಪಾವಳಿಯ ಆರಂಭ.

ಇರೋದ್ರಲ್ಲೆ ಹೊಸ ಬಟ್ಟೆ ಹಾಕಿ ಅಡುಗೆ ಮನೆಯಲ್ಲಿ ಮಣೆಮೇಲೆ ಕೂತು ಅಜ್ಜಿಯೋ ಅಮ್ಮನೋ ಹಾಕಿಕೊಟ್ಟ ಮ್ಯೆಂತ್ಯ ಬೆಲ್ಲ ಹಾಕಿ ಮಾಡಿದ ಇಡ್ಲಿಯನ್ನು ಶುದ್ದ ತುಪ್ಪದಲ್ಲಿ ಅದ್ದಿ ತಿಂದ ಕ್ಷಣಗಳ ನೆನಪು ಮಾಡಿಕೊಂಡ್ರೆ ಇಂದಿಗೂ ಬಾಯಲ್ಲಿ ನೀರೊರುತ್ತದೆ.

ನಂತರ ಅಕ್ಕ ಪಕ್ಕದ ಮನೆಯ ಹುಡುಗರೆಲ್ಲ ದೊಡ್ಡವರ ಜೊತೆಗೆ ಕಾಡಿಗೆ ಹೋಗಿ ಬೇರೆ ಬೇರೆ ಜಾತಿಯ(ಜಂಗಮ,ಕೆಸ್ಕೂರ್, ಹುಣ್ಗಲ್, ಚೂರಿ, ಹೀಗೆ ವಿಧ ವಿಧದ ಕಾಡಿನ ಹೂಗಳನ್ನು ಕೊಯ್ದು ಮನೆಗೆ ತಂದು ರಾತ್ರಿ ಪೂಜೆಗೆ ಸಿದ್ದಗೊಳಿಸ ಬೇಕು ಮುಖ್ಯವಾದ ಗದ್ದೆಗಳಲ್ಲಿ,ಅಂಗಳದ ಮೇಟಿ ಕಂಬಕ್ಕೆ, ಗೊಬ್ಬರದ ಗುಂಡಿಯಲ್ಲಿ ನಾರು ಕೋಲಿನ ತ್ರಿಭುಜ ಮಾಡಿ ಸುಮಾರು 5, 6ಅಡಿ ಎತ್ತರದ ಕೋಲಿಗೆ ಅದನ್ನು ಕಟ್ಟಿ ಗದ್ದೆಯಲ್ಲಿ ನೆಟ್ಟು ಬರಬೇಕು ಮನೆಯಲ್ಲಿನ ಮಹಿಳೆಯರು ಮೊದಲೆ ಸಿದ್ದಗೊಳಿಸಿಕೊಂಡ ಅರಶಿನದ ಎಲೆಯನ್ನು ಜೋಡಿಸಿಕೊಂಡು ಕಡುಬು ಮತ್ತು ಉದ್ದಿನ ಇಡ್ಲಿಗೆ ಸಿದ್ದತೆ ನಡೆಸಿರುತ್ತಾರೆ. ಅಲ್ಲೆಲ್ಲೊ ನಡೆದ ಕೋಳಿಅಂಕಕ್ಕೆ ಹೋಗಿ ಯಜಮಾನ ಗೆದ್ದು ತಂದ ಬಂಟನನ್ನು ಮನೆಯ ಮಕ್ಕಳು ಮುದ್ದಾಡುತ್ತ ಆದ ಗಾಯಕ್ಕೆ ಹೊಲಿಗೆ ಹಾಕಲು ಓಡಾಡಿದರೆ ಒಟ್ಟೆಯಾಗಲೆ ಪುಕ್ಕ ಕಳೆದುಕೊಂಡು ಸಾರಿಗೆ ರೆಡಿಯಾಗುತ್ತಿರುತ್ತದೆ.

ಸಂಜೆಯ ವೇಳೆಗೆ ಮಕ್ಕಳೆಲ್ಲಾ ಎಲೆ ಕೇಪು ರೀಲ್ ಕೇಪು(ಪಿಸ್ತೂಲ್ ಗೆ ಹಾಕಿ ಗುರಿ ನೋಡಿ ಹೊಡೆಯುವಾಗ ಇವತ್ತಿನ ಶಾರ್ಪ್ ಶೂಟರ್ ಗಳನ್ನು ನಿವಾಳಿಸಿ ಎಸೆಯಬೇಕು)ಹೊಡೆಯುತ್ತ  ನಕ್ಷತ್ರ ಲೋಕ ಧರೆಗಿಳಿಸಿದ ಸಂಭ್ರಮದಲ್ಲಿದ್ದರೆ ಇನ್ನೂ ಕೆಲವರು ನೆಲಚಕ್ರ ಕೆಳಗೆ ಬಿಟ್ಟು ಕಾಲಡಿ ಬಂದಾಗ ಥೈ ಥೈ ಕುಣಿಯತ್ತಾ ಬೇರೆಯವರ ನಗುವಿಗೆ ತಮಾಷೆಗೆ ಕಾರಣವಾಗುತ್ತಿದ್ದ ನೆನಪುಗಳು ಅದೆಷ್ಟು ಅಪರೂಪವಾಗಿ ಬಿಟ್ಟವು.

ಬಾಳೆ ಮರ ಬಿಡುವಾಗ ನಮ್ಮ ಸ್ಟೈಲೆ ಬೇರೆ,ದೊಡ್ಡ ಪಟಾಕಿ ಹಚ್ಚಿ ಎಡವಟ್ಟಾಗಿ ಕೈಯಲ್ಲೆ ಡಮ್ಮೆಂದರೆ ನಮ್ಮ ದೀಪಾವಳಿ ಯಶಸ್ವಿ ಎಂದರ್ಥ. ದುಂಡನೆ ಕಲ್ಲಿನ ಮೇಲೆ ಎಲೆ ಕೇಪ್ ಇಟ್ಟು ಇನ್ನೊಂದು ಕಲ್ಲಿಂದ ಪಟ್ ಅಂತ ಹೊಡೆಯುವಾಗ ಅದೆಷ್ಟು ಬಾರಿ ಕೈ ಜಜ್ಜಿಕೊಂಡಿಲ್ಲ. ಅದೆಷ್ಟು ಬಾರಿ ಹಚ್ಚಿದ ಪಟಾಕಿ ಬತ್ತಿ ಅರ್ಧ ಸುರ್ ಸುರ್ ಎಂದು ನಿಂತಾಗ ಅದರ ಹತ್ತಿರ ಹೋದಾಗ ಡಮ್ ಎಂದು ಹೆದರಿಸಿಲ್ಲ. ಟುಸ್  ಅಂದ ಪಟಾಕಿಗಳ ಕಂಡು ಕ್ಷಿಪಣಿ ಉಡ್ಡಯನ ಆಗಲಿಲ್ವೇನೊ ಎಂಬಷ್ಟು ನೊಂದಿಲ್ಲ. ಎಲ್ಲ ಸವಿ ಸವಿ ನೆನಪುಗಳಷ್ಟೆ..

ರಾತ್ರಿಯಾಗುತ್ತಿದ್ದ ಹಾಗೆ ಮನೆಯ ಯಜಮಾನ ಹೆಡಿಗೆಯೊಳಗೆ(ಬುಟ್ಟಿ) ಪೂಜಾ ಸಾಮಗ್ರಿಗಳನ್ನು, ಹಾಕ್ಬೆಚ್ಚುವ (ಮೀಸಲಿಡುವ) ವಸ್ತುಗಳನ್ನು, ಕಾಡು ಹೂಗಳನ್ನೆಲ್ಲಾ ಇಟ್ಟು ಸೂಡಿ ಹಚ್ಚಿಕೊಂಡು ಮಕ್ಕಳ ಪಡೆಯೊಂದಿಗೆ ಕೂಗು ಹಾಕುತ್ತ ಗದ್ದೆಯ ಕಡೆಗೆ ನಡೆಯುವಾಗ ರಾತ್ರಿ ಹಚ್ಚ ಬೇಕೆಂದು ತಂದ ಪಟಾಕಿ, ಕೇಪುಗಳು ಮಧ್ಯಾಹ್ನವೇ ಖಾಲಿಯಾಗಿ ಪೆಚ್ಚುಮೋರೆ ಹಾಕಿಕೊಂಡು ಇದ್ದವರ ಬಳಿ ಗೋಗೆರೆಯುತ್ತ ಹಿಂಬಾಲಿಸುವ ಚೆಂದ ಅನುಭವಿಸಿದವರಷ್ಟೆ ಬಲ್ಲರು.

ಗದ್ದೆಯ ಬಳಿ ಹೋಗಿ ನೆಟ್ಟ ಕೋಲಿನ ತ್ರಿಭುಜಕ್ಕೆ ಬತ್ತಿಯನ್ನು ಇಟ್ಟು,ಕೆಳಗೆ ಬಾಳೆ ಎಲೆಯ ಮೇಲೆ ಎಡೆಯಿಟ್ಟು ಬಲಿಂದ್ರ ಪೂಜೆ ಮಾಡಿ ಬಲಿಯನ್ನು ರಾಗವಾಗಿ ಕರೆದು *ಹೋಲಿಕೊಟ್ರೊ ಬಲಿ ತಗೊಂಡ್ರೋ ಬಲಿಂದ್ರ ದೇವ್ರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೋಲಿಯೇ ಭಾ ಸಿರಿಯೇ ಬಾ* ಎಂದು ಮೂರು ಸಾರಿ ಹೇಳಿದಾಗ ಮಕ್ಕಳೆಲ್ಲ ಕೂಯ್ ಕೂಯ್ ಎನ್ನುವ ಮೂಲಕ ಆ ದಿನದ ಪೂಜೆ ಮುಗಿದು ಉಳಿದ ಗದ್ದೆ, ಮೇಟಿಕಂಬ, ಎಲ್ಲ ಕಡೆ ಪೂಜೆ ಕೊಟ್ಟು ಹಚ್ಚಿದ ಸೂಡಿ ಆರಿಸದೆ ಅಂಗಳಕ್ಕೆ ಬಂದಾಗ ಉಳಿದ ಪಟಾಕಿ ಹಚ್ಚುತ್ತಾ ಒಬ್ಬರ ಕಾಲಕೆಳಗೆ ಒಬ್ಬರು ಪಟಾಕಿ ಹಾಕುತ್ತ ಅನುಭವಿಸಿದ ಖುಷಿ ಮರೆಯಲಾಗದ್ದು.

ಮನೆಗೆ ಬಂದ ಯಜಮಾನ ಗೋ ಪೂಜೆ ಮುಗಿಸಿ ತುಳಸಿಗೆ ಪೂಜೆ ಮಾಡಿ ಮನೆಯವರ ಜೊತೆ ಗೆದ್ದುತಂದ ಕೋಳಿಯ ಸಾರಿನ ಜೊತೆ ಉದ್ದಿನ ಇಡ್ಲಿಯನ್ನು ಮುರಿದು ತಿನ್ನುತ್ತಾ ಮೂಳೆ ಜಗಿಯುತ್ತಿದ್ದರೆ ಸ್ವರ್ಗ ಕಣ್ಣೆದುರೆ ನಿಂತು ನಗುತ್ತಿರುತ್ತದೆ.. ಮರುದಿನ ಗದ್ದೆಗೆ ಮೊಸರುಕಟ್ಟಿ ಮರು ಮುಂಜಾನೆ ಬೇಗ ಎದ್ದು ಅದಕ್ಕಾಗಿ ಅಕ್ಕ ಪಕ್ಕದ ಗೆಳೆಯರ ಜೊತೆ ಹೊಡೆದಾಡುವುದು ಗೆದ್ದು ಅದನ್ನು ತಿಂದು ಬೀಗುವುದು ಮರೆಯುವಂತ ನೆನಪಲ್ಲ..

ಇಂದು ಇದೆಲ್ಲ ಕೇವಲ ನೆನಪಷ್ಟೆ. ಮನೆಯಲ್ಲಿ ಅಷ್ಟೊಂದು ಜನರೂ ಇಲ್ಲ. ಕಾಳಜಿ ತೋರುವ ಅಜ್ಜನೂ ಇಲ್ಲ. ಮುದ್ದು ಮಾಡುವ ಅಜ್ಜಿಯೂ ಇಲ್ಲ. ಅಪ್ಪ ಅಮ್ಮ ಮಕ್ಕಳೆಲ್ಲ ದೂರಾ ದೂರ ಇರುವಾಗ ಎಲ್ಲೋ ಅಲ್ಲಿಲ್ಲಿ  ಸಾಂಪ್ರದಾಯಿಕ ದೀಪಾವಳಿಯ ಆಚರಣೆ ನಡೆಯುತ್ತಿದೆ ಅಂದಾಗ ಮನಸ್ಸು ಒಮ್ಮೆ ಗೆಜ್ಜೆಕಟ್ಟಿ ಕುಣಿಯದೆ ಇರುವುದಿಲ್ಲ..

ಬಾಲ್ಯವಂತೂ ಮರಳಿ ಬರುವುದಿಲ್ಲ ಆ ಬಾಲ್ಯದ ದೀಪಾವಳಿಯ ಕೆಲ ನೆನಪನ್ನಾದರೂ ಜೀವಂತವಾಗಿಸೋಣ..

ದೀಪಾವಳಿಯ ಶುಭಾಶಯಗಳು

*ದಿವ್ಯಾಧರ ಶೆಟ್ಟಿ ಕೆರಾಡಿ*


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x